ನಾವು ಮತ್ತು ನಮ್ಮ ಯೋಚನೆಗಳು

ProfileImg
03 Jan '24
7 min read


image

ಈ ಜಗತ್ತಿನಲ್ಲಿ “ಆಲೋಚನೆಗಳು” ಪ್ರತಿಯೊಬ್ಬನ ಬದುಕಿನ ಜೊತೆ ಆತ್ಮೀಯ ನಂಟನ್ನು ಹೊಂದಿರುವ ಸ್ನೇಹಿತ ಎಂದರೆ ತಪ್ಪಾಗಲಾರದು.ಇದು ಬೆಳಕಿಗಿಂತಲೂ ವೇಗವಾಗಿ ನಮ್ಮ ಮನದೊಳಗೆ ಚಲಿಸುತ್ತಾ, ಕ್ರಿಯೆ  ಪ್ರತಿಕ್ರಿಯೆಗಳ ಮೂಲಕ ನಮ್ಮ ಮನದಾಳವನ್ನು ಜಗತ್ತಿಗೆ ವ್ಯಕ್ತಪಡಿಸುವ ಸಾಧನವೆಂದರೂ ತಪ್ಪಾಗಲಾರದು. ಹಾಗೆಯೇ ಈ ಯೋಚನೆಗಳು ಯಾರ ಕಣ್ಣಿಗೂ ಕಾಣಿಸದೆ ಯಾರಿಗೂ ತಿಳಿಯದ ಹಾಗೆ  ನಮ್ಮೊಳಗೆ ರಹಸ್ಯವಾಗಿ ನಮ್ಮ ಬದುಕಿಗಂಟಿರುವ ಗುಪ್ತ ಸಲಹೆಗಾರ.ಹಾಗೆಯೇ ಒಂಟಿಯಾದಾಗ ನಮ್ಮನ್ನು ಆರಿಸಿಕೊಳ್ಳುವ ಒಡನಾಡಿ.ನಾವು ಕರೆಯಲಿ ಬಿಡಲಿ,ತಿರಸ್ಕರಿಸಲಿ,ಪುರಸ್ಕರಿಸಲಿ,ಈ ಜಗತ್ತಲ್ಲಿ ನಮ್ಮ ಜೊತೆ ಯಾರೇ ಇರಲಿ ಬಿಡಲಿ, ಈ ಯೋಚನೆಗಳು ಮಾತ್ರ ನಮ್ಮ ಬದುಕಿನುದ್ದಕ್ಕೂ ಬೆಂಬಿಡದೆ ಹಿಂಬಿಲಿಸುವ ಹಿಂಬಾಲಕ.ಯಾವ ಕ್ಷಣದಲ್ಲಿ ಯಾರ ಮನದಲ್ಲಿ ಯಾವ ತರಹದ ಯೋಚನೆಗಳು ಓಡುತ್ತದೆ ಎಂಬುದನ್ನು ಯಾರಿಗೂ ಕಂಡುಹಿಡಿಯಲು ಸಾಧ್ಯವಿಲ್ಲ.ಕೇವಲ ನಮಗಷ್ಟೆ ಸೀಮಿತವಾಗಿರುವ  ನಮ್ಮೊಳಗೆ ಗೌಪ್ಯವಾಗಿರುವ ನಮ್ಮ ಯೋಚನೆಗಳ ಪಾತ್ರ ಬದುಕಿನಲ್ಲಿ ಬಹಳ ಮುಖ್ಯವಾಗಿರುತ್ತದೆ ಎಂಬುದು ಅಕ್ಷರಶಃ ಸತ್ಯ .

