ಮಹಿಳಾವಾದದ ಹಾದಿ ತಪ್ಪಿಸಿದವರು ಯಾರು?

ಈಗ ಬೇಕಾಗಿರುವುದು ಸ್ತ್ರೀವಾದವಲ್ಲ, ಮಾನವತಾವಾದ...

ProfileImg
27 Feb '24
4 min read


image

ಸುಮಾರು ೧೯೨೦ರ ದಶಕದಲ್ಲಿ ಅಮೇರಿಕಾದಲ್ಲಿ ಮಹಿಳೆಯರಿಂದ ಸಿಗರೇಟ್‌ ಕ್ರಾಂತಿಯಾಯಿತು. ಹೆಂಗಸರು ಸಿಗರೇಟ್‌ ಸೇದುವುದು ದೊಡ್ಡ ಅಪರಾಧವಾಗಿದ್ದ ಕಾಲವದು. ಅಂಥವರನ್ನು ಸಮಾಜ ತಿರಸ್ಕಾರದ ದೃಷ್ಟಿಯಿಂದ ನೋಡುತ್ತಿತ್ತು. ಆಗ ತನ್ನ ಮಾರಾಟದ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಸಿಗರೇಟ್‌ ಕಂಪೆನಿಯೊಂದು ಹೇಗಾದರೂ ಮಾಡಿ ಹೆಂಗಸರನ್ನು ಸಿಗರೇಟ್‌ ಸೇದುವ ಹಾಗೆ ಮಾಡಲು ಪ್ಲಾನ್‌ ಮಾಡಿತು. ಅದಕ್ಕೆ ಆ ಕಂಪೆನಿ ಆಯ್ದುಕೊಂಡದ್ದು ’ಸ್ತ್ರೀವಾದ’ವನ್ನು.

ಸಿಗರೇಟ್‌ ಸೇದುವುದು ’ಸ್ತ್ರೀ ಸ್ವಾತಂತ್ರ್ಯದ ಸಂಕೇತ’ ಎನ್ನುವಂತೆ ಬಿಂಬಿಸುವ ಜಾಹೀರಾತುಗಳನ್ನು ಮೇಲಿಂದ ಮೇಲೆ ತಂದಿತು. ಸಿಗರೇಟ್‌ ಸೇದಿದರೆ ತೆಳ್ಳಗೆ ಬಳುಕುವ ಬಳ್ಳಿಯಂತಹ ಮೈಮಾಟ ಬರುತ್ತದೆ ಎನ್ನಲಾಯಿತು. ೧೯೨೯ರ ಮಾರ್ಚ್ ೩೧ರಂದು ನಡೆದ ಈಸ್ಟರ್‌ ಮೆರವಣಿಗೆಯಲ್ಲಿ ಕೆಲವು ಹುಡುಗಿಯರನ್ನು ಸಾರ್ವಜನಿಕವಾಗಿ ಸಿಗರೇಟ್‌ ಸೇದುವಂತೆ ಮಾಡಿ, ಮಾರನೇ ದಿನ ಪತ್ರಿಕೆಗಳಲ್ಲಿ ಅದನ್ನು ಹೊಸ ಸಾಮಾಜಿಕ ಕ್ರಾಂತಿ ಎನ್ನುವಂತೆ ಬರೆಯಲಾಯಿತು. ಸರಿಯಾಗಿ ಸಿಗರೇಟ್‌ ಹಿಡಿಯುವ ಮತ್ತು ಸೇದುವ ರೀತಿಯನ್ನೂ ಅವರಿಗೆ ಹೇಳಿಕೊಡಲಾಯಿತು. ಇವತ್ತಿಗೂ ಇದನ್ನು ಜಗತ್ತಿನ ಮೊದಲ ಸಾರ್ವಜನಿಕ ಸಂಪರ್ಕ ಅಭಿಯಾನ ಎನ್ನಲಾಗುತ್ತದೆ. ಇದರಿಂದ ಪ್ರಭಾವಿತಗೊಂಡ ಸಿಗರೇಟ್‌ ಕಂಪೆನಿಯೊಂದು ಭಾರತದಲ್ಲೂ ಪಾಶ್ಚಾತ್ಯ ಉಡುಪು ಧರಿಸಿದ, ಸಿಗರೇಟ್‌ ಸೇದುವ ಮೇಲ್ಸ್ತರದ ಮಹಿಳೆಯರನ್ನು ಜಾಹೀರಾತಿಗಾಗಿ ಚಿತ್ರಿಸಲು ಹೊರಟು ಕೊನೆಗೆ ಪ್ರತಿಭಟನೆಗಳಿಂದಾಗಿ ಕೈಬಿಟ್ಟಿತು.

