ವಿಕೆಟ್‌ ಕೀಪರ್

ಕ್ರಿಕೆಟ್‌ ಅಂಗಳದ ಮುಖ್ಯ ಪಾತ್ರಧಾರಿ

ProfileImg
24 Mar '24
6 min read


image

                ಇನ್ನೊಂದು ಐಪಿಎಲ್‌ ಋತು ಆರಂಭವಾಗಿದೆ. ಪ್ರತಿಸಲ ಐಪಿಎಲ್‌ ಶುರುವಾದಾಗಲೂ ಎಲ್ಲರ ಕಣ್ಣುಗಳೂ ಚೆನ್ನೈ ಸೂಪರ್‌ಕಿಂಗ್ಸ್‌ ಹಾಗೂ ಅದರ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರ ಮೇಲೆ ಇರುತ್ತದೆ. ಈ ಸಲ ದೋನಿ ನಾಯಕನಾಗಿ ಅಲ್ಲದೆ ಸಾಧಾರಣ ಆಟಗಾರನಾಗಿ ಆಡುತ್ತಿದ್ದಾರೆ. ಆದರೆ ಅವರು ಮೊದಲಿನಂತೆ ರಭಸವಾಗಿ ಬ್ಯಾಟಿಂಗ್‌ ಮಾಡದಿದ್ದರೂ ವಿಕೆಟ್‌ಕೀಪಿಂಗ್‌ ಬಹಳ ಚುರುಕಾಗಿಯೇ ಮಾಡುತ್ತಿದ್ದಾರೆ. ವಿಕೆಟ್‌ಕೀಪಿಂಗ್‌ ಎನ್ನುವುದು ಕ್ರಿಕೆಟ್‌ನಲ್ಲಿ ಅತ್ಯಂತ ಪ್ರಮುಖವಾದ ಒಂದು ವಿಭಾಗ. ಒಂದು ತಂಡದ ಯಶಸ್ಸಿಗೆ ಒಳ್ಳೆಯ ಬ್ಯಾಟ್ಸ್‌ಮನ್‌, ಬೌಲರ್‌ ಹಾಗೂ ಫೀಲ್ಡರ್‌ಗಳು ಎಷ್ಟು ಮುಖ್ಯವೋ ಒಳ್ಳೆಯ ವಿಕೆಟ್‌ಕೀಪರ್‌ ಸಹ ಅಷ್ಟೇ ಮುಖ್ಯ. ಆತ ಮಾಡುವ ಸಣ್ಣದೊಂದು ತಪ್ಪು ಕೂಡ ತಂಡಕ್ಕೆ ಬಹಳ ದುಬಾರಿಯಾಗಬಲ್ಲದು. 

       ವಿಕೆಟ್‌ಕೀಪರ್‌ಗಳ ಪ್ರಾಮುಖ್ಯತೆ ತಂಡದಲ್ಲಿ ಎಷ್ಟೇ ಇದ್ದರೂ ಅದರ ಚಿತ್ರಣವೇ ಬದಲಾಗಿದ್ದು ಈ ಶತಮಾನದಲ್ಲೇ ಎನ್ನಬಹುದು. ಕ್ರಿಕೆಟ್‌ ಜನನವಾಗಿ ಶತಮಾನಗಳೇ ಕಳೆದಿದ್ದರೂ, ಟೆಸ್ಟ್‌ ಕ್ರಿಕೆಟ್‌ ಬಂದು ಒಂದೂವರೆ ಶತಮಾನ ಕಳೆದಿದ್ದರೂ ವಿಕೆಟ್‌ಕೀಪರ್‌ಗಳ ಮಹತ್ವ ತುಂಬಾ ಹೆಚ್ಚಾಗಿದ್ದು ಇಪ್ಪತ್ತೊಂದನೇ ಶತಮಾನದಲ್ಲೇ ಎಂದರೆ ತಪ್ಪಾಗಲಾರದು. ಏಕೆಂದರೆ ಅದಕ್ಕಿಂತ ಮೊದಲು ಸಹ ವಿಕೆಟ್‌ಕೀಪರ್‌ ಒಬ್ಬ ತಂಡದಲ್ಲಿರುತ್ತಿದ್ದರೂ ಆತನ ಪಾತ್ರ ಕೇವಲ ವಿಕೆಟ್‌ ಕೀಪಿಂಗ್‌ ಮಾತ್ರ ಆಗಿರುತ್ತಿದ್ದುದೇ ಹೆಚ್ಚು. ಅವನಿಂದ ಹೆಚ್ಚಿನ ಬ್ಯಾಟಿಂಗ್‌ ಸಾಮರ್ಥ್ಯವನ್ನೇನೂ ನಿರೀಕ್ಷಿಸುವಂತಿರಲಿಲ್ಲ. ಟೆಸ್ಟ್‌ ಕ್ರಿಕೆಟ್‌ನಲ್ಲಂತೂ ಐವತ್ತರ ಮೇಲೆ ಸರಾಸರಿ ಹೊಂದಿರುವ ಬ್ಯಾಟ್ಸ್‌ಮನ್‌ ಒಬ್ಬನೂ ಇಲ್ಲ ಎಂದರೆ ಅಚ್ಚರಿಯಾಗುತ್ತದೆ ಅಲ್ಲವೇ? 

