ಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಕೇಂದ್ರ ಸರ್ಕಾರದ ಯೋಜನೆ. ಇದು ಭೌತಿಕವಲ್ಲದ ಚಿನ್ನದ ಮೇಲೆ ಹೂಡಿಕೆ ಮಾಡಲು ಅವಕಾಶ ಕಲ್ಪಿಸುತ್ತದೆ. ಇಲ್ಲಿ ಚಿನ್ನದ ನಾಣ್ಯ ಅಥವಾ ಆಭರಣಗಳ ಮೇಲೆ ಹೂಡಿಕೆ ಮಾಡುವ ಬದಲು ಡಿಜಿಟಲ್ ರೂಪದ ಚಿನ್ನದ ಮೇಲೆ ಹೂಡಿಕೆ ಮಾಡಲಾಗುತ್ತದೆ.
ಭೌತಿಕ ಚಿನ್ನದ ಬೇಡಿಕೆಯನ್ನು ತಗ್ಗಿಸುವ ಜೊತೆಗೆ ಆರ್ಥಿಕ ಉಳಿತಾಯದ ಉದ್ದೇಶದಿಂದ ಕೇಂದ್ರ ಸರ್ಕಾರ 2015ರ ನವೆಂಬರ್ನಲ್ಲಿಸಾವರಿನ್ ಗೋಲ್ಡ್ ಬಾಂಡ್ ಯೋಜನೆ ಪ್ರಾರಂಭಿಸಿತು. ಕೇಂದ್ರ ಸರ್ಕಾರದ ಪರವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಬಾಂಡ್ ಗಳನ್ನು ವಿತರಿಸುತ್ತದೆ.
ಯಾರು ಹೂಡಿಕೆ ಮಾಡಬಹುದು?
ವ್ಯಕ್ತಿಗಳು ಅಲ್ಲದೇ ಟ್ರಸ್ಟ್ ಗಳು, ವಿಶ್ವವಿದ್ಯಾಲಯಗಳು, ಚಾರಿಟೇಬಲ್ ಟ್ರಸ್ಟ್ ಗಳು, ಹಿಂದೂ ಅವಿಭಜಿತ ಕುಟುಂಬಗಳು ಸಾವರಿನ್ ಗೋಲ್ಡ್ ಬಾಂಡ್ ನಲ್ಲಿ ಹೂಡಿಕೆ ಮಾಡಬಹುದು.
ಎಷ್ಟು ಅವಧಿ?
ಸಾವರಿನ್ ಗೋಲ್ಡ್ ಬಾಂಡ್ ಯೋಜನೆ 8 ವರ್ಷಗಳ ಅವಧಿಯದ್ದಾಗಿದೆ. 5 ವರ್ಷದ ಬಳಿಕ ಬಡ್ಡಿಪಾವತಿ ದಿನಾಂಕಗಳಂದು ನಿರ್ಗಮನ ಆಯ್ಕೆಯನ್ನು ಆರಿಸಿಕೊಳ್ಳಬಹುದಾಗಿದೆ. ಹೂಡಿಕೆದಾರರು ಚಿನ್ನದ ಬಾಂಡ್ ಮೇಲೆ ಸಾಲ ಪಡೆಯಲು ಅವಕಾಶವಿದೆ.
ಬಡ್ಡಿ ಎಷ್ಟು ನೀಡಲಾಗುತ್ತದೆ?
ಈ ಯೋಜನೆಯಲ್ಲಿ ಹೂಡಿಕೆದಾರರು ವಾರ್ಷಿಕ ಶೇ.2.5 ರಷ್ಟು ಬಡ್ಡಿ ಗಳಿಸಲಿದ್ದಾರೆ. 6 ತಿಂಗಳಿಗೊಮ್ಮೆ ಬಡ್ಡಿ ಪಾವತಿಸಲಾಗುತ್ತದೆ. ಈ ಯೋಜನೆಯಲ್ಲಿ ಕ್ಯಾಪಿಟಲ್ ಗೇನ್ಸ್ ಗೆ ತೆರಿಗೆ ವಿನಾಯಿತಿ ಸಿಗುತ್ತದೆ. ಈ ಯೋಜನೆಯಡಿ ಚಿನ್ನವನ್ನು ಖರೀದಿಸಲು ಯಾವುದೇ ಜಿಎಸ್‌ಟಿ ಮತ್ತು ಮೇಕಿಂಗ್ ಶುಲ್ಕಗಳನ್ನು ವಿಧಿಸುವುದಿಲ್ಲ.
