ಕಪ್ಪು ಬಣ್ಣವನ್ನು ಕಂಡರೆ ಜನ ಹಿಂದೇಟು ಹಾಕುವುದು ಏಕೆ? 

ಕಪ್ಪೆಂಬುದು ಕೊಳೆಯೇ?

ProfileImg
18 Jul '24
2 min read


image

     ಬಿಳಿ ಬಟ್ಟೆಗೆ ಕಪ್ಪು ಕಲೆಯೊಂದು ಅಂಟಿಕೊಂಡರೆ ಬೇಗ ಮಾಸಿ ಹೋಗದು. ಅಲ್ಲದೆ, ಅದು ಎದ್ದು ಕಾಣುತ್ತದೆ. ಅದನ್ನು ಇಷ್ಟಪಡುವವರು ತುಂಬ ಕಡಿಮೆ. 

     ಹಾಗೇ ಕಾಗೆಯ ಕಂಡರೆ ಯಾರಿಗೆ ಇಷ್ಟವಿದೆ ಹೇಳಿ....ಮರದ ಮೇಲೆ ಕುಳಿತು "ಕಾ... ಕಾ.... "ಎಂದು ಗುಟುರು ಹೊಡೆಯುವಾಗ ನೆಂಟರು ಬರುವರೆಂದು ಅದಕ್ಕೆ ಕಲ್ಲಸೆಯುವವರೇ ಜಾಸ್ತಿ.  ಅದು ತನಗೇನಾದರೂ ತಿಂಡಿ ಸಿಗಬಹುದೆಂಬ ಸಂತಸದಲ್ಲಿ ಇರುತ್ತದೆ.  ಕಪ್ಪಾದರೂ ಮೈಯಲಿ ಎಳ್ಳಷ್ಟೂ ಕೊಳಕಿಲ್ಲದ ಶುದ್ಧಜೀವಿ. 

      ನಮ್ಮ ಮುದ್ದು ಕೃಷ್ಣನ  ಬಣ್ಣ ಕಪ್ಪಲ್ಲವೇ..? ಹಾಗೆಂದು ಅವನ ಕಂಡರೆ ಯಾರಿಗೆ ಇಷ್ಟವಿಲ್ಲ ಹೇಳಿ... ಅವನ ಹಾಡಿ, ಹೊಗಳುವವರೇ ನಾವೆಲ್ಲ... ಆ ತುಂಟ ಬಾಲಕೃಷ್ಣ ಕದ್ದು ಬೆಣ್ಣೆಯ ತಿಂದು ಅಮ್ಮನ ಕೈಗೆ ಸಿಗದೆ, ಸುತ್ತಲೂ ಓಡಾಡುತ್ತಿದ್ದ.. ಮುಕುಂದನ ಬಾಲ್ಯ ಲೀಲೆಯನ್ನು ಕಂಡು ನಕ್ಕವರು ಮತ್ತು ಅವನಂತೆ ಮಾಡಿದವರೇ ನಾವೆಲ್ಲ.. 

     ಶ್ರಾದ್ಧದಲ್ಲಿ ಕಪ್ಪು ಎಳ್ಳಿಗೆ ವಿಶೇಷ ಮಹತ್ತ್ವ ಇದೆ.  ಗತಿಸಿ ಹೋದ ಮೂರು ತಲೆಯ ಹಿರಿಯರಿಗೆ ಪಿಂಡ ಮಾಡಿ ಅದಕ್ಕೆ ಎಳ್ಳುನೀರು (ತಿಲೋದಕ) ಬಿಡುವ ಕ್ರಮ ಇದೆ. ಹಾಗೇ ಕಪ್ಪು ಕಾಗೆಯನ್ನು ಇಂದು ದೇವರ ಸ್ಥಾನದಲ್ಲಿ ನೋಡುತ್ತಾರೆ. ಶ್ರಾದ್ಧದಲ್ಲಿ ಪುರೋಹಿತರಿಗೆ ಊಟವಾದ ನಂತರ ದೇವರಿಗಿಟ್ಟ ಬಾಳೆಲೆಯನ್ನು ಹೊರಗಡೆ ಇಟ್ಟು ಕಾಗೆಯನ್ನು ಕರೆಯುತ್ತಾರೆ. ಅದು ಬಂದು ತಿಂದರೆ ಮಾಡಿದ ಕಾರ್ಯ ಫಲಿಸಿತು, ಅವರಿಗೆ ತೃಪ್ತಿಯಾಯಿತು ಎಂದು ಅರ್ಥ. 

