ನನ್ನ ತಂದೆಯವರ ಬಗ್ಗೆ ಏನು ಹೇಳಲಿ‌?

ಆತ್ಮ ಕಥೆಯ ಬಿಡಿ ಭಾಗಗಳು-6

ProfileImg
08 May '24
3 min read


image

ನನ್ನ ತಂದೆಯವರ ಬಗ್ಗೆ ಏನು ಹೇಳಲಿ‌?

ನಾನು ಅಳುವುದನ್ನು ಮರೆತು ನೋಡುತ್ತಾ ನಿಂತಿದ್ದೆ...
ಶರಣರ ಬಾಳನ್ನು ‌ಮರಣದಲ್ಲಿ ಕಾಣು ಎಂಬ ಮಾತಿಗೆ ನಿದರ್ಶನವಾದರು ಅವರು.
 

2012ರ ಮಳೆಗಾಲದ ಒಂದು ದಿನ
ಧೋ ಎಂದು ಮಳೆ ಸುರಿಯುವ ಸದ್ದಿಗೆ ಗಾಢ ನಿದ್ರೆ ಆವರಿಸಿತ್ತು. ನಿರಂತರವಾಗಿ  ಮೊಬೈಲ್‌ ಪೋನ್ ರಿಂಗಾಗುತ್ತಾ ಇತ್ತು.ಕೊನೆಗೂ ಹೇಗೋ ಕಣ್ಣು ತೆರೆದು ಕರೆ ಸ್ವೀಕರಿಸಿದೆ.ಆ ಕಡೆಯಿಂದ ಅಕ್ಕನ ಧ್ವನಿ ಕೇಳಿಸಿತು

 

