ಹಸಿರು ಕರಗಿದಾಗ

ಸ್ವರಚಿತ ನಾಟಕ

ProfileImg
29 Apr '24
10 min read


image

ಹಸಿರು ಕರಗಿದಾಗ ..
ರಚನೆ ಮತ್ತು ಕಾಲ :ಡಾ.ಲಕ್ಷ್ಮಿ ಜಿ ಪ್ರಸಾದ, 2೦೦1
ಪ್ರಥಮ ರಂಗ ಪ್ರಯೋಗ :ಪ್ರತಿಭಾ ಕಾರಂಜಿ 2001 ,ರಾಮಕೃಷ್ಣ ವಿದ್ಯಾ ಸಂಸ್ಥೆ ,ಮಂಗಳೂರು 
ದ್ವಿತೀಯ ರಂಗ ಪ್ರಯೋಗ :ಚಿನ್ಮಯ ವಿದ್ಯಾ ಸಂಸ್ಥೆ ಪ್ರತಿಭಾ ದಿನಾಚರಣೆ 2002 (11-೦1 -2002 )
ಸಾರಾಂಶ :ತಿಟ್ಟ ಕೇರಿ ಎಂಬುದು ಸಮೃದ್ಧವಾಗಿ ಬೆಳೆ ಬೆಳೆಯುತ್ತಿದ್ದ  ಐವತ್ತು ಎಕರೆಯಷ್ಟು ಇದ್ದ ಪುಟ್ಟ ಬಯಲು ಪ್ರದೇಶ .ಅನೇಕ ದೊಡ್ಡ ಸಣ್ಣ ರೈತರು ಒಗಟ್ಟಿನಿಂದ ದುಡಿದು ಸಂತಸ ನೆಮ್ಮದಿಯಿಂದ ಬದುಕುತ್ತಿದ್ದರು .ಅವರಲ್ಲಿ ಚಿನ್ಮಯ ಎಂಬ ಪರಿಸರ ಪ್ರಿಯ ಹೆಣ್ಣು ಮಗಳು ಇದ್ದಾಳೆ .ಒಂದು ರಾಸಾಯನಿಕ ಕಾರ್ಖಾನೆ ಮಾಲೀಕ ದುಡ್ಡು ಅತ್ತು ಕೆಲಸ ಆಸೆ ತೋರಿಸಿ ರೈತರನ್ನು ಮರುಳು ಮಾಡಿ ಆ ಭೂಮಿ ಖರೀದಿಸಿ ರಾಸಾಯನಿಕ ಕಾರ್ಖಾನೆ ಹಾಕುತ್ತಾನೆ.ಜಾಗ ಕೊಡದೆ ಅಡ್ಡಿ ಪಡಿಸಿದ ಹೆಣ್ಣು ಮಗಳು ಚಿನ್ಮಯಿಯನ್ನು  ಮೋಸದಿಂದ ಜೈಲಿಗೆ ಅಟ್ಟುತ್ತಾನೆಇತ್ತ ಕಾರ್ಖಾನೆಯ ವಿಷಗಾಳಿ,ನೀರು ಕುಡಿದು ಜನರಿಗೆ ನಾನ ರೋಗಗಳು ಕಾಡುತ್ತವೆ .ಕೊನೆಗೆ ಎಲ್ಲರೂ ಒಗ್ಗಟ್ಟಾಗಿ ಕಾರ್ಖಾನೆಯನ್ನು ಮುಚ್ಚಿಸಿ ಹಸಿರು ಹರಡಿಸುವುದಕ್ಕಾಗಿ ಹೋರಾಟಕ್ಕೆ ಸಿದ್ಧರಾಗುವ ಕಥಾನಕ ಇಲ್ಲಿದೆ .ಪರಿಸರ ಸಂರಕ್ಷಣೆ ಯ ಸಂದೇಶ ಇದರಲ್ಲಿದೆ.
ಪಾತ್ರ ಪರಿಚಯ :
ಸೂತ್ರಧಾರ :ನಿರೂಪಕ /ನಿರೂಪಕಿ
ಚಿನ್ಮಯಿ :ನಾಟಕದ ನಾಯಕಿ 
ಕಾಳೆ ಗೌಡ :ಊರಿನ ದೊಡ್ಡ ರೈತ 
ರಾಮಣ್ಣ :ಊರ ಸಾವ್ಕಾರ,ರೈತ 
ಬೆಟ್ಟೆ ಗೌಡ ಮತ್ತು ಚೆನ್ನೇ ಗೌಡ :ಸಣ್ಣ ಪುಟ್ಟ  ರೈತರು 
ಚಿದಂಬರಂ :ಬ್ಯುಸಿನೆಸ್ ಮ್ಯಾನ್ ,ರಾಸಾಯನಿಕ ಫ್ಯಾಕ್ಟರಿ ಮಾಲಕ 
ಜನಾರ್ಧನ್ :ಚಿದಂಬರಂನ ಸಹಾಯಕ 
                                        ಹಸಿರು ಕರಗಿದಾಗ ..
                                      ( ಸೂತ್ರಧಾರನ ಪ್ರವೇಶ )
ಹಾಡು :
ಕೇಳಿರಿ ಕೇಳಿರಿ ಕಥೆಯೊಂದ 
ನಿನ್ನೆ ಇಂದು ನಾಳೆ ನಡೆವ ಕಥೆಯೊಂದ 
ನಾಡು ಬರಡಾದ ಕತೆಯೊಂದ 
ಹಸಿರು ಕರಗಿದ ಕಥೆಯ 
ಜೀವ ಸೊರಗಿದ ಕಥೆಯ 
ಕೇಳಿರಿ ಕೇಳಿರಿ ಕಥೆಯೊಂದ 
ನಿನ್ನೆ ಇಂದು ನಾಳೆ ನಡೆವ ಕಥೆಯೊಂದ 
ತಿಟ್ಟ ಕೇರಿ ಎಂಬುದೊಂದು ಬಯಲು 
ರಾಗಿ ಜೋಳ ಬತ್ತ ಬೆಳೆಯುತಿತ್ತು 
ಎತ್ತ ನೋಡಿದರತ್ತ ಹಸಿರು ಹರಡಿತ್ತು 
ಉಸಿರ ತುಂಬಾ ಸಂತಸವೇ ಇತ್ತು 
ಒಗ್ಗಟ್ಟೆ ಆಗಿತ್ತಿವರ ಗುಟ್ಟು ..