       ಅದಿರಲಿ, ನಾವು ವಿಕೆಟ್‌ಕೀಪರ್‌ಗಳ ಮಹತ್ವವನ್ನೊಮ್ಮೆ ನೋಡೋಣ. ವಿಕೆಟ್‌ ಹಿಂದೆ ನಿಂತಿರುವ ವಿಕೆಟ್‌ಕೀಪರ್‌ನ ಕೆಲಸ ಸುಲಭದ್ದಂತೂ ಅಲ್ಲ. ಪ್ರತಿಕ್ಷಣವೂ ಮೈಯೆಲ್ಲ ಕಣ್ಣಾಗಿರಬೇಕು. ಇಡೀ ಪಂದ್ಯದಲ್ಲಿ ಸೊಂಟ ಬಗ್ಗಿಸಿಕೊಂಡು ವಿಕೆಟ್‌ ಹಿಂದೆ ನಿಂತಿರಬೇಕು. ಬೇರೆ ಫೀಲ್ಡರ್‌ಗಳಿಗಾದರೂ ಬ್ಯಾಟ್ಸ್‌ಮನ್‌ ಚೆಂಡನ್ನು ಹೊಡೆದ ನಂತರ ಅವರ ಬಳಿ ಬರುವವರೆಗೆ ಕೆಲವು ಕ್ಷಣಗಳಾದರೂ ಸಮಯ ಸಿಗುತ್ತದೆ. ಆದರೆ ವಿಕೆಟ್‌ಕೀಪರ್‌ಗೆ ಅಂಥ ಸಮಯ ಸಿಗುವುದು ಬಹಳ ಕಡಿಮೆ. ಜೊತೆಗೆ ಸ್ಟಂಪಿಂಗ್‌ನ ಅವಕಾಶಗಳು ಸಹ ಸಿಕ್ಕಿದಾಗ ಬಿಡಬಾರದು. ಒಳ್ಳೆಯ ಸ್ಪಿನ್ನರ್‌ ಒಬ್ಬ ಬ್ಯಾಟ್‌ಮನ್‌ನನ್ನು ಮುಂದೆ ಬಂದು ಆಡುವಂತೆ ಪ್ರೇರೇಪಿಸಿದಾಗ ಚೆಂಡು ತಪ್ಪಿ ಕೀಪರ್‌ ಬಳಿ ಹೋದಾಗ ಅವನಿಗೆ ಕೇವಲ ಅರ್ಧ ಸೆಕೆಂಡ್‌ ಅಥವಾ ಅದಕ್ಕಿಂತ ಕಡಿಮೆ ಸಮಯ ಮಾತ್ರ ಇರುತ್ತದೆ. ಆ ಅತ್ಯಲ್ಪ ಅವಧಿಯಲ್ಲಿ ಮಿಂಚಿನಂತೆ ಬೇಲ್ಸ್‌ ಹಾರಿಸಬೇಕು. ಕಣ್ಣುಮುಚ್ಚಿ ಬಿಡುವುದರೊಳಗಾಗಿ ಈ ಪ್ರಕ್ರಿಯೆ ಮುಗಿಯಬೇಕು. ಹೆಚ್ಚು ಸಮಯ ಸಿಕ್ಕರೆ ಬ್ಯಾಟ್ಸ್‌ಮನ್‌ ಕ್ರೀಸ್‌ ಒಳಕ್ಕೆ ಬಂದುಬಿಡುತ್ತಾನೆ. ಇನ್ನು ರನೌಟ್‌ ವಿಷಯ ಬಂದರೂ ಅದರಲ್ಲಿ ಕೀಪರ್‌ನ ಪಾತ್ರ ಬಹಳ ಮಹತ್ವದ್ದಾಗಿರುತ್ತದೆ. ಇತ್ತೀಚೆಗೆ ಭಾರತ ಮತ್ತು ಇಂಗ್ಲೆಂಡ್‌ಗಳ ಟೆಸ್ಟ್‌ ಸರಣಿಯ ಮೂರನೇ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಧ್ರುವ ಜುರೇಲ್‌ ಅವರು ಬೆನ್‌ ಡಕೆಟ್‌ರನ್ನು ರನ್‌ಔಟ್‌ ಮಾಡಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಡಕೆಟ್‌ ಮರಳಿ ಕ್ರೀಸ್‌ ತಲುಪುವ ಮೊದಲೇ ಓಡಿಬಂದು ವಿಕೆಟ್‌ ಬಳಿ ಸಿದ್ಧವಾಗಿ ನಿಂತಿದ್ದ ಜುರೇಲ್‌ ಅದ್ಭುತವಾದ ರನ್‌ಔಟ್‌ ಮೂಲಕ ಇಂಗ್ಲೆಂಡ್‌ ಕುಸಿತಕ್ಕೆ ನಾಂದಿ ಹಾಡಿದ್ದರು. 

