ಭೂತ ಕೋಲ ಎಂದರೇನು?

ProfileImg
03 May '24
3 min read


image

ತುಳುನಾಡಿನ ಭೂತಾರಾಧನೆ/ದೈವಾರಾಧನೆ ವಿಶಿಷ್ಟ ಆರಾಧನಾ ಪದ್ಧತಿ.
ಇಲ್ಲಿನ ತುಳು ಭೂತ ಪದಕ್ಕೆ ಕನ್ನಡ ಸಂಸ್ಕೃತ ಶಬ್ದಕೋಶದಲ್ಲಿ ಅರ್ಥ ಹುಡುಕಬಾರದು.ಅದರಲ್ಲಿ ಭೂತ ಪ್ರೇತ ಪಿಶಾಚಿ ಶಿವ ಗಣ ಇತ್ಯಾದಿ ಅರ್ಥಗಳಿವೆ
ಆದರೆ ತುಳುವರ ಭೂತಗಳು ಪ್ರೇತ ಪಿಶಾಚಿಗಳಲ್ಲ.ಇವರು ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಮಣ್ಣಿನ ಸತ್ಯಗಳು ಎಂದು ಕರೆದುಕೊಳ್ಳುವ ಶಕ್ತಿಗಳು ಇವರು .
ಪೂತಂ ಎಂದರೆ ಪವಿತ್ರವಾದ ಶಕ್ತಿ ಎಂಬ ಪದವೇ ಕಾಲಾಂತರದಲ್ಲಿ ಬೂತ ಆಗಿ ಭೂತ ಆಗಿರುವ ಸಾಧ್ಯತೆ ಇದೆ.ಕೊಡವರಲ್ಲಿ ಭೂತಾರಾಧನೆ ಪ್ರಚಲಿತವಿದ್ದು ಅವರು ಅದನ್ನು ಪೂದ ತೆರೆ ಎನ್ನುತ್ತಾರೆ ಇಲ್ಲಿ ಬೂತ > ಪೂದ ಆಗಿದೆ
ಅಥವಾ ಈ ಆರಾಧ್ಯ ಶಕ್ತಿಗಳು ಈ ಹಿಂದೆ ಈ ಮಣ್ಣಿನಲ್ಕಿ ಹುಟ್ಟಿ ಕಾರಣಾಂತರಗಳಿಂದ ದೈವತ್ವ ಪಡೆದವರಾಗಿದ್ದಾರೆ ಹಾಗಾಗಿ ಈ ಹಿಂದೆ ಇದ್ದವರು ಎಂಬ ಅರ್ಥದಲ್ಲೂ ಭೂತ ಪದ ಬಳಕೆಗೆ ಬಂದಿರಬಹುದು ಎಂದು ಡಾ.ಅಮೃತ ಸೋಮೇಶ್ವರರು ಹೇಳಿದ್ದಾರೆ
ಭೂತ ,ದೈವ ತೆಯ್ಯಂ ,ದೇವರು ಎಲ್ಲವೂ ಒಂದೇ ಅರ್ಥವನ್ನು ಕೊಡುವ ಪದಗಳು
ಕನ್ನಡ ಪರಿಸರದಲ್ಲಿ ದೈವ ಎಂಬ ಪದ ಬಳಕೆ ಹೆಚ್ಚು ಪ್ರಚಲಿತವಿತ್ತು.ಮಲೆಯಾಳದಲ್ಲಿ ತೆಯ್ಯಂ ಎನ್ನುತ್ತಾರೆ ಕೊಡವರು ಪೂದ ಎನ್ನುತ್ತಾರೆ ತುಳವರು ಭೂತ,ದೈವ ಎರಡೂ ಪದಗಳ ಬಳಕೆ ಮಾಡಿದ್ದಾರೆ

ಆಯಾಯ ದೈವಗಳಿಗೆ ಅವರವರದ್ದೇ ಆದ ಪಾಡ್ದನ,ಸಂಧಿ ಬೀರ , ನುಡಿಗಟ್ಟು ಮುಖ ವರ್ಣಿಕೆ ,ಮೊಗ ಆಯ ಧ ವೇಷ ಭೂಷಣಗಳು ಇರುತ್ತವೆ ಇವನ್ನು ಧರಿಸಿ ನರ್ತಿಸಿ ಆಯಾಯ ದೈವಗಳಿಗೆ ಆರಾಧನೆ ಮಾಡುವುದನ್ನು ಭೂತ ಕೋಲ ಎಂದು ಕರೆಯುತ್ತಾರೆ 

