ನನ್ನೊಳಗಿನ ನಾನು ಮಾತಾಡಿದಾಗ

ಕತೆ

ProfileImg
19 Jun '24
3 min read


image

ಅದೊಂದು ಬೆಳಕಿನ ಲೋಕ. ಬೆಳಕಿನ ಉಂಡೆಗಳು ಎಲ್ಲೆಡೆ. ಹಾಯಾಗಿ ಹಕ್ಕಿಯಂತೆ ಹಾರಾಡುತ್ತಿರುವ ಅನುಭವ. ಚಿಂತೆಯಿಲ್ಲದೇ ಮೈ ಮನ ಹಗುರವಾದಂಥ ಭಾವನೆ.

ಒಮ್ಮೆಗೆ ಕೂಗೊಂದು ಕಿವಿಗಪ್ಪಳಸಿತು. ನನ್ನ ಹೆಂಡತಿಯ ಸ್ವರವಲ್ಲವೇ? ಎಂದು ನೋಡುವಾಗ, ಅಳುತ್ತಿದ್ದಾಳೆ, ಶೋಕತಪ್ತಳಾಗಿದ್ದಾಳೆ. ನನ್ನ ಮನೆಯ ಚಾವಡಿಯಲ್ಲಿ ಊರಿನ ಜನರೆಲ್ಲಾ ಸೇರಿದ್ದಾರೆ. ತಮ್ಮಷ್ಟಕ್ಕೆ ಮಾತನಾಡುತ್ತಿದ್ದಾರೆ. "ಅರೇ, ಏನಾಯ್ತಪ್ಪ ನನ್ನ ನೋಡಿದ್ರು ಯಾರು ಏನೂ ಮಾತಾಡುತ್ತಿಲ್ಲ. ಗುರುತು ಇಲ್ಲದವರ ತರಹ ಮಾಡ್ತಾ ಇದಾರಲ್ವ? ಅಂತ ನೋಡುವಾಗ, ಪಕ್ಕದ ಮನೆ ಅಜ್ಜಿ "ಅಯ್ಯೇಯ್ಯೋ ನನ್ನ ಮಗನ್ ಥರ ಇದ್ನಲ್ಲಾ, ಹಿಂಗಗ್ಬಾರ್ದಿತ್ತು ಈ ಮಗೂಗೆ,ನಂಗೆ ಬೇಕದ್ದೆಲ್ಲ ಇಲ್ಲ ಅನ್ನದೆ ತಂದು ಕೊಡ್ತಿದ್ನಲ್ಲಾ, ಶಿವನೇ.... ನಂಗ್ಯಾರೂ ಗತಿ ಇನ್ನು "ಅಂತ ಬಾಯಿ ಬಡ್ಕೊಳ್ತಾ ಇತ್ತು. ಯಬ್ಬಾ ಈ ಮುದ್ಕಿಗೆ ನಾನೇ ತಂದುಕೊಡ್ತಾ ಇದ್ದಿದಲ್ವಾ?, ನಾನಿಲ್ಲೇ ಇದ್ದೀನಿ, ಅಂತ ಅಂದ್ಕೊಂಡು ಮುಂದೆ ಹೋದ್ರೆ ಊರಿನ ಹಿರಿ ಮನುಷ್ಯ  "ಈ ಮನುಷ್ಯನಿಗೆ ಬೇರೆ ಹೆಣ್ಣಿನ ಜೊತೆಗೆ ಸಂಬಂಧ ಇತ್ತು,ಹಾಗೆ ಆ ಹೆಣ್ಣಿಗಾಗಿ ಮೈ ತುಂಬಾ ಸಾಲ ಮಾಡ್ಕೊಂಡಿದ್ನಂತೆ, ಅಂತ ಒಂದು ಕಡೆ ಕೈ ತೋರಿಸಿದ. ಹೆಣ! ಬಿಳಿ ಬಟ್ಟೆಯಲ್ಲಿ ಸುತ್ತಿ ನೆಲದಲ್ಲಿ ಮಲಗಿಸಿದ್ದಾರೆ. ಅಯ್ಯೋ ದೇವ್ರೇ ಯಾರಿಗೆ ಏನಾಯ್ತು ಅಂತ ನೋಡಿದ್ರೆ ನನ್ನಂಗೆ ಇದಿಯಲ್ಲ ಅಂದುಕೊಂಡು ಹತ್ತಿರ ಹೋದ್ರೆ ಬೆಚ್ಚಿ ಬೀಳುವಂತ ದೃಶ್ಯ. ನನ್ನ ಮಕ್ಕಳ ಜೊತೆ ನನ್ನ ಹೆಂಡತಿ ಗೋಳಾಡುತ್ತಾ  ಇದ್ದಾಳೆ. ನಾನು ಮುಂದಕ್ಕೆ ಹೋಗಿ ಹೆಂಡತಿಯಲ್ಲಿ ಹೇಳಿದೆ "ನಾನಿಲ್ಲಿದ್ದೇನೆ ಕಣೇ, ಅದ್ಯಾರೋ ಬೇರೆ, ಅಳ್ಬೇಡವೇ, ನೀನೂ ಅತ್ತು ಮಕ್ಳನ್ನೂ ಅಳಿಸ್ತಿದ್ಯಾ, ನಾನಿನ್ನು ಬದ್ಕಿದ್ದೇನೆ ಕಣೇ,"ಅಂತ ಅವಳನ್ನು ಸಮಾಧಾನಿಸಲು ನೋಡಿದೆ. ಆಶ್ಚರ್ಯ! ನನ್ನ ಮಾತು ಕೇಳದ ರಿತಿಯಲ್ಲೇ ಜೋರಾಗಿ ಅಳುತ್ತಿದ್ದಾಳೆ. ಅವಳನ್ನು ಎರಡೂ ಕೈಗಳಿಂದ ಆಲುಗಾಡಿಸಲು ನೋಡಿದೆ, ಅಯ್ಯೋಯ್ಯೋ ಏನಗ್ತಾ ಇದೆ? ಅವಳನ್ನು ಮುಟ್ಟಲು ಆಗುತ್ತಿಲ್ಲವಲ್ಲ!!, ಓ ದೇವರೇ ಇದೇನಾಗಿ ಹೋಯಿತು ಎಂದು ಎದ್ದು ಬಂದೆ. ಯಾರಲ್ಲಿ ಹೇಳಿಕೊಳ್ಳಲಿ ಈ ನೋವು ಎನ್ನುತ್ತಾ ನೋಡುವಾಗ  ನೆರೆಮನೆಯವರು ಹತ್ತಿರ ಬರುವುದು ಕಂಡಿತು.ಬಂದವರೇ "ನೋಡಿ, ಯಾರಾದ್ರೂ ಕೊನೆಯ ಸಲ ನೋಡೋರಿದ್ರೆ ಕರೆಸಿ, ಹೆಣ ಜಾಸ್ತಿ ಹೊತ್ತು ಇಡೋದು ಒಳ್ಳೇದಲ್ಲ "ಅಂತ ಹೇಳಿದ್ರು. ನಾನಿಲ್ಲೇ ಇದೀನಲ್ಲ ಅಂದುಕೊಳ್ತಾ ನನ್ನನ್ನೇ ನಾನು ನೋಡಿಕೊಳ್ಳುವಾಗ ದೃಢವಾಯಿತು. ಯಾಕಂದ್ರೆ ನನ್ನ ದೇಹವೇ ಕಾಣಿಸ್ತಾ ಇಲ್ಲ. ಆದ್ರೆ ನಂಗೆ ಎಲ್ಲಾ ಕಾಣಿಸ್ತಾ ಇದಿಯಲ್ಲ. ಅಂದ್ರೆ ನಾನು ನನ್ನ ದೇಹವನ್ನು ತ್ಯಜಿಸಿದ್ದು ಹೌದು ಎಂದು ದೃಢ ಪಟ್ಟಿತು. ನಾನು ರಾತ್ರಿ ಊಟ ಮಾಡಿ ನಿದ್ರಿಸಿದ್ದು ನೆನಪಿಸಿಕೊಂಡೆ. ಒಹ್! ದೇವ್ರೇ ಹಾಗಿದ್ರೆ ನಾನು ಇನ್ನು ನನ್ನ ಹೆಂಡತಿ ಮಕ್ಕಳ ಜೊತೆಗೆ ಬಾಳಲಾಗುವುದಿಲ್ಲವೇ, ಏನು ಮಾಡಿಬಿಟ್ಟೆ ದೇವರೇ ಎಂದು ಆಲೋಚಿಸುವಾಗ "ನಿನ್ನೆ ರಾತ್ರಿ ಇವತ್ತು ದೇವಸ್ಥಾನಕ್ಕೆ ಹೋಗೋಣ ಅಂತಿದ್ರಲ್ಲರೀ, ಎಳ್ರೀ, ಹೋಗೋಣ, ಯಾಕೆ ಹೀಗೆ ಮಾಡಿದ್ರಿ, ನನ್ನ  ನಡುನೀರ್ನಲ್ಲಿ ಬಿಟ್ಟೋದ್ರಲ್ಲರೀ... ಅಂತ ಗೋಳಾಡ್ತಾ ಪ್ರಜ್ಞೆ ತಪ್ಪಿದ್ಲು. ಅಯ್ಯೋ ದೇವರೇ ನನ್ನ ಹೆಂಡತಿ ಮಕ್ಕಳ ಮುಂದಿನ ಗತಿ ಏನು? ಈಗಾಗ್ಲೇ ನನ್ನ ಬಗ್ಗೆ ಜನ ಇಲ್ಲ ಸಲ್ಲದ್ದನ್ನು ಮಾತಾಡ್ತಾ ಇದ್ದಾರೆ. ಮಾಡದ ತಪ್ಪುಗಳನ್ನೆಲ್ಲ ನನ್ ಮೇಲೆ ಹಾಕ್ತ ಇದಾರೆ. ನನ್ನದು ಮಧ್ಯಮ ವರ್ಗದ ಕುಟುಂಬ. ಕೂಡಿ ಹಾಕದಿದ್ರು ನನ್ನದೂ ಅಂತ ಇದ್ದ ಹೆಂಡತಿ ಮಕ್ಕಳಿಗೆ ಕಡಿಮೆ ಮಾಡಿರಲಿಲ್ಲ. ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವ ಮಾತಿನಂತೆ ನಾವು ಇದ್ದದ್ರಲ್ಲೇ ಸುಖವಾಗಿದ್ದೆವು. ತಂದೆ ತಾಯಿ ಇಲ್ಲದ ನನಗೆ ಅವಳೇ ತಾಯಿಯಾಗಿದ್ದಳು, ಎಷ್ಟೇ ಸಮಸ್ಯೆ ಇದ್ದರೂ ನಗುನಗುತಾ ನಿಭಾಯಿಸುತ್ತಿದ್ದಳು. ನನ್ನ ಮೇಲೆ ತುಂಬಾ ನಂಬಿಕೆ ಅವಳಿಗೆ, ಈ ಜನ ನನ್ನ ಬಗ್ಗೆ ಬೇಡವಾದ ಮಾತುಗಳನ್ನು ಹೇಳಿ ಅವಳಿಗೆ ಎಷ್ಟು ನೋವು ಕೊಡುತ್ತಾರೇನೋ? ಒಂದು ಸಲ ನನ್ನ ಬದುಕಿಸು ದೇವರೇ...ಅಂತ ಎಂದಿಗೂ ನನ್ನ ನೋವನ್ನು ತೋರಿಸಿ ಕೊಳ್ಳದೇ ಇದ್ದ ನಾನು ಇಂದು ಅಳುತ್ತಾ ದೇವರಲ್ಲಿ ಪ್ರಾರ್ಥಿಸ ತೊಡಗಿದೆ. ಅಲ್ಲೇ ಇದ್ದ ನಾನೇ ಸಾಕಿದ ನಾಯಿ ಊಳಿಡತೊಡಗಿತು. " ಜಿಮ್ಮಿ ನಾನು ಕಾಣುತ್ತಾ ಇದ್ದೇನಾ ನಿಂಗೆ, ನಾನು ಬರ್ತೀನಿ  ಕಣೋ, ನಿಮ್ಮೆಲ್ಲರನ್ನು ಚೆನಾಗ್ ನೋಡ್ಕೊಳ್ತೀನೋ, ನಾನು ನಿಮ್ನ ಬಿಟ್ಟು ಎಲ್ಲೂ ಹೋಗಲ್ಲ "ಅಂತ ಗೊಳಾಡಿದೆ. ನಂಗೆ ಒಮ್ಮೆಲೇ ಮೈ ಮೇಲೆ ನೀರ್ ಬಿದ್ದಂಗೆ ಆಯಿತು. ಇದೇನಪ್ಪ ನಂಗೆ ದೇಹಾನೇ ಇಲ್ಲ ಸ್ಪರ್ಶಜ್ಞಾನ ಹೇಗಾಗ್ತಾ ಇದೆ, ಅಂತ ಎದುರಿಗೆ ನೋಡಿದ್ರೆ ನನ್ನ ಹೆಂಡತಿ "ಏನ್ರೀ ನಾನು ಅಳೋದಿಲ್ಲ ಅಂತ ಹೇಳ್ತಾ ಇದ್ರಿ, ನಿದ್ದೇನಲ್ಲಿ ನನ್ನನ್ನು ಅಳಿಸಿ ಬಿಟ್ರಿ ಅಲ್ವೇನ್ರಿ. ಎಷ್ಟು ಎಬ್ಸಿದ್ರು ನೀವು ಎಚ್ಚರ ಆಗ್ತಾ ಇರ್ಲಿಲ್ಲ,ಅಂತ ಇನ್ನೇನೋ ಹೇಳ್ತಾನೆ ಇದ್ಲು. ಆದ್ರೆ ನಂಗೆ ಅದೇನು ಕೇಳಿಲ್ಲ. ಕಳೆದು ಕೊಂಡ ನಿಧಿಯೇ ಸಿಕ್ಕಿದಂತೆ ಬಾಚಿ ಗಟ್ಟಿಯಾಗಿ ತಬ್ಬಿಕೊಂಡೆ.

Category:Stories



ProfileImg

Written by Shakunthala K

ಹವ್ಯಾಸಿ ಬರಹಗಾರ್ತಿ

0 Followers

0 Following