ಮೈತುಂಬಾ ಆಯಾಸ...ಭಾರವಾದ ಹೆಜ್ಜೆಗಳು ಇನ್ನಾಗುವುದಿಲ್ಲವೆಂದು ಒಂದೆಡೆ ಮಲಗುವಂತೆಯೂ ಇಲ್ಲ.. ಹೊಟ್ಟೆಯೊಳಗಿರುವ ನನ್ನ ಕಂದಮ್ಮಗಳ ಹಸಿವ ನೀಗಿಸಲು ನಾನು ಆಹಾರ ಹುಡುಕಿಕೊಂಡು ಹೋಗಲೇಬೇಕು.. ಸಾಲು ಸಾಲು ಅಂಗಡಿಗಳಿರುವ ಆ ರಸ್ತೆಯಲ್ಲಿ ಹೋಟೆಲೊಂದರ ಮುಂದೆ ಬಂದು ನಿಂತೆ.. ಆ ಹೋಟೆಲಿನ ಎದುರು ನಿಂತು ಒಂದು ತುತ್ತು ಅನ್ನಕ್ಕಾಗಿ..ಅನ್ನ ಅಲ್ಲಾ ಹಳಸಿದ ಅನ್ನಕ್ಕಾಗಿ ಕಾದ ದಿನಗಳೆಷ್ಟೋ.. ಅಂಗಡಿ ಮಾಲೀಕ ನನ್ನೆಡೆ ಒಂದು ತಾತ್ಸಾರದ ನೋಟ ಬೀರಿ ಹೋಟೆಲ್ ಒಳ ಹೋಗಿ ನಿನ್ನೆ ಉಳಿದ ವಡೆಯೊಂದ ನನ್ನತ್ತ ಎಸೆದ..ಎಸೆದ ಮರುಕ್ಷಣವೇ ನನ್ನನ್ನಲ್ಲಿ ನಿಲ್ಲದೆ ಹೋಗುವಂತೆ ಕೈಯಲ್ಲೇ ಸನ್ನೆ ಮಾಡುತ್ತಾ ನನ್ನೆಡೆಗೆ ಬಂದ.. ನಾನು ಹೆಚ್ಚು ಹೊತ್ತು ಅಲ್ಲಿ ನಿಂತರೆ ಅವನ ವ್ಯಾಪಾರ ಕ್ಷೀಣಿಸುತ್ತದೆಯೆಂಬುದು ಅವನ ಯೋಚನೆ...ಆ ವಡೆಯನ್ನು ತಿಂದವಳು ಮುಖ್ಯ ರಸ್ತೆಯಿಂದ ಹೊರ ಬಂದು ಒಂದೆಡೆ ಕುಳಿತುಕೊಂಡೆ.. ಇತ್ತೀಚೆಗಂತೂ ಬಹಳವೇ ಆಯಾಸ.. ಹೊಟ್ಟೆಯೂ ತುಂಬಿದೆ.. ನನ್ನ ಕಂದಮ್ಮಗಳು ಈ ಕರುಣಾರಹಿತ ಜಗವ ನೋಡಲು ತಯಾರಾಗಿವೆ. ದಿನಗಳು ತುಂಬುತ್ತಾ ಬಂದಿವೆ ಹೆಚ್ಚೆಂದರೆ ಇನ್ನೊಂದೆರಡು ದಿನ ನಾನು ಅಲ್ಲಿ ಇಲ್ಲಿ ಅಲೆದು ಆಹಾರ ಹುಡುಕಿಕೊಂಡು ಹೋಗಬಹುದು ನಂತರ ಆಗುವುದಿಲ್ಲವೇನೋ.. ಏನು ಮಾಡಲಿ, ಎಲ್ಲಿ ಆಶ್ರಯ ಹುಡುಕಿಕೊಳ್ಳಲಿ, ನನ್ನ ನೋಡಿದರೆ ಅಸಹ್ಯ ಪಡುವ ಈ ಜನರಿಂದ ಆಶ್ರಯ ನಿರೀಕ್ಷಿಸುವುದಾದರೂ ಹೇಗೆ ನಾನು..?? ಗರ್ಭಿಣಿ ಎಂದು ತಿಳಿದಿದ್ದರೂ ನನ್ನೆಡೆ ಕಲ್ಲು ತೂರಿದ ಜನರೆಷ್ಟೋ...,ತಾತ್ಸಾರ ತೋರಿ ದೊಣ್ಣೆಯಿಂದ ಹೊಡೆಯಲು ಬಂದ ಜನಗಳೆಷ್ಟೋ...,ಮನೆಯಲ್ಲಿ ಊಟ ಮಿಕ್ಕಿ ಅದು ಹಾಳಾಗುತ್ತಿದ್ದರೂ ನನಗೆ ಒಂದು ತುತ್ತು ಹಾಕಲು ಈ ಮಾನವರು ಹಿಂಜರಿಯುವುದೇಕೆ...?? ಹೌದು ಒಪ್ಪಿಕೊಳ್ಳುವೆ ನೋಡಲು ನಾನು ಸುಂದರವಾಗಿಲ್ಲ ಮೈ ಕೈ ತುಂಬಿಕೊಂಡು ದಷ್ಟಪುಷ್ಟವಾಗಿಲ್ಲಾ.
