ಜೀವಜಗತ್ತಿನ ವಿಶ್ವದಾಖಲೆಗಳು

ಜೀವಜಗತ್ತಿನ ದಾಖಲೆವೀರರು

ProfileImg
02 Apr '24
10 min read


image

ಕ್ರೀಡೆಯಲ್ಲಿ ಒಂದು ಮಾತಿದೆ. ದಾಖಲೆಗಳಿರುವುದೇ ಮುರಿಯುವುದಕ್ಕಾಗಿ ಎಂದು. ಈ ಮಾತು ಎಲ್ಲಾ ಕ್ರೀಡೆಗಳಿಗೂ ಅನ್ವಯಿಸುತ್ತದೆ. ಏಕೆಂದರೆ ಜಗತ್ತಿನಲ್ಲಿ ಎಲ್ಲ ಕ್ರೀಡೆಗಳಲ್ಲೂ ದಿನದಿಂದ ದಿನಕ್ಕೆ ಹೊಸ ತಾರೆಯರು ಬರುತ್ತಿದ್ದಾರೆ ಹಾಗೂ ಹಳೇ ದಾಖಲೆಗಳನ್ನು ಮುರಿಯುತ್ತಿದ್ದಾರೆ. ಆದರೆ ದಾಖಲೆಗಳೆನ್ನುವುದು ಕೇವಲ ಕ್ರೀಡೆಗೆ ಮಾತ್ರ ಸಂಬಂಧಿಸಿದ್ದಲ್ಲ. ಜೀವ ಜಗತ್ತಿನಲ್ಲಿ ಸಹ ದಾಖಲೆಗಳು ಹೇರಳವಾಗಿವೆ. ಅತಿದೊಡ್ಡ ಪ್ರಾಣಿ, ಅತಿದೊಡ್ಡ ಕೀಟ, ಅತಿ ವೇಗದ ಹಾರಾಟ, ಅತಿ ವೇಗದ ಓಟ ಹೀಗೆ ಹೇರಳ ದಾಖಲೆಗಳನ್ನು ಕಾಣಬಹುದು. ಆದರೆ ಈ ದಾಖಲೆಗಳು ಅಷ್ಟು ಸುಲಭಕ್ಕೆ ಮುರಿಯಬಹುದಾದಂಥ ದಾಖಲೆಗಳಲ್ಲ ಮತ್ತು ಪ್ರಕೃತಿಯಲ್ಲಿ ಮುಂದೊಂದು ದಿನ ಈ ದಾಖಲೆಗಳೆಲ್ಲ ಮುರಿಯಲ್ಪಟ್ಟರೂ ಅದನ್ನು ನೋಡಲು ನಾವೆಲ್ಲ ಜೀವಂತವಾಗಿರುತ್ತೇವೆಂಬ ಯಾವ ಖಾತರಿಯೂ ಇಲ್ಲ. ಏಕೆಂದರೆ ಪ್ರಕೃತಿಯಲ್ಲಿ ಆಗುವ ಪ್ರಯೋಗಗಳೆಲ್ಲ ಲಕ್ಷಾಂತರ ಮತ್ತು ಕೋಟ್ಯಾಂತರ ವರ್ಷಗಳ ಅವಧಿಯಲ್ಲಿ ಆಗುವಂಥವು. ಹಾಗಾಗಿ ಅವುಗಳನ್ನೆಲ್ಲ ನೋಡಲು ಮನುಷ್ಯ ಕುಲವೇ ಇರುತ್ತದೆಂದು ಹೇಳಲೂ ಸಾಧ್ಯವಿಲ್ಲ. ಆದರೆ ನಮಗೆ ಇಂದು ತಿಳಿದಮಟ್ಟಿಗೆ ಅಜೇಯ ದಾಖಲೆ ನಿರ್ಮಿಸಿರುವ ಕೆಲವು ಜೀವಿಗಳಿವೆ. ಅವುಗಳ ಬಗೆಗೆ ತಿಳಿಯೋಣ.

ಜೀವ ಜಗತ್ತಿನಲ್ಲಿ ಗಾತ್ರದ ದಾಖಲೆ ಬಂದಾಗಲೆಲ್ಲ ಎಲ್ಲರ ನೆನಪಿಗೆ ಬರುವುದು ತಿಮಿಂಗಿಲಗಳು. ನೀರಿನಲ್ಲಿ ವಾಸಿಸುವುದರಿಂದ ನೀರಿನ ತೇಲುವಿಕೆಯ (ಬಾಯನ್ಸಿ) ಪ್ರಯೋಜನದಿಂದಾಗಿ ತಮ್ಮ ತೂಕಕ್ಕೆ ತಾವೇ ಕುಸಿಯುವಂಥ ಅಪಾಯ ತಿಮಿಂಗಿಲಗಳಿಗಿಲ್ಲ. ಆದರೆ ಭೂವಾಸಿ ಪ್ರಾಣಿಗಳಿಗೆ ಅಂಥದ್ದೊಂದು ಮಿತಿಯಿದೆ. ಆದ್ದರಿಂದ ನೆಲವಾಸಿ ಪ್ರಾಣಿಗಳು ಒಂದು ಗಾತ್ರದ ನಂತರ ಬೆಳೆಯಲಾರವು. ಆ ಇತಿಮಿತಿಗಳನ್ನು ಮೀರಿರುವ ತಿಮಿಂಗಿಲಗಳು ಅಸಾಧಾರಣ ಗಾತ್ರಕ್ಕೆ ಬೆಳೆಯಬಲ್ಲವು. ತಿಮಿಂಗಿಲಗಳ ಒಂದು ಉಪವರ್ಗವಾದ ಬಲೀನ್ ತಿಮಿಂಗಿಲಗಳ ಉಪವರ್ಗಕ್ಕೆ ಸೇರಿದ ನೀಲಿ ತಿಮಿಂಗಿಲ ಭೂಮಿಯ ಮೇಲೆ ಇವತ್ತಷ್ಟೇ ಅಲ್ಲ, ನಮಗೆ ತಿಳಿದಂತೆ ಭೂಮಿಯ ಮೇಲೆ ಯಾವುದೇ ಕಾಲಘಟ್ಟದಲ್ಲಿ ಬದುಕಿದ್ದ ಅತಿದೊಡ್ಡ ಪ್ರಾಣಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಪೂರ್ಣ ಬೆಳೆದ ನೀಲಿ ತಿಮಿಂಗಿಲಗಳು ನೂರು ಅಡಿ ಉದ್ದವಿದ್ದು, 180 ಟನ್ ವರೆಗೆ ತೂಗಬಲ್ಲವು. ಗಿನ್ನೆಸ್ ದಾಖಲೆ ಪುಸ್ತಕದ ಪ್ರಕಾರ ಇದುವರೆಗೆ ನಮಗೆ ದೊರೆತ ಅತಿದೊಡ್ಡ ನೀಲಿ ತಿಮಿಂಗಿಲ 113 ಅಡಿ ಉದ್ದವಿದ್ದು, 209 ಟನ್ ತೂಗುತ್ತಿತ್ತು! ಅಂದರೆ ಸುಮಾರು 30-35 ಪ್ರೌಢ ಆಫ್ರಿಕನ್ ಆನೆಗಳ ತೂಕಕ್ಕೆ ಸಮ! ನೀಲಿ ತಿಮಿಂಗಿಲವೊಂದರ ನಾಲಿಗೆಯೇ ಆನೆಯಷ್ಟು ತೂಗುತ್ತದೆ. ಅದರ ಹೃದಯವು ಸುಮಾರು ಒಂದು ಕಾರಿನಷ್ಟು ದೊಡ್ಡದಾಗಿರುತ್ತದೆ. ಅದರ ಕೆಲವೊಂದು ಮುಖ್ಯ ರಕ್ತನಾಳಗಳಲ್ಲಿ ಪ್ರೌಢ ಮನುಷ್ಯನೊಬ್ಬ ಆರಾಮವಾಗಿ ಈಜಬಹುದು!

