ನಮ್ಮ ಮನ್ಯಾಗ ಶೆಗಣಿ ಎಲ್ಲಿಂದ ಬರಬಕು?
ಮಾಮಿ ರೀsss ಹೀಂಗ್ಯಾಕ್ ತಲಿಗೆ ಕೈ ಹಚ್ಗೊಂಡ್ ಕೂತೀರಿ? ಅದೂ ಮುಂಜ್ ಮುಂಜಾನೆನ?
ಅರಾಮಿದ್ದೀರಿ ಹೌದಿಲ್ಲೋ?
ಬಾರವಾ ಪದ್ದು ಬಾ.. ! ನನಗೇನಾಗೇದ ಧಾಡಿ.. ಗಟ್ಟಿ ಇದ್ದೇನಿ. ತಲಿಗೆ ಕೈ ಹಚ್ಚಿದ್ರ ಜಡ್ ಬಂದಂಗನು?ನಿಂದೊಳ್ಳೆ ಕಥಿ ಆತ್ !
ಏನಿಲ್ಲವಾ ಎರಡ ದಿನಾ ಆತ್ . ನಿದ್ದಿ ಸಮಾ ಆಗವಲ್ತು.. ಒಳಗ ಕೂತ್ರೂ ಹೊರಗ ಕೂತ್ರೂ ಸುಡ್ಲಿ ಗುಂಗಾಡ್ ಆಲಾಪ ಶುರು ಹಚ್ಗೋತಾವು.
ನನ್ನ ತ್ರಾಸ್ ನೋಡಲಾರದ ಆ ವಲ್ಲಭ ಉದ್ದಂದು ಊದಿನಕಡ್ಡಿ ತಂದ ಕೊಟ್ಟಿದ್ದಾ.. ಆ ವಾಸ್ನಿಗೆ
ಉಬ್ಬಸ ಬರ್ತದ್ವಾ.. ಹುಳಾ ಶಟೀವಲ್ವು.
ಸಂಜಿ ಆದ್ಕೂಡ್ಲೆ ಸೈನಾ ನೇಹ್ವಾಲ್ ಮೈಯ್ಯಾಗ ಬರ್ತಾಳ .. ಆ ಚಟರ್ ಫಟರ್ ತಗೊಂಡ್ ಹೊಡದ್ರೂ ..ನಮ್ಮ ಮುಂದನ ಬಂದು ಅಣಗಿಸಿ ಹೋಗ್ತಾವ ಹುಳಾ! ಇದರ ಹೆಣಾ ಎತ್ಲಿ.. ಮಾರಿ ಅಂಬೋದು ಉಬ್ಬಿದ್ ಭಕ್ರಿ ಆಗೇದ ! ಈ ಹುಳಾ ಧಾರವಾಡ ಎಮ್ಮಿ ಆಗ್ಯಾವು !
ಅಯ ಪಾಪ ...ಅಲ್ರಿ ಮಾಮಿ ಅದೇನೋ ಪೇಸ್ಟ್ ಬರ್ದಂತ "ಓಡೋ ಮಾಸ್ " ಅಂತ ಹಚ್ಗೊಂಡ್ ನೋಡ್ರಿ..!
ಎಲ್ಲೀದs ನಮ್ಮವ್ವಾ .. ತಕ್ಕಿ ಮೆತ್ಗೊಂಡ್ರೂ ನಾವs ಓಡೋದ ಒಂದ ಬಾಕಿ ಉಳದದ ! ಬಾಗ್ಲಾ ಹಾಕಿದ್ರ ಅಗ್ಗಿಷ್ಟಿಕಿ ಒಳಗ ಕೂತಂಗ ಆಗ್ತದ. ಫಡಕ ತಗದ್ರ ಸಾಕು ನಡುಕ ಬರ್ತದ ..ಥೈಥಕ ಕುಣಕೋತ ಇದ್ದಾಗ ಹುಳದ್ ಕಡಿತ ಕಮ್ಮಿ. ಬೆಲ್ಲಾ ಒಡದ ಕಲ್ಲಿಂಗ ಕೂತ್ರ ಮುಗದ ಹೋತು.. ನಮ್ಮ ಕಥಿ..
ಅಂದಂಗ ನಿಮ್ಮ ಮನ್ಯಾಗ ಸೊಳ್ಳಿ ಪರದೆ ಅದ ಏನು? ಮೊನ್ನೆ ಇವ್ರಿಗೆ ತೊಂಬಾ ಅಂದ್ರ.. ಅದೇನೋ ಪಿರ್‍ಯಾಮಿಡ್ ಆಕಾರದ್ ತಂದಾರ್ವಾ... ಧ್ಯಾನ ಕೇಂದ್ರದಾಗ ಕೂತಂಗ ಆಗ್ತದ ನಂಗರೇ .. ನಿದ್ದಿ ಎಲ್ಲಿಂದ ಬಂದೀತು ಹೇಳು..
