ಏನೆಂದು ಹೆಸರಿಡಲಿ?

ProfileImg
07 Apr '24
4 min read


image

ಗವ್ವೆನ್ನುವ ಕತ್ತಲಲ್ಲಿ  ಕೂತು  ಬಣ್ಣಬಣ್ಣದ  ಕನಸು ಕಂಡಿದ್ದ  ಕಣ್ಣಲ್ಲೇ ಧರಧರನೇ ಬಣ್ಣವಿಲ್ಲದ ಕಣ್ಣೀರನ್ನು ಸುರಿಸುವ ಪ್ರಯತ್ನವನ್ನು ಆಗದಿಂದ  ಮಾಡುತ್ತಿದ್ದೇನೆ.

ಆದರೆ ಕಣ್ಣಿಂದ ಒಂದು ತೊಟ್ಟು ನೀರು ಇಳಿಯುತ್ತಿಲ್ಲ!

ಕತ್ತಲೆಂದರೇ ಭಯಪಡುತ್ತಿದ್ದ  ನನಗೆ  ಈಗ  ಕತ್ತಲೆಯೇ  ಪ್ರಪಂಚವಾಗಿಹೋಗಿದೆ.

ಕೆಲವೊಂದು ಸಮಯ  ಸಂಧರ್ಭಗಳು  ಬೇಡ ಬೇಡವೆಂದರೂ  ನಾವು  ಬದಲಾಗುವಂತೆ  ಮಾಡಿಬಿಡುತ್ತವೆ.

ಇವತ್ತಿನ  ದಿನವೆಲ್ಲ  ಹಾಳಾಗಿ ಹೋಯ್ತಲ್ಲ!

ಅರುಣನಿಗೆ ಮದುವೆ  ಗೊತ್ತಾದ ವಿಷಯ ತಿಳಿದು ಫೋರ್ ಟ್ವೆಂಟಿಯಲ್ಲಿದ್ದ ನನ್ನ ಎನರ್ಜಿಯೆಲ್ಲಾ ಟ್ವೆಂಟಿಗೆ ಬಂದಿಳಿಯಲೂ ಕೇಳದೇ ಇದ್ದದ್ದು ವಿಪರ್ಯಾಸವೇ ಸರಿ.

“ಪ್ರಜ್ಞಾ ನಿನ್ನಲ್ಲಿ ಒಂದು ವಿಷಯ  ಹೇಳ್ಬೇಕಿತ್ತ .”ಪಜ್ಜು ಎಂದು ಕರೆಯುತ್ತಿದ್ದವನ ಬಾಯಿಯಿಂದ  ಅನಾಮತ್ತಾಗಿ ನನ್ನ ಸಂಪೂರ್ಣ ಹೆಸರು  ಬಂದಾಗಲೇ  ಅದೇನನ್ನೋ ಕಳೆದುಕೊಂಡ  ಭಾವನೆ!

"ಹಾ, ಅದೇನು ಹೇಳಿ ಅರುಣಣ್ಣ " ಅದ್ಯಾಕೋ ಆತನ  ಕಣ್ಣಲ್ಲಿ ಕಣ್ಣಿಟ್ಟು ಮಾತಾಡಲು  ನನ್ನಿಂದ  ಸಾಧ್ಯವೇ  ಇಲ್ಲವೇನೋ.

" ಅದೂ... "  ಅವನ ರಾಗ  ಮುಗಿಯುವ  ಮೊದಲೇ "ಅರುಣ  ಒಂಚೂರು  ಇಲ್ಲಿಗೆ ಬಾರೋ.. " ಎಂಬ  ದೊಡ್ಡಪ್ಪನ  ಮಾತು ನನ್ನ  ಕಿವಿಗೆ ಬಿದ್ದಿತ್ತು.

"ಮತ್ತೆ ಹೇಳ್ತೇನೆ " ಎಂದೇಳಿ ನನ್ನ  ಬೆನ್ನು ತಟ್ಟಿ ಅತ್ತ ಕಡೆ  ಹೊರಟನವ.