ಪ್ರೀತಿ ಕಾಳಜಿ ತೋರಲು ಸೌಂದರ್ಯವೆಂಬ ಮಾನದಂಡದ ಅಗತ್ಯವಿದೆಯೇ...??
ಅದೇಕೋ ಈ ಮನುಷ್ಯರು ನನ್ನನ್ನು ನಿರ್ಲಕ್ಷಿಸುವುದ ನೆನೆದು ನನ್ನ ಕಣ್ಣಾಲಿಗಳು ತುಂಬಿ ಬಂದವು.. ಆದರೆ ಈ ನನ್ನ ಕಣ್ಣೀರಿಗೆ ಬೆಲೆ ಕೊಡುವವರಾರು.
ಸೂರ್ಯನ ಕಿರಣಗಳು ನೆತ್ತಿಯ ಮೇಲೆ ಬೀಳುತ್ತಿವೆ.. ಬಿಸಿಲಿನ ತಾಪವು ಹೆಚ್ಚಾಗುತ್ತಿದೆ.. ಹೆಚ್ಚು ಹೊತ್ತು ಈ ಬಿಸಿಲಿನಲ್ಲಿ ಕೂರಲಾಗದೆ ಅಲ್ಲಿಂದ ಎದ್ದು ಹೊರಟೆ..ಯಾವ ಗಮ್ಯಕ್ಕೆಂದು ಸ್ವತಃ ನನಗೆ ತಿಳಿದಿಲ್ಲ.. ರಸ್ತೆಯಲ್ಲಿ ಹೋಗುತ್ತಿದ್ದವಳು ದೊಡ್ಡ ಬಂಗಲೆಯೆದುರು ಒಂದು ಕ್ಷಣ ನಿಂತೆ.. ನಾನು ಆ ರಸ್ತೆಯಲ್ಲಿ ಹೋಗುವಾಗ ದಿನವೂ ಕಾಣಿಸಿಗುವ ದೊಡ್ಡ ಬಂಗಲೆಯದು. ಆ ಮನೆಯಾಕೆಗಂತೂ ನನ್ನ ಮುಖ ನೋಡಿದರೆ ಆಗುವುದಿಲ್ಲ.. ಆಕೆ ಒಂದು ನಾಯಿ ಸಾಕಿದ್ದಾಳೆ.. ಉದ್ದ ಬಿಳಿ ಕೂದಲಿನ ಚಂದದ ಜಾತಿ ನಾಯಿ.. ತನ್ನ ಮಗುವಿಗಿಂತ ತುಸು ಹೆಚ್ಚೇ ಆ ನಾಯಿಯನ್ನು ಪ್ರೀತಿಸುತ್ತಾಳಾಕೆ ಆಕೆಗೆ ಆ ಜಾತಿ ನಾಯಿಯೆಂದರೆ ಎಲ್ಲಿಲ್ಲದ ಒಲವು... ನನ್ನ ಕಂಡರೆ ತೀರದ ಅಸಯ್ಯ.. ಅದೆಂತಹ ಶ್ವಾನ ಪ್ರೀತಿಯೋ ನಾನರಿಯೆ...!!!