ಏನೇ ಇರಲಿ, ಅಲ್ಲಿಂದ ಶುರುವಾದ ಸ್ತ್ರೀವಾದದ ಮಾರ್ಕೆಟಿಂಗ್ ಇವತ್ತು ಒಂದು ಚಳುವಳಿಯ ಬದಲಾಗಿ ಬ್ರಾಂಡ್ ಆಗುವಲ್ಲಿಗೆ ಬಂದು ನಿಂತಿದೆ. ಫ್ರೆಂಚ್‌ ಐಷಾರಾಮಿ ಬ್ರಾಂಡ್‌ ಡಿಯೋರ್ ಹೊರತಂದ ’ನಾವೆಲ್ಲರೂ ಸ್ತ್ರೀವಾದಿಗಳಾಗಬೇಕು’ ಅನ್ನುವ ಬರಹವುಳ್ಳ ೬೦೦ ಡಾಲರ್‌ನ ಟಿ-ಶರ್ಟ್‌ ಅದಕ್ಕೊಂದು ಉದಾಹರಣೆ. 
ಹೆಣ್ಣು ಅನುಭವಿಸುವ ಕಷ್ಟಗಳ ನೈಜತೆಯ ಅರಿವಿನಿಂದ ಹೊರಗಿರುವ ಪಾಪ್‍ ಸ್ಟಾರ್‌ಗಳು, ಸಿನೆಮಾ ನಟಿಯರು ಮಾತ್ರವಲ್ಲ ಸ್ತ್ರೀವಾದವನ್ನು ಆಗೀಗ ನೆನಪು ಮಾಡಿಕೊಳ್ಳುವ ಬೇರೆ ಬೇರೆ ರಂಗಗಳ ಮಹಿಳೆಯರು ಸ್ತ್ರೀ ವಿಮೋಚನೆಗಾಗಿ ಹುಟ್ಟಿಕೊಂಡ ಚಳುವಳಿಯ ಹಾದಿ ತಪ್ಪಿಸುತ್ತಿದ್ದಾರೆ. ಟ್ರಂಪ್‌ ಅಮೇರಿಕಾ ಅಧ್ಯಕ್ಷನಾದಾಗ ಅವನ ವಿರುದ್ಧ ನಡೆದ ಮಹಿಳೆಯರ ಪ್ರತಿಭಟನಾ ರಾಲಿಯಲ್ಲಿ ಪತ್ರಕರ್ತರೊಬ್ಬರು ಒಬ್ಬ ಮಹಿಳೆಯನ್ನು, ’ಪ್ರತಿಭಟನೆಯ ಅಂಗವಾಗಿ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿ ಬೇರೇನು ಮಾಡುತ್ತೀರಿ’ ಎಂದು ಕೇಳುತ್ತಾರೆ. ಅದಕ್ಕೆ ಅವಳ ಉತ್ತರ, ’ನಾನು ನಮ್ಮನ್ನು ಸಬಲೀಕರಣಗೊಳಿಸುವಂತಹ ಕಥೆಯುಳ್ಳ ಟಿವಿ ಸೀರಿಯಲ್‍ ನೋಡುತ್ತೇನೆ’ ಎಂದಳು.