ಅತಿವೇಗದ ಓಟಕ್ಕೆ ಉಪಮೆಯಾಗಿ ಬೇರೆಬೇರೆ ಪ್ರಾಣಿಗಳನ್ನು ಬಳಸುತ್ತಾರೆ. ಜಿಂಕೆ, ಮೊಲ, ಚಿರತೆ ಇತ್ಯಾದಿ ಪ್ರಾಣಿಗಳ ವೇಗವನ್ನು ಮಿಂಚಿನ ವೇಗಕ್ಕೆ ಹೋಲಿಸುತ್ತಾರೆ. ಜೊತೆಗೆ ಕುದುರೆ ಸಹ ಮನುಷ್ಯನಿಗೆ ತಿಳಿದಿರುವ ವೇಗವಾಗಿ ಓಡುವ ಪ್ರಾಣಿಗಳಲ್ಲೊಂದು. ಆದ್ದರಿಂದಲೇ ಕುದುರೆಗಳ ರೇಸ್ ಎಲ್ಲೆಡೆ ಜನಪ್ರಿಯವಾದ ಸ್ಪರ್ಧೆಯೂ ಆಗಿದೆ. ಆದರೆ ನಿಮಗೆ ಗೊತ್ತೆ? ಭೂಮಿಯ ಮೇಲಿನ ಅತಿವೇಗದ ಪ್ರಾಣಿ ಇವು ಯಾವುವೂ ಅಲ್ಲ. ಹೆಚ್ಚಿನ ಜನ ಚಿರತೆಯೆಂದೇ ಭಾವಿಸಿರುವ, ಆದರೆ ಚಿರತೆಗಿಂತ ವಿಭಿನ್ನವಾಗಿರುವ ಇನ್ನೊಂದು ದೊಡ್ಡ ಬೆಕ್ಕು “ಚೀತಾ” ವೇಗದ ಓಟದ ದಾಖಲೆವೀರ ಪ್ರಾಣಿ. ಇದರ ಗರಿಷ್ಠ ವೇಗ ಗಂಟೆಗೆ ನೂರಾಹತ್ತು ಕಿಲೋಮೀಟರ್ ತಲುಪುತ್ತದೆ! ಆದರೆ ಚೀತಾ ತನ್ನ ಈ ವೇಗವನ್ನು ಕೆಲವು ನೂರು ಮೀಟರ್ ಗಳ ನಂತರ ಕಾಯ್ದುಕೊಳ್ಳಲಾರದು. ಆದ್ದರಿಂದ ಅದು ಬೇಟೆಯನ್ನು ತೀರಾ ಹತ್ತಿರದಿಂದ ಬೆನ್ನಟ್ಟತೊಡಗಿದರೆ ಮಾತ್ರ ಹಿಡಿಯಬಲ್ಲದು. ಇಲ್ಲವಾದರೆ ಸುಸ್ತಾಗಿ ನಿಂತುಬಿಡುತ್ತದೆ. ಆದರೆ ವೇಗದ ಓಟದಲ್ಲಿ ಬೇರೆಲ್ಲ ಪ್ರಾಣಿಗಳೂ ಇದಕ್ಕಿಂತ ಸುಮಾರು ನಲವತ್ತು-ಐವತ್ತು ಕಿಲೋಮೀಟರ್ ಹಿಂದೆಯೇ ಉಳಿಯುತ್ತವೆ ಎಂದರೆ ಇದರ ದಾಖಲೆ ಎಂಥದ್ದೆಂದು ಸ್ಪಷ್ಟವಾಗುತ್ತದೆ.

ಇದು ನೆಲವಾಸಿ ಪ್ರಾಣಿಗಳ ದಾಖಲೆಯಾಯಿತು. ಇನ್ನು ಹಾರುವ ಜೀವಿಗಳು ಸಹಜವಾಗಿಯೇ ನೆಲವಾಸಿಗಳ ಓಟಕ್ಕಿಂತ ಹೆಚ್ಚಿನ ವೇಗದಲ್ಲಿ ಹಾರಬಲ್ಲವು. ಆದ್ದರಿಂದ ಹಕ್ಕಿಗಳು ಭೂಮಿಯ ಮೇಲಿನ ಅತಿವೇಗದ ಜೀವಿಗಳ ಪೈಕಿ ಮೊದಲ ಸ್ಥಾನ ಪಡೆಯುತ್ತವೆ. ಕೀಟಗಳು ಹಕ್ಕಿಗಳಿಗಿಂತ ಮೊದಲು ಹಾರಾಟ ಆರಂಭಿಸಿದ ಪ್ರಾಣಿಗಳಾದರೂ ಬೆನ್ನೆಲುಬಿಲ್ಲದ ಕೀಟಗಳಿಗೆ ತಮ್ಮದೇ ಆದ ಇತಿಮಿತಿಗಳಿವೆ. ಆದರೆ ಕೀಟಗಳಿಗಿಂತ ಗಾತ್ರದಲ್ಲಿ ದೊಡ್ಡವಾದ ಮತ್ತು ಸದೃಢವಾದ, ಆದರೆ ಅಷ್ಟೇ ಹಗುರವಾದ ಅಸ್ಥಿಪಂಜರವನ್ನು ಹೊಂದಿರುವ ಹಕ್ಕಿಗಳು ಸಹಜವಾಗಿಯೇ ಅವುಗಳಿಗಿಂತ ವೇಗವಾಗಿ ಹಾರಬಲ್ಲವು. ಹಕ್ಕಿಗಳ ಪೈಕಿ ಸ್ವಿಫ್ಟ್ ಎಂಬ ಪುಟಾಣಿ ಹಕ್ಕಿಗಳು ಗಂಟೆಗೆ ಇನ್ನೂರು ಕಿಲೋಮೀಟರ್ ವೇಗದಲ್ಲಿ ನಿರಂತರವಾಗಿ ಹಾರಾಡಬಲ್ಲವು. ಆದರೆ ವೇಗದಲ್ಲಿ ದಾಖಲೆ ಮಾಡಿರುವ ಪಕ್ಷಿಯೆಂದರೆ ಪೆರಿಗ್ರೈನ್ ಫಾಲ್ಕನ್ ಎಂಬ ಬೇಟೆಗಾರ ಹಕ್ಕಿ. ಬೇಟೆಯ ಮೇಲೆ ಎರಗುವಾಗ ಈ ಹಕ್ಕಿಯ ವೇಗ ಗಂಟೆಗೆ ಮುನ್ನೂರಿಪ್ಪತ್ತು ಕಿಲೋಮೀಟರ್ ತಲುಪುತ್ತದೆ! ಗಿನ್ನೆಸ್ ದಾಖಲೆ ಪುಸ್ತಕದಲ್ಲಿ ಒಂದು ಪೆರಿಗ್ರೈನ್ ಬೇಟೆಯ ಮೇಲೆರಗುವಾಗ ಗಂಟೆಗೆ ಮುನ್ನೂರ ಎಂಬತ್ತೊಂಬತ್ತು ಕಿಲೋಮೀಟರ್ ವೇಗ ತಲುಪಿದ್ದು ದಾಖಲಾಗಿದೆ! ಬಹುಶಃ ಇದು ಭೂಮಿಯ ಮೇಲೆ ಯಾವುದೇ ಜೀವಿ ಸಾಧಿಸಿದ ಗರಿಷ್ಠ ವೇಗದ ಹಾರಾಟದ ದಾಖಲೆಯೇ ಸರಿ.

ಪಕ್ಷಿಪ್ರೇಮಿಗಳೆಲ್ಲ ಸಾಮಾನ್ಯವಾಗಿ ಆರ್ಕ್ಟಿಕ್ ಟರ್ನ್ ಹಕ್ಕಿಯ ಹೆಸರನ್ನು ಕೇಳಿರುತ್ತಾರೆ. ನಮ್ಮ ರಿವರ್ ಟರ್ನ್ ಸೇರಿದಂತೆ ಅನೇಕ ಪ್ರಭೇದಗಳಿರುವ ಈ ಕುಟುಂಬದಲ್ಲಿ ಆರ್ಕ್ಟಿಕ್ ಟರ್ನ್ ಅತ್ಯಂತ ಸುಪ್ರಸಿದ್ಧವಾದ ಹಕ್ಕಿ. ಇದರ ಖ್ಯಾತಿಗೆ ಕಾರಣ ಪ್ರತಿವರ್ಷ ಉತ್ತರಧೃವದಿಂದ ದಕ್ಷಿಣಧೃವಕ್ಕೆ ಮತ್ತು ದಕ್ಷಿಣ ಧೃವದಿಂದ ಉತ್ತರಧೃವಕ್ಕೆ ಇವು ಕೈಗೊಳ್ಳುವ ಮಹಾನ್ ಸಾಹಸಯಾನ. ಪ್ರತಿವರ್ಷ ಹತ್ತಿರಹತ್ತಿರ ನಲವತ್ತುಸಾವಿರ ಕಿಲೋಮೀಟರ್ ವಲಸೆ ಹೋಗುವ ಈ ಹಕ್ಕಿಗಳು ಭೂಮಿಯ ಮೇಲಿನ ಅತಿದೂರದ ವಲಸೆ ಹಕ್ಕಿಗಳೆಂದು ಹೆಸರಾಗಿವೆ. ಪ್ರತಿವರ್ಷ ಇವು ಕೈಗೊಳ್ಳುವ ಯಾತ್ರೆಯ ದೂರ ಇಡೀ ಭೂಮಿಗೆ ಒಂದು ಸುತ್ತು ಹಾಕುವುದಕ್ಕೆ ಸಮ! ತಮ್ಮ ಇಡೀ ಆಯುಷ್ಯದಲ್ಲಿ ಇವು ಹಾರುವ ಒಟ್ಟು ದೂರವನ್ನು ಪರಿಗಣಿಸಿದರೆ ಅದು ಭೂಮಿ ಮತ್ತು ಚಂದ್ರರ ನಡುವಿನ ದೂರದ ನಾಲ್ಕೈದು ಪಟ್ಟು ಆಗುತ್ತದೆ!