ಒಮ್ಮೆ ತೀಕ್ಷ್ಣವಾಗಿ ನೋಡಿದಾಗ ಅನಿಸುವುದು ಈ ಜಗವೊಂದು ಗೊಂದಲದ ಗೂಡೆಂದು. ಇಲ್ಲಿರುವ ಪ್ರತಿಯೊಂದು ವಸ್ತುವಾಗಲಿ ವ್ಯಕ್ತಿಯಾಗಲಿ ಅಥವ ಯಾವುದೇ ಇನ್ನಿತರ ವಿಚಾರವಾಗಲಿ, ಆಳವಾಗಿ ಅವುಗಳನ್ನು ಪರಿಚಯಿಸಿಕೊಳ್ಳಲು ಹೊರಟಾಗ ನಮಗೆ ಉತ್ತರವಿಲ್ಲದ ದ್ವಂದ ಪ್ರಶ್ನೆಗಳೇ ಹೆಚ್ಚಾಗಿ ಮನದಲ್ಲಿ ಮೂಡುತ್ತದೆ.ಈ ಬದುಕನ್ನು ಹುಟ್ಟು ಸಾವಿನ ನಡುವಿನ ಒಂದು ಪ್ರಯಾಣವೆನ್ನುತ್ತಾರೆ.ಒಂದು ತರಹ ಅಡ್ಡಗೊಡೆಯ ನಡುವಿನ ದೀಪದಂತೆ,ಹುಟ್ಟಿನ ಹಿಂದಿನ ಚರಿತ್ರೆ ಗೊತ್ತಿಲ್ಲ.ಸಾವಿನ ಮುಂದಿರೊ ಭವಿಷ್ಯ ತಿಳಿದಿಲ್ಲ. ಹಾಗೆಯೇ ಈ ಬದುಕಿನ ಪಯಣದಲ್ಲಿ ಕಾಣಸಿಗುವ ಪ್ರತಿಯೊಂದು ಪರಿಚಯ ಕೂಡ ವಿಸ್ಮಯವೇ ಸರಿ.ಇವುಗಳ ಬಗ್ಗೆ ಯೋಚಿಸುತ್ತ ಹೋದರೆ ಮನಸಿನಲ್ಲಿ ನಮ್ಮದೇ ಆದ ಅಭಿಪ್ರಾಯಗಳು ಬಿಚ್ಚಿಕೊಳ್ಳಲಾರಂಭಿಸುತ್ತದೆ.ಹುಟ್ಟಿದ ಹಲವು ದಿನಗಳ ನಂತರ ಜಗತ್ತನ್ನು ಕುತೂಹಲದಿಂದ ದಿಟ್ಟಿಸುವ ಮನುಷ್ಯ ನಂತರದ ದಿನಗಳಲ್ಲಿ ಮಾತು ಕಲಿತು ಅವುಗಳ ಬಗ್ಗೆ ಪ್ರಶ್ನಿಸಲಾರಂಭಿಸುತ್ತಾನೆ.ನಂತರ ಜಗತ್ತನ್ನು ಅಳೆದು ತೂಗಿ ಅದರ ಬಗ್ಗೆ ಯೋಚಿಸಲು ಶುರುಮಾಡುತ್ತಾನೆ.ಹಾಗೆಯೇ ಅವನ ಮನದಲ್ಲಿ ಸರಿ ತಪ್ಪುಗಳ ತುಲನೆ ಶುರುವಾಗುತ್ತದೆ.ಹಾಗೇಯೆ ಮುಂದೆ ಅವನ ಮನದಲ್ಲಿ ನ್ಯಾಯ ಅನ್ಯಾಯದ ಘರ್ಷಣೆಗಳು ಆರಂಭವಾಗುತ್ತದೆ. ಹೀಗೆ ಜಗತ್ತಿಗೆ ಅವನು ಪರಿಚಯವಾದಂತೆ ಅವನನ್ನು ಆವರಿಸುವ ವಿಶೇಷ ಪಾತ್ರಧಾರಿಯೇ ಯೋಚನೆಗಳು.ಹೀಗೆ ಬದುಕಿಗೆ ಯೋಚನೆಗಳು ಅಂಟಿ ಬದುಕಿನುದ್ದಕ್ಕೂ ನಂಟು ಬೆಳೆಸಿಕೊಂಡು ನಮ್ಮ ಮನಸಿನ ಜೊತೆ ಗಂಟು ಹಾಕಿಕೊಂಡುಬಿಡುತ್ತದೆ.

ಮನುಷ್ಯನಿಗೆ ಯೋಚನೆಗಳು ಮಿತ್ರನೂ ಹೌದು. ಶತ್ರುನೂ ಹೌದು.ನಮ್ಮ ಆಲೋಚನೆಗಳು ನಮ್ಮನ್ನು ಒಬ್ಬ  ಶ್ರೇಷ್ಠ ವ್ಯಕ್ತಿಯನ್ನಾಗಿಯೂ ಮಾಡಬಹುದು.ಹಾಗೆಯೇ ದುಷ್ಟನನ್ನಾಗಿಯೂ ಮಾಡಬಹುದು.ಅದು ನಮ್ಮ ಯೋಚನೆಗಳ ಮೇಲೆ ಅವಲಂಭಿತವಾಗಿದೆ ಎಂಬುದೇ ಸತ್ಯ.ನಮ್ಮ ಯೋಚನೆಗಳು ಧನಾತ್ಮಕವಾಗಿದ್ದರೆ ಮುಂದೆ ಅವುಗಳು ಯೋಜನೆಗಳಾದಾಗ ಧನಾತ್ಮಕ  ಫಲವನ್ನೆ ನೀಡುತ್ತದೆ.ಹಾಗೆಯೇ  ಋಣಾತ್ಮಕ ಆಲೋಚನೆಗಳು ಬದುಕಿನಲ್ಲಿ ಋಣಾತ್ಮಕ ಪರಿಣಾಮವನ್ನೇ ಬೀರುತ್ತದೆ.