ಕೋಲ ಎಂಬುದಕ್ಕೆ ಪ್ರತಿಕೃತಿ ಎಂಬ ಅರ್ಥವೂ ಇದೆ 

ಇದರಲ್ಲಿ ಹದಿನಾರು ಕಟ್ಟುಗಳು/ ರೀತಿ ರಿವಾಜುಗಳು / ಹಂತಗಳು ಇರುತ್ತವೆ

ಇದನ್ನು ಪದಿವಾಜಿ ಕಟ್ಟು ಕಟ್ಟಲೆಗಳು ಎಂದು ಕರೆಯುತ್ತಾರೆ 

ಇನ್ನು ತುಳುನಾಡಿನಲ್ಲಿ ಯಾರಿಗೆ ಯಾವಾಗ ಹೇಗೆ ಯಾಕೆ ದೈವತ್ವ ಪ್ರಾಪ್ತಿಯಾಗುತ್ತದೆ ಎಂಬುದಕ್ಕೆ ಸಿದ್ಧ ಸೂತ್ರವಿಲ್ಲ.ಸಾಮಾನ್ಯವಾಗಿ ಎಲ್ಲರಂತೆ ಮಾನವರಾಗಿ ಹುಟ್ಡಿ ಅತಿಮಾನುಷ ಸಾಹಸ ಮೆರೆದವರು ಮಾಯಕಕ್ಕೆ ಸಂದು ದೈವತ್ವ ಪಡೆದು ದೈವಗಳಾಗಿ ಆರಾಧನೆ ಪಡೆದಿದ್ದಾರೆ ,