       ಇತ್ತೀಚೆಗೆ ಡಿಆರ್‌ಎಸ್‌ ಬಂದ ಮೇಲಂತೂ ವಿಕೆಟ್‌ಕೀಪರ್‌ನ ಮಹತ್ವ ಇನ್ನಿಲ್ಲದಷ್ಟು ಹೆಚ್ಚಿದೆ. ಎಲ್‌ಬಿಡಬ್ಲ್ಯು ಮತ್ತು ಕಾಟ್‌ ಬಿಹೈಂಡ್‌ ಈ ಎರಡು ಸಂದರ್ಭಗಳಲ್ಲಿ ಬೇರೆಲ್ಲರಿಗಿಂತ ಹೆಚ್ಚು ಮಹತ್ವದ ಪಾತ್ರ ವಹಿಸುವುದು ವಿಕೆಟ್‌ಕೀಪರ್‌. ಎಲ್‌ಬಿಡಬ್ಲ್ಯು ಸಂದರ್ಭದಲ್ಲಿ ಚೆಂಡು ವಿಕೆಟ್‌ ನೇರಕ್ಕೆ ಹೋಗುತ್ತಿತ್ತೇ ಅಥವಾ ವಿಕೆಟ್‌ನಿಂದ ಹೊರಕ್ಕೆ ಹೋಗುತ್ತಿತ್ತೇ, ಕ್ಯಾಚ್‌ ಹಿಡಿದ ಸಂದರ್ಭದಲ್ಲಿ ಚೆಂಡು ಬ್ಯಾಟ್‌ ಅಥವಾ ಗ್ಲೌಸ್‌ಗೆ ತಾಗಿತ್ತೇ ಅಥವಾ ಇಲ್ಲವೇ ಈ ವಿಷಯಗಳನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿ ಡಿಆರ್‌ಎಸ್‌ ತೆಗೆದುಕೊಳ್ಳಬೇಕೋ ಬೇಡವೋ ಎನ್ನುವುದನ್ನು ವಿಕೆಟ್‌ಕೀಪರ್‌ ನಾಯಕನಿಗೆ ಹೇಳುತ್ತಾನೆ. ದೋನಿ ಇದರಲ್ಲೂ ಸಹ ಪರಿಣತರಾಗಿದ್ದರು. ಅವರು ತೆಗೆದುಕೊಂಡಿದ್ದ ಡಿಆರ್‌ಎಸ್‌ ನಿರ್ಧಾರಗಳು ತಪ್ಪಾಗಿದ್ದು ಬಹಳ ಕಡಿಮೆ. ಆದ್ದರಿಂದ ಡಿಆರ್‌ಎಸ್‌ನ್ನು ದೋನಿ ರಿವ್ಯೂ ಸಿಸ್ಟಮ್‌ ಎಂದು ಸಹ ಕರೆಯುತ್ತಿದ್ದರು!

       ಇಪ್ಪತ್ತನೇ ಶತಮಾನದ ವಿಕೆಟ್‌ಕೀಪರ್‌ಗಳನ್ನು ಗಮನಿಸಿ. ಆಸ್ಟ್ರೇಲಿಯಾದ ರಾಡ್ನಿ ಮಾರ್ಷ್‌ ಮತ್ತು ಇಯಾನ್‌ ಹೀಲಿ ಅವರಿಬ್ಬರು ಕ್ರಮವಾಗಿ 355 ಹಾಗೂ 395 ಬಲಿಗಳನ್ನು ತೆಗೆದುಕೊಳ್ಳುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಧಿಕ ಬಲಿಗಳನ್ನು ತೆಗೆದುಕೊಂಡ ವಿಕೆಟ್‌ಕೀಪರ್‌ಗಳೆನ್ನಿಸಿಕೊಂಡಿದ್ದರು. ಆದರೆ ಅವರಿಬ್ಬರೂ ಬ್ಯಾಟಿಂಗ್‌ನಲ್ಲಿ ಹೇಳಿಕೊಳ್ಳುವಂತ ಸಾಧನೆ ಮಾಡಿದವರಲ್ಲ. ನಮ್ಮಲ್ಲಿ ಕೂಡ ಫಾರೂಕ್‌ ಎಂಜಿನಿಯರ್‌, ಸಯ್ಯದ್‌ ಕಿರ್ಮಾನಿ, ಕಿರಣ್‌ ಮೋರೆ, ನಯನ್‌ ಮೊಂಗಿಯಾ ಹೀಗೆ ಅನೇಕ ವಿಕೆಟ್‌ಕೀಪರ್‌ಗಳು ಬಂದರೂ ಅವರ್ಯಾರೂ ಬ್ಯಾಟಿಂಗ್‌ನಲ್ಲಿ ನಂಬಿಕಸ್ಥರಾಗಿರಲಿಲ್ಲ. ಅದರಲ್ಲೂ ಮೊಂಗಿಯಾ ನಿರ್ಗಮನದ ಬಳಿಕ ದೋನಿ ಬರುವವರೆಗೆ ಭಾರತ ವಿಕೆಟ್‌ಕೀಪರ್‌ಗಳ ವಿಷಯದಲ್ಲಿ ಅನುಭವಿಸಿದ ಪಾಡು ಹೇಳತೀರದು. ಆ ಐದಾರು ವರ್ಷಗಳ ಅವಧಿಯಲ್ಲಿ ಎಂಎಸ್‌ಕೆ ಪ್ರಸಾದ್‌, ಸಾಬಾ ಕರೀಂ, ಸಮೀರ್‌ ದಿಘೆ, ದೀಪ್‌ದಾಸ್‌ಗುಪ್ತಾ, ಅಜಯ್‌ ರಾತ್ರಾ, ಪಾರ್ಥಿವ್‌ ಪಟೇಲ್‌, ವಿಜಯ್‌ ದಹಿಯಾ ಹೀಗೆ ಅನೇಕ ವಿಕೆಟ್‌ಕೀಪರ್‌ಗಳು ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ಹಾಜರಿ ಹಾಕಿಹೋದರು. ಕಡೆಗೆ ಎಂಥ ಪರಿಸ್ಥಿತಿ ಬಂತೆಂದರೆ ಒಳ್ಳೆಯ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಇಲ್ಲದೆ ರಾಹುಲ್‌ ದ್ರಾವಿಡ್‌ಗೆ ಗ್ಲೌಸ್‌ ತೊಡಿಸಿ ನಿಲ್ಲಿಸಬೇಕಾಯಿತು. 2003ರ ವಿಶ್ವಕಪ್‌ ಉದ್ದಕ್ಕೂ ದ್ರಾವಿಡ್‌ ಅವರೇ ಕೀಪಿಂಗ್‌ ಜವಾಬ್ದಾರಿ ನಿಭಾಯಿಸಿದ್ದರು. ಕೀಪಿಂಗ್‌ ಮತ್ತು ಬ್ಯಾಟಿಂಗ್‌ ಎರಡರಲ್ಲೂ ಸೈ ಎನ್ನಿಸಿಕೊಂಡಿದ್ದರು. ಆದರೆ ಟೆಸ್ಟ್‌ಗಳಲ್ಲಿ ಮೂರನೇ ಕ್ರಮಾಂಕದಲ್ಲಿ ತಂಡದ ಪ್ರಮುಖ ಆಧಾರ ಸ್ತಂಭವಾಗಿದ್ದ ಅವರ ಮೇಲೆ ವಿಕೆಟ್‌ಕೀಪಿಂಗ್‌ ಹೊಣೆ ಹೊರಿಸುವಂತಿರಲಿಲ್ಲ. ಅದರಿಂದ ಅವರ ಬ್ಯಾಟಿಂಗ್‌ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇತ್ತು. ಆದ್ದರಿಂದ ಟೆಸ್ಟ್‌ನಲ್ಲಿ ಬ್ಯಾಟಿಂಗ್‌ ಬರದಿದ್ದರೂ ಅನಿವಾರ್ಯವಾಗಿ ವಿಕೆಟ್‌ ಕಾಯಲೆಂದು ಒಬ್ಬನನ್ನು ಇಟ್ಟುಕೊಳ್ಳುತ್ತಿದ್ದರು. ದೋನಿ ಬಂದಮೇಲೆಯೇ ಈ ಪರಿಸ್ಥಿತಿ ಬದಲಾಗಿದ್ದು. 

