ಕಾಂತಾರ ಫ್ರೀಕ್ವೆಲ್ ನಲ್ಲಿ ಕಾಂತಾರ ಪಂಜುರ್ಲಿ ಯ ಉದ್ಭವದ ಕಥೆ ಹೇಳ್ತಾರಂತೆ ,ಈ ಪಂಜುರ್ಲಿಯ ಕಥೆ ಏನು ಎಂದು ನನ್ನಲ್ಲಿ ಅನೇಕರು ಕೇಳಿದ್ದಾರೆ
ದೈವಗಳಿಗೆ ಸಂಬಂಧಿಸಿದಂತೆ ಅನೇಕ ಕಥಾನಕಗಳು ಐತಿಹ್ಯಗಳು ಪ್ರಚಲಿತವರುತ್ತದೆ ಹಾಗಾಗಿ ರಿಷಭ್ ಶೆಟ್ಟಿಯವರು ಯಾವ ಕಥೆ ತೋರಿಸುತ್ತಾರೆ ಎಂದು ಹೇಳಲಾಗದು.
ಪಂಜುರ್ಲಿ ದೈವದ ಕುರಿತಾಗಿ ಅನೇಕ ಕಥಾನಕಗಳು ಇವೆ ಆ ಕಥಾನಕಗಳಲ್ಲಿ ಕಾಂತಾರ ಪಂಜುರ್ಲಿ ಎಂಬ ದೈವದ ಕಥೆಯೂ ಇದೆ ಒಂದೊಂದಾಗಿ ಬರೆದು ತಿಳಿಸುವೆ
1 ಗಣಾಮಣಿ ಮಂಜುರ್ಲಿ
ಕೈಲಾಸ ಪರ್ವತದಲ್ಲಿ ಈಶ್ವರದೇವರು ಬೇಟೆಗೆ ಹೊರಡುವಾಗ ಪಾರ್ವತಿ ದೇವಿಯೂ ಹೊರಡುತ್ತಾರೆ. ಗಂಡಸರು ಹೋಗುವಲ್ಲಿ ಹೆಂಗಸರು ಬರಬಾರದು ಎಂದು ಹೇಳಿದರೂ ಪಾರ್ವತಿ ದೇವಿ ಹಠಮಾಡುತ್ತಾಳೆ. ಆಗ ಈಶ್ವರದೇವರು “ನೀನು ನೋಡಿದ್ದನ್ನು ನೋಡಿದೆ ಎನ್ನಬಾರದು ಕೈ ತೋರಿ ಕೇಳಬಾರದು” ಎಂಬ ಶರತ್ತು ವಿಧಿಸಿ ಕರೆದೊಯ್ಯುತ್ತಾರೆ. ಕಾಡಿನಲ್ಲಿ ಗುಜ್ಜಾರ ಮತ್ತು ಕಾಳಿ ಎಂಬ ಎರಡು ಹಂದಿಗಳ ಐದು ಮರಿಗಳು ಈಶ್ವರನ ನಂದನ ಕೆರೆಯಲ್ಲಿ ಹೊರಳಾಡುತ್ತಿರುತ್ತವೆ. ಈಶ್ವರ ಗುಜ್ಜಾರನಿಗೆ ಬಾಣ ಬಿಡುತ್ತಾನೆ. ಕಾಳಿ ಓಡುತ್ತದೆ. ಆ ಐದು ಮರಿಗಳಲ್ಲಿ ಒಂದನ್ನು ಹಠ ಮಾಡಿ ಪಾರ್ವತಿ ಕೈಲಾಸಕ್ಕೆ ತೆಗೆದುಕೊಂಡು ಹೋಗಿ ಪ್ರೀತಿಯಿಂದ ಸಾಕುತ್ತಾರೆ. ಅದನ್ನು ಮಾಳಿಗೆಯಲ್ಲಿ ದುಂಡು ಸಂಕೋಲೆಯಲ್ಲಿ ಕಟ್ಟಿ ಹಾಕುತ್ತಾರೆ. ಕೈಲಾಸದಲ್ಲಿ ಒಂದು ಸಮಾರಾಧನೆಯ ದಿವಸ ಈ ಹಂದಿಮರಿ ಬಿಡಿಸಿಕೊಂಡು ಊಟದ ಎಲೆಗಳಿಗೆ ಬಾಯಿ ಹಾಕುತ್ತದೆ. ಈಶ್ವರ ದೇವರಿಗೆ ಸಿಟ್ಟು ಬಂದು ‘ನೀನು ಕೈಲಾಸದಲ್ಲಿರಬಾರದು. ಭೂಮಿಗಿಳಿದು ದೈವವಾಗಿರಬೇಕು’ ಎಂದು ವರ ಕೊಡುತ್ತಾರೆ.