ಒಗ್ಗಟ್ಟೇ ಆಗಿತ್ತಿವರ ಗುಟ್ಟು ..
ಊರಲೊಬ್ಬ ಹೆಣ್ಣು ಮಗಳು
ಕೇರಿಗೆ ಕಣ್ಣು ಅವಳು 
ಪರಿಸರವೇ ಅವಳ ಬಾಳು 
ಚಿನ್ಮಯಿ ಅವಳ ಹೆಸರು 
ಹಸಿರೇ ಅವಳ ಉಸಿರು .
ಹಸಿರೇ ಅವಳ ಉಸಿರು ...
ಸೂತ್ರಧಾರ : ಒಂದು ದಿನ ಹಸಿರಿಗೆ ಕೆಟ್ಟ ಉಸಿರು ತಾಗಿತು ,ಹಸಿರಿನ ಮೇಲೆ ಹಸಿರು ದೋಚುವವರ ದೃಷ್ಟಿ ಬಿತ್ತು.!ಮುಂದೇನಾಯಿತು ನೋಡೋಣ .. 
(ಸೂತ್ರಧಾರನ ನಿರ್ಗಮನ )
                                         ದೃಶ್ಯ -1 
(ದೊಡ್ಡ ಬುಸಿನೆಸ್ ಮ್ಯಾನ್ ಚಿದಂಬರಂ ಅವರ ಕಚೇರಿಯಲ್ಲಿ ಕುಳಿತು ವಾರ್ತ ಪತ್ರಿಕೆ ಓದುತ್ತಾ ಇರುವ ದೃಶ್ಯ )
ಚಿದಂಬರಂ :( ಸ್ವಗತ ) ಏನು ಜನಾರ್ಧನ್ ಬಂದೇ ಇಲ್ಲ ..ಸುಮಾರು ದಿನ ಆಯ್ತಲ್ಲ ಏನು ಕಥೆ ಇವಂದು?  ಓ.. ಅಲ್ಲಿ ಬರ್ತಿದ್ದಾನೆ (ಪ್ರಕಟವಾಗಿ )ರೀ ಜನಾರ್ಧನ್ ಹೋದ ಕೆಲಸ ಏನಾಯ್ತು ?ಆ ತಿಟ್ಟಕೇರಿ ಪ್ರಾಜೆಕ್ಟ್ ಎಲ್ಲಿ ತನಕ ಬಂತು ?
ಜನಾರ್ಧನ್ :ಅಲ್ಲಿ ಫ್ಯಾಕ್ಟರಿ ತೆರೆಯೋದು ಭಾರೀ ಕಷ್ಟ ಸಾರ್!ಅಲ್ಲಿ ಯಾರೂ ಜಾಗ ಮಾರೋಕೆ ತಯಾರಿಲ್ಲ ಸಾರ್ !!ಅದು ಬಹಳ ಕಷ್ಟ ಸಾರ್ 
ಚಿದಂಬರಂ : ಕಷ್ಟ ಗಿಷ್ಟ ಅಂತ ಕೂತ್ಕೊಂಡ್ರೆ ಹೆಂಗ್ರೀ ?ಅಲ್ಲಿ ಯಾರ್ಯಾರದೆಲ್ಲ ಹೊಲ ತೋಟ ಇದೆ ಅಂತಾದ್ರೂ ಗೊತ್ತಾಯ್ತ?
ಜನಾರ್ಧನ್ ;ಅದೂ ಅಲ್ಲಿ ಒಟ್ಟು 50 ಎಕರೆ ಜಾಗ ಇದೇ ಸಾರ್  ಅದ್ರಲ್ಲಿ 25 ಎಕರೆ ಕಾಳೆ ಗೌಡರದ್ದು ,15 ಎಕರೆ ಸಾವಕಾರ್ ರಾಮಣ್ಣ ನದ್ದು ,ಮತ್ತೆ ಉಳಿದದ್ದೆಲ್ಲಾ ಸಣ್ಣ ಪುಟ್ಟ ರೈತರದ್ದು !ಒಂದೆರಡು ಎಕರೆ ಒಬ್ಬೊಬ್ರಿಗೆ ಇದೇ ಅಷ್ಟೆ !ಅವ್ರದ್ದೆಲ್ಲ ಏನು ಸಮಸ್ಯೆ ಆಗೋದಿಲ್ಲ ಬಿಡಿ ಸಾರ್ ..ಆದರೆ ಆ ಬಯಲಿನ ಮಧ್ಯ ಭಾಗದಲ್ಲಿ 4 ಎಕರೆ ಜಾಗ ಒಬ್ಬ ಹೆಣ್ಣು ಮಗಳದ್ದು..ಅವಳ ಹೆಸರು ಚಿನ್ಮಯಿ ಅಂತ ..ಅವಳಿಗೆ ತಂದೆ ತಾಯಿ ಯಾರು ಇಲ್ಲ ಎಲ್ಲ ತೀರ್ಕೊಂಡಿದ್ದಾರೆ .ಅವಳು ಸ್ವಲ್ಪ ಓದಿರೋ ಹುಡುಗಿ ..
ಚಿದಂಬರಂ : ಸಾಕು ನಿಲ್ಸಯ್ಯ ನಿನ್ನ ಪುರಾಣ !ಜಾಗದ ಡೀಟೇಲ್ಸ್ ಕೇಳಿದ್ರೆ ಹುಡುಗಿ ಪುರಾಣ ಹೇಳ್ತೀಯಲ್ಲ !ಬುದ್ಧಿ ಗಿದ್ದಿ ಇದೆ ಏನ್ರೀ?
ಜನಾರ್ಧನ್ : ಹೌದು ಸಾರ್ ಅವಳೇ ತುಂಬಾ ಡೇಂಜರಸ್ !!!!ನಾವ್ಯಾರು ಜಾಗ ಮಾರೋದಿಲ್ಲ ಅಂತ ಸ್ಪಷ್ಟವಾಗಿ ಹೇಳಿರೋದು ಅವಳೇ ಸಾರ್ .ಮಾತೆತ್ತಿದರೆ ಪರಿಸರ ,ಹಸಿರು ಹೊಲ ಕಾಡು ಅಂತ ಭಾಷಣ ಬಿಗೀತಾಳೆ ಸಾರ್ .
ಚಿದಂಬರಂ : ಇರ್ಲಿ ಬಿಡಿ ಅವೆಲ್ಲ ಸರಿ ಮಾಡೋಣ ,ನಾವೀಗ ಒಮ್ಮೆ ಸಾವಕಾರ್ ರಾಮಣ್ಣ ಮತ್ತು ಕಾಳೆ ಗೌಡರನ್ನು ನೋಡಿ ಬರೋಣ ..