ಪಕ್ಷಿಗಳ ದೇಹದ ಅತಿಮುಖ್ಯವಾದ ಅಂಗಗಳೆಂದರೆ ರೆಕ್ಕೆಗಳು. ಭೂಮಿಯ ಮೇಲೆ ಎಂದೂ ನೆಲಬಿಟ್ಟು ಮೇಲೇರಲಾರದ ಆಸ್ಟ್ರಿಚ್, ಎಮು, ಕ್ಯಾಸೋವರಿಯಂಥ ಹಕ್ಕಿಗಳಿರುವಂತೆ ಎಂದೂ ನೆಲಕ್ಕಿಳಿಯದ ಹಕ್ಕಿಗಳೂ ಇವೆ ಎಂದರೆ ನಂಬುತ್ತೀರಾ? ‘ಎಂದೂ ನೆಲಕ್ಕಿಳಿಯದ’ ಎಂಬ ಪದಪುಂಜ ಸ್ವಲ್ಪ ಅತಿಶಯೋಕ್ತಿಯಾದರೂ ಕೆಲವು ಹಕ್ಕಿಗಳು ಗೂಡುಕಟ್ಟಿ ಮೊಟ್ಟೆಯಿಡುವ ಸಂದರ್ಭವನ್ನು ಹೊರತುಪಡಿಸಿದರೆ ಬೇರೆ ಯಾವ ಸಂದರ್ಭದಲ್ಲೂ ನೆಲಕ್ಕಿಳಿಯುವುದಿಲ್ಲ ಎಂಬುದು ನಿಜ. ಅಪೋಡಿಫಾರಂಸ್ (ಪಾದವಿಲ್ಲದವು) ಎಂಬ ವರ್ಗದಲ್ಲಿ ಬರುವ ಈ ಹಕ್ಕಿಗಳು ಊಟ ಮಾಡುವುದೂ ಹಾರುತ್ತಿರುವಾಗಲೇ. ಇವುಗಳಿಗೆ ಪಾದಗಳಿದ್ದರೂ ಅವು ತುಂಬ ದುರ್ಬಲವಾಗಿದ್ದು ಹೆಚ್ಚುಕಾಲ ಕೂತಲ್ಲೇ ಕೂತಿರಲಾರವು. ಸ್ವಿಫ್ಟ್ ಎಂಬ ಹಕ್ಕಿಗಳು ಈ ಗುಂಪಿಗೆ ಸೇರುತ್ತವೆ. ಇವುಗಳನ್ನು ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಪುಸ್ತಕದಲ್ಲಿ ಅಂಬರದ ಹಕ್ಕಿಗಳು ಎಂದು ಕರೆದಿದ್ದಾರೆ. ಇವುಗಳ ಜೀವನಶೈಲಿಗೆ ಈ ಬಿರುದು ಸರಿಯಾಗಿ ಒಪ್ಪುತ್ತದೆ.

ಹಾರುವ ಹಕ್ಕಿಗಳ ರೆಕ್ಕೆಗಳು ಅವು ವಾಸಿಸುವ ಪರಿಸರ, ಆ ಹಕ್ಕಿಯ ದೇಹಗಾತ್ರ ಇತ್ಯಾದಿಗಳ ಪ್ರಕಾರ ಬೇರೆಬೇರೆಯಾಗಿರುತ್ತದೆ. ಎಲ್ಲ ಹಕ್ಕಿಗಳೂ ಒಂದೇ ರೀತಿಯ ರೆಕ್ಕೆಗಳನ್ನು ಹೊಂದಿ ಬದುಕಲಾರವು. ಕೆಲವು ಹಕ್ಕಿಗಳ ರೆಕ್ಕೆಗಳು ವೇಗವಾಗಿ ಹಾರಲು ಅನುಕೂಲಕರವಾಗಿದ್ದರೆ ಇನ್ನು ಕೆಲವು ಹಕ್ಕಿಗಳು ವಿಶಾಲವಾದ ರೆಕ್ಕೆಗಳನ್ನು ಹೊಂದಿದ್ದು, ಆಗಸದ ಎತ್ತರದಲ್ಲಿ ರೆಕ್ಕೆಗಳನ್ನು ಛತ್ರಿಯಂತೆ ಅಗಲಿಸಿ ಹಿಡಿದು ಸುಮ್ಮನೆ ತೇಲುತ್ತ ಕಾಲಕಳೆಯಲು ಅನುಕೂಲಕರವಾಗಿವೆ. ಇದರಿಂದ ಹಕ್ಕಿಗೆ ಅನೇಕ ಉಪಯೋಗಗಳಿವೆ. ರೆಕ್ಕೆಬಡಿಯುವುದನ್ನು ಕಡಿಮೆ ಮಾಡಿದಷ್ಟೂ ಶ್ರಮ ಕಡಿಮೆ. ಆದ್ದರಿಂದಲೇ ಹದ್ದು, ಗಿಡುಗ ಮತ್ತು ಕೆಲವು ಸಮುದ್ರಪಕ್ಷಿಗಳು ತಮ್ಮ ವಿಶಾಲವಾದ ರೆಕ್ಕೆಗಳನ್ನು ವಿಮಾನಗಳ ರೆಕ್ಕೆಗಳಂತೆ ಅಗಲಿಸಿ ಹಿಡಿದು ಗಂಟೆಗಟ್ಟಲೆ ತೇಲುತ್ತಿರಬಲ್ಲವು. ಈ ಹಕ್ಕಿಗಳಲ್ಲೆಲ್ಲ ಆಲ್ಬಟ್ರಾಸ್ ಹಕ್ಕಿ ತನ್ನ ರೆಕ್ಕೆ ವಿಸ್ತಾರಕ್ಕೇ ಪ್ರಸಿದ್ಧವಾಗಿದೆ. ಇದರ ಎರಡು ರೆಕ್ಕೆಗಳ ಹರವು ಹನ್ನೆರಡು ಅಡಿ ತಲುಪುತ್ತದೆ! ಇಷ್ಟೊಂದು ವಿಶಾಲವಾದ ರೆಕ್ಕೆ ಹೊಂದಿದ ಬೇರೆ ಹಕ್ಕಿ ನಮ್ಮ ಭೂಮಿಯ ಮೇಲೆ ಇಂದು ಯಾವುದೂ ಇಲ್ಲ. ಆ್ಯಂಡಿಯನ್ ಕಾಂಡರ್, ಡಾಲ್ಮಟಿಯನ್ ಪೆಲಿಕನ್ ಇತ್ಯಾದಿಗಳು ಆಲ್ಬಟ್ರಾಸ್ ನ ಸಮೀಪಕ್ಕೆ ಬಂದರೂ ಅದನ್ನು ಸರಿಗಟ್ಟಲಾರವು. ಆಲ್ಬಟ್ರಾಸ್ ನ ಬೇರೆಬೇರೆ ಪ್ರಭೇದಗಳ ಪೈಕಿ ದಿ ರಾಯಲ್ ಆಲ್ಬಟ್ರಾಸ್ ಮತ್ತು ದಿ ವಾಂಡರಿಂಗ್ ಆಲ್ಬಟ್ರಾಸ್ ಇವೇ ಎರಡು ಪ್ರಭೇದಗಳದ್ದು ರೆಕ್ಕೆ ವಿಸ್ತಾರದಲ್ಲಿ ವಿಶ್ವದಾಖಲೆ. ಈ ಭಾರೀ ರೆಕ್ಕೆಗಳ ನೆರವಿನಿಂದ ಈ ಹಕ್ಕಿಗಳು ಮೊಟ್ಟೆಯಿಟ್ಟು ಮರಿಮಾಡುವ ಸಂದರ್ಭವನ್ನು ಬಿಟ್ಟು ಬೇರಾವ ಸಂದರ್ಭದಲ್ಲೂ ನೆಲಕ್ಕಿಳಿಯುವುದೇ ಇಲ್ಲ. ಮಿನಿ ಯುದ್ಧವಿಮಾನಗಳಂತೆ ಕಾಣುವ ಈ ಹಕ್ಕಿಗಳಿಗೆ ಭಾರೀ ರೆಕ್ಕೆಯಿಂದ ಹಾರಾಟ ಎಷ್ಟು ಸುಲಭವೋ ನೆಲದ ಮೇಲಿನ ಓಡಾಟ ಅಷ್ಟೇ ಕಷ್ಟ. ಜೊತೆಗೆ ಮೇಲಕ್ಕೇರಲು ಸಹ ಇವಕ್ಕೆ ವಿಮಾನಗಳಂತೆ ರನ್ ವೇ ಬೇಕು. ಬೇರೆ ಹಕ್ಕಿಗಳಂತೆ ನಿಂತಲ್ಲಿಂದಲೇ ಮೇಲೆ ಏರಲು ಇವಕ್ಕೆ ಸಾಧ್ಯವಿಲ್ಲ. ಮೊದಲಬಾರಿಗೆ ಗಾಳಿಗೇರಿದ ಎಲ್ಲ ಮರಿಗಳೂ ಅದೃಷ್ಟಶಾಲಿಗಳಾಗಿರುವುದಿಲ್ಲ. ಕೆಲವು ಮರಿಗಳು ಸ್ವಲ್ಪ ದೂರ ಹಾರಿ ಕಡಲಿಗೆ ಬೀಳುತ್ತವೆ. ಹಾಗೆ ಬಿದ್ದ ಮರಿಗಳು ಸೀಲ್, ಸಮುದ್ರಸಿಂಹ ಮತ್ತು ವಿವಿಧ ಮೀನುಗಳಿಗೆ ಆಹಾರವಾಗುತ್ತವೆ. ಆದರೆ ಒಮ್ಮೆ ಸುಲಲಿತವಾಗಿ ಹಾರಾಡಲು ಕಲಿತರೆ ಮತ್ತೆ ಆಲ್ಬಟ್ರಾಸ್ ಗೆ ಶತ್ರುಗಳಿಲ್ಲ.