ಎದೆತುಂಬಿ ಹಾಡಿದೆನು ಅಂದು ನಾನು... ಮನವಿಟ್ಟು ಕೇಳಿದಿರಿ ಅಲ್ಲಿ ನೀವು... 

      ಉಷಃಕಾಲಕ್ಕೆ ಮರದಲ್ಲಿ ಕುಳಿತು ಸಿರಿಕಂಠದಲ್ಲಿ ಹಾಡುವ ಕೋಗಿಲೆಯ ಗಾನವ ಸವಿಯದವರು ಯಾರು? ಎಲ್ಲರೂ ಮನೆಯ ಬಾಗಿಲನು ತೆರೆದು ಸ್ವಾಗತಿಸುತ್ತಾ, ಕಣ್ಣಲಿ ಕಣ್ಣಿಟ್ಟು,   ಮನವಿಟ್ಟು ಕಿವಿಯಲಿ ಆಲಿಸುತ ಧ್ವನಿ ಕೂಡಿಸುವವರೇ ನಾವೆಲ್ಲ... ಅದೇ ಕಂಠದಲ್ಲಿ ಹಾಡಲು ಪ್ರಯತ್ನಿಸುವುದಿಲ್ಲವೇ..? ಆದರೂ ನಮಗೆ ಶ್ರುತಿಗಳು ಬೇಕಾಗುತ್ತವೆ. 

     ಇಂದು ಹುಬ್ಬನ್ನು ಕಪ್ಪು ಮಾಡಲು ಕಾಡಿಗೆಯನ್ನು ಬಳಸದ ಮಾತೆಯರು ಯಾರಿದ್ದಾರೆ?  ಅದು ಮುಖಕ್ಕೆ ಹೊಸ ಹೊಳಪನ್ನು ತಂದು ಕೊಡುತ್ತದೆ. ಹಾಗೆಯೇ ಹಿರಿಯರ ತಲೆಕೂದಲು ಬಿಳಿಯಾದಾಗ ಬೇಸರಗೊಳ್ಳುವ ಅವರು ಅದನ್ನು ಕಪ್ಪು ಮಾಡುವ ಪ್ರಯತ್ನ ಮಾಡುತ್ತಾರೆ.  ಹಾಗೆಯೇ ತುಂಬ ಬಿಳಿ ಇರುವವರು ಕಪ್ಪನ್ನು ಹೆಚ್ಚು ಇಷ್ಟಪಡುತ್ತಾರೆ. 

    ವಿಘ್ನ ನಿವಾರಕ ಗಣಪತಿಯ ಹವನದ ಪ್ರಸಾದವಾಗಿ ನಾವು ಮುಖಕ್ಕೆ ಹಚ್ಚುವ ಓಜೋಸಿಯೂ ಕಪ್ಪೇ.  ಮನುಜನು ನೋಡಲು ಕಪ್ಪಿದ್ದರೂ ಅವನಿಗೆ ಅತ್ಯುತ್ತಮ ಜ್ಞಾನವಿರುತ್ತದೆ. ಈಗ ಹೇಳಿ... ಕಪ್ಪು ಎಂದರೆ ಹಾಳೇ..?  ಅದಕ್ಕೆ ಹಿಂಜರಿಕೆ ಬೇಕೆ? 

✍ ಮುರಳಿಕೃಷ್ಣ ಕಜೆಹಿತ್ತಿಲು

Category:Personal Experience



ProfileImg

Written by Murali Krishna

DTP Worker, Vittal, Mangalore