ಹಾಗೆಯೇ ಮನದ ಹೊಲದಲ್ಲಿ ನೀವು ಯಾವ ಯೋಚನೆಗಳ ಬೀಜವನ್ನು ಬಿತ್ತುವಿರೋ ಅದಕ್ಕೆ ತಕ್ಕ ಫಸಲು ನಿಮ್ಮದಾಗುತ್ತದೆ.ನಮ್ಮ  ಪ್ರತಿ ಯೋಚನೆಗಳು ಯೋಜನೆಗಳಾಗಬೇಕು ಹೊರತು ಚಿಂತೆಗಳಾಗಬಾರದು.ಯೋಚನೆಗಳು ಚಿಂತೆಗೆ ತಿರುಗಿದರೆ ಬದುಕನ್ನು ಸುಡುವ ಬೆಂಕಿಯಾಗುತ್ತದೆ.ಯಾಕೆಂದರೆ ಯೋಜನೆ ಯೋಚನೆಯ ಸಕಾರಾತ್ಮಕ ರೂಪ.ಹಾಗೆಯೇ ಚಿಂತೆ ಯೋಚನೆಯ ನಕಾರಾತ್ಮಕ ರೂಪ.ಆದ್ದರಿಂದ ಯೋಚನೆಗಳು ರೂಪಾಂತರಗೊಳ್ಳುವಾಗ  ನಾವು ಬಹಳ ಜಾಗರೂಕತೆಯಿಂದ ಇರಬೇಕು.

