Do you have a passion for writing?Join Ayra as a Writertoday and start earning.

ನಾವು ನಾವೇ....!

ಒಂದು ಅವಲೋಕನ.

ProfileImg
20 Mar '24
4 min read


image

#ನಾವು ನಾವೇ....! 


ಬದಲಾವಣೆ ಜಗದ ನಿಯಮ. ಕಾಲ ಕಳೆದಂತೆ  ಪ್ರಕೃತಿಯಲ್ಲಿಯೂ ಎಲ್ಲವೂ ಬದಲಾವಣೆಯಾಗುತ್ತದೆ; ನಾವೂ ಬದಲಾಗುತ್ತೇವೆ.....! ಆದರೆ ನಮ್ಮತನ ಮಾತ್ರ ಬದಲಾಗುವುದೇ....?
ಹೀಗೊಂದು ಯಕ್ಷಪ್ರಶ್ನೆ ಆಗಾಗ ನಮ್ಮ ಮುಂದೆ ಬಂದು ನಿಲ್ಲುವುದು. ಮೇಲ್ನೋಟಕ್ಕೆ ಭೌತಿಕವಾಗಿ ನಾವು ಖಂಡಿತವಾಗಿಯೂ ಪ್ರತಿದಿನ ಬದಲಾವಣೆಯಾಗುತ್ತೇವೆ. ಆದರೆ ಮಾನಸಿಕವಾಗಿ ಎಷ್ಟೇ ಬದಲಾವಣೆ ಹೊಂದಿದಂತೆ ಕಂಡರೂ ನಮ್ಮ ಅಂತರಾಳದ ನಿಜವಾದ ನಾವು ಒಮ್ಮೊಮ್ಮೆ ಯಾವುದೇ ಬದಲಾವಣೆಗಳಿಗೆ  ಮೀರಿಯೂ ಅಚಲವಾಗಿ ಹುಟ್ಟು ಗುಣ ಸುಟ್ಟರೂ ಹೋಗದು ಎಂಬಂತೆ  ಅನನ್ಯವಾಗಿ ನಿಂತುಬಿಟ್ಟಿರುತ್ತೇವೆ. ಆಧುನಿಕ ಜೀವನಶೈಲಿ ಅನುಸರಿಸುತ್ತಿದ್ದೇವೆ ಎಂದಾದರೂ; ಅದು ಕಾಲಕ್ಕೆ ತಕ್ಕಂತೆ ಅನಿವಾರ್ಯವಾಗಿ ಹೊಂದಾಣಿಕೆಯಾಗುವುದೇ ವಿನಹ, ನಮ್ಮ ಮನಸ್ಥಿತಿಯಲ್ಲಾಗುವ  ಬದಲಾವಣೆಯಲ್ಲ! ನಮ್ಮ ಅಭಿರುಚಿಗಳಲ್ಲಿ, ಆಸೆ-ಆಕಾಂಕ್ಷೆಗಲ್ಲಿ, ಗುರಿ ಗಮ್ಯಗಳಲ್ಲಿ, ತೆಗೆದುಕೊಳ್ಳುವ ನಿರ್ಧಾರಗಳಲ್ಲಿ  ಕಾಲಬದಲಾದರೂ ನಮ್ಮಅಂತರಾಳದಲ್ಲಿ ಬದಲಾವಣೆ ಕಾಣುವುದು ಕಷ್ಟಸಾಧ್ಯ!
ಆಶ್ಚರ್ಯವೆನಿಸುವುದೇ?..... ಕೆಲವು ಸಮರ್ಥನೆಗಳನ್ನು ನೀಡುವೆ ಸ್ವ-ಪರೀಕ್ಷೆ ಮಾಡಿಕೊಳ್ಳಿ....!
