Do you have a passion for writing?Join Ayra as a Writertoday and start earning.

ವರ್ಕ್ ಫ್ರಮ್ ಹೋಮ್ ಖಯಾಲಿ

ಮನೆಯಿಂದಲೇ ಕೆಲಸ ! ಜಾಗರೂಕತೆ

ProfileImg
27 May '24
2 min read


image

ಬೆಳ್ಳಂ ಬೆಳಿಗ್ಗೆ ಎದ್ದು ನೆಲಸಾರಿಸಿ,ಸ್ನಾನ ಮಾಡಿ ಪೂಜೆ ಮುಗಿಸಿ,ತುಳಸಿಗೆ ನೀರೆರೆದು ಪ್ರದಕ್ಷಿಣೆ ಹಾಕಿ, ಉಳಿದವರನ್ನು ಮೆಲುದನಿಯಲ್ಲಿ ಗೊಣಗುತ್ತಲೇ ಎಬ್ಬಿಸುತ ಅಡಿಗೆ ಮನೆಗೆ ಕಾಲಿಟ್ಟು ಒಲೆ ಉರಿದರೆ ಮನೆತುಂಬಾ ಕಾಫಿ,ಚಹಾದ ಕಂಪು ,ಮಲಗಿದ್ದವರೂ ಏಳಬೇಕು ಅಮ್ಮನ ಕೈ ರುಚಿಗೆ.ಹೀಗೆ ಮುಂದುವರೆದು ಕೈಯಾರೆ ತಯಾರಿಸಿ,ಪ್ರೀತಿಯ ತಿಂಡಿಯ ಯಜಮಾನರ ಕೈಗಿಟ್ಟು,ಮಕ್ಕಳನ್ನು ಅಣಿಗೊಳಿಸಿ ತುತ್ತಿಟ್ಟು, ಮುತ್ತಿಟ್ಟು ಸಂಭ್ರಮದಲ್ಲಿ ಶಾಲೆಗೆ ಅಪ್ಪನ ಕೈಹಿಡಿದು ಕಳಿಸಿ, ಕೆಲಸಕ್ಕೆ ಹೋಗುವ,ಇಲ್ಲ ವ್ಯವಸಾಯಕ್ಕೆ ಹೋಗುವ ಗಂಡನ ಕಂಡು ಮನದಲ್ಲೇ ಬೀಗಿ  ಒಳನೆಡೆದರೆ ಅವಳದೇ ಪ್ರಪಂಚ. ಪ್ರತಿಯೊಬ್ಬರ ಅಮ್ಮನೂ ಹೀಗೇ ಇದ್ದಳು. ಹೊತ್ತೊತ್ತಿಗೆ ತುತ್ತಾ ಬಡಿಸಿ,ಮನೆಕೆಲಸವನ್ನು ಜತನದಿಂದ ಜವಾಬ್ದಾರಿಯಿಂದ ಮಾಡಿ ,ಅಗತ್ಯ ಬಿದ್ದರೆ ಹೊಲದಲ್ಲೂ ದುಡಿದು.ಊಟಬಡಿಸಿ  ನಗುತ್ತಲೇ ರಾತ್ರಿಯ ದೀಪ ಆರಿಸಿ ನಿದ್ರೆಗೆ ಜಾರುವಳು. ಹಲವು ಕನಸುಗಳ ಮನಸಲ್ಲೇ ಪಿಸುಮಾತು ಮಾಡುತ್ತಾ ಸತಿಯಾದವಳು.ಸುಖಸಂಸಾರದ ಸಮಪಾಲುದಾರಳು,ಸಹನಾಶೀಲಳು ,ಪತಿವ್ರತೆ.ಕಲಿತದ್ದು ಕಡಿಮೆಯಾದರು ಬದುಕಿದ್ದು ಮಾದರೀ ಜೀವನ.

