ಕುಸ್ತಿ

ProfileImg
30 Jun '24
10 min read


image

ಗೌರೂರುರಿನ ಮಧುಗಿರಿಗೆ ಹೋಗುವ ರಸ್ತೆಯ ರೈಲ್ವೇ ನಿಲ್ದಾಣದ ಬಳಿಯಲ್ಲಿರುವ ಬಲಗಡೆ ಆಚಾರ್ಯ ಹೈಸ್ಕೂಲ್ ಎಡಗಡೆಯಲ್ಲಿ ಆಚಾರ್ಯ ಜೂನಿಯರ್ಸ್ ಕಾಲೇಜ್. ಈ ಕಾಲೇಜ್ ಗೆ ಒಳ ಹೋಗುತ್ತಾ ಎಡಗಡೆಯಲ್ಲಿ ಕೊನೆಯಲ್ಲಿರುವುದೆ " ಶ್ರೀ ವಿವೇಕಾನಂದ ವ್ಯಾಯಮ ಶಾಲೆ ".

ಹೊರಗಿನಿಂದ ನೋಡಿದರೆ ಹೆಸರಿನ ಫಲಕ ಬಿಟ್ಟು ಏನೂ ಕಾಣುವುದಿಲ್ಲ. ಆದರೆ ಒಳ ಹೊಕ್ಕರೆ ಬೇರೆಯ ಪ್ರಪಂಚ ತೆರೆದು ಕೊಳ್ಳುತ್ತದೆ. 30..30 ವಿಸ್ತೀರ್ಣವುಳ್ಳ ಎರಡು ಕೋಣೆ, ಸುತ್ತ ಇಪ್ಪತ್ತೈದು ಅಡಿಗಳ ವಿಶಾಲವಾದ ಸ್ಥಳ... ಅದಕ್ಕೆ ಹೊಂದಿಕೊಂಡಂತೆ ಎತ್ತರವಾದ ಕಾಂಪೌಂಡು.

ಒಂದು ಕೋಣೆಯಲ್ಲಿ ದೊಡ್ಡದಾದ ಶ್ರೀ ವೀರ ಹನುಮಾನ್ ಗಧೆ ಹಿಡಿದು ಹುಂಕಾರ ಮಾಡುತ್ತಿರುವ ಫೋಟೊ. ನಂತರ ನಾವು ಅಂಗಸಾಧನೆ ಮಾಡುವ ಪುರಾತನ ಶೈಲಿಯ ಐದು ಕೆಜಿಯಿಂದ ಐವತ್ತು ಕೆಜಿಯ ಮರದ ಇಪ್ಪತ್ತು ಗಧೆಗಳು ಸಾಲಾಗಿ ಗೋಡೆಗೆ ಒರಗಿಸಿದೆ. ಅದರ ಪಕ್ಕದಲ್ಲಿ ಮರದ ಟೇಬಲ್. ಅದರ ಮೇಲಿಟ್ಟ ಐದರಿಂದ... ಹತ್ತು ಕೆಜಿಯ ಐವತ್ತು ಜೊತೆ ಕಬ್ಬಿಣದ ಡಂಬಲ್.ದಂಡ ಹೊಡೆಯುವುದಕ್ಕೆ ಎತ್ತರಕ್ಕೆ ಇಟ್ಟಿಗೆಯಂತ ಮರದ ತುಂಡುಗಳು,ಭಾರ ಎತ್ತುವ ಕಬ್ಬಿಣದ ಪ್ಲೇಟ್ ಮತ್ತು ಉದ್ದದ ರಾಡ್ ಮತ್ತು ವಿವಿಧ ಬಗೆಯ ಭಾರದ ಸಲಕರಣೆಗಳು.ಬಾಗಲಿನ ಬಳಿ ಆಳೆತ್ತರದ ಆಗಲವಾದ ನಿಲವು ಕನ್ನಡಿಗಳು. ಮೈಗೆ ಮಾಲಿಶ್ ಮಾಡಿಕೊಳ್ಳಲು ಎಳ್ಳೆಣ್ಣೆಯ ಬಾಟಲಿಗಳು.

ಮತ್ತೊಂದು ಅಖಾಡದ ಕೋಣೆ. ಪ್ರವೇಶ ಮಾಡುತ್ತಿದ್ದ ಹಾಗೆ ಗೋಡೆಗೆ ಚಿಕ್ಕ ಆಂಜನೇಯ ವಿಗ್ರಹ ಅಕ್ಕಪಕ್ಕದಲ್ಲಿ ಸದಾ ಉರಿಯುವ ದೀಪಾ. ದೀಪದ ಕೆಳಗೆ ಹಸ್ತ ಗುರುತಿನ ತಾಮ್ರದ ತಗಡು. ಕೆಳಗೆ ಕೋಣೆ ನೆಲ ಹಾಸಿಗೆಗೆ ಕುಸ್ತಿ ಮಾಡುವುದಕ್ಕೆ ಕೆಮ್ಮಣ್ಣು. ಈ ಕೆಮ್ಮಣಿನ ವಿಶೇಷ ಅಂದರೆ ದಸರ ಹಬ್ಬದ ಮೂರು ದಿನದ ಮುನ್ನ ಈ ಮಣ್ಣನ್ನ ಗೋಪುರ ಮಾಡಿ ಹರಿಶಿನ ಕುಂಕುಮ,ನಕ್ಕಿ ಮತ್ತು ವಿವಿಧ ಹೂ ಗಳಿಂದ ಅಲಂಕರಿಸಿ ಹಬ್ಬದ ಸಂಜೆ ಗುರುಗಳು ಪೂಜೆ ಮಾಡಿ ನಂತರ ಹೆಸರುಬೇಳೆ ಮತ್ತು ಬಾಳೆಹಣ್ಣಿನ ಬೆಲ್ಲದ ರಸಾಯನದ ಪ್ರಸಾದ ಹಂಚುತ್ತಿದ್ದರು. ಎರಡು ದಿನದ ನಂತರ ಮತ್ತೆ ಪೂಜೆ ಮಾಡಿ.. ಗೋಪುರ ಓಡೆದು ಕುಸ್ತಿಗೆ ಮತ್ತೆ ಸಿಧ್ಧಗೊಳಿಸುತ್ತಿದ್ದರು.

ಎರಡು ಕೋಣೆಯ ಹೊರಗೆ ಬಂದು ಕಣ್ಣು ಹಾಯಿಸಿದರೆ ಮೂವತ್ತು ಚದರದ ಖಾಲಿ ಸ್ಥಳ.ಐವತ್ತು ರಿಂದ ನೂರೈವತ್ತರವರೆಗೆ ಭಾರಿ ಗಾತ್ರದ ಕಲ್ಲು ಗುಂಡುಗಳು.ಅದರ ಪಕ್ಕದಲ್ಲಿ ಉದ್ದನೆಯ ಬೆಂಚ್. ಏಕೆಂದರೆ ಅದರ ಮೇಲೆ ಮಲಗಿ ಭಾರದ ಕಸರತ್ ಮಾಡುವುದಕ್ಕೆ ಮತ್ತು ಉದ್ದನೆಯ ಎಂಟು ಆಡಿ ಎತ್ತರದ ಕಬ್ಬಿಣದ ಬಾರ್, ನೇತಾಡುತ್ತಾ ವ್ಯಾಯಾಮ ಮಾಡುವುದಕ್ಕೆ. ಮೂಲೆಗೆ ನೀರಿನ ನಲ್ಲಿ.ಕುಸ್ತಿ ಮತ್ತು ಕಸರತ್ ಮಾಡಿದ ನಂತರ ಸ್ನಾನ ಮಾಡುವುದಕ್ಕೆ ಹಾಗೂ ಗರಡಿ ಮನೆ ಸ್ವಚ್ಚವಾಗಿ ಇಡುವುದಕ್ಕೆ.

