ಅಲೆಮಾರಿತನ ಮನುಷ್ಯರ ಮೂಲಭೂತವಾದ ಗುಣಗಳಲ್ಲಿ ಒಂದು. ಬಲಿಷ್ಠ ಪ್ರಾಣಿಗಳು ತಿಂದು ಉಳಿಸಿದ ಎಲುಬಿನೊಳಗಿನ ಮಜ್ಜೆಯನ್ನು ತಿಂದು ಬದುಕಿದವರು ಹೋಮೋಸೇಪಿಯನ್ಸ್ ಅನ್ನಿಸಿಕೊಂಡ ಮನುಷ್ಯರು. ಅಲ್ಲಿಂದ, ಇವತ್ತಿನ ಆಧುನಿಕ ಸಮಾಜದವರೆಗೆ ತಲುಪಿರುವ ಮನುಷ್ಯ ಸಂಕುಲದ ವಿಕಸನದಲ್ಲಿ ಅಲೆಮಾರಿತನ ವಹಿಸಿದ ಪಾತ್ರ ಅನನ್ಯ. ಬೆಂಕಿ ಕಂಡು ಹಿಡಿದ ಮನುಜರು, ಅದರಿಂದ ಅನ್ನವನ್ನು ಬೇಯಿಸಿದರು; ಹಸಿವು ನೀಗಿ, ಬೆಳಕು ಮತ್ತು ಅರಿವು ಹುಟ್ಟಿತು. ಸಂಘಜೀವಿಗಳಾದ ಮನುಷ್ಯರು ಬುದ್ದಿವಂತರಾಗಿಯೂ, ಕ್ರೀಯಾಶೀಲರಾಗಿಯೂ ಮತ್ತು ಆ ಮೂಲಕ ಭೂಮಿಯ ಮೇಲಿನ ಪ್ರಬಲ ಪ್ರಾಣಿ ವರ್ಗವಾಗಿಯೂ ಮಾರ್ಪಾಡಾದದ್ದು ಇತಿಹಾಸ. ಸಂಘಜೀವಿ ಸ್ವಭಾವ ಮತ್ತು ಅಲೆಮಾರಿತನ ಒಂದಕ್ಕೊಂದು ಮಿಳಿತಗೊಂಡು ನಮ್ಮೆಲ್ಲಾ ಅನ್ವೇಷಣೆಗಳಿಗೆ ತುದಿಯೊತ್ತಿದವು. ಬದುಕು ಹಾದು ಹೋದ ವೈವಿಧ್ಯಮಯ ಪರಿಸರಗಳು, ಹಂತ ಹಂತದ ನಮ್ಮ ವಿಕಸನಕ್ಕೆ ದಾರಿಯಾಯಿತು. 'ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ' ಎಂಬ ಬಸವ ತತ್ವದಂತೆ ಚಲನೆಯಲ್ಲಿ ಅರಳಿದ ಹೂಗಳು ನಾವು. ಅದರಿಂದಾಗಿಯೇ ನಾವು ನಿಂತ ನೀರಾಗಲೊಲ್ಲೆವು. ಬದುಕಿನ ಜಂಜಾಟದಲ್ಲಿ ತುಯ್ದಾಡುತ್ತಿರುವಾಗಲು, ಅನವರತ ಪ್ರವಾಸದ ಕಲ್ಪನೆಯೇ ನಮ್ಮನ್ನು ಮುದಗೊಳಿಸುತ್ತದೆ. ಅಂತರಾಳದ ನಡೆಯೋ, ಬಹಿರಂಗ ಚಲನೆಯೋ ಇರಬಹುದು; ಚಲಿಸದೆಯೇ ಇರಲಾರೆವು ನಾವು.
ದುಡ್ಡಿದ್ದವರದು ಮೋಜಿನ ಪ್ರವಾಸವಾದರೆ, ದುಡ್ಡಿಲ್ಲದವರದು ಹಸಿವು ಇಂಗಿಸಲೋಸ್ಕರದ ಅಲೆದಾಟ. ದುಡಿಮೆಯ ಅರಸಿ ಹೊರಟವರು ಹಲವರಾದರೇ, ಕೆಲಸದ ಬದಲಾವಣೆಯ ತಬ್ಬಿ ಮುನ್ನಡೆದವರು ಇನ್ನು ಕೆಲವರು. ಕೆಲವರಂತು ಯಾರ ಜಪ್ತಿಗೂ ನಿಲುಕದ ನಿತ್ಯ ತಿರುಗಲು ತಿಪ್ಪರು. ಏನೇ ಆದರೂ, ಬ್ಯಾಗೊಂದನ್ನು ಹೆಗಲಿಗೇರಿಸಿಕೊಂಡು ಜರ್ನಿಗೆ ಹೊರಡದವರು ವಿರಳವೇ ಸರಿ. ಶಾಲಾ ರಜಾ ದಿನದಲ್ಲಿ ಅಜ್ಜಿ ಮನೆಗೆ ಹೊರಡುವ ಮಕ್ಕಳಿಂದ ಹಿಡಿದು, ಮಂಗಳನ ಅಂಗಳದಲ್ಲಿ ಮಲಗುವ ಕನಸು ಕಾಣುವ 'ಇಲಾನ್ ಮಸ್ಕ್'ನ ವರೆಗು ಪಯಣಕ್ಕೆ ಹೊರಡುವವರ ಲಿಸ್ಟು ಉದ್ದವಿದೆ.
ಬೆಂಗಳೂರೆಂಬ ತೆರೆದ ಬಾಗಿಲು
ವರ್ಷಗಳ ಹಿಂದೆ, ನನ್ನೂರಿನಿಂದ ಕೆಲಸ ಹುಡುಕುವ ನೆಪ ಮಾಡಿ ಬಸ್ಸು ಹತ್ತಿದ್ದೆ. ಸೀದಾ ಬಂದು ಇಳಿದದ್ದು ಮನುಷ್ಯರು ಮತ್ತು ಬಸ್ಸುಗಳು ತುಂಬಿ ತುಳುಕುವ ಬೆಂಗಳೂರಿನ ಮೆಜೆಸ್ಟಿಕ್ಕಿಗೆ. ಅಲ್ಲಿಂದ ಬಸ್ಸು ಹತ್ತಿ ಸಿಟಿಮಾರ್ಕೇಟಿನ ಓವರ್ ಬಿಡ್ಜಿನ ಅಡಿಗೆ ಬಂದು ಇಳಿದ ನೆನಪಿನ್ನೂ, ಮಾರ್ಕೇಟಿನಲ್ಲಿ ಮಾರುವ ತರಕಾರಿಯ ನಿತ್ಯದ ಹಸಿಯಂತೆ ಮನದಲ್ಲಿ ಹಸಿರಾಗಿದೆ. ಆ ಮೈಸೂರು ರೋಡಿನ ಫ್ಲೈ ಓವರ್ ಮೊದಲ ಭಾರಿಗೆ ಕಂಡಾಗ, ತಲೆಯ ಮೇಲೊಂದು ಬೆಟ್ಟ ಹಾದು ಹೋದಂತೆ ಕಣ್ಣರಳಿಸಿ ನೋಡಿದ್ದೇ ನೋಡಿದ್ದು. ಮುಂದೆ ಕೃಷ್ಣರಾಜ ಮಾರುಕಟ್ಟೆ ಮತ್ತು ಅದಕ್ಕೆ ಅಂಟಿಕೊಂಡಿರುವ ಕಲಾಸಿಪಾಳ್ಯ, ಅವೆನ್ಯು ರೋಡ್, ಜೆ ಸಿ ರೋಡುಗಳ ಗಲ್ಲಿಗಳಲ್ಲಿ ಸವೆಸಿದ ಹೆಜ್ಜೆಗಳಿಗೆ ಲೆಕ್ಕವೇ ಇಲ್ಲ. ವಾರಕ್ಕೊಂದು-ಎರಡರಂತೆ ನೋಡುತ್ತಿದ್ದ ಸಿನಿಮಾಗಳು, ರಸ್ತೆ ಬದಿಯಲ್ಲಿ ತಿಂಡಿ ಮಾರುವವರು, ಸುತ್ತಲಿನ ತ್ಯಾಜ್ಯವನ್ನೆಲ್ಲಾ ಒಳಗೆಳೆದುಕೊಂಡು ಉಸಿರಾಡುತ್ತಿದ್ದ ಮೋರಿಗಳು, ಗಲ್ಲಿಗಳ ಒಳಗಿನಿಂದ ನನ್ನದಾಗುತ್ತಿದ್ದ ಹಳೇ ಪುಸ್ತಕಗಳು ನನ್ನ ಲೋಕದ ಅರಿವನ್ನು ವಿಸ್ತರಿಸುತ್ತಾ ಹೋದವು. ಹೋಗಬೇಕಾದ ಪ್ರವಾಸದ್ದೊಂದು ನಕಾಶೆಯನ್ನು ಮನದಲ್ಲಿ ಮೂಡಿಸುತ್ತಾ ಹೋದವು. ಬೆಂಗಳೂರೆಂಬ ಬೆಂದಕಾಳೂರು ಜಗತ್ತಿನ ವಿಸ್ಮಯಗಳ ಕಡೆಗೆ ನನಗಾಗಿ ತೆರೆದ ಬಾಗಿಲಾಗಿತ್ತು.