ಈಗ ಕಾಲ ಬದಲಾಗಿದೆ,ಮಾಯಾನಗರಿಗಳು , ಮಾಂತ್ರಿಕ ಜಗತ್ತು,ವಿದ್ಯಾವಂತರೇ ಬಹಳ.ಕೆಲಸಕ್ಕೂ ಸ್ವೇಚ್ಚೆಗೂ ಸಮಪಾಲು, ಸಮಬಾಳು ಎಂಬಂತಾಗಿದೆ.ಗಂಡಿಗೆ ಸಮಬಲಳಾಗಿ ನಿಲ್ಲುವ ಬರದಲ್ಲಿ ತನ್ನ ತನವನ್ನೇ ಮರೆತ ಹೊರಟವರೇ ಹೆಚ್ಚು.ಮಾದರಿ ಹೆಂಗಸರೂ ಇಲ್ಲವೆಂದೇನಲ್ಲ,ಆದರೆ ಬೆರಳೆಣಿಕೆಯಷ್ಟು.

ಸದಾ ಅವಸರದಲ್ಲಿರುವಂತೇ ಕಾಣುವ ಮನೆಯ ಪ್ರತಿಯೊಬ್ಬರೂ! ಎಲ್ಲಾ ಅದಲಿ ಬದಲಿ ಆದಂತೆ ಕೆಲವೊಮ್ಮೆ.ಸೂರ್ಯ ತನ್ನದೇ ಹಳೇ ಶೈಲಿಯಲ್ಲಿ ಜಗತ್ತನ್ನು ಬೆಳಗಿಸಲು ಬಂದರೂ,ಬೆಳಗಾಗುವುದು ವಿಭಿನ್ನ ಪ್ರತಿಮನೆಯಲ್ಲಿ. ರಾತ್ರಿ ಉದ್ಯೋಗ,ಸಿನಿಮಾ, ಕ್ರಿಕೆಟ್,ಜಗಳ, ಪಾರ್ಟಿ ,ಮೊಬೈಲ್ ಅಂತ ತಡರಾತ್ರಿ ಮಲಗಿದ್ದೇ !ಎಂಬುದಷ್ಟೇ ಕಾರಣ.ಬೆಳಿಗ್ಗೆ ಧಾವಂತ, ಗಡಿಬಿಡಿಯಲ್ಲಿ ಕಿರುಚಾಡುತ್ತಾ ,ಗೊಣಗುತ್ತಾ, ಅವಸರವಸರವಾಗಿ ಶುಚಿಯಾಗಿ,ಆರ್ಡರ್ ಮಾಡಿದ ಆಹಾರ ತಿಂದು ಒಟ್ಟೊಟ್ಟಿಗೆ  ಮನೆಗೆ ಬಾಗಿಲು ಜಡಿದು ನಡೆದರೆ, ಅವಸರ, ತಲೆಬಿಸಿ,ಆಲಸ್ಯದಲ್ಲೇ ಮನೆ ಸೇರುವುದು ಸಂಜೆಯೋ  ರಾತ್ರಿಯೋ,ಒಬ್ಬೊಬ್ಬರದು ಒಂದೊಂದು ಸಮಯ,ಕೆಲಸದವಳಿದ್ದರೆ ಮಕ್ಕಳ ಪುಣ್ಯ,ಮಕ್ಕಳೂ ಎಂಬಂತೆಯೂ ಇಲ್ಲ, ಬಹಳಷ್ಟು ಮನೆಗಳಲ್ಲಿ ಒಂದೇ ಮಗು, ಇನ್ನು ಬಹಳ ಮಂದಿಗೆ ಮಕ್ಕಳಿಲ್ಲ,ಕೆಲವರಿಗೆ ಬೇಕಿಲ್ಲ, ಇನ್ನೂ ಕೆಲವರಿಗೆ ಬೇಕೆಂದರೂ ಒಂದೂ ಆಗುತ್ತಿಲ್ಲ,ಕಾರಣ ಹಲವು ಬಿಡಿ.

