ಆಯ್ರಾ ಲೇಖನ ಬರವಣಿಗೆ ಸ್ಪರ್ಧೆ –ಜೂನ್ 2024 ಕ್ಕಾಗಿ ನಾ ಬರೆದ ಕಥೆ
" ಯಾರು ಹೊಣೆ...!!??"
ನಗರದ ಹೃದಯ ಭಾಗದಲ್ಲಿದ್ದ ಸಬ್ ಜೈಲಿನ ಮೂರಾಳೆತ್ತರದ ಕಬ್ಬಿಣದ ಗೇಟಿನ ಹೊರಭಾಗದಲ್ಲಿ ಹಾಕಿದ್ದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದಳು ಯಶೋಧಮ್ಮ. ಮಧ್ಯಾಹ್ನದ ಸುಡುಬಿಸಿಲು ನೆತ್ತಿ ಸುಡಲು ತೊಡಗುವ ವೇಳೆಗೆ ಹೊಟ್ಟೆ ಚುರುಗುಡಲು ಆರಂಭವಾಗಿತ್ತು. ಮುಂಜಾನೆ ಮನೆಯಿಂದ ಹೊರಡುವ ಆತುರದಲ್ಲಿ ಬೆಳಗಿನ ಉಪಹಾರವನ್ನೂ ಸೇವಿಸಿರಲಿಲ್ಲ ಅವಳು. ಮಗನಿಗಾಗಿ ಬ್ಯಾಗಿನಲ್ಲಿ ತುಂಬಿಸಿಕೊಂಡು ಬಂದಿದ್ದ ಊಟದ ಡಬ್ಬಿ ಅವಳು ಕುಳಿತಲ್ಲಿಂದ ತುಸು ದೂರದಲ್ಲಿ ಅನಾಥವಾಗಿತ್ತು.ಅದನ್ನು ಎತ್ತಿಕೊಳ್ಳಲೂ ಮನಸಾಗುತ್ತಿಲ್ಲ ಅವಳಿಗೆ. ಕೈ ಕಾಲುಗಳು ಸೋತು ಹೋಗಿವೆ. ಮನಸ್ಸು ಸತ್ತೇ ಹೋಗಿದೆ. ಕಣ್ಣಿನಿಂದ ಹರಿಯುತ್ತಿರುವ ಕಂಬನಿ ಧಾರೆಯನ್ನು ಒರೆಸಿಕೊಳ್ಳದೆ ನೆಲ ನೋಡುತ್ತಕುಳಿತುಬಿಟ್ಟಿದ್ದಳು.ಮುಂಜಾನೆ ಹತ್ತಕ್ಕೇ ಅಲ್ಲಿಗೆ ಬಂದಿದ್ದಳವಳು. ಮೊನ್ನೆ ಕೋರ್ಟಿಗೆ ಹಾಜರುಪಡಿಸಲಾಗಿದ್ದ ಮಗ ಕೃಷ್ಣನನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು ಕೋರ್ಟು. ಅವನೀಗ ಸಬ್ ಜೈಲಿನ ಸೆಲ್ ನಂ ೧೯ ರಲ್ಲಿ ಇಡಲಾಗಿರುವ ವಿಚಾರಣಾಧೀನ ಖೈದಿ. ಅಂದು ಸಂಜೆ ವೇಳೆಗೆ ಕೋರ್ಟಿನಿಂದ ಜೈಲಿಗೆ ಕರೆತರುವ ವಿಚಾರ ಗೊತ್ತಾಗಿ ಜೈಲಿನ ಬಳಿ ಬಂದಿದ್ದಳು. ಜೀಪಿನಲ್ಲಿ ಕೃಷ್ಣನೊಡನೆ ಬೇರೆ ಕೆಲವು ಖೈದಿಗಳನ್ನು ಕರೆ ತಂದ ಪೊಲೀಸರು ಮಗನನ್ನು ಒಂದು ನಿಮಿಷ ಮಾತನಾಡಿಸಲೂ ಅವಕಾಶ ನೀಡಿರಲಿಲ್ಲ ಅವಳಿಗೆ. ಒಬ್ಬ ಕಾನ್ಸ್‌ಟೇಬಲ್ ನಂತೂ ಅವಳ ಎದೆಗೆ ಕೈ ಹಾಕಿ ಅಕ್ಷರಶಃ ದೂಡಿಯೇ ಬಿಟ್ಟಿದ್ದ. ಉಳಿದ ಖೈದಿಗಳ ಜೊತೆ ಕೃಷ್ಣನನ್ನು ಜೈಲಿನ ಗೇಟಿನ ಒಳಗೆ ಕರೆದುಕೊಂಡು ಹೋಗಿ ಅವರೆಲ್ಲರನ್ನು ಜೈಲರನ ವಶಕ್ಕೆ ಒಪ್ಪಿಸಿ ರಿಪೋರ್ಟ್ ಬರೆದು ಸಹಿ ಮಾಡಿಸಿಕೊಂಡ ಪೊಲೀಸರು ಜೀಪು ಹತ್ತಿ ಹೋಗಿದ್ದರು. ಗೇಟಿನ ಹೊರಭಾಗದಲ್ಲಿ ನಿಂತು ಮಗ ಕಾಣಿಸುವನೇನೋ ಎಂದು ಕಣ್ಣು ಕಿಸಿದು ಹುಡುಕಾಡಿದ್ದಳು ಯಶೋಧಮ್ಮ. ಕತ್ತಲಾವರಿಸಿದ್ದರಿಂದ ಮಗ ಕಾಣಿಸಲಿಲ್ಲ. ಕಣ್ಣೀರು ಒತ್ತರಿಸಿಕೊಂಡು ಬಂದಿತ್ತು. ಅಳುತ್ತಾ ಗೇಟಿನ ಸರಳುಗಳನ್ನು ಹಿಡಿದು ಚಡಪಡಿಸುತ್ತಾ ನಿಂತಿದ್ದವಳನ್ನು ಗದರಿಸಿದ ಜೈಲು ಅಧಿಕಾರಿಯೊಬ್ಬ ಏನಾಗ್ಬೇಕಿತ್ತು ನಿನಗೆ ಎಂದು ಕೇಳಿದ್ದ. ನನ್ನ ಮಗ ಕೃಷ್ಣನನ್ನು ನೋಡಬೇಕಾಗಿತ್ತು ಅಂದವಳಿಗೆ ಅಂತಹ ಮಗನ್ನ ಹೆತ್ತಿದ್ದಕ್ಕೆ ನಾಚಿಕೆ ಆಗಲ್ವಾ ನಿನಗೆ. ಎಂತಹ ಮಗನಿಗೆ ಜನ್ಮ ಕೊಟ್ಟಿದ್ದೀಯಾ ನಿನ್ನ ಜನ್ಮಕ್ಕಿಷ್ಟು ಬೆಂಕಿ ಹಾಕ. ದರೋಡೆ ಕೋರ ನನ್ಮಗ, ಎಷ್ಟು ಕ್ರೂರವಾಗಿ ಕೊಲೆ ಮಾಡಿದ್ದಾನೆ ಆ ಹೆಣ್ಣು ಮಗಳನ್ನು.ಮಾನವೀಯತೆ ಇಲ್ಲದ ಪಾಪಿಗಳು. ಇಂತಹವರನ್ನೆಲ್ಲ ಗುಂಡಿಟ್ಟು ಸಾಯಿಸಬೇಕು ಅನಿಸುತ್ತೆ. ಇವರನ್ನೆಲ್ಲ ಜೈಲಿನಲ್ಲಿಟ್ಟು ಊಟ ಬಟ್ಟೆ ಕೊಟ್ಟು ಸಾಕಬೇಕು ಅನ್ನುತ್ತೆ ಕಾನೂನು.ಈ ಅಯೋಗ್ಯರಿಗೆ ಉಪಚಾರ ಮಾಡೋದು ನಮ್ಮ ಕರ್ತವ್ಯ ಛೇ.. ಅವನನ್ನೇನು ನೋಡಿ ಸಾಯ್ತೀಯಾ ಮನೆಗೆ ಹೋಗು ಎಂದು ಬೈದಿದ್ದ. ಇಲ್ಲ ಕಣಪ್ಪ ಒಂದೇ ಒಂದು ಸಾರಿ ಅವನನ್ನು ನೋಡಲು ಅವಕಾಶ ಮಾಡಿಕೊಡಿ ನಿಮ್ಮ ಕಾಲಿಗೆ ಬೀಳ್ತೇನೆ ಅಂದವಳಿಗೆ ಈಗ ಅವಕಾಶ ಕೊಡೋಕಾಗಲ್ಲ. ನಾಡಿದ್ದು ಬೆಳಿಗ್ಗೆ ಹತ್ತು ಗಂಟೆಗೆ ಬಾ ಆಗ ಎಲ್ಲರಿಗೂ ನೋಡಲು ಅವಕಾಶ ನೀಡಲಾಗುತ್ತೆ ಎಂದು ಗದರಿಸಿ ಕಳಿಸಿದ್ದ ಅವಳನ್ನು. ಮುಂಜಾನೆ ಬಂದವಳು ಹತ್ತಾರು ಬಾರಿ ಕಣ್ಣೀರಿಡುತ್ತಾ ಮಗನನ್ನು ನೋಡಿ ಮಾತಾಡಲು ಅವಕಾಶ ನೀಡುವಂತೆ ಕೋರಿದರೂ ಜೈಲು ಅಧಿಕಾರಿಗಳ ಮನ ಕರಗಿರಲಿಲ್ಲ. ಏನೇನೋ ನೆಪ ಹೇಳುತ್ತಾ ಅತ್ತಿಂದಿತ್ತ ಓಡಾಡಿದರೇ ವಿನಃ ಅವಳ ಕೋರಿಕೆಗೆ ಒಬ್ಬರೂ ಸ್ಪಂದಿಸಲಿಲ್ಲ. ಅವಳ ಎದುರಿಗೇ ಬಹಳ ಜನರು ಅವರವರ ಕಡೆಯ ಖೈದಿಗಳನ್ನು ಜೈಲು ಕಂಬಿಗಳಾಚೆ ನಿಂತು ಮಾತನಾಡಿಸಿ ತಾವು ತಂದಿದ್ದ ಊಟ ಮತ್ತಿನ್ನೇನೋ ವಸ್ತುಗಳನ್ನು ಕೊಟ್ಟು ಹೋಗುತ್ತಿದ್ದಾರೆ. ತನಗೆ ಮಾತ್ರ ಇಷ್ಟೊತ್ತು ಕಾಡಿ ಬೇಡಿದರೂ ಒಬ್ಬರಿಗೂ ಕನಿಕರ ಬಂದಂತಿರಲಿಲ್ಲ. ಕಲ್ಲಿನ ಬೆಂಚಿನ ಮೇಲೆ ಕುಳಿತಿದ್ದವಳು ಮತ್ತೊಮ್ಮೆ ಗೇಟಿನ ಬಳಿ ನಿಂತು ಅಲ್ಲಿ ಕಾವಲಿಗಿದ್ದ ಜೈಲಿನ ಅಧಿಕಾರಿಯನ್ನು ಕೇಳಿದಳು. ಬೇರೆಯವರಿಗೆಲ್ಲ ನೋಡಲು ಮಾತನಾಡಲು ಅವಕಾಶ ನೀಡಿದಿರಿ. ನನಗೆ ಮಾತ್ರ ಅವಕಾಶ ನೀಡುತ್ತಿಲ್ಲ, ಯಾಕೆ ಹೀಗೆ ಮಾಡ್ತಿದೀರಿ ಎಂದಳು. ಹೇ ಮುದುಕಿ ನಿನಗೇನು ತಿಳಿಯುತ್ತೋ ಇಲ್ಲವೋ ಏನಾದ್ರು ಹಣಗಿಣ ತಂದಿದ್ದೀಯಾ ಅಂದ ಅವನು. ಏನಪ್ಪಾ ನನ್ನ ಮಗನನ್ನು ನೋಡಲು ದುಡ್ಡು ಕೊಡಬೇಕೆ? ಅಂದವಳಿಗೆ ನಿನ್ನ ಮಗನೇನು ಮಹಾರಾಜನಾ ನೀನು ನೋಡಬೇಕು ಅಂದ ತಕ್ಷಣ ಕರೆತಂದು ತೋರಿಸೋದಿಕ್ಕೆ ಅದಕ್ಕೆಲ್ಲ ಅಡ್ಜೆಸ್ಟ್ಮೆಂಟ್ ಮಾಡಬೇಕು. ಇಲ್ಲಾಂದ್ರೆ ಇಲ್ಲಿಂದ ಜಾಗ ಖಾಲಿ ಮಾಡು ಅಂದ. ಯಶೋಧಮ್ಮನಿಗೆ ಆಗ ಅರಿವಾಗಿತ್ತು ತನ್ನೆದುರೇ ತಮ್ಮವರನ್ನು ಮಾತನಾಡಿಸಿ ಹೋದವರೆಲ್ಲ ಈ ಅಡ್ಜೆಸ್ಟ್ಮೆಂಟ್ ಮಾಡಿಕೊಡಿದ್ದವರೆನ್ನುವುದು ಅವಳಿಗೆ ಮನದಟ್ಟಾಯಿತು. ತನ್ನ ಕೈಚೀಲ ತೆಗೆದು ಅದರಲ್ಲಿದ್ದ ಮೂರು ನೂರು ರೂಪಾಯಿಗಳಲ್ಲಿ ಒಂದು ನೂರು ತೆಗೆದು ಅವನ ಕೈಗಿತ್ತಳು. ಇದೆಲ್ಲ ನಡೆಯಲ್ಲ ನಡಿ ನಡಿ ಎಂದು ಕೋಪದಿಂದ ಅವಳತ್ತ ವಾಪಸ್ ಎಸೆದ ಅವಳು ಕೊಟ್ಟಿದ್ದ ನೂರು ರೂಪಾಯಿಯನ್ನು. ಅದನ್ನು ಎತ್ತಿಕೊಂಡು ಅದರ ಜೊತೆಗೆ ಮತ್ತೆ ನೂರು ಸೇರಿಸಿ ಅವನ ಕೈಗಿಡುತ್ತಾ ಇಷ್ಟೇ ಕಣಪ್ಪ ಇರೋದು. ಆಟೋಗಾಗುವಷ್ಟು ಮಾತ್ರ ಉಳಿದಿದೆ. ಈಗ ಇಷ್ಟು ತಗೊಂಡು ಅವಕಾಶ ಮಾಡಿಕೊಡಿ. ಮುಂದಿನ ಸಾರಿ ಬಂದಾಗ ಹೆಚ್ಚು ಕೊಡ್ತೀನಿ ಅಂದಳು. ದರೋಡೆಕೋರ ಮಗನ್ನ ಹೆತ್ತಿದೀಯಾ ಇಷ್ಟೇನಾ ನಿನ್ನ ಹತ್ತಿರ ಇರೋದು. ದರೋಡೆ ಮಾಡಿದ್ದನ್ನೆಲ್ಲ ಎಲ್ಲಿಟ್ಟಿದ್ದಾನೆ ನಿನ್ನ ಮಗ ಎಂದು ಗೊಣಗುತ್ತಾ ಅಲ್ಲಿದ್ದ ಮತ್ತೊಬ್ಬ ಅಧಿಕಾರಿಗೆ ಸನ್ನೆ ಮಾಡಿ ಕೃಷ್ಣನನ್ನು ಕರೆತರುವಂತೆ ಹೇಳಿದ. ಹತ್ತು ನಿಮಿಷದ ನಂತರ ಜೈಲು ಕಂಬಿಗಳ ಹಿಂದೆ ಪ್ರತ್ಯಕ್ಷನಾದ ಮಗ. ಮುಖ ಮೇಲೆತ್ತಲಿಲ್ಲ ಅವನು. ದೂರ ಬಿದ್ದಿದ್ದ ಬ್ಯಾಗನ್ನು ಎತ್ತಿಕೊಂಡು ಓಡಿ ಬಂದವಳೆ ಮಗನ ಎದುರು ನಿಂತು ಕೃಷ್ಣ ಯಾಕೆ ಹೀಗೆ ಮಾಡಿದೆಯೋ..?? ನನ್ನ ಮಗನಾಗಿ ಇಂತಹ ಕೆಲಸ ಅದು ಹೇಗೆ ಮಾಡಿದೆ ಮಗಾ.. ಎನ್ನುತ್ತಾ ಅಳತೊಡಗಿದಳು.