- ಎಷ್ಟೋ ಸಲ ನಮ್ಮ ಸುತ್ತಲಿನವರು, ಅದಕ್ಕೂ ಮಿಗಿಲಾಗಿ ನಮ್ಮ ಮಕ್ಕಳು ಮತ್ತು ಪತಿರಾಯರು: ನೀನು ಯಾವ ಜಮಾನದಲ್ಲಿರುವೆ? ಕಾಲ ಬದಲಾಗಿದೆ ಆದರೂ ನಿನ್ನ ಓಬಿರಾಯನ ಕಾಲದ ಯೋಚನೆ ಬಿಟ್ಟಿಲ್ಲ! ಎಂದು ಹೇಳಿರುವುದು ನೆನಪಿದೆಯೇ? ಮನೆಯ ಯಾವುದೇ ಚಟುವಟಿಕೆಗಳಲ್ಲಿ ಆಧುನಿಕತೆಯ ಮೆರಗನ್ನು ತರಬಯಸಿದ ಮನೆಮಂದಿಗೆ, ನಾವು ನಮ್ಮ ಸಂಪ್ರದಾಯ ಅಥವಾ ನಮ್ಮ ನಂಬಿಕೆಯ ಅನುಸಾರ ಬದಲಾವಣೆಗೆ ಒಪ್ಪದಾದಾಗ ಇಂತಹ ಮಾತುಗಳನ್ನು ಕೇಳಿಲ್ಲವೇ.....? ಅದರಲ್ಲೂ ಮಕ್ಕಳಿಗಂತೂ ವೇಷಭೂಷಣಗಳ ಬಗ್ಗೆ, ದಿನ-ವಾರಗಳ ಆಚರಣೆಯಲ್ಲಿ ನಮ್ಮ ನಂಬಿಕೆಯ ಬಗ್ಗೆ, ಶಕುನಗಳ ಬಗ್ಗೆ ಹೇಳಿದಾಗ ಇಂತಹ ಮಾತುಗಳನ್ನು ಕೇಳಬೇಕಾದೀತು. ನಮ್ಮ ಮನೆಯಲ್ಲಿಯೂ ಸಾಮಾನ್ಯವಾಗಿ ಅಮ್ಮ ಮತ್ತು ಅತ್ತೆಯ ಕಾಲದಿಂದಲೂ ಶುಕ್ರವಾರ ಮತ್ತು ಮಂಗಳವಾರದಂದು ಗೊಜ್ಜುಗಳನ್ನು ಮಾಡುತ್ತಿರಲಿಲ್ಲ! ಈಗ ಮಕ್ಕಳು ಬಯಸಿದಾಗ ವಾರದ ಕಾರಣ ನೀಡಿದರೆ; ಅಮ್ಮ ಎಂದಿಗೂ ನೀನು ಬದಲಾಗುವುದಿಲ್ಲವೇ? ಎಂಬ ಪ್ರಶ್ನೆ ಎದುರಾಗುತ್ತದೆ.
- ಸಾಮಾನ್ಯವಾಗಿ ನಾವೆಲ್ಲಾ ನಮ್ಮ ಬಾಲ್ಯವನ್ನು ಹೆಚ್ಚುಕಡಿಮೆ ಕಷ್ಟದ ದಿನಗಳಲ್ಲಿ ಅಥವಾ ಹಣದ ಮೌಲ್ಯ ಗೊತ್ತಾಗುವ ರೀತಿಯಲ್ಲಿ ಕಳೆದದ್ದು ಅಲ್ಲವೇ? ಆದರೆ ಇಂದಿನ ಮಕ್ಕಳಿಗೆ ಅದರ ಮಹತ್ವ ತಿಳಿಯದೇ ಹೋಗಿದೆ! ಹೋದದ್ದು ಹೋಗಲಿ;ಬಂದಿದ್ದು ಬರಲಿ ಎಂಬ ಧೋರಣೆಯಲ್ಲಿ, ಸಣ್ಣದಿರಲಿ ದೊಡ್ಡದಿರಲಿ ಯಾವುದಕ್ಕೂ ಬೆಲೆ ಕೊಡದೆ ದುಂದುವೆಚ್ಚ ಮಾಡುವಾಗ ನಾವು ಕಡಿವಾಣ ಹಾಕಹೊರಟರೆ ಅಮ್ಮ ನಿನ್ನ ಜಿಪುಣ ಬುದ್ಧಿ ನೀನು ಬಿಡುವುದಿಲ್ಲವೇ? ಎಂಬ ಮಾತು.
- ಹೊರಗಡೆ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಗೆ ಹೋದಾಗ ನಮಗೂ ಹೊಸ ರುಚಿಗಳ ಪರಿಚಯ ಮಾಡಿಕೊಳ್ಳುವ  ಆಸೆಯಾದರೂ, ಮೆನು ಕಾರ್ಡ್ ನ ಮೇಲೆ ಒಮ್ಮೆ ಬೆರಳಾಡಿಸುವಾಗ ನಮ್ಮ ಕಣ್ಣು  ಬೇಡವೆಂದರೂ ಬೆಲೆಗಳ ಮೇಲೆ ಹೋಗುವುದು ಸಾಮಾನ್ಯವಲ್ಲವೇ? ಹಾಗೆ ನೋಡಿ ತಲೆಯೆತ್ತಿ ನೋಡಿದಾಗ ಪತಿರಾಯರ ಕಣ್ಣುಗಳಲ್ಲಿ ನೀನು ಎಂದಿಗೂ ಬದಲಾಗುವುದಿಲ್ಲ ಎಂಬ ಅಚಲನೋಟ. 