ಇವೆಲ್ಲದರ ನಡುವೆ ಹೇಗೋ ಸಾಗುತ್ತಿದ್ದ ಸಂಸಾರ ಕರೋನಾ ನಂತರ ಹೊಸ ಖಯಾಲಿ ಎಂಬಂತೆ ವರ್ಕ್ ಫ್ರಮ್ ಹೋಮ್, ನೆಟ್ವರ್ಕ್ ಮಾರ್ಕೆಟಿಂಗ್ ಅಂತ ತರಹೇವಾರಿ ಅವಕಾಶವನ್ನು ಒದಗಿಸಿತು.ಕೆಲವರಿಗೆ ವರವಾದರೆ, ಇನ್ನೂ ಕೆಲವರಿಗೆ ಇದು ಶಾಪ.ಸೋಮಾರಿಗಳಿಗಂತು ಹಬ್ಬ.ಕುಳಿತಲ್ಲಿಯೇ ಎಲ್ಲಾ ತಂದಿಡಬೇಕು.ಮಲಗಿಕೊಂಡೇ ಮೀಟಿಂಗ್ ಅಟೆಂಡ್ ಮಾಡುವವರೇ ಬಹಳ. ಬೆಳಗಾಗಿ ಕೆಲಸ ಅಂತ ಲಾಗಿನ್ ಆಗಿ ಕಂಪ್ಯೂಟರ್, ಮೊಬೈಲ್ ಹಿಡಿದು ಕುಳಿತರೆ ಮುಗಿತು ಮನೆಕೆಲಸ,ಕಸ ಮುಸುರೆ , ಶುಚಿತ್ವ ಎಲ್ಲಾ ಭಾನುವಾರದವರೆಗೆ ಕಾಯಬೇಕು.ಇಲ್ಲ ಮನೆ ಕೆಲಸದವರು ಇಟ್ಟುಕೊಂಡು ಮಾಡಿಸಬೇಕು.ಅವರಿಗೂ ನಗರದಲ್ಲಿ ಜೀವನಕ್ಕೊಂದು ದಾರಿ. ಮನೆಯಲ್ಲಿ ಒಬ್ಬರಿಗೊಬ್ಬರು ಬೈದುಕೊಂಡೇ ಕೆಲಸ ಮಾಡುವ ರೀತಿ, ಪ್ರೀತಿ ವಂಚಿತ ಮಕ್ಕಳಿಗೆ ಮೊಬೈಲ್, ಟಿವಿ ಗಳೇ ಆಟಿಕೆಗಳು.ಹಣವಿದ್ದರು ಆರೋಗ್ಯವಿರದ ಜೀವನ.ಹಸಿವಾದರೆ ಹೋಟೆಲ್ ಆಹಾರ.ಎಲ್ಲವೂ ಸುಲಭ, ಕಾಯಿಲೆ ಬಹಳ. ಬಹುಕಾಲ ಬದುಕುಳಿಯುವವರೂ ವಿರಳ. ನಗುವನ್ನೇ ಮರೆತ ಯಾಂತ್ರಿಕ ಬದುಕು. ಪ್ರೀತಿ-ನಂಬಿಕೆಗಳು ಮರೀಚಿಕೆ.

ಇತ್ತೀಚೆಗೆ ಈ  ಜಾಲತಾಣಗಳ ಸೋಗಿಗೆ ಬಿದ್ದು ಹಳ್ಳಿಯಲ್ಲೂ ಇದೇ ಪರಿಸರ ನಿರ್ಮಾಣವಾಗಿದೆ. ಸಂಸಾರಗಳು ಬೀದಿಗೆ ಬಂದರು, ಪ್ರಖ್ಯಾತರಾಗುವ ಹಂಬಲ.ಸಂಬಂಧಗಳಲ್ಲಿ ನಂಬಿಕೆಯ ಬಲವಿಲ್ಲ. ಗಂಡು-ಹೆಣ್ಣಿನ ಭೇದವೂ ಇದಕ್ಕಿಲ್ಲ.ಮಕ್ಕಳನ್ನೂ ಪ್ರಚೋದಿಸುವ ಚಟುವಟಿಕೆಗಳು. ಇಂದಿನ ಕಲಿಕೆ ಹೆಚ್ಚಿನ ಆತ್ಮಹತ್ಯೆಗೆ ದಾರಿಯಾಗದೆ .ಮೌಲ್ಯ, ಆಯಸ್ಸು,  ಸಂಸ್ಕಾರ ದುಬಾರಿಯಾಗಿದೆ.

