ನಾನು ಭಾರತದ ರಾಷ್ಟ್ರ ಪ್ರಾಣಿ.ಹಾಗಾಗಿ ನನಗೆ ವಿಶೇಷ ಗೌರವವಿದೆ. ಹಾಂ! ನಾನು ಯಾರು ಅಂತ ಗೊತ್ತಾಗಿರಬೇಕಲ್ವ!. ನಾನೊಂದು ಹುಲಿ.ಅರೆ! ನಾನ್ಯಾವಾಗ ಮನುಷ್ಯರ ಜೊತೆ ಮಾತನಾಡಲು ಶುರು ಮಾಡಿದೆ ಅಂತ ಅಂದ್ಕೊಂಡ್ರಾ? ಏನ್ಮಾಡಲಿ ನನ್ನ ಕಷ್ಟ ಸುಖ ನಿಮ್ಮ ಹತ್ರ ಹಂಚಿಕೊಳ್ಳುವ ಮನಸಾಯಿತು. " ಹಬ್ಬಿದಾ ಮಲೆ ಮಧ್ಯದೊಳಗೆ, ಅರ್ಬುದಾನೆಂದೆಂಬ ವ್ಯಾಘ್ರನು.."ಅಂತ ಕವಿಯೊಬ್ಬರು "ಪುಣ್ಯಕೋಟಿ" ಪದ್ಯದಲ್ಲಿ ನಮ್ಮ ಬಗ್ಗೆ ವರ್ಣಿಸಿದ್ದಾರೆ. ಅತ್ಯಂತ ಕ್ರೂರಿ,ನಿರ್ದಯಿ ಪ್ರಾಣಿಯೆನಿಸಿಕೊಂಡಿದ್ದ ಹುಲಿಗೂ ದಯೆ,ಕರುಣೆ ಇದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅದಕ್ಕೇ ಇರಬಹುದು ಈ ಹಾಡನ್ನು ಈಗಲೂ ಪ್ರಾಥಮಿಕ ಶಾಲಾ ಪಠ್ಯದಲ್ಲಿ ಅಳವಡಿಸಿರುವುದು.
ನನಗೆ ತುಂಬಾ ಬೇಸರವೆಂದರೆ ಹಿಂದೆ ನಮ್ಮವರ ಸಂಖ್ಯೆ ಹೆಚ್ಚಿತ್ತು. ದಟ್ಟ ಹಸುರಿನ ಕಾನನಗಳೇ ನಮ್ಮ ವಾಸಸ್ಥಳಗಳಾಗಿದ್ದವು.ಹಸಿದಾಗ ಬೇಟೆಯಾಡಿ ಬಿಸಿರಕ್ತದ ಸವಿ ಉಣ್ಣುತ್ತಿದ್ದೆವು. ಸಂಜೆ ಯ ವೇಳೆಯಲ್ಲಿ ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದ ಕಾಲವೊಂದಿತ್ತು. ಆದರೆ...ಈಗ ಕಾಲ ಬದಲಾಗಿದೆ.ಹಚ್ಚಹಸುರಿನ ಕಾನನ ಕಣ್ಮರೆಯಾಗಿದೆ. ಈಗ ಏನಿದ್ದರೂ ಆಗಸದೆತ್ತರದ ಕಟ್ಟಡಗಳ ಯುಗ.ಒಂದು ಕಾಲದಲ್ಲಿ ನಮಗೆ ಹೆದರುತ್ತಿದ್ದ ಈ ಮಾನವ ನಮ್ಮ ವಾಸಸ್ಥಾನಗಳಿಗೆ ಕೊಳ್ಳಿ ಇಟ್ಟ.ಬೇಟೆಯ ಹೆಸರಿನಲ್ಲಿ ನಮ್ಮ ಸಂತತಿ ಕ್ಷೀಣಿಸುತ್ತಾ ಬಂತು.ಊರಿನಲ್ಲಿ ಯಾರದರೂ ಹುಲಿ ಕೊಂದರು ಎಂದರೆ,ಊರಲ್ಲೆಲ್ಲಾ ಸತ್ತ ಹುಲಿಯ ಮೆರವಣಿಗೆ ಸಾಗುತ್ತಿತ್ತು . ಹುಲಿ ಕೊಂದವರು ತಮ್ಮ ಶೌರ್ಯ ದ ನೆನಪಿಗಾಗಿ ಸತ್ತ ಹುಲಿಯ ಮೇಲೆ ಕಾಲಿಟ್ಟು ಕೋವಿ ಹಿಡಿದು ಠೀವಿಯಿಂದ ನಿಂತು ಫೋಟೊ ತೆಗೆಸಿ ದೊಡ್ಡದಾಗಿ ಫ್ರೇಮ್ ಹಾಕಿಸಿ ಮನೆಯ ಚಾವಡಿಯಲ್ಲಿ ತೂಗುಹಾಕುತ್ತಿದ್ದರು. ಆದರೆ ಈ ಬೇಟೆಯ ನೆಪದಲ್ಲಿ ಅದೆಷ್ಟೋ ಹುಲಿ ಮರಿಗಳು ತಬ್ಬಲಿಗಳಾದವು.