ಯಾವುದೇ ಯೋಚನೆಯಿರಲಿ ಅದಕ್ಕೆ ಸಾವಿರ ದೃಷ್ಟಿಕೋನವಿರುತ್ತದೆ.ಈ ಜಗತ್ತಲ್ಲಿ ಪ್ರತಿಯೊಂದು ವಿಚಾರವನ್ನು ನಮ್ಮ ಮೂಗಿನ ನೇರಕ್ಕೆ ನಮ್ಮದೆ ದೃಷ್ಟಿಕೋನದಿಂದ ನೋಡುವಾಗ ಅದಕ್ಕೆ ಹಲವಾರು ಆಯಾಮಗಳು ಕಂಡರೂ ಅಲ್ಲಿರುವ ನಿಜವಾದ ಆಯಾಮಗಳು ಎರಡೇ.ಅವುಗಳೇ ಸರಿ ಮತ್ತು ತಪ್ಪು.ಈ ಸರಿ ತಪ್ಪುಗಳ ನಡುವಿನ ಸಮರವೇ ನ್ಯಾಯವನ್ನು ಸರಿದೂಗಿಸಲು ಕಂಡುಕೊಂಡಿರುವ ಉಪಾಯವಾದರೂ ಕೂಡ,ಇಂದು ಪರ ಹಾಗೂ ವಿರೋಧಗಳ ನಡುವೆ ಸಮರ ಸಾರುವಾಗ ನ್ಯಾಯದ ತಕ್ಕಡಿಯಲ್ಲೆ ವ್ಯಾತ್ಯಾಸ ತಂದಂತಹ ಹಲವಾರು ನಿದರ್ಶನಗಳನ್ನು ನಾವು ಪ್ರತಿದಿನ ಕಾಣುತ್ತೇವೆ.ಸಾಮಾನ್ಯವಾಗಿ  ನಾವು ಮಾಡಿದ ಪ್ರತಿಯೊಂದು ಕಾರ್ಯವು ಶ್ರೇಷ್ಠವೆಂದೆ ಕಾಣುತ್ತದೆ.ಆದರೆ ಉಳಿದವರ ಕೆಲಸಗಳಲ್ಲಿ ತೊಡಕುಗಳೆ ಹೆಚ್ಚಾಗಿ ಕಾಣುತ್ತದೆ.ಯಾಕೆಂದರೆ ಬೇರೆಯವರ ಕೆಲಸಗಳನ್ನು ವಿಮರ್ಶೆ ಮಾಡುವಾಗ ನಾವು ಅವನ ತೆರೆಯ ಹಿಂದಿನ ಪರಿಶ್ರಮವನ್ನು ಲೆಕ್ಕಾಚಾರ ಮಾಡಲು ಹೋಗುವುದಿಲ್ಲ.ಹಾಗಾಗಿ ಅದು ನಗಣ್ಯ ಎನಿಸುವುದು ಸಾಮಾನ್ಯ.ಆದರೆ ನಾವು ಕೆಲಸ ಮಡುವಾಗ ಪಟ್ಟ ಶ್ರಮದ ಬೆಲೆಯನ್ನು ಖಂಡಿತವಾಗಿಯೂ ಪೈಸಾ ಬಿಡದೆ ಲೆಕ್ಕ ಹಾಕುತ್ತೇವೆ.ಆದರೆ ಸತ್ಯವೇನಂದರೆ ಯಾವುದೇ ಒಂದು ಕೆಲಸ ನಮ್ಮ ಕಣ್ಣ ಮುಂದೆ ಇದೆಯೆಂದರೆ ಅದರ ಹಿಂದೆ ಯಾರದೋ ಪರಿಶ್ರಮ ಇದೆ ಎಂಬುದು ಅರ್ಥ.ಅದರ ಆಳ ತಿಳಿಯದೆ ವಿಮರ್ಶೆ  ಮಾಡುವುದು ಖಂಡಿತ  ಸಭ್ಯತೆಯಲ್ಲ .ಯಾಕೆಂದರೆ ಒಬ್ಬ ವ್ಯಕ್ತಿಯು ಒಂದು ಬಾರಿ ನಮ್ಮನ್ನು ವಿರೋಧಿಸಿ ನಮ್ಮ ಮುಂದೆ ನಿಂತರೆ ಸಾಕು ಅವನ ಮೇಲಿರುವ ನಮ್ಮ ಯೋಚನೆಗಳೇ ಬದಲಾಗುತ್ತದೆ.ತದನಂತರ ಅವನು ಮಾಡಿದೆಲ್ಲ ತಪ್ಪಾಗೆ ಕಾಣಲಾರಂಭಿಸುತ್ತದೆ.ಇದಕ್ಕೆಲ್ಲ ಕಾರಣ ನಮ್ಮ ಯೋಚನೆಗಳೇ.ನಮ್ಮನ್ನು ಆತ ವಿರೋಧಿಸಿದ ಎಂಬ ಕಾರಣಕ್ಕೆ ಮುಂದಿನ ದಿನಗಳಲ್ಲಿ ನಾವು ಅವನ ಬಗ್ಗೆ ಹಲವು ಆಯಾಮಗಳಲ್ಲಿ ಯೋಚಿಸಲು ಹೊಗುವುದಿಲ್ಲ.ಅವನ ತಪ್ಪನ್ನೆ ಮುಖ್ಯವನ್ನಾಗಿಸಿ ಕೆಟ್ಟವನು ಎಂಬ ನಾಮಫಲಕವನ್ನು ಹಣೆಗಂಟಿಸಿ ಬಿಡುತ್ತೇವೆ.ಆದ್ದರಿಂದ ಯಾವಾಗಲೂ ಅವನ ಶ್ರಮದ ಬೆಲೆ ನಮ್ಮ ಪ್ರಕಾರದಲ್ಲಿ ಸೊನ್ನೆಯಾಗಿರುತ್ತದೆ.ನಿಜವೇನೆಂದರೆ ಈ ಜಗದಲ್ಲಿ ಯಾರು ಒಳ್ಳೆಯವರು ಅಲ್ಲ ಕೆಟ್ಟವರು ಅಲ್ಲ.ಅವರ ಕೆಲಸ ಮತ್ತು ಯೋಚನೆಗಳ ಫಲಿತಾಂಶಗಳು ಇವೆರಡನ್ನು ನಿರ್ಧಾರ ಮಾಡುತ್ತದೆ.ಹಾಗೆಯೇ ಒಮ್ಮೆ ಕೆಟ್ಟ ಫಲಿತಾಂಶ ತಂದ ವ್ಯಕ್ತಿಯೂ ಯಾವಾಗಲೂ ಕೆಟ್ಟ ಫಲಿತಾಂಶ ತರಲೇಬೇಕೆಂಬ ನಿಯಮವೇನಿಲ್ಲ.ಹಾಗೆಯೇ ಆತ ಭವಿಷ್ಯದಲ್ಲಿ  ತನ್ನ ತಪ್ಪುಗಳನ್ನ ಸರಿತಿದ್ದಿ ಮುಂದೆ ಉತ್ತಮವಾಗಿರುವ ಸಾಧ್ಯತೆಗಳು ಬಹುತೇಕವಾಗಿರುತ್ತದೆ.ಹಾಗೆಯೇ ಒಮ್ಮೆ ಉತ್ತಮ ಫಲಿತಾಂಶ ತಂದವನು ಸೋಲಲೇಬಾರದು ಎಂಬ ನಿಯಮನೂ ಇಲ್ಲ.ಎಲ್ಲವೂ ಅವನಿರುವ ಪರಿಸ್ಥಿತಿ ಹಾಗೂ ಆ ಸವಾಲನ್ನೂ ಎದುರಿಸುವ ಚಾಕಚಕ್ಯತೆಯ ಮೇಲೆ ಅವಲಂಭಿತವಾಗಿರುತ್ತದೆ. ಹಾಗಾಗಿ ಒಮ್ಮೆ ತಪ್ಪು ಮಾಡಿದವರನ್ನು ಹೀನಾಯವಾಗಿ ಕಂಡು ಕುಗ್ಗಿಸುವ ಬದಲು ಕ್ಷಮಿಸಿ ಅವರಿಗೆ ತಮ್ಮ ತಪ್ಪನ್ನು ಸರಿತಿದ್ದಿಕೊಳ್ಳುವ ಅವಕಾಶ ನೀಡುವುದು ಉತ್ತಮ.ಆದರೆ ಪದೇ ಪದೇ ತಪ್ಪು ಮಾಡುವವರಿಗೆ ಅವಕಾಶ ನೀಡುವುದು ತೂಕಡಿಸಿದವನಿಗೆ ಹಾಸಿಗೆ ಹಾಸಿಕೊಟ್ಟಂತೆ ಎಂಬುದು ಕೂಡ ಸತ್ಯವಾದ ಮಾತು.ಯಾವುದೇ ವಿಚಾರದಲ್ಲಿ ಗೆಲುವು ಮತ್ತು ಸೋಲನ್ನು ಸಮಾನವಾಗಿ ನೋಡುವವನಿಗೆ ಮಾತ್ರ ಬದುಕಿನ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ.