ನಡುರಾತ್ರಿ ಒಂದೂವರೆ ಗಂಟೆಗೆ ಅಕ್ಕ ಫೋನ್ ನೋಡಿ ಮೊದಲೇ ದುರಂತದ ಸೂಚನೆ ಸಿಕ್ಕಿ ಮನಸು ಅಳುಕಿತ್ತು.ತಂದೆಗೆ ಸೀರಿಯಸ್ ನೀನು ಆದಷ್ಟು ಬೇಗ ಮನೆಗೆ ಬಾ ಎಂದು ಹೇಳಿ ಅಕ್ಕ ಫೋನ್ ಕತ್ತರಿಸಿದಳು.ಅವಳ ಧ್ವನಿ ನಡುಗುತ್ತಾ ಇತ್ತು ಅದರಿಂದಲೇ ತಂದೆಯವರು ಬದುಕಿರಲಾರರು ಎಂದು ಅನಿಸಿತು.ಆದರೂ ಒಂದು ದೂರದ ಆಸೆಯಿಂದ ತಂದೆ ಮನೆಗೆ ಫೋನ್ ಮಾಡಿದೆ.ಪೋನೆತ್ತಿದ ಸೀಮಾ( ತಮ್ಮನ ಮಡದಿ) ತಂದೆಯವರನ್ನು ಆಸ್ಪತ್ರೆ ಯಿಂದ ಮನೆಗೆ ಕರೆ ತರುತ್ತಿದ್ದಾರೆ ಎಂದು ತಿಳಿಸಿದಾಗ ತಂದೆಯವರು ಇನ್ನಿಲ್ಲ ಎಂಬ ವಾಸ್ತವ ಅರಿವಾಗಿ ದುಃಖ ಉಮ್ಮಳಿಸಿ ಬಂತು.
ರಾತ್ರಿ ಹನ್ನೊಂದು ಗಂಟೆಗೆ ನಾನು ಮಲಗುವ ಮೊದಲು ಮನೆಗೆ ಪೋನ್ ಮಾಡಿದ್ದೆ.ತಂದೆಯವರೇ ಫೋನ್ ಎತ್ತಿದ್ದರು.ಹೇಗಿದ್ದೀರಿ ? ಎಂದು ಕುಶಲ ವಿಚಾರಿಸಿದಾಗ ಆರಾಮಿದ್ದೇನೆ ಸ್ವಲ್ಪ ಧೂಳಿಗೆ ಕಫ ಆಗಿದೆ ಎಂದು ಹೇಳಿ ಉಪ್ಪರಿಗೆ ಮೇಲೆ ಟಿವಿನೋಡುತ್ತಿದ್ದ ಅಮ್ಮನನ್ನು ಕರೆದು ಪೋನ್ ನೀಡಿದ್ದರು.ಅಮ್ಮನ ಹತ್ತಿರ ಹತ್ತು ನಿಮಿಷ ಮಾತನಾಡಿ ನಾನು ಮಲಗಿದ್ದೆ.
ಅಮ್ಮ ಮಲಗಲೆಂದು ಬಾಗಿಲು ಹಾಕಿ ಚಾವಡಿಗೆ ಬರುವಾಗ ತಂದೆ ಕೆಮ್ಮುತ್ತಾ ಇದ್ದರು.ಆ ದಿನ ಅಡಿಕೆಯನ್ನು ಆಯುವ ಕೆಲಸ ಮಾಡಿದ ಕಾರಣ ಅಡಿಕೆ ಧೂಳಿಗೆ ಕೆಮ್ಮು ಬಂದಿದೆ ಎಂದು ತಿಳಿದು ಅಮ್ಮ ಕಫದ ಸಿರಪ್ ಅನ್ನು ನೀಡಿದರು ಕೆಮ್ಮು ಕಡಿಮೆಯಾಯಿತು.ಸ್ವಲ್ಪ ಉಸಿರು ಕಟ್ಟಿದ ಹಾಗೆ ಆಗುತ್ತದೆ ಎಂದು ಹೇಳಿದಾಗ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಸಮಿಪದ ವೈದ್ಯರಾದ ಐಕೆ ಭಟ್ಟರ ಮನೆಗೆ ಹೊರಟ.ನಮ್ಮ ಮನೆ ಹಿಂಭಾಗದ ಸಣ್ಣ ಗುಡ್ಡೆ ಯ ದಾರಿಯಲ್ಲಿ ಕಾರು ಹತ್ತುತ್ತಿದ್ದಂತೆ ತಮ್ಮ ತಂದೆಯವರಲ್ಲಿ ಏನಾಗುತ್ತಿದೆ ಎಂದು ಕೇಳಿದಾಗ ಏನಾಗಿಲ್ಲ ಆರಾಮಿದ್ದೇನೆ ಎಂದು ತಿಳಿಸಿ ಕಾರಿನ ಹಿಂಭಾಗಕ್ಕೆ ಒರಗಿ ತಂದೆಯವರು ನಿದ್ರೆಗೆ ಜಾರಿದ್ದರು.ನಿದ್ರೆಯಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು ಎಪ್ಪತ್ತ ಮೂರು ವರ್ಷದ ಅವರು ನೋವು ನರಳಿಕೆ ಒಂದಿನಿತೂ ಇಲ್ಲದ ಸುಖಮರಣ  ಪಡೆದಿದ್ದರು. ಇದು ಅವರು ಬಾಳಿದ ಸರಳ ಪ್ರಾಮಾಣಿಕ ನಿಸ್ವಾರ್ಥ ಬದುಕಿಗೆ ಹಿಡಿದ ಕೈಗನ್ನಡಿಯಾಗಿತ್ತು.ಶರಣರಬಾಳನ್ನು ಮರಣದಲ್ಲಿ ನೋಡು ಎಂಬ ಗಾದೆಮಾತಿಗೆ ನಿದರ್ಶನವಾಗಿದ್ದರು ಅವರು.ಯಾರೊಬ್ಬರಿಗೂ ಒಂದಿನಿತು ನೋವು ಮಾಡಿದವರಲ್ಲ .ಮೋಸ ವಂಚನೆ ಏನೆಂದೇ ತಿಳಿಯದ ಮುಗ್ದ ಸ್ವಭಾವ ಅವರದು.ಬಿಳಿಯಾದದ್ದೆಲ್ಲಾ ಹಾಲೆಂದು ನಂಬುವ ಅವರಿಗೆ ಅನೇಕರು ಮೋಸ ಮಾಡಿದ್ದರು. ಅವರಿಂದ ಸಹಾಯ ಪಡೆದವರೇ ಹಿಂದಿನಿಂದ ದ್ರೋಹ ಮಾಡಿದ್ದರೂ ಅವರನ್ನು ಉದಾರವಾಗಿ ಕ್ಷಮಿಸಿವರು ನನ್ನ ತಂದೆ.ಕಷ್ಟದಲ್ಲಿ ಇರುವರನ್ನು ಕಂಡರೆ ಅಪಾರ ಅನುಕಂಪ ತನಗಾದ ಸಹಾಯ ಮಾಡುತ್ತಿದ್ದರು.