ಒಂದು ಕಾಲದಲ್ಲಿ ಕೆಲಸಕ್ಕೆ ಹೋಗುವ ಸ್ವಾತಂತ್ರ್ಯಕ್ಕಾಗಿ ಮಹಿಳೆಯರು ಬೀದಿಗಿಳಿದರೆ, ಇಂದು ಸ್ತ್ರೀವಿಮೋಚನೆಯನ್ನು ತೋರಿಸುವ ಟಿವಿ ಸೀರಿಯಲ್‌ ನೋಡುತ್ತಾ ಕೆಲಸಕ್ಕೆ ಹೋಗುವುದನ್ನೇ ನಿಲ್ಲಿಸುವ ಹಂತಕ್ಕೆ ಸ್ತ್ರೀವಾದ ಇಳಿದಿದೆ. ಮತದಾನದ ಹಕ್ಕು, ಆರ್ಥಿಕ ಸ್ವಾತಂತ್ರ್ಯ, ಸಾಮಾಜಿಕ ಸಮಾನತೆಗಳಿಗಾಗಿ ಹುಟ್ಟಿಕೊಂಡ ಸ್ತ್ರೀವಾದ, ಕೊನೆಗೆ ಬಂದು ನಿಂತದ್ದು ಪುರುಷರಿಗಿಂತ ಸ್ತ್ರೀ ಮೇಲು ಅನ್ನುವ ಅರ್ಥಹೀನ ವಾದದಲ್ಲಿ, ವಿಚಾರ-ವಿನಿಮಯಕ್ಕಿಂತ ಉಪಯೋಗಿಸುವ ಪ್ರತಿ ಪದದಲ್ಲೂ ಪೊಲಿಟಿಕಲ್ ಕರೆಕ್ಟ್‌ನೆಸ್‌ ಹುಡುಕುವುದರಲ್ಲಿ.

ಕೊನೆಗೆ ಅದು ಎಲ್ಲಿವರೆಗೆ ಅತಿರೇಕಕ್ಕೆ ಹೋಯಿತೆಂದರೆ ನಿಜವಾದ ಸ್ತ್ರೀಸ್ವಾತಂತ್ರ್ಯ ಬಟ್ಟೆಯೇ ಹಾಕಿಕೊಳ್ಳದೆ ಸಾರ್ವಜನಿಕವಾಗಿ ಓಡಾಡುವುದರಲ್ಲಿ ಇದೆ ಎನ್ನುವಷ್ಟು, ಕೊನೆಗೆ ನಿಜವಾದ ಸ್ತ್ರೀಪರ ವಿಚಾರವಾದಿಗಳೇ ಸ್ತ್ರೀವಾದದ ಕೈಬಿಡುವಷ್ಟು. ಅದು ಬಂದು ಮುಟ್ಟಿದ್ದು ಒರಟು ನಡುವಳಿಕೆ ಮತ್ತು ನಾವೇನೇ ಮಾಡಿದರೂ ಅದು ನಮ್ಮ ಅಧಿಕಾರ ಎನ್ನುವ ಅಹಂನಲ್ಲಿ. ನಮ್ಮ ದೇಶದಲ್ಲಿ ಅವರೆಲ್ಲ ಇನ್ನೂ ಒಂದು ಹೆಜ್ಜೆ ಮುಂದೆ. ನಮ್ಮ ನಕಲಿ ಸ್ತ್ರೀವಾದಿಗಳ ನಿಜವಾದ ಗುರಿ ಹೊರದೇಶಗಳ ದಾನಿಗಳು. ಅವರ ಎದುರು ಭಾರತದ ಮಹಿಳೆಯರ ’ದಯನೀಯ’ ಸ್ಥಿತಿಯನ್ನು ಎತ್ತಿಹಿಡಿಯಬೇಕಾದರೆ ಅದಕ್ಕೆ ತಕ್ಕ ಹಾಗೆ ಕಾಣಬೇಕು; ಒಗೆಯದೇ ಇರುವ ಹಾಗೆ ಕಾಣುವ ಕಾಟನ್‌ ಬಟ್ಟೆಗಳು, ಕೆದರಿದ ಕೂದಲು, ತೊಳೆಯದೆ ಎಷ್ಟೋ ದಿನಗಳಾಗಿವೆ ಎಂಬಂತೆ ಕಾಣುವ ಮುಖ ಮತ್ತು ಗಟ್ಟಿ ವ್ಯಕ್ತಿತ್ವದಂತೆ ಕಾಣುವ ದಾರ್ಷ್ಟ್ಯ.