ಹಾಗೆಯೇ ನಾವು ಒಳ್ಳೆಯವರೆಂದು ತೋರಿಸಿಕೊಳ್ಳಲು ನಮ್ಮ ಮುಂದಿರುವ ವ್ಯಕ್ತಿಯನ್ನು ಕೆಟ್ಟವನ್ನನ್ನಾಗಿ ಮಾಡುವುದು ಸಭ್ಯತೆಯಲ್ಲ. ಕೇವಲ ನಮ್ಮ ಕಾರ್ಯವೈಖರಿ ಪರಿಶುದ್ದವಾಗಿದ್ದರೆ ಸಾಕು.ಹಾಗೆಯೇ ಒಳ್ಳೆಯತನವನ್ನು ಎತ್ತಿ ಹಿಡಿದು ಜಗತ್ತಿಗೆ ಸಾರುವ ಅವಶ್ಯಕತೆ ಇಲ್ಲ.ಸಮಯ ಬಂದಾಗ ತಾನಾಗೆ ನಮ್ಮ ಕಾರ್ಯಗಳ ರೂಪದಲ್ಲಿ ಒಳ್ಳೆಯತನವು ಜಗತ್ತಿಗೆ ತಾನಾಗೆ ಪರಿಚಯಿಸಿಕೊಳ್ಳುತ್ತದೆ.