ಗುರುಗಳಿಗೆ ಗುರು ದಕ್ಷಿಣೆ ಎಂದು ಒಂದು ವಾರಕ್ಕೆ ಐವತ್ತು ರೂ ಕೊಡಬೇಕಿತ್ತು.

ಕಸರತ್ತುಗಳನ್ನು ಮಾಡುವದಕ್ಕೆ ಎಲ್ಲರಿಗೂ ಅವಕಾಶ ಇತ್ತು. ಆದರೆ ಗೋಧದಲ್ಲಿ ಕುಸ್ತಿಮಾಡುವದಕ್ಕೆ ಗುರು ಮತ್ತು ಗರಡಿ ಮನೆಯ ಕೃಪ ಪೋಷಿತ ಹಾಗೂ ಕುಸ್ತಿಯಲ್ಲಿ ಸಾಕಷ್ಟು ಪ್ರಶಸ್ತಿ ಪಡೆದ ಹಿರಿಯ ಪೈಲ್ವಾನ್ ಲಚ್ಚನ್ನ ರಿಗೆ ನಮ್ಮ ಕಸರತ್ ಮಾಡುವದು ಹಿಡಿಸಬೇಕಿತ್ತು. ನಮ್ಮ ದೇಹದ ಬಲಿಷ್ಟತೆ ನೋಡಿ ಅಳೆದು ತೂಗಿ ಸೇರಿಸಿ ಕೊಳ್ಳುತ್ತಿದ್ದರು.

ನಮ್ಮೂರಿನ " ಕುಸ್ತಿ" ಗೆ ಹತ್ತೂರಲ್ಲಿ ಹೆಸರು ಮಾಡಿ, ಕೆಂಪು ಅಖಾಡದಲ್ಲಿ ಪೈಲ್ವಾರನ್ನ ಸೋಲಿಸಿ ಅನೇಕ ಬೆಳ್ಳಿ ಗಧೆ ಗೆದ್ದು, ಪ್ರಸಿಧ್ಧಿ ಪಡೆದ ಪುರಾತನ ಗರಡಿಯ ಮನೆ. 

ಇನ್ನೊಂದು ಮುಖ್ಯ ಅಂದರೆ "ಹನುಮಾನು ಲಂಗೋಟ " ಇದನ್ನಾ ಕಡ್ಡಾಯವಾಗಿ ಸರಿಯಾಗಿ ಧರಿಸಿಯೆ ಕಸರತ್ ಮಾಡಬೇಕಿತ್ತು. ಈ ಲಂಗೋಟ Y ಆಕಾರದಲ್ಲಿ ದಪ್ಪ ಬಟ್ಟೆಯಲ್ಲಿ ನುರಿತ ದರ್ಜಿಗಳು ಹೊಲಿಯುತ್ತಿದ್ದರು. ಪ್ರಾರಂಭದಲ್ಲಿ ಲಂಗೋಟ ಕಟ್ಟುವುದು ಗುರು ಅಥವಾ ಹಿರಿಯ ಪೈಲ್ವಾನ್ ಗಳು ಹೇಳಿಕೊಡುತ್ತಿದ್ದರು.

ದಸಾರ ಹಬ್ಬಕೆ ಕುಸ್ತಿ ನೋಡಲು ಮೈಸೂರಿಗೆ ಹೋಗಿದ್ದಾಗ ಅಲ್ಲಿನ ಜಟ್ಟಿಗಳು ಲಂಗೋಟವನ್ನಾ ಮಲ್ಲಂತಿಗೆ ಮತ್ತು ಕಾಸೆ ಅಂತ ಮಾತಾಡುತ್ತಿದ್ದರು. ಲಂಗೋಟ ಆಕಾರ ಮಾತ್ರ ಎಲ್ಲಾ ಒಂದೇ.

ಈ ಗರಡಿ ಮನೆಗೆ ಮೂರು ವರುಷದಿಂದ ಸತತವಾಗಿ ಬೆಳಗ್ಗೆ ಸಾಯಂಕಲ ಸೇರಿ ನಾಲ್ಕೈದು ಗಂಟೆ ಕಠಿಣ ಕಸರತ್ ಮಾಡಿ ದೇಹದ ಮಾಂಸ ಖಂಡಗಳು ತೇರಿನ ಹಗ್ಗದಂತೆ ಹುರಿಗಟ್ಟಿ ಕಬ್ಬಿಣದಂತೆ ಬಲಿಷ್ಟ ವಾಗುತ್ತಿದ್ದಾಗ... ಅಂದು ನನ್ನ ಅದೃಷ್ಟದ ಬಾಗಿಲು ತೆರೆಯಿತು. ಗರಡಿಯ ಗುರುನಾರಾಯಣಪ್ಪ ರವರ ಕಣ್ಣಿಗೆ ಬಿದ್ದೆ.

ಅಂದು ನೂರು ಕೆ.ಜಿ.ಯ ಕಲ್ಲು ಗುಂಡನ್ನಾ ಒಂದೇ ಕ್ಷಣದಲ್ಲಿ ಬಲ ಭುಜದಲ್ಲಿ ಕೂರಿಸಿಕೊಂಡು ಇಪ್ಪತ್ತು ಭಸಕಿ ಹೊಡೆದು ಹಾಗೆ ಬೆನ್ನಿಂದ ಕೆಳಗೆ ಬಿಟ್ಟೆ. ಆ ಸಮಯದಲ್ಲಿ ದಣಿವರಿಯದೆ ಮತ್ತೆ ಮತ್ತೆ ಮಾಡತೊಡಗಿದ್ದಾಗ...ಗುರುಗಳು ನನ್ನ ಗಮನಿಸಿ, ಹಿರಿಯ ಪೈಲ್ವಾನ್ ರಾದ ಲಚ್ಚನ್ನರಿಗೆ ತೊರಿಸಿದರು. ಒಂದರೆಡು ದಿನ ಸಂಪೂರ್ಣ ನನ್ನ ಕಸರತ್ತೆಲ್ಲ ಗಮನಿಸಿ, ದೇಹದ ತಾಕತ್ ಅಂದಾಜಿಸಿ ನನಗೆ " ಏ ಮರಿ ಬಾ ಇಲ್ಲಿ " ಲಚ್ಚನ್ನ ಕರೆದರು.

ಲಚ್ಚನ್ನ ಕಂಡರೆ ಎಲ್ಲರಿಗೂ ಗೌರವ ಮತ್ತು ಭಯ. ಏಕೆಂದರೆ ಯಾರಾದರು ಸರಿಯಾಗಿ ಕಸರತ್ ವ್ಯಾಯಾಮ ಮಾಡದಿದ್ದರೆ ಗರಡಿಯ ಮನೆಯಿಂದ ಹೊರ ಹಾಕಿ ಮತ್ತೆಂದು ಅವನನ್ನ ಗರಡಿಗೆ ಸೇರುಸುತ್ತಿರಲಿಲ್ಲ.

ಹತ್ತಿರ ಹೋಗಿ " ಅಣ್ಣ " ಎಂದೆ.

" ಹೆಸರೇನು,ಏನು ಓದುತ್ತಿದಿಯಾ...." ಎಂದರು

" ರಾಜೇಂದ್ರ ಬಿ.ಕಾಂ. ಓದುತ್ತಿದ್ದಿನಿ. ಅಪ್ಪ ಮಾರುಕಟ್ಟೆಯಲ್ಲಿ ಅಂಗಡಿ...." ಪರಿಚಯ ಮಾಡಿಕೊಂಡೆ.

