ದೇಶಾದ್ಯಂತ ಸೈಬರ್ ಹ್ಯಾಕರ್ಸ್ ಗಳಿಂದ ಜನರು ನಾನಾ ರೀತಿಯ ತೊಂದರೆ ಅನುಭವಿಸುವಂತಾಗಿದೆ. ಅಂದರೆ, FACEBOOK, INSTAGRAM ಹ್ಯಾಕ್ ಮಾಡಿ ಮೆಸೆಂಜರ ಮೂಲಕ ಹಣ ಕೇಳಿ, ಜನರನ್ನು ಕುತಂತ್ರದಿಂದ ವಂಚಿಸುವುದು , ಬ್ಯಾಂಕ್ ಖಾತೆಗಳ ಹ್ಯಾಕ್ ಮಾಡುವುದು ಸೇರಿದಂತೆ ಹಲವು ರೀತಿಯಲ್ಲಿ ಭಯಹುಟ್ಟಿಸುವದನ್ನು ದಿನನಿತ್ಯ ಅಲ್ಲಲ್ಲಿ ಕೇಳುತ್ತೇವೆ.
ಸೈಬರ ಹ್ಯಾಕರ್ಸ್ ಗಳಿಂದ ರಾಷ್ಟ್ರೀಕೃತ ಬ್ಯಾಂಕ್ ಖಾತೆಗಳಿಗೆ ಕನ್ನ:
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಸೈಬರ ಹ್ಯಾಕರ್ಸ್ ರಾಷ್ಟ್ರೀಕೃತ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವ ಮೂಲಕ ತಮ್ಮ ಕೈಚಳಕ ತೋರಿಸಿದ್ದಾರೆ.ಇದು ಬ್ಯಾಂಕಿನವರನ್ನು ಮತ್ತು ಗ್ರಾಹಕರನ್ನು ನಿದ್ದೆಗೆಡಿಸಿರುವುದಂತೂ ನಿಜ. ಬ್ಯಾಂಕುಗಳಲ್ಲಿ ಹಣ ಇಟ್ಟರೆ ನಿಶ್ಚಿಂತೆಯಿಂದ ಇರಬಹುದು ಎನ್ನುವ ಸ್ಥಿತಿಯಲ್ಲಿದ್ದ ಜನರಿಗೆ ಈ ಸೈಬರ್ ಹ್ಯಾಕರ್ಸ್ ಪದೇ ಪದೇ ತಮ್ಮ ಕುತಂತ್ರದಿಂದ ಖಾತೆಗಳಲ್ಲಿನ ಹಣಕ್ಕೆ ಕನ್ನ ಹಾಕುತ್ತಿರುವುದು ನೋಡಿದರೆ ಆತಂಕವನ್ನು ಉಂಟುಮಾಡುತ್ತಿದೆ.
ಭಯ ಹುಟ್ಟಿಸುವಂತೆ ವಂಚಿಸುವ ಸೈಬರ್ ಹ್ಯಾಕರ್ಸ್:
ಇತ್ತೀಚೆಗೆ ರಾಯಚೂರು ಜಿಲ್ಲೆಯ ಕೆಲವು ಶಾಲಾ ಶಿಕ್ಷಕರ ರಾಷ್ಟ್ರಿಕೃತ ಬ್ಯಾಂಕಿನ ಖಾತೆಗಳಿಂದ ಹಣಕ್ಕೆ ಕನ್ನ ಹಾಕಿದ ಘಟನೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದನ್ನು ನೋಡಿದರೆ, ವಂಚಕರಿಂದ ಮೋಸ ಹೋಗಿ, ಸಂಕಷ್ಟಕ್ಕಿಡಾದವರ ಮಾತುಗಳನ್ನು ಕೇಳಿದರೆ, ಭಯ ಹುಟ್ಟಿಸುತ್ತದೆ. ಅದೇ ರೀತಿ ಅನಾಮಧೇಯ ಕರೆ ಮಾಡಿ, ಅಮಾಯಕರ ಹಣ ಹಾಗೂ ತಿಂಗಳು ಪೂರ್ತಿ ದುಡಿದ ಹಣ, ತುರ್ತು ಪರಿಸ್ಥಿತಿಗೆಂದು ಉಳಿತಾಯ ಮಾಡಿದ ಹಣಕ್ಕೆ ಕನ್ನ ಹಾಕುವ ವಂಚನೆ ಹೆಚ್ಚಾಗಿದ್ದು, ಇನ್ನೂ ಈ ವಂಚನೆ ಜಾಲವನ್ನು ಭೇದಿಸಲು ಸಾಧ್ಯವಿಲ್ಲವೇ..!? ಹೀಗೆ ಆದರೆ ಹೇಗೆ ಎಂಬ ಹತಾಶ ಭಾವನೆಯು ಸಾರ್ವಜನಿಕ ವಲಯದಲ್ಲಿ ಮೂಡುತ್ತಿರುವುದಂತು ನಿಜ..!