                                      
                                              ದೃಶ್ಯ 2 
                                      (ಕಾಳೆಗೌಡರ ಮನೆ  )
ಜನಾರ್ಧನ್ : ಇದೇ ಸಾರ್ ಕಾಳೆ ಗೌಡರ ಮನೆ ..ಇರಿ ಅವರನ್ನು ಕರೀತೀನಿ ..ಗೌಡ್ರೇ..ಗೌಡ್ರೇ..ಕಾಳೆ ಗೌಡ್ರೇ ..
ಕಾಳೆ ಗೌಡ ;  ಓ ಬಂದೇ..ಯಾರೂ ..?ಓ ಜನಾರ್ಧನಪ್ನೋರಾ ?!ಮತ್ಯಾಕ್ ಬಂದ್ರಿ ?ನಮ್ಮ ಚಿನ್ಮಯಿ ಅಮ್ಮಾವ್ರು ಮೊನ್ನೇನೆ ಏಳವ್ರಲ್ವ ?ನಾವ್ಯಾರು ಜಾಗ ಮಾರಕಿಲ್ಲ ಅಂತ !
ಜನಾರ್ಧನ್ :ಅದ್ಕೆ ನಾವು ಬಂದಿರೋದು ..ನೋಡಿ ಗೌಡ್ರೇ ..ಚಿದಂಬರಂ ಅಂತ ನಮ್ ರಾಜ್ಯದಲ್ಲೇನೆ ದೊಡ್ಡ ವ್ಯಕ್ತಿಗುಳು ..ತುಂಬಾ ದೊಡ್ಡ ಶ್ರೀಮಂತ್ರು..!ಅವ್ರ ತಾವ 10-12 ಕಾರು ಜೀಪು ಐತೆ ...ತುಂಬಾ ಬ್ಯುಸಿ ಇರ್ತಾರೆ ..ಇವರ ಹತ್ರ ಮಾತಾಡೋಕೆ ಜನ ಕ್ಯೂ ಕ್ಯೂ ನಿಂತಿರ್ತಾರೆ ಗೊತ್ತಾ !ಆದ್ರೂನು ನಿಮ್ಹತ್ರ ಮಾತಾಡೋಕೆ ಅಂತಾನೆ ಬಿಡುವು ಮಾಡಿಕೊಂಡು ಬಂದಿದ್ದಾರೆ ..!
ಕಾಳೆ ಗೌಡ : ಓ ಹೌದಾ !..ಬನ್ನಿ ಸ್ವಾಮಿ ಕುಂತ್ಕೊಳ್ಳಿ..ನಾವು ಹಳ್ಳಿ ಜನ ಹೆಂಗೆ ಉಪಚಾರ ಮಾಡ್ಬೇಕು ಅಂತ ತಿಳಿಯಾಕಿಲ್ಲ .
ಚಿದಂಬರಂ : ಇರಲಿ ಬಿಡಿ ಗೌಡ್ರೇ ..ನೋಡಿ ನನಗೆ ಸುತ್ತಿ ಬಳಸಿ ಮಾತಾಡಿ ಅಭ್ಯಾಸ ಇಲ್ಲ ..ನೋಡಿ ನಿಮಗೆ ಎಕರೆಗೆ ನಾಲ್ಕು ಲಕ್ಷದಂತೆ ಕೊಡ್ತೀನಿ ಅಂದ್ರೆ ನಿಮಗೆ ಒಂದು ಕೋಟಿ ರುಪಾಯಿ ಕೊಡ್ತೀನಿ .ಇಷ್ಟು ಬೆಲೆ ನಿಮಗೆ ಯಾವತ್ತಿಗೂ ಸಿಗಲ್ಲ ..ಇಗ ಹೇಳಿ ನನಗೆ ನಿಮ್ಮ ಜಮೀನು ಮಾರಾಟ ಮಾಡ್ತೀರಾ ..?
ಕಾಳೆ ಗೌಡ : ಯವ್ವಿ ಯವ್ವಿ ಯವ್ವೀ ..!! ಒಂದು ಕೋಟೀನಾ?ಒಂದು ಕೋಟಿ ದುಡ್ಡು ಅಂದ್ರೆ ಎಷ್ಟಾಗುತ್ತೋ ?!
ಜನಾರ್ಧನ್ “ ಒಂದು ಕೋಟಿ ಅಂದ್ರೆ ತುಂಬಾ ದೊಡ್ಡ ಮೊತ್ತ ..ಅದನ್ನು ಇಡೋಕೆ ನಿಮ್ಮ ಪೆಟ್ಟಿಗೆ ಎಲ್ಲ ಸಾಕಾಗಲ್ಲ !ತುಮ್ಬೋದಾದ್ರೆ ಈ ಕೋಣೆ ಪೂರ್ತಿ ತುಂಬುತ್ತೆ ಗೊತ್ತಾ !
ಕಾಳೆ ಗೌಡ  : ಹಂ ಗಾದ್ರೆ ನಾವದನ್ನ ಎಲ್ಲಿಡೋದು ಮತ್ತೆ ?
ಜನಾರ್ಧನ್ : ಅಡಿಕ್ಕೆನು ಚಿಂತೆ ಮಾಡ್ಬೇಡಿ ..ಅದ್ನ ಬ್ಯಾಂಕ್ ನಲ್ಲಿ ಇಟ್ಟು ತಿಂಗಳು ತಿಂಗಳು ಪುಕ್ಸಟೆ ಬಡ್ಡಿ ಪಡಿ ಬಹುದು !ನೀವು ಹ್ಹೂ ಅನ್ನಿ ನಾವೇ ಎಲ್ಲ ವ್ಯವಸ್ತೆ ಮಾಡಿಕೊಡ್ತೀವಿ 
ಚಿದಂಬರಂ :ಹಾಗಾದ್ರೆ ನೀವು ನಿಮ್ಮ ಜಮೀನು ನಮಗೆ ಮಾರಾಟ ಮಾಡ್ತೀರಿ ಅಂತ ಆಯ್ತು ಅಲ್ವ ?
ಕಾಳೆ ಗೌಡ : ಆದ್ರೂ ಒಂದ್ಮಾತು  ಊರು ಜನರತ್ರ ,ಚಿನ್ಮಯಿ ಅಮ್ನೋರ ಹತ್ರ ಕೇಳ್ತೀನಿ ..
ಚಿದಂಬರಂ : ನೀವು ಯಾರ ಹತ್ರ ಬೇಕಾದ್ರೂ ಕೇಳಿ ..ಎಲ್ರಿಗೂ ನಾನು ಎಕರೆಗೆ ನಾಲ್ಕು ಲಕ್ಷ  ಕೊಡ್ತೀನಿ ,ಅಲ್ದೆ ಎಲ್ರಿಗೂ ನಮ್ ಕಂಪನಿ ಳಿ ಒಳ್ಳೆ ಕೆಲ್ಸಾನು ಕೊಡ್ತೀನಿ ..ಅದ್ನ ಎಲ್ರಿಗೂ ತಿಳ್ಸಿ ಹೇಳಿ ..ನಿಮ್ಮೂರು ಜನರ ಬಡತನ ಎಲ್ಲ ಒಂದು ಕ್ಷಣದಲ್ಲಿ ಮಾಯವಾಗಿ ಬಿಡುತ್ತೆ ..ಆಯ್ತಾ ..
ಕಾಳೆ ಗೌಡ :ಹಾಗಾದ್ರೆ ಒಂದು ಕೆಲಸ ಮಾಡೋಣ ..ನಾಳೆ ನೀವು ಸಂಜೆ 5 ಗಂಟೆಗೆ ಇಲ್ಲಿಗೆ ಬನ್ನಿ ..ನಾನು ಎಲ್ರ ಹತ್ರ ಇಲ್ಲಿಗೆ ಬರೋಕೆ ಹೇಳ್ತೀನಿ ಆಮೇಲೆ ನೋಡೋಣ ..
ಚಿದಂಬರಂ : ಸರಿ ಹಾಗಾದ್ರೆ ನಾವು ನಾಳೆ ಬರ್ತೀವಿ 
               