" ಬ್ರಾಹ್ಮಣ..... ತಿಳಿಸಾರ್ " ಅಂದರು ದೀರ್ಘ ವಾಗಿ ಲಚ್ಚನ್ನ

" ಹೌದು ಅಣ್ಣ " ಎಂದೆ

ಗುರುಗಳು ತಕ್ಷಣ ಮಧ್ಯೆ ಪ್ರವೇಶ ಮಾಡಿ " ಲಚ್ಚೀ... ಹುಡುಗ ಕಸರತ್ ಜಾಸ್ತಿ ಮಾಡಿ ಖಡಕ್ ಇದ್ದಾನೆ. ಅಖಾಡದಲ್ಲಿ ಕುಸ್ತಿಗೆ ಹಾಕ್ಕೊಂಡ್ರೆ.... ಬರುವ ದಸರ ಹಬ್ಬದ ಕುಸ್ತಿ ಪಂದ್ಯಕ್ಕೆ ಸಿದ್ಧವಾಗ್ತಾನೆ. ಮೊನ್ನೆ ನೋಡಿದೆಯಲ್ಲ, ಹುಡುಗನ ಕಸರತ್...." ಎಂದರು .

ಲಚ್ಚನ್ನ ಗಂಭೀರವಾಗಿ ತಲೆಯಾಡಿಸುತ್ತಾ " ಎನೇನು ತಿನ್ನುತ್ತಿಯಾ...? ಎಂದರು

" ಇಲ್ಲಿ ಗರಡಿ ಮುಗಿಸಿದ ನಂತರ ಮೂರು ಎಳನೀರು,ಒಂದು ಲೀಟರ್ ಹಾಲು,ಹತ್ತು ಚಪಾತಿ ಮಧ್ಯಾನ್ಹ ಎರಡು ರಾಗಿ ಮುದ್ದೆ ಬೆಣ್ಣೇ ತುಪ್ಪ.... ಮತ್ತು ರಾತ್ರಿಗೆ ಬಾದಾಮಿ,ಪಿಸ್ತ,ಗೊಡಂಬಿ ಹಾಕಿದ ಒಂದು ಲೀ ಹಾಲು..." ಎಂದೆ.

" ದಿನ ಕಸರತ್ ಎನೇನು ಮಾಡುತ್ತೀಯಾ...? " ಕೇಳಿ ದರು.

" ದಂಡದಲ್ಲಿ ಸಾದ,ಸೀದಾ,ಅರೆ,ಗೋಡೆ,ಹನುಮಾನು,ಭಾರ....ಎಲ್ಲಾ ಸೇರಿ ಸಾವಿರ ಅಂಖೆ ಹೊಡೆಯುತ್ತೇನೆ.

ಭಸಕಿಯಲ್ಲಿ ಪೂರ್ಣ,ಅರ್ಧ, ಮುಂದಜ್ಜೆ, ಅಗಲ,ಹತ್ತೀರ,ಭಾರ....ಎಲ್ಲಾ ಸೇರಿ ಸಾವಿರ ಕಡಿಮೆ ಸಮಯದಲ್ಲಿ ವಿರಾಮವಿಲ್ಲದೆ ಮಾಡುತ್ತಿನಿ.

ತರಹೆವಾರಿಯ ಎಲ್ಲಾ ಡಂಬಲ್ಗಳನ್ನಾ ಬಲಗೈ ಎಡಗೈಗೆ ಸಮ ಸಮಕ್ಕೆ ಹದಿನೈದು ನಿಮಿಷ ಕ್ರಮಬದ್ದವಾಗಿ ಮಾಡುತ್ತೀನಿ. ಹೊರಗಡೆ ಗುರು ಹೇಳಿಕೊಟ್ಟ ಹಾಗೆ ಎಲ್ಲಾ ಭಾರದ ಗುಂಡುಗಳನ್ನಾ ಎತ್ತುತ್ತೇನೆ.

ಕೊನೆದಾಗಿ ಕಬ್ಬಿಣದ ಬಾರ್ ನ ವ್ಯಾಯಾಮ ಹತ್ತು ನಿಮಿಷ ಮಾಡುತ್ತೀನಿ." ಎಂದೆ.

" ಆಯ್ತು... ನಾಳೆ ಗೋಧಾ ಗೆ ಬಾ " ಎಂದು ಗುರು ಕಡೆ ತಿರುಗಿ ಹೇಳಿದರು.

" ನಾಳೆ ಪೂಜೆ ಸಾಮಾನುಗಳನ್ನು ತಗೊಂಡು ಬಾಪ್ಪ ರಾಘು..." ಎಂದರು ಗುರುಗಳು

" ಆಯ್ತು ಗುರು " ಎಂದು. ಬೆಂಚ್ ಪ್ರಸ್ ಮಾಡುವುದಕ್ಕೆ ಹೊರ ಬಂದೆ.

" ಜೊತೆಗಾರರಾದ ರಮೇಶ, ಮುಖ್ತಾರ್, ಗಂಗ... ಹುಷಾರು ನಾಳೆ ಲಚ್ಚನ್ನನೆ ನಿನ್ನ ಜೊತೆ ಕುಸ್ತಿ ಮಾಡುವುದು.."ಎಂದರು ಗಂಭೀರವಾಗಿ ನನಗೆ ಎಲ್ಲಾ ತಿಳಿದಿದ್ದರು ಸರಿಯೆಂದು ತಲೆಯಾಡಿಸಿದೆ.

ಮಾರನೆ ದಿನ 5 ಗಂಟೆಗೆ ಅಲರಾಂ ಹೊಡೆಯಿತು. ಎದ್ದು ಬೇಗ ಸಿದ್ದನಾಗಿ ಪೂಜಾ ಸಾಮಾಗ್ರಿ Hercules ಸೈಕಲ್ ನ ಹ್ಯಾಂಡಲ್ ಗೆ ತಗಲಾಕಿ ಗರಡಿ ಮನೆಗೆ ಹೊರಟು, ಮುಂದಿನ ರಸ್ತೆಯ ಎದುರು ಮನೆ ಕಾಣುತ್ತಿದ್ದಂತೆ.. ಸೈಕಲ್ಲು ಬೆಲ್ಲ್ ಹೊಡೆದೆ... ತಕ್ಷಣ ಕಾಲೇಜ್ ಗೆಳತಿ ಶರಣ್ಯ ಮನೆಯ ಕಿಟಕಿ ಬಳಿ ಕುಳಿತು ಓದುತ್ತಿದ್ದವಳು ತಲೆಯೆತ್ತಿ ಹೊಂಬೆಳಕಿನ ನಗು ಚೆಲ್ಲಿ ಕೈ ಬೀಸಿದಳು. ನಾನು ಕೈ ಬೀಸಿ ಉತ್ಸಾಹದಿಂದ ಸೈಕಲ್ಲು ಮುನ್ನುಗಿಸಿದೆ. ಈ ಸ್ನೇಹದಾಟ ಎರಡು ವರ್ಷದಿಂದ ಹೀಗೆ ನೆಡೆಯುತ್ತಿದೆ. ಗರಡಿಯಲ್ಲಿ ಕಸರತ್ ನ ಉತ್ಸಾಹ ಮತ್ತಷ್ಟು ಹೆಚ್ಚುತ್ತಿದೆ.

ತಣ್ಣಿರು ಸ್ನಾನ ಮಾಡಿ, ಅಖಾಡಕ್ಕೆ ಮತ್ತು ಹನುಮನ ವಿಗ್ರಕೆ ಪೂಜೆ ನಾನೆ ಮಾಡಿದೆ. ಮಂಗಳಾರತಿ ಬೆಳಗಿ ಎಲ್ಲರಿಗೂ ಕೊಟ್ಟು ನಾನು ಕಣ್ಣೀಗೆ ಒತ್ತುಕೊಂಡು ಗುರು ವಿನ ಪಾದಕ್ಕೆ ನಮಸ್ಕರಿಸಿದೆ.

ಕೇವಲ ಹತ್ತು ನಿಮಿಷ ಮಾತ್ರ ಭಾರವಾದ ಕಸರತ್ ಮಾಡಿ ಮೈ ಬಿಸಿ ಏರಿಸಿಕೊಂಡು ಅಖಾಡಕೆ ನಮಸ್ಕರಿಸುತ್ತಾ ಕೆಮ್ಮಣ್ಣು ಎದೆಗೆ ಕೈಗೆ ಹಚ್ಚುಕೊಂಡು ಬಲ ತೊಡೆ ತಟ್ಟುತ್ತಾ "ಜೈ ವೀರ ಹನುಮನ್ " ಬಲಗಾಲು ಇಟ್ಟೆ.