ಈ ಜಗತ್ತಲ್ಲಿ ಬದುಕಿನ ಪರೀಕ್ಷೆಗಳನ್ನು ಪ್ರತಿಯೊಬ್ಬನೂ ಎದುರಿಸಲೇ ಬೇಕು.ಬದುಕು ಹಲವಾರು ಪರಿಸ್ಥಿತಿಗಳನ್ನು ತಂದಿಟ್ಟು ನಾವದನ್ನು ಹೇಗೆ ಎದುರಿಸುತ್ತೇವೆ ಎಂಬುದನ್ನು ನಿರಂತರವಾಗಿ  ಪರೀಕ್ಷೆ ಮಾಡುತ್ತಲೇ ಇರುತ್ತದೆ.ಎಲ್ಲ ಸಮಯದಲ್ಲಿ ಗೆಲುವು ನಮ್ಮ ಕಡೆಗೆ ಇರಬೇಕೆಂಬ ನಿಯಮವೇನಿಲ್ಲ.ಸೋಲು ಗೆಲುವು ಬದುಕಿನ ಪರೀಕ್ಷೆಯಲ್ಲಿ ಎಲ್ಲರಿಗೂ ಸರ್ವೇ ಸಾಮಾನ್ಯ.ಆದರೆ ಜಗದ ಪ್ರತಿ ಜನಮನ ಗೆಲುವ ಹಿಂದೆ ಬಿದ್ದು ಸೋಲುನ್ನು ಹೀನಾಯವಾಗಿ ನೋಡುವುದರಿಂದ ಯಾರು ಸೋಲನ್ನು ಅಪ್ಪಿಕೊಳ್ಳಲು ಮತ್ತು ಒಪ್ಪಿಕೊಳ್ಳಲು ಕೂಡ ಇಚ್ಚಿಸುವುದಿಲ್ಲ.ಗೆಲುವು ಬದುಕಿಗೆ ರುಚಿಯನ್ನು ಕೊಟ್ಟರೆ ಸೋಲು ಬದಕನ್ನು ಶುಚಿಯಾಗಿಡುತ್ತದೆ.ಬದುಕಿನ ಪ್ರತಿ ಅಂಕುಡೊಂಕುಗಳನ್ನ ಎತ್ತಿ ತೋರಿಸುವುದು ಸೋಲುಗಳೆ ಹೊರತು ಗೆಲುವಲ್ಲ.ಸೋಲು ಗೆಲುವು ಇವೆರಡರಲ್ಲಿ ಯಾವುದೂ ಶ್ರೇಷ್ಠವೂ ಅಲ್ಲ  ಹೀನಾಯವೂ ಅಲ್ಲ.ಇವೆರಡೂ ಒಂದು ನಾಣ್ಯದ ಎರಡು ಮುಖಗಳಿದ್ದಂತೆ.ಆದರೆ ಈ ನಿಜವ ತಿಳಿಯದೆ ಹಲವರು ಗೆಲುವಿನ ಮೋಹದ ಬಲೆಗೆ ಬಿದ್ದು ಜೀವನವನ್ನೆ ಸರ್ವನಾಶ ಮಾಡಿಕೊಳ್ಳುತಿದ್ದಾರೆ.

ಯಾವುದೇ ಒಂದು ವಿಷಯದಲ್ಲಿ ಮನುಷ್ಯ ಸೋತಾಗ ಅವನ ಮನದಲ್ಲಿ  ಉದ್ಭವಿಸುವ ಮೊದಲ ಪ್ರಶ್ನೆ ಈಗ ನಾನು ಜಗತ್ತನ್ನು ಹೇಗೆ ಎದುರಿಸಲಿ?

"ಅಯ್ಯೋ! ಈಗ ಎಲ್ಲರೂ ನನ್ನನ್ನು ಹೀನಾಯವಾಗಿ ನೋಡುವರು.ಸಮಾಜ ನನ್ನನ್ನು ಗೆದ್ದವನ ಜೊತೆ ತುಲನೆ ಮಾಡಿ ತಿರಸ್ಕರಿಸುವುದು.

ಜನ ನನ್ನನ್ನು ಆಡಿಕೊಳ್ಳುತ್ತಾರೆ" ಹೀಗೆ ಹತ್ತು ಹಲವಾರು ಋಣಾತ್ಮಕ ಯೋಚನೆಗಳು ಮನದಲ್ಲಿ ಮನೆ ಮಾಡಿ ರಾಜ್ಯಭಾರ ಮಾಡಲು ಶುರು ಮಾಡುತ್ತದೆ. ಆದರೆ ನಿಜವೇನೆಂದು ಗೊತ್ತ?ಸಮಾಜ ಎಲ್ಲರ ಬಗ್ಗೆನೂ ಮಾತಾಡುತ್ತೆ.ನೀವು ಗೆದ್ದಾಗಲೂ ಹಲವಾರು ಪ್ರಶ್ನೆಗಳು ಬರುತ್ತದೆ"ಈ ಗೆಲುವು ನ್ಯಾಯವಾಗಿ ದೊರಕ್ಕಿದ್ದೆ?ನನ್ನ ಪ್ರಕಾರ ಆತ ಗೆಲುವಿಗೆ ಅರ್ಹನಲ್ಲ. ಈ ಗೆಲುವನ್ನು ಆತ ಕೊಂಡುಕೊಂಡಿರಬಹುದು.ಅವನ ಅದೃಷ್ಟ ಚೆನ್ನಾಗಿತ್ತು ಅದಕ್ಕೆ ಗೆದ್ದ"ಹೀಗೆ ಹತ್ತು ಹಲವಾರು ಟೀಕೆಗಳು ಗೆದ್ದವನನ್ನು ಹಿಂಬಾಲಿಸಿ ಬರುತ್ತದೆ.ಆದರೆ ಗೆಲುವಿನ ನಶೆಯಲ್ಲಿದ್ದ ಆತನಿಗೆ ಇವುಗಳ ಬಗ್ಗೆ ಗೊಡವೆಯಿರಲ್ಲ ಅಷ್ಟೆ.ಸೋಲಿನ ನೋವನಲ್ಲಿರುವವನು ಇವುಗಳ ಬಗ್ಗೆ ಹೆಚ್ಚು ಗಮನಹರಿಸಿ ನೋವುಗಳ ಸರಮಾಲೆಯನ್ನು ಮೈಮೇಲೆ ಎಳೆದುಕೊಂಡಾಗ ಅವನು ಮತ್ತಷ್ಟು ಕುಗ್ಗುತ್ತಾನೆ.ಈ ಕುಗ್ಗುವಿಕೆಯೇ ಬದುಕಿನ ಬಹಳ ದೊಡ್ಡ ಶತ್ರು.ಮನುಷ್ಯ ಬೆಳೆದಂತೆ ಅವನ ಮನೋಬಲ ವೃದ್ದಿಸಿದರೆ ಭವಿಷ್ಯದಲ್ಲಿ ಅವನು ಎಂತಹ ಪರಿಸ್ಥಿತಿಯನ್ನು ಬೇಕಾದರೂ ಎದುರಿಸಬಲ್ಲ.ಆ ಮನೋಬಲ ವೃದ್ದಿಸುವ ಆಯುಧವೆ ಧನಾತ್ಮಕ ಯೋಚನೆಗಳು.ದಿನೇ ದಿನೇ ಸಕಾರಾತ್ಮಕ ಯೋಚನೆಗಳನ್ನು ಮನದಲ್ಲಿ ತುಂಬಿ ನಮ್ಮನ್ನು ನಾವು ಬಲಿಷ್ಠಗೊಳಿಸುವುದು ಕೂಡ  ಬದುಕಿನ ಪರೀಕ್ಷೆಗೆ ಮಾಡಿಕೊಳ್ಳುವ ಒಂದು ಬಗೆಯ ಪೂರ್ವ ತಯಾರಿ ಎನ್ನಬಹುದು.