       ಆದರೆ ಇದು ಭಾರತ ತಂಡವೊಂದರ ಸಮಸ್ಯೆಯಾಗಿರಲಿಲ್ಲ. ಜಗತ್ತಿನ ಹೆಚ್ಚಿನೆಲ್ಲ ತಂಡಗಳ ಪರಿಸ್ಥಿತಿ ಇದೇ ಆಗಿತ್ತು. ಕೆಲವೇ ಕೆಲವು ವಿಕೆಟ್‌ಕೀಪರ್‌ಗಳಷ್ಟೇ ಮೂವತ್ತಕ್ಕಿಂತ ಹೆಚ್ಚಿನ ಬ್ಯಾಟಿಂಗ್‌ ಸರಾಸರಿ ಹೊಂದಿದ್ದರು. ಅದರಲ್ಲಿ ಎದ್ದುಕಾಣುವ ಹೆಸರೆಂದರೆ ಜಿಂಬಾಬ್ವೆಯ ಆಂಡಿ ಫ್ಲವರ್.‌ ಫ್ಲವರ್‌ ಸಹೋದರರಲ್ಲಿ ಹಿರಿಯರಾದ ಅವರು ಟೆಸ್ಟ್‌ ಮತ್ತು ಏಕದಿನ ಎರಡೂ ವಿಭಾಗಗಳಲ್ಲೂ ವಿಕೆಟ್‌ಕೀಪಿಂಗ್‌ ಮಾಡುತ್ತಿದ್ದರೂ ಪರಿಣತ ಬ್ಯಾಟ್ಸ್‌ಮನ್‌ನಂತೆಯೇ ಆಡುತ್ತಿದ್ದರು. ಟೆಸ್ಟ್‌ನಲ್ಲಿ 51.5ರ ಸರಾಸರಿ ಹೊಂದಿದ್ದ ಅವರು, ಇವತ್ತಿಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಐವತ್ತಕ್ಕಿಂತ ಹೆಚ್ಚಿನ ಸರಾಸರಿ ಹೊಂದಿರುವ ಏಕೈಕ ವಿಕೆಟ್‌ಕೀಪರ್‌ ಎಂಬ ಖ್ಯಾತಿಯನ್ನು ಉಳಿಸಿಕೊಂಡಿದ್ದಾರೆ. ಏಕದಿನದಲ್ಲಿ ಸಹ 35.3ರ ಸರಾಸರಿ ಹೊಂದಿದ್ದರು. ಕ್ರಿಕೆಟ್‌ ಜಗತ್ತು ಕಂಡ ಅತ್ಯುತ್ತಮ ವಿಕೆಟ್‌ಕೀಪರ್‌-ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅವರಿಗೆ ಖಂಡಿತವಾಗಿಯೂ ಒಂದು ಶಾಶ್ವತವಾದ ಸ್ಥಾನವಿದೆ. 