ಭಾರತ ಬಿಟ್ಟು ಬೇರೆ ಯಾವ ದೇಶಕ್ಕೂ ಹೋಗಲಾರೆ ಎಂಬ ಮನಸ್ಥಿತಿಯಿದ್ದ ಕಾಲಘಟ್ಟದಲ್ಲೇ ದುಬೈಗೆ ಹೋಗುವ ಅವಕಾಶ ಬಂದಿತ್ತು. ದುಬೈಗೆ ಹೋಗಬೇಕು ಅನ್ನುವ ಆಸೆ ಇರದಿದ್ದರೂ, ಕೆಲಸದ ನೆಪದಲ್ಲಿ ಇಂಟರ್ವ್ಯೂಗಾಗಿ ಮುಂಬೈಗೆ ಹೋಗೋ ಚಾನ್ಸ್ ಮಿಸ್ಸ್ ಮಾಡ್ಕೊಳ್ಳೋ ಹಾಗೇ ಇರಲಿಲ್ಲ. ಹಾಗೇ ಮೊದಲ ಭಾರಿಗೆ ಮುಂಬೈಗೆ ಹೋದೆ. ಮುಂಬೈಯ ಕಡಲ ತೀರವನ್ನಷ್ಟೇ ನೋಡಿ, ಇಂಡಿಯಾಗೇಟ್ ಮತ್ತು ತಾಜ್ ಹೋಟೇಲನ್ನು ಕಣ್ತುಂಬಿಸಿಕೊಂಡು ಬಂದಿದ್ದೆ. ಬಂದ ಒಂದು ತಿಂಗಳಲ್ಲೇ ದುಬೈ ಅನ್ನೋ ಮರಳುಗಾಡಿನಲ್ಲಿ ಎದ್ದು ನಿಲ್ಲಿಸಿದ್ದ ಪಟ್ಟಣ ಸೇರಿದ್ದೆ. ದುಬೈಗೆ ಹಾರುವುದಕ್ಕಿಂತ ಮುಂಚೆ ಮುಂಬೈಯ ಸಣ್ಣ ಕೋಣೆಯೊಂದರಲ್ಲಿ ಕಳೆದ ರಾತ್ರಿಯಿನ್ನೂ ಮರೆತಿಲ್ಲ. ಭಾರತ ಬಿಟ್ಟು ಹೋಗುತ್ತಿದ್ದೇನೆಂಬ ನೋವು ಆ ಕೋಣೆಯ ತುಂಬಾ ಆವರಿಸಿತ್ತು. ಅನಾಥಪ್ರಜ್ಞೆ ತಾಂಡವವಾಡುತ್ತಿತ್ತು. ಆ ನೀರವತೆ ದುಬೈ ತಲುಪಿ, ಅಲ್ಲಿದ್ದ ಅಷ್ಟೂ ವರ್ಷಗಳ ವರೆಗೆ ಕಾಡುತ್ತಲೇ ಇತ್ತು.