ಆಕೆ ಹೊರಬಂದು ನನ್ನ ಓಡಿಸುವ ಮುನ್ನ ನಾನೇ ಆಕೆ ಮನೆಯ ಎದುರಿನಿಂದ ಹೊರಟೆ. ಒಂದು ಅರ್ಧ ಮೈಲಿ ನಡೆದೆಯಷ್ಟೇ ಬಿಸಿಲಿನ ತಾಪಕ್ಕೋ? ತಿಂಗಳು ತುಂಬಿದ್ದಕ್ಕೋ? ಅಥವಾ ಬೆಳಗಿನಿಂದ ಸರಿಯಾಗಿ ಆಹಾರ ಸಿಗದಕ್ಕೋ? ಮುಂದೆ ಹೆಜ್ಜೆ ಇಡಲಾಗಲಿಲ್ಲ.. ಎದುರೊಂದು ಪುಟ್ಟ ಮನೆ ಕಾಣಿಸಿತು ಆ ಮನೆಯ ಹಿಂದೆ ಹೋದೆ. ಅಲ್ಲಿ ಒಂದು ಗೋಣಿ ಚೀಲ ಹಾಸಿದ್ದರು. ಅದರಲ್ಲಿ ಹೋಗಿ ಮಲಗಿಬಿಟ್ಟೆ. ಆಯಾಸಕ್ಕೆ ಕಣ್ಮುಚ್ಚಿದವಳಿಗೆ ನಿದಿರೆಯಾವರಿಸಿದ್ದೇ ತಿಳಿಯಲಿಲ್ಲ..
ಜೋರು ಜೋರು ಮಾತು ಕೇಳಿಸುತ್ತಿದೆ. ಹೌದು ನನ್ನ ಹತ್ತಿರವೇ ಧ್ವನಿ ಕೇಳಿಸುತ್ತಿರುವುದು. ಮೆಲ್ಲಗೆ ಕಣ್ತೆರೆದೆ. ಆ ಮನೆಯಾಕೆ ಅವಳ ಗಂಡ ಅವಳ ಪುಟ್ಟ ಮಗಳು ನನ್ನೆದುರು ನಿಂತಿದ್ದರು.. ನನಗೆ ಎದೆಯೊಳಗೆ ಸಣ್ಣ ಭಯ ಟಿಸಿಲೊಡೆದಿತು..ಇವರೇನಾದರೂ ನನ್ನ ಹೊಡೆದು ಬಿಟ್ಟರೆ... ಎದ್ದು ಓಡಲು ನನ್ನಲ್ಲಿ ತ್ರಾಣವಿಲ್ಲಾ.. ನನಗೇನಾದರೂ ತೊಂದರೆ ಇಲ್ಲ ಆದರೆ ನನ್ನ ಕಂದಮ್ಮಗಳು ಅವುಗಳಿಗೇನಾಗಬಾರದು..
ರೀ ಈ ನಾಯಿ ಗರ್ಭಿಣಿ ಕಂಡ್ರೀ.. ಪಾಪ ತಿಂಗಳು ತುಂಬಿದೆ ಅನಿಸುತ್ತೆ... ನಾವು ಓಡಿಸೋದು ಬೇಡ ಅದು ಇಲ್ಲೇ ಇರಲಿ ಬಿಡಿ ಎಂದಳು ಆ ಮನೆಯಾಕೆ.
ಸರಿ ಸರಿ ಒಳಗೇನಾದ್ರೂ ಇದ್ರೆ ತಂದು ಹಾಕು ಅದಕ್ಕೆ ಎಂದ ಆ ಮನೆಯ ಯಜಮಾನ.. ಆ ಪುಟ್ಟ ಹುಡುಗಿಯಂತೂ ನನ್ನ ಹೊಟ್ಟೆಯನ್ನೇ ಗಮನಿಸುತ್ತಿದ್ದಳು.
ಆ ಮನೆ ಆಕೆ ಒಳಗೆ ಹೋಗಿ ಅನ್ನ ಸಾರು ಕಲಸಿಕೊಂಡು ಬಂದು ನನಗೆ ನೀಡಿದಳು. ಕಣ್ಣಲ್ಲೇ ಆಕೆಗೆ ಕೃತಜ್ಞತೆ ಹೇಳಿದೆ..