       ಇನ್ನೊಬ್ಬ ಗಮನಾರ್ಹ ವಿಕೆಟ್‌ಕೀಪರ್‌-ಬ್ಯಾಟ್ಸ್‌ಮನ್‌ ಎಂದರೆ ಇಂಗ್ಲೆಂಡಿನ ಅಲೆಕ್‌ ಸ್ಟಿವರ್ಟ್.‌ 133 ಟೆಸ್ಟ್‌ ಪಂದ್ಯಗಳನ್ನಾಡಿರುವ ಅವರು ಅದರಲ್ಲಿ 82ರಲ್ಲಿ ವಿಕೆಟ್‌ಕೀಪರ್‌ ಆಗಿ ಕಾರ್ಯನಿರ್ವಹಿಸಿದ್ದರು. ಅವರ ಸರಾಸರಿ ಕೀಪರ್‌ ಆಗಿದ್ದಾಗ 34.92 ಆಗಿದೆ. ಅವರ ಒಟ್ಟಾರೆ ಸರಾಸರಿ 39.54 ಆಗಿದ್ದು, 8463 ರನ್‌ ಗಳಿಸಿರುವ ಅವರು ಟೆಸ್ಟ್‌ಗಳಲ್ಲಿ ಒಂದೇ ಒಂದು ದ್ವಿಶತಕವಿಲ್ಲದೆ 8000 ರನ್‌ ಗಳಿಸಿದ ಏಕೈಕ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಜೊತೆಗೆ 8000 ರನ್‌ ಗಡಿ ದಾಟಿದವರ ಪೈಕಿ ಅತ್ಯಂತ ಕಡಿಮೆ ಸರಾಸರಿ ಅವರದ್ದೇ ಆಗಿದೆ. ಹಾಗಿದ್ದೂ ಅವರೊಬ್ಬ ಅತ್ಯುತ್ತಮ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್‌ ಎನ್ನುವುದರಲ್ಲಿ ಅನುಮಾನವಿಲ್ಲ.

       ವಿಕೆಟ್‌ಕೀಪರ್‌-ಬ್ಯಾಟ್ಸ್‌ಮನ್‌ಗಳ ಪಾತ್ರಕ್ಕೆ ಹೊಸ ಮೆರುಗು ಕೊಟ್ಟ ಖ್ಯಾತಿ ಆಸ್ಟ್ರೇಲಿಯಾದ ದಿಗ್ಗಜ ಆಡಮ್‌ ಗಿಲ್‌ಕ್ರಿಸ್ಟ್‌ ಅವರಿಗೆ ಸಲ್ಲಬೇಕು. ಏಕದಿನ ಪಂದ್ಯಗಳಲ್ಲಿ ಆರಂಭಿಕನಾಗಿ ಹಾಗೂ ಟೆಸ್ಟ್‌ಗಳಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದ ಅವರು ಬಂದಕೂಡಲೇ ಬೌಲರ್‌ಗಳನ್ನು ಚಚ್ಚುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಏಕದಿನ ಪಂದ್ಯಗಳಲ್ಲಿ 96 ಹಾಗೂ ಟೆಸ್ಟ್‌ನಲ್ಲಿ 81ಕ್ಕೆ ಮೀರಿದ ಸ್ಟ್ರೈಕ್‌ರೇಟ್‌ ಹೊಂದಿದ್ದ ಅವರು, ಈ ಸಾಧನೆ ಮಾಡಿರುವ ವಿಶ್ವದ ಕೇವಲ ಇಬ್ಬರು ಬ್ಯಾಟ್ಸ್‌ಮನ್‌ಗಳ ಪೈಕಿ ಒಬ್ಬರು. (ಇನ್ನೊಬ್ಬರು ನಮ್ಮ ವೀರೇಂದ್ರ ಸೆಹ್ವಾಗ್). ಅದರೊಂದಿಗೇ ಬಿರುಸಿನ ಬ್ಯಾಟಿಂಗ್‌ ಮಾಡಬಲ್ಲ ಕೀಪರ್‌ಗಳ ಯುಗವೂ ಆರಂಭವಾಯಿತು. ನಮ್ಮ ದೋನಿ ಮತ್ತು ನ್ಯೂಜಿಲೆಂಡಿನ ಬ್ರೆಂಡನ್‌ ಮೆಕಲಂ ಇವರಲ್ಲಿ ಪ್ರಮುಖರು. ಇದಕ್ಕೊಂದು ಅಪವಾದವೆಂಬಂತೆ ಶ್ರೀಲಂಕಾದ ಕುಮಾರ ಸಂಗಕ್ಕರ ಅವರು ನಮ್ಮ ದ್ರಾವಿಡ್‌ರಂತೆ ಕಲಾತ್ಮಕ ಬ್ಯಾಟ್ಸ್‌ಮನ್‌ ಆಗಿ ಗಮನಸೆಳೆಯತೊಡಗಿದರು. ಅವರ ಬ್ಯಾಟಿಂಗ್‌ನಲ್ಲಿ ದೋನಿ ಅಥವಾ ಮೆಕ್ಲಮ್‌ ಅವರಂಥ ಅಬ್ಬರವಿರುತ್ತಿರಲಿಲ್ಲ. ಆದರೆ ಅವರೆಷ್ಟು ಪ್ರಮುಖ ಬ್ಯಾಟ್ಸ್‌ಮನ್‌ ಆಗಿ ಬೆಳೆದರೆಂದರೆ ಶ್ರೀಲಂಕಾದವರು ಟೆಸ್ಟ್‌ನಲ್ಲಿ ಅವರನ್ನು ಕೀಪಿಂಗ್‌ ಜವಾಬ್ದಾರಿಯಿಂದ ಮುಕ್ತಗೊಳಿಸಿ ಬ್ಯಾಟ್ಸ್‌ಮನ್‌ ಆಗಿ ಉಳಿಸಿಕೊಂಡರು. ಅಚ್ಚರಿಯ ವಿಷಯವೆಂದರೆ ಇಂದಿನ ಏಕದಿನ ಕ್ರಿಕೆಟ್‌ಗೆ ಹೊಂದದ ಶೈಲಿ ಅವರದ್ದಾಗಿದ್ದರೂ ಸಚಿನ್‌ ತೆಂಡೂಲ್ಕರ್‌ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಗಳಿಸಿದವರ ಪಟ್ಟಿಯಲ್ಲಿ ಸಂಗಕ್ಕರ ಎರಡನೆಯವರಾಗಿದ್ದಾರೆ! ಇನ್ನೊಂದು ಗಮನಾರ್ಹ ವಿಷಯವೆಂದರೆ ಏಕದಿನ ಪಂದ್ಯಗಳಲ್ಲಿ ಅವರು ನಿವೃತ್ತಿಯವರೆಗೂ ಕೀಪಿಂಗ್‌ ಜವಾಬ್ದಾರಿಯನ್ನು ನಿರ್ವಹಿಸಿದ್ದರು! ಅಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಸತತ ನಾಲ್ಕು ಶತಕಗಳನ್ನು ಗಳಿಸಿರುವ ಜಗತ್ತಿನ ಏಕಮಾತ್ರ ಬ್ಯಾಟರ್‌ ಅವರು.