ಹಾಗೆಯೇ  ನನ್ನ ಮನಸ್ಸಿನಿಂದಲೂ ದೂರ ಹೋಗಿದಿದ್ದರೆ! ಅದೆಷ್ಟು ಚಂದವಿರುತ್ತಿತ್ತು.

ಬಾಯಿ ತುಂಬಾ ಅರುಣಣ್ಣ ಅರುಣಣ್ಣ ಎಂದು ಕರೆಯುವ ನನಗೆ  ನಿಜವಾಗಲೂ  ಆತನ  ಮೇಲೆ ಅದೇ ಭಾವನೆಯಿದೆಯೇ? ಗೊತ್ತಿಲ್ಲ.

ದ್ವಂದ್ವಗಳ ಗೂಡಾಗಿ ಹೋಗಿದೆ ಮನಸ್ಸೆಲ್ಲಾ!

ಅಂದು ಒಂದು ಗಮ್ಮತ್ ಇತ್ತೆಂದೂ ಕುಟುಂಬದ ಮನೆಯಲ್ಲಿ  ಜಮೆಯಾಗಿದ್ದೆವೆಲ್ಲರು ಒಟ್ಟಿಗೆ. ಮಹಿಳಾಮಣಿಗಳೆಲ್ಲ  ಜೊತೆಗೂಡಿ  ಅಡುಗೆ ಮಾಡುವ  ಕೆಲಸದಲ್ಲಿದ್ದರೆ, ಗಂಡಸರೆಲ್ಲಾ ಒಂದು ಗುಂಪು ಕಟ್ಟಿಕೊಂಡು ನ್ಯೂಸ್ ಚಾನೆಲ್ ಹಾಕಿಕೊಂಡು ರಾಜಕೀಯದ  ಬಗ್ಗೆ ಬೊಗಳೆ ಬಿಡುತ್ತ ಅವರಿವರ ಬಗ್ಗೆಲ್ಲಾ ಆಡಿಕೊಂಡು ನಗುತ್ತಾ ನಿಂತಿದ್ದರೆ, ಮಕ್ಕಳೆಲ್ಲ  ಜೊತೆಸೇರಿ ಆಟ ಆಡುವುದರಲ್ಲಿದ್ದರೆ, ತಮ್ಮ  ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಾ ಬಾಯಿ ತುಂಬಾ ಎಲೆ ಅಡಿಕೆ ತುಂಬಿಸಿಕೊಂಡು ಅವರವರ  ಕಾಲದ ಬಗ್ಗೆ ಮಾತಾಡೋದರಲ್ಲಿ  ಹಿರಿಯರೆಲ್ಲ  ಬ್ಯುಸಿ.

ಒಟ್ಟಾರೆ ಯೋಚಿಸುತ್ತ  ಕೂರಲು  ಅಲ್ಲಾರಿಗೂ  ಸಮಯವನ್ನುವುದೇ ಇರಲಿಲ್ಲ.

ಆದರೆ  ನನಗೆ? ಯೋಚಿಸಿದಷ್ಟು  ಮುಗಿಯದ  ಆಲೋಚನೆಗಳೇ!

ಕೈಯಲ್ಲೊಂದು ಕೆಲಸ ಮಾಡಿಕೊಂಡು ತಲೆಯಲ್ಲೊಂದು  ಯೋಚನೆ ಮಾಡುತ್ತ ಈರುಳ್ಳಿ ಕತ್ತರಿಸುತ್ತಿದ್ದ ಚಾಕುವನ್ನು  ತಂದು  ನನ್ನ ಕೈಮೇಲೆಯೇ ಹರಿಯಬಿಟ್ಟಿದ್ದೆ!

ನೆತ್ತರ ಪಸೆ  ಅಲ್ಲೆಲ್ಲಾ ಆದಾಗ  ಯಾರಿಗೂ ಕಾಣದಂತೆ ನೀರಿಗೆ ಕೈಯೊಡ್ಡಿ ರಕ್ತವನ್ನೆಲ್ಲಾ  ತೊಳೆದುಬಿಟ್ಟಾಗ ಮನಸ್ಸಿನಲ್ಲಿರುವ  ನನ್ನೆಲ್ಲ ಬೇನೆಗಳು  ಹೀಗೆ  ತೊಳೆದು ಹೋಗಲಿ  ಎಂದನಿಸಿದ್ದು  ಅಕ್ಷರಷಃ  ಸುಳ್ಳಲ್ಲ..