ದಿನಗಳು ಉರುಳಿದವು.. ಒಂದು ವಾರ ಕಳೆಯಿತು ಆಕೆಯೇ ನನಗೆ ಊಟ ನೀಡುತ್ತಿದ್ದಳು. ಶ್ರೀಮಂತರಲ್ಲ ಅವರು.. ದಿನಗೂಲಿ ಮಾಡಿ ಬದುಕುವ ಜನ ಆದರೂ ಅವರಿಗೆಂದು ಮಾಡಿಕೊಳ್ಳುವ ಅಡಿಗೆಯಲ್ಲಿ ನನಗಾಗಿ ಸ್ವಲ್ಪ ಊಟವನ್ನು ಎತ್ತಿಡುತ್ತಿದ್ದರು...ಹಣಕ್ಕಿಂತ ಗುಣದ ಶ್ರೀಮಂತಿಕೆಯೇ ಹೆಚ್ಚಿತು ಆ ಮನೆಯಲ್ಲಿ..
ಆಕೆಗೆ ಇಬ್ಬರು ಮಕ್ಕಳು ಒಬ್ಬಳು ಸ್ವಲ್ಪ ದೊಡ್ಡವಳು ಮತ್ತೊಂದು ತೊಟ್ಟಿಲಲ್ಲಿ ಆಡುವ ಪುಟ್ಟ ಕಂದ.. ಬಹುಶಃ ಆಕೆಗೆ ಅರ್ಥವಾಗಿದೆ ತಾಯ್ತನವೇನೆಂಬುದು…
ಆಕೆಯ ಕುಟುಂಬ ನೂರು ಕಾಲ ಸುಖವಾಗಿರಲಿ ಎಂದು ಅದೆಷ್ಟೋ ಬಾರಿ ಪ್ರಾರ್ಥಿಸಿದೆ.. ನನಗೆ ತಿಂಗಳು ತುಂಬಿ ಪ್ರಸವ ವೇದನೆ ಶುರುವಾಗಿತ್ತು.. ಅಬ್ಬಾ..!! ಪ್ರಾಣ ಹೋಗುವಂತಾ ನೋವು ತಡೆಯಲಸಾಧ್ಯ..ಕೊನೆಗೂ ನನ್ನ ಕಂದಮ್ಮಗಳು ಭೂಮಿಗೆ ಬಂದಿದ್ದವು ಅವುಗಳ ಮುಖ ನೋಡುತ್ತಿದ್ದಂತೆ ನನ್ನ ನೋವೆಲ್ಲಾ ಕ್ಷಣ ಮಾತ್ರದಲ್ಲಿ ಮರೆಯಾಗಿತ್ತು.. ನನ್ನ ಕಂದಮ್ಮಗಳು ಇಬ್ಬರೂ ಒಂದೇ ತರ ಬಿಳಿ ಬಣ್ಣದ ಮೇಲೆ ಕಪ್ಪು ಕಪ್ಪು ಚುಕ್ಕೆ.. ಅವುಗಳಿಗೆ ಹಾಲುಣಿಸುತ್ತಾ ನಿದಿರಿಗೆ ಜಾರಿದೆ..
ದಿನೋ ಬೆಳಗ್ಗೆ ಒಂದು ಬಾರಿಯಾದರೂ ಬಂದು ನನ್ನ ನೋಡಿಕೊಂಡು ಹೋಗುತ್ತಿದ್ದಳು ಆ ಮನೆಯ ಪುಟ್ಟ ಹುಡುಗಿ. ಇಂದು ಹಾಗೆಯೇ ನನ್ನ ನೋಡಲು ಬಂದಿದ್ದವಳಿಗೆ ನನ್ನ ಮಡಿಲಲ್ಲಿರುವ ನನ್ನ ಕಂದಮ್ಮಗಳ ನೋಡಿ ತೀರದ ಖುಷಿ.. ಖುಷಿಯಲ್ಲಿ ಕುಣಿದುಬಿಟ್ಟಳು. ಅಮ್ಮಾ ಅಮ್ಮಾ ಬಾ.. ಇಲ್ಲಿ ನೋಡು.. ಅವಳು ಖುಷಿಯಲ್ಲಿ ಕೂಗುತ್ತಿದ್ದರೇ ಅವಳ ಖುಷಿ ನೋಡುವುದೇ ನನಗೆ ಖುಷಿ..
