ಸಮಾಜದ ಓರೆಕೋರೆ ತಿದ್ದಬೇಕೆನುವಿರಿ,
ನನ್ನ ಮನವನೇಕೆ ಓರೆ ಮಾಡುವಿರಿ?
ದುಷ್ಟ ಶಕ್ತಿಗಳ ಮೇಲೊಂದು ಕಣ್ಣಿರಲಿ ಎನುವಿರಿ,
ಕೆಟ್ಟದ್ದು ಕಾಣದಂತೆ ಕಂಗಳಿಗೇಕೆ ತೆರೆಯೆಳೆಯುವಿರಿ?
ಅನಿಸಿದ ಮಾತು ಬರೆಯಬೇಕೆನುವಿರಿ
ಲೇಖನಿಯ ಮಸಿಯನೇಕೆ ಚೆಲ್ಲುವಿರಿ?
ಕಿರಿಯರಿಗೆ ಹಿತನುಡಿ ಹೇಳೆನುವಿರಿ
ಬಾಯಿಗೆ ಗವುಸೇಕೆ ಬಿಗಿಯುವಿರಿ?
ಛಲದೊಳು ತಿದ್ದಬೇಕೆಂದರೆ,
ಬುದ್ಧಿಗೆ ಮಂಕು ಕವಿದಂತೆ .
ಕಣ್ಣಿಡಹೋದರೆ ರೆಪ್ಪೆಗಳು ಅಂಟಿದಂತೆ
ಭ್ರಮಾಲೋಕವನೇಕೆ ಸೃಜಿಸುವಿರಿ?
ಛಲಬಲವಿದ್ದವರ ನೆಲಮುಟ್ಟಿಸಿ,
ಪ್ರಭಾವಿಗಳ ಗಾದಿಗೆ ಪತ್ತಲನು ಹಾಸಿ
ಕಾಲ್ತೊಳೆದ ಜಲವನು ತೀರ್ಥವೆಂದು
ಪಾನಮಾಡಿ ಕೃತಾರ್ಥರಾಗೆಂದೇಕೆನುವಿರಿ?
ಕೂಸಿಗಿರಬೇಕು ಸಂಸ್ಕಾರವೆನುವಿರಿ,
ಕಲಿಸಹೋದರೆ ಅಂಧಶ್ರದ್ಧೆಯೆನುವಿರಿ.
ಸಂಸ್ಕಾರ ಮರೆತು ಕೂಸನೇಕೆ ಮೋಹಿಸುವಿರಿ?
ಜಾತ್ಯತೀತ ಜನತೆಯೆನುವಿರಿ,
ಮರ್ಯಾದಾ ಹತ್ಯೆಯೇಕೆ ಗೈಯುವಿರಿ?
ತಾರತಮ್ಯ ತರವಲ್ಲವೆನುವಿರಿ,
ತಾಯಗರ್ಭದಲೇ ಚಿಗುರನೇಕೆ ಚಿವುಟುವಿರಿ?
ಮೇಲುಕೀಳು ಮುಗಿಯಲೆನುವಿರಿ,
ಗಂಡುಹೆಣ್ಣೆಂದೇಕೆ ಭೇದವೆಣಿಸುವಿರಿ?
ಶೀಲವಂತರ ಸೋಗು ತಳೆಯುತ
ಅಶ್ಲೀಲತೆಯೆಡೆಯೇಕೆ ಬಾಗುವಿರಿ.
ಸ್ತ್ರೀ ರತ್ನ ವೆನುತ ಭಂಡಾರ ಕದಿವ
ಬಯಕೆಯಲಿ ಕೋಮಲಮನವನೇಕೆ ಹೊಸಕುವಿರಿ?
ಧೈರ್ಯ ಸ್ಥೈರ್ಯ ಗಳ ಗೂಡಾಗಿ
ಶೌರ್ಯ ಮೌಲ್ಯ ಗಳ ಬೀಡಾಗಿ,
ಕೈಗಳು ಕತ್ತಿಯಂತಾಗಿ ಮುಸುಕಿದ
ತೆರೆ ಸರಿಸುವ ಕ್ಷಣಕಾಗಿ ಎದುರು
ನೋಡುತಿವೆ ಭಗ್ನ ಹೃದಯಗಳು ನಿಟ್ಟುಸಿರಿಡುತ.
ಲೇಖಕಿ, ಗೃಹಿಣಿ ಹವ್ಯಾಸ : ಕಥೆ, ಕವನ ಓದುವುದು