ಕೋಟಿ -ಚೆನ್ನಯರು,ಮುದ್ದ -ಕಳಲರು ಎಣ್ಮೂರು ದೆಯ್ಯು -ಕೇಲತ್ತ ಪೆರ್ನೆ,ಕಾನದ- ಕಟದರು ಕೋಟೆದ ಬಬ್ಬು- ತನ್ನಿ ಮಾಣಿಗ ಮೊದಲಾದ ಅತಿಮಾನುಷ ಸಾಹಸಿಗಳು  ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.ಕೋಟಿಚೆನ್ನಯ,ಕಾನದ ಕಟದ,ಮುದ್ದ ಕಳಲ, ಎಣ್ಮೂರು ದೆಯ್ಯು ಕೇಲತ್ತ ಪೆರ್ನೆ,ಕಾಂತಾ ಬಾರೆ ಬೂದಾಬಾರೆಮೊದಲಾದವರು ಈ ರೀತಿಯಲ್ಲಿ ದೈವತ್ವವನ್ನು ಪಡೆದ ಶೂರರು 
ಪ್ರಧಾನ ದೈವಗಳನ್ನು ನೆಲೆಗೊಳಿಸಿ, ಅನನ್ಯ ಭಕ್ತಿಯಿಂದ ಆರಾಧನೆ ಮಾಡಿದ ಅನೇಕರು ಅದೇ ದೈವದ ಸಾನ್ನಿಧ್ಯ ಸೇರಿ ದೈವತ್ವವನ್ನು ಪಡೆದು ಆರಾಧಿಸಲ್ಪಡುತ್ತಾರೆ
ವೀರಭದ್ರನನ್ನು ಹಿರಿಯಡ್ಕದಲ್ಲಿ ನೆಲೆಗೊಳಿಸಿ ಆರಾಧಿಸಿದ ಅಡ್ಕತ್ತಾಯ ಎಂಬ ಬ್ರಾಹ್ಮಣ ದೈವವಾಗಿ ಆರಾಧನೆ ಪಡೆಯುತ್ತಾರೆ
ಸುಜೀರ್ ನಲ್ಲಿ ವೈದ್ಯನಾಥ ದೈವ ಆರಾಧನೆ ಶುರು ಮಾಡಿದ ಜಾನು ಬಐದ್ಯರಉ ದೈವತ್ವವನ್ನು ಪಡೆದು ಆರಾಧಿಸಲ್ಪಡುತ್ತಾರೆ
ತನ್ನನ್ನು ಅನನ್ಯ ಭಕ್ತಿಯಿಂದ ಆರಾಧನೆ ಮಾಡಿದ ಅಕ್ಕ ಅರಸು ಎಂಬ ಸ್ತ್ರೀ ಯನ್ನು ಮಾಯ ಮಾಡಿ ಲೆಕ್ಕೇಸಿರಿ ದೈವವು ತನ್ನ ಸೇರಿಗೆಗೆ ಸೇರಿಸಿ ದೈವತ್ವವನ್ನು ದಯಪಾಲಿಸುತ್ತದೆ
ಬದಿಯಡ್ಕ ಸಮೀಪದ ಕಾರಿಂಜೇಶ್ಶರ ದೇವಾಲಯವನ್ನು ಕಟ್ಟಿದ ಕಾರಿಂಜೆತ್ತಾಯ ಎಂಬ ಬ್ರಾಹ್ಮಣ ದೈವತ್ವವನ್ನು ಪಡೆದು ಆರಾಧಿಸಲ್ಪಡುತ್ತಾರೆ
ಚಿಕ್ಕ ಮಗಳೂರಿನ ಬೈಲ ಕುಪ್ಪೆ ಎಂಬಲ್ಲಿ ದೇವರ ಪೂಜಾರಿ ಪಂಜುರ್ಲಿ ಎಂಬ ದೈವದ ಆರಾಧನೆ ಇರುವ ಬಗ್ಗೆ ರೂಪೇಶ್ ಪೂಜಾರಿಯವರು ತಿಳಿಸಿದ್ದಾರೆ.ಈ ದೈವ ಮೂಲತಃ ಓರ್ವ ಬ್ರಾಹ್ಮಣ ಅರ್ಚಕ, ಪಂಜುರ್ಲಿ ದೈವವನ್ನು ಅನನ್ಯ ಭಕ್ತಿಯಿಂದ ಆರಾಧನೆ ಮಾಡುತ್ತಿದ್ದರು.ಕಾಲಾಂತರದಲ್ಲಿ ಪಂಜುರ್ಲಿ ದೈವದ ಅನುಗ್ರಹಕ್ಕೆ ಪಾತ್ರರಾಗಿ ದೈವತ್ವ ಪಡೆದು ದೇವರ ಪೂಜಾರಿ ಪಂಜುರ್ಲಿ ಎಂಬ ಹೆಸರಿನಲ್ಲಿ ಆರಾಧಿಸಲ್ಪಡುತ್ತಾರೆ.
ಇಂತಹದ್ದೇ ಒಂದು ವಿಶಿಷ್ಟ ಕಾರಣದಿಂದ ದೈವತ್ವವನ್ನು ಪಡೆದ ದೈವ ಕೊಂಡೇಲ್ತಾಯ


ಇನ್ನು ತುಳುನಾಡಿನಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆ ಎಂಬುದೊಂದು ಪ್ರಶ್ನೆ.ಇದಕ್ಕೆ ಇದಮಿತ್ಥಂ ಎಂದು ಉತ್ತರಿಸುವುದು ಕಷ್ಟ.