ಹೊಸ ಕುಸ್ತಿ ಪಟುವಿನ ಶಕ್ತಿ ಸಾಮರ್ಥ್ಯ ಎಷ್ಟಿದೆಯೆಂದು ತಿಳಿದುಕೊಳ್ಳುವ ಅನುಭವದ ಚಾಣಕ್ಷತೆ ಆಗಾಧವಾಗಿತ್ತು ಅಣ್ಣನಿಗೆ.

ಅಣ್ಣ ನಾನು ಎದುರು ಬದರು ನಿಂತೆವು. ನನ್ನ ಕುತ್ತಿಗೆಗೆ ಕೈ ಹಾಕಿ ಅಖಾಡದ ಮಣ್ಣು ಮುಕ್ಕಿಸಲು ಅದುಮತೊಡಗಿದ ನಾನು ತಕ್ಷಣ ಕೈ ನೆಲಕ್ಕೆ ಉರಿದೆ.ಕೈನ್ನು ಕಾಲಿಂದ ಒದ್ದಾಗ ಆಯ ತಪ್ಪಿ ಮೊಣಕೈ ಆಸರೆ ಕೊಟ್ಟೆ.

"ರಾಘ ಖಡಕ್ ಆಗಿ ಲಡತ್ ಮಾಡು ಮೈ ಶಕ್ತಿಯೆಲ್ಲಾ ಒಂದು ಕಡೆ ಬರಲಿ. ನಿಂಗೆ ಅಖಾಡ ಅಣ್ಣ ಎರಡೆ ಕಾಣಬೇಕು.." ಎಂದು ಗುರು ಹೇಳುತ್ತಿದ್ದರು.

ಆಸರೆ ಕೊಟ್ಟ ಕೈ ನೆರವಿನಿಂದ ಅರೇ ಕ್ಷಣದಲಿ ನಿಂತು ಮತ್ತೆ ಕುಸ್ತಿ ಕಲಿಯುವುದಕ್ಕೆ ಸಿದ್ದನಾದೆ.

ಇದು ಅಣ್ಣನಿಗೆ ಇಷ್ಟವಾಗಿ, ಕಣ್ಣಲಿ ಮೆಚ್ಚುಗೆ ಸೂಚಿಸಿದ.

ಅರ್ಧ ಗಂಟೆ ಎಷ್ಟೇ ಪ್ರಯತ್ನ ಪಟ್ಟರೂ ಚಿತ್ ಮಾಡಲು ಅಣ್ಣನಿಗೆ ಅವಕಾಶ ಕೊಡದೆ, ನಾನು ಮಣ್ಣಿಗೆ ಬೀಳದೆ ನನಗೆ ತೋಚಿದ ರೀತಿ ಬಿಡಿಸಿ ಕೊಳ್ಳುತ್ತಿದ್ದೆ. ಹೀಗೆ ಮತ್ತೆ ಇಬ್ಬರು ತೊಡೆ ತಟ್ಟಿ ಬಂದರು. ಅವರಿಗೂ ಅದೇ ಆಟವೇ ಮುಂದುವರಿಸಿದೆ.

ಗುರು ಮತ್ತು ಅಣ್ಣ " ಬಲವಾಗಿ ಚಿತ್ ಆಗದೇ ಕಿತ್ತಾಡದೆ.... ಮೈಯಲಿ ಕಸವ್ ಜೋರಾಗಿದೆ.ಪೈಲ್ವಾನ್ ಗೆ ಬೇಕಾಗಿರುವುದು ಆದೆ, ಆದಿದ್ದರೆನೇ ಎದುರಾಳಿ ಮೇಲೆ ನುಗ್ಗುವುದಕ್ಕೆ ಸಲಿಸು.ನಾಳೆಯಿಂದ ಕುಸ್ತಿಯ ಪಟ್ಟುಗಳು ಗುರು ಕಲಿಸುತ್ತಾರೆ. ಶ್ರದ್ದೆಯಿಂದ ಕಲಿತು ದಸರ ಹಬ್ಬದ ಕುಸ್ತಿಗೆ ತೊಡೆ ತಟ್ಟಬೇಕು ಸವಾಲ್ ಹಾಕಬೇಕು..." ಎಂದು ಕುಸ್ತಿಯ ಬಗ್ಗೆಯೆ ಮರ್ಮ ಒಳಮರ್ಮ ವಿವರಿ ಹೇಳ ತೊಡಗಿದರು... ಅಣ್ಣ ಮತ್ತು ಗುರುಗಳು. ನಾನು ಕೇಳುತ್ತಾ ಸ್ನಾನ ಮಾಡಿ ಬಟ್ಟೆ ಧರಿಸಿ, ಗುರುವಿಗೆ ನಮಸ್ಕಾರ ಮಾಡಿ ಗರಡಿ ಮನೆಯಿಂದ ಹೊರ ಬಂದೆ.

 ಹೊರಬಂದರೂ.....ಗೆಳಯರ ಸಂಗಡ ಮತ್ತು ಗೆಳತಿ ಶರಣ್ಯ ಜೊತೆ ಎಂದಿನಂತೆ ಕಾಲೇಜ್ ನಲ್ಲಿ ಕುಸ್ತಿಯ ವಿಷಯ ಹಂಚಿಕೊಂಡೆ.ಶರಣ್ಯಳು ಸಹ ಆಸಕ್ತಿಯಿಂದ ಕೇಳಿ ಕುಸ್ತಿ ಕ್ರಮಬದ್ದವಾಗಿ ಸಾಕಷ್ಟು ಕಲಿಯಲು ಹುರಿದುಂಬಿಸಿದಳು....

ಕುಸ್ತಿಯ ಬಗ್ಗೆ ಮತ್ತೆ ಮತ್ತೆ ಚರ್ಚೆ ಮಾಡಿ ಪ್ರೋತ್ಸಾಹಿಸುತ್ತಿದ್ದಾಳೆ. ಗೆಳಯರ ಜೊತೆಗಿಂತ ಗೆಳತಿ ವಿಷಯ ಹಂಚಿಕೊಳ್ಳಲು ತುಂಬ ಇಷ್ಟವಾಗುತ್ತಿತ್ತು.

ನೋಡು ನೋಡುತ್ತಲೇ ಐದು ತಿಂಗಳು ಮುಗಿಯುತ್ತಿದೆ... ಆಖಾಡದಲಿ ನನ್ನ ಹಿರಿಯಾದ ರಸೂಲ್,ಪೀರ್ ಸಾಬ್, ಗಣೇಶ, ಮುಖ್ತರ್, ಜಿ.ಟಿ., ಗಂಗ, ನಾಗ, ಮಖ್ಯವಾಗಿ ಪ್ರಕಾಶಣ್ಣ… ಇವರೆಲ್ಲಾ ಬಲಿಷ್ಟರಾದ ಕುಸ್ತಿಪಟುಗಳೆ. ಇವರೆಲ್ಲಾ ನನಗೆ ಪ್ರತಿ ಬೆಳಗ್ಗೆ ಸಾಯಂಕಾಲ ಕುಸ್ತಿಯಲ್ಲಿ ನನ್ನ ಸಂಗಡ ಆಡುತ್ತಾ ಗುರುಗಳ ಉಪಸ್ಥಿತಿಯಲ್ಲಿ... ಆಖಾಡ ದಲ್ಲಿ ದೋಬಿ, ಆದಾ ದೋಬಿ,ಏಕ್ ಲಾಂಗಾ,ದೋ ಲಾಂಗ್,ಕೊಕ್ಕರಿ,ಉಕಾಡ್,ನಿಕಾಲ್, ನಿಸ್ತಾ,ಪೇಟ್, ಜಂಗ್,ಕಳವಾರ್ ಜಂಗ್,ಪೀಠ್,ಆದಾಪೀಠ್,ಕವಾಮನೆ, ಆಂಟಿದಾವ್,ಲುಕಾನ್,ಬಾರಲಿ, ಟಾಂಗ್, ಡಾಕ್,ಸವಾರ್,..... ಕಲಿಸತೊಡಗಿದರು.