ಈ ಆಧುನಿಕ ಸ್ತ್ರೀವಾದದ ಪ್ರತಿಫಲವೇ ಜಸ್ಲೀನ್‌ ಕೌರ್ ತರದ ಹುಡುಗಿಯರ ನಡವಳಿಕೆ. ದೆಹಲಿಯಲ್ಲಿ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಸುಮ್ಮನೆ ನಿಂತಿದ್ದ ಸರ್ವಜೀತ್‌ ಸಿಂಗ್‌ ಎನ್ನುವ ಹುಡುಗನ ಮೇಲೆ ರೇಗಾಡಿ, ಅವನ ಫೋಟೋ ತೆಗೆದು ಫೇಸ್‌ಬುಕ್‌ಗೆ ಹಾಕಿ ಅವನು ನನ್ನನ್ನು ಹೆದರಿಸಿದ, ಮಾನಸಿಕ ಕಿರುಕುಳ ಕೊಟ್ಟ ಎಂದು ಸುಳ್ಳು ಕಂಪ್ಲೇಂಟ್‌ ಕೊಟ್ಟ ಆ ಹುಡುಗಿ ಕೊನೆಗೆ ಕೆನಡಾಗೆ ಹಾರಿದಳು. ಪೋಲೀಸ್‌ ಕೇಸ್ ಆಗಿ ಕೋರ್ಟಿಗೆ ಓಡಾಡುತ್ತ ಸರ್ವಜೀತ್‌ಗೆ ಕೆಲಸ ಹೋಯಿತು. ನಾಲ್ಕು ವರ್ಷ ಸರಿಯಾದ ಕೆಲಸ ಇಲ್ಲದೆ, ಊರು ಬಿಟ್ಟು ಹೋಗಲೂ ಆಗದೆ, ಒದ್ದಾಡಿದ ಸರ್ವಜೀತ್ ತಾನು ನಿರಪರಾಧಿ ಎಂದು ಎಷ್ಟು ಹೇಳಿದರೂ ಯಾರೂ ನಂಬಲಿಲ್ಲ. ಮಾಧ್ಯಮಗಳೂ ಅವನನ್ನು ತಪ್ಪಿತಸ್ತನೆಂದು ಘೋಷಿಸಿದವು. ಕೊನೆಗೆ ಆ ಘಟನೆಯನ್ನು ಕಣ್ಣಾರೆ ನೋಡಿದವನೊಬ್ಬ ಹೇಳಿದ ಮೇಲೆ ಅವನ ಮೇಲೆ ಮುಗಿಬಿದ್ದು ಹುಡುಗನೆನ್ನುವ ಒಂದೇ ಕಾರಣಕ್ಕೆ ಅವನನ್ನು ಗೋಳುಹೊಯ್ದುಕೊಂಡ ಮಾಧ್ಯಮಗಳು, ಅವಕ್ಕೆ ಸಪೋರ್ಟು ಮಾಡಿದ ಚಿತ್ರನಟ ನಟಿಯರು ಅವನ ಕ್ಷಮೆ ಕೇಳಿದರು. ನಾಲ್ಕು ವರ್ಷಗಳ ನಂತರ ಕೋರ್ಟು ಅವನು ನಿರಪರಾಧಿ ಎಂದು ಬಿಟ್ಟಿತು. ಅಷ್ಟೆಲ್ಲ ರಾದ್ಧಾಂತ ಮಾಡಿದ ಜಸ್ಲೀನ್‌ ಕೌರ್‌ಗೆ ಬೆಂಬಲವಾಗಿ ನಿಂತದ್ದು ಇದೇ ನಕಲಿ ಮಹಿಳಾ ಸ್ತ್ರೀವಾದಿಗಳು.