ಅಂದ ಹಾಗೆ... ನೀವು " ನರಭಕ್ಷಕ" ಎಂಬ ಪದ ಕೇಳಿದ್ದೀರಲ್ವ? ನಾವು ಮೂಲತಃ ನರಭಕ್ಷಕ ರಲ್ಲ. ಇದಕ್ಕೆ ಪ್ರಮುಖ ಕಾರಣ ಈ ಮಾನವ.ಬೇಟೆಯ ಹೆಸರಿನಲ್ಲಿ ಗುಂಡೇಟು ತಗುಲಿ ಅಲ್ಲಸ್ವಲ್ಪ ಗಾಯಗೊಂಡು,ಅಂಗ ಊನವಾದ ಹುಲಿ,ಪ್ರಾಣಿಗಳನ್ನು ಬೇಟೆಯಾಡಲು ಸಾಧ್ಯ ವಾಗದೇ ದನ ಕಾಯುವವರನ್ನೋ,ಕಟ್ಟಿಗೆಗಾಗಿ ಬರುವವರನ್ನೋ ಹಿಡಿದು ತಿನ್ನಲು ಪ್ರಾರಂಭಿಸುತ್ತದೆ. ಒಮ್ಮೆ ನರರಕ್ತದ ರುಚಿ ಸಿಕ್ಕಿದರೆ ಮತ್ತೆ ಆ ಊರಿನವರ ಕಥೆ ಮುಗಿಯಿತೆಂದೇ ಅರ್ಥ! ಈಗ ಹೇಳಿ ಹೊಟ್ಟೆಪಾಡಿಗಾಗಿ ನಾವು ನರಭಕ್ಷಕರಾಗುವುದು ತಪ್ಪೇ...?ನಮಗೂ ನಮ್ಮ ಜೀವದ ಮೇಲೆ ಆಸೆಯಿಲ್ಲವೇ..?
ನೀವು ಯಾವತ್ತಾದರೂ ಶಿಕಾರಿ ಕಥೆಗಳನ್ನು ಓದಿದ್ದೀರಾ?ಇಲ್ಲದಿದ್ದರೆ ಒಮ್ಮೆ ಓದಿ ನೋಡಿ. ಓದುಗರಿಗೆ ಮೈ ಜುಂ ಎನಿಸುವ ರೋಚಕ, ಭಯಾನಕ ಕಥೆಗಳ ಮಹಾಪೂರವೇ ಹರಿದುಬರುತ್ತದೆ. ನನಗೆ ಈಗಲೂ ಹುಲಿ ಬೇಟೆಗಾರ ಕೆನೆತ್ ಆಂಡರ್ ಸನ್ ರ ಹೆಸರು ನೆನಪಿದೆ. ಎಲ್ಲಿ ನರಭಕ್ಷಕ ಹುಲಿಗಳ ಕಾಟ ಹೆಚ್ಚಾಗುತ್ತಿತ್ತೋ ಅಲ್ಲಿಗೆ ಸರ್ಕಾರವೇ ಅವರನ್ನು ಕಳುಹಿಸುತ್ತಿತ್ತು. ಒಂದು ನಿರ್ದಿಷ್ಟ ಮರಕ್ಕೆ ಆಡನ್ನೋ,ಕುರಿಯನ್ನೋ ಕಟ್ಟಿ, ಅದೇ ಮರದ ಮೇಲೆ ಕಾದು ಕುಳಿತು ನಮ್ಮವರನ್ನು ಸುಲಭದಲ್ಲಿ ಹಿಡಿಯುತ್ತಿದ್ದರು.