ಕುಸ್ತಿ ಆಡು ಆಡುತ್ತಾ.. ಆಖಾಡದ ಮಣ್ಣು ಗಡಸು ಆಗುತ್ತಿತ್ತು.ಆಗ ಕೆಲವು ಒಂದರೆಡು ನಿಮಿಷ ಪಕ್ಕಕ್ಕೆ ಸರಿದು ನಿಲ್ಲುತ್ತಿದ್ದೆವು. ಇಂತಹ ಸಮಯವನ್ನೇ ಕಾಯುತ್ತಿದ್ದ ಕಿರಿಯ ಪಟುಗಳು ಓಡಿ ಬಂದು ಚೆಲಕೆ ತೆಗೆದುಕೊಂಡು ಖಾಡದ ಕೆಮ್ಮಣ್ಣುನ್ನಾ ಪಿರಾಯಿಸುತ್ತಿದ್ದರು. ಅಂದರೆ ಮಣ್ಣನ್ನಾ ಕೆಳಗೆ ಮೇಲೆ ಮಾಡುತ್ತಿದ್ದಾಗ... ಮಣ್ಣು ನುಣ್ಣಗೆ ಪರವರ್ತನೆ ಆಗುತ್ತಿತ್ತು.ಈ ಕೆಲಸ ಒಂದರೆಡು ನಿಮಿಷದಲ್ಲಿ ಮುಗಿಯುತ್ತಿತ್ತು. ಮತ್ತೆ ಕುಸ್ತಿ ಆಖಾಡದಲ್ಲಿ ಮುಂದುವರೆಯುತ್ತಿತ್ತು.

ಕೆಲವು ಬಾರಿ ಕುಸ್ತಿಯಲ್ಲಿ ಮಾಂಸ ಖಂಡ ಮತ್ತು ಮೂಳೆಗಳಿಗೆ ಸಣ್ಣ ಪುಟ್ಟ ಪೆಟ್ಟು ಬಿದ್ದಾಗ, ಎಳ್ಳೆಣ್ಣೆಗೆ ಪಚ್ಚ ಕರ್ಪೂರ, ಬೆಳ್ಳುಳ್ಳಿ, ಒಂದರೆಡು ಮೂಲಿಕೆಗಳನ್ನಾ ಮಿಶ್ರಣ ಮಾಡಿ ಗುರುಗಳು ಸ್ವತ: ತಯಾರಿಸಲಾದ ನೋವಿನಣ್ಣೆಯನ್ನು ಸಂಪ್ರಾದಾಯಿಕವಾಗಿ ಹಿರಿಯರ ಮಾರ್ಗದರ್ಶನದಲ್ಲಿ ಮಾಲಿಷ್ ಮಾಡಿಕೊಳ್ಳುತ್ತಿದ್ದೆವು. ಈ ಮಾಲಿಷ್ ಮಾಡುವ ವಿದ್ಯೆ ಕರಗತ ಮಾಡಿಕೊಂಡಿದ್ದ

ಕಸ್ತೂರಿ ಬಳೆ ಅಂಗಡಿಯ ಕುಳ್ಳ ರಂಗರಾಜು ಅಲಿಯಾಸ್ ಎಮಂಡ ಸದಾ ಮುಂದುಜ್ಜೆ ಇಡುತ್ತಿದ್ದ.

ಈ ಸಣ್ಣ ಪುಟ್ಟ ಕುಸ್ತಿ ಏಟುಗಳು ಸೊಳ್ಳೆ ಕಚ್ಚಿದಂತೆ, ಮಾರನೆ ದಿನ ನೋವಿದ್ದರೂ ಲಂಗೋಟ ಕಟ್ಟಿ ಆಖಾಡಕೆ ಇಳಿದು ತೊಡೆ ತಟ್ಟಿ, ಮೀಸೆ ತಿರುವಿ ನಿಂತಾಗ ನೋವುಗಳು ಎಲ್ಲಾ ಮಾಯ ಆಗುತ್ತಿತ್ತು.

ಹೀಗೆ ಪುರಾತನ ಸಂಪ್ರಾದಾಯದ ಕಸರತ್ ಮತ್ತು ಕುಸ್ತಿ ಕಲಿಯುತ್ತಿದ್ದೆವು.

ಸಮಯ ಸರಿಯುತ್ತಿದೆ... ದಸರ ಹಬ್ಬದ ಹತ್ತಿರ ಬರುತ್ತಿದೆ.

ಊರು ಪಕ್ಕದೂರಿಗೆಲ್ಲಾ ದಸರ ಹಬ್ಬದ ಕುಸ್ತಿಯ ಪಂದ್ಯವಳಿಯ ಕರಪತ್ರಗಳನ್ನಾ ಎಲ್ಲೇಡೆ ಹಂಚಲಾಯಿತು. ಹೆಸರು ಮಾಡಿರುವ ಕುಸ್ತಿಯ ಗರಡಿಯ ಮನೆಗಳಿಗೆ ಸ್ವತ: ಆಹ್ವಾನಿಸಲಾಯಿತು. 

ಗೌರೂರಿನ ಮುನಿಸಿಪಲ್ ಹೈ ಸ್ಕೂಲ್ ಮೈದಾನದಲ್ಲಿ ನಾಲ್ಕು ಕುಸ್ತಿ ಆಖಾಡ ವನ್ನು ಸಿದ್ದಪಡಿಸಿ...ಎಲ್ಲಾ ಇಲಾಖೆಗಳಿಂದ ಅನುಮತಿ ಪತ್ರ ಪಡೆಯಲಾಯಿತು.

ಹಬ್ಬಕ್ಕೆ ಕುಸ್ತಿ ಆಡುವುದು ಮಾತ್ರ ಬಾಕಿಯಿದೆಯಷ್ಟೇ. ನಾನು ನನ್ನ ಕಾಲೇಜ್ ಗೆಳಯರಿಗೆ ಮತ್ತು ಶರಣ್ಯಳಿಗೆ ನೋಡಲು ಆಹ್ವಾನಿಸಿದಾಗ.... ' ಏ ಗೂಳಿ ನಾನಿಲ್ಲದೇ ನೀ ಹೆಂಗೆ ಕುಸ್ತಿ ಮಾಡುತ್ತಿಯ ' ರೇಗಿಸಿದಳು.

ಮುನಿಸಪಲ್ ಹೈ ಸ್ಕೂಲ್ ಮೈದಾನದಲ್ಲಿ ಸಿದ್ದಗೊಂಡ ಕುಸ್ತಿ ಆಖಾಡ ದಲ್ಲಿ ಕುಸ್ತಿಗಳು ಸತತವಾಗಿ ನೆಡೆಯುತ್ತಿದೆ...ಪ್ರೇಕ್ಷಕರ ಶಿಳ್ಳೆ, ಕೂಗು, ಜೈಕಾರ....ಮುಗಿಲು ಮುಟ್ಟುತ್ತಿದೆ...ನಮ್ಮ ಗರಡಿ ಮನೆಯ ಪೈಲ್ವಾನ್ ಗಳು ಸಾಕಷ್ಟೂ ಕುಸ್ತಿ ಗೆಲ್ಲುತ್ತಿದ್ದಾರೆ. ನನ್ನನ್ನಾ ಗುರುಗಳು ಇನ್ನೂ ಆಖಾಡಕ್ಕೆ ಇಳಿಸಿಲ್ಲಾ....