ನಾವು ಯಾವುದೇ ಕೆಲಸ ಮಾಡಲಿ ಅದರಲ್ಲಿ ಒಲಿತನ್ನು ಹುಡುಕುವವರು ಇದ್ದಾರೆ,ಕೆಡುಕನ್ನು ಹುಡುಕುವವರು ಇದ್ದಾರೆ.ಜೊತೆಗೆ ಕೈಲಾಗದ ಸೋಮಾರಿಗಳು ಮೊಸರಲ್ಲಿ ಕಲ್ಲು ಹುಡುಕಿದಂತೆ ಅದರಲ್ಲಿ ತಪ್ಪು ಹುಡುಕಿ ಟೀಕೆ ಮಾಡುತ್ತಾರೆ.ಇನ್ನೂ ಕೆಲವರು ನಮ್ಮನ್ನು ಮೆಚ್ಚಿಸುವ ನೆಪದಿಂದ ಸುಮ್ಮನೆ ಹೊಗಳುವರು.ಇನ್ನೂ ಕೆಲವರು ತಪ್ಪುಗಳನ್ನು ಸರಿ ತಿದ್ದುವರು.ಹಾಗೇಯೇ ಕೆಲವರು ಅವರಿಚ್ಛೆಯಂತೆ ಇಲ್ಲ ಎಂದು ಹಲವಾರು ಸಲಹೆಗಳನ್ನು ಕೊಡುವರು.ಇವೆಲ್ಲವುಗಳ ನಡುವೆ ಸೋಲು ಗೆಲುವುಗಳನ್ನು ಸಮದೂಗಿಸಿಕೊಂಡು ಹೋಗುವವನೆ ನಿಜವಾದ ಸಾಧಕ.ಇಲ್ಲಿ ನಿನ್ನ ಯೋಚನೆಗಳೇ ನಿನ್ನ ಬದುಕನ್ನು ಚಂದವಾಗಿ ರೂಪಿಸುವುದು. ಈ ಜಗದಲ್ಲಿ ಬೆಳೆಯುವ ಸಿರಿಯನ್ನು ನೀರೆರೆದು ಪೋಷಿಸುವವರಿಗಿಂತ ಚಿವುಟಿ ಸಾಯಿಸುವವರೆ ಹೆಚ್ಚು.ಆ ಎಲ್ಲ ಬೇನೆಗಳನ್ನು ಸೈರಿಸಿಕೊಂಡು ಗೆಲ್ಲುವ ಹಟವಿರಬೇಕು.ಆಗಲೆ ನಾವು ಬದುಕಿನ ಗುರಿ ಸೇರಲು ಸಾಧ್ಯ.