- ಮನೆಯ ವಸ್ತುಗಳನ್ನು ಅಳೆದು ತೂಗಿ ಬಳಸುವಾಗ, ನಾಳೆಗೆ ಸ್ವಲ್ಪ ತೆಗೆದಿಡುವಾಗ, ಕೊನೆಯ ಹಂತದವರೆಗೂ ಪೇಸ್ಟ್ ಗಳನ್ನು, ಸೊಪುಗಳನ್ನು, ನೀಲಿ ಬಾಟಲ್ ಗಳನ್ನು, ಸವೆದು ಹೋಗುವವರೆಗೂ ಬ್ರಷ್ ಗಳನ್ನು, ಮೋಟಾಗುವವರೆಗೂ ಪೊರಕೆಗಳನ್ನು, ಸವೆದು/ಕಿತ್ತು ಹೋಗುವವರೆಗೂ ಚಪ್ಪಲಿಗಳನ್ನು,  ಹಳೆಯದಾಗುವವರೆಗೂ ಬಟ್ಟೆಗಳನ್ನು ಬಳಸುವಾಗ ಅದೇ ನಾವು! ನಮ್ಮ ಹಿಂದಿನವರ ಬಡತನದ ದಿನಗಳನ್ನು ಇಂದಿನ ಸುಸ್ಥಿತಿಯ ಪರಿಸ್ಥಿತಿಗಳಲ್ಲೂ ಮುಂದುವರಿಸುತ್ತಿದ್ದೇವೆ ಅಲ್ಲವೇ......! ಒಂದು ವೇಳೆ ಇಂದಿನ ಕಾಲಕ್ಕೆ ನಮ್ಮ ದರ್ಜೆಗೆ ತಕ್ಕಂತೆ ನಾವು ಬದಲಾಗಿದ್ದರೆ ಹೀಗೆ ನಡೆದುಕೊಳ್ಳಬೇಕಾಗಿರಲಿಲ್ಲ. ಎಲ್ಲವನ್ನು ಕಂಜೂಸರಂತೆ ಬಳಸುತ್ತಾ, ಓಬಿರಾಯನ ಕಾಲದವರು ಎನಿಸಿಕೊಳ್ಳ ಬೇಕಾಗಿರಲಿಲ್ಲ.
- ಇನ್ನು ನಮ್ಮ ನಡೆನುಡಿಯ ವಿಚಾರಕ್ಕೆ ಬಂದರೆ,ನಾವೇ  ಎಷ್ಟೋ ಸಲ ನಮ್ಮ ಹೆತ್ತವರನ್ನು ತಿದ್ದಿದ್ದೇವೆ. ಹಾಗೆ ಮಾತಾಡಬೇಡ: ಹೀಗೆ ಮಾತಾಡಬೇಡ ಎಂದೆಲ್ಲಾ ಹೇಳಿದ್ದೇವೆ. ಆದರೆ ಇಂದು ನಮ್ಮ ಮಕ್ಕಳು ನಮ್ಮನ್ನು ದಂಡಿಸುತ್ತಿದ್ದಾರೆ. ಇತಿಹಾಸ ಮರುಕಳಿಸುವುದು ಎಂದರೆ ಇದೇ ಅಲ್ಲವೇ? ಅಮ್ಮಾ ನೀನು ನನ್ನ ಗೆಳೆಯರನ್ನು ಹಾಗೆ ಮಾತಾಡಬಾರದಿತ್ತು; ನಮ್ಮ ಶಿಕ್ಷಕರನ್ನು ಹೀಗೆ ಮಾತಾಡಬಾರದಿತ್ತು.....! ಹಾಗೆ ಹೇಳು; ಹೀಗೆ ಮಾಡು.....! ಎಂದೆಲ್ಲಾ ಮಕ್ಕಳ ಕೈಯಲ್ಲಿ ಹೇಳಿಸಿಕೊಳ್ಳುತ್ತಿಲ್ಲವೇ? ಆದರೂ ಕಾಲಕ್ಕೆ ತಕ್ಕಂತೆ ಬದಲಾಗದ ನಾವು ಎಲ್ಲಾ ಎಚ್ಚರಿಕೆಗಳ ಮಧ್ಯೆಯೂ ನಾವು ನಾವೇ ಆಗಿರುತ್ತೇವೆ ಅಲ್ಲವೇ?
