ಎಲ್ಲಿ ಹೋದೆ ಗುಬ್ಬಚ್ಚಿ ? ಗುಬ್ಬಚ್ಚಿಗೆ ಜಾಗವೆಲ್ಲಿ?

ProfileImg
23 May '24
2 min read


image

         ಒಂದು ಕಾಲವಿತ್ತು . ಸೋಗೆ ಮನೆ. ಮನೆಯ ಗೋಡೆಗಳ ಮೇಲೆ ವಿವಿಧ ದೇವರ ಫೋಟೋಗಳು. ಆ ಫೋಟೋಗಳ ಸಂದಿಯಲ್ಲಿ ಗುಬ್ಬಚ್ಚಿಯ ಗೂಡುಗಳು. ನೆಲದ ಮೇಲೆ ಅಲ್ಲಲ್ಲಿ ಅವು ತಂದು ಹಾಕಿದ ಕಸ-ಹುಲ್ಲು ಕಡ್ಡಿಗಳು. ಎಷ್ಟು ಓಡಿಸಿದರೂ ಮತ್ತೆ ಮತ್ತೆ ಬಂದು ಸೇರುವ ಗುಬ್ಬಿಗಳು ಮನೆಯ ಜನರಿದ್ದರಂತೆ. ಅವುಗಳ ಚಿಲಿಪಿಲಿ ಇದ್ದರೆ ಮಕ್ಕಳು ಮನೆಯಲ್ಲಿ ಓಡಾಡಿಕೊಂಡು ಇದ್ದಷ್ಟೇ ಸಂತಸ . ಮಕ್ಕಳು ಮನೆಯಲ್ಲಿ ಎಲ್ಲಾ ಹರಡಿ ತೊಂದರೆ ಕೊಟ್ಟಂತೆ ಗುಬ್ಬಿಗಳು ಎಷ್ಟು ನೆಲವ ಒರೆಸಿದರೂ ಮತ್ತೆ ಗಲೀಜು ಮಾಡುವುದು,ಕಸ-ಕಡ್ಡಿ ಹಾಕುವುದು ತಪ್ಪಿದ್ದಲ್ಲ. ಪುರ್ರನೆ ಹೊರಗೆ ಹಾರಿ ಅಷ್ಟಿಷ್ಟು ತಿಂದು ಮರಿಗಳಿಗೆ ಒಂದಿಷ್ಟು ಗುಟುಕು ಕೊಟ್ಟು ಕತ್ತಲಾಗುವ ಹೊತ್ತಿಗೆ ಮತ್ತೆ ಗೂಡಿಗೆ ಸೇರುವ ಜಾಯಮಾನದವು. ಕೆಲವೊಮ್ಮೆ ಅವುಗಳ ಮೊಟ್ಟೆ ಕಾಗೆ-ಹಾವುಗಳ ಪಾಲಾದರೂ ಸಂತತಿ ಮುಂದುವರೆಯಲು ಯಾವ ಅಡ್ಡಿಯಾಗಲಿಲ್ಲ. ಅಕ್ಕಿ ಕೇರುತ್ತಾ ಕುಳಿತರೆ ಸಾಕು ಸುತ್ತ ಅವುಗಳ ಜಾತ್ರೆ. ಮನಬಂದಷ್ಟು ತಿಂದದ್ದೆ ತಿಂದದ್ದು. ಅವುಗಳನ್ನು ಕೇಳುವವರಾರು? ಆ ಪುಟ್ಟ ಬಾಯಲ್ಲಿ ಎಷ್ಟು ಕಾಳು ಹಿಡಿದಾವು? ಚೀಲ ತುಂಬಿ ಹೊತ್ತೊಯ್ಯಲಂತೂ ಸಾಧ್ಯವಾಗದ ಮಾತು. ಎಂದು ಸುಮ್ಮನಿದ್ದವರೇ ಜಾಸ್ತಿ. ಹಠ ಮಾಡುವ ಮಕ್ಕಳಿಗೆ ಗುಬ್ಬಚ್ಚಿ ತೋರಿಸುತ್ತಾ ಊಟ ಮಾಡಿಸುತ್ತಿದ್ದರೆ ಅವು ಹಠ ಮಾಡುವುದ ನಿಲ್ಲಿಸಿ ಎರಡು ತುತ್ತು ಜಾಸ್ತಿ ಊಟ ಮಾಡುತ್ತಿದ್ದವು. ಅಲ್ಲಿ ಬಿದ್ದ ಅಗುಳನ್ನು ತಿನ್ನುತ್ತಾ ಗುಬ್ಬಚ್ಚಿಗೂ ಹೊಟ್ಟೆ ತುಂಬುತಿತ್ತು. ಭತ್ತದ ಕಣದಲ್ಲಂತೂ ಅವುಗಳದೆ ದರ್ಬಾರ್‌. ಅವು ತಾವೇ ಬೆಳೆದ ಬೆಳೆಯಂತೆ ಭತ್ತದ ಸುತ್ತ ಕಾವಲಿನಂತೆ ಕೂತಿದ್ದರೆ ಹೋ ಎಂದು ಕೂಗುತ್ತಾ ಅವುಗಳನ್ನು ಅಲ್ಲಿಂದ ಹಾರಿಸಿ ಆಕಾಶದಲ್ಲಿ ಅವು ಚಿತ್ತಾರ ಮೂಡಿಸುವುದನ್ನು ನೋಡುವುದೇ ಒಂದು ಆನಂದವಾಗಿತ್ತು. 