ಮರಳಿನ ಕಣಗಳು
ಮನುಷ್ಯರು ದೇಶ, ಖಂಡಗಳೆಂಬ ಗಡಿಗಳನ್ನು ಬಿಟ್ಟು ಹಾರಿ ಪಡೆಯಬೇಕಾದ ಅನುಭವಗಳ ಬಗ್ಗೆ ಮರಳುಗಾಡಿನ ಮರಳಿನ ಕಣಗಳು ಇಂಚಿಂಚಾಗಿ ವಿವರಿಸಿದವು. ಮರಳು ಕಂಡರೂ ಮೋಹಿತನಾಗುವ ನನ್ನ ಚಲನೆಯ ಬಾಯಾರಿಕೆಯನ್ನು ಓಯಸಿಸುಗಳು ವಿಸ್ತರಿಸಿದವು. ಪ್ರಯಾಣವೆಂದರೇ ಜಗತ್ತು ಸುತ್ತುವುದಷ್ಟೇ ಅಂದುಕೊಂಡವರಿಗೆ ದಾರಿತಪ್ಪಿಸಿ ಅಂಡಲೆಯಿಸುವ ಮರಳುಗಾಡು ಪಾಠ ಮಾಡುತ್ತದೆ. ಗಲ್ಫ್ ದೇಶಗಳನ್ನು ಸುತ್ತಬೇಕೆಂಬ ಆಸೆ ಆಸೆಯಾಗಿಯೇ ಉಳಿಯಿತು. ಸುತ್ತಾಟಕ್ಕೆ ಹೆಚ್ಚಿನ ಪರಿಶ್ರಮ ಹಾಕಲು ತಯಾರಿಲ್ಲದ ನನಗೆ, ಪಕ್ಕದ ಬೀದಿಯಲ್ಲಿ ನಡೆಯುವುದು ಕೂಡಾ ಪ್ರವಾಸವೇ.
ಕೆಲವರ ಪಾಲಿಗೆ ದುಬೈ ಮಾಯಾನಗರಿ. ಇನ್ನು ಕೆಲವರಿಗೆ ಒಂದೇ ಕೋಣೆಯಲ್ಲಿ ಹತ್ತು ಜನ ಮಲಗುವ ಕಿರಿ ಕಿರಿಯ ಸಂತೆ. ನನ್ನ ಪಾಲಿಗೆ ಅಚ್ಚರಿಯೊಂದು ಕರಗಿ ಮರಳಾದ ಅನುಭವ ಮತ್ತು ಮರಳೂ ಅಚ್ಚರಿಯೆನಿಸುವ ಕಣ್ಕಟ್ಟು. ದುಬೈ ಬಿಟ್ಟು ಬಂದಾಗ, ನಿಟ್ಟುಸಿರು ಬಿಟ್ಟು, ಎಲ್ಲಿಗೆ ಹೋಗುವುದೆಂದರಿಯದೇ ಮನೆಯಲ್ಲೇ ಮುದುಡಿದ್ದೆ. ಬಿದ್ದಲ್ಲಿಂದ ಎದ್ದು ಟ್ರೈನು ಹತ್ತಿ, ನಾಸಿಕ್ ನಲ್ಲಿದ್ದ ಎಂದೂ ಕಂಡಿರದ ಗೆಳತಿಯೊಬ್ಬಳ ಮನೆಗೆ ಹೋದೆ. ಅಲ್ಲಿಂದ ಎಲ್ಲೆಲ್ಲೋ ತಿರುಗಿದೆನಾದರೂ, ಮಂಗಳೂರಿನ ಶೈಲಿಯಲ್ಲಿ ಮಾಡಿ ಕೊಟ್ಟ 'ಮೀನು ಫ್ರೈ' ಅವಳ ನಾಲಗೆ ಮತ್ತು ಕಣ್ಣಿನಲ್ಲಿ ಚಿಮ್ಮಿಸಿದ ಖುಷಿಯ ಅಲೆಗಳು, ಅಲೆಮಾರಿತನಕ್ಕೆ ಸಿಕ್ಕಿದ ಪಾರಿತೋಷಕದಂತಿತ್ತು. ಆ ಖುಷಿಗೆ ಎಲ್ಲೋರದ ಕಲ್ಲಿನ ಕಾವ್ಯ, ಪೂನಾದ ಬೆಟ್ಟಗಳ ಟ್ರಕ್ಕಿಂಗು ಸಾಟಿಯಲ್ಲವೆನಿಸಿತ್ತು. ಟ್ರಾವೆಲ್ ಬುಕ್ಕು, ಟ್ರಾವೆಲ್ ಗೈಡುಗಳು ನಮ್ಮ ಪ್ರಯಾಣವನ್ನು ಖುಷಿ ಪಡಿಸುವುದೇ ಅಪರೂಪವಾಗಿರುವಾಗ, ನಮ್ಮೊಳಗಿನ ಪಯಣಕ್ಕೆ ಅಕಸ್ಮಿಕವಾದ ಆನಂದಗಳೇ ಅತ್ಯಾಪ್ತ.