ತುಳು ಸಂಸ್ಕೃತಿ‌ ಕುರಿತು ಅಧ್ಯಯನ‌ಮಾಡಿದ ಡಾ
ಬಿ ಎ ವಿವೇಕ ರೈಗಳು 260 ದೈವಗಳ ಹೆಸರನ್ನು ಸಂಗ್ರಹಿಸಿ‌ಅವರ ಪಿಎಚ್ ಡಿ ನಿಬಂಧ ತುಳು ಜನಪದ ಸಾಹಿತ್ಯ ದಲ್ಲಿ ನೀಡಿದ್ದಾರೆ.ಇದನ್ನು ಪರಿಷ್ಕರಿಸಿ ಡಾ.ಚಿನ್ನಪ್ಪ ಗೌಡರು ಅವರ ಪಿಎಚ್ ಡಿ ನಿಬಂಧ ಭೂತಾರಾಧನೆ- ಒಂದು ಜಾನಪದೀಯ ಅಧ್ಯಯನದಲ್ಲಿ ಮುನ್ನೂರು ದೈವಗಳ ಹೆಸರಿನ ಪಟ್ಟಿ ನೀಡಿದ್ದಾರೆ.ರಘುನಾಥ ವರ್ಕಾಡಿಯವರು 404 ದೈವಗಳ ಹೆಸರನ್ನು ಸಂಗ್ರಹಿಸಿದ್ದಾರೆ ಅದರಲ್ಲಿ ಡಾ.ಚಿನ್ನಪ್ಪ ಗೌಡರು ಸಂಗ್ರಹಿಸಿದ ಹೆಸರುಗಳು ಸೇರಿದೆ
ಈ 404 ಸೇರಿದಂತೆ ನನಗೆ 2364 ದೈವಗಳ ಹೆಸರುಗಳು ಸಿಕ್ಕಿವೆ ,

1253 ದೈವಗಳ ಮಾಹಿತಿಯೂ ಸಿಕ್ಕಿದ್ದು  ಕರಾವಳಿಯ ಸಾವಿರದೊಂದು ದೈವಗಳು ಕೃತಿಯಲ್ಲಿ ನನ್ನ ಅರಿವಿಗೆ ನಿಲುಕಿದಂತೆ ನೀಡಿದ್ದೇನೆ


ಇಲ್ಲಿ ಯಾರು ಹೇಗೆ ಯಾಕೆ ದೈವತ್ವವನ್ನು ಪಡೆಯುತ್ತಾರೆ ಎಂಬುದಕ್ಕೆ ಒಂದು ಸಿದ್ಧ ಸೂತ್ರವಿಲ್ಲ
.ಹಿಂದು‌,ಮುಸ್ಲಿಂ ,ಜೈನ ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಜಾತಿ ಮತಗಳ ಜನರು ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ.ಎಲ್ಲ ಜಾತಿ‌ಮತಗಳ ಜನರೂ  ಇಲ್ಲಿನ ದೈವಗಳ ಆರಾಧನೆ ಮಾಡುತ್ತಾರೆ.ಇಲ್ಲಿ ದೈವಗಳಾಗುವ ಮೊದಲು ಇವರು ಏನಾಗಿದ್ದರು ಯಾರಾಗಿದ್ದರು ?ಎಂಬುದು ಗಣನೆಗೆ ಬರುವುದಿಲ್ಲ.ದೈವಗಳಾದ ನಂತರ ಇವರು ನಮ್ಮನ್ನು ಕಾಯುವ ಶಕ್ತಿಗಳು.ಎಲ್ಲ ದೈವಗಳಿಗೂ ಸಮಾನ ಆದರ, ಗೌರವ ,ಭಕ್ತಿಯ ಆರಾಧನೆ‌.ಹೀಗೆ ಜಾತಿ ಮತಗಳ ಸಾಮರಸ್ಯ ತುಳು ಸಂಸ್ಕೃತಿಯ ವೈಶಿಷ್ಟ್ಯ .

ತುಳುನಾಡಿನಲ್ಲಿ  ದೈವತ್ವ ಪಡೆಯುವ ಅರ್ಹತೆಯನ್ನು ಪಡೆದವರು ಪಡೆದ ಅಂತಿಮ  ಜನ್ಮವೇ ಜೋಗ. ಜೋಗ ಬಿಟ್ಟು ನಂತರ ದೈವ ಆಗುತ್ತಾರೆ .

 


ಡಾ.ಲಕ್ಷ್ಮೀ ಜಿ ಪ್ರಸಾದ್
ಲೇಖಕರು ಕರಾವಳಿಯ ಸಾವಿರದೊಂದು ದೈವಗಳು
ಕನ್ನಡ ಉಪನ್ಯಾಸಕಿ ಸರ್ಕಾರಿ ಪಿಯು ಕಾಲೇಜು 
ಬೆಂಗಳೂರು
ಮೊಬೈಲ್ 9480516684

Category:Spirituality



ProfileImg

Written by Dr Lakshmi G Prasad

Verified