ಕೆಲಸವೆಲ್ಲ ಮಾಡಿ ಮುಗಿದ ನಂತರ  ಅಲ್ಲೇ ಕೋಣೆಯೊಂದರಲ್ಲಿ  ಹೋಗಿ ಕೂತು  ಚಾವಡಿಯಲ್ಲಿದ್ದ ಅರುಣಣ್ಣನಿಗೆ ಒಂದೇ ಮನೆಯಲ್ಲಿದ್ದುಕೊಂಡು ಸಂದೇಶವೊಂದನ್ನು ಕಳುಹಿಸಿದ್ದೆ "ಏನದು  ವಿಷಯ  ಹೇಳೋಕಿರೋದು?" ಎಂದು.

"ನನಗೆ ಮದುವೆ  ಸೆಟ್ ಆಯ್ತು ಕಣೇ " ಎಂದವರು  ಇಬ್ಬರೂ ಒಟ್ಟಿಗೆ ದೇವಸ್ಥಾನದಲ್ಲಿ ನಿಂತು ಕ್ಲಿಕ್ಕಿಸಿಕೊಂಡಿದ್ದ ಭಾವಚಿತ್ರವನ್ನು ನನಗೆ  ಕಳುಹಿಸಿ   ಸೀದಾ  ಕೋಣೆಯೊಳಗಡೆ ಬಂದುಬಿಟ್ಟರು.

ಹೃದಯವೆಲ್ಲಾ  ಒಡೆದು ಚೂರಾದ ಅನುಭವ! ಯಾತಕ್ಕಾಗಿ ಆ  ಭಾವನೆ? ಗೊತ್ತಿಲ್ಲ. ಅವನು  ಬಂದು  ನನ್ನ  ಪಕ್ಕ  ಕೂತಾಗ ಈ  ಬಾರಿ ಕೂಡ ನನ್ನ ಹೃದಯ ನಗಾರಿಯಂತೆ  ಬಡಿದುಕೊಳ್ಳುತ್ತಿತ್ತು. ಅದವನಿಗೆ   ಕೇಳಿಸಿತ್ತೇ? ಖಂಡಿತವಾಗಿಯೂ  ಇಲ್ಲ.

ನನ್ನ ಮನದಲ್ಲಿನ ತಲ್ಲಣಗಳೆಲ್ಲ  ಅವನವರೆಗೂ  ಮುಟ್ಟುವ ಹಾಗಿದ್ದರೆ ನಾನೇಕೆ  ಹೀಗಿರುತ್ತಿದ್ದೆ!

ನನ್ನ ನಾನು ಹಿಡಿದಿಟ್ಟುಕೊಳ್ಳುವುದರಲ್ಲಿ  ಅಂದು ಗೆದ್ದಿದ್ದೆ…

"ಕಂಗ್ರಾಟ್ಸ್ ಅರುಣಣ್ಣ ಮತ್ತೆ ಅಡ್ವಾನ್ಸ  ಡ್ ಹ್ಯಾಪಿ ಮ್ಯಾರೀಡ್ ಲೈಫ್ "  ಅದೇನೋ ಅರಿಯದ  ಸಂಕಟ  ಮನದೊಳಗೆ  ಇಷ್ಟನ್ನು ಹೇಳಿ ಮುಗಿಸುವಾಗ.

"ಈಗ್ಲೂ ನಿನಗೆ  ನನ್ನ  ಮೇಲೆ ಪ್ರೀತಿ ಇಲ್ವೇನೇ? " ಈಗಲಾದರೂ  ನನ್ನ  ಪ್ರೇಮ ನಿವೇದನೆಯನ್ನು ಇವಳೊಮ್ಮೆ ಒಪ್ಪಿಕೊಂಡುಬಿಟ್ಟರೆ  ಸಾಕು  ಎಂಬ  ಹೊಳಪು  ಆತನ  ಕಣ್ಣಲ್ಲಡಗಿರುವುದನ್ನು ಗಮನಿಸದೆ  ನಾನಿರಲಿಲ್ಲ.