ಹೀಗಿರುವಾಗ ಮೈಕ್ ಲ್ಲಿ ತಮಿಳುನಾಡಿನ ಈರೊಡು ಗರಡಿ ಮನೆಯ ಕುಸ್ತಿಯ ಕಪ್ಪು ಹುಲಿ ಬ್ಲಾಕ್ ಟೈಗರ್ ಗುಣಾ ಆಖಾಡಕ್ಕೆ ಬಂದಿದ್ದಾರೆ. ಇದುವರೆವಿಗೆ ಇಪ್ಪತ್ತು ಕುಸ್ತಿಗಳನ್ನು ಹೆಸರಾಂತ ಪೈಲ್ವಾನ್ ರನ್ನು ಮಣ್ಣು ಮುಕ್ಕಿಸಿದ್ದಾರೆ...ಇಲ್ಲಿ ಯಾರಾದರೂ ಪೈಲ್ವಾನ್ ಇದ್ದರೆ ಆಖಾಡಕ್ಕೆ ಬರಬಹುದು.

ಎಲ್ಲಾರು ಅಖಾಡದ ಕಡೆ ನೋಟ ಹರಿಸಿದಾಗ... ಕಪ್ಪು ಕರಡಿಯಂತೆ ಎತ್ತರವಾದ ಬಲಿಷ್ಟ ದೇಹ ಹೊಂದಿದ ಪೈಲ್ವಾನ್ ತೊಡೆ ತಟ್ಟುತ್ತಾ ಎಲ್ಲರನ್ನೂ ಕುಸ್ತಿಗೆ ಆಹ್ವಾನಿಸುತ್ತಿದ್ದಾನೆ.ಆದರೆ ಯಾರೂಬ್ಬರೂ ಮುಂದೆಜ್ಞೆ ಇಡಲಿಲ್ಲಾ...

ಸಮಯ ಸರಿಯುತ್ತಿದೆ...

ನಾನು ಗುರುಗಳ ಕಡೆ ನೋಡಿದೆ... ಗುರು ನಾರಾಯಣಪ್ಪ ಅಣ್ಣ ನನ್ನೇ ನೋಡುತ್ತಿದ್ದಾರೆ... ನನ್ನ ಹತ್ತಿರ ಕರೆದು " ಅವನಿಗೆ ಸವಾಲು ಸ್ವೀಕಾರ ಮಾಡುತ್ತಿಯಾ" ಎಂದರು.

" ಗುರು ನೀವು ಆಶಿರ್ವಾದ ಮಾಡಿ ಗುರು... ನಮ್ಮ ಗರಡಿಮನೆಯ ಹೆಸರು ಉಳಿಸುತ್ತೀನಿ...." ಎಂದೆ

ಗುರು ಅಣ್ಣನ ಮುಖ ನೋಡಿದರು. ಅಣ್ಣ ಕರೆದು ವಿಜಯದ ತಂತ್ರಗಳನ್ನಾ ನೆನಪಿಸಿ... ಒಪ್ಪಿಗೆ ಸೂಚಿಸಿದರು.

ಕ್ಷಣದಲ್ಲೆ ಆಖಾಡ ದಲ್ಲಿದ್ದೆ.

ಅಖಾಡದಲ್ಲಿದ್ದ ರೆಫ್ರೀ ನಮ್ಮೀಬ್ಬರ ಕೈ ಮಿಲಾಯಿಸಿ ದೂರ‌ ‌‌‌ತಳ್ಳಿದ.

ಎದುರಾಳಿ ತೊಡೆ ತಟ್ಟಿ ' ಎ ಮರಿ ವಾ ಇಂಗ ' ಎಂದು ಕೈ ಚಾಚಿ ವ್ಯಂಗವಾಗಿ ಕರೆದ... ಆಷ್ಟೇಯ ನನಗೆ ಬೇಕಾಗಿದುದು ಅದೇ.. ಅರೇ ಕ್ಷಣದಲ್ಲಿ ಮುನ್ನೂಗ್ಗಿ ಆ ಕೈ ಹಿಡಿದುಕೊಂಡು ಕುಳಿತುಕೊಂಡು " ಆದಾ ದೊಬಿ " ಶಾಟ್ ನ ಬಲವೆಲ್ಲಾ ಬೀಸಿ ಹೊಡೆದೆ. ಹೊಡೆದ ರಭಸಕ್ಕೆ ಆಖಾಡದ ಮೂಲೆಯ ಅಂಚಿಗೆ ಭುಜ ಕೊಟ್ಟು ಬಿದ್ದ. ಬೆನ್ನು ಬಿದ್ದಿದ್ದರೆ ಕುಸ್ತಿ ಸಮಾಪ್ತಿ ಯಾಗುತ್ತಿತ್ತು.

ನನ್ನ ವೇಗ ನನಗೆ ಅಶ್ಚರ್ಯ ತಂದಿತ್ತು.

ಇನ್ನಾ ಪ್ರೇಕ್ಷಕರಿಗೆ ತರದೆ ಇರುತ್ತದೆಯೆ... ಹೊ.... ಹೊ.. ಎಂದು ಕೂಗ ತೊಡಗಿದರು. ಗುಣಾ ಎನಾಗಿದೆ.. ಏನಾಗುತ್ತಿದೆಯೆಂದು ಅರ್ಥ ವಾಗಲೂ ಒಂದರೆಡು ಕ್ಷಣ ಹಿಡಿಯಿತು.. ಇದು ಅವನ ಊಹೆಗೆ ನಿಲಕದ್ದು. ರೋಷ ವೇಷದಲ್ಲಿ ಕ್ಷಣದಲ್ಲೆ ಮುನ್ನೂಗ್ಗಿ ನನ್ನ ಬಾಚಿ ತಬ್ಬಿಕೊಂಡು ಆಂಟಿ ಡಾವ್ ಪಟ್ಟು ಹಾಕಿ ಮೈಯಲ್ಲಿನ ಮೂಳೆಗಳನ್ನಾ ಮುರಿಯಲು ಅವನ ಬಲವನ್ನೆಲ್ಲಾ ಒಗ್ಗೊಡಿಸಿ ಅಮುಕುತ್ತಾ ಪ್ರಯೋಗಿಸಿದ.. ನಾನು ಪ್ರಾರಂಭದಲ್ಲೆ ಈ ಪಟ್ಟು ಗಮನಿಸಿದ ತಕ್ಷಣವೆ ಶ್ವಾಸದ ಚಲನೆಯನ್ನಾ ಬಂಧಿಸಿ ನನ್ನ ಮೈಯನ್ನಾ ರಬ್ಬರು ಚೆಂಡಿನಂತೆ ಸಿಧ್ಧ ಪಡಿಸಿಕೊಂಡಿದ್ದೆ. ಅವನು ಹಿಸುಕಿ ಹಿಸುಕಿ ಅವನ ಕೈ ನೋವು ಬರತೊಡಗಿದಾಗ, ಇನ್ನೂ ಸಾಧ್ಯವಿಲ್ಲವೆಂದುಕೊಂಡಾಗ ನನ್ನ ಎತ್ತಿ ಮೇಲಕ್ಕೆ ಏಸೆದ,ನಾನು ಹಾಗೆಯೆ ಗಾಳಿಯಲ್ಲಿ ಪಲ್ಲ್ ಟಿ ಹೊಡೆಯುತ್ತಾ.. ಕೆಳಕ್ಕೆ ಬರುತ್ತಿದ್ದ ಹಾಗೆ ' ಹನುಮಾನ್ ಭಂಗಿ' ಯಲ್ಲಿ ಕುಳಿತು.. ಎದ್ದು ನಿಲ್ಲುತ್ತಾ ಕುಸ್ತಿಗೆ ಸಿದ್ದವೆಂದು ತೊಡೆ ತಟ್ಟುತ್ತಾ ಎದ್ದು ನಿಂತೆ.

