ನೊಂದ ಮನಸ್ಸು ಬಯಸುವುದು ಏನನ್ನು?

ಲೇಖನ



image

                    ರಘುವಿಗೇಕೋ ಅಪರಾಧಿ ಮನೋಭಾವ ಕಾಡುತಿತ್ತು. ಅವನಿಗಿಂತ ಎರಡು ವರ್ಷ ಕಿರಿಯಳಾದ ನರ್ಮದಾ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆತ್ಮಹತ್ಯೆಗೂ ಮುನ್ನ ಅದೇ ದಿನ ಬೆಳಗ್ಗೆ ಅಕಸ್ಮಾತ್ ಆಗಿ ರಘುವಿಗೆ ಸಿಕ್ಕು ಚೆನ್ನಾಗಿಯೇ ಮಾತನಾಡಿದ್ದಳು. "ಹೇ ರಘು ಅಣ್ಣ ಆರಾಮಾ?" ಅವಳೇ ರಘುವನ್ನು ಗುರುತಿಸಿ ಮಾತಿಗೆಳೆದಿದ್ದಳು. "ಅರೆ! ನರ್ಮದಾ ಅಲ್ವೇ? ನಾನು ಆರಾಮ ಕಣಮ್ಮ, ನೀನು? ಯಾವಾಗ ಬಂದೆ ಊರಿಗೆ?" ರಘುವೂ ಅವಳ ಕುರಿತು ವಿಚಾರಿಸಿದ್ದ. "ನಾನೂ ಆರಾಮಾಗಿದ್ದೀನಿ ಅಣ್ಣ, ನಿನ್ನೆ ಬೆಳಿಗ್ಗೆ ಬಂದೆ ಊರಿಗೆ. ಸ್ವಲ್ಪ ಕೆಲ್ಸ ಇತ್ತು ಅದಿಕ್ಕೆ ಪೇಟೆ ಕಡೆ ಹೋಗಿದ್ದೆ"
ಅವಳು ನಗುತ್ತಲೇ ಉತ್ತರಿಸಿದಾಗ ಅವನ ಗಮನ ಅವಳ ಕೈಯಲ್ಲಿದ್ದ ಕಾಗದದ ಪೊಟ್ಟಣದತ್ತ ಹೊರಳಿತ್ತು. ಅವಳನ್ನು ರೇಗಿಸಲೆಂದು, "ಈ ಸಣ್ಣ ಪೊಟ್ಟಣಕ್ಕಾಗಿ ಪಟ್ಟಣಕ್ಕೆ ಹೋಗ್ಬೇಕಿತ್ತಾ?" ಎಂದು ನಕ್ಕಾಗ, "ಅಲ್ಲ ಅಣ್ಣ ಸ್ವಲ್ಪ ಮಾತ್ರೆ ಬೇಕಾಗಿತ್ತು ಅದಿಕ್ಕೆ ಹೋಗಿದ್ದೆ, ಸರಿ ಅಣ್ಣ ಹೊತ್ತಾಯ್ತು ಆಮೇಲೆ ಸಿಕ್ತೀನಿ" ಎನ್ನುತ್ತಾ ತನ್ನ ಹಾದಿ ಹಿಡಿದಿದ್ದಳು. ಇದಾದ ಕೆಲವೇ ಗಂಟೆಗಳಲ್ಲಿ ಅವಳ ಮರಣದ ಸುದ್ಧಿ ಅವನಿಗೆ ಮುಟ್ಟಿತ್ತು. ಅದಾವುದೋ ಮಾತ್ರೆಯನ್ನು ಸೇವಿಸಿ ಇಹಲೋಕಕ್ಕೆ ವಿದಾಯ ಹೇಳಿದ್ದಳವಳು. 