ಎಷ್ಟು ಬಾಂಡ್ ಖರೀದಿಸಬಹುದು?
ಒಬ್ಬ ವ್ಯಕ್ತಿ ಅಥವಾ ಹಿಂದೂ ಅವಿಭಕ್ತ ಕುಟುಂಬ ವಾರ್ಷಿಕ ಗರಿಷ್ಠ 4ಕೆ.ಜಿ.ಮೌಲ್ಯದ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಬಹುದು. ಟ್ರಸ್ಟ್ ಹಾಗೂ ಇತರ ಸಂಸ್ಥೆಗಳು ಗರಿಷ್ಠ 20 ಕೆ.ಜಿ ಸಾವರಿನ್ ಗೋಲ್ಡ್ ಬಾಂಡ್ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ 1ಗ್ರಾಂ ಚಿನ್ನ ಖರೀದಿಸಬೇಕಾಗುತ್ತದೆ.
ಹೂಡಿಕೆ ಹೇಗೆ?
ವಾಣಿಜ್ಯ ಬ್ಯಾಂಕುಗಳು, ನಿಗದಿತ ಅಂಚೆ ಕಚೇರಿಗಳು, ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಮೂಲಕ ನೇರವಾಗಿ ಅಥವಾ ಏಜೆಂಟ್‌ಗಳ ಮೂಲಕ ಹೂಡಿಕೆದಾರರು ಈ ಬಾಂಡ್ ನ್ನು ಖರೀದಿ ಮಾಡಬಹುದು. ಆನ್‌ಲೈನ್ ಮೂಲಕ ಸಾವರಿನ್ ಗೋಲ್ಡ್ ಬಾಂಡ್ ಖರೀದಿ ಮಾಡಿದರೆ ರಿಯಾಯಿತಿ ಲಭ್ಯವಾಗುತ್ತದೆ.
ನಾವು ಸಾಮಾನ್ಯವಾಗಿ ಚಿನ್ನವನ್ನು ಖರೀದಿ ಮಾಡುವಾಗ ಹೇಗೆ ಕೆವೈಸಿ ಮಾಡಲಾಗುತ್ತದೆಯೋ ಅದೇ ರೀತಿ ಕೆವೈಸಿ ನಡೆಯಲಿದೆ. ಮತದಾನದ ಐಡಿ/ ಆಧಾರ್ ಕಾರ್ಡ್/ಪ್ಯಾನ್ ಅಥವಾ ಟ್ಯಾನ್/ ಪಾಸ್‌ಪೋರ್ಟ್ ಬೇಕಾಗುತ್ತದೆ. ಪ್ಯಾನ್ ಸಂಖ್ಯೆಯನ್ನು ಅರ್ಜಿಯಲ್ಲಿ ನಮೂದಿಸುವುದು ಕಡ್ಡಾಯವಾಗಿದೆ.
ಪ್ರಯೋಜನಗಳು:
ಬಡ್ಡಿ ಸಿಗುವ ಅವಕಾಶ:
ಸಾಮಾನ್ಯವಾಗಿ ಚಿನ್ನಾಭರಣದ ಮೇಲೆ ಯಾವುದೇ ಬಡ್ಡಿ ಸಿಗುವುದಿಲ್ಲ. ಸಾವರಿನ್ ಗೋಲ್ಡ್ ಬಾಂಡ್‌ನಲ್ಲಿ ಹೂಡಿಕೆಯನ್ನು ಮಾಡಿದರೆ ನಮಗೆ ಬಡ್ಡಿ ಲಭ್ಯವಾಗಲಿದೆ. ಚಿನ್ನ ಸುರಕ್ಷಿತವಾಗಿರುವುದು ಮಾತ್ರವಲ್ಲದೆ ವಾರ್ಷಿಕವಾಗಿ ಶೇಕಡ 2.5ರಷ್ಟು ಬಡ್ಡಿದರ ಲಭ್ಯವಾಗಲಿದೆ. ಇದು ವರ್ಷಕ್ಕೆ ಎರಡು ಬಾರಿ ಪಾವತಿಯಾಗಲಿದೆ. ಎಂಟು ವರ್ಷಗಳ ಕಾಲ, ಪ್ರತಿ ವರ್ಷ ಶೇಕಡ 2.5ರಷ್ಟು ಬಡ್ಡಿದರ ಲಭ್ಯವಾಗಲಿದೆ.