ಈ ನರಭಕ್ಷಕಗಳ ಬಗ್ಗೆ ಕೆನೆತ್ ಆಂಡರ್ ಸನ್ ರ ಅನುಭವಗಳ ಸಂಗ್ರಹವನ್ನು ಪೂರ್ಣ ಚಂದ್ರ ತೇಜಸ್ವಿಯವರು "ರುದ್ರಪ್ರಯಾಗ ದ ಭಯಾನಕ ನರಭಕ್ಷಕ", "ಪೆದ್ದಚೆರುವಿನ ರಾಕ್ಷಸ" ಇತ್ಯಾದಿ ಪುಸ್ತಕ ಗಳಲ್ಲಿ ರೂಪಾಂತರಿಸಿದ್ದಾರೆ.
ಈಗ ನಮ್ಮ ಪಾಲಿಗೆ ಉಳಿದಿರುವುದು ಅಭಯಾರಣ್ಯ ಗಳು, ಪ್ರಾಣಿ ಸಂಗ್ರಹಾಲಯಗಳು ಮಾತ್ರ. ಈ ಪ್ರಾಣಿ ಸಂಗ್ರಹಾಲಯದಲ್ಲಿರುವುದಕ್ಕಿಂತ ಕಾಡಲ್ಲಿದ್ದು ಸಾಯುವುದೇ ಎಷ್ಟೋ ಲೇಸು. ಹೊರಗೆ ದೊಡ್ಡದಾಗಿ zoo ಅನ್ನುವ ಒಂದು ಬೋರ್ಡ್. ಒಳಗೆ ನಾವು ಪಡುವ ಯಾತನೆ ಪ್ರವಾಸಿಗರಿಗೆ ಗೊತ್ತಾದೀತೆ?ತಿರುಗಾಡಲು ಸೀಮಿತ ಪ್ರದೇಶ... ಅದೂ ನಿರ್ದಿಷ್ಟ ಸಮಯದಲ್ಲಿ ಮಾತ್ರ. ಉಳಿದ ಸಮಯದಲ್ಲಿ ಕಂಬಿಗಳ ಬೋನೇ ನಮ್ಮ ಪಾಲಿನ ಅರಮನೆ...ಹೊಟ್ಟೆ ತುಂಬಾ ಆಹಾರವಿಲ್ಲ,ಬಿಸಿರಕ್ತದ ರುಚಿಯಂತೂ ಇಲ್ಲವೇ ಇಲ್ಲ. ಒಂದಿಷ್ಟು ಮಾಂಸದ ತುಂಡುಗಳನ್ನು ನಮ್ಮತ್ತ ಎಸೆದು ಬಿಟ್ಟರೆ ಮುಗಿಯಿತು. ಅದಕ್ಕೇ ನೋಡಿ ನಾವು ಆಗಾಗ ಘರ್ಜಿಸುತ್ತಿರುವುದು. ಆದರೆ ಏನ್ಮಾಡೋದು ಕೆಲವೊಮ್ಮೆ ಘರ್ಜಿಸಲೂ ನಮ್ಮಲ್ಲಿ ತ್ರಾಣವಿಲ್ಲ. ಕೆಲವೊಮ್ಮೆ ಪ್ರವಾಸಿಗರು ನಮಗೆ ಕೀಟಲೆ ಮಾಡಿದಾಗ ರೊಚ್ಚಿಗೇಳುವುದೂ ಇದೆ. ಮಾಂಸಾಹಾರಿ ಪ್ರಾಣಿಗಳಿಗೆ ಚಾಕಲೇಟ್ ಕೊಡಲು ಬರುತ್ತಾರೆ! ಇತ್ತೀಚೆಗೆ ನಮ್ಮವನೊಬ್ಬ ಮುಟ್ಟಲು ಬಂದ ಮಗುವಿನ ಕೈ ಕಚ್ಚಿಯೇ ಬಿಟ್ಟ. ಆಗ ನೋಡಿ ಈ ಅಧಿಕಾರಿಗಳಿಗೆ ಎಚ್ಚರವಾದದ್ದು. ಕೆಲವೊಮ್ಮೆ ಕ್ರಿಕೆಟ್ ಆಟಗಾರರು,ಸಿನಿಮಾತಾರೆಯರು ನಮ್ಮನ್ನು ಸಾಕುವ ಸಂಪೂರ್ಣ ವೆಚ್ಚ ಬರಿಸುತ್ತಾರೆ. ನಮ್ಮ ಪುಣ್ಯ!.ಅಷ್ಟಾದರೂ ನಮ್ಮ ಮೇಲೆ ಕರುಣೆ ಬಂತಲ್ಲವೇ? ಇನ್ನು ಆ ಸರ್ಕಸ್ ಕಂಪೆನಿಯವರು ನಮ್ಮನ್ನು ಖರೀದಿಸಿದರಂತೂ ಕೇಳುವುದೇ ಬೇಡ.ಅಲ್ಲಿ ಎಷ್ಟೊಂದು ಚಿತ್ರ ಹಿಂಸೆ ಕೊಡುತ್ತಾರೆ ಗೊತ್ತೇ?ಅವರಿಗೆಲ್ಲಿ ಅರ್ಥವಾಗುವುದು ನಮ್ಮ ನೋವು..ಏನಿದ್ದರೂ ಪ್ರೇಕ್ಷಕರಿಗೆ ಮನರಂಜನೆ,ಕಂಪೆನಿಯವರಿಗೆ ದುಡ್ಡು. ಆ ಪಂಜರದೊಳಗೆ ಬಂಧಿಯಾಗಿ ಅನುಭವಿಸುವ ಪಾಡು ಇನ್ಯಾರಿಗೂ ಬರುವುದು ಬೇಡ.