ನೆಲದ ಮೇಲೆ ಓಡುವುದಕ್ಕಿಂತ ನೀರಿನಲ್ಲಿ ಈಜುವುದು ಕಷ್ಟ. ಏಕೆಂದರೆ ನೆಲದ ಮೇಲೆ ಓಡುವಾಗ ನಾವು ಗಾಳಿಯ ವಿರುದ್ಧ ಕೆಲಸ ಮಾಡುತ್ತಿರುತ್ತೇವೆ. ಆದರೆ ನೀರಿನಲ್ಲಿ ಈಜುವಾಗ ನೀರಿನ ಘರ್ಷಣೆಯ ವಿರುದ್ಧ ಕೆಲಸ ಮಾಡುತ್ತಿರುತ್ತೇವೆ. ಆದ್ದರಿಂದ ಅದು ಕಷ್ಟದ ಕೆಲಸ. ಆದರೆ ಈಜಿನಲ್ಲಿ ಪ್ರವೀಣರಾದ ಕೆಲವು ಜೀವಿಗಳು ನಮಗೆ ಅಚ್ಚರಿಯಾಗುವಂತೆ ನೆಲದ ಮೇಲೆ ಓಡಾಡುವ ಕೆಲವು ಜೀವಿಗಳಷ್ಟೇ ವೇಗವಾಗಿ ಈಜಬಲ್ಲವು. ಅದರಲ್ಲಿ ಪ್ರಸಿದ್ಧವಾದ ಮೀನೆಂದರೆ ಸೇಲ್ ಫಿಶ್. ಈ ಮೀನು ನೆಲದ ಮೇಲಿನ ಅತಿವೇಗದ ಪ್ರಾಣಿಯಾದ ಚೀತಾವನ್ನು ಸರಿಗಟ್ಟಬಲ್ಲದು. ಅಂದರೆ ಗಂಟೆಗೆ ನೂರಾಹತ್ತು ಕಿಲೋಮೀಟರ್! ಅತಿವೇಗದ ಈಜಿಗೆ ನೆರವಾಗುವಂತೆ ಸೇಲ್ ಫಿಶ್ ಗೆ ಚೂಪಾದ ಮೂತಿ ಇದೆ. ಅದರಿಂದಾಗಿ ಗಾಳಿಯನ್ನು ಸೀಳಿಕೊಂಡು ಮುನ್ನುಗ್ಗಲು ಅದಕ್ಕೆ ಸುಲಭವಾಗುತ್ತದೆ. ಹಾಗೆಂದು ಅದು ತುಂಬ ಚಿಕ್ಕ ಮೀನೇನೂ ಅಲ್ಲ. ಹತ್ತು ಅಡಿ ಉದ್ದಕ್ಕೆ ಬೆಳೆಯುವ ತೊಂಬತ್ತು ಕಿಲೋಗ್ರಾಂ ತೂಗುವ ದೈತ್ಯದೇಹಿ ಮೀನು ಇದು.

ಧ್ವನಿಯೆಂಬುದು ಎಲ್ಲ ಪ್ರಾಣಿಗಳ ಸಂವಹನ ಮಾಧ್ಯಮ. ಸಾಮಾನ್ಯವಾಗಿ ಮೇಲ್ವರ್ಗದ ಪ್ರಾಣಿಗಳೆಲ್ಲ ಅತ್ಯುತ್ತಮ ಧ್ವನಿ ಸಂವಹನವನ್ನು ಹೊಂದಿವೆ. ಮಾತನಾಡುವ ಸಾಮರ್ಥ್ಯ ಇರುವುದು ಮನುಷ್ಯರಿಗೆ ಮಾತ್ರವಾದರೂ ಮನುಷ್ಯರ ಧ್ವನಿಗಳನ್ನು ಅನುಕರಿಸುವ ಸಾಮರ್ಥ್ಯ ಅನೇಕ ಗಿಳಿ ಮತ್ತು ಮೈನಾದಂಥ ಪಕ್ಷಿಗಳಿಗೆ ಇರುವುದು ಎಲ್ಲರಿಗೂ ತಿಳಿದ ಸಂಗತಿ. ಇದರ ಹೊರತಾಗಿಯೂ ಹಕ್ಕಿಗಳು ಸುಶ್ರಾವ್ಯವಾದ ಹಾಡುಗಾರಿಕೆಗೆ ಪ್ರಸಿದ್ಧವಾಗಿವೆ. ಬಹುಶಃ ಕೋಗಿಲೆಯ ಹೆಸರನ್ನು ಕೇಳದ ಭಾರತೀಯ ಇರಲಿಕ್ಕಿಲ್ಲವೆಂದರೆ ತಪ್ಪಾಗಲಾರದು. ವಸಂತಮಾಸ ಬಂದಾಗ ಕೋಗಿಲೆಗಳ ಕುಹೂ ಕುಹೂ ಗಾಯನವನ್ನು ಕೇಳದವನು ದುರದೃಷ್ಟವಂತನೇ ಸರಿ. ಹಾಗೆಯೇ ಗಾನದಲ್ಲಿ ಕೋಗಿಲೆಗಳನ್ನೂ ಮೀರಿಸುವಂಥ ಇನ್ನೂ ಅನೇಕ ಹಕ್ಕಿಗಳು ಪಕ್ಷಿಜಗತ್ತಿನಲ್ಲಿವೆ. ಗುಬ್ಬಚ್ಚಿ ಗಾತ್ರದ ಯೂರೋಪಿನ ಕ್ಯಾನರಿ ಎಂಬ ಪುಟ್ಟ ಹಕ್ಕಿ ಏಕಕಾಲಕ್ಕೆ ತನ್ನ ಎಡ ಮತ್ತು ಬಲಬದಿಯ ಗಂಟಲಿನಿಂದ ಬೇರೆಬೇರೆ ರೀತಿಯ ಧ್ವನಿಗಳನ್ನು ಹೊರಡಿಸಬಲ್ಲದು. ಇಷ್ಟೊಂದು ಪುಟ್ಟ ಹಕ್ಕಿ ಹೇಗೆ ಅಷ್ಟೊಂದು ವಿಭಿನ್ನ ಧ್ವನಿಗಳನ್ನು ಹೊರಡಿಸಬಲ್ಲದು ಎಂದು ಆಶ್ಚರ್ಯವಾಗುತ್ತದೆ. ನಮ್ಮ ಕಾಜಾಣ ಹಕ್ಕಿಯಂತೂ ಅನುಕರಣೆ ಪ್ರವೀಣ ಎಂದೇ ಹೆಸರಾಗಿದೆ. ಇಪ್ಪತ್ತಕ್ಕೂ ಹೆಚ್ಚು ಬೇರೆಬೇರೆ ಹಕ್ಕಿಗಳ ಧ್ವನಿಯನ್ನು ಅದು ಅನುಕರಿಸಬಲ್ಲದು. ಆದರೆ ಅನುಕರಣೆಯಲ್ಲಿ ಮೊದಲನೆಯ ಸ್ಥಾನಕ್ಕೆ ಚಿನ್ನದ ಪದಕವೇನಾದರೂ ಇದ್ದರೆ ಅದು ನಿಸ್ಸಂದೇಹವಾಗಿ ಆಸ್ಟ್ರೇಲಿಯದ ವೀಣೆಹಕ್ಕಿ (ಲೈರ್ ಬರ್ಡ್) ಗೆ ಸಲ್ಲಬೇಕು. ಆ ಹಕ್ಕಿ ಕೇವಲ ಬೇರೆ ಹಕ್ಕಿಗಳ ಧ್ವನಿಯನ್ನು ಮಾತ್ರವಲ್ಲ, ಪರಿಸರದಲ್ಲಿ ತಾನು ಕೇಳುವ ಬೇರೆ ಧ್ವನಿಗಳನ್ನು ಸಹ ಅನುಕರಿಸಬಲ್ಲದು. “ಲೈಫ್” ಸರಣಿಯಿಂದ ಖ್ಯಾತರಾದ ಸರ್ ಡೇವಿಡ್ ಅಡೆನ್ ಬರೋ ಅವರು ಈ ಹಕ್ಕಿಯು ಕ್ಯಾಮೆರಾ, ಕಾರಿನ ಧ್ವನಿ, ಮರಕಡಿಯುವ ಗರಗಸದ ಧ್ವನಿ ಮತ್ತು ಕೂಕಾಬುರ್ರಾ ಹಕ್ಕಿಯ ನಗುವಿನ ಧ್ವನಿಯನ್ನು ಅನುಕರಿಸುವುದನ್ನು ದಾಖಲಿಸಿದ್ದಾರೆ. 