       ದಕ್ಷಿಣ ಆಫ್ರಿಕದ ಮಾರ್ಕ್‌ ಬೌಷರ್‌ ಸಹ ಗಿಲ್‌ಕ್ರಿಸ್ಟ್‌ ಅವರ ಸಮಕಾಲೀನರಾಗಿದ್ದರು. ಆದರೆ ಗಿಲ್‌ಕ್ರಿಸ್ಟ್‌ಗಿಂತ ಮೊದಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬಂದ ಬೌಷರ್‌ ಗಿಲ್‌ಕ್ರಿಸ್ಟ್‌ ನಿವೃತ್ತರಾದಮೇಲೂ ತಂಡದಲ್ಲಿದ್ದರು. ಟೆಸ್ಟ್‌ನಲ್ಲಿ 555, ಏಕದಿನ ಪಂದ್ಯಗಳಲ್ಲಿ 425 ಹಾಗೂ 20-20ಯಲ್ಲಿ 19 ಸೇರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 999 ಬಲಿ ಪಡೆದಿರುವ ಅವರ ದಾಖಲೆಯನ್ನು ಸದ್ಯಕ್ಕಂತೂ ಯಾವ ಕೀಪರ್‌ ಕೂಡ ಮುರಿಯಲಾರ ಎಂದು ಧೈರ್ಯವಾಗಿ ಹೇಳಬಹುದು. ದುರದೃಷ್ಟವಶಾತ್‌ 2012ರ ಇಂಗ್ಲೆಂಡ್‌ ಪ್ರವಾಸದಲ್ಲಿ ಅಭ್ಯಾಸದ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ ಬೌಲ್ಡ್‌ ಆದಾಗ ಬೇಲ್ಸ್‌ ಹಾರಿ ಕಣ್ಣಿಗೆ ತಗುಲಿದ್ದರಿಂದ ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡು ನಿವೃತ್ತರಾಗಬೇಕಾಯಿತು. ಇಲ್ಲವಾದರೆ ಇನ್ನೊಂದೆರಡು ವರ್ಷ ಆಡುವ ಸಾಮರ್ಥ್ಯ ಅವರಲ್ಲಿತ್ತು. ಸಾವಿರ ಬಲಿಗಳನ್ನು ಪಡೆದ ಮೊದಲ ಕೀಪರ್‌ ಎಂಬ ದಾಖಲೆ ಮಾಡುವ ಅವಕಾಶ ಅವರಿಗಿತ್ತು. ಅವರ ಬ್ಯಾಟಿಂಗ್‌ ದೋನಿ ಅಥವಾ ಗಿಲ್‌ಕ್ರಿಸ್ಟ್‌ ಅವರಷ್ಟು ಉತ್ತಮವಾಗಿರದಿದ್ದರೂ ಕೀಪಿಂಗ್‌ನಲ್ಲಿ ಅವರೊಂದು ದಂತಕಥೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಏಕದಿನ ಕ್ರಿಕೆಟ್‌ನಲ್ಲಿ ಏಕಮಾತ್ರ ಶತಕ ದಾಖಲಿಸಿರುವ ಅವರ ಆ ಶತಕ ಇಂದಿಗೂ ನಾಲ್ಕನೇ ಅತಿವೇಗದ ಶತಕವಾಗಿ ದಾಖಲೆಯಲ್ಲಿದೆ. ಜಿಂಬಾಬ್ವೆ ವಿರುದ್ಧ ಕೇವಲ 44 ಎಸೆತಗಳಲ್ಲಿ ಈ ಶತಕವನ್ನು ಅವರು ದಾಖಲಿಸಿದ್ದರು. 