- ವೇಷಭೂಷಣಗಳ ದೃಷ್ಟಿಯಿಂದ ಕಾಲಕ್ಕೆ ತಕ್ಕಂತೆ ನಾವೇ ಆಧುನಿಕ ಧಿರಿಸುಗಳನ್ನು ಧರಿಸುತ್ತಿದ್ದರೂ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ನಮ್ಮ ಮಕ್ಕಳು ಹಿಂದಿನವರಂತೆ/ನಮ್ಮ ಬಾಲ್ಯದಂತೆ ಸಾಂಪ್ರದಾಯಿಕವಾಗಿಯೇ ಇರಲಿ ಎಂದು ಆಶಿಸುತ್ತೇವೆ. ಮತ್ತೆ ನಾವೂ ಅವರಿಗೆ ಹಾಗೆಯೇ ಮಾದರಿಯಾಗಿ ಇರುತ್ತೇವೆ ಅಲ್ಲವೇ......!
ಯಾರೋ ಹೇಗೋ ಇರುತ್ತಾರೆ ಎಂದ ಮಾತ್ರಕ್ಕೆ ನಾವು ಹಾಗಿರಲು ನಮ್ಮ ಅಂತರಾತ್ಮ ನಮ್ಮನ್ನು ಬಿಡಬೇಕಲ್ಲವೇ?
ವೃತ್ತಿಯಲ್ಲಿ ಶಿಕ್ಷಕಿಯಾದ ನಾನು ಮನೆಯಲ್ಲಿ ರಜಾದಿನಗಳಲ್ಲಿ ಸದಾಕಾಲ ಯಾವುದೇ ಪೋಷಾಕುಗಳನ್ನು ಧರಿಸಿದ್ದರೂ ಕಚೇರಿಗೆ ಮತ್ತು ಶಾಲೆಯ ಕರ್ತವ್ಯದ ವೇಳೆ ವೃತ್ತಿಗೆ ಸೂಕ್ತವಾದ ಸೀರೆಯಲ್ಲಲ್ಲದೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳಲು ಮನಸ್ಸು ಒಪ್ಪುವುದೇ ಇಲ್ಲ! ಪ್ರತಿ ದಿನ ನನ್ನ ಮಕ್ಕಳು ಅಮ್ಮ ಬೇರೆ ಎಲ್ಲರನ್ನೂ ನೋಡು; ಎಲ್ಲರೂ ಹೇಗೆಲ್ಲಾ ಮಾಡ್ರನ್ ಆಗಿ ಬರುತ್ತಾರೆ! ನೀನು ಮಾತ್ರ ಪ್ರತಿದಿನ ಸೀರೆಯಲ್ಲೇ ಹೋಗುತ್ತೀಯಾ; ನೀನು ಬದಲಾಗುವುದೇ ಇಲ್ಲವೇ? ಎನ್ನುತ್ತಾರೆ. ನಿಜ! ನಾನು ಕಾಲಕ್ಕೆ ತಕ್ಕಂತೆ ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ನವೀಕರಣಗೊಳ್ಳುತ್ತಿದ್ದರೂ, ಆಧುನಿಕ ತಂತ್ರಜ್ಞಾನ ಬಳಸುತ್ತಿದ್ದರೂ, ವೈಯಕ್ತಿಕವಾಗಿ ಬದಲಾಗಬೇಕು ಎಂದುಕೊಂಡರೆ ನಾ ನನ್ನ ವೃತ್ತಿಗೆ ಬಂದಾಗ ಯಾವ ಮೌಲ್ಯಗಳನ್ನು ಇಟ್ಟುಕೊಂಡಿದ್ದೆನೋ; ಇಂದಿಗೂ ಅವನ್ನು ಮಾತ್ರ ಬದಲಿಸಲು ಸಾಧ್ಯವಾಗುತ್ತಿಲ್ಲ!  ವೃತ್ತಿಗೌರವ ಅಂತಃಸಾಕ್ಷಿಗೆ ಬಿಟ್ಟದ್ದು. ಅದು ನನ್ನನ್ನು ಒಂದು ಚೌಕಟ್ಟಿನಲ್ಲಿಯೇ ನಿಲ್ಲಿಸುತ್ತದೆ.