ಹಾಗಾದರೆ ಧ್ವನಿಯಲ್ಲಿ ವಿಶ್ವದಾಖಲೆ ಮಾಡಿರುವ ಜೀವಿ ಯಾವುದು? ಸಹಜವಾಗಿಯೇ ದೇಹಗಾತ್ರಕ್ಕೆ ತಕ್ಕಂತೆ ದೈತ್ಯದೇಹಿಗಳ ಧ್ವನಿಯೂ ತಾರಕಸ್ವರದಲ್ಲೇ ಇರುತ್ತದೆ. ತಿಮಿಂಗಿಲಗಳು ತಮ್ಮ ಭಾರೀ ಗಾತ್ರಕ್ಕೆ ತಕ್ಕಂತೆ ಭಾರೀ ಧ್ವನಿಯನ್ನೇ ಹೊರಡಿಸುತ್ತವೆ. ನೀಲಿ ತಿಮಿಂಗಿಲವು ತನ್ನ ದೈತ್ಯಗಾತ್ರಕ್ಕೆ ಹೆಸರಾದಂತೆ ಭಾರೀ ಧ್ವನಿಗೂ ಹೆಸರಾಗಿದೆ. ಇದರ ಧ್ವನಿ 188 ಡೆಸಿಬಲ್ಸ್ ಗಳಷ್ಟಿರುತ್ತದೆ. ಸಾಮಾನ್ಯವಾಗಿ 120 ಡೆಸಿಬಲ್ಸ್ ಮೀರಿದರೇ ನಮ್ಮ ಕಿವಿಗೆ ಅದರಿಂದ ತೊಂದರೆಯಾಗುತ್ತದೆ. ಈ ಮಿತಿಯನ್ನು “ಥ್ರೆಶೋಲ್ಡ್ ಆಫ್ ಪೇನ್” (ನೋವಿನ ಮಿತಿ) ಎನ್ನುತ್ತಾರೆ. ಸಾಮಾನ್ಯವಾಗಿ ನಾವು ತುಸು ಹತ್ತಿರದಲ್ಲಿ ಕೇಳುವ ಸಿಡಿಲಿನ ಶಬ್ದ ಇದೇ ಮಟ್ಟದಲ್ಲಿರುತ್ತದೆ. ಹಾಗಾದರೆ ನೀಲಿ ತಿಮಿಂಗಿಲದ ಧ್ವನಿ ಅದೆಷ್ಟು ಜೋರಾಗಿರಬಹುದೆಂದು ಊಹಿಸಿ. ಜೊತೆಗೆ ಶಬ್ದವು ಗಾಳಿಯಲ್ಲಿ ಚಲಿಸುವುದಕ್ಕಿಂತ ಹೆಚ್ಚು ವೇಗವಾಗಿ ಮತ್ತು ದೂರಕ್ಕೆ ನೀರಿನಲ್ಲಿ ಚಲಿಸುತ್ತದೆ. ಆದ್ದರಿಂದ ತಿಮಿಂಗಿಲಗಳ ಧ್ವನಿ ನೂರಾರು ಮೈಲುಗಳಷ್ಟು ದೂರಕ್ಕೆ ಕೇಳಿಸುತ್ತದೆ. 

ನೆಲವಾಸಿ ಪ್ರಾಣಿಗಳ ಪೈಕಿ ಈ ದಾಖಲೆಯನ್ನು ಹೊಂದಿರುವ ಜೀವಿಯೆಂದರೆ ಅಮೆಜಾನ್ ಕಾಡುಗಳ ಹೌಲರ್ ಮಂಗ. ಹೆಸರೇ ಹೇಳುವಂತೆ ಇದು ತನ್ನ ಕರ್ಣಕಠೋರವಾದ ಧ್ವನಿಗೆ ಪ್ರಸಿದ್ಧವಾಗಿದೆ. ಪ್ರತಿದಿನ ಮುಂಜಾನೆ ಎದ್ದಕೂಡಲೇ ಈ ಮಂಗಗಳು ಸಾಮೂಹಿಕವಾಗಿ ಊಳಿಡಲಾರಂಭಿಸುತ್ತವೆ. ತಮ್ಮ ವಸಾಹತನ್ನು ಗುರುತಿಸಲು ಮತ್ತು ದೂರದ ಮಂಗಗಳ ಜೊತೆಗೆ ಸಂಪರ್ಕವಿಟ್ಟುಕೊಳ್ಳಲು ಈ ರೀತಿ ಅವು ಊಳಿಡುತ್ತವೆ. ಅವುಗಳ ಧ್ವನಿ ಸುಮಾರು ಎರಡರಿಂದ ಐದು ಕಿಲೋಮೀಟರ್ ದೂರದವರೆಗೆ ಕೇಳಿಸುತ್ತದೆ. ಅವುಗಳ ಗಂಟಲಿನಲ್ಲಿರುವ ಚೀಲದಂಥ ರಚನೆಯೊಂದು ಅವುಗಳ ಧ್ವನಿಯನ್ನು ಹೆಚ್ಚಿಸಲು ನೆರವಾಗುತ್ತದೆ, 