'ಛೆ! ಅವಳ ಬಳಿ ಇದ್ದ ಮಾತ್ರೆಯ ಕುರಿತು ಕೇಳಬೇಕಿತ್ತು ನಾನು, ತಪ್ಪು ಮಾಡಿ ಬಿಟ್ಟೆ' ಎನ್ನುತ್ತಾ ಯಾರ ಬಳಿಯೂ ಹೇಳಲಾಗದೆ, ತನಗೆ ತಾನು ಸಮಾಧಾನವನ್ನೂ ಮಾಡಲಾಗದೆ ಒದ್ದಾಡಿದ್ದ ರಘು. "ಅವ್ಳಿಗೆ ಅದೇನು ಬರ್ಬಾರದ್ದು ಬಂದಿತ್ತವ್ವ, ಚೆನ್ನಾಗೆ ನಗ್ ನಗ್ತಾ ಇದ್ಲು"
ಅಂತ ಒಬ್ಬರೆಂದರೆ, "ಅದೇ ಅಂತೀನಿ, ಗಂಡಂಗತೂ ಒಳ್ಳೆ ಕೆಲ್ಸ ಇತ್ತಂತೆ, ಜೊತೆಗೆ ಆಳು-ಕಾಳು , ಓಡಾಡೋಕೆ ಕಾರು ಬೇರೆ, ಎಲ್ಲ ಇದ್ದು ಹಿಂಗ್ಯಾಕ್ ಮಾಡ್ಕಂಡ್ಳೋ ಪುಣ್ಯಾತ್‍ಗಿತ್ತಿ" ಇದು ಇನ್ನೊಬ್ಬರ ಮಾತು. ಹೀಗೆ ತಲೆಗೊಬ್ಬರು ನರ್ಮದಾಳ ಸಾವಿನ ಕುರಿತು ತಮಗನ್ನಿಸಿದಂತೆ ಆಡತೊಡಗಿದ್ದರು.
ನಮ್ಮ ಸಮಾಜ ಹೀಗೆ ಅಲ್ವಾ? ಬೇರೆಯವರ ಜೀವ, ಜೀವನ ಅಂದ್ರೆ ಬಹಳ  ಅಗ್ಗದ ವಿಷಯವಾಗಿಬಿಡುತ್ತೆ.  ಯಾರೋ ಒಬ್ಬರು ನೊಂದಿದ್ದಾರೆ ಎಂದರೆ ಸಾಕು ಬಿಟ್ಟಿ ಉಪದೇಶ ಕೊಡಲು ನೂರಾರು ಜನ ತಯಾರಾಗಿ ಬಿಡುತ್ತಾರೆ. 'ಹೀಗೆ ಮಾಡು', 'ಹಾಗೆ ಮಾಡು' ಎನ್ನುತ್ತಾ ತಮ್ಮ ಮನಸ್ಸಿಗೆ ಬಂದುದನ್ನೆಲ್ಲಾ ಹೇಳಿ ಅವರ ನೋವನ್ನು ಹೆಚ್ಚಿಸುತ್ತಾರೆ.
ನೊಂದ ಮನಸ್ಸು ಇನ್ನಷ್ಟು ಬೆಂದು  ಬದುಕುವ ದಾರಿಯೊಂದೂ ಕಾಣದೆ ಸಾವೆಂಬೋ ಕೊನೆಯ ನಿಲ್ದಾಣ ತಲುಪಲು ಸಜ್ಜಾಗುತ್ತದೆ.