ಹಂಗೆಂಗ್ರಿ ಮಾಮಿ ನೀವೊಬ್ರು.. ಬರೇ ಹೆಸರ ಇಡ್ತೀರಿ...ಇದಕ್ಕೂ ಮದಲೇಕ ಆಯತಾಕಾರದ್ದ ತಂದಾಗ ..ಏನಂದಿದ್ರಿ ಮಾಮಾಗ? ನೆನಪದನಾ?
ಏನಂದಿದ್ದೆ? ನೆನಪ ಮಾಡು.. ಇತ್ತಿತ್ಲಾಗ ಭಾಳ ಮರುವು ಆಗೇದ.
ಮಾಮಿ ರೀ ...ನಂಗ ಪಕ್ಕಾ ನೆನಪದ..
ಅಯ್ಯ ರೀ ಇದೇನಿದು ...ಡೋಲಿಯಿಂದ ಹೊರಗ ಬಂದಂಗ ! ಅಂದಿದ್ರಿ !
ಅಯ ಏನರ ಆಗ್ಲಿ ..ಈ ಸೊಳ್ಳಿಯಿಂದ ಮುಕ್ತಿ ಕೊಡಸ್ವಾ ತಾಯಿ.. ಸಾಕಾಗೇದ. . ನಿದ್ದಿ ಇಲ್ಲಾ ನೀರಡಿಕಿ ಇಲ್ಲಾಗೇದ..!
ಆರ್ಗ್ಯಾನಿಕ್ ಸ್ಟಿಕ್ಸ್ ಅಂತ ನಾವs ಏನರ ತಯ್ಯಾರ ಮಾಡೋಣೇನು? ಶಗಣಿ ಅದ ಏನು ನಿಮ್ಮನ್ಯಾಗ ?
ಥೋ . ಅಲ್ರಿ ನಮ್ಮ ಮನ್ಯಾಗ ಶಗಣಿ ಎಲ್ಲಿಂದ ಬರಬೇಕು? ಹಾಲು ಹೈನದವರು ನೀವ ರೀ ಪಾ..!
ಬೇಕಿದ್ರ ರೈತಗ ಹೇಳಿ ಒಂದ್ ಬುಟ್ಟಿ ತರಿಸ್ಗೋರಿ..
ಯೂ ಟ್ಯೂಬ್ ನೋಡಿ ನಾವs ಪರಿಹಾರ ಕಂಡ್ಕೊಳೋಣ ಬಾ. ಗೋಮಾಯಿ ಒಳಗ ಕಪ್ರಾ, ಎಳಿಬತ್ತಿ , ಲೋಬಾನಾ, ಉಳ್ಳಾಗಡ್ಡಿ ಸಿಪ್ಪಿ , ನಾಕ್ ಲವಂಗಾ , ಒಣಗಿದ್ ಲಿಂಬಿ ಹಣ್ಣ ತೊಗಟಿ ಹಾಕಿ .. ಏನರ ಒಂದ್ ಹೊಸಾದ್ ಕಂಡ ಹಿಡಿಯೋಣಾ?
ಎಪ್ಪಾ ... ಈ ಮಾಮಿ ದೊಡ್ಡ ಸೈಟಿಂಸ್ಟ್ ಆಗ್ಲಿಕ್ಕೆ ಹೊಂಟಾರ. ಒಂದ್ "ಗುಡ್ ನೈಟ್" ಪೇಪರ್ ಸುಟ್ರ ಕೆಲಸ ಆಗಿತ್ತು .. (ಸ್ವಗತ)
ಮಾಮಿರೀ ನಂಗ ಫೋನ್ ಬಂತು.. ಅಮೇಲೆ ಬರ್ತೇನಿ..
ಆತಾತು ..ಹೋಗಿ ಬಾ.. ಬರೋವಾಗ ಒಂದು ಬುಟ್ಟಿ ಗೋಮಾಯಿ ತೋಂಬಾರ್ವಾ. ..
ಹೊಸಾದ್ ಏನರ ಮಾಡೋಣ್ ಅಂದ್ರ. ...ಒಟ್ಟ ಹುರುಪು ಇಲ್ರಿ ಈಗಿನವುಕ್ಕ ..ಮೂರ್ ಹೊತ್ತು ಲಕ್ವಾ ಹೊಡದೋರ್ ಗತೆ ರೀಲ್ಸ್ ಮಾಡ್ಕೋತ ಆ ತಗಡಿನಡಬ್ಬಿ (ಮೊಬೈಲ್) ತಿಕ್ಕೋದss ಆತು...(ಸ್ವಗತ)
ಶ್ರೀವಲ್ಲಭ ಕುಲಕರ್ಣಿ
ಹುಬ್ಬಳ್ಳಿ
ನಾನೊಬ್ಬ ಕವಿ, ಹಾಸ್ಯ ಬರಹಗಾರ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಉಳ್ಳವನು.
0 Followers
0 Following