ವಿಷ ಎಂದೊಡನೆಯೇ ಎಲ್ಲರಿಗೂ ನೆನಪಾಗುವುದು ಹಾವುಗಳು. ಭಾರತದಲ್ಲಂತೂ ಜನ ನಾಗರಹಾವು ಮತ್ತು ಕಾಳಿಂಗಸರ್ಪಗಳಿಗೆ ಹೆದರಿದಷ್ಟು ಬೇರಾವ ಜೀವಿಗಳಿಗೂ ಹೆದರುವುದಿಲ್ಲವೆಂದರೆ ತಪ್ಪಾಗಲಾರದು. ಆದರೆ ಜಗತ್ತಿನ ಅತ್ಯಂತ ವಿಷಕಾರಿ ಜೀವಿಗಳ ಪಟ್ಟಿ ಮಾಡುತ್ತ ಬಂದರೆ ಅದರಲ್ಲಿ ಹಾವುಗಳ ಸುಳಿವೇ ಇಲ್ಲವೆಂದರೆ ನಂಬುತ್ತೀರಾ? ಇದು ನಿಜ, ಜಗತ್ತಿನ ಅತ್ಯಂತ ವಿಷಕಾರಿ ಜೀವಿಗಳೆಂದರೆ ಬಾಕ್ಸ್ ಜೆಲ್ಲಿ ಎಂದು ಕರೆಯಲ್ಪಡುವ ಒಂದುರೀತಿಯ ಅಂಬಲಿಮೀನುಗಳು. (ಅಂಬಲಿಮೀನುಗಳು ವಾಸ್ತವವಾಗಿ ಮೀನುಗಳಲ್ಲ, ಅವು ಬೇರೆಯೇ ವರ್ಗಕ್ಕೆ ಸೇರಿದ ಜೀವಿಗಳು). ವಿಷಕಾರಿಯಾದ ತನ್ನ ಗ್ರಹಣಾಂಗಗಳನ್ನು ಬೀಸುತ್ತ ನೀರಿನಲ್ಲಿ ಸಾಗುತ್ತಿರುವ ಈ ಜೀವಿಗಳ ಗ್ರಹಣಾಂಗಗಳ ಸ್ಪರ್ಶಕ್ಕೆ ಬಂದ ಯಾವುದೇ ಜೀವಿಯಾದರೂ ರಕ್ತದೊತ್ತಡ ಏರಿ, ಹೃದಯಾಘಾತವಾಗಿ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪುವುದು ನಿಶ್ಚಿತ. ಹೀಗಾಗಿ ಇವು ಜಗತ್ತಿನಲ್ಲೇ ಅತಿ ಘೋರ ವಿಷವನ್ನು ಹೊಂದಿದ ಜೀವಿಗಳಾಗಿ ಪ್ರಸಿದ್ಧವಾಗಿವೆ. 

ದೀರ್ಘಾಯುಷ್ಯದ ವಿಷಯಕ್ಕೆ ಬಂದರೆ ಆಮೆಗಳನ್ನು ಮೀರಿಸುವ ಜೀವಿಗಳು ಬೇರಾವುದೂ ಇಲ್ಲವೆಂದು ಜಗತ್ತಿಗೇ ಗೊತ್ತಿದೆ. ಆಮೆಗಳು ಇನ್ನೂರಕ್ಕೂ ಹೆಚ್ಚು ವರ್ಷಗಳ ಕಾಲ ಬದುಕಬಲ್ಲವೆಂದು ಸಂಶಯಕ್ಕೆಡೆಯಿಲ್ಲದೆ ಸಾಬೀತಾಗಿದೆ. ಆದರೆ ಅವುಗಳ ದೀರ್ಘಾಯುಷ್ಯವನ್ನು ಅಳತೆ ಮಾಡುವುದಕ್ಕೆ ಇರುವ ಒಂದು ತೊಡಕೆಂದರೆ ಯಾವ ಸಂಶೋಧಕನಿಗೂ ಅಷ್ಟು ಆಯಸ್ಸಿಲ್ಲದಿರುವುದು! ಜೊತೆಗೆ ವೃಕ್ಷಗಳ ಆಯಸ್ಸನ್ನು ವೃಕ್ಷಕಾಂಡದಲ್ಲಿ ಮೂಡಿರುವ ಉಂಗುರಗಳನ್ನು ಎಣಿಸಿ ಕಂಡುಹಿಡಿಯುವಂತೆ ಆಮೆಗಳ ವಯಸ್ಸನ್ನು ಕಂಡುಹಿಡಿಯುವ ವಿಧಾನಗಳೇನೂ ನಮಗೆ ತಿಳಿದಿಲ್ಲ. ಆದ್ದರಿಂದ ಬಹುತೇಕ ಅವುಗಳ ವಯಸ್ಸಿನ ಬಗೆಗೆ ಊಹೆ ಮಾಡಬೇಕಷ್ಟೆ. ಬಹುಪಾಲು ಆಮೆಗಳು ನೂರೈವತ್ತು ವರ್ಷಕ್ಕೂ ಹೆಚ್ಚುಕಾಲ ಬದುಕಬಲ್ಲವು. ಅವುಗಳ ದೀರ್ಘಾಯುಷ್ಯಕ್ಕೆ ಕಾರಣವೇನೆಂದು ಇನ್ನೂ ನಮಗೆ ಸರಿಯಾಗಿ ಗೊತ್ತಾಗಿಲ್ಲ. ಅನೇಕ ಊಹೆಗಳಿದ್ದು, ಅದರಲ್ಲಿ ಎಷ್ಟು ಸತ್ಯವೋ ಎಷ್ಟು ಸುಳ್ಳೋ ಗೊತ್ತಿಲ್ಲ. ಒಂದು ಊಹೆಯ ಪ್ರಕಾರ ಅವುಗಳ ದೇಹದ ಜೈವಿಕ ಕ್ರಿಯೆಗಳೇ ಅತ್ಯಂತ ನಿಧಾನಗತಿಯಲ್ಲಿ ಸಾಗುವುದರಿಂದ ಜೀವನವೂ ನಿಧಾನಗತಿಯಲ್ಲೇ ಸಾಗುತ್ತದೆ ಎಂದು ವಿಜ್ಞಾನಿಗಳು ತರ್ಕಿಸಿದ್ದಾರೆ. 

ದಾಖಲೆಗಳ ವಿಷಯಕ್ಕೆ ಬಂದರೆ ಸಸ್ಯಗಳು ಪ್ರಾಣಿಗಳ ದಾಖಲೆಗಳನ್ನು ಪುಡಿಗಟ್ಟುತ್ತವೆ. ದೈತ್ಯಗಾತ್ರ ಮತ್ತು ಸುದೀರ್ಘಜೀವನ ಎರಡೂ ವಿಷಯಗಳಲ್ಲಿ ಪ್ರಾಣಿಗಳು ಸಸ್ಯಗಳಿಗಿಂತ ಮೈಲುದೂರವೇ ಉಳಿಯುತ್ತವೆ. ಇದಕ್ಕೆ ಅನೇಕ ಕಾರಣಗಳಿವೆ. ಮುಖ್ಯವಾಗಿ ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಸಸ್ಯ ಅಥವಾ ಬೇರೆ ಪ್ರಾಣಿಗಳನ್ನು ಅವಲಂಬಿಸಬೇಕಾಗುತ್ತದೆ. ಆದರೆ ಸಸ್ಯಗಳು ಈ ವಿಷಯದಲ್ಲಿ ಸ್ವತಂತ್ರ. ತಮ್ಮ ಆಹಾರವನ್ನು ಅವು ತಾವೇ ಉತ್ಪಾದಿಸಿಕೊಳ್ಳಬಲ್ಲವಾದ್ದರಿಂದ ಅವುಗಳಿಗೆ ಬೆಳೆಯಲು ಆಹಾರದ ಇತಿಮಿತಿಗಳಿಲ್ಲ. ಹಾಗಾಗಿ ಅಗಾಧ ಗಾತ್ರಕ್ಕೆ ಅವು ಬೆಳೆಯಬಲ್ಲವು. ಜೊತೆಗೆ ಸುದೀರ್ಘಕಾಲ ಬದುಕಬಲ್ಲವು ಕೂಡ. ಏಕೆಂದರೆ ಸಸ್ಯಗಳಿಗಿರುವಂಥ ಪುನರುತ್ಪಾದನಾ ಸಾಮರ್ಥ್ಯ ಪ್ರಾಣಿಗಳಿಗಿಲ್ಲ. ಒಂದು ಸಸ್ಯದ ಕೊಂಬೆಯನ್ನು ಕಡಿದರೆ ಅದು ಕೆಲವೇ ದಿನಗಳಲ್ಲಿ ಮತ್ತೆ ಚಿಗುರಬಲ್ಲದು. ಆದರೆ ಪ್ರಾಣಿಯೊಂದರ ದೇಹಭಾಗವನ್ನು ಅದೇ ರೀತಿ ಕಡಿದರೆ ಮತ್ತೆ ಚಿಗುರಬಲ್ಲದೇ? ಎಲ್ಲೋ ಹಲ್ಲಿಯ ಬಾಲ, ಚಪ್ಪಟೆಹುಳದಂಥ ಅಲ್ಲೊಂದು ಇಲ್ಲೊಂದು ಉದಾಹರಣೆ ಬಿಟ್ಟರೆ ಪ್ರಾಣಿಗಳಲ್ಲಿ ಅಂಥ ಸಾಮರ್ಥ್ಯ ಇಲ್ಲವೇ ಇಲ್ಲವೆನ್ನಬಹುದು. ಆದ್ದರಿಂದಲೇ ಅವು ಸಸ್ಯಗಳಂತೆ ಸಾವಿರಾರು ವರ್ಷ ಬದುಕಲಾವು. 