ಭೂತಾನಿನಲ್ಲಿ ಸಿಕ್ಕ ಬುದ್ಧ
ನಿರೀಕ್ಷೆಗಳಿಲ್ಲದೆ ಎದ್ದು ಹೊರಟರೆ ಸಾಕು, ಉಳಿದದ್ದೆಲ್ಲವನ್ನು ದಾರಿಯೇ ನೋಡಿಕೊಳ್ಳುತ್ತದೆ ಎಂಬಂತೆ ಭೂತಾನ್ ತಲುಪಿದ್ದೆವು. ಹಾಗಂತ ಪ್ರಯಾಣಕ್ಕೆ ಬೇಕಾದ ದಾಖಲೆಗಳನ್ನು ಹೊಂದಿಸಿಕೊಳ್ಳದೆ ಹೊರಟೆವೆಂದಲ್ಲ. ಹೆಚ್ಚಿನ ಜನಸಂಖ್ಯೆಯಿಲ್ಲದ, ಹೆಚ್ಚಿನ ವಾಹನಗಳಿಲ್ಲದ ಭೂತಾನ್ ಇಷ್ಟವಾಗಿ ಹೋಗಿತ್ತು. ಮಗುತನವನ್ನು ಹೃದಯದಲ್ಲಿ ಹೊತ್ತುಕೊಂಡು ಅಲ್ಲಿ ಸುತ್ತಾಡಿದ ಅಷ್ಟೂ ದಿನ 'ಬುದ್ಧ' ನಮ್ಮನ್ನು ನೋಡಿ ನಗುತ್ತಿದ್ದ. ಆ ನಗು ಭೂತಾನಿನಾದ್ಯಂತ ಪಸರಿಸಿತ್ತು. ಅಭಿವೃದ್ಧಿಯ ಹೆಸರಿನಲ್ಲಿ ನಡೆಸುವ ಬೂಟಾಟಿಕೆಗಳಿಗಿಂತ, 'Happiness index' ಗೆ ಹೆಚ್ಚಿನ ಗಮನ ನೀಡುವ ಭೂತಾನ್ ಸರಕಾರದ ನಿರ್ಧಾರಗಳು ಇದಕ್ಕೆ ಕಾರಣವಿರಬಹುದು. ಹಿಮಾಲಯದ ಪೂರ್ವದ ಒಂದು ಬದಿಗೆ ಆತುಕೊಂಡಿರುವ ಭೂತಾನಿನ ಹಿಮದ ಕಣಗಳು ನಮ್ಮೊಳಗನ್ನು ಸೇರಿಕೊಂಡಿದ್ದವು. ಮಹಿಳೆಯರೇ ಮುಂಪಂಕ್ತಿಯಲ್ಲಿರುವ ವ್ಯಾಪಾರ ವಹಿವಾಟುಗಳು ಸಮಾನತೆಗಾಗಿ ಹಾತೊರೆಯುವ ಮನಸ್ಸನ್ನು ಮುದಗೊಳಿಸಿದವು. 'ಟೈಗರ್ಸ್ ನೆಸ್ಟ್' ತಲುಪುವ ಬೆಟ್ಟದ ದಾರಿಯಲ್ಲಿ, ಕುದುರೆಯ ಬೆನ್ನೇರಿ ಹೊರಟ ಮನುಷ್ಯರನ್ನು ಕಂಡು, ಕುದುರೆಗಳು ಮನುಷ್ಯರ ಬೆನ್ನೇರಿ ನಡೆಯುತ್ತಿರುವಂತೆ ಕಲ್ಪಿಸಿಕೊಂಡೆವು. ತದನಂತರ ಕಾರು ಹತ್ತಿ ಯಂತ್ರದಂತ ನಮ್ಮ ಬದುಕಿಗೆ ಹಿಂತಿರುಗಿದ್ದೆವು.