ಬ್ರಾಹ್ಮಣರೂಪದಲ್ಲಿ ಭೂಮಿಗಿಳಿದು, ಗಣಾಮಣಿಯಾಗಿ, ಘಟ್ಟ ಇಳಿದು ನೆಲ್ಯಾಡಿ ಬೀಡಿಗೆ ಬರುತ್ತಾನೆ.ಅಣ್ಣಪ್ಪ ಪಂಜ ರ್ಲಿ ಎಂಬ ಹೆಸರಿನಲ್ಲಿ ಆರಾಧಾನೆ ಪಡೆಯುತ್ತದೆ ಇದು ಪಂಜುರ್ಲಿಯ ಪುರಾಣ ಮೂಲ ಕಥೆ.
ಇದೇ ಕಥೆ ಯ ಇನ್ನೊಂದು ಪಾಠ ಹೀಗಿದೆ
ಪಾರ್ವತಿ ದೇವಿಯು ಕಾಡಿನಿಂದ ತಂದು ಸಾಕಿದ ಹಂದಿ ಗುಜ್ಜಾರ ಬಹಳ ಬಲಿಷ್ಠ ವಾಗಿ ಬೆಳೆಯುತ್ತದೆ.ಕಟ್ಟಿ ಹಾಕಿದ ಸಂಕೋಲೆ ಕಡಿದುಕೊಂಡು ಊರವರ ತೋಟಕ್ಕೆ ನುಗ್ಗಿ ಬೆಳೆ ಹಾಳು ಮಾಡುತ್ತದೆ.ಆಗ ಊರವರು ಬಂದು ದೂರು ಹೇಳುತ್ತಾರೆ ಆಗ ಈಶ್ವರ ದೇವರು ಈ ಹಂದಿ ಮರಿಯನ್ನು ಬೇಟೆ ಆಡಲು ಹೋಗುತ್ತಾರೆ.ಎಷ್ಟೇ ಯತ್ನ ಮಾಡಿದರೂ ಅದು ಸಿಗುವುದಿಲ್ಲ.ಕೊನೆಗೆ ತಾನಾಗಿ ಬಂದು ಈಶ್ವರ ಧಳದೇವರ ಪಾದಕ್ಕೆ ಶರಣಾಗುತ್ತದೆ ಆಗ ಈಶ್ವರ ದೇವರು ಅದರ ಮೇಲೆ ಬಾಣ ಬಿಡುತ್ತಾರೆ
ಆಗ ಅದು ನೋವಿನಿಂದ ಅತ್ತುಕೊಂಡುಪಾರ್ವತಿ ದೇವಿಯ ಬಳಿ ಬಂದು ಪ್ರಾಣ ಬಿಡುತ್ತದೆ.ಆಗ ಪಾರ್ವತಿ ದೇವಿ ದುಃಖ ಪಡುತ್ತಾರೆ ಆಗ ಈಶ್ವರ ದೇವರು ಆ ಹಂದಿ ಮರಿಗೆ ಜೀವ ಕಲೆ ಕೊಟ್ಟು ಗಣಾಮಣಿ ಯಾಗಿ ಭೂಲೋಕಕ್ಕೆ ಹೋಗಿ ಧರ್ಮ ರಕ್ಷಣೆ ಮಾಡು ಎಂದು ಹೇಳುತ್ತಾನೆಹಾಗೆ ಆ ಹಂದಿ ಮರಿ ಪಂಜುರ್ಲಿ ದೈವವಾಗಿ ಘಟ್ಟ ಇಳಿದು ತುಳುನಾಡಿಗೆ ಬಂದು ದುಷ್ಟರನ್ನು ಶಿಕ್ಷಿಸಿ ಶಿಷ್ಟರ ರಕ್ಷಣೆ ಮಾಡಿ ಆರಾಧನೆಯನ್ನು ಪಡೆಯುತ್ತದೆ
ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರದಲ್ಲಿ ನಲೆಯಾದ ಕಾಂತಾರ ಪಂಜುರ್ಲಿ ಕಥಾನಕ ಭಾಗ ಎರಡರಲ್ಲಿ ಮುಂದುವರಿಯುತ್ತದೆ
ಡಾ.ಲಕ್ಷ್ಮೀ ಜಿ ಪ್ರಸಾದ
ಲೇ : ಕರಾವಳಿಯ ಸಾವಿರದೊಂದು ದೈವಗಳು