ಜಗತ್ತಿನ ಅತ್ಯಂತ ದೊಡ್ಡ ಮರ ಎಂಬ ಹೆಗ್ಗಳಿಕೆ ಕ್ಯಾಲಿಫೋರ್ನಿಯಾದ ಕಾಡುಗಳಲ್ಲಿರುವ ಸೆಕ್ವೋಯಿಯಾ ಸೆಂಪರ್ ವೈರನ್ಸ್ ಜಾತಿಗೆ ಸೇರಿದ ಮರವೊಂದಕ್ಕೆ ಸಲ್ಲುತ್ತದೆ. ಈ ಮರ 379 ಅಡಿ ಎತ್ತರವಿದ್ದು, ಒಂದು ಅಂದಾಜಿನ ಪ್ರಕಾರ ಎರಡು ಸಾವಿರ ಟನ್ ತೂಗುತ್ತದೆ ಎಂದು ಅಂದಾಜಿಸಲಾಗಿದೆ. ಒಂದೂವರೆ ಸಾವಿರ ವರ್ಷಕ್ಕೂ ಹೆಚ್ಚು ಹಳೆಯದಾದ ಮರವಿದು. ಎದೆಯೆತ್ತರದಲ್ಲಿ ಈ ಮರದ ವ್ಯಾಸ ಇಪ್ಪತ್ತೊಂಬತ್ತು ಅಡಿಗಿಂತ ಹೆಚ್ಚು! ನೆಲದ ಮೇಲಿನಿಂದ ನೋಡಿದರೆ ಆಕಾಶಕ್ಕೇ ಏಣಿಯಿಟ್ಟಂತೆ ಕಾಣುವ ಈ ಮರ ಇಂದು ಭೂಮಿಯ ಮೇಲೆ ಬದುಕಿರುವ ಅತಿ ಎತ್ತರದ ವೃಕ್ಷವೆಂದು ಹೆಸರಾಗಿದೆ. ಇದಕ್ಕಿಂತ ಮೊದಲು ಇದೇ ಜಾತಿಯ ಮರವೊಂದು 435 ಅಡಿ ಎತ್ತರವಿದ್ದುದು ದಾಖಲಾಗಿದೆ. ಆ ಮರ ಈಗ ಬದುಕಿಲ್ಲವಾದ್ದರಿಂದ ಇದೇ ಅತಿ ಎತ್ತರದ ಮರವೆಂದು ಹೆಸರಾಗಿದೆ. ಮೊದಲು ಈ ಕಾಡುಗಳಲ್ಲಿ ಅವ್ಯಾಹತವಾಗಿ ಮರಗಳನ್ನು ಕಡಿಯಲಾಗುತ್ತಿತ್ತು. ಆದರೆ ಈಗ ಬಿಗಿಯಾದ ಕಾನೂನು ಕ್ರಮಗಳ ಮೂಲಕ ಈ ದೈತ್ಯವೃಕ್ಷಗಳನ್ನು ಸಂರಕ್ಷಿಸಲಾಗುತ್ತಿದೆ. 

ಇನ್ನು ಸುತ್ತಳತೆಯ ವಿಷಯಕ್ಕೆ ಬಂದರೆ ಆಫ್ರಿಕದ ಬಾವೋಬಾಬ್ ವೃಕ್ಷಗಳಿಗೆ ಬೇರೆ ಯಾವುದೂ ಸಾಟಿಯಿಲ್ಲ. ನೋಡಲು ತುಸು ವಿಚಿತ್ರವಾಗಿ ದೊಡ್ಡ ಪೀಪಾಯಿಯಂತೆ ಕಾಣುವ ಈ ಮಹಾವೃಕ್ಷಗಳ ಕಾಂಡ ನೀರನ್ನು ಸಂರಕ್ಷಿಸಲೆಂದೇ ಈ ರೀತಿ ಮಾರ್ಪಾಡಾಗಿದೆ. ಅದರ ಬುಡದಿಂದ ನೆತ್ತಿಯವರೆಗೆ ಕೇವಲ ದೊಡ್ಡ ಪೀಪಾಯಿಯಂಥ ಕಾಂಡ ಮಾತ್ರ ಕಾಣುತ್ತದೆಯೇ ಹೊರತು ಯಾವುದೇ ಕವಲುಕೊಂಬೆಗಗಳಿಲ್ಲ. ಮರದ ನೆತ್ತಿಯಲ್ಲಿ ಮಾತ್ರ ದೂರದಿಂದ ನೋಡಿದರೆ ಬೇರುಗಳಂತೆಯೇ ಭಾಸವಾಗುವ ರೆಂಬೆಕೊಂಬೆಗಳು ಮತ್ತು ಎಲೆಗಳಿವೆ. ಆದ್ದರಿಂದ ಈ ವೃಕ್ಷವನ್ನು ನೋಡಿದರೆ ತಲೆಕೆಳಗಾಗಿ ನಿಂತ ಮರದಂತೆ ಕಾಣಿಸುತ್ತದೆ. ಇದರ ಪೀಪಾಯಿಯಂಥ ಭಾರೀ ಕಾಂಡದಲ್ಲಿ ಸಾವಿರಾರು ಲೀಟರ್ ನೀರನ್ನು ಶೇಖರಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಆಫ್ರಿಕದ ಮರುಭೂಮಿ ಮತ್ತು ಉಷ್ಣವಲಯದ ಹುಲ್ಲುಬಯಲುಗಳಲ್ಲಿ ನೀರಿನ ಅಭಾವ ಸದಾ ಇದ್ದೇ ಇರುವುದರಿಂದ ಇಂಥ ವ್ಯವಸ್ಥೆ ಗಿಡಮರಗಳಿಗೆ ಅತ್ಯಗತ್ಯ. ಇದುವರೆಗೆ ಪತ್ತೆಯಾದ ಅತ್ಯಂತ ಅಗಲವಾದ ಬಾವೋಬಾಬ್ ವೃಕ್ಷದ ಕಾಂಡದ ಸುತ್ತಳತೆ ನೂರಾಅರವತ್ನಾಲ್ಕು ಅಡಿ (ಅಂದರೆ ಐವತ್ತೆರಡು ಮೀಟರ್) ಇತ್ತು! ಇದು ನಮ್ಮ ಕಲ್ಪನೆಗೂ ಎಟುಕದ ಭಾರೀ ಮರವೇ ಸರಿ. ಆ ಮರವನ್ನು ಒಮ್ಮೆ ತಬ್ಬಿಕೊಳ್ಳಬೇಕೆಂದರೆ ಎಷ್ಟು ಜನ ಬೇಕಾಗಬಹುದು ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು.