ಮಗ ಮೌನಿಯಾಗಿದ್ದ. ಬ್ಯಾಗಿನಲ್ಲಿದ್ದ ಊಟದ ಡಬ್ಬಿ ತೆಗೆದು ಅವನಿಗೆ ಕೊಡಲು ಹೋದಳು. ನನ್ನದು ಊಟ ಆಗಿದೆ ನನಗೆ ಬೇಡ ಅಂದ ಅವನು. ನಾನೇ ತಿನ್ನಿಸ್ತೀನಿ ಇರು ಎನ್ನುತ್ತಾ ಡಬ್ಬಿ ಬಿಚ್ಚಿ ಊಟ ಕೈಯಲ್ಲಿ ತೆಗೆದುಕೊಂಡು ಸರಳುಗಳ ನಡುವೆ ಕೈ ಹಾಕಿ ತಿನ್ನಿಸಲು ಹೋದವಳ ಕೈಯನ್ನು ಬಲವಾಗಿ ತಳ್ಳಿದ ಅವನು. ಕೈಲ್ಲಿದ್ದ ಊಟ ನೆಲದ ಮೇಲೆ ಬಿತ್ತು. ನಿನ್ನ ಕೈಯ ಊಟ ತಿನ್ನುವುದಿರಲಿ ನಿನ್ನ ಮುಖ ನೋಡಲೂ ನನಗೆ ಮನಸಿಲ್ಲ. ನನ್ನ ಇಂದಿನ ಸ್ಥಿತಿಗೆ ನೀನೇ ಕಾರಣ. ನಿನ್ನಿಂದಲೇ ನಾನು ಹೀಗಾಗಿದ್ದು. ನಿನ್ನ ಮುಖ ನೋಡಲು ಅಸಹ್ಯವಾಗುತ್ತದೆ ನನಗೆ. ಇನ್ನೆಂದೂ ನೀನು ನನ್ನನ್ನು ನೋಡಲು ಬರಬೇಡ ಎನ್ನುತ್ತಾ ಹಿಂದೆ ಸರಿದವನು ಜೈಲಿನ ಗೋಡೆಗಳ ನಡುವೆ ಮರೆಯಾದ. ಬಲವಾಗಿ ಯಾರೋ ಕಪಾಳಕ್ಕೆ ಬಾರಿಸಿದಂತಾಗಿತ್ತು ಯಶೋಧಮ್ಮನಿಗೆ. ತಾನು ಹೆತ್ತು ಸಾಕಿದ ಮಗ ಹಾಗಂದು ಹೋದ ಕ್ಷಣ ತನ್ನ ಎದೆಗೆ ಒದ್ದ ಅನುಭವವಾದಂತೆನಿಸಿತು. ಒಂದು ಕ್ಷಣ ಮೂರ್ಛಿತಳಾದಂತೆನಿಸಿ ತಕ್ಷಣ ಚೇತರಿಸಿಕೊಂಡು ಕೈಯಲ್ಲಿದ್ದ ಊಟದ ಡಬ್ಬಿಯನ್ನು ಮುಚ್ಚಿ ಬ್ಯಾಗಿನಲ್ಲಿ ಹಾಕಿಕೊಂಡು ಮೊದಲು ತಾನು ಕುಳಿತಿದ್ದ ಕಲ್ಲು ಬೆಂಚಿನ ಮೇಲೆ ಕುಳಿತು ಬೆಂಚಿನ ಹಿಂಭಾಗಕ್ಕೆ ಒರಗಿಕೊಂಡು ಕಣ್ಣೀರು ಒರೆಸಿಕೊಂಡು ಆಲೋಚಿಸತೊಡಗಿದವಳ ಕಣ್ಣ ಮುಂದೆ ತನ್ನ ಜೀವನದಲ್ಲಿ ನಡೆದು ಹೋದ ಘಟನೆಗಳು ಒಂದೊಂದಾಗಿ ಬಿಚ್ಚಿಕೊಳ್ಳತೊಡಗಿದವು.
ತನ್ನ ಗಂಡ ರಂಗಪ್ಪ ಹುಟ್ಟು ಕುಡುಕ. ಮಾಡುತ್ತಿದ್ದುದು ದಿನಗೂಲಿ ಕೆಲಸ. ದುಡಿದದ್ದೆಲ್ಲ ಅವನ ಕುಡಿತಕ್ಕೇ ಸಾಲುತ್ತಿರಲಿಲ್ಲ.ಮನೆ ಖರ್ಚಿಗೆ ಒಂದು ನಯಾ ಪೈಸೆ ಕೊಡುತ್ತಿರಲಿಲ್ಲ ಅವನು. ಅದರ ಮೇಲೆ ಆಗಾಗ ಕುಡಿತಕ್ಕೆ ಹಣ ಕೊಡುವಂತೆ ಪೀಡಿಸಿ ನನ್ನನ್ನು ಹಿಡಿದು ಬಡಿಯುತ್ತಿದ್ದ.ಸಂಸಾರ ಸಾಗಿಸುವ ಸಲುವಾಗಿ ಅವರಿವರ ಮನೆಯಲ್ಲಿ ಕೆಲಸ ಮಾಡಿ ತಿಂಗಳಿಗಿಷ್ಟು ಎಂದು ಹಣ ಪಡೆದು ಜೀವನ ನಡೆಸುತ್ತಿದ್ದೆ ನಾನು.ರಂಗಪ್ಪನ ಈ ಗುಣದಿಂದ ಬೇಸತ್ತ ಅವನ ಅಣ್ಣ ತಮ್ಮಂದಿರು ಅವರ ಸಂಬಂಧ ಕಡಿದುಕೊಂಡರು.ದೂರದ ಸಂಬಂಧಿಗಳು ಮತ್ತಷ್ಟು ದೂರವಾದರು.