ಆದರೇನು  ಮಾಡಲಿ  ಅವನೆಡೆಗೆ ನನಗಿರುವ  ಭಾವನೆಗಳಿಗೆ ಹೆಸರಿಡಲೇ  ಬಾರದಲ್ಲ  ನನಗೆ!

ಪ್ರತೀ ಬಾರಿ  ಆತನದನ್ನೇ ಕೇಳುವಾಗ  ಅವನಿಗೆ  ಸೋಲದೆ  ಹೇಗಿರಲಿ? ಒಮ್ಮೆ  ಅವನ  ಕರಗಳಲ್ಲಿ  ಕರಗುವ ಮನಸ್ಸಾದರೆ  ಮತ್ತೊಮ್ಮೆ ಈ  ಪ್ರಾಯದಲ್ಲಿ ಇದೆಲ್ಲ ಇದ್ದದ್ದೇ ' ಇದು ನಿನಗೆ ಸ್ಟೂಡೆಂಟ್  ಆಗಿ  ಕಲಿಯೋ  ವಯಸ್ಸು ' ಎಂಬ  ಮೊಗ್ಗಿನ ಮನಸ್ಸಿನ  ಚಂಚಲಾಳ  ಡೈಲಾಗ್ ನೆನಪಿಗೆ  ಬಂದು  ಸುಮ್ಮನಾಗಿಬಿಡುವೆ.

ನನ್ನನ್ನೇ ನಾನು ಅರ್ಥ ಮಾಡಿಕೊಳ್ಳಲು ಸೋತಿರುವಾಗ  ಅವನೆಡೆಗೆ  ನನಗಿರುವ  ಭಾವನೆಗಳಿಗೆ ಏನೆಂದು ಹೆಸರಿಡಲಿ?

ಪ್ರೀತಿಯಂತೂ ಅಲ್ಲಾ, ಅದಂತೂ  ಪಕ್ಕ ಖಾತ್ರಿಯಾಗಿದೆ ನನಗೆ. ಆಕರ್ಷಣೆ ಆಗಿರಬಹುದಾ?

ಒಮ್ಮೊಮ್ಮೆ ಹೌದೆಂದು  ಅನಿಸುತ್ತದೆ.

ಬರೀ  ಆಕರ್ಷಣೆಯಾ  ಅದು? ಖಂಡಿತವಾಗಿಯೂ ಅಲ್ಲಾ ಅದಕ್ಕೂ ಮೀರಿದ  ಒಂದು ಭಾವನೆ ಅಲ್ಲಡಗಿದೆ. ಅದನ್ನು ಹೇಳಿಕೊಳ್ಳಲೇ ಬಾರದಲ್ಲ ನನಗೆ!

                          ********

ಎರಡು ದಿನಗಳ ಹಿಂದೆ ಡೈರಿಯಲ್ಲಿ ಬರೆದಿದ್ದ  ನನ್ನ ಮನಸ್ಸಿನ  ತುಮುಲಗಳನ್ನೆಲ್ಲ  ಇಂದು ಮತ್ತೊಮ್ಮೆ ಓದಿದೆ. ಅದೇನೋ ನಿರ್ಲಿಪ್ತತೆ ಮನದಲ್ಲಿ!