ರಾಷ್ಟ್ರೀಕೃತ ಬ್ಯಾಂಕ್ ಗಳ ಸೂಚನೆ:
ಸೈಬರ್ ಹ್ಯಾಕರ್ಸ್ ವಂಚನೆಯ ಜಾಲಕ್ಕೆ ತಮ್ಮ ಬ್ಯಾಂಕ ಖಾತೆದಾರರು ಬಲಿಯಾಗದಿರುವಂತೆ ಸಂದೇಶಗಳು, ಎಚ್ಚರಿಕೆ ಸೂಚನೆಗಳು, ಸಹಾಯವಾಣಿ ಸಂಖ್ಯೆ ನೀಡುತ್ತಾ ಇದ್ದರೂ ಇಂತಹ ಮೋಸ ವಂಚನೆಯಿಂದ ಕಷ್ಟ ಅನುಭವಿಸುವವರ ಸಂಖ್ಯೆ ಕಡಿಮೆಯಾಗಿಲ್ಲ ಎನ್ನುವುದು ನೈಜ ಸಂಗತಿಯಾಗಿದೆ.ಡಿಜಿಟಲ್ ಇಂಡಿಯಾ ಕ್ರಾಂತಿಯಿಂದ ದೇಶದ ಬಹುತೇಕರು ಸರಳವಾಗಿ ಹಣಕಾಸು ವ್ಯವಹಾರ ಮಾಡುತ್ತಿರುವುದು ಒಂದೆಡೆ ಖುಷಿ ಎನಿಸಿದರೆ, ಈ ಸೈಬರ್ ಖದೀಮರು ಅಮಾಯಕರ ಬ್ಯಾಂಕ್ ಖಾತೆಯಲ್ಲಿನ ಹಣವನ್ನು ಮೋಸದಿಂದ ತಮ್ಮ ಖಾತೆಗೆ ಪಡೆಯುವ ಕುತಂತ್ರ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಸೈಬರ್ ಹ್ಯಾಕರ್ಸ್ ಮೇಲೆ ಕಠಿಣ ಕ್ರಮದ ಅಗತ್ಯ:
ಪ್ರಸ್ತುತ ಮುಂದುವರೆತಯುತ್ತಿರುವ ದೇಶಗಳ ಸಾಲಿನಲ್ಲಿ ಇರುವ ನಮ್ಮ ಭಾರತ ದೇಶವು ಸಹಜವಾಗಿ ಬಹುತೇಕರು ಆನ್ಲೈನ್, ಯುಪಿಐ, ಮೂಲಕ ಹಣಕಾಸು ವ್ಯವಹಾರ ನಡೆಸುತ್ತಿರುವುದು ದೇಶದ ಏಳಿಗೆಗೆ ಪೂರಕವಾಗಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಈ ಸಮಯದಲ್ಲಿ, ಜನರ ಹಣಕಾಸು ವ್ಯವಹಾರಗಳಿಗೆಂದು ಉಳಿತಾಯ ಖಾತೆಯಲ್ಲಿರಿಸಿರುವ ಹಣಕ್ಕೆ ಸೈಬರ್ ಹ್ಯಾಕರ್ಸ್ ಕನ್ನ ಹಾಕುತ್ತಿರುವುದು ಭಯ ಹುಟ್ಟಿಸುತ್ತಿದೆ. ಸೈಬರ್ ಕ್ರೈಂ ವಿಭಾಗವು ಸೈಬರ್ ಹ್ಯಾಕರ್ಸ್ ಜಾಲ ಪತ್ತೆ ಮಾಡಿ, ವಂಚನಗಳಿಂದ ಮುಕ್ತಿ ಕೊಡಿಸಬೇಕು.
ಇಂತಹ ಸೈಬರ್ ವಂಚನೆ ಗಳಿಂದ ಸಂಕಷ್ಟಕ್ಕಿಡಾದವರಿಗೆ ನ್ಯಾಯ ಸಿಗಬೇಕು ಮತ್ತು ವಂಚಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವ ಹಿತಾಸಕ್ತಿಯೆ ನಮ್ಮ ಈ ಲೇಖನದ ಉದ್ದೇಶವಾಗಿದೆ.
Article Writer, Self Employee