       ಬೌಷರ್‌ ನಿವೃತ್ತರಾಗುವ ಹೊತ್ತಿಗೆ ಕ್ವಿಂಟನ್‌ ಡಿಕಾಕ್‌ ಪ್ರವರ್ಧಮಾನಕ್ಕೆ ಬಂದಿದ್ದರು. ಅವರೂ ಅತ್ಯುತ್ತಮ ಕೀಪರ್‌ ಆಗಿದ್ದರೂ ತಮ್ಮ ಬಿಡುಬೀಸಾದ ಬ್ಯಾಟಿಂಗ್‌ ಶೈಲಿಯಿಂದಲೇ ಹೆಚ್ಚು ಗಮನಸೆಳೆದವರು. 2016ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಂಚುರಿಯನ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 295 ರನ್‌ಗಳ ಗುರಿಯನ್ನು ಬೆನ್ನತ್ತಿತ್ತು. ಅಲ್ಲಿ ಡಿಕಾಕ್‌ ಕೇವಲ 113 ಎಸೆತಗಳಲ್ಲಿ 16 ಬೌಂಡರಿ, 11 ಸಿಕ್ಸರ್‌ಗಳ ಸಮೇತ 178 ರನ್‌ ಚಚ್ಚಿದರು. ಆ ಇನಿಂಗ್ಸ್‌ ಏಕದಿನ ಕ್ರಿಕೆಟ್‌ನ ಸ್ಮರಣೀಯ ಇನಿಂಗ್ಸ್‌ಗಳಲ್ಲೊಂದು. ಏಕದಿನ ಕ್ರಿಕೆಟ್‌ನಲ್ಲಿ 45ರ ಸರಾಸರಿ ಹಾಗೂ 96ರ ಸ್ಟ್ರೈಕ್‌ರೇಟ್‌ ಹೊಂದಿರುವ ಇವರು ತಂಡದ ಆರಂಭಿಕರಾಗಿಯೂ ಕಣಕ್ಕಿಳಿಯುತ್ತಾರೆ. 

       ಈ ನಡುವೆ ಡಿಕಾಕ್‌ ಅನುಪಸ್ಥಿತಿಯಲ್ಲಿ ಮಿಸ್ಟರ್‌ 360 ಖ್ಯಾತಿಯ ಎಬಿಡಿ ವಿಲಿಯರ್ಸ್‌ ಅನೇಕ ಪಂದ್ಯಗಳಲ್ಲಿ ಕೀಪಿಂಗ್‌ ಜವಾಬ್ದಾರಿ ನಿರ್ವಹಿಸಿದ್ದಾರೆ. ಸಿಡಿಲಬ್ಬರದ ಬ್ಯಾಟ್ಸ್‌ಮನ್‌ ಹಾಗೂ ಅಮೋಘ ಫೀಲ್ಡರ್‌ ಆಗಿ ಹೆಸರುವಾಸಿಯಾದ ಡಿವಿಲಿಯರ್ಸ್‌ರ ಕೀಪಿಂಗ್‌ ಅಷ್ಟು ಸದ್ದು ಮಾಡದಿರಲು ಅವರ ಬ್ಯಾಟಿಂಗ್‌ ಹಾಗೂ ಫೀಲ್ಡಿಂಗ್‌ನ ಖ್ಯಾತಿ ಕಾರಣವೇ ಹೊರತು ಕೀಪಿಂಗ್‌ನಲ್ಲಿ ಅವರು ದುರ್ಬಲರಾಗಿರಲಿಲ್ಲ. 

       ಸ್ಫೋಟಕ ಕೀಪರ್-ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡಿನ ಜೋಸ್‌ ಬಟ್ಲರ್‌ ಅವರ ಹೆಸರನ್ನು ಹೇಳಲೇಬೇಕು. ಟೆಸ್ಟ್‌ನಲ್ಲಿ ಅವರು ಅಷ್ಟೊಂದು ಸದ್ದು ಮಾಡದಿದ್ದರೂ ಏಕದಿನ ಹಾಗೂ 20-20ಯಲ್ಲಿ ತಮ್ಮ ಸ್ಫೋಟಕ ಆಟದಿಂದ ಗಮನ ಸೆಳೆದವರು. ಐಪಿಎಲ್‌ನಲ್ಲೂ ಬಟ್ಲರ್‌ ಅವರು ಜೋರಾಗಿಯೇ ಸದ್ದು ಮಾಡಿದ್ದರು. ಕೆಲವು ವರ್ಷಗಳ ಹಿಂದೆ ನಮ್ಮ ಆಶ್ವಿನ್‌ ಅವರು ಮಂಕಡಿಂಗ್‌ ಮೂಲಕ ಬಟ್ಲರ್‌ರನ್ನು ರನ್‌ಔಟ್‌ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.

