ಬಡವರ ಮನೆ ಊಟ ಚಂದ ಸಿರಿವಂತರ ಮನೆ ನೋಟ ಚಂದ
**************************
ಎಲ್ಲರಿಗೂ ಗೊತ್ತಿರುವ ಹಾಗೆ ಆರ್ಥಿಕ ಸಬಲತೆ ಇಲ್ಲದವರನ್ನು ಬಡವರು ಎಂದು ಕರೆಯುತ್ತಾರೆ. ಮೂಲಭೂತ ಸೌಕರ್ಯಗಳಾದ ರೋಟಿ - ಬಟ್ಟೆ - ತಿಂಡಿ -ಊಟ ಇದೆಲ್ಲ ಕನಿಷ್ಠ ಸೌಲಭ್ಯಗಳಿಂದ ವಂಚಿತರಾದ ದುರದೃಷ್ಟವಂತರನ್ನು ಬಡವರು ಎನ್ನಬಹುದು. ಎಷ್ಟೋ ಜನ ಹುಟ್ಟುವಾಗಲೇ ಬಡತನದ ಜೊತೆ ಹುಟ್ಟಿರಬಹುದು. ಅದು ಅವರ ತಪ್ಪಲ್ಲ.. ಆದರೆ ಅದನ್ನೇ ಹಾಸು ಹೊದ್ದು ಮಲಗಿ ಕೊನೆಗೆ ಬಡತನದಲ್ಲೇ ಆರಡಿ ಮೂರಡಿ ಜಾಗ ಸೇರಿದರೆ ಖಂಡಿತಾ ಸ್ವಯಂಕೃತವೇ ಹೌದು!
ಹಣದ ಸಿರಿವಂತಿಕೆಗಿಂತ ಹೃದಯ ಶ್ರೀಮಂತಿಕೆ ಮುಖ್ಯ. ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು ಎಂಬ ಹಾಗೆ ಪರಸ್ಪರ ಹೊಂದಾಣಿಕೆ ಪ್ರೀತಿ ಇದ್ದರೆ ಬಡತನದಲ್ಲೂ ಸುಖ ಅರಸುತ್ತಾರೆ ಎಷ್ಟೋ ಮಂದಿ. ಫೈವ್ ಸ್ಟಾರ್ ಹೋಟೆಲ್ ನಲ್ಲಿ ಒಣ ರೊಟ್ಟಿ ಕಡಿಯುವವನು ಮನೆಯಲ್ಲಿ ಹದವಾಗಿ ಸುಟ್ಟ ಜೋಳದ ರೊಟ್ಟಿ ಎಣ್ಣೆಗಾಯಿ ತಿನ್ನುವವರನ್ನು ಬಡವ ಎಂದು ತಿಳಿದರೆ ಅವನಿಗಿಂತ ಮೂರ್ಖ ಮತ್ತೊಬ್ಬರಿಲ್ಲ . ಆಧುನಿಕ ಉಡುಪು ಧರಿಸಿ ಸುಳ್ಳು ಶ್ರೀಮಂತಿಕೆಯನ್ನು ಪ್ರದರ್ಶನ ಮಾಡುವ ಈಗಿನ ಯುವಪೀಳಿಗೆ ದೇಸಿ ವಸ್ತ್ರ ಧರಿಸಿ ಸಂಪ್ರದಾಯ ಪಾಲಿಸುವವರನ್ನು ಕಂಡು 'ಅಯ್ಯೋ ಪಾಪ ಜೀನ್ಸ್ ಖರೀದಿಸಲು ದುಡ್ಡಿಲ್ಲವೇನೋ ಎಂದು ತಿಳಿದರೆ ಅವರಿಗಿಂತ ಅನಾಗರಿಕರು ಇನ್ನೊಬ್ಬರಿಲ್ಲ ಈ ಜಗದೊಳಗೆ.