ಜಾರ್ಜ್ ಆರ್ವೆಲ್‌ನ ’ಅನಿಮಲ್ ಫಾರ್ಮ್‌’ ಪುಸ್ತಕದಲ್ಲಿ ಬರುವ ’ಎಲ್ಲಾ ಪ್ರಾಣಿಗಳೂ ಸಮಾನ ಆದರೆ ಕೆಲವು ಮಾತ್ರ ಜಾಸ್ತಿ ಸಮಾನ’ ಎನ್ನುವ ಮಾತು ಈಗ ಸ್ತ್ರೀವಾದಕ್ಕೆ ಹೊಂದುತ್ತಿದೆ. ಬರೀ ಟ್ವೀಟ್‌ಗಳಿಗೆ, ಫೇಸ್‌ಬುಕ್‌ ಕಮೆಂಟ್‌ಗಳಿಗೆ ಪೋಲೀಸ್ ಕಂಪ್ಲೇಂಟ್‌ ಕೊಡುವ ಇವರು ನಮ್ಮ ದೇಶದಲ್ಲಿ ಪ್ರತಿ ೨೦ ನಿಮಿಷಗಳಿಗೊಮ್ಮೆ ನಡೆಯುವ ರೇಪ್‌, ಇನ್ನೂ ನಿಲ್ಲದಿರುವ ಭ್ರೂಣಹತ್ಯೆ, ಬಾಲ್ಯವಿವಾಹ, ಕುಟುಂಬ ದೌರ್ಜನ್ಯದಂತಹ ನೂರಾರು ಕಹಿ ವಾಸ್ತವಗಳ ವಿರುದ್ಧ ಯಾಕೆ ನಿಂತಿಲ್ಲ?

ಪ್ರತಿಯೊಂದು ದೇಶದ ಸಂಸ್ಕೃತಿ, ಅಲ್ಲಿನ ಸಮಸ್ಯೆಗಳು ಬೇರೆ ಬೇರೆ ಆಗಿರುವಾಗ ಭಾರತಕ್ಕೆ ಪಾಶ್ಚಿಮಾತ್ಯ ಸ್ತ್ರೀವಾದವನ್ನು ಅಂಟಿಸಲು ಯತ್ನಿಸುವುದು ವಿರೋಧಾಭಾಸವಾಗುತ್ತದೆ. ಬಾಲಿವುಡ್‌ ನಟಿಯೊಬ್ಬಳು ಮಹಿಳಾ ದಿನಾಚರಣೆಯಂದು, ’ನಮ್ಮಲ್ಲಿ ಸ್ತ್ರೀಯರು ದ್ವಿತೀಯ ದರ್ಜೆಯ ನಾಗರಿಕರು’ ಅಂದದ್ದು ನಮಗಿರುವ, ನಮ್ಮ ದೇಶದ ಬಗ್ಗೆ ಹಗುರವಾಗಿ ಮಾತಾಡುವ ಅಭ್ಯಾಸದಿಂದ. ಆ ವಾಕ್ಯ ಎಲ್ಲಾ ದೇಶ, ಸಂಸ್ಕೃತಿ, ಧರ್ಮಗಳಿಗೂ ಅನ್ವಯಿಸುತ್ತದೆ. ಭಾರತದ ಸ್ತ್ರೀಯರು ಬ್ರಿಟಿಷರಿಂದ ಸ್ವಾತಂತ್ರ್ಯ ಸಿಗುವ ಮುಂಚೆಯೇ ಹೋರಾಟ ಮಾಡಿ ಮತದಾನದ ಹಕ್ಕನ್ನು ಪಡೆದುಕೊಂಡಿದ್ದರೆ, ’ನಾಗರಿಕ’ ಪಾಶ್ಚಿಮಾತ್ಯ ದೇಶಗಳು ಆ ಹಕ್ಕನ್ನು ಕೊಟ್ಟದ್ದು ಇನ್ನೂ ತಡವಾಗಿ. ಮೇಘಾಲಯದಲ್ಲಿ ಮತ್ತು ಕರ್ನಾಟಕದ ತುಳುನಾಡಿನ ಕೆಲವು ಕಡೆ ಇನ್ನೂ ಮಾತೃಸಂತತಿಯ ಸಂಸ್ಕೃತಿ ಜೀವಂತವಾಗಿದೆ. ಅಲ್ಲಿ ತಂದೆ-ತಾಯಿಯನ್ನು ನೋಡಿಕೊಳ್ಳುವ, ಆಸ್ತಿ ಪಡೆದುಕೊಳ್ಳುವ, ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಇರುವುದು ಹೆಣ್ಣುಮಕ್ಕಳಿಗೆ ಮಾತ್ರ. ಮದುವೆಯಾದ ಮೇಲೆ ಗಂಡಸರು ಹೆಂಡತಿಯ ಮನೆಯಲ್ಲಿ ಇರುತ್ತಾರೆ. ಮೇಘಾಲಯದ ಹುಡುಗರು ಎಳವೆಯಲ್ಲೇ ವಿದ್ಯಾಭ್ಯಾಸ ಬಿಟ್ಟು ಅಪ್ಪಂದಿರ ಜೊತೆ ಗದ್ದೆಗಳಲ್ಲಿ ಕೆಲಸಕ್ಕೆ ಹೋಗುತ್ತಾರೆ. ಅವರ ಪ್ರಕಾರ ಹೆಣ್ಣಿಗೆ ಮಾತ್ರ ಆಸ್ತಿಯನ್ನು ಉಳಿಸಿಕೊಳ್ಳುವ ಬುದ್ಧಿವಂತಿಕೆ ಇರುವುದು. ಇಲ್ಲಿ ಪಾಶ್ಚಾತ್ಯ-ಕೇಂದ್ರಿತ ಸ್ತ್ರೀವಾದ ನಿಲ್ಲುವುದಿಲ್ಲ.