ಪಕ್ಕದ ಮನೆಯ ರುದ್ರಪ್ಪ ಹಾಗೂ ವೈರಮುಡಿ ಮಾತ್ರ ಆಗಾಗ ಮನೆಯ ಬಳಿ ಬರುವ ಪ್ರಯತ್ನ ಮಾಡುತ್ತಿದ್ದರು. ಛೇ ಛೇ! ಇಷ್ಟು ಸಣ್ಣ ವಯಸ್ಸಿಗೆ ಎಂತಹ ಕಷ್ಟಕ್ಕೆ ಸಿಕ್ಕಿ ಬಿದ್ದೆ ನೀನು. ಇಂತಹ ಕುಡುಕ ಗಂಡನನ್ನು ಕಟ್ಟಿಕೊಂಡು ಅದು ಹೇಗೆ ಬದುಕಿದ್ದೀಯಾ..!? ನಿನ್ನನ್ನು ನೋಡಿದರೆ ಅಯ್ಯೋ ಅನಿಸುತ್ತದೆ ಎನ್ನುತ್ತಾ ಹತ್ತಿರವಾಗಲು ಬಯಸುತ್ತಿದ್ದರು. ಆವರ ಕಣ್ಣಲ್ಲಿ ಕಣ್ಣಿಟ್ಟು ನೋಡಿದವಳಿಗೆ ಅಲ್ಲಿ ಕಂಡದ್ದು ಕಾಮ ಭಾವನೆ ಮಾತ್ರ. ಸಾಧ್ಯವಾದಷ್ಟು ಅವರು ತನ್ನ ಮನೆ ಬಳಿ ಬರದಂತೆ ನೋಡಿಕೊಂಡೆ. ಹಲವಾರು ಸಾರಿ ನಾಯಿ,ಕೋಳಿ ನೆಪ ತೆಗೆದು ಕೆಟ್ಟದಾಗಿ ಬಯ್ದಿದ್ದೆ. ಅದು ತಮಗೇ ಬೈದದ್ದು ಎಂಬ ಅರಿವು ಅವರಿಗಾಗಿತ್ತು. ಮನೆಯ ಸನಿಹ ಸುಳಿಯುವುದು ಕಡಿಮೆಯಾಗಿತ್ತು. ಆದರೂ ಹಾದಿ ಬೀದಿಯಲ್ಲಿ ಸಿಕ್ಕಾಗ ಅವರ ಕಳ್ಳ ನೋಟದಿಂದ ತಪ್ಪಿಸಕೊಳ್ಳಲಾಗಿರಲಿಲ್ಲ. ಒಮ್ಮೆ ಅರವತ್ತರ ಹರೆಯದ ವಿಧುರ ಸುಬ್ಬಣ್ಣನವರ ಮನೆಯ ಅಡುಗೆ ಕೋಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ಹಿಂದಿನಿಂದ ಬಂದು ತಬ್ಬಿಕೊಳ್ಳಲು ಯತ್ನಿಸಿದ್ದ ಮುದುಕ. ಅವನಿಂದ ಬಿಡಿಸಿಕೊಂಡು ದೂರ ತಳ್ಳಿದ್ದೆ. ಮತ್ತೆ ಕೈ ಹಿಡಿದುಕೊಳ್ಳಲು ಬಂದವನ ಕೈ ಹಿಡಿದು ತಿರುಗಿಸಿ ಇನ್ನೊಮ್ಮೆ ಹೀಗೆ ಮಾಡಿದರೆ ಕೈಯನ್ನೇ ಕತ್ತರಿಸುತ್ತೇನೆ ಹುಷಾರ್..!! ಎಂದೆ. ನಾಳೆಯಿಂದ ನನ್ನ ಮನೆಯಲ್ಲಿ ಕೆಲಸಕ್ಕೆ ಬರಬೇಡ ಎಂದ ಬೇರೆ ಎಲ್ಲರಿಗಿಂತ ಹೆಚ್ಚು ಪಗಾರ ಕೊಟ್ಟು ಬಹಳ ಸಲುಗೆಯಿಂದ ಮಾತನಾಡುತ್ತಿದ್ದ ಚಪಲದ ಮುದುಕ. ಕೆಲಸ ಅರ್ಧಕ್ಕೆ ನಿಲ್ಲಿಸಿ ಅಲ್ಲಿಂದ ಹೊರಬಿದ್ದಿದ್ದೆ. ಜೀವನ ಸಾಗಿಸುವುದುಕಷ್ಟಕರವಾಗತೊಡಗಿತು. ಆಗಿನ್ನೂ ಕೃಷ್ಣನಿಗೆ ಆರು ವರ್ಷ. ಒಂದು ದಿನ ಕುಡಿದು ಗಟಾರದಲ್ಲಿ ಬಿದ್ದ ರಂಗಪ್ಪ ಮತ್ತೆ ಮೇಲೇಳಲಿಲ್ಲ.ಅಲ್ಲಿಯೇ ಶವವಾಗಿ ಹೋದ. ಅವರಿವರನ್ನು ಕಾಡಿ ಬೇಡಿ ಶವ ಸಂಸ್ಕಾರ ಮಾಡಿದ್ದಾಯಿತು. ಅದಕ್ಕೆ ಮಾಡಿದ ಸಾಲ ಮೈಮೇಲೆ ಬಂತು.