ಏನಾಯ್ತೆ ಮಗಳ ಕೂಗಿಗೆ ಆ ಮನೆಯಾಕೆ ಬಂದಳು. ನನ್ನ ಕಂದಮ್ಮಗಳ ನೋಡಿ ಆಕೆಗೂ ಖುಷಿಯಾಗಿತ್ತು..
ನನಗೀಗ ಆಯಾಸ ಮೈಭಾರವೆಲ್ಲ ಕಡಿಮೆಯಾಗಿದೆ. ಇನ್ನೂ ನನ್ನ ಆಹಾರವನ್ನು ನಾನೇ ಹುಡುಕಿಕೊಳ್ಳಬೇಕೆಂದು ನಿರ್ಧರಿಸಿ ಮನೆಯಿಂದ ಹೊರಬಿದ್ದೆ... ಒಂದೆರಡು ತಿಂಗಳು ಹೀಗೆಯೇ ಕಳೆಯಿತು. ಈಗಲೂ ನಾನು ಅದೇ ಮನೆಯಲ್ಲಿ ಆಶ್ರಯ ಪಡೆದಿದ್ದೇನೆ ರಾತ್ರಿಯ ಊಟಕ್ಕೆ ಮಾತ್ರ ಆ ಮನೆಯಲ್ಲಿಯೆ..ಆ ಮನೆಯವರಿಗೆ ನನ್ನ ಕಂದಮ್ಮಗಳೆಂದರೆ ಬಲು ಪ್ರೀತಿ.. ಆ ಪುಟ್ಟ ಹುಡುಗಿಯಂತೂ ನನ್ನ ಮರಿಗಳೊಂದಿಗೆ ಹೆಚ್ಚು ಸಮಯ ಕಳೆಯುತ್ತಾಳೆ. ಹೀಗೆಯೇ ಒಂದು ದಿನ ಆಹಾರಕ್ಕಾಗಿ ಬಹಳ ದೂರ ಹೊರಟಿದ್ದೆರಸ್ತೆ ದಾಟುವಾಗ ವೇಗವಾಗಿ ಬಂದ ಕಾರೊಂದು ನನ್ನ ಹೊಡೆದುಕೊಂಡು ಹೋಯಿತು..ಸುಮಾರು ದೂರ ಹೋಗಿ ಬಿದ್ದೆ ನಾನು.. ಮೈಯೆಲ್ಲಾ ರಕ್ತಮಯ...ಬಹಳ ದುಬಾರಿ ಕಾರದು ಕಾರಿನೊಳಗಿರುವವ ಬಹಳ ಶ್ರೀಮಂತನಿರಬೇಕು ನನ್ನೆಡೆ ತಿರುಗಿ ನೋಡದೆ ಹೊರಟುಬಿಟ್ಟ.. ನಾನೊಂದು ಬೀದಿ ನಾಯಿಯೆಂದೇ ಆತ ಅಷ್ಟು ತಾತ್ಸಾರ ತೋರಿದ್ದು..
ನನ್ನ ಉಸಿರ ಗತಿ ಕ್ಷೀಣಿಸುತ್ತಿತ್ತು.. ನನ್ನ ಕಂದಮ್ಮಗಳ ಮುಖಗಳೇ ಕಣ್ಮುಂದೆ ಬರುತ್ತಿತ್ತು.. ಆದರೂ ಆ ಮನೆಯಾಕೆಯ ಮೇಲೆ ಸಂಪೂರ್ಣ ವಿಶ್ವಾಸವಿತ್ತು ನನಗೆ ನನ್ನ ಕಂದಮ್ಮಗಳ ಆಕೆ ಅನಾಥ ಮಾಡುವುದಿಲ್ಲವೆಂದು.. ನನ್ನ ಕಂದಮ್ಮಗಳಿಗೊಂದು ಒಳ್ಳೆಯ ಬದುಕು ಕೊಡು ಭಗವಂತ ಎಂದು ಬೇಡಿಕೊಂಡೆ..ನನ್ನ ಉಸಿರು ಹಾರಿಹೋಯಿತು…