ಇಂದು ವಿಶ್ವ ನಗುವಿನ ದಿನವಂತೆ..ನಗು ಎಂದಾಗೆಲ್ಲ ನನಗೆ ಮುಗುಳು ನಗಲು ಹೇಳಿಕೊಟ್ಟ ನನ್ನ ಶಿಕ್ಷಕಿ ನೆನಪಾಗುತ್ತಾರೆ
ಹೌದುನಾನು ಅಂತಹ ಪೆದ್ದಿ..ಕೃಷ್ಣನಂತೆ ಮುಗುಳು ನಗಲೂ ಹೇಳಿಕೊಡಬೇಕಾಗಿತ್ತು..
ಅಂದು ಅವರು ಹೇಳಿಕೊಟ್ಟ ನಗು ಇಂದಿಗೂ ನನ್ನ ಮುಖದಲ್ಲಿ ಇದೆಅದು ಎಂದಿಗೂ ಅಳಿಸಿಹೋಗುವುದಿಲ್ಲ…
ನಾನು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆ ಮೀಯಪದವಿನಲ್ಲಿ ಪಡೆದಿದ್ದೆ.ನನ್ನ ಅಜ್ಜನ ಮನೆ ಮೀಯಪದವು ಶಾಲೆಗೆ ಹತ್ತಿರದಲ್ಲಿ ಇದೆ.ಹಾಗಾಗಿ ಎರಡನೇ ತರಗತಿಯಿಂದ ನಾಲ್ಕನೇ ತರಗತಿ ತನಕ ಕೋಳ್ಯೂರು ಶಂಕರನಾರಾಯಣ ದೇವಸ್ಥಾನ ಕಿರಿಯ ಪ್ರಾಥಮಿಕ ಶಾಲೆ ಯಲ್ಲಿ ಓದಿ ನಂತರ ಅಜ್ಜನ ಮನೆಯಿಂದ ಮೀಯಪದವು ಶಾಲೆಗೆ ಹೋಗಿದ್ದೆ.ಅಲ್ಲಿ ತನಕ ಸಾಮಾನ್ಯ ಹಳ್ಳಿ ಬೆಪ್ಪು ತಕ್ಕಡಿಯಾಗಿದ್ದ ನನ್ನ ಬದುಕಿನಲ್ಲಿ ಬಹು ದೊಡ್ಡ ತಿರುವು ಸಿಕ್ಕಿತು. ಅಷ್ಟರ ತನಕ ನಾನು ಕಲಿಕೆಯಲ್ಲಿ ಕೂಡ ತೀರಾ ಜಾಣ ವಿದ್ಯಾರ್ಥಿನಿ ಅಲ್ಲ.ತರಗತಿಯಲ್ಲಿ ಇದ್ದ ಹದಿನಾರು ಹದಿನೇಳು ಮಂದಿಯಲ್ಲಿ ನನಗೆ ಆರೋ ಏಳನೆಯದೋ ರ‍್ಯಾಂಕ್ ಬರುತ್ತಾ ಇತ್ತು.ಆರೋಗ್ಯ ಸರಿ ಇಲ್ಲದ ಕಾರಣ ಯಾವುದೇ ಆಟಗಳಲ್ಲಿ ಭಾಗವಹಿಸುತ್ತಾ ಇರಲಿಲ್ಲ ( ಈ ಬಗ್ಗೆ ಇನ್ನೊಂದು ದಿನ ಬರೆಯುವೆ) ಅಥವಾ ನನ್ನನ್ನು ಸೇರಿಸಿಕೊಳ್ಳುತ್ತಾ ಇರಲಿಲ್ಲ ಎಂದರೆ ಸರಿಯಾದೀತು.
ಐದನೇ ತರಗತಿಗೆ ಬರುವಷ್ಟರಲ್ಲಿ ನನ್ನ ತಲೆ ಹುಣ್ಣಿನ ಸಮಸ್ಯೆ ಪರಿಹಾರವಾಗಿತ್ತು.ಸಾವಿನ ದವಡೆಯಿಂದ ಪಾರಾಗಿದ್ದೆ.