 

ಕಡಲ ತೀರದಲ್ಲಿ  ಕೂತು ಅವನ ಹೆಸರನ್ನೇ  ಮರಳ  ರಾಶಿಯ ಮೇಲೆ ಬರೆದಿದ್ದೆ. ಸಾಲುಸಾಲಾಗಿ  ಬಂದು ಹೋಗುತ್ತಿದ್ದ  ಅಲೆಗಳೆಲ್ಲ  ಅವನ  ಹೆಸರನ್ನು ಅಳಿಸಿ ಒಂದಷ್ಟು ಮರಳನ್ನ ತನ್ನೊಡನ   ಅಬ್ಧಿಯೊಳಗೆ ಕೊಂಡುಹೋಗುತ್ತಿತ್ತು. ಅವನ  ಹೆಸರು  ನಿನ್ನ ಕಡಲ ತಡಿಯಿಂದ  ಅಳಿಸಿ ಹೋದಂತೆ  ನನ್ನ ಮನದಿಂದಲೂ  ಅಳಿಸಿಹೋಗಿದ್ದರೆ ಅದೆಷ್ಟು ಚಂದವಿರುತ್ತಿತ್ತು!  ಅಸಲಿಗೆ ನನ್ನ ಮನದಲ್ಲಿ ಅವನ  ಹೆಸರಿದೆಯೇ ? ಗೊತ್ತಿಲ್ಲ.

ಜೀವನಪೂರ್ತಿ ನೆರವೇರದ  ಕನಸುಗಳನ್ನು  ಕಾಣುವುದೇ  ಈಗೀಗ  ನನ್ನ  ಹವ್ಯಾಸವಾಗಿಹೋಗಿದೆ.

 

ಮೊನ್ನೆ ನಾನ್ಯಾಕೆ ಅಷ್ಟೊಂದು ಯಾತನೆ ಪಟ್ಟುಕೊಂಡೆ? ಉತ್ತರವೇ  ಇಲ್ಲ ನನ್ನ ಬಳಿ.

ನಿನ್ನೆ  ಮೊನ್ನೆಯಿದ್ದ  ಯಾವ  ಭಾವನೆಗಳು   ಕೂಡ ಇಂದು ನನ್ನಲ್ಲಿಲ್ಲ,  ಅದೇನೋ ಹೊಸತನ ಎದ್ದು ನಿಂತಿದೆ ಇಂದು ನನ್ನಲ್ಲಿ. 'ಬದುಕನ್ನು  ಬಂದಂತೆ  ಸ್ವೀಕರಿಸಬೇಕು' ಎಂಬ ನನ್ನ ಪಾಲಿಸಿಯೇ  ಮನವನ್ನು  ಇಷ್ಟು ಗಟ್ಟಿಯಾಗಿ ನಿಲ್ಲುವ ಹಾಗೆ  ಮಾಡಿರುವುದು ಅನ್ನಿಸುತ್ತೆ  ನನಗೆ!

ಹದಿನಾರರಿಂದ  ಇಪ್ಪತ್ತಾರರ  ತನಕ  ಮನಸ್ಸು ಮಂಗನ  ಹಾಗೆ  ಹುಚ್ಚೆದ್ದು ಕುಣಿಯುತ್ತದಂತೆ! ಹೌದಲ್ಲವೇ.

ಇಪ್ಪತ್ತೊಂದರ  ಹೊಸ್ತಿಲಲ್ಲಿರುವ ನನಗೆ ಇನ್ನೂ ನನ್ನನೇ  ಅರ್ಥ ಮಾಡಿಕೊಳ್ಳಲು ಬಾರದೆಂದರೆ  ಏನು ಹೇಳೋಣ?

ಮೊದಲೆಲ್ಲ  ಇಲ್ಲದ  ನಾಳೆಗಳಿಗೆ ಬೇಕಾದಷ್ಟು ಕನಸು  ಕಾಣುತ್ತಿದ್ದ ನಾನು ಈಗೀಗ  ಇರುವ  ಇಂದಿನ ದಿನವನ್ನು  ನನ್ನಿಂದಾದಷ್ಟು  ಸುಂದರವಾಗಿರಿಸಲು  ಪ್ರಯತ್ನ ಪಡುತಲಿರುವೇ.

ಈಗಂತೂ  'ಇಲ್ಲದ  ನಾಳೆಗಳಿಗಾಗಿ ಎಲ್ಲಿಲ್ಲದ ಕನಸು'ಗಳನ್ನು  ಕಾಣುವುದನ್ನೇ  ಬಿಟ್ಟು ಬಿಟ್ಟಿದ್ದೇನೆ.