ಕಳವು ಮಾಡಲಾಗದು:
ಅಧಿಕ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅಪಾಯಕಾರಿಯಾಗಿದೆ. ಚಿನ್ನ ಕಳವು ಆಗುವ ಅಪಾಯ ಇರುತ್ತದೆ. ಆದರೆ ಚಿನ್ನದ ಬಾಂಡ್ ನ್ನು ಖರೀದಿ ಮಾಡಿದರೆ ಅದು ಕಳವು ಆಗುವ ಅಪಾಯವೇ ಇಲ್ಲ. ನಾವು ಅದರ ಸುರಕ್ಷತೆಯ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ.
ಗೋಲ್ಡ್-ಲಿಂಕ್ಡ್ ರಿಟರ್ನ್
ಮೆಚ್ಯೂರಿಟಿ ಸಂದರ್ಭದಲ್ಲಿ ಚಾಲ್ತಿಯಲ್ಲಿರುವ ಚಿನ್ನದ ದರವು ಹೂಡಿಕೆ ಮಾಡಿದವರಿಗೆ ಲಭ್ಯವಾಗುತ್ತದೆ. ಇದು ಮೆಚ್ಯೂರಿಟಿಗಿಂತ ಮೊದಲು ಮೂರು ದಿನಗಳ ದರದ ಲೆಕ್ಕಾಚಾರದ ಮೇಲೆ 999 ಪ್ಯೂರಿಟಿ ಚಿನ್ನದ ಹಣವನ್ನು ಹೂಡಿಕೆದಾರರಿಗೆ ನೀಡಲಾಗುತ್ತದೆ.
ಕೇಂದ್ರದ ಗ್ಯಾರಂಟಿ
ಹೂಡಿಕೆ ಸುರಕ್ಷತೆ, ಬಡ್ಡಿದರ ಪಾವತಿ ಹಾಗೂ ಮೆಚ್ಯೂರಿಟಿ ಸಂದರ್ಭದಲ್ಲಿ ಹೂಡಿಕೆ ಮೇಲೆ ರಿಟರ್ನ್ ಬಗ್ಗೆ ಕೇಂದ್ರ ಸರ್ಕಾರ ಗ್ಯಾರಂಟಿಯನ್ನು ನೀಡುತ್ತದೆ. ಸಾವರಿನ್ ಗೋಲ್ಡ್ ಬಾಂಡ್ ಮೇಲೆ ಹೂಡಿಕೆ ಮಾಡುವುದರಲ್ಲಿ ಅಪಾಯವಿಲ್ಲ.
ತೆರಿಗೆ ವಿನಾಯಿತಿ
ಸಾವರಿನ್ ಗೋಲ್ಡ್ ಬಾಂಡ್‌ನ ಹೂಡಿಕೆಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. 8 ವರ್ಷದ ಬಳಿಕ ಲಭ್ಯವಾದ ಲಾಭದ ಮೇಲೆ ಕೂಡಾ ತೆರಿಗೆ ವಿನಾಯಿತಿ ಇರುತ್ತದೆ. ಮೆಚ್ಯೂರಿಟಿಗೂ ಮುನ್ನ ಸಾವರಿನ್ ಗೋಲ್ಡ್ ಬಾಂಡ್ ಮಾರಿದಲ್ಲಿ ಇದಕ್ಕೆ ತೆರಿಗೆ ನೀಡಬೇಕಾಗುತ್ತದೆ.
ಚಿನ್ನಾಭರಣದ ಮೇಲೆ ಹೂಡಿಕೆ ಮಾಡುವ ಬದಲು ಸಾವರಿನ್ ಗೋಲ್ಡ್ ಬಾಂಡ್ ಮೇಲೆ ಹೂಡಿಕೆ ಮಾಡಿದರೆ ಕ್ಯಾಪಿಟಲ್ appreciation ಜೊತೆಗೆ ತೆರಿಗೆ ವಿನಾಯಿತಿ ಕೂಡಾ ಸಿಗುತ್ತದೆ. ಸಣ್ಣ ಪ್ರಮಾಣದಲ್ಲಿ ಸಾವರನ್ ಗೋಲ್ಡ್ ಬಾಂಡ್ ಮೇಲೆ ಹೂಡಿಕೆ ಮಾಡುವುದು ಆರ್ಥಿಕ ಭದ್ರತೆಗೆ ಉತ್ತಮ ಎನ್ನಬಹುದು.
-ಅರುಣ್ ಕಿಲ್ಲೂರು
Author,Journalist,Photographer