ಅರಮನೆಯಂಥ ಮನೆಯಲ್ಲಿ ಒಬ್ಬರು ಮೂವರು ವಾಸಿಸುವವರು, ಕಾಂಪೌಂಡ್ ಬಳಿ ಮನುಷ್ಯರು ಸುಳಿಯದಂತೆ ನಾಯಿ ಕಟ್ಟಿ ಹೆದರಿಸುತ್ತ, ಚಿಕ್ಕದಾಗಿ ಚೊಕ್ಕವಾದ ಮನೆ ಕಟ್ಟಿ ಬಂಧು ಬಳಗ ನೆರೆಹೊರೆಯ ಸಂಪರ್ಕದಲ್ಲಿ, ಬೀದಿ ನಾಯಿಗಳಿಗೆ ಪ್ರೀತಿ ತೋರುತ್ತಾ ಸಮಾಜದಲ್ಲಿ ಬೆರೆಯುವವನನ್ನು ಕಂಡು ''ಪಾಪ ಮನೆ ಚಿಕ್ಕದು ಬಡವರು' ಎಂದುಕೊಂಡರೆ ಅವರ ಮನಸ್ಸು ಇನ್ನೆಷ್ಟು ಸಂಕುಚಿತವಾಗಿರಬಹುದು. 'ಬಡವರ ಮನೆ ಊಟ ಚೆಂದ ಸಿರಿವಂತರ ಮನೆ ನೋಟ ಚಂದ' ಎಂದು ಗಾದೆಯೇ ಇದೆಯಲ್ಲವೇ? ನಾವೆಲ್ಲಾ ಈ ನಾಗಾಲೋಟದ ಬದುಕಿನಲ್ಲಿ ಎಲ್ಲಾ ಇದ್ದು ಇನ್ನೇನೋ ಕಳೆದುಕೊಂಡು ಬಿಟ್ಟಿದ್ದೇವೆ. ಮನಸ್ಸು ಬಿಚ್ಚಿ ನಗಲು ಸಂಭ್ರಮಿಸಲೂ ನಾಗರಿಕತೆಯ ಮುಖವಾಡದ ಬದುಕು. ಜೇಬು ತುಂಬಿದರೇನು ಬಂತು. ಮನಸ್ಸೋ ಖಾಲಿ ಖಾಲಿ, ಬಾಯಿ ತುಂಬಾ ಮಾತನಾಡಲು ಬಿಗುಮಾನ, ಕೇಕೆ ಹಾಕುತ್ತಾ ನಗುವವರನ್ನು ಕಂಡರೆ ಹೊಟ್ಟೆ ಹುರಿ.
ಇಂದಿನ ದಿನ ಹಣದ ವ್ಯಾಮೋಹಕ್ಕೆ ಬಲಿಯಾಗಿ ಮನೆ ಮಂದಿಯೆಲ್ಲಾ ದುಡಿಯುವ ಜನ ಒಟ್ಟಿಗೆ ಕುಳಿತು ಮನೆಯಲ್ಲಿ ಸಹಭೋಜನ ಮಾಡಲು ಸಮಯವಿಲ್ಲದೆ ಅವರವರ ಊಟ ಅವರೇ ಬಡಿಸಿಕೊಂಡು ತಿನ್ನುವ ಪರಿಸ್ಥಿತಿ ಬಂದಿದೆ. ಇಂಥ ಸಿರಿವಂತಿಕೆ ಇದ್ದರೆಷ್ಟು ಬಿಟ್ಟರೆಷ್ಟು? ಮನೆ ಮಂದಿಯೆಲ್ಲಾ ಒಟ್ಟಾಗಿ ನೆಲದ ಮೇಲೆ ಕುಳಿತು ಒಬ್ಬರಿಗೊಬ್ಬರು ಹಾಸ್ಯ ಮಾಡುತ್ತಾ, ಉಪಚರಿಸುತ್ತಾ ಮುದ್ದೆ ಬಸ್ಸಾರು ತಿಂದರೂ ಕೂಡ ಅಮೃತವಲ್ಲವೇ?
ಸೋಶಿಯಲ್ ಮೀಡಿಯಾದಲ್ಲಿ ದಿನಾಂಕ ನೋಡಿ ಜೊತೆಗೆ ವಾಸಿಸುವ ಮನೆಯ ಸದಸ್ಯರಿಗೆ ಸಂಜೆಯ ಹೊತ್ತಿಗೆ ವಾಟ್ಸಾಪ್ ನಲ್ಲಿ ಕಾಟಾಚಾರಕ್ಕೆಂಬಂತೆ ಒಂದು ಶುಭಾಶಯ ಕೋರಿ ಕೇಕ್ ಕಟ್ ಮಾಡಿ ಅದನ್ನು ತಿನ್ನದೆ ಮುಖಕ್ಕೆ ಬಳಿದುಕೊಂಡು ಸಂಭ್ರಮಿಸುವ ವಿಕೃತ ಮನಸ್ಸಿನವರನ್ನು ಸಿರಿವಂತ ಎಂದು ತಿಳಿದರೆ ಖಂಡಿತಾ ನಗು ಬರುವುದಲ್ಲವೇ? ಒಂದು ಹಿಡಿ ಅನ್ನ ತಿಂದು ಅದನ್ನು ಕರಗಿಸಲು ನೂರಾರು ಕಸರತ್ತು ಮಾಡುತ್ತಾ ಸುಪ್ಪತ್ತಿಗೆ ಮೇಲೆ ಮಲಗಿದರೂ ನಿದ್ದೆ ಬರದೇ ಹೋರಳಾಡುತ್ತಾ ಬೆಳಿಗ್ಗೆ ಎದ್ದು ಜಾಗ್ಗಿನಿಂಗ್ ಓಡುವ ಮಂದಿ. ಇವರು ಶ್ರೀಮಂತರು ನೋಡಿ ಅವರ ಮನೆ ನೋಟ ಚಂದ. ಇದಕ್ಕಲ್ಲವೇ ನೋಟ ಚಂದವಾಗಿ ಕಾಣುವುದು.
ಗಾರೆ ಕೆಲಸ ಮಾಡುವ ಕೂಲಿ ಕಾರ್ಮಿಕರನ್ನು ಗಮನಿಸಿದರೆ ತಿಳಿಯುವುದು ಎಂಥ ಶ್ರಮ ಜೀವಿಗಳು ಅವರೆಲ್ಲ ಅನ್ನಿಸದೆ ಇರಲ್ಲ. ತಿಂದಿದ್ದೆಲ್ಲಾ ಸ್ವಾಭಾವಿಕವಾಗಿ ಕರಗಿ ಅವರೆಲ್ಲಾ ಗಟ್ಟಿಮುಟ್ಟಾಗಿರುತ್ತಾರೆ. ಸ್ಕೂಟಿ ಇದ್ದವನು ಬಡವ, ಬಿಎಂಡಬ್ಲ್ಯೂ ಕಾರಿದ್ದವನು ಶ್ರೀಮಂತ ಖಂಡಿತಾ ಇಲ್ಲ! ಯಾರನ್ನು ಬಡವರೆಂದು ಭಾವಿಸಿರುತ್ತೇವೋ ಅವರಿಗಿರುವ ಸಹೃದಯತೆ, ವಿಶಾಲ ಮನೋಭಾವ, ಹಂಚಿ ತಿನ್ನುವ ಗುಣ, ಈ ಸೋ ಕಾಲ್ಡ್ ಶ್ರೀಮಂತರಿಗೆ ಇರುವುದಿಲ್ಲ. ಶ್ರೀಮಂತರ ಮನೆ ಮಾತ್ರ ನೋಡಲು ಅನುಕೂಲವಾಗಿ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಆದರೆ ಬಡವರ ಮನೆಯ ಊಟ ಗಂಜಿಯಾದರೂ ಸರಿ ಅದು ಅಮೃತಕ್ಕೆ ಸಮ.
✍️ ಪುಷ್ಪ ಪ್ರಸಾದ್ ಉಡುಪಿ
0 Followers
0 Following