ಒಂದು ಕಲ್ಲು ಶಿಲೆಯಾಗಬೇಕಾದರೆ ಸಾವಿರ ಉಳಿಪೆಟ್ಟು ಬೀಳಬೇಕು.ಒಬ್ಬ ಮನುಷ್ಯ  ಸಾಧಕನಾಗಬೇಕಾದರೆ ಸಾವಿರ ಕಷ್ಟಗಳ ಸವಾಲುಗಳನ್ನು ಎದುರಿಸಿ ಗೆಲ್ಲಬೇಕು.ಗೆದ್ದ ಮೇಲೆ ಆ ಸಾಧನೆಯನ್ನು ಉಳಿಸಿಕೊಳ್ಳುವ ತಾಕತ್ತನ್ನು ಬೆಳಿಸಿಕೊಂಡವನೆ ಚರಿತ್ರೆ ಬರೆಯುತ್ತಾನೆ.ಗೆಲುವ ಗದ್ದುಗೆ ಪಡೆಯುವ ತನಕ ಒಂದು ಪ್ರಯಾಣವಾದರೆ ಗೆದ್ದ ಮೇಲೆ ಆ ಗೆಲುವಿನರಮನೆಯನ್ನು ಆಳುವ ಸಾಮರ್ಥ್ಯ ಪಡೆದು ಅದನ್ನು ಜೀವಮಾನವೆಲ್ಲ ಗೆಲುವಿನ ರಾಜ್ಯದಲ್ಲಿ ರಾಜ್ಯಭಾರ ಮಾಡಲು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ.ಇಲ್ಲವಾದಲ್ಲಿ ಗೆಲುವೆಂಬುದು ಬದುಕಿನಲ್ಲಿ ಕೇಲವ ಬಂದು ಹೋಗೊ ಅತಿಥಿಯಾಗಿಬಿಡುತ್ತದೆ.

 ಇಂದಿನ ಜಗತ್ತು ಬಹಳ ಸ್ಪರ್ಧಾತ್ಮಕವಾಗಿದೆ.ಹಾಗೆಯೇ ವೈವಿಧ್ಯಮಯವಾಗಿದೆ.ಜನ ಬಹಳ ಬೇಗ ಬದಲಾವಣೆಯನ್ನು ಬಯಸುತ್ತಾರೆ.ಇಲ್ಲಿ ಇವತ್ತು ಟ್ರೆಂಡ್ ಎನ್ನುವ ಹೆಸರಿನಲ್ಲಿ ಎಲ್ಲವೂ ಕ್ಷಣ ಮಾತ್ರದಲ್ಲಿ ಬದಲಾಗಿಬಿಡುತ್ತದೆ.ಇಲ್ಲಿ ಗೆಲುವು ಕೂಡ ಈಗ ಒಂದು ಟ್ರೆಂಡ್.ಇಂದಿನ ಗೆಲುವಿಗೆ ಜೀವಿತಾವಧಿ ಬಹಳ ಕಡಿಮೆ.ಇಂದು ಒಂದು ವಿಷಯ ಜಗತ್ತಿಗೆ ಲಗ್ಗೆ ಇಟ್ಟು ಗೆಲುವಿನ ಗರಿ ಮುಡಿಯುವಷ್ಟರಲ್ಲಿ ಇನ್ನೊಂದು ಹೊಸ ವಿಷಯ ಜಗತ್ತನ್ನು ಆವರಿಸುತಿರುತ್ತದೆ.ಹೊಸತನವನ್ನು ಆಹ್ವಾನಿಸುವ ಭರದಲ್ಲಿ ಸಾಧಕನ ಸಾಧನೆಯ ಆಳವನ್ನು ಅಳೆಯುವ ತಾಳ್ಮೆಯನ್ನು ಜಗತ್ತು ಕಳೆದುಕೊಂಡಿದೆ ಎಂದರೆ ತಪ್ಪಾಗಲಾರದು.ಹಾಗಾಗಿ ಗೆಲುವ ಅರಸಿ ಹೊರಟವನಿಗೆ ಇಲ್ಲಿ ಸವಾಲುಗಳು ಬಹಳವಾಗಿರುತ್ತದೆ.ಅದಲ್ಲದೆ ಇಂದು ಏರುತಿರುವ ವಿದ್ಯಾವಂತರ ಬಳಗಗಳು ಪ್ರತಿಯೊಂದು ಕ್ಷೇತ್ರದಲ್ಲೂ ಬಹಳ ಕಠಿಣ ಸ್ಪರ್ಧೆಯೊಡ್ಡುತಿರುವುದು ಗೆಲುವ ಭೇಟೆಗಾರನಿಗೆ ಇನ್ನೊಂದು ದೊಡ