ನಿಜವಾದ ಸ್ತ್ರೀವಾದದ ಹಾದಿ ತಪ್ಪುತ್ತಿರುವುದೇ ಮೊಂಬತ್ತಿ ಮೆರವಣಿಗೆಗಳಲ್ಲಿ, ಕ್ರಾಂತಿಕಾರಿ ಭಾಷಣಗಳಲ್ಲಿ, ಉಡುಗೆಗಳಲ್ಲಿ ಸ್ತ್ರೀಸ್ವಾತಂತ್ರ್ಯದ ಹುಡುಕಾಟದಲ್ಲಿ, ಇಂಗ್ಲೀಷ್‌ ಉಚ್ಚಾರಣೆಯಲ್ಲಿ ಕನ್ನಡ ಮಾತಾಡುವುದರಲ್ಲಿ. ನಮ್ಮ ಪ್ರತಿಭಟನೆಗಳ ವಿಷಯಗಳು ಕ್ಷುಲ್ಲಕ, ಸಾಮಾನ್ಯ ಮಹಿಳೆಯರ ಜೀವನದಿಂದ ದೂರ. ಕೆಲ ವರ್ಷಗಳ ಹಿಂದೆ ದಿನಾ ಬೆಳಿಗ್ಗೆ ಬಸ್ಸಿನಲ್ಲಿ ಕೆಲಸಕ್ಕೆ ಹೋಗುವ ಹೆಂಗಸರು ಬುತ್ತಿ ತೆಗೆದು ತಣ್ಣಗಿನ ತಿಂಡಿ ತಿನ್ನುವುದನ್ನು ನೋಡುತ್ತಿದ್ದೆ. ಅಷ್ಟು ಜನರ ತಿಂಡಿಗಳ ವಾಸನೆ ಬಸ್ಸಿನ ತುಂಬ ಹರಡಿ ಕಷ್ಟವಾಗುವಾಗ ಕಾಣುತ್ತಿತ್ತು ಇವರೆಲ್ಲ ಮನೆಯಲ್ಲಿ ಯಾಕೆ ತಿಂದು ಬರುವುದಿಲ್ಲ ಎಂದು. ಆದರೆ ಈಗ ಕಾಣುತ್ತದೆ ಮನೆಯವರನ್ನು ಹೊರಡಿಸುವ, ತಿನ್ನಿಸುವ, ಕಟ್ಟಿಕೊಡುವ, ಕೆಲಸ ಮುಗಿಸುವ ಅವಸರದಲ್ಲಿ ಅವರಿಗೆ ಬಸ್ಸಿನಲ್ಲಿ ಸಿಕ್ಕ ಸೀಟು, ಸಮಯ ಮಾತ್ರ ಮುಖ್ಯ ಎಂದು. ಅವರಿಗೆಲ್ಲ ಸ್ತ್ರೀವಾದದ ಗಾಳಿ ಸೋಂಕಿಸಿಕೊಳ್ಳಲೂ ಸಮಯವಿಲ್ಲ.