ನಮ್ಮ ಉಗುರುಗಳಿಗೆ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆಯಿದೆ ಅದನ್ನು ಧರಿಸಿದರೆ ಕೆಟ್ಟ ಶಕ್ತಿಗಳಿಂದ ಭ್ರಮೆಯಲ್ಲಿ ಮನುಷ್ಯ ಸಿಲುಕಿದ್ದಾನೆ. ಈಗೀಗ ನನ್ನ ಹೆಸರಿನಲ್ಲಿ ಪ್ಲಾಸ್ಟಿಕ್ ಉಗುರು ಮಾರಾಟ ದಂಧೆಯೂ ನಡೆಯುತ್ತಿದೆಯಂತೆ.ನನ್ನ ಚರ್ಮ,ಉಗುರು ಸಂಗ್ರಹ ವೂ ಕೂಡ ಶಿಕ್ಷಾರ್ಹ ಅಪರಾಧವಂತೆ.ಕೆಲವು ನೈಜ ಉಗುರು ದೊರೆತಾಗ ಪ್ಲಾಸ್ಟಿಕ್ ಉಗುರು ಎಂದು ತನಿಖೆಯಿಂದ ನುಣುಚಿಕೊಳ್ಳುವವರೂ ಇದ್ದಾರಂತೆ.
ಇತ್ತೀಚೆಗಂತೂ ಕೃಷಿ, ಕಟ್ಟಡಗಳ ಭರದಲ್ಲಿ ಗುಡ್ಡ,ಕಾಡುಗಳನ್ನು ಕಡಿಯಲಾಗುತ್ತಿದೆ. ಅದಕ್ಕೇ ನೋಡಿ ಹೆಚ್ಚಾಗಿ ನಮ್ಮವರು ಊರಿನತ್ತ ಬರುವುದು.ಆಹಾರ ಅರಸಿ ಬಂದರೆ ಸಾಕು ಟಿ.ವಿ,ಪೇಪರ್ ನವರಿಗದೇ ದೊಡ್ಡ ಸುದ್ದಿ! ಕೆಲವೊಮ್ಮೆ ಕಾರ್ಯಾಚರಣೆಯ ಲೈವ್ ಬೇರೆ ತೋರಿಸುತ್ತಾರೆ! ಅವರಿಗೇನು ಗೊತ್ತು ನಮ್ಮ ಪಾಡು..
ಹಾಂ! ಕೊನೆಯದಾಗಿ ಒಂದು ಮಾತು. ನಾನು ಕ್ರೂರ ಪ್ರಾಣಿಯಲ್ಲ,ನನಗೂ ಒಂದು ಹೃದಯವಿದೆ,ಮನಸ್ಸಿದೆ,ಭಾವನೆಗಳಿವೆ.ಇನ್ನೊಬ್ಬರ ಕಷ್ಟ ಸುಖಗಳನ್ನು ಬಲು ಬೇಗನೇ ಅರ್ಥ ಮಾಡಿಕೊಳ್ಳಬಲ್ಲೆ...ಆದರೆ ನನ್ನನ್ನು ಯಾರು ಅರ್ಥ ಮಾಡಿಕೊಳ್ಳುತ್ತಾರೆ ಅಲ್ವಾ? ನಾವೂ ನಿಮ್ಮಂತೆ ಜೀವಿಗಳು.ನಮಗೂ ಬದುಕಲು ಹಕ್ಕಿದೆ.ನೀವೂ ಜೀವಿಸಿ,ನಮ್ಮನ್ನೂ ಬದುಕಲು ಬಿಡಿ...
0 Followers
0 Following