ಶ್ರೀ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಣ ವಿಧಾನವೇ ಬೇರೆ,ಅಲ್ಲಿಯ ಶಿಕ್ಷಕರು ಇತರರಂತಲ್ಲ.ನಾಲಿಗೆ ಎಳೆದರೂ ಒಂದಕ್ಷರ ಬಾರದ,ಒಂದು ಹೆಜ್ಜೆ ಹಾಕಲು ಅರಿಯದ ನಮಗೆ ನಾಟಕ ಭಾಷಣ ಏಕಪಾತ್ರಾಭಿಯ ,ನೃತ್ಯ ಹೇಳಿಕೊಟ್ಡು ಬಾಲಕಲೋತ್ಸವಕ್ಕೆ ಕರೆದೊಯ್ದು ನಮಗೆ ವೇಷಭೂಷಣ ಹಾಕಿಸಿ,ಬಣ್ಣ ಹಾಕಿ ಸ್ಪರ್ಧೆಯಲ್ಲಿ ಗೆಲ್ಲುವ ಹಾಗೆ ಮಾಡುತ್ತಿದ್ದರು.ನಮಗೆ ಬಹುಮಾನ ಬಂದಾಗ ನಮ್ಮ ಶಿಕ್ಷಕರಾದ ಸರೋಜಿನಿ ಟೀಚರ್ ಶ್ರೀಧರ್ ಮಾಷ್ಟ್ರು, ಶ್ರೀನಿವಾಸ ಮಾಷ್ಟ್ರು, ವಸಂತ ಮಾಷ್ಟ್ರು ಪುಷ್ಪವಲ್ಲಿ ಟೀಚರ್ ,ನಾವಡ ಮಾಷ್ಟ್ರು ಸೇರಿದಂತೆ ಎಲ್ಲರೂ ತಮಗೆ ರಾಷ್ಟ್ರ ಪ್ರಶಸ್ತಿ ಬಂದ ಹಾಗೆ ಸಂಭ್ರಮಿಸುತ್ತಾ ಇದ್ದರು.ನಾನು ಏಳನೇ ತರಗತಿಯಲ್ಲಿ ಇದ್ದಾಗ ಪಿಳ್ಳಂಗೋವಿಯ ಚೆಲುವ ಕೃಷ್ಣನ.. ಹಾಡಿಗೆ ನೃತ್ಯ ಸಂಯೋಜನೆ ಮಾಡಿ ಹೇಳಿ ಕೊಟ್ಟು ಬಾಲಕಲೋತ್ಸವದಲ್ಲಿ ಬಹುಮಾನ ಬರುವಂತೆ ಮಾಡಿದ್ದರು.ಈ ನೃತ್ಯದಲ್ಲಿ ನಾನು ಕೃಷ್ಣನ ಪಾತ್ರವನ್ನು ಮಾಡಿದ್ದೆ.ಈಗೆಲ್ಲ ಕೃಷ್ಣ ವೇಷ ಧರಿಸಿದ ಮುದ್ದು ಪುಟಾಣಿಗಳನ್ನು ನೋಡುವಾಗೆಲ್ಲ ನಾನು ಹೀಗೆ ಕಂಡಿರಬಹುದೇ ಹಾಗೆ ಇದ್ದೆನಾ ಎಂದು ಯೋಚಿಸುತ್ತೇನೆ.ಆಗ ಫೋಟೋ ಗಿಟೋ ತೆಗೆಯಲು ಯಾರಲ್ಲಾದರೂ ಕ್ಯಾಮರಾ ಇದ್ದರೆ ತಾನೇ ? ನಾನು ಕೊನೆಯ ಪಕ್ಷ ಕನ್ನಡಿಯಲ್ಲಿ ಕೂಡ ಮುಖ ನೋಡಿಕೊಂಡಿಲ್ಲ ಅಥವಾ ನೋಡಿದ್ದರೂ ಈಗ ನನಗೆ ನೆನಪಿನಲ್ಲಿ ಉಳಿದಿಲ್ಲ. ಆ ದಿನ ನೃತ್ಯ ಸ್ಪರ್ಧೆಯಲ್ಲಿ ಕೃಷ್ಣ ವೇಷ ಧರಿಸಿದ ಬೇರೆ ಶಾಲೆಯ ಹುಡುಗಿ ವೇದಿಕೆ ಪಕ್ಕ ಇದ್ದಳು.