ಬುದ್ಧಿ ಎಂಬುದು ಮನುಷ್ಯನಿಗೆ ದೇವರು ಕೊಟ್ಟ ವರದಾನವಾಗಿದೆ. ಭಗವಂತ ತಾನು ಸೃಷ್ಟಿಸಿದ ಸಕಲ ಜೀವರಾಶಿಗಳಲ್ಲಿ ಮನುಷ್ಯನಿಗೆ ಹೆಚ್ಚಿನ ಬುದ್ಧಿಶಕ್ತಿಯನ್ನು ಕೊಟ್ಟಿದ್ದಾನೆ. ಆದರೆ ಈ ಅತೀ ಬುದ್ಧಿಯು ಕೆಲವೊಮ್ಮೆ ವ್ಯಕ್ತಿಯ ತೇಜೋವಧೆಗೆ ಇಲ್ಲ ದುರಂತದ ಕಡೆಗೆ ಸಾಗುವುದಕ್ಕೆ ದಾರಿ ಮಾಡಿಕೊಡುತ್ತದೆ. ಈ ಬುದ್ಧಿ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಒಬ್ಬರದು ಸ್ವಂತ ಬುದ್ಧಿಯಾದರೆ ಇನ್ನೂ ಕೆಲವರದು ಅನ್ಯರಿಂದ ಎರವಲು ಪಡೆದ ಬುದ್ಧಿಯಾಗಿರುತ್ತದೆ. ಈ ಎರವಲು ಪಡೆದ ಬುದ್ಧಿಯು ಜಾಸ್ತಿ ಕೆಲಸ ಮಾಡುವುದಿಲ್ಲ. ಅದರಿಂದ ಋಣಾತ್ಮಕ ಪರಿಣಾಮಗಳು ಜಾಸ್ತಿ.
ಕೆಲವರ ತಲೆಯಲ್ಲಿ ಬುದ್ಧಿ ಎಂಬುದು ಕೆಲಸ ಮಾಡುವುದಿಲ್ಲ. ನಿನ್ನ ಬುದ್ಧಿ ಲದ್ದಿ ತಿನ್ನಲು ಹೋಗಿದಾ ಎಂದು ಕೆಲವೊಮ್ಮೆ ಹಿರಿಯರು ಹೇಳುವುದುಂಟು. ಈ ವಿಷಯದಲ್ಲಿ ನನ್ನದೂ ಕೆಲವು ಸಿ(ಕ)ಹಿ ಅನುಭವಗಳಿವೆ. ನನ್ನ ವೃತ್ತಿ ಬದುಕಿನ ಕೆಲವೊಂದು ದಿನಗಳವು. ನನ್ನೊಂದಿಗೆ ಆತ್ಮೀಯರಾಗಿದ್ದ ವ್ಯಕ್ತಿಯೊಂದಿಗೆ ಬುದ್ಧಿಹೀನಳಾಗಿ ವರ್ತಿಸಿದ ಕ್ಷಣಗಳು. ಆಗ ಈ ಮೇಲೆ ಹೇಳಿದಂತೆ ಯಾರೋ ಮೂರನೇ ವ್ಯಕ್ತಿ ಹೇಳಿದನ್ನು ನಂಬಿ ಅವರ ಮೇಲೆ ಕೋಪಗೊಂಡ ಸನ್ನಿವೇಶವನ್ನು ಈಗಲೂ ನೆನಪಿಸಿಕೊಂಡರೆ ಅಪರಾಧಿ ಪ್ರಜ್ಞೆ ಕಾಡುತ್ತದೆ.
“ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು” ಎಂಬ ಮಾತು ನಿಜಕ್ಕೂ ಸತ್ಯ. ಕಣ್ಣಿಗೆ ಕಂಡದ್ದು ಎಲ್ಲವೂ ಸತ್ಯವಲ್ಲ. ಯಾಕೆಂದರೆ ಕಣ್ಣಿಗೆ ಕಂಡ ಘಟನೆಗಳ ಹಿಂದೆ ಇರುವ ಹಿನ್ನೆಲೆಯ ಬಗ್ಗೆ ನಮಗೆ ಅರಿವಿರುವುದಿಲ್ಲ. ತಪ್ಪನ್ನು ಕ್ಷಮಿಸೋ ವ್ಯಕ್ತಿ ಯಾವತ್ತು ಶ್ರೇಷ್ಟನಾಗುತ್ತಾನೆ. ತಪ್ಪೆಸಗಿದ ವ್ಯಕ್ತಿ ಪಶ್ಚಾತಾಪದಿಂದ ಕುಗ್ಗುತ್ತಾನೆ. ನನ್ನಿಂದ ಏನೇ ಅವಮಾನ ಆದರೂ ಎಷ್ಟೇ ನೋವು ಕೊಟ್ಟರೂ ಒಂದು ದಿನವೂ ಆ ವ್ಯಕ್ತಿ ನನ್ನ ಮೇಲೆ ಕೋಪಗೊಳ್ಳಲಿಲ್ಲ. ಬದಲಿಗೆ ಸಮಾಧಾನವಾಗಿ ಹತ್ತಿರ ಕರೆದು ಯಾಕೆ ಹೀಗೆ ಮಾಡಿದೆ ನೀನು ಕಾರಣ ಇಲ್ಲದೆ ಹೀಗೆ ಮಾಡುವವಳಲ್ಲ ಅಂತ ಹೇಳುತ್ತಾ ಇದ್ದರು.
ನನ್ನ ಬುದ್ಧಿ ಹತೋಟಿ ತಪ್ಪಲು ಕಾರಣ ಇನ್ನೊಬ್ಬರ ದುಷ್ಟಬುದ್ಧಿ. ಕೆಲವರು ಎಷ್ಟು ದೊಡ್ಡ ವ್ಯಕ್ತಿಗಳಾಗಿದ್ದರೂ ಅವರಲ್ಲಿ ಇರುವ ನೀಚಬುದ್ಧಿಯು ಅವರನ್ನು ಕೀಳುಮಟ್ಟಕ್ಕೆ ಇಳಿಸುತ್ತದೆ. ಇಬ್ಬರು ಆತ್ಮೀಯ ವ್ಯಕ್ತಿಗಳ ನಡುವೆ ಜಗಳ ಹಿಡಿಸಿ ಹಾಕಿ ಅವರಿಗೆ ಅದರಿಂದ ವಿಕೃತ ಆನಂದ ಅನುಭವಿಸುತ್ತಾರೆ.ಇದು ನನ್ನ ಅನುಭವವಾಗಿದೆ. ಯಾವತ್ತೂ ತಾಳ್ಮೆ ಕಳೆದುಕೊಂಡು ಪ್ರೀತಿಪಾತ್ರರನ್ನು ಕಳೆದುಕೊಳ್ಳಬೇಡಿ. ಅವಮಾನ ಮಾಡಿದವನು ಮರೆಯುತ್ತಾನೆ.ಆದರೆ ಅವಮಾನ ಮಾಡಿಸಿಕೊಂಡವನು ಜನ್ಮ ಪೂರ್ತಿ ನೆನಪಿನಲ್ಲಿ ಇಟ್ಟುಕೊಳ್ಳತ್ತಾನೆ. ತಾಳ್ಮೆ, ನಿಷ್ಠೆ, ಸಮಾಧಾನ, ನಿಸ್ವಾರ್ಥ ಇವುಗಳಿದ್ದರೆ ಕಂಡಿತಾ ನಮ್ಮ ಬುದ್ಧಿಶಕ್ತಿಗೆ ಮಂಕು ಬಡಿಯುವುದಿಲ್ಲ.
ಅನುಭವಗಳು ಬುದ್ಧಿಯನ್ನು ಇನ್ನಷ್ಟು ಚುರುಕುಗೊಳಿಸುತ್ತದೆ. ಸದ್ಭುದ್ಧಿಯೊಂದಿಗೆ ಬಾಳೋಣ.ಬಾಳಿನಲ್ಲಿ ಯಶಸ್ಸನ್ನು ಕಾಣೋಣ.
0 Followers
0 Following