                ದೃಶ್ಯ 3

(ಕಾಳೆಗೌಡರ ಮನೆಯಲ್ಲಿ ರೈತರೆಲ್ಲ ಸೇರಿ ಮಾತಾಡುತ್ತಿರುತ್ತಾರೆ )
ಕಾಳೆ ಗೌಡ :ನೀವೆಲ್ಲ ನನ್ ಮಾತಿಗೆ  ಬೆಲೆ ಕೊಟ್ಟು ಬಂದಿದ್ದೀರ..ಭಾಳ ಸಂತೋಷ ..ನಾ ಏನ್ ಹೇಳೋಕೆ ಹೊರಟೀವ್ನಿ ಅಂದ್ರೆ ..ಅದೇ ಮೊನ್ನೆ ಒಬ್ರು ನಮ್ಮ ಜಾಗ ಮಾರಾಟ ಮಾಡ್ತೀರಾ ಅಂತ ಕೇಳ್ಕೊಂಡು ಬಂದಿದ್ರಲ್ಲ ..ಅವ್ರು ನಮ್ಮೆಲ್ಲರ ಜಾಗಕ್ಕೆ ಎಕರೆಗೆ ನಾಲ್ಕು ಲಕ್ಷದಂತೆ ಕೊಡ್ತಾರಂತೆ.. !
ರೈತರು :ಎಕರೆಗೆ ನಾಲ್ಕು ಲಕ್ಷ ನಾ !!!(ಬೆರಳನ್ನು ಮೂಗಿಗೆ ಇಟ್ಟು  ಕೊಂಡರು )
ಕಾಳೆ ಗೌಡ :ಅದು ಅಲ್ದೆ ನಮಗೆ ನಮ್ಮ ಮಕ್ಕಳಿಗೆ ಅವ್ರ ಫ್ಯಾಕ್ಟರಿ ನಲ್ಲಿ ಕೆಲಸ ಕೊಡ್ತಾರಂತೆ !
ರೈತರು : ಹೌದಾ !
ಕಾಳೆ ಗೌಡ :ಈಗ ಹೇಳಿ ಯಾರೆಲ್ಲ ಜಮೀನು ಮಾರ್ತೀರಿ ?
ಚನ್ನೆ ಗೌಡ : ನಾನು ಕೊಡ್ತೀನಿ ..
ಬೆಟ್ಟೆ ಗೌಡ :ನಾನು ಮಾರಾಟ ಮಾಡ್ತೀನಿ 
ರಾಮಣ್ಣ :ನಮ್ಗೂ ಈ ಸಾಕು ಸಾಲದ ಬದುಕು ಸಾಕಾಗಿ ಹೋಗಿದೆ ..ಒಮ್ಮಗೇ ದುಡ್ಡು ಬಂದ್ರೆ ಅದ್ನ ಬ್ಯಾಂಕ್ ನಲ್ಲಿಟ್ಟು ಆರಾಮಾಗಿರ ಬಹುದು.
ಚಿನ್ಮಯಿ :ನೋಡಿ ನಾವೆಲ್ಲಾ ಜಮೀನು ಮಾರಾಟ ಮಾಡೋದು ಸರಿಯಲ್ಲ .ನಾವು ಜಾಗ ಕೊಟ್ರೆ ಅವರು ರಾಸಾಯನಿಕ ಕಾರ್ಖಾನೆ ಹಾಕುತ್ತಾರೆ .ಆಗ ನಮ್ಮ ಈ ಹಸಿರು ಹೊಲ ಗದ್ದೆ ತೋಟ ಎಲ್ಲ ಹಾಳಾಗುತ್ತೆ ..ಹಸಿರು ಕರಟಿ ಹೋಗುತ್ತೆ ..ಹಸಿರು ನಮ್ಮ ಉಸಿರು ಅಂತ ನಿಮಗೆಲ್ಲ ಗೊತ್ತು ತಾನೇ ..?
ರಾಮಣ್ಣ :ಅದು.. ಸರಿ..ಆದ್ರೆ ..
ಕಾಳೆ ಗೌಡ :ಆದ್ರೆ..ಗೀದ್ರೆ ಏನಿಲ್ಲ ..ಗಾಳಿ ಬಂದಾಗ ತೂರಿ ಕೊಳ್ಳೋದು ಜಾಣರ ಲಕ್ಷಣ ..ನಾನಂತೂ ನನ್ನ ಜಮೀನು ಮಾರಾಟ ಮಾಡ್ತೀನಿ .
ಚಿನ್ಮಯಿ : ಗೌಡ್ರೇ ನಿಮ್ಮ ತೋಟದ ನಡುವೆ ನಾಗ ಬಣ ಇದೆಯಲ್ಲ ..ಅದು ದೋಷ ಕೊಡೋದಿಲ್ಲವ ?
ರಾಮಣ್ಣ : ಓ ಸುಮ್ಕಿರವ್ವ ..ಎಲ್ಲ ಮೂಢ ನಂಬಿಕೆ ಅದು .
ಚಿನ್ಮಯಿ :ಅದು ಮೂಢ ನಂಬಿಕೆ ಅಲ್ಲ ರಾಮಣ್ಣ .ನಮ್ಮ ಹಿರಿಯರು ಕಾಡಿನ ರಕ್ಷಣೆಗೆ ,ಗಿಡ ಮರಗಳ ರಕ್ಷಣೆ ಗಾಗಿ ಇದು ನಾಗ ಬನ,ಅದು ಬ್ರಹ್ಮ ರಾಕ್ಷಸನ ತಾಳೆ ಮರ,ಇದು ಪಂಜುರ್ಲಿ ಕ್ಷೇತ್ರ,ಅದು ದೈವದ ಮರ,ತುಳಸಿ ವಿಷ್ಣುವಿಗೆ ಪ್ರಿಯ ,ಬಿಲ್ವ ಪತ್ರೆ ಶಿವನಿಗೆ ಇಷ್ಟ,ಗರಿಕೆ ಗಣಪತಿಗೆ ಇಷ್ಟ ಅಂತ ಪರಿಸರ ,ಹಸಿರು ಸಂರಕ್ಷಣೆ ಮಾಡಿಕೊಂಡು ಬಂದಿದ್ದಾರೆ.ನಾವು ಮಾತ್ರ ಅದನ್ನು ಮೂಢ ನಂಬಿಕೆ ಅಂತ ಹೇಳಿಕೊಂಡು ಪರಿಸರ ನಾಶ ಮಾಡ್ತಿದ್ದೇವೆ ,ಗಿಡ ಮರ ಕಡಿದರೆ ಮಳೆ ಬರಲ್ಲ ,ನೀರಿನ ಒರತೆ ಆರೋಗುತ್ತೆ,ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತದೆ.
ಚೆನ್ನೇ ಗೌಡ :ಅದೆಲ್ಲ ಟಿವಿನಲ್ಲಿ ರದಿಒನಲ್ಲಿ ಹೇಳೋಕೆ ಕೇಳೋಕೆ ಸರಿ ಅಕ್ಕಾವ್ರೆ .ನಾವೀಗ ಜಮೀನು ಮಾರಾಟ ಮಾಡಿದ್ರೆ ಕೈ ತುಂಬಾ ದುಡ್ಡು ಬರುತ್ತೆ,ಜೊತೆಗೆ ನಮ್ಗೆ,ನಮ್ಮ ಮಕ್ಕಳಿಗೆ ಫ್ಯಾಕ್ಟರಿಲಿ ಕೆಲ್ಸಾನು ಸಿಗುತ್ತೆ ಗೊತ್ತಾ ?