ಜೀವನಯಾನ ಮರುಭೂಮಿಯ ನಡು ಹಗಲಲ್ಲಿ ಬರಿಗಾಲಿನ ಪಯಣದ ಅನುಭವ ನೀಡಲು ತೊಡಗಿತ್ತು. ಅಂದು ಕೆಲಸದಿಂದ ಮನೆಗೆ ಮರಳಿದವಳು ಇದ್ದುದನ್ನು ಬೇಯಿಸಿ ಮಗನಿಗೆ ಕೊಟ್ಟು ತಾನೂ ಉಂಡು ಮನೆಯಲ್ಲಿ ಕರೆಂಟ್ ಇಲ್ಲದ ಕಾರಣ ಬೇಗನೆ ಮಲಗುವ ಸಿದ್ಧತೆಯಲ್ಲಿದ್ದೆ. ಯಾರೋ ಕದ ಬಡಿದಂತಾಗಿ ಇಷ್ಟು ಹೊತ್ತಿನಲ್ಲಿ ಯಾರಿರಬಹುದು ಎನ್ನುತ್ತ ತಡಕಾಡಿಕೊಂಡು ಮೇಲೆದ್ದು ಕದ ತೆಗೆದು ಹೊರಬಂದವಳಿಗೆ ಬೀದಿ ದೀಪದ ಬೆಳಕಲ್ಲಿ ಕಂಡವನು ಮೂಲೆ ಮನೆಯ ವೇಣುಗೋಪಾಲ. ಊರಿನ ಜನರು ಬುಲೆಟ್ ಬಸ್ಯಾ ಎಂದು ಕರೆಯುತ್ತಿದ್ದ,ದುಡ್ಡಿನ ದೌಲತ್ತು ತೋರಿಸುತ್ತಿದ್ದ ಉಡಾಳ ಸ್ವಭಾವದವನವನು. ಏನು ಎಂದವಳ ಕೈ ಹಿಡಿದುಕೊಂಡ ಅವನು ಎಷ್ಟು ಕೊಸರಾಡಿದರೂ ಬಿಡದ ಬಿಗಿ ಹಿಡಿತ ಅವನದು. ಕೈ ಬಿಡು ಏನು ಬೇಕು ನಿನಗೆ ಎಂದಾಗ ನೀನು ಬೇಕು ನನಗೆ. ನಿನಗೆ ಹೇಗೂ ಗಂಡನಿಲ್ಲ. ಅವನು ಇದ್ದಾಗಲೂ ಯಾವ ಸುಖ ಪಡಲಿಲ್ಲ.ನೀನು ಪಡುತ್ತಿರುವ ಕಷ್ಟಗಳನ್ನು ನೋಡಿ ಅನುಕಂಪವಾಗುತ್ತಿದೆ ನನಗೆ. ನಿನಗೆ ಬಾಳು ಕೊಡುತ್ತೇನೆ ಎಂದ. ನಿನ್ನ ಹೆಂಡತಿಗೆ ಯಾರು ಬಾಳು ಕೊಡುತ್ತಾರೆ ಹೇಳು ಎಂದು ಕೇಳುತ್ತ ಅವನೆದುರು ಗಟ್ಟಿಯಾಗಿ ನಿಂತೆ ನಾನು. ಅವನು ಮುಖ ಕೆಳಗೆ ಮಾಡಿ ಮೆಲ್ಲಗೆ ಅವನೆಂದ, ಅವಳ ವಿಷಯ ಬಿಡು ನಿನ್ನನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ನಿನಗೇನು ಬೇಕು ಹೇಳು ತಂದುಕೊಡುತ್ತೇನೆ ಅನ್ನುತ್ತಾ ಸನಿಹವಾಗಲು ನೋಡಿದ. ಕೆಳ ಬಗ್ಗಿ ಕೈಗೆ ಸಿಕ್ಕ ನನ್ನದೇ ಹರಿದ ಚಪ್ಪಲಿ ಕೈಗೆತ್ತಿಕೊಂಡು ಅವನ ಮುಖದ ಮೇಲೆ ಬಾರಿಸಿದೆ. ಒಂದು ಕ್ಷಣ ಅವಾಕ್ಕಾಗಿ ಬೆಚ್ಚಿಬಿದ್ದವನು ಸುಧಾರಿಸಿಕೊಂಡು ಏನೇ ನೀನು, ಏನೋ ಗಂಡ ಸತ್ತವಳಿಗೆ ಬಾಳುಕೊಟ್ಟು ಆಸರೆಯಾಗೋಣ ಅಂತ ಬಂದ್ರೆ ನನಗೇ ಚಪ್ಪಲಿಯಲ್ಲಿ ಹೊಡಿತೀಯಾ..?? ನಿನ್ನನ್ನು ಏನು ಮಾಡ್ತೀನಿ ನೋಡು ಎನ್ನುತ್ತಾ ಅವಳನ್ನು ಬಲವಾಗಿ ಹಿಡಿದುಕೊಳ್ಳಲು ಬಂದ. ಅಷ್ಟರೊಳಗಾಗಿ ನನ್ನ ಮನಸ್ಸು ಕಲ್ಲಾಗಿತ್ತು. ಹರಿದಿದ್ದ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ ಕೈ ಹಿಡಿಯಲು ಬಂದವನ ಕೈ ಹಿಡಿದು ಜಾಡಿಸಿ ಒದ್ದು, ಕೆಳಗೆ ಬಿದ್ದವನನ್ನು ಸಿಕ್ಕಸಿಕ್ಕ ಹಾಗೆ ತುಳಿದೆ. ಕೊಸರಾಡಿಕೊಂಡು ತಪ್ಪಿಸಿಕೊಂಡು ಓಡಿ ಹೋದ ವೇಣುಗೋಪಾಲ. ಬೆಂಕಿಯಂತೆ ಕುದಿಯುತ್ತಿದ್ದ ಮನಸನ್ನು ತಹಬಂದಿಗೆ ತಂದುಕೊಂಡು ಒಂದೈದು ನಿಮಿಷ ಅಲ್ಲಿಯೇ ನೆಲದ ಮೇಲೆ ಕುಳಿತು ಆಲೋಚಿಸಿದೆ,ನನ್ನ ಈ ಪರಿಸ್ಥಿತಿಗೆ ನನ್ನ ಬಡತನ ಹಾಗೂ ನನ್ನ ಈ ಹರೆಯವೇ ಕಾರಣ. ಈ ನೀಚ ಜನರಿಂದ ತಪ್ಪಿಸಿಕೊಳ್ಳಬೇಕಾದರೆ ನಾನು ಗಟ್ಟಿಯಾಗಬೇಕು. ನನ್ನ ಮಗನನ್ನು ಈ ಸಮಾಜವನ್ನು ಹೆದರಿಸಿ ಬಾಳುವ ಹಾಗೆ ಬೆಳಸಬೇಕು. ನನ್ನ ಸೊಂಟಕ್ಕೆ ಸಿಕ್ಕಿಸಿದ ಈ ಸೆರಗನ್ನು ಎಂದಿಗೂ ಜಾರಿಸಲಾರೆ ಎಂದು ದೃಢ ನಿರ್ಧಾರ ಮಾಡಿದೆ.ಈ ಎಲ್ಲ ಘಟನೆಗಳ ನಂತರ ನನ್ನ ಬಡತನ ದುಪ್ಪಟ್ಟಾಯಿತು. ಮಗ ಸರ್ಕಾರಿ ಶಾಲೆ ಸೇರಿದ್ದ. ಒಂದು ದಿನ ಕೃಷ್ಣ ತನ್ನ ತರಗತಿಯ ಯಾರೋ ಹುಡುಗನ ಜ್ಯಾಮಿಟ್ರಿ ಬಾಕ್ಸ್ ತೆಗೆದುಕೊಂಡು ಮನೆಗೆ ಬಂದ. ಯಾರದಿದು ಎಂದು ಕೇಳಿದ್ದಕ್ಕೆ ಶಾಲೆಯಲ್ಲಿ ಯಾರೋ ಬಿಟ್ಟು ಹೋಗಿದ್ದರು ನನಗೆ ಸಿಕ್ಕಿತು ಅಂದಿದ್ದ ಕೃಷ್ಣ. ಹೋಗಲಿ ನೀನೇ ಇಟ್ಕೋ ಅಂದೆ ನಾನು. ಆಗಾಗ ಏನೇನೋ ವಸ್ತಗಳನ್ನು ಮನೆಗೆ ತರತೊಡಗಿದ್ದ ಕೃಷ್ಣ. ತಾನೂ ಕೇಳುವುದನ್ನು ಬಿಟ್ಟು ಬಹಳ ದಿನವಾಗಿದ್ದವು. ಒಂದು ದೀಪಾವಳಿ ಹಬ್ಬದ ಹಿಂದಿನ ದಿನ ಯಾವುದೋ ಪರ್ಸೊಂದನ್ನು ತೆಗೆದುಕೊಂಡು ಬಂದು ತನ್ನ ಕೈಯಲ್ಲಿತ್ತ. ಅದರ ತುಂಬಾ ನೋಟುಗಳು ತುಂಬಿದ್ದವು. ಯಾರದೋ ಇದು ಎಂದಾಗ ರಸ್ತೆಯಲ್ಲಿ ಸಿಕ್ಕಿತು ಅಂದ ಅವನು. ಸರಿ ಬಿಡು ಹಬ್ಬಕ್ಕಾಯ್ತು ಎಂದು ಮಗನಿಗೆ ಹೊಸ ಬಟ್ಟೆ, ಪಟಾಕಿ ತೆಗೆದುಕೊಟ್ಟು ಮನೆಗೆ ಅಗತ್ಯದ ಸಾಮಾನುಗಳನ್ನು ತಂದು ಹಬ್ಬ ಮಾಡಿದೆವು.ಕೃಷ್ಣ ಬೆಳೆದು ದೊಡ್ಡವನಾಗತೊಡಗಿದಂತೆ ಅವನು ಮನೆಗೆ ತರುತ್ತಿದ್ದ ವಸ್ತುಗಳ ಬೆಲೆ ಹಾಗೂ ಪ್ರಮಾಣದಲ್ಲಿ ಏರಿಕೆಯಾಗತೊಡಗಿತು. ಆ ಹಳೆಯ ಮನೆ ಬಿಟ್ಟು ಬೇರೆ ಕಡೆ ಒಳ್ಳೆಯ ಮನೆ ಮಾಡಿದ ಕೃಷ್ಣ ನನ್ನನ್ನು ಕೂಲಿ ಕೆಲಸಕ್ಕೆ ಹೋಗದಂತೆ ತಡೆದ.ಕೃಷ್ಣ ತಂದ ವಸ್ತುಗಳು ಮನೆ ತುಂಬಿದವು.ಕೈಯಲ್ಲಿ ಹಣವೂ ಓಡಾಡ ತೊಡಗಿತು.ಇಲ್ಲಿಯವರೆಗೆ ಎಲ್ಲವೂ ಸರಿಯಾಗಿತ್ತು. ಈಚೀಚೆಗೆ ಕೃಷ್ಣ ಮನೆಗೆ ಬರುವುದು ವಿರಳವಾಗತೊಡಗಿತ್ತು. ಆದರೆ ಯಾವಾಗ ಬಂದರೂ ಕೈ ತುಂಬಾ ಹಣ ಮತ್ತು ಬಂಗಾರದ ಒಡವೆಗಳು, ಇನ್ನೂ ಏನೇನೋ ವಸ್ತುಗಳನ್ನು ತಂದು ಅವಳಿಗೆ ಕೊಡುತ್ತಿದ್ದ. ಬಡತನದ ಜೀವನ ಕಳೆಯಿತು. ಇನ್ನು ಮುಂದಾದರೂ ಒಂದಿಷ್ಟು