ಇನ್ನು ದೀರ್ಘಾಯುಷ್ಯದ ವಿಷಯಕ್ಕೆ ಬಂದರೆ ಸಾವಿರ-ಎರಡು ಸಾವಿರ ವರ್ಷಗಳಷ್ಟು ದೀರ್ಘಕಾಲ ಬದುಕುವ ವೃಕ್ಷಗಳು ಸರ್ವೇಸಾಮಾನ್ಯ. ನಮಗೆ ಇದುವರೆಗೆ ತಿಳಿದಿರುವ ಅತ್ಯಂತ ದೀರ್ಘಾಯುಷಿಯಾದ ಮರವೆಂದರೆ ಅಮೆರಿಕದ ನೆವಾಡಾ ಪ್ರಾಂತ್ಯದಲ್ಲಿರುವ ಬ್ರಿಸಲ್ ಕೋನ್ ವೃಕ್ಷಗಳು. ಪ್ರೋಮೆಥಿಯಾಸ್ ಎಂಬ ಹೆಸರಿನ ಈ ವೃಕ್ಷಗಳ ಪಿತಾಮಹನ ಸರಾಸರಿ ಆಯಸ್ಸು ನಾಲ್ಕುಸಾವಿರ ವರ್ಷಗಳು! ಇಂದು ನಮಗೆ ಕಡೇಪಕ್ಷ ನಾಲ್ಕುಸಾವಿರದ ಎಂಟುನೂರು ವರ್ಷಗಳಷ್ಟು ಹಳೆಯದಾದ ಪ್ರೋಮೆಥಿಯಾಸ್ ವೃಕ್ಷಗಳು ಸಿಕ್ಕಿವೆ. ಇವುಗಳ ಆಯಸ್ಸು ಐದುಸಾವಿರ ವರ್ಷಗಳಿಗೂ ಹೆಚ್ಚಿರಬಹುದೆಂಬ ಒಂದು ಊಹೆಯಿದೆ. ಸಾಮಾನ್ಯವಾಗಿ ವೃಕ್ಷಗಳ ಆಯಸ್ಸನ್ನು ಅವುಗಳ ಕಾಂಡದಲ್ಲಿರುವ ಉಂಗುರಗಳ ಮೂಲಕ ಕಂಡುಹಿಡಿಯುತ್ತಾರೆ. ಮರದ ಕಾಂಡದಲ್ಲಿ ವರ್ಷಕ್ಕೊಂದರಂತೆ ಉಂಗುರಗಳು ಮೂಡುತ್ತ ಹೋಗುತ್ತವೆ. ಇದೇ ವಿಧಾನದಿಂದ ಪ್ರೋಮೆಥಿಯಾಸ್ ವೃಕ್ಷದ ಆಯಸ್ಸನ್ನು ಕಂಡುಹಿಡಿಯಲು ಹೊರಟ ವಿಜ್ಞಾನಿಗಳು ಅದರ ಕಾಂಡದಲ್ಲಿನ ಉಂಗುರಗಳ ನಿಬಿಡತೆಯನ್ನು ಕಂಡು ದಂಗುಬಡಿದುಹೋದರು. ಸೂಕ್ಷ್ಮದರ್ಶಕದ ನೆರವಿಲ್ಲದೆ ಅದರ ಉಂಗುರಗಳನ್ನು ಎಣಿಸುವುದು ಸಾಧ್ಯವೇ ಇರಲಿಲ್ಲ. ಕೊನೆಗೂ ಇದರ ಆಯಸ್ಸು ಅಂದಾಜು ನಾಲ್ಕುಸಾವಿರದ ಒಂಬೈನೂರು ವರ್ಷಗಳೆಂದು ಅಂದಾಜಿಸಲಾಯಿತು. ಅಂದರೆ ಕ್ರಿಸ್ತ ಹುಟ್ಟುವುದಕ್ಕಿಂತಲೂ ಸುಮಾರು ಎರಡುಸಾವಿರದ ಒಂಬೈನೂರು ವರ್ಷಗಳ ಹಿಂದೆ ಹುಟ್ಟಿದ ಮರವಿದು! ಇಡೀ ಜಗತ್ತಿನಲ್ಲಿ ಐದು ಸಹಸ್ರಮಾನಗಳಲ್ಲಿ ಆಗುತ್ತಿರುವ ಬದಲಾವಣೆ, ಪ್ರಕೃತಿಯ ಮೇಲೆ ಹೆಚ್ಚುತ್ತಿರುವ ಮನುಷ್ಯನ ದೌರ್ಜನ್ಯ, ದಬ್ಬಾಳಿಕೆ ಎಲ್ಲದಕ್ಕೂ ಮೂಕಸಾಕ್ಷಿಯಾಗಿ ನಿಂತಿವೆ ಈ ಮರಗಳು!

ಮನುಷ್ಯನ ಹೃದಯ ನಿಮಿಷಕ್ಕೆ ಎಪ್ಪತ್ತೆರಡು ಸಲ ಬಡಿದುಕೊಳ್ಳುತ್ತದೆ ಎಂದು ನಾವೆಲ್ಲ ಕೇಳಿದ್ದೇವೆ. ಅಂದರೆ ಸರಾಸರಿ ಒಂದು ಸೆಕೆಂಡಿಗೆ ಒಂದು ಸಲಕ್ಕಿಂತ ಸ್ವಲ್ಪ ಹೆಚ್ಚಿನ ವೇಗ. ಆದರೆ ಜೀವಿಯ ಗಾತ್ರ ಸಣ್ಣದಾದಷ್ಟೂ ಅದರ ಹೃದಯ ಬಡಿತದ ವೇಗ ಹೆಚ್ಚುತ್ತದೆ. ಏಕೆಂದರೆ ಜೀವಿ ಚಿಕ್ಕದಾದಷ್ಟೂ ಅದು ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತದೆ ಮತ್ತು ಅದಕ್ಕಾಗಿ ಹೆಚ್ಚಿನ ಶಕ್ತಿ ಬೇಕಾಗುತ್ತದೆ. ಆದ್ದರಿಂದ ಸಹಜವಾಗಿಯೇ ಅದರ ಹೃದಯ ಬಡಿತವೂ ಹೆಚ್ಚಿರಲೇಬೇಕಾಗುತ್ತದೆ. ಈ ಮಾತು ಎಲ್ಲ ಜೀವಿಗಳಿಗೂ ಅನ್ವಯಿಸುತ್ತದೆ. ಪಕ್ಷಿಜಗತ್ತಿನಲ್ಲಂತೂ ಹೃದಯ ಬಡಿತದ ವೇಗ ಮತ್ತೂ ಹೆಚ್ಚು, ಏಕೆಂದರೆ ಸದಾಕಾಲ ಹಾರುತ್ತಲೇ ಇರುವುದರಿಂದ ಪಕ್ಷಿಗಳ ಚಯಾಪಚಯ ಕ್ರಿಯೆಗಳು ತುಂಬಾ ವೇಗವಾಗಿರುತ್ತವೆ. ಪಕ್ಷಿಜಗತ್ತಿನ ವಾಮನಾವತಾರಿಗಳಾದ ಹಮ್ಮಿಂಗ್ ಬರ್ಡ್ ಹಕ್ಕಿಗಳ ಹೃದಯವೇ ನಮಗೆ ಇದುವರೆಗೆ ಗೊತ್ತಿರುವಂಥ ಅತಿವೇಗದ ಹೃದಯಬಡಿತದ ದಾಖಲೆ. ಈ ಹಕ್ಕಿಗಳ ಹೃದಯ ನಿಮಿಷಕ್ಕೆ 1200ರಿಂದ 1400 ಸಲ ಬಡಿದುಕೊಳ್ಳುತ್ತದೆ. ಅಂದರೆ ಸೆಕೆಂಡಿಗೆ ಇಪ್ಪತ್ತರಿಂದ ಇಪ್ಪತ್ನಾಲ್ಕು ಸಲ! ನಮ್ಮ ಕಲ್ಪನೆಗೂ ನಿಲುಕದ ವೇಗವಿದು. ಬರೇ ಮಕರಂದವೇ ಪ್ರಧಾನ ಆಹಾರವಾಗಿರುವ ಮತ್ತು ಅದಕ್ಕಾಗಿ ಸದಾಕಾಲ ಹೂವಿನಿಂದ ಹೂವಿಗೆ ಹಾರುತ್ತಲೇ ಇರುವುದರಿಂದ ತಮ್ಮ ದೇಹದ ಶಕ್ತಿಯ ಅಗತ್ಯತೆಯನ್ನು ಪೂರೈಸಿಕೊಳ್ಳಲು ಇವುಗಳ ಹೃದಯ ಅಷ್ಟು ವೇಗವಾಗಿ ಬಡಿದುಕೊಳ್ಳುವುದು ಅತ್ಯವಶ್ಯಕ.

ಜೀವಜಗತ್ತು ಎಷ್ಟೊಂದು ವಿಶಾಲವಾದದ್ದು ಮತ್ತು ಅಲ್ಲಿನ ವಿಸ್ಮಯಗಳು ಎಷ್ಟೊಂದು ಅನಂತವಾದದ್ದು ಎಂದರೆ ನಾವು ಭೂಮಿಯ ಮೇಲಿರುವ ಎಲ್ಲ ಕಾಗದವನ್ನು ಉಪಯೋಗಿಸಿಕೊಂಡರೂ ಎಲ್ಲ ವಿಷಯಗಳನ್ನು ಬರೆಯಲಾರೆವು. ಇಂದು ನಾವೇನು ತಿಳಿದಿದ್ದೇವೋ ಅದೊಂದು ಜ್ಞಾನದ ಮಹಾಸಾಗರದ ಅತ್ಯಂತ ತೆಳುವಾದ ಮೇಲ್ಪದರವಷ್ಟೇ! ಕೆಳಗಿನ ಮುತ್ತುರತ್ನಗಳನ್ನೆಲ್ಲ ಆರಿಸಿಕೊಳ್ಳಲು ಮನುಷ್ಯನೊಬ್ಬನ ಜೀವಮಾನವಷ್ಟೇ ಏಕೆ, ಬಹುಶಃ ಪ್ರೋಮೆಥಿಯಾಸ್ ವೃಕ್ಷದ ಜೀವಮಾನವೂ ಸಾಲಲಿಕ್ಕಿಲ್ಲ!

Category:Nature



ProfileImg

Written by Srinivasa Murthy

Verified