ಹಂಪಿ ಡೈರಿ
ಹಂಪಿಯ ಶಿಲೆಗಳ ಸಂಗೀತವ ಕೇಳಿಸಿಕೊಳ್ಳಲು ತಹತಹಿಸಿತ್ತು ಮನ. ಎರಡನೇ ಭಾರಿ ಹಂಪಿ ತಲುಪಿದ್ದೆ. ಹಂಪಿಯ ದೇವಸ್ಥಾನಗಳನ್ನು, ಆನೆ ಲಾಯವನ್ನು, ಮಹಲುಗಳನ್ನು ಸುತ್ತಿ ಮುಗಿಸಿದಾಗ ಸಂಜೆಯಾಗಿತ್ತು. ಇರುಳಿನ ದೀಪದೊಳಗೆ ಸೇರಿ ಹಗಲು ಮರೆಯಾಗುವ ಗಳಿಗೆಯಾಗಿತ್ತು. ಬೆಳಕಿನಂತಿದ್ದ ಮೂತಿಯನ್ನು ಕಪ್ಪಾಗಿಸಿ, ಚಂದಗಾಣಿಸಿದ್ದ ಬಿರು ಬಿಸಿಲು ಮುಗಿಯುತ್ತಾ ಬಂತು. ಬಿಸಿಲ ಬೇಗೆಯನ್ನು ತಡೆದು ತಂಪನೀಯಲು ಕೊಡೆ ಬಿಡಿಸಿ ಹಿಡಿದು ನಡೆದಿದ್ದೆವು. ಸಂಜೆಯಾದ ತಕ್ಷಣ, ಕೈ ಹಿಡಿದಿದ್ದ ಕೊಡೆ ತೋಳು ಸಡಿಲಾಗಿಸಿ, ತಂತಾನೇ ಮಡಚಿಕೊಂಡು ನಮ್ಮ ಜೊತೆ ನಡೆಯಲಾರಂಭಿಸಿತ್ತು. ನಾವು ಪ್ರವಾಸಿಗರು ಕಡಿಮೆಯಿರುವ 'ಮಾಲ್ಯವಂತ ಬೆಟ್ಟ' ಕ್ಕೆ ಹೊರಟೆವು. ಹೂಗಳಂತೆ ಅರಳಿ ನಿಂತ ಕಲ್ಲುಗಳ ಮೋಹಕ್ಕೆ ಬಿದ್ದೆವು. ಎದೆಯ ಮಾತುಗಳನ್ನೆಲ್ಲಾ ಬೆನ್ನ ಮೂಲಕ, ಸಾವಿರಾರು ವರ್ಷಗಳಿಂದ ನನಗಾಗೇ ಕಾಯುತ್ತಿದ್ದಂತೆ ನಿಂತಿದ್ದ ಆ ಕಲ್ಲುಗಳ ಸಮುಚ್ಛಯದ ಮೇಲೆ ಸುರುವಿ ಮಲಗಿದೆ. ಹಿಂದಿನಿಂದ ಬಿಸಿಲಿನೂರಿನ ಕಪ್ಪು ಗೆಳತಿ ಫೋಟೋ ತೆಗೆಯುತ್ತಿದ್ದಳು; ನನ್ನ ದೃಷ್ಟಿ ನೇರ ಆಕಾಶಕ್ಕೆ ನೆಟ್ಟಿತ್ತು. ಬೆಳಗಿನ ಹೊತ್ತು ದೇಹದಿಂದ ಆಚೆ ಬಿದ್ದ ಪ್ರೇಮಿಗಳ ಹೊದಿಕೆಯಂತೆ ಕಾಣಿಸುತ್ತಿದ್ದವು ಆಗಸದಲ್ಲಿ ಗುಂಪುಗೂಡಿದ್ದ ಮೋಡಗಳು. ನನ್ನ ಜೊತೆಗೇ ಪಕ್ಕದಲ್ಲಿ, ಬಂಡೆಯ ಸಂಧಿಯಲ್ಲಿ ಮಲಗಿದ್ದ ಮುಳ್ಳಿನ ಗಿಡ, ಸಂಸಾರ ಸಮೇತವಾಗಿ ನನ್ನನ್ನೇ ಅನುಕರಿಸಲು ಶುರು ಮಾಡಿದಂತೆ ಆಕಾಶ ನೋಡುತ್ತಿತ್ತು. ಮುಳ್ಳುಗಳ ನೋಟದ ತೀಕ್ಷಣತೆಗೋ ಅಥವಾ ಪ್ರೇಮಕ್ಕೋ, ಒಂದೇ ಹೊದಿಕೆಯಂತಿದ್ದ ಮೋಡಗಳು ಚದುರಿ ಬಟ್ಟೆಯಿಂದ ಹಾರಿದ ಚಿಟ್ಟೆಗಳಂತಾದವು. ತುಂಡಾದ ಮಲ್ಲಿಗೆ ಮಾಲೆಯಿಂದ ಹರಡಿದ ಎಸಳುಗಳಂತೆ, ಚೂರು ಚೂರೇ ಮೋಡವನ್ನು ಕಣ್ಣೊಳಗಿಳಿಸಿಕೊಂಡು, ಕಣ್ಮುಚ್ಚಿದೆ. ಮನದೊಳಗೆ ಚಿತ್ರದುರ್ಗದ ಕಲ್ಲಿನ ಕೋಟೆಯ ನೆನಪುಗಳು ಅನುರಣಿಸಿದವು. ಹಂಪೆಯ ಬಂಡೆಗಳು ಎದೆಗೆ ಇಳಿಸಿದ ಆ ನಿರಭ್ರ, ನಿಶಬ್ಧ ಮಾತುಗಳು ಕಲ್ಲಿನ ಪರಿಮಾಣದಲ್ಲಿ ಕೂರಲಾಗದೇ ಇಡೀ ಬೆಟ್ಟದೊಳಗೆ ಗುಟ್ಟಾಗಿ ಹರಡಿ, ಹೊರ ಜಿಗಿಯಿತು. ಹರಿಯುತ್ತಿದ್ದ ತುಂಗಭದ್ರೆಯ ಮಡಿಲಿಗೆ ಬಿದ್ದು ದೋಣಿಯಾಯಿತು. ಹಾಗೇ ಕಲ್ಲಿನ ಕಾವ್ಯ ನಮ್ಮೊಳಗೆ ನದಿಯಾಗಿ ಹರಿಯಿತು.
ಎರಡೆರಡು ಭಾರಿ ಹಂಪಿ ಎಂಬ ಕಲ್ಲ ನಗರಿಯನ್ನು ಕಣ್ತುಂಬಿಕೊಂಡೆ. ಆ ಕಣ್ಣೋಟದಿಂದಲೇ, ಕಡಲೂರಿನಿಂದ ಬಂದ ನನಗೆ ಕರ್ನಾಟಕವನ್ನು ನೋಡವುದಕ್ಕೇ ಒಂದು ಜನ್ಮ ಸಾಲದೆಂದು ಅನಿಸಿದ್ದು. ಕರುನಾಡು ಅಂದರೆ ಕನ್ನಡವೊಂದೇ ಅಲ್ಲ. ಹಲವಾರು ವಿಧದ ಸಂಸ್ಕೃತಿ, ಕಲೆ, ಭಾಷೆ, ಊಟ, ಉಡುಗೆ, ಬೌಗೋಳಿಕತೆಗಳ ವೈವಿಧ್ಯತೆಯ ಗೊಂಚಲು. ಎಲ್ಲಾ ರಾಜ್ಯ ಮತ್ತು ದೇಶಗಳೂ ಹಾಗೆಯೇ. ನಾವು ನಿಜಕ್ಕೂ ವೈವಿಧ್ಯತೆಯನ್ನು ಆಸ್ವಾದಿಸುವವರಾದರೆ, ಊರುಗಳೆಂದರೆ ಮೈಲುಗಲ್ಲುಗಳ ದೂರಗಳಲ್ಲವೆಂದು ಅರಿವಾಗುತ್ತದೆ. ಕೆಲವೇ ಕಿಲೋಮೀಟರುಗಳಲ್ಲಿ ಬದಲಾಗುವ ಪ್ರಕೃತಿ, ಭಾಷೆಯ ಸೊಗಡು ಮತ್ತು ಅನ್ನದ ರುಚಿ ನಮ್ಮ ಬೆರಳು ಹಿಡಿದು ಬೆರಗುಗಳ ಲೋಕಕ್ಕೆ ಕೊಂಡೊಯ್ಯತ್ತದೆ.