- ನಾವು ಹಿರಿಯರಿಗೆ ಕೊಡುವ ಮರ್ಯಾದೆಗಳು, ಕಿರಿಯರಿಗೆ ಹಂಚುವ ಪ್ರೀತಿ, ಕೌಟುಂಬಿಕ ಮೌಲ್ಯ ಎಲ್ಲವೂ ಕಾಲ ಎಷ್ಟೇ ಬದಲಾದರೂ ನಮ್ಮಿಂದಂತೂ ಬದಲಾಗುವುದಿಲ್ಲ, ಬದಲಾಗಲು ಬಿಡುವುದೂ ಇಲ್ಲ!   ಅಪ್ಪ ಹಾಕಿದ ಆಲದ ಮರಕ್ಕೆ ನೇಣುಬಿಗಿದುಕೊಂಡ! ಎಂಬಂತೆ  ಎಷ್ಟೋ ಸಲ ಪರಿಸ್ಥಿತಿಗಳ ಒತ್ತಡದಿಂದಾಗಿ ಅದೇ ಹಳೆಕಾಲದ ಗೌರಮ್ಮಗಳಂತೆ ಯಾರಿಗೂ ಎದುರು ಮಾತನಾಡದೆ, ನಮ್ಮ ಸಾಧುತನ ಉಳಿಸಿಕೊಳ್ಳುತ್ತೇವೆ ಅಲ್ಲವೇ....? ಒಂದು ವೇಳೆ ನಾವು ಕಾಲಕ್ಕೆ ತಕ್ಕಂತೆ ಆಧುನಿಕ ಮಹಿಳೆ, ಸಮಾನತೆ, ಸ್ತ್ರೀ ಸ್ವಾತಂತ್ರ್ಯ ಎಂದೆಲ್ಲಾ ಕಲ್ಪನೆಗಳನ್ನು ರೂಢಿಸಿಕೊಂಡು ಬದಲಾಗಿ ಬಿಟ್ಟಿದ್ದರೆ ಇಂದಿನ ನೆಮ್ಮದಿಯ ಸಂಸಾರ ನಡೆಸಲು ಸಾಧ್ಯವಾಗುತ್ತಿತ್ತೇ? ಅದರಿಂದ ಆಗಾಗ ನಮಗೇ ಕಷ್ಟಗಳು ಬಂದಾಗ, ನಮ್ಮ ಹಿತೈಷಿಗಳು ಎಷ್ಟು ದಿನ ಎಲ್ಲವನ್ನೂ ಸಹಿಸುತ್ತೀಯ? ನೀನೂ ಸ್ವಲ್ಪ ಬದಲಾಗಬೇಕು! ಎಂಬ ಉಚಿತ ಭೋಧನೆಗಳನ್ನು ನಮಗೆ ನೀಡಿಲ್ಲವೇ? ಆದರೂ ನಾವು ಬದಲಾಗಿದ್ದೇವೆಯೇ? ನಾವು ನಾವೇ ತಾನೆ?
- ಮಕ್ಕಳಿಗೆ ಕಾಯಿಲೆ ಕಸಾಲೆಗಳು ಬಂದಾಗ, ಆಧುನಿಕ ವೈದ್ಯಪದ್ಧತಿಯ ಮೊರೆಹೋಗಿದ್ದರೂ, ಮನೆ ಮದ್ದು, ಶಾಸ್ತ್ರ, ಭವಿಷ್ಯ, ಮಂತ್ರ-ತಂತ್ರ, ಮುಡಿಪು, ಕಾಣಿಕೆ, ಹರಕೆ,ವ್ರತ, ನೇಮಗಳನ್ನು ಪಾಲಿಸುತ್ತಾ... ಪೂರ್ವಕಾಲದ ಪುಟ್ಟಕ್ಕರಂತೆ ವರ್ತಿಸುತ್ತಿಲ್ಲವೇ? ವೈದ್ಯರು ಅಥವಾ ವೈಜ್ಞಾನಿಕವಾಗಿ ಆಲೋಚಿಸುವವರ ಮುಂದೆ ಇನ್ನೂ ನೀವು ಯಾವ ಕಾಲದಲ್ಲಿ ಇದ್ದೀರಿ? ಕಾಲಕ್ಕೆ ತಕ್ಕಂತೆ ಬದಲಾಗುವುದಿಲ್ಲವೋ? ಎಂದು ಹೇಳಿಸಿಕೊಂಡಿಲ್ಲವೇ...?