ಪ್ರತಿ ವರ್ಷ ಮಹಿಳಾ ದಿನಾಚರಣೆ ನಡೆಯುತ್ತದೆ. ಮೊದಲೆಲ್ಲ ಉಪಯೋಗವಿಲ್ಲದ ಭಾಷಣಗಳಿಗೆ, ಅರ್ಥವಿಲ್ಲದ ಮೆರವಣಿಗೆಗಳಿಗೆ ಸೀಮಿತವಾಗಿದ್ದ ಆ ದಿನದ ಧ್ಯೇಯಗಳು, ಈಗ ಟ್ವಿಟ್ಟರ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲೂ ಒಮ್ಮೆ ಹರಿದಾಡಿ, ಆ ದಿನದ ಅಂತ್ಯದೊಳಗೆ ತಾನೂ ಅಂತ್ಯ ಕಾಣುತ್ತಿದೆ.

ಮಹಿಳಾವಾದ ಎಂದರೆ ಸ್ತ್ರೀಸ್ವಾತಂತ್ರ್ಯಕ್ಕೂ, ತನಗೆ ಹಾನಿಯಾಗದ ರೀತಿಯಲ್ಲಿ ಪುರುಷರ ನಂಬಿಕೆಗಳಿಗೆ ಸ್ತ್ರೀ ಕೊಡುವ ಗೌರವಕ್ಕೂ ಇರುವ ಕೂದಲೆಳೆಯ ಅಂತರವನ್ನು ಅರ್ಥಮಾಡಿಕೊಳ್ಳುವುದು. ಹಾಗಿದ್ದಿದ್ದರೆ, ಕೇರಳದಲ್ಲಿ ಇರುವ ನೂರಾರು ಅಯ್ಯಪ್ಪ ಸ್ವಾಮಿ ಮಂದಿರಗಳನ್ನೆಲ್ಲ ಬಿಟ್ಟು ಒಂದು ಶಬರಿಮಲೆಗೆ ನುಗ್ಗಿ ಅದರಿಂದ ತನ್ನ ಹೆಸರು ದೇಶವಿದೇಶಗಳಲ್ಲಿ ಪ್ರಚಾರವಾಗಬೇಕು ಎಂದು ’ಸ್ತ್ರೀವಾದಿಗಳು’ ಬಯಸುತ್ತಿರಲಿಲ್ಲ. ಇಷ್ಟು ವರ್ಷಗಳಿಂದ ಅಲ್ಲಿ ಹೋಗದೇ ಇರುವ ಸ್ತ್ರೀಯರಿಗೆ ಅಗೌರವ ತೋರಿಸುತ್ತಿರಲಿಲ್ಲ.

ಹಾಗಾದರೆ ನಿಜವಾದ ಸ್ತ್ರೀವಾದಿ ಯಾರು? ದೆಹಲಿಯಲ್ಲಿ ಕೊಲೆಯಾದ ನಿರ್ಭಯಾಳ ತಂದೆ-ತಾಯಿಗೆ ಆಸರೆಯಾಗಿ ನಿಂತು ಎಂಟು ವರ್ಷಗಳ ಕಾಲ ನ್ಯಾಯಕಾಗಿ ಹೋರಾಡಿದ ಅವರ ವಕೀಲೆ ಸೀಮಾ ಕುಶ್ವಾಹ, ಇಪ್ಪತ್ತು ವರ್ಷಗಳಿಗೂ ಮೇಲ್ಪಟ್ಟು ದೇವದಾಸಿಯರನ್ನು ಮುಖ್ಯವಾಹಿನಿಗೆ ತರಲು, ಅವರ ಜೀವನ ಸುಧಾರಿಸಲು ಪ್ರಯತ್ನಿಸಿದ ಸುಧಾಮೂರ್ತಿಯಂತವರು. ಅವರ ಚಳುವಳಿ ಹೊಗಳಿಕೆಗೆ, ಸನ್ಮಾನಕ್ಕೆ, ಹರಿದು ಬರುವ ಧನರಾಶಿಗೆ, ಅಹಂ ತೃಪ್ತಿಗೆ ಅಲ್ಲವೇ ಅಲ್ಲ. ನಮಗೆ ಬೇಕಾಗಿರುವುದು ಈಗಿನ ಸ್ತ್ರೀವಾದವಲ್ಲ, ಬದಲಾಗಿ ಮಾನವತಾವಾದ; ಸ್ತ್ರೀ-ಪುರುಷ ಇಬ್ಬರ ಕಡೆಗೂ.

Category:Literature



ProfileImg

Written by Shwetha Halambi

Writer, journo-turned-lotus-eater, bibliophile

0 Followers

0 Following