ಹೀಗಲ್ಲದೆ, ಮತ್ತೆ ಹೇಗೆ ತಾನೇ ಚಲಿಸಬಲ್ಲೆವು?
ನಾವು ನಡೆದು ಬಂದ ಹಾದಿಯಲ್ಲೆಲ್ಲಾ ನಮ್ಮ ಮನೆಯ ಕುರುಹುಗಳಿವೆ. ಮನೆಯೆಂದರೆ ಒಂದು ಕಟ್ಟಡವಲ್ಲ; ಕಟ್ಟಿ ಕಾಪಾಡುವ ಯಾವುದೂ ಮನೆಯಾಗುವುದೂ ಇಲ್ಲ. “ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು” ಎಂದು 'ಅನಿಕೇತನ' ಕವಿತೆಯಲ್ಲಿ ಕುವೆಂಪು ಹೇಳಿದ್ದೂ ಇದನ್ನೇ ಇರಬೇಕು. ನಮ್ಮನ್ನು ರೂಪಿಸಿರುವ ಸಾವಿರಾರು ವರ್ಷಗಳ ಇತಿಹಾಸವು ಒಂದು ಜೋಳಿಗೆಯಂತೆ; ನಮ್ಮ ಹೆಗಲಿಗೆ ಜೋತು ಬಿದ್ದಿರುವ ಆ ಜೋಳಿಗೆಯೊಳಗೆ ನಮ್ಮ ಚಲನೆಯ ಸಾಕ್ಷಿಗಳಿವೆ. ಹಳೆಯ ದಾರಿಯಲ್ಲಿ ನಡೆಯುತ್ತಲೇ, ಹೊಸ ದಾರಿಗೆ ತೆರೆದುಕೊಳ್ಳುವ ದಾರಿಹೋಕರು ನಾವು. ಆದ್ದರಿಂದಲೇ ಇದು ಪ್ರವಾಸ ಕಥನವಲ್ಲ. ವಿವರಗಳನ್ನು ವಿಸ್ತರಿಸಿ ಬರೆಯುವ ಗೋಜಿಗೆ ಹೋಗಿಲ್ಲ. ದಾರಿಗಳಲ್ಲಿನ ಅನುಭವದಿಂದ ಅರಳಿದ ಹೂಗಳನ್ನು ಅಕ್ಷರಗಳಲ್ಲಿ ಹರಹಿ, ಪದಗಳ ಮಾಲೆ ಕಟ್ಟಲು ಪ್ರಯತ್ನಿಸಿದ್ದೇನೆ. ಅನುಭವ ಮಂಟಪ ಕಟ್ಟಿ, ಅನುಭಾವ ಪರಂಪರೆಯನ್ನು ಅನಾವರಣಗೊಳಿಸಿದ ಶರಣರ ನಾಡಿನವರು ನಾವು; ಅಲೆಯುವ ಮನಸ್ಸಿನ ಒಡೆಯರು. ಅಲ್ಲಮ, ಅಕ್ಕಮಹಾದೇವಿಯಂತವರ ಅಲೆದಾಟ, ಅಪರಿಮಿತ ಅರಿವನ್ನು ಕಂಡು ಕಣ್ಣರಳಿಸಿದವರು. ಅವರ ನಿರ್ಮೋಹವನ್ನು ನೋಡಿ ಮೋಹಿತರಾದವರು. ಕಾಡಿನಿಂದ ನಾಡಿಗೆ ಬಂದವರು. ಹೀಗಲ್ಲದೇ ಮತ್ತೆ ಹೇಗೆ ತಾನೇ ಚಲಿಸಬಲ್ಲೆವು ನಾವು ?
Writer, Poet & Automobile enthusiast