ಚಿನ್ಮಯಿ : ನಮ್ಗೆ ಕೆಲಸ ದುಡ್ಡು ಏನೋ ಸಿಗಬಹುದು.ಆದರೆ ಅದನ್ನ ಅನುಭವಿಸೋಕೆ ಆರೋಗ್ಯಾನೆ ಸರಿ ಇಲ್ಲದೆ ಆಗಬಹುದು ಗೊತ್ತಾ ?ಫ್ಯಾಕ್ಟರಿಯಿಂದ ಹೊರ ಬರೊ ಗಾಳಿ ವಿಷಯುಕ್ತವಾಗಿರುತ್ತೆ ,ಅದರಿಂದ ಉಂಟಾಗೋ ಧೂಳಿನಿಂದ ಪರಿಸರ ಹಾಳಾಗುತ್ತೆ .ಅಲ್ಲಿಂದ ಹೊರ ಬರೊ ವಿಷಯುಕ್ತ ನೀರು ನಮ್ಮ ನದಿ ಕೆರೆ ಭಾವಿ ಸೇರಿ ನೀರು ಹಾಳಾಗುತ್ತೆ ,ಹಾಲು ಗಾಳಿ ಕೆಟ್ಟ ನೀರು ಕುಡುದು ನಮಗೆ ಚಿತ್ರ ವಿಚಿತ್ರ ರೋಗಗಳು ಬರುತ್ತೆ ಗೊತ್ತಾ ?ಆದ್ರಿಂದ ಯಾರು ಜಾಗ ಮಾರಾಟ ಮಾಡಬೇಡಿ .
(ಅಲ್ಲೇ ಬದಿಯಲ್ಲಿ ಮರೆಯಾಗಿ ನಿಂತು ಇವರ ಮಾತುಗಳನ್ನು ಕೇಳುತ್ತಿದ್ದ ಚಿದಂಬರಂ ಪ್ರವೇಶ ಮಾಡುತ್ತಾನೆ)
ಚಿದಂಬರಂ :ಛೆ,,ಛೆ..ಇಲ್ಲಪ್ಪ !ಹಾಗೇನೂ ಆಗಲ್ಲ ..ನೀವು ಮಾತುಗಳು ನಮ್ಗೆ ಕೇಳಿಸ್ತು ಎಲ್ಲ ..ಗಾಳಿ ನೀರು ಏನೂ ಆಗಲ್ಲ ..
ನೀವೀಗ ಕಟ್ಟಿಗೆ ಉರಿಸಿದಾಗ ಹೊಗೆ ಬರುತ್ತಲ್ಲ..ಆಗ ಗಾಳಿ ಹಾಳಾಗುತ್ತದಾ ?
ರೈತರು :ಇಲ್ಲ ..ಇಲ್ಲ ..
ಚಿದಂಬರಂ:ಹಾಗೇನೆ ಫ್ಯಾಕ್ಟರಿಯಿಂದ ಬರೊ ಹೊಗೆ ಕೂಡಾ !ಅದರಿಂದ ಏನು ಆಗಲ್ಲ ..ಗೊತ್ತಾಯ್ತಾ ?ಹಾಗೇನೆ ನೀವು ಧಾನ್ಯ ಬಡಿಯುವಾಗ ,ಭತ್ತ ಕುಟ್ಟುವಾಗ ಧೂಳು ಬರುತ್ತಲ್ಲ ಅದರಿಂದ ಪರಿಸರ ಹಾಳಾಗುತ್ತ ?ಇಲ್ಲ ತಾನೇ ಹಾಗೆಯೇ ಫ್ಯಾಕ್ಟರಿಯಿಂದ ಬರೊ ಧೂಳು ಕೂಡಾ ಏನು ತೊಂದರೆ ಆಗಲ್ಲ ..ಈಗ ಹೇಳಿ ಯಾರೆಲ್ಲ ನಿಮ್ಮ ಜಮೀನು ಮಾರಾಟ ಮಾಡ್ತೀರಿ ಹೇಳಿ ?
ಎಲ್ಲರೂ :ನಾನು.. ನಾನು ..
                 (ಚಿನ್ಮಯಿ ಮಾತ್ರ ಏನು ಮಾತಾಡದೆ ಸುಮ್ಮನಿರುತ್ತಾಳೆ )
ಚಿದಂಬರಂ : ಏನ್ ತಾಯಿ ನೀವೇನೂ ಹೇಳ್ತಾನೆ ಇಲ್ಲ ?
ಚಿನ್ಮಯಿ : ಹೇಳೋಕೆನಿದೆ ?ನಾನು ನನ್ ಜಾಗಾನ ಮಾರಾಟ ಮಾಡೋದಿಲ್ಲ .ನನ್ನ ನಾಲ್ಕು ಎಕರೆ ಜಾಗ ಬಯಲಿನ ಮಧ್ಯದಲ್ಲಿ ಕಣ್ಣಿನಂತೆ ಇದೆ . ಈ ಜಾಗ ಇಲ್ದೆ ನೀವು ಫ್ಯಾಕ್ಟರಿ ಹಾಕೋಕೆ ಸಾಧ್ಯಾನೆ ಇಲ್ಲ..
ಚಿದಂಬರಂ : ಅಯ್ಯಯ್ಯೋ ಹಾಗೆಲ್ಲ ಮಾತಾಡಬೇಡ ತಾಯಿ.ನಿಮಗೆ ಬೇಕಿದ್ರೆ ನಾನು ಎಕರೆಗೆ 8 ಲಕ್ಷ ಕೊಡ್ತೀನಿ .. ಆ ಜಾಗ ನಮಗೆ ಕೊಟ್ಬಿಡು ತಾಯಿ ..
ಚಿನ್ಮಯಿ :  (ಧ್ವನಿ ಏರಿಸಿ )ನನ್ನಲ್ಲಿರೋದು ಒಂದು ನಾಲಿಗೆ ..ಒಂದೇ ಮಾತು..ನೀವು ಎಂಟು ಲಕ್ಷ ಅಲ್ಲ ಎಂಟು ಕೋಟಿ ಕೊಟ್ರು ನಾನು ಜಾಗ ಮಾರೋದಿಲ್ಲ ,ಮಾರೋದಿಲ್ಲ ..ಮಾರೋದೇ ಇಲ್ಲ.
ಚಿದಂಬರಂ : (ಕೋಪದಿಂದ ಚಿಟಿಕೆ ಹೊಡೆದು ) ಲೇ ..ಚಿನಾಲಿ ..ನಿನ್ನ ನೀನು ಏನು ಅಂತ ತಿಳ್ಕೊಂಡಿದ್ದೀಯ ?ನಾನು ಏನು ಅಂತ ತೊರ್ಸಿ ಕೊಡ್ತೀನಿ ನಿಂಗೆ ನೋಡ್ತಾ ಇರು .ನಿನ್ನ ಏನು ಮಾಡ್ಬೇಕು ಅಂತ ನಮ್ಗೆ ಗೊತ್ತು ..ರೀ ಜನಾರ್ಧನ್ ..ಉಳಿದವರಿಗೆಲ್ಲ ಹಣ ಕೊಟ್ಟು ಜಾಗ ಖರೀದಿ ವ್ಯವಸ್ಥೆ ಮಾಡ್ರೀ ..
ಜನಾರ್ಧನ್ :ಸರಿ ಸಾರ್ ..
ರೈತರು : (ಚಿನ್ಮಯಿಯನ್ನು ನೋಡಿ )ಥೂ  .!ಇವಳು ..ಇವಳ ಧಿಮಾಕಿಗಿಷ್ಟು ಬೆಂಕಿ ಬೀಳ !
                 

                                     ದೃಶ್ಯ 4 
                         (ಚಿದಂಬರಂ ಕಚೇರಿ )
ಚಿದಂಬರಂ : ಏನು ಜನಾರ್ಧನ್ ಇನ್ನೂ ಬಂದೆ ಇಲ್ಲ ..ಒಂದ್ವಾರ ಆಯ್ತಲ್ಲ ..ಓ ಅಲ್ಲಿ ಬರ್ತಾ ಇದ್ದಾನೆ .(ಮುಂದೆ ಹೋಗಿ ) ಏನು ಏನಾಯ್ತು ಹಿಡಿದ ಕೆಲಸ ?!
ಜನಾರ್ಧನ್ : ಎಲ್ಲ ನಮ್ ಪ್ಲಾನ್ ತರಾನೆ ನಡೀತು ಸಾರ್ ...ಚಿನ್ಮಯಿ ಮನೆ ಹಿಂಬದಿಲಿ ಹೆರಾಯಿನ್ ಗಾಂಜಾ ಎಲ್ಲ ಅಡಗಿಸಿ ಇಟ್ಟು  ಬಿಟ್ಟು ಪೋಲಿಸ್ ಸ್ಟೇಷನ್ ಗೆ ಫೋನ್ ಮಾಡಿ ಹೇಳ್ದೆ  ಸಾರ್ ..ಪೋಲಿಸ್ನೋರು ಬಂದು ಅವಳ್ನ ಹಿಡ್ಕೊಂಡು ಹೋಗಿ ಜೈಲಿಗೆ ಹಾಕಿದ್ರು..ಊರವರು ಯಾರು ಅವರ ಸಹಾಯಕ್ಕೆ ಹೋಗಲಿಲ್ಲ ..ಹೆರಾಯಿನ್ ಗಾಂಜಾ ಅಂದ್ರೆ ಏನು ಅಂತಾನೆ ಗೊತ್ತಿಲ್ಲ ಸಾರ್ ನನ್ನ ಬಿಟ್ಟು ಬಿಡಿ ಅಂತ ಅತ್ತು ಕೊಂಡು  ಗೋಗರೆಯುತ್ತಾ ಹೋದ್ಲು ಸಾರ್ ! ಆ ಇನ್ಸ್ಪೆಕ್ಟರ್  ಗೆ ಕೈ ಬಿಸಿ ಮಾಡಿ 5 ವರ್ಷ ಜೈಲ್ ಆಗೋ ತರ ಮಾಡಿದ್ದೀನಿ ಸಾರ್ .!
ಚಿದಂಬರಂ :ಭೇಷ್ ಭೇಷ್ !ನನ್ನ ಶಿಷ್ಯ ಅಂದ್ರೆ ನೀನೇ ಕಣಯ್ಯ, ನಾಳೆಯಿಂದಲೇ ನಿನ್ನ ಸಂಬಳ ಹತ್ತು ಸಾವಿರ ಹೆಚ್ಚು ಮಾಡಿದ್ದೀನಿ ನೋಡು .ಈ ಕೆಲಸ ಮಾಡಿದ್ದಕ್ಕೆ ಇದು ತಗೋ ಗಿಫ್ಟ್ (ಕೊರಳಿನಿಂದ ಚಿನ್ನದ ಸರ ತೆಗೆದು ಕೊಡುತ್ತಾನೆ )
ಜನಾರ್ಧನ್ :ಥಾಂಕ್ಯೂ ,ಥಾಂಕ್ಯೂ ಸರ್ 
ಚಿದಂಬರಂ : ಇನ್ನಲ್ಲಿ ಫ್ಯಾಕ್ಟರಿ ಹಾಕೋಕೆ ಯಾವ ಅಡ್ಡಿಯೂ ಇಲ್ಲ ,ಇವತ್ತಿನಿಂದಲೇ ಎಲ್ಲ ಏರ್ಪಾಡು ಮಾಡಿ ,ತಿಂಗಳ ಒಳಗೆ ಫ್ಯಾಕ್ಟರಿ ಸುರು ಆಗ್ಬೇಕು 
ಜನಾರ್ಧನ್ : ಸರಿ ಸರ್ 
                                       ದೃಶ್ಯ 5 
(ಸೂತ್ರಧಾರನ ಪ್ರವೇಶ)
ಹಾಡು ;
ಕಳೆದವು ಐದು ಘೋರ ವರುಷ 
ಮಾಯವಾಯಿತು ಎಲ್ಲರ ಹರುಷ 
ಬಯಲು ಬರಡಾಗಿದೆ 
ಗಿಡ ಮರ ಅಳಿದು ಹೋಯಿತು
ಮಣ್ಣು ಮರಳು ಆಯಿತು  
ಬಿಳಿಯ ನೀರು ಕೆಂಪಾಯಿತು 
ಕೆಂಪುನೀರು ಕಪ್ಪಾಯಿತು 
ಗಾಳಿ ವಿಷವಾಯಿತು 
ತಿಟ್ಟ ಕೇರಿ ಕೆಟ್ಟು ಹೋಯಿತು