ಅವಳ ಮುಖ ನನಗೆ ನೆನಪಿದೆ ಅವಳು ತುಂಬಾ ಮುದ್ದಾಗಿ ಕಾಣುತ್ತಿದ್ದಳು. ನನಗೆ ಮುಖಕ್ಕೆ ಬಣ್ಣ ಹಾಕಿ ಕೃಷ್ಣ ವೇಷ ಹಾಕಿದ ಶ್ರೀನಿವಾಸ ಮಾಷ್ಟ್ರು, ಸರೋಜ ಟೀಚರ್ ಅವಳನ್ನು ನೋಡಿ ನಮ್ಮ ಕೃಷ್ಣನಿಗೆ ಅವಳು ಸರಿಗಟ್ಟಲಾರಳು ಎಂದು ಹೇಳಿದ್ದು ನನಗಿನ್ನೂ ನೆನಪಿದೆ..ಬಹಳಹೆಮ್ಮೆ ಆಗಿತ್ತು ನನಗೆ..
ಏಳನೇ ತರಗತಿಯಲ್ಲಿ ಓದುತ್ತಿರುವಾಗ ಬಹುಶಃ ಓಣಂ ರಜೆಯ ಸಂದರ್ಭದಲ್ಲಿ ನಾವು ಅಜ್ಜನ ಮನೆಯಲ್ಲಿ ಆಟಕ್ಕಾಗಿ ಸುಬ್ಬಿ ಇಂಗ್ಲಿಷ್ ಕಲ್ತದು ನಾಟಕ ರಚಿಸಿ ಅಭಿನಯಿಸಿದ್ದೆ.ಇದು ಗೊತ್ತಾಗಿ ವಸಂತ ಮಾಷ್ಟ್ರು ನನ್ನಲ್ಲಿ ಆ ನಾಟಕವನ್ನು ಅಭಿನಯಿಸಿ ತೋರಿಸುವಂತೆ ಶಾಲೆಯಲ್ಲಿ ಹೇಳಿದ್ದರು.ನಾನೆ ರಚಿಸಿದ ಕಾರಣ ನಾಟಕದಲ್ಲಿನ ಆರೂ ಪಾತ್ರಗಳ ಸಂಭಾಷಣೆ ನನಗೆ ಬಾಯಿಗೆ ಬರುತ್ತಿತ್ತು. ಇಡೀ ನಾಟಕವನ್ನು ನಾನೊಬ್ಬಳೇ ಏಕ ಪಾತ್ರಾಭಿನಯದ ಮಾದರಿಯಲ್ಲಿ ಅಭಿನಯಿಸಿ ತೋರಿಸಿ ಅವರಿಂದ ಮೆಚ್ಚುಗೆ ಪಡೆದಿದ್ದೆ.ಇದಾಗಿ ಮೂವತ್ತು ವರ್ಷಗಳ ನಂತರ ಅದೇ ನಮ್ಮ ಶಾಲೆಯಲ್ಲಿ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸುಬ್ಬಿ ಇಂಗ್ಲಿಷ್ ಕಲ್ತದು ಮತ್ತು ಇತರ ನಾಟಕಗಳು ಕೃತಿ ರಚಿಸಿ ಹಠಮಾರಿ ಹುಡುಗಿ ಯಃಕಶ್ಚಿತ್ ಲಕ್ಷ್ಮೀ ಡಾ.ಲಕ್ಷ್ಮೀ ಜಿ ಪ್ರಸಾದ ಆಗಿ ಬದಲಾಗಲು ಪ್ರೇರಣೆ ನೀಡಿದ ಶಿಕ್ಷಕರಿಗೆ ಅರ್ಪಣೆ ಮಾಡಿದ್ದೆ.
0 Followers
0 Following