ಸ್ನೇಹಿತೆ ವಿದ್ಯಾ ಮತ್ತು ಅವರ ಪತಿಯ ಸಹಾಯದಿಂದ ಒಂದು ಕಾರನ್ನು ಬಾಡಿಗೆಗೆ ಹಿಡಿದು ಸುರಿವ ಮಳೆಯ ಕಾರ್ತ್ತಗಲಿನಲ್ಲಿ ಮಗನೊಂದಿಗೆ ಬೆಳ್ಳಾರೆಯಿಂದ ತಂದೆ ಮನೆ ಕೋಳ್ಯೂರಿಗೆ ಹೊರಟೆ.ದಾರಿಯಲ್ಲಿ ಅಕ್ಕ ಭಾವನನ್ನೂ ಹತ್ತಿಸಿಕೊಂಡು ಮನೆ ತಲುಪುವಾಗ ಬೆಳಗಿನಜಾವ ಐದೂವರೆ ಆಗಿತ್ತು. ಬೆಳಕು ಹರಿಯುವಮುನ್ನವೇ ಸುದ್ದಿ ತಿಳಿದು ಸಂಬಂಧಿಕರು ಊರವರು ತಂದೆಯ ಶಿಷ್ಯ ವರ್ಗದವರು ಬಂದು ಸೇರಿದ್ದರು.
ನನ್ನ ತಂದೆ ವಾರಣಾಸಿ ನಾರಾಯಣ ಭಟ್ಟರು ಪುರೋಹಿತ ರಾಗಿದ್ದರು. ಹವ್ಯಕರಲ್ಲಿ ಪುರೋಹಿರಿಗೆ ಗುರುಗಳ ಸ್ಥಾನಮಾನವಿದೆ.ಆದ್ದರಿಂದ ತಂದೆಯವರಿಗೆ ಅಪಾರ ಶಿಷ್ಯವರ್ಗದವರು ಇದ್ದರುಅವರಲ್ಲಿ ಅನೇಕ ಮಂದಿ ಡಾಕ್ಟರ್ ಗಳು, ಇಂಜಿನಿಯರ್‌ಗಳು, ಬ್ಯುಸಿನೆಸ್‌ ಮ್ಯಾನ್ಗಳು ಹೀಗೆ ನಾನಾ ವೃತ್ತಿಯ ಹಿರಿ ಕಿರಿಯರುಇದ್ದರು..ನನ್ನ ತಂದೆಯವರನ್ನು ಕಿರಿಯರೆಲ್ಲರೂ ಭಟ್ಟಮಾವ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ನನ್ನ ತಂದೆಯ ಶಿಷ್ಯ ವರ್ಗದವರು ತಂದೆಯವರಿಗೆ ಮನೆ ಮಂದಿಯಂತೆ ಆತ್ಮೀಯ ರಾಗಿದ್ದರು. ತಂದೆಯ ಸರಳ ಮುಗ್ದ ವ್ಯಕ್ತಿತ್ವ ಎಲ್ಲರನ್ನೂ ಹತ್ತಿರ ತಂದಿತ್ತು.
ಮನೆ ಅಂಗಳಕ್ಕೆ ಕಾಲಿಡುತ್ತಲೇ ತಂದೆಯ ನೆನಪು ಬಂದು ದುಃಖ ಉಮ್ಮಳಿಸಿ ಬಂದು ಅಳುತ್ತಲೇ ಮನೆ ಒಳಗೆ ಪ್ರವೇಶ ಮಾಡಿದೆ.ತಂದೆಯ ಶಿಷ್ಯ ವರ್ಗದವರು ತುಂಬಾ ಮಂದಿ ತಂದೆಯವರ ದೇಹದ  ಕಾಲಬದಿಯಲ್ಲಿ ಕುಳಿತು ಅಳುತ್ತಾ ಇದ್ದರು.ಅವರಲ್ಲಿ ಕೆಲವರು ಡಾಕ್ಟರ್ ಗಳೂ ಇದ್ದರು.ದಿನನಿತ್ಯ ಸಾವು ನೋವುಗಳನ್ನು ನೋಡುವ ದೊಡ್ಡ ದೊಡ್ಡ ಡಾಕ್ಟರ್ ಗಳೂ ಅಳುವಂತೆ ಮಾಡಿದ್ದ ನನ್ನ ತಂದೆಯ ಔನ್ನತ್ಯಕ್ಕೆ ಬೆರಗಾಗಿ ನಾನು ಅಳುವುದನ್ನು ಮರೆತು ಅವರೆಲ್ಲ ಅಳುವುದನ್ನು ನೋಡುತ್ತಾ ನಿಂತಿದ್ದೆ.
ನನ್ನ ತಂದೆಯವರು ಪುರೋಹಿತರಾಗಿದ್ದರೂ ನಮಗೆ ಮನೆಯಲ್ಲಿ ಯಾವುದೇ ಕಟ್ಟು ಕಟ್ಟಳೆ ವಿಧಿಸಿರಲಿಲ್ಲ.ನಮಗೆ ಬೇಕಾದುದನ್ನು ಓದುವ ವೇಷಭೂಷಣ ಧರಿಸುವ ಸ್ವಾತಂತ್ರ್ಯ ಇತ್ತು.ಜೀವನ ಇಡೀ ಮಕ್ಕಳ ಏಳಿಗೆಗಾಗಿ ದುಡಿದ ಅವರುಒಂದು ದಿನ ಕೂಡ ತಾನು ದುಡಿದು ತಂದು ಹಾಕಿದ್ದೇನೆ ತನ್ನ ದುಡ್ಡು ದುಡಿಮೆ ಎಂದು ಹೇಳಿಲ್ಲ.