ಸೂತ್ರಧಾರ :5 ಘೋರ ವರ್ಷಗಳು ಕಳೆದಿವೆ  ಜೈಲಿನಿಂದ ಬಿಡುಗಡೆ ಆಗಿ ಚಿನ್ಮಯಿ ಕೇರಿಗೆ ಬರುತ್ತಾಳೆ ಫ್ಯಾಕ್ಟರಿ ಹೊಗೆ ಕಾರುತ್ತಿದೆ ಹಸಿರು ಬರಡಾಗಿದೆ ಎಲ್ಲರ ಆರೋಗ್ಯ ಹಾಳಾಗಿದೆ ..ಮುಂದೇನಾಯಿತು ನೋಡೋಣ ..
(ಸೂತ್ರಧಾರನ ನಿರ್ಗಮನ )
(ಚಿನ್ಮಯಿಯ ಪ್ರವೇಶ ) 
(ದಾರಿಯಲ್ಲಿ ಕಾಳೆ ಗೌಡ ಎದುರಾಗುತ್ತಾನೆ )
ಚಿನ್ಮಯಿ : ಏನು ಗೌಡರೆ ಹೇಗಿದ್ದೀರಿ ?
ಕಾಳೆ ಗೌಡ ; ಏನು ಹೇಳಲಮ್ಮ ನನ್ನ ಅವಸ್ಥೆ ?! ನನ್ನ ದುರವಸ್ಥೆಯನ್ನು ಏನಂತ ಹೇಳಲಿ ತಾಯಿ (ಕೆಮ್ಮ್ಮು )ನಿನ್ನ ಮಾತು ಕೇಳದೆ ನಾವು ತಪ್ಪು ಮಾಡಿದೆವು ತಾಯಿ ..ನೀನು ತಪ್ಮಾದಿಲ್ಲ ಅಂತ ಗೊತ್ತಿದ್ರು ಸುಮ್ಕಿದ್ದು ನಿಂಗೆ ಅನ್ಯಾಯ ಮಾಡಿದ್ವಿ ತಾಯಿ !ಅದಕ್ಕೆ ದೇವರು ತಕ್ಕ ಶಿಕ್ಷೆ ಕೊಟ್ಟು ಬಿಟ್ಟ ತಾಯಿ ..ನನ್ ಮಗ ಮಾದೇವು ವಿಚಿತ್ರ ರೋಗದಿಂದ ನರಳಿ ತೀರ್ಕೊಂಡು ಬಿಟ್ಟ ಕಣಮ್ಮಾ ..(ಅಳು )
ಚಿನ್ಮಯಿ : ಇದು ದೇವರು ಕೊಟ್ಟ ಶಿಕ್ಷೆ ಅಲ್ಲ ಗೌಡ್ರೇ ..ಇದು ಪರಿಸರ ಮಾಲಿನ್ಯದಿಂದ ಉಂಟಾಗಿರೋ ಸಮಸ್ಯೆ 
ರಾಮಣ್ಣ :ತಾಯಿ ನಮ್ಮನ್ನು ಕ್ಷಮಿಸು ತಾಯಿ (ಕೆಮ್ಮು ,ದಮ್ಮು ) ದೇವ್ರು ತಕ್ಕ ಶಿಕ್ಷೆ ಕೊಟ್ಟಿದ್ದಾನೆ ನಮಗೆ ..ನನ್ನ ಮಗಳ ಮೈ ಮೇಲೆಲ್ಲಾ ವಿಚಿತ್ರ ಹುಣ್ಣು ಗಳಾಗಿವೆ ತಾಯಿ ..ಏನು ಔಷಧ ಹಾಕಿದ್ರು ಗುಣ ಆಗುತ್ತಿಲ್ಲ ಕಣವ್ವ ..ನೀನು ಜೈಲಿಗೆ ಹೋದ ಮೇಲೆ ಊರವರ ಆರೋಗ್ಯಾನೆ ಸರಿ ಇಲ್ಲ ತಾಯಿ ,ನಿಂಗೆ ಅನ್ಯಾಯ ಮಾಡಿದ್ದಕ್ಕೆ ಸಿಕ್ಕಿರೋ ಪ್ರತಿ ಫಲ ಕಣಮ್ಮಾ ..ನಮ್ಮನ್ನು ದೊಡ್ಡ ಮನಸ್ಸು ಮಾಡಿ ಕ್ಷಮಿಸು ತಾಯಿ 
ಚಿನ್ಮಯಿ : ಕ್ಷಮಿಸೋಕೆ ನಾನ್ಯಾರು ರಾಮಣ್ಣ ..ಆದರೆ ಈ ರೋಗ ರುಜಿನಗಳೆಲ್ಲ ಈ ಫ್ಯಾಕ್ಟರಿಯಿಂದ  ಬರೊ ಧೂಳು ,ಹೊಗೆ,ವಿಷಯುಕ್ತ ನೀರಿನಿಂದ ಬಂದಿರೋದು ..ಆದ್ರಿಂದ ಈ ಫ್ಯಾಕ್ಟರಿನ ಮುಚ್ಚಿಸಿದ್ರೆ ನಿಮ್ಮಗಳ ಅರೋಗ್ಯ ಸರಿ ಹೋಗಬಹುದು .