ಅಂಗಳದಲ್ಲಿ ಕುಳಿ ತೋಡಿ ಅದರಲ್ಲಿ ಒಂದು ಗರಟೆ ಇಟ್ಟು ಅದು ಅಲುಗಾಡದಂತೆ ಸುತ್ತ ಮಣ್ಣು ಮುಚ್ಚಿ ನಂತರ ಗರಟೆಗೆ ನೀರು ಹಾಕುತಿದ್ದೆವು, ಬಾಯಾರಿದ ಗುಬ್ಬಿಗಳು ಬಂದು ನೀರು ಕುಡಿದು ಹೋಗುತ್ತಿದ್ದವು.  ರಜಾ ದಿನಗಳಲ್ಲಿ ಮನೆಯವರೆಲ್ಲಾ ಮಲಗಿದ್ದರೆ ನಾವೆಲ್ಲಾ ಸೇರಿ ಹೊರಗಡೆ ಕಟ್ಟೆಯ ಮೇಲೆ ಹರಟೆ ಹೊಡೆಯುವುದು,ಪಗಡೆ ಆಡುವುದು ಸಾಮಾನ್ಯವಾಗಿತ್ತು. ಎದುರಿನ ಅಂಗಳದಲ್ಲಿ ಹುಡಿಯಾದ ಮಣ್ಣಿರುತಿತ್ತು. ಅಲ್ಲಿ ಬರುವ ಗುಬ್ಬಚ್ಚಿಗಳು ಆ ಮಣ್ಣಲ್ಲಿ ಕೂತು ರೆಕ್ಕೆ ಬಿಚ್ಚಿ ತಿರುಗುತ್ತಿದ್ದವು. ಅವು ಹಾಗೇಕೆ ಮಾಡುತ್ತವೆ ಎಂದು ಹಿರಿಯರನ್ನು ಕೇಳಿದಾಗ ಅವು ಸ್ನಾನ ಮಾಡುವ ರೀತಿಯದು ಎಂದು ಹೇಳಿದರೂ ನನಗಿನ್ನೂ ಅರ್ಥವಾಗದ ವಿಷಯವದು. ಮಡ್‌ ಬಾತ್‌ ಇರಬಹುದೇ ಎಂದು ಈಗ ಅಂದುಕೊಳ್ಳುತ್ತೇನೆ.

ಗುಬ್ಬಚ್ಚಿ ತುಂಬಾ ಮಡಿವಂತಿಕೆಯ ಪಕ್ಷಿ. ಅವುಗಳ ಮರಿಗಳನ್ನು ಯಾರಾದರೂ ಮುಟ್ಟಿದರೆ ಮತ್ತೆ ಅವುಗಳನ್ನು ತನ್ನ ಹತ್ತಿರಕ್ಕೆ ಸೇರಿಸಿಕೊಳ್ಳುವುದಿಲ್ಲವಂತೆ. ಇದರಿಂದ ಆ ಮರಿಗಳಿಗೆ ಸರಿಯಾಗಿ ಪೋಷಣೆ ಸಿಗದೇ ಅವು ಸತ್ತಿದ್ದನ್ನು ಕಣ್ಣಾರೆ ಕಂಡಿದ್ದೇನೆ.  ಒಂದು ಸಲ ಗೂಡಿನಿಂದ ಮರಿಯು ಬಿದ್ದಾಗ ಮತ್ತೆ ಅದನ್ನು ಗೂಡಿನಲ್ಲಿ ಇಟ್ಟು ಮನೆಯವರೆಲ್ಲರಿಂದ ನಾ ಬೈಸಿಕೊಂಡಿದ್ದೆ. 