ಮಕ್ಕಳು ಪ್ರಥಮ ಸ್ಥಾನ ಪಡೆಯಬೇಕು ಎಂದು ಅವರ ಆಸೆಯಾಗಿತ್ತು.
ಪ್ರತಿ ಸಲ ಮಾರ್ಕ್ಸ್ ಕಾರ್ಡ್ ಸಿಕ್ಕಿದಾಗ"ಫಸ್ಟಾ .?ಎಂದು ಕೇಳುತ್ತಿದ್ದರು. ಅಲ್ಲವೆಂದಾದರೂ ಬೈಯುತ್ತಿರಲಿಲ್ಲ  ಮಾತಾಡದೆ ಸಹಿ ಹಾಕಿಕೊಡುತ್ತಿದ್ದರು.ಮೊದಲ ಸ್ಥಾನ ಗಳಿಸಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು.ನಾನು ಸಂಸ್ಕೃತ ಎಂಎ ಯಲ್ಲಿ ಮೊದಲ ರಾಂಕ್ ಗಳಿಸಿದಾಗ ಸ್ವರ್ಗ ಸಿಕ್ಕಂತೆ ಸಂಭ್ರಮಿಸಿದ್ದರು
ತೀರಾ ಕಷ್ಟ ಇದ್ದಾಗಲೂ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಓದಿಸಿದರು.ಹೆಚ್ಚಾಗಿ ಎಲ್ಲೆಡೆ ಬರಿಗಾಲಿನಲ್ಲಿ ನಡೆದುಕೊಂಡೇ ಹೋಗುತ್ತಿದ್ದರು.ಒಂದು ದಿನ‌ಕೂಡ ಹುಷಾರಿಲ್ಲವೆಂದು ಮಲಗಿರಲಿಲ್ಲ
ಸಾಯುವ ದಿನ ಕೂಡ ರಾತ್ರಿ ಹನ್ನೊಂದು ಗಂಟೆಯ ವರೆಗೆ ಅಡಿಕೆ ಆಯುವಕೆಲಸ ಮಾಡಿದ್ದರು.ಆರೋಗ್ಯ ವಾಗಿದ್ದ ಅವರು ಹೀಗೆ ಯಾವುದೇ ಸೂಚನೆ ಇಲ್ಲದೆ ಮರಣವಪ್ಪಬಹುದು ಎಂದು ನಾವ್ಯಾರೂ ಊಹಿಸಿರಲಿಲ್ಲ.ಮಕ್ಕಳೆಲ್ಲ ಒಳ್ಳೆಯ ಕೆಲಸ ಹಿಡಿದು ಸಮೃದ್ದವಾಗಿದ್ದಾಗ ಅವರು ದೇವನೆಡೆಗೆ ಸದ್ದಿಲ್ಲದೆ ನಡೆದಿದ್ದರು.ದಿನನಿತ್ಯ ‌ಮಲಗುವ ಮೊದಲು ದೇವರಲ್ಲಿ ಅವರು ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ...ಅನಾಯಾಸವಾದ ಮರಣವನ್ನು ದೈನ್ಯ ರಹಿತವಾದ ಜೀವನವನ್ನು ಕೊಡು ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ಇದ್ದರು .ದೇವರು ಅವರ ಪ್ರಾರ್ಥನೆ ಯನ್ನು ಮನ್ನಿಸಿ ಅದನ್ನು ಅವರಿಗೆ ಕರುಣಿಸಿದ್ದ.
( ನನ್ನ ‌ಮಗನ ಉಪನಯನದ ಸಂದರ್ಭದಲ್ಲಿ ತೆಗೆದ ಚಿತ್ರದಲ್ಲಿ ಉಪನಯನ ಮಾಡಿಸಿದ ನನ್ನ ತಂದೆಯವರು ನಮ್ಮ ಜೊತೆಗೆ ಇದ್ದಾರೆ)
ಡಾ.ಲಕ್ಷ್ಮೀ ಜಿ ಪ್ರಸಾದ್


 


 

 

 




ProfileImg

Written by Dr Lakshmi G Prasad

Verified