ಹಾಗಾದರೆ ನೊಂದ ಮನಸ್ಸು ಬಯಸೋದಾದರೂ ಏನನ್ನು?

ನೊಂದ ಮನಸ್ಸು ಬಯಸೋದು ಒಂದು ಸಣ್ಣ ಸಾಂತ್ವಾನದ ಹಿತನುಡಿಯನ್ನು, ನೊಂದ ಮನಸ್ಸು ಬಯಸೋದು ನೋವೆಲ್ಲ ಬಸಿದು ಹೋಗುವಂತೆ ಪ್ರೀತಿಯಿಂದ ನೇವರಿಸುವ ಹಸ್ತವೊಂದನ್ನು, ನೊಂದ ಮನಸ್ಸು ಬಯಸೋದು ಎದೆಯಾಳದ ನೋವೆಲ್ಲ ಕಣ್ಣೀರ ರೂಪದಲ್ಲಿ ಕರಗಿ ಹೋಗುವಂತೆ ಬಿಕ್ಕಲು ಮಡಿಲೊಂದನ್ನು.
ಅಷ್ಟೇ ಹೊರತು ಕೆಲಸಕ್ಕೆ ಬಾರದ ಉಪದೇಶವನ್ನಲ್ಲ. 
ಮೇಲೆ ಹೇಳಿದ ನರ್ಮದಾ ಮತ್ತು ರಘುವಿನ ಕತೆಯಲ್ಲಿ ಬಹುಶಃ ರಘು ಮಾತ್ರೆ ಯಾವುದೆಂಬುದನ್ನು ಕೇಳಿದಿದ್ದರೆ, ಅಥವಾ ನರ್ಮದೆಯ ಹೃದಯದಲ್ಲಿದ್ದ ನೋವನ್ನು ಕೆದಕಿದ್ದರೆ ಅದಕ್ಕೆ ಪರಿಹಾರವಾಗಿ ಬದಲೀ ಮಾರ್ಗವನ್ನು ರಘು ಸೂಚಿಸುತ್ತಿದ್ದನೇನೋ? ಇದರಿಂದ ನರ್ಮದಾ ಉಳಿಯುತ್ತಿದ್ದಳೇನೋ?  ನರ್ಮದಾಳ ಬಳಿ ಎಷ್ಟು ಶ್ರೀಮಂತಿಕೆ ಇದ್ದರೇನು, ಆಳುಕಾಳುಗಳಿದ್ದರೇನು, ಕಾರು, ಆಸ್ತಿ, ಒಡವೆ ವಸ್ತ್ರಗಳಿದ್ದರೇನು ಅವಳ ಮನದಲ್ಲಿದ್ದ ನೋವಿಗೆ ಇದಾವುದೂ ಪರಿಹಾರವಾಗಲೇ ಇಲ್ಲ. ಇವುಗಳ್ಯಾವುವೂ ಅವಳ ಜೀವವನ್ನು ಉಳಿಸುವಲ್ಲಿ ಪಾತ್ರ ವಹಿಸಲೇ ಇಲ್ಲ. ಇಂದಿನ ಕಾಲಘಟ್ಟ ಹೇಗಿದೆ ಎಂದರೆ, ಮನುಷ್ಯನ ಸಿರಿವಂತಿಕೆಯನ್ನು  ಅವನ ಆಸ್ತಿ ಪಾಸ್ತಿ,ಹಣ, ಒಡವೆ,ವಸ್ತ್ರ ಇತ್ಯಾದಿಗಳಿಂದ ನಾವು ಅಳೆಯುವಂತಿಲ್ಲ, ಬದಲಾಗಿ ಅವನಲ್ಲಿ ಜೀವನೋತ್ಸಾಹ, ನೆಮ್ಮದಿ ಅವನ ಸುತ್ತ ಅವನನ್ನು ನಿಜವಾಗಿಯೂ ಪ್ರೀತಿಸುವ ಮಂದಿ ಎಷ್ಟಿದ್ದಾರೆ ಎಂಬುವುದರ ಮುಖಾಂತರ ಅಳೆಯಬೇಕಾಗಿದೆ. ನಾವು ನೋವ ತುಂಬಿದ ಮನಗಳಿಗೆ ನೇವರಿಸುವ ಕೈಗಳಾಗಿ, ಒಂದೆರಡು ಸಾಂತ್ವನದ ನುಡಿಗಳ  ಮೂಲಕ ಜೀವನೋತ್ಸಾಹವನ್ನು ಚಿಗುರಿಸಬೇಕಿದೆ,   ಆಸರೆಯ ಮಡಿಲಾಗಬೇಕಿದೆ. ನಾವಿಷ್ಟು ಮಾಡಿದರೆ ಬಹುಶಃ ಅದೆಷ್ಟೋ ಆತ್ಮಹತ್ಯೆಗಳಾಗುವುದನ್ನು ತಡೆಯಬಹುದೇನೋ ಎಂಬುದು ನನ್ನ ಅನಿಸಿಕೆ, ಏನಂತೀರಾ?  
       ತಿಲಕಾ ನಾಗರಾಜ್ ಹಿರಿಯಡಕ




ProfileImg

Written by ತಿಲಕಾ ನಾಗರಾಜ್ ಹಿರಿಯಡಕ

ಹಲವು ಹಂಬಲಗಳುಳ್ಳವಳು....

0 Followers

0 Following