ರಾಮಣ್ಣ : ಮುಚ್ಚಿಸೋದು ಹ್ಯಾಗೆ ತಾಯಿ ?ನಾವೆಲ್ಲಾ  ನಮ್ಮ ಜಮೀನು ಅವರಿಗೆ ಕೊಟ್ಟಿದ್ದೀವಲ್ಲ ದುಡ್ಡಿಗೆ ಮರುಳಾಗಿ ?!
ಚಿನ್ಮಯಿ :ಅದೇನು ಚಿಂತೆಯಿಲ್ಲ ..ನಾನು ಜಮೀನು ಮಾರಿಲ್ಲ ಅಲ್ವ ?ನನ್ನ ಜಮೀನನ್ನು ಅತಿಕ್ರಮಣ ಮಾಡಿ ಕಾರ್ಖಾನೆ ಕಟ್ಟಿದ್ದಾರೆ ಅಂತ ದೂರು ಕೊಡುತ್ತೇನೆ ,ಆ ಮೇಲೆ ಒಗ್ಗಟ್ಟಿನಿಂದ ಹೋರಾಡೋಣ ,ಇಲ್ಲಿ ಮತ್ತೆ ಹಸಿರನ್ನು ಹರಡಿಸೋಣ .
ರಾಮಣ್ಣ :ಸರಿ ತಾಯಿ ಈಗ ನಮಗೆಲ್ಲ ಬುದ್ಧಿ ಬಂದಿದೆ ಇನ್ನು ಮುಂದೆ ನಾವೆಲ್ಲಾ ನೀನು ಹೇಳಿದ ಹಾಗೆ ಕೇಳ್ತಿವಿ ..
ಚೆನ್ನೇ ಗೌಡ : ಚಿನ್ಮಯಿ ಅಮ್ಮಾವ್ರಿಗೆ ಜಯವಾಗಲಿ 
ಎಲ್ಲರೂ :ಚಿನ್ಮಯಿ ಅಮ್ಮಾವ್ರಿಗೆ ಜಯವಾಗಲಿ ,ಹಸಿರೇ ಉಸಿರಾಗಲಿ ..
(ಸೂತ್ರಧಾರನ ಪ್ರವೇಶ ) 
ಹಾಡು : ( ಜೊತೆಗೆ ನೃತ್ಯ )
ಗೆಳೆಯ ಕೇಳು ಈ ಜಾಣ್ಣುಡಿಯಾ 
ಗಾಜ ಮನೆಯ ಒಡೆಯ ..
ಒಡೆಯದಿರು ಅನ್ಯರ ಮನೆಯ ..
ನಮಗಿರುವುದೊಂದೇ  ನೆಲ ಜಲ ..
ತುಂಬಲಿ ನೆಲ ತುಂಬ ಹಸಿರು 
ಹೊಳೆ ತುಂಬ ನೀರು 
ನಳ ನಳಿಸಲಿ ಈ ಭೂಮಿ 
ಸಿರಿ ಬೆಳೆ ಬೆಳೆಯಲಿ 
ಸಪ್ತ ಸಾಗರದಂಚಿನಲು 
ಬೆಳ್ಳಿ ಬೆಳಕು ಹರಡಲಿ .
ಗೆಳೆಯ ಕೇಳು ಈ ಜಾಣ್ಣುಡಿಯಾ .
ಗಾಜ ಮನೆಯ ಒಡೆಯ ..
ಒಡೆಯದಿರು ಅನ್ಯರ ಮನೆಯ ..
ನಾವು ಬದುಕೋಣ ಬೆಳೆಯೋಣ 
ಬೇರೆಯರು ಬದುಕಲಿ ಬೆಳೆಯಲಿ 
ಉಳಿಯಲಿ ನೆಲ ಜಲ ..
ಬೀಸಿ ಬರಲಿ ಸ್ವಚ್ಚ ಗಾಳಿ 
ಕುಡಿಯಲಿರಲಿ ಶುಧ್ಧ ನೀರು 
ಸ್ವಾರ್ಥಕೆ ಕಡಿವಾಣವಿರಲಿ .
ಗೆಳೆಯ ಕೇಳು ಈ ಜಾಣ್ಣುಡಿಯಾ .
ಗಾಜ ಮನೆಯ ಒಡೆಯ ..
ಒಡೆಯದಿರು ಅನ್ಯರ ಮನೆಯ

ಶುಭಂ……..

       ಡಾ.ಲಕ್ಷ್ಮೀ ಜಿ ಪ್ರಸಾದ                       
ಕನ್ನಡ ಉಪನ್ಯಾಸಕರು 

ಸರ್ಕಾರಿ ಪದವಿ ಪೂರ್ವ ಕಾಲೇಜು 

ಬೆಂಗಳೂರು 




ProfileImg

Written by Dr Lakshmi G Prasad

Verified