ಹೀಗಿರುವಾಗ ಇದರ ಲಾಭ ಪಡೆದು ಅದೆಷ್ಟೋ ನಯವಂಚಕರು ತಮ್ಮ ವಿಧ್ಯೆ ಸದುಪಯೋಗ ಪಡಿಸಿಕೊಳ್ಳದೆ ,ಅಮಾಯಕರ ಜೀವನ ಹಾಳುಮಾಡಿ  ತಮ್ಮ ಬಂಡವಾಳ ಮಾಡಿಕೊಂಡು ಕೆಲಸ ಕೊಡಿಸುವ ,ಹಣ ಗಳಿಸುವ ಅವಕಾಶ ಕಲ್ಪಿಸಲಾಗುವುದು ಎನ್ನುತ್ತಾ  ಮೋಸಮಾಡುತ್ತಿದ್ದಾರೆ, ಬ್ಯಾಂಕ್ ಖಾತೆಗಳು ಖಾಲಿಯಾಗುತ್ತಿದೆ.  ಹೆಂಗಸರಂತೂ ವರ್ಕ್ ಫ್ರಮ್ ಹೋಮ್ ನೆಪದಲ್ಲಿ ಮೋಜು, ಮಸ್ತಿ, ಸಹವಾಸ ದೋಷದಿಂದ ಹಣ ಕಳೆದುಕೊಂಡು , ಗಂಡ-ಸಂಸಾರದ ಮರ್ಯಾದೆ ತೆಗೆದು ತಾವೂ ನೇಣಿಗೆ ಶರಣಾಗುವ ಜೊತೆಗೆ ಮನೆಮಂದಿಗೆ ವಿಷವುಣಿಸಿ ಜೀವನ ಮುಗಿಸಿಕೊಳ್ಳುತ್ತಿದ್ದಾರೆ.ನೆಟ್ವರ್ಕ್ ಮಾರ್ಕೆಟಿಂಗ್, ಟ್ರೇಡಿಂಗ್, ಬೆಟ್ಟಿಂಗ್ ದಂದೆಗಿಳಿದು ಗಂಡಸರೂ ಉದ್ಯೋಗ ಮಾಡದೆ ಮೋಸಕ್ಕೆ ಬಲಿಯಾಗಿ ಸಂಸಾರಗಳ ಹಾಳುಗೆಡವಿದ್ದಾರೆ. ಯಶಸ್ವಿಯಾದವರು ಕೆಲವರಾದರೆ, ವಿಫಲವಾದವರೇ ಬಹಳ.

ಇನ್ನಾದರೂ ಇವೆಲ್ಲ ತಿಳಿದು,ಇಂತ ದುಶ್ಚಟಗಳಿಗೆ ಬಲಿಯಾಗದೆ ,ಸರಳವಾದರು ಸುಂದರ ಬದುಕು ಕಟ್ಟಿಕೊಳ್ಳಬೇಕು."ಇದ್ದದ್ದು ನಮಗೆ ಸಾಕು, ಇನ್ನೊಬ್ಬರ ಅನುಕರಣೆ ಮಾಡಹೊರಟರೆ ಎಷ್ಟಿದ್ದರೂ ಸಾಲದು". ಈ ಮಾನವನ ಕೊನೆಯಿಲ್ಲದ ಆಸೆಗೆ ಕಡಿವಾಣ ನಾವೇ ಹಾಕಿ ,ವಿಧ್ಯೆಗೆ ತಕ್ಕ ಉದ್ಯೋಗ ಸೃಷ್ಟಿಸಿಕೊಂಡು ,ಸರಳವಾಗಿಯೇ ಈ ಅಲ್ಪ ಜೀವಿತಾವಧಿಯಲ್ಲಿ ಸಂತಸದಿಂದ ಬದುಕಿಬಿಡಲು ಮನಸ್ಸು ಮಾಡಿದರಾಯಿತು. ತಾನೇ ಹೆಣೆದ ಭಲೆಯಲ್ಲಿ ,ತಾನೇ ಸಿಕ್ಕಿ ಸಾಯುವ ಜೇಡದಂತಾಗದಿರಲಿ ನಮ್ಮ ಜೀವನ.ಯಾರನ್ನೂ,ಯಾವುದಕ್ಕೂ ನೋಯಿಸುವ ಅವಕಾಶ ನಮ್ಮದಾಗದಿರಲಿ!.

ಇಂತಿ,

ಮಮತಾ ಶೆಟ್ಟಿ ಮಲ್ನಾಡ್ 

ಶಿಕ್ಷಕಿ

 

 

 

Category:Technology


ProfileImg

Written by mamtha Shetty

ಅಪರಿಚಿತರ ನಡುವೆ ಪರಿಚಿತರ ಇರುವಿಕೆಯ ಹುಡುಕಾಟ