ಒಂದು ದಿನ ಶಿಕ್ಷಕರ ತರಬೇತಿಯ ವೇಳೆಯಲ್ಲಿ ನಮ್ಮ ಶಿಕ್ಷಕರೊಬ್ಬರು ನನಗೆ ಒಂದು ಪ್ರಶ್ನೆ ಕೇಳಿದರು.  ನಮಗೆ ಗೊತ್ತಿಲ್ಲದ ಅಥವಾ ಪರಿಚಯದವರು ಯಾರೂ ಇಲ್ಲದ ಹೊಸ ಪ್ರದೇಶಗಳಲ್ಲಿ ನಾವು ಹೇಗೆ ಬೇಕಾದರೂ ಇರಬಹುದಲ್ಲವೇ? ಎಂದು. ನಿಜ! ಪ್ರಶ್ನೆ ಸರಿ ಇದೆ. ಆದರೆ ಉತ್ತರ ಮಾತ್ರ... ಯಾರಾದರೂ, ಎಂದಾದರೂ ಹಾಗೆ ಇರಲು ಸಾಧ್ಯವಾಗಿದೆಯೇ? ಎಂಬುದು ಏಕೆಂದರೆ, ಒಮ್ಮೆ ಯೋಚಿಸಿ; ನಮ್ಮನ್ನು ಹೊರಗಿನವರು  ಗುರುತಿಸುವುದಕ್ಕಿಂತಾ ಮೊದಲು  ನಮ್ಮ ಅಂತಃಕರಣ ಅಂತಃಸಾಕ್ಷಿಯಾಗಿ ನಮ್ಮನ್ನು ವೀಕ್ಷಿಸುತ್ತಿರುತ್ತದೆ! ಅದಕ್ಕೆ ನಾವು ಯಾರು ಎಂಬುದು ಗೊತ್ತು!  ಅಲ್ಲಿ ನಾವು ನಾವು ತಾನೇ? ಬದಲಾಗಲು ಹೇಗೆ ಸಾಧ್ಯ? 
ಇಂತಹ ಇನ್ನೂ ಸಾಕಷ್ಟು ನಿದರ್ಶನಗಳಿವೆ! ಆದರೂ ಒಗ್ಗೂಡಿಸಿ ಹೇಳುವುದಾದರೆ; ಅನುಕಂಪ, ಬಾಂಧವ್ಯ, ಪ್ರೀತಿ,ಸ್ನೇಹ,ಮೌಲ್ಯ, ತುಡಿತ - ಮಿಡಿತ,ಸೈರಣೆ, ಸಹಕಾರ, ಸೇವೆ, ಗೌರವ, ಅನುಸರಣೆ... ಇತ್ಯಾದಿ ಎಲ್ಲಾ ಭಾವನೆಗಳು ತುಂಬಿರುವುದರಿಂದಾಗಿ, ಕಾಲ ಎಷ್ಟೇ ವೇಗವಾಗಿ ಎಷ್ಟೇ ಆಧುನಿಕವಾಗಿ ಬದಲಾದರೂ;ಬದಲಾದ ಕಾಲದಲ್ಲಿ ಬದಲಾಗದ ನಾವು ನಮ್ಮ ಅಂತರಾತ್ಮದಿಂದ ಸ್ವ ಅವಲೋಕನ ಮಾಡಿಕೊಂಡಾಗ ನಾವು ನಾವೇ! ಹೀಗಿದ್ದು  ಸ್ವಂತಿಕೆಯ ವ್ಯಕ್ತಿತ್ವದಿಂದ ಜಗವನ್ನು ಗೆದ್ದಿರುವುದನ್ನು ಕಾಣಬಹುದು.
ನೀವೂ ಒಮ್ಮೆ ಪರೀಕ್ಷೆ ಮಾಡಿಕೊಳ್ಳಿ...! ನಂತರ ಬದಲಾವಣೆಗಳಿಗೆ ಹೂಂ ಅಂದರೂ  ಉಹೂಂ ಅಂದರೂ ನನ್ನೊಂದಿಗೆ ಪ್ರತಿಕ್ರಿಯಿಸಿ!


✍ಮಂಜುಳಾ ಪ್ರಸಾದ್✍

 

 

Category : Personal Experience


ProfileImg

Written by manjula g s