ಅರುಣನ ಮದುವೆಗೂ  ಹೋದೆ, ಆತನ ವೈವಾಹಿಕ ಜೀವನ ಸುಖಕರವಾಗಿ  ಸಾಗಲೆಂದು   ಮನಸ್ಫೂರ್ತಿಯಾಗಿ ಹಾರೈಸಿ ಬಂದಾಗಲೂ  ನನ್ನಲ್ಲಿ ಯಾವುದೇ ಬದಲಾವಣೆ  ಆಗಲೇ  ಇಲ್ಲ!

ಅಕ್ಷತೆ  ಕಾಳು ಹಾಕಿ  ನವಜೋಡಿಗಳಿಗೆ ಶುಭಕೋರುವಾಗ   ಅವನ ಕಣ್ಣಲ್ಲಿದ್ದ ನನ್ನೆಡೆಗಿನ  ನೋಟದಲ್ಲೆ ಸಾವಿರ   ಭಾವನೆಗಳಡಗಿತ್ತು. ಆದರೆ  ನನ್ನ  ಕಣ್ಣಲ್ಲೇನಾದರು  ಬದಲಾವಣೆಗಳಾಗಿತ್ತೇ? ಖಂಡಿತವಾಗಿಯೂ  ಇಲ್ಲ. ಈ  ಬಾರಿಯೂ ಕೂಡ ಅವನ  ಬಳಿ  ನಿಲ್ಲುವಾಗ   ಒಡೆದೇ ಹೋಗುವ ಹಾಗೆ ನನ್ನ ಹೃದಯ ಬಡಿದುಕೊಳ್ಳುತ್ತಿತ್ತು..

ನನಗಾಗ ಮತ್ತೊಮ್ಮೆ ಖಾತ್ರಿಯಾಗಿತ್ತು ಇದು ಪ್ರೇಮವಲ್ಲವೆಂದು. ಅದಕ್ಕೂ ಮೀರಿದ ಒಂದು ಭಾವನೆ..

ಪದಗಳಲ್ಲಿ ವರ್ಣಿಸಲಾಗದ್ದು!

ಕೆಲವೊಂದು  ಭಾವನೆಗಳಿಗೆ  ಅರ್ಥವನ್ನು  ಹುಡುಕಲು ಹೋಗದೆ  ಅದನ್ನು ಅದರ  ಪಾಡಿಗೆ  ಬಿಟ್ಟುಬಿಡಬೇಕು.

ಕೆಲವೊಂದು ಭಾವನೆಗಳಿಗೆ ಹೆಸರನ್ನುವುದೇ  ಇರುವುದಿಲ್ಲ!  ಅರುಣನೆಡೆಗಿರುವ  ನನ್ನ  ಭಾವನೆಗಳು  ಹಾಗೆಯೇ.

ಕೆಲವು  ಸಂಬಂಧಗಳನ್ನು ಅದರ ಪಾಡಿಗೆ ಹಾರಾಡಲು ಬಿಟ್ಟು ಬಿಡಬೇಕು . ಸ್ವಚ್ಚಂದವಾಗಿ ಅದಕ್ಕೆ ಬೇಕಾದ  ಹಾಗೆ  ಹಾರಾಡಿಕೊಂಡು ಅದಿರಲಿ ಎಂದು.

ಕಂಡ ಕನಸುಗಳೆಲ್ಲ  ನನಸಾಗುವ  ಹಾಗಿದ್ದರೆ  ಜೀವನವೇತಕ್ಕೆ ಅಲ್ಲವೇ.

ಕಡೆಗೂ  ನನಗೆ  ಉತ್ತರ  ಸಿಗಲೇ  ಇಲ್ಲ  ಅವನೆಡೆಗೆ ನನಗಿರುವ  ಭಾವನೆಗಳಿಗೆ 'ಏನೆಂದು ಹೆಸರಿಡಲಿ?' ಎಂದು!

                  ****ಮುಕ್ತಾಯ ****

ಚೈತ್ರ

 

Category:Relationships



ProfileImg

Written by Chaithra