       ಮೊದಲೆಲ್ಲ ತಂಡವೊಂದರ ನಾಯಕನಾಗಬೇಕಾದರೆ ಆತ ಪರಿಣತ ಬ್ಯಾಟ್ಸ್‌ಮನ್‌ ಆಗಿರಬೇಕಿತ್ತು. ಬೌಲರ್‌ಗಳಿಗಾಗಲೀ ಆಲ್‌ರೌಂಡರ್‌ಗಳಿಗಾಗಲೀ ತಂಡದ ನಾಯಕತ್ವ ದೊರೆಯುವುದು ದುಸ್ತರವಾಗಿತ್ತು. ವಿಕೆಟ್‌ಕೀಪರ್‌ಗಳಿಗಂತೂ ನಾಯಕತ್ವ ಕನಸಿನ ಮಾತೇ ಆಗಿತ್ತು. ಪಾಕಿಸ್ತಾನ ತಂಡದ ರಶೀದ್‌ ಲತೀಫ್‌ ಮತ್ತು ಮೊಯಿನ್‌ ಖಾನ್‌ ಕೆಲವು ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದರು. ಇಂಗ್ಲೆಂಡಿನ ಅಲೆಕ್‌ ಸ್ಟಿವರ್ಟ್‌ ಹನ್ನೆರಡು ಟೆಸ್ಟ್‌ಗಳಲ್ಲಿ ನಾಯಕತ್ವ ವಹಿಸಿದ್ದರು. ಆದರೆ ವಿಕೆಟ್‌ ಕೀಪರ್-ನಾಯಕರ ಪಟ್ಟಿಯಲ್ಲಿ ಇಂದಿಗೂ ಮೊದಲ ಸ್ಥಾನದಲ್ಲಿರುವುದು ಭಾರತದ ದೋನಿ. ಅರವತ್ತು ಟೆಸ್ಟ್‌ಗಳಲ್ಲಿ ನಾಯಕರಾಗಿರುವ ಅವರ ನಂತರದ ಸ್ಥಾನದಲ್ಲಿರುವ ಬಾಂಗ್ಲಾದೇಶದ ಮುಷ್ಫಿಕುರ್‌ ರಹೀಮ್‌ ತಂಡವನ್ನು ಮುನ್ನಡೆಸಿರುವುದು ಕೇವಲ ಇಪ್ಪತ್ತೆಂಟು ಟೆಸ್ಟ್‌ಗಳಲ್ಲಿ. ನಂತರದ ಸ್ಥಾನ 23 ಟೆಸ್ಟ್‌ಗಳಿಗೆ ನಾಯಕನಾದ ಆಸ್ಟ್ರೇಲಿಯಾದ ಟಿಮ್‌ ಪೈನ್‌ ಅವರಿಗೆ ಸಲ್ಲುತ್ತದೆ. ಆದರೆ ದೋನಿಯಷ್ಟು ದೀರ್ಘಕಾಲ ನಾಯಕರಾಗಿದ್ದ ವಿಕೆಟ್‌ಕೀಪರ್‌ಗಳು ಬೇರೆ ಯಾರೂ ಇಲ್ಲ. ಉಳಿದಂತೆ ಶ್ರೀಲಂಕಾದ ಕುಮಾರ ಸಂಗಕ್ಕರ, ನ್ಯೂಜಿಲೆಂಡಿನ ಬ್ರೆಂಡನ್‌ ಮೆಕ್ಲಮ್‌, ಜಿಂಬಾಬ್ವೆಯ ಬ್ರೆಂಡನ್‌ ಟೇಲರ್‌, ತಟೆಂಡ ಟೈಬು, ಆಂಡಿ ಫ್ಲವರ್‌, ಪಾಕಿಸ್ತಾನದ ಸರ್ಫರಾಜ್‌ ಅಹ್ಮದ್‌, ಆಸ್ಟ್ರೇಲಿಯಾದ ಆಡಂ ಗಿಲ್‌ಕ್ರಿಸ್ಟ್‌, ದಕ್ಷಿಣ ಆಫ್ರಿಕದ ಮಾರ್ಕ್‌ ಬೌಷರ್‌, ಮೊದಲಾದವರೆಲ್ಲ ಕೆಲವು ಪಂದ್ಯಗಳಿಗೆ ತಂಡವನ್ನು ಮುನ್ನಡೆಸಿದ್ದಾರೆ. 

       ಒಟ್ಟಿನಲ್ಲಿ ವಿಕೆಟ್‌ಕೀಪರ್‌ಗಳು ಕ್ರಿಕೆಟ್‌ನಲ್ಲಿ ಬಹಳ ದೂರದ ಹಾದಿಯನ್ನೇ ಕ್ರಮಿಸಿದ್ದಾರೆ ಎನ್ನಲಡ್ಡಿಯಿಲ್ಲ. ಬ್ಯಾಟಿಂಗ್‌ ಬರದಿದ್ದರೂ ವಿಕೆಟ್‌ಕೀಪರ್‌ ಒಬ್ಬ ಬೇಕೇಬೇಕೆಂಬ ಕಾರಣದಿಂದ ತಂಡದಲ್ಲಿ ಜಾಗ ಪಡೆಯುತ್ತಿದ್ದವರಿಂದ ಇಂದು ಬೇರೆ ವಿಕೆಟ್‌ಕೀಪರ್‌ ಇದ್ದರೂ ಪರಿಣತ ಬ್ಯಾಟ್ಸ್‌ಮನ್‌ ಆಗಿಯೇ ತಂಡದಲ್ಲಿ ಸ್ಥಾನ ಪಡೆಯುವಷ್ಟರಮಟ್ಟಿಗೆ ಕೀಪರ್‌ಗಳು ಬೆಳೆದಿದ್ದಾರೆ. ನಮ್ಮ ದಿನೇಶ್‌ ಕಾರ್ತಿಕ್‌, ಸಂಜು ಸ್ಯಾಮ್ಸನ್‌ ಮತ್ತು ಇಶಾನ್‌ ಕಿಶನ್‌ ಅವರು ಕೆಲವೊಮ್ಮೆ ಕೇವಲ ಬ್ಯಾಟರ್‌ ಆಗಿ ಆಡಿದ್ದಿದೆ. ಶ್ರೀಲಂಕಾದ ಕುಮಾರ ಸಂಗಕ್ಕರ ಇವರೆಲ್ಲ ಅನೇಕ ಸಂದರ್ಭಗಳಲ್ಲಿ ಕೇವಲ ಬ್ಯಾಟರ್‌ ಆಗಿ ಆಡಿದ್ದಾರೆ. ಹೀಗೆ ಕೀಪರ್‌ಗಳು ಇಂದು ತಂಡದ ಅವಿಭಾಜ್ಯ ಅಂಗಗಳಾಗಿದ್ದಾರೆ.

Category:Sports



ProfileImg

Written by Srinivasa Murthy

Verified