ಸುಖವಾಗಿರೋಣ ಎಂದುಕೊಳ್ಳುತ್ತಿದ್ದೆ. ಅಷ್ಟರಲ್ಲೇ ಬರಸಿಡಿಲು ಬಡಿದಂತಾಯಿತು. ಈಗ್ಗೆ ವಾರದ ಹಿಂದೆ ಮಗನ ಕೈಗೆ ಕೋಳ ತೊಡಿಸಿ ಜೀಪಿನಲ್ಲಿ ಕರೆದುಕೊಂಡು ಬಂದ ಪೊಲೀಸರು ಮನೆಯ ಒಳಗೆ ನುಗ್ಗಿ ಮನೆಯಲ್ಲಿದ್ದ ಒಂದೊಂದೇ ವಸ್ತುಗಳನ್ನು ಕೃಷ್ಣನಿಗೆ ತೋರಿಸಿ ಅವನಿಂದ ಹೇಳಿಕೆ ಪಡೆದುಕೊಂಡು. ತಮ್ಮ ಕೈಯಲ್ಲಿದ್ದ ಫೈಲಿನಲ್ಲಿ ಬರೆದುಕೊಂಡು ಅವನ ಮತ್ತು ನನ್ನ ಸಹಿ ಪಡೆದುಕೊಂಡು ಎಲ್ಲವನ್ನೂ ಸೀಝ್ ಮಾಡಿ ತೆಗೆದುಕೊಂಡು ಹೋದರು. ಕನಿಷ್ಟಪಕ್ಷ ಒಂದು ಮಾತನ್ನು ಆಡಲೂ ಅವಕಾಶ ಕೊಟ್ಟಿರಲಿಲ್ಲ ನನಗೆ. ಮನೆ ಪೂರಾ ದಿನವೊಪ್ಪತ್ತಿನಲ್ಲಿ ಖಾಲಿ ಖಾಲಿ. ಮನಸ್ಸೂ ಖಾಲಿ ಆದರೆ ಹೃದಯ ಮಾತ್ರ ಭಾರವಾದಂತೆನಿಸಿತು.ಆಲೋಚಿಸುತ್ತಾ ಕುಳಿತವಳ ಕಣ್ಣಲ್ಲಿ ನೀರು ಧಳಧಳನೆ ಸುರಿಯತೊಡಗಿತ್ತು.ಅದಾವುದರ ಪರಿಜ್ಞಾನವೇ ಇಲ್ಲ ಅವಳಿಗೆ. ಅಕ್ಷರಶಃ ಮೂರ್ಛೆ ಹೋದಂತಾಗಿದ್ದಳವಳು. ಕೈಕಾಲುಗಳು ಸತ್ತಂತಾಗಿವೆ ಮೇಲೆತ್ತಲಾಗುತ್ತಿಲ್ಲ. ಬಾಯಿ ಒಣಗುತ್ತಿದೆ. ಕಣ್ಣ ಮುಂದೆ ಆವರಿಸಿದ ಕತ್ತಲ ಛಾಯೆಯ ನಡುವೆ ನಿಂತ ಮಗ ಅವಳನ್ನು ನೋಡಿ ನಕ್ಕ ಹಾಗೆ ಅತ್ತ ಹಾಗೆಲ್ಲ ಕಾಣುತ್ತಿದೆ. ಮಗನಾಡಿದ ಮಾತುಗಳು ಕಿವಿಯಲ್ಲಿ ಕಾದ ಸೀಸ ಸುರಿದಂತೆ ಸುಡುತ್ತಿವೆ."ನಿನ್ನ ಕೈಯ ಊಟ ತಿನ್ನುವುದಿರಲಿ ನಿನ್ನ ಮುಖ ನೋಡಲೂ ನನಗೆ ಮನಸಿಲ್ಲ. ನನ್ನ ಇಂದಿನ ಸ್ಥಿತಿಗೆ ನೀನೇ ಕಾರಣ. ನಿನ್ನಿಂದಲೇ ನಾನು ಹೀಗಾಗಿದ್ದು. ನಿನ್ನ ಮುಖ ನೋಡಲು ಅಸಹ್ಯವಾಗುತ್ತದೆ ನನಗೆ. ಇನ್ನೆಂದೂ ನೀನು ನನ್ನನ್ನು ನೋಡಲು ಬರಬೇಡ" ಎಂಬ ಮಗನ ಮಾತುಗಳು ಎದೆಗೆ ಇರಿದಂತಾಗಿ ಎದೆ ಬಿರಿದ ಅನುಭವ, ಸಹಿಸಿಕೊಳ್ಳಲಾಗದ ಯಾತನೆ. ಇಲ್ಲ.. ಇದಕ್ಕೆಲ್ಲ ನಾನು ಕಾರಣಳಲ್ಲ.ನನ್ನನ್ನು ಕಾಡಿದ ಬಡತನ ಕಾರಣ. ನನ್ನನ್ನು ನನ್ನಿಷ್ಟದಂತೆ ಬಾಳಲು ಬಿಡದ ಈ ಧೂರ್ತ ಸಮಾಜ ಕಾರಣ ಎನ್ನುತ್ತಾ ಚೀರಿದವಳ ದೇಹ ಅನಾಮತ್ತಾಗಿ ಕಲ್ಲಿನ ಬೆಂಚಿನ ಮೇಲೆ ವಾಲಿತು. ಅಕ್ಕಪಕ್ಕ ನಿಂತಿದ್ದ ಜನರು ಓಡಿ ಬಂದು ಕೈ ಹಿಡಿದು ನಾಡಿ ಬಡಿತವನ್ನು ನೋಡಿ ಜೀವ ಹೋಗಿದೆ ಅಂದರು.
-ಮಹೇಶಕುಮಾರ ಹನಕೆರೆ.
0 Followers
0 Following