ಕಥೆಗಳಲ್ಲಿ ಕೂಡಾ ಕಾಗಕ್ಕ-ಗುಬ್ಬಕ್ಕನ ಕಥೆಗಳು ತುಂಬಾ ಹೆಸರುವಾಸಿ. ಆದರೆ ಇಂದು ಇದೇ ಜೋಡಿ ಅಳಿವಿನಂಚಿನಲ್ಲಿರುವುದು ಬೇಸರದ ಸಂಗತಿ. ಅಷ್ಟೇನೂ ಸುಂದರವಾಗಿಲ್ಲದಿದ್ದರೂ ಎಲ್ಲರಿಗೂ ಇಷ್ಟವಾಗುವ ಪಕ್ಷಿ ಅದು. ಅದ್ಯಾವ ಮಾಯೆ ಕಾಡಿತೋ..ಕ್ರಮೇಣ ಅವುಗಳ ಸಂಖ್ಯೆ ಕಡಿಮೆಯಾಗತೊಡಗಿದೆ. ಮಕ್ಕಳು ಗುಬ್ಬಚ್ಚಿಯನ್ನು ಚಿತ್ರ ನೋಡಿ ಗುರುತಿಸುವುದು ಬೇಸರದ ಸಂಗತಿ. ಸೋಗೆ ಮನೆ ಹೋಗಿ ಸಿಮೆಂಟ್‌ ಮನೆ ಬಂದಿರುವುದೇ ಇದಕ್ಕೆ ಕಾರಣ . ಒಟ್ಟಿನಲ್ಲಿ ಕಾರಣ ಮಾತ್ರಾ ನಾವೇ. ಅಂಗಳದಲ್ಲಿ ಆಡಿಕೊಂಡಿರುವ ಮಕ್ಕಳಿಗೆ ಗುಬ್ಬಚ್ಚಿಗಿಂತ ಬೇರೆ ಆಟಿಕೆ ಬೇಕಿಲ್ಲ. ಅವುಗಳ ಕೂಗನ್ನು ಅನುಕರಿಸುತ್ತಾ , ಹಿಡಿಯಲು ಅವುಗಳ ಹಿಂದೆ ಓಡುತ್ತಾ ದಿನವನ್ನು ದೂಡುವುದು ಅತಿಶಯೋಕ್ತಿ ಅಲ್ಲ.  ಪಕ್ಷಿ ಸಂಕುಲದಲ್ಲಿ ಅದೆಷ್ಟು ವಿಸ್ಮಯಗಳಿವೆಯೋ ಮನುಷ್ಯನ ಆಸೆಗೆ ಎಲ್ಲಾ ಬಲಿಯಾಗುತ್ತಿವೆ. ನಮ್ಮ ಗಮನಕ್ಕೆ ಬಂದಿದ್ದು ಕೆಲವು ಮಾತ್ರಾ. ಎಷ್ಟೇ ಬಣ್ಣದ ಹಕ್ಕಿ-ಪಕ್ಷಿಗಳಿದ್ದರೂ ಎಲ್ಲರಿಗೂ ಗುಬ್ಬಿ ಅಂದರೆ ಅದೇನೋ ಅಕ್ಕರೆ. ಬೇರೇ ಹಕ್ಕಿಗಳಿಗೆ ಹೋಲಿಸಿದರೆ ಮನುಷ್ಯರಿಗೆ ಹೊಂದಿಕೊಂಡಿರುವುದು ಗುಬ್ಬಚ್ಚಿ ಮಾತ್ರ.. ಮತ್ತೆ ಅವುಗಳ ಚಿಲಿಪಿಲಿ ಕೇಳುವಂತಾಗಲಿ...ನಮ್ಮ ಮನೆ ಮನಗಳಲ್ಲಿ ನೆಲಸುವಂತಾಗಲಿ..

Category:NatureProfileImg

Written by Soumya Jambe