ನಾನು ಪುಟವೆದ್ದು ನಿಂತು ಕುಸ್ತಿಗೆ ಮತ್ತೆ ಆಹ್ವಾನಿಸಿದ್ದು ಪ್ರೇಕ್ಷಕರಿಗೆ ಕಿಕ್ ಕೊಟ್ಟಿತ್ತು. ನನ್ನ ಅಡ್ಡ ಹೆಸರನ್ನಾ ಕಾಲೇಜ್ ಗೆಳಯರು "ಗೂಳಿ...ಗೂಳಿ... ಗೂಳಿ...." ಎಂದು ಕೂಗುತ್ತಾ ಅರಚುತ್ತಾ...ಸಂಭ್ರಮಿಸಿ ನನ್ನ ಹುರಿದುಂಬಿಸುತ್ತಿದ್ದಾರೆ...ಹಾಗೆ ನೋಡಿದಾಗ ಶರಣ್ಯ ಕಂಡಳು. ನನ್ನ ಕಣ್ಣು ಬೆರೆತೊಡನೆ ಕೈ ಬೀಸಿ ಗಾಳಿಯಲ್ಲಿ ಚುಂಬನ ತೇಲಿ ಬಿಟ್ಟಳು ಪ್ರಥಮ ಬಾರಿಗೆ ಗೆಳೆಯನಿಗೆ ಪ್ರೇಮಿಯಾಗಿ ಭಡ್ತಿ ಕೊಟ್ಟಳೇ..ಅನುಮಾನ .. ಆ ಕ್ರಿಯೆಗೆ ಮೈಯಲಿ ಹುಮ್ಮಸ್ಸು ಮತ್ತಷ್ಟು ನುಗ್ಗಿ ಬಂತು.

ಗುಣಾ ಕರಡಿಯಂತೆ ಮತ್ತೆ ಹಿಡಿಯಲು ಬಂದ....ಆದ ಗಮನಿಸಿ ನಾನು ಕೆಳಕ್ಕೆ ಬಗ್ಗಿ ಬುಗಲ್ ಡಾವ್ ನಿಂದ ಅವನನ್ನಾ ಹಿಡಿದೆತ್ತಿ ಬೆನ್ನಾ ಹಿಂದೆ ಬಿಸಾಕಿದೆ. ಗುಣಾ ಬಿದ್ದವನು ನಾನು ಹಿಂತಿರುಗಿ ನೋಡುವಷ್ಟರಲ್ಲೇ ನನ್ನನ್ನು ಹಿಂದಿನಿಂದ... ಬಂಧಿಸಿದ... ಕ್ಷಣಗಳು ಓಡುತ್ತಿವೆ.. ಇವನ ಉಡದ ಹಿಡಿತ ಹೆಚ್ಚಾಗುತ್ತಿದೆ... ಯಾವ ಪಟ್ಟು ನೆನಪು ಆಗ್ತಾಯಿಲ್ಲಾ..ಗುರು ಕಡೆ ನೋಡಿದೆ. ಗುರು ಗುಣಾನ ಕಾಲು ಒಮ್ಮೆ ನೋಡಿ ಸಂಜ್ಞೆ ಮಾಡಿದರು.

ಕ್ಷಣದಲ್ಲೆ ಬಗ್ಗಿ ರಭಸವಾಗಿ ಅವನ ಕಾಲೆಳೆದು ಬೀಳಿಸಿದೆ. ಆಗ ಅವನ ಹಿಡಿತ ಬಿಡುಗಡೆ ಆಯಿತು.

ಹೀಗೆ ನಾಲ್ಕು ಸುತ್ತು ಕುಸ್ತಿ ನೆಡೆಯುತ್ತಿದೆ.

ಅವನು ಹೆಚ್ಚಾಗಿ ಕಳಾವರ್ ಪ್ರಯೋಗ ಮಾಡುತ್ತಿದ್ದಾನೆ.ಅವನಿಗೆ ಬರುವ ಪಟ್ಟುಗಳೆಲ್ಲಾ ಬಳಸುತ್ತಿದ್ದಾನೆ...ನಾನು ಮಾತ್ರ ಯಾವುದೇ ಹಿಡಿತಕ್ಕೆ ಸಿಗದೆ ನುಣುಚಿಕೊಳ್ಳುತ್ತಿದ್ದೆ. ಹೀಗೆ ಸಮ ಬಲ ಹೋರಾಟ ಸಾಗಿದೆ. ನಿಜ ಹೇಳಬೇಕೆಂದರೆ ಗುಣಾ ನನಗಿಂತ ಎತ್ತರ,ಬಲಿಷ್ಟ, ಅನುಭವಸ್ಥ ಮತ್ತು ವಿಶೇಷವಾಗಿ ಇದುವರೆಗೂ ಸೋಲದಿರುವ ಸರದಾರ.

ನನ್ನಲಿದ್ದ ಒಂದೇ ಅತ್ಮವಿಶ್ವಾಸ.ಅವನನ್ನಾ ಗೆಲ್ಲಲೆ ಬೇಕೆಂಬ ಛಲ.

ಐದನೇ ಸುತ್ತಿನ ಹೋರಾಟ ಸಾಗುತ್ತಿದೆ..

ಕ್ಷಣ ಸುಸ್ತು ಎನಿಸಿತು..ಅಷ್ಟೇ...ಆಗಲೇ ನನ್ನ

ಕೆಡವಿ ಬಕ್ಕ ಬಾರಲು ಬೀಳಿಸಿದ ಮೊಣಕಾಲಿನ ಭಾರವನ್ನೆಲ್ಲಾ ನನ್ನ ಕುತ್ತಿಗೆಯ ಮೇಲಿಟ್ಟ ರಭಸಕ್ಕೆ ನನ್ನ ಅರ್ಧ ಭಾಗ ಮುಖ ಕೆಂಪು ಮಣ್ಣಲಿ ಹುತಿತು. ನನ್ನ ಹೊಟ್ಟೆಗೆ ಕೈ ಹಾಕಿ ' ಚಿತ್ ' ಮಾಡಲು ಬಲ ಪ್ರಯೋಗಿಸುತ್ತಿದ್ದಾನೆ ದೈತ್ಯ ಗುಣಾ...

ಇದು ಅರವಿಗೆ ಬರೋಕೆ 6..7.. ಕ್ಷಣ ಬೇಕಾಯ್ತು. ಪರಿಸ್ಥಿತಿ ಕೈ ಮೀರತಾಯಿದೆ. ಮೈಯಲಿ ಶಕುತಿ ಇಳಿಮುಖವಾಗುತ್ತಿದೆ.... ನನ್ನ ಬಳಗವೆಲ್ಲಾ ಕೇಕೆ ಹಾಕುತ್ತಾ ಹುರಿದುಂಬಿಸುತ್ತಿದ್ದಾರೆ.... ಹಾಗೆ ಶರಣ್ಯಳನು ನೋಡಿದೆ. ಜೋರಾಗಿ ಕೈ ಬೀಸುತ್ತಾ ಎದ್ದೇಳು ಎನ್ನುವಂತೆ ಸಂಜ್ಞೆ ಮಾಡುತ್ತಿದ್ದಾಳೆ. ನನ್ನ ಬಲವೆಲ್ಲ ಒಗ್ಗೂಡಿಸಿ ಏಳಲು ಪ್ರಯತ್ನಿಸಲು ಶ್ರಮ ಪಡುತ್ತಿದ್ದೆನೆ ಸಾಧ್ಯವಾಗುತ್ತಿಲ್ಲ... ನಾನು ಅವಳನ್ನೆ ನೋಡ ತೊಡಗಿದೆ. ಇದ್ದಕ್ಕಿದ್ದಂತೆ ಶರಣ್ಯ ಎರಡು ಕೈ ಬೆರಳನ್ನು ಸೇರಿಸಿ ಲವ್ ಚಿನ್ನೆ ತೋರಿಸುತ್ತ ಚಿನ್ನೆಯೊಳಗಿಂದ ಚುಂಬಿಸುತ್ತಾ.. ಆ ಚುಂಬನವನ್ನಾ ಗಾಳಿಯಲ್ಲಿ ನನ್ನತ್ತಾ ರವಾನಿಸಿದಳು. ಈ ಆಕಸ್ಮಿಕ ಚರ್ಯೆಗೆ ಕ್ಷಣಗಳಲೆ ಹುಮ್ಮಸಿನ ಸಾಗರದಲೆಗಳು ಮುಗಿಲೆತ್ತರಕ್ಕೆ ಎದ್ದು ಶಿವ ತಾಂಡವ ಮಾಡತೊಡಗಿತು. ಆ ಕ್ಷಣಕೆ ಮದವೇರಿದ ಹತ್ತಾನೆಗಳ ಬಲ ಒಮ್ಮೊಲೆ ಒಗ್ಗೂಡಿ ನರ ನರನಾಡಿ ಗಳಲ್ಲಿ ನುಗ್ಗಿ ಮುನ್ನುಗ್ಗಿ ಅಪ್ರತ್ರಿಮ ಶಕ್ತಿ ಬಂತು.

ನನ್ನ ಎರಡು ಕೈ ಆಖಾಡಕೆ ಊರಿ ಗುಣಾನ ಹಾಗೆ ಬಲಗಡೆ ತಳ್ಳುತ್ತಾ..ಅವನೆದೆಗೆ ನನ್ನ ಬೆನ್ನಿನ ' ಮಹಾ ಭಾರ ' ಹಾಕಿ ಕಾಲು ಕೈ ಗಳಿಂದ ಲಾಕ್ ಮಾಡಿ ಗುಣಾ ಉಸಿರಾಡಲು ಕಷ್ಟವಾಗುವಂತೆ ತನ್ನೆಲ್ಲಾ ಬಲವನ್ನೆಲ್ಲಾ ಒಗ್ಗೊಡಿಸಿ ' ಜೈ ಭಜರಂಗಿ ' ಎನ್ನುತ್ತಾ ಗುಣಾನನ್ನ ಅಖಾಡದಲ್ಲಿ ಆದುಮ ತೊಡಗಿದೆ. ಅವನು ಕೆಲವು ಕ್ಷಣಗಳ ಮೇಲೆಳಲು ಪ್ರಯತ್ನಿಸಿ ಉಸಿರಾಡಲು ಕಷ್ಟವಾಗಿ ಸಂಪೂರ್ಣವಾಗಿ ತನ್ನ ದೇಹವನ್ನಾ ಆಖಾಡಕ್ಕೆ ಚೆಲ್ಲಿ ಸೋಲು ಒಪ್ಪಿಕೊಂಡಂತೆ ಮಲಗಿಬಿಟ್ಟ. ಅವನ ದೈತ್ಯ ದೇಹ ಸುಸ್ತಾಗಿ ಮೇಲೆಳಾಗದೆ ನಿಸ್ಸಹಾಯಕನಾಗಿ ಆಕಾಶ ಕಡೆ ನೋಡ ತೊಡಗಿತು.

ಇದು ನನ್ನ ಜೀವನದ ಮೊದಲ ಗೆಲವು. ಇಲ್ಲಿಂದ ಕುಸ್ತಿಯಲ್ಲಿ ಹಿಂತಿರುಗಿ ನೋಡಲೇ ಇಲ್ಲ. ಕಾಲೇಜ್ ನಲ್ಲಿ ಅಂತರ್ ರಾಜ್ಯ ಮಟ್ಟದಲ್ಲಿ ಸತತ ಗೆದ್ದದ್ದು ಐದುವರ್ಷ.. ಊರ ಪಂದ್ಯಗಳಲ್ಲಿ ಗೆದ್ದದ್ದು ಇತಿಹಾಸವಾಯಿತು. ನಂತರ... ಶರಣ್ಯಳನು ಲಗ್ನವಾಗಿ, ಮಕ್ಕಳಾಗಿ...

ಅಪ್ಪನ ಮಾಡಿದ್ದ ವ್ಯಾಪಾರ ವ್ಯವಹಾರದ ಸಾಲ ತೀರಿಸಿ...ಆ ವ್ಯಾಪಾರ ಒಂದು ಹಂತಕ್ಕೆ ತಂದು...ಒಂದು ಹಂತಕ್ಕೆ ಬಂದು ಮಕ್ಕಳನ್ನಾ ಓದಿಸಿ ಅವರು ಕೆಲಸಕ್ಕೆ ಸೇರಿಕೊಂಡ ಮೇಲೆ..ವ್ಯವಹಾರ,ಸಂಭಂಧಿಕರ... ಕಷ್ಟದ ಸುತ್ತಿಗೆ ಪೆಟ್ಟುಗಳು ಮನಸಿಗೆ ದೇಹಕೆ ಬಿದ್ದು ಬಿದ್ದು.... ಇಷ್ಟೇ ಜೀವನ.. ಇದರಲ್ಲಿ ಇನ್ನೇನು ಹೊಸದಾಗಿ ಕಾಣ್ತಾಯಿಲ್ಲ.. ಅನಿಸಿತು. 

ಆದ್ಯಾಕೋ ಸಾಕಪ್ಪ ಇಹ ಲೋಕದ ಈ ಜೀವನ ಮತ್ತೆ ಮತ್ತೆ ಅನ್ನಿಸಿತು... ಅನಿಸಿದ್ದೆ ತಡ ಎಲ್ಲಾವನ್ನು ಒಂದು ಹಂತಕ್ಕೆ ತಂದು ಜವಾಬ್ದಾರಿ ಪೊರೈಸಿ.... ನಾನು ಶರಣ್ಯ ಮಂತ್ರಾಲಯದ ಗುರು ರಾಯರ ಸನ್ನಿಧಿಯಲ್ಲಿ ನೆಲಸಿ ಅವರ ಸೇವೆ ಮಾಡುತ್ತಾ.. ಸರಳವಾಗಿ ಬದುಕುತ್ತಾ ನೆಮ್ಮದಿಯಾಗಿ ರಾಯರ ನೆರಳಿನಲ್ಲಿಇದ್ದೇವೆ.

ಇದ್ದಕ್ಕಿದ್ದಂತೆ ಸಿಡಿಲು ಹೊಡೆದಂತೆ ಎಚ್ಚರವಾಯಿತು. ಹಾಸಿಗೆ ಮೇಲಿಂದ ಎದ್ದು ಕುಳಿತೆ. ಇದೇನಿದು ಹಳೇ ನೆನಪುಗಳು ನಲವತ್ತು ವರ್ಷಗಳ ನಂತರ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿದೆ. ಯಾವುದು ಬೇಡವೆಂದು ಮಂತ್ರಾಲಯಕ್ಕೆ ಬಂದೆ ಇಪ್ಪತ್ತು ವರ್ಷಗಳು ಆಯಿತು.

ಗರಡಿ ಮನೆಗೆ ಏನಾದರೂ ತೊಂದರೆ ಆಯಿತೆ..??

ಆದರೂ ನಾನು ಮಾಡುವುದೇನಿದೆ ಈ ಇಳಿ ವಯಸ್ಸಿನಲ್ಲಿ. ಒಮ್ಮೆ ಹೋಗಿ ಬರುವುದೆ ಗೌರೂರಿಗೆ...

ಕಣ್ಣು ಮುಚ್ಚಿ ನಾನು ಯವ್ವೌನದಲ್ಲಿ ಕುಸ್ತಿಯಲ್ಲಿ ಮೆರೆದಿದ್ದು... ಈಗ ಕನಸಲಿ ಏಕೆ ಬಂತೆಂದು .... ಹೇಗಾದರು ಆಗಲಿ ಒಮ್ಮೆ ಊರಿಗೆ ಹೋಗಿ, ನನ್ನ ಕೈಲಾದ ಸಹಾಯ  ನೋಡೋಣವೆಂದು ನಿರ್ಧಾರಕ್ಕೆ ಬಂದೆ.

Category:Stories



ProfileImg

Written by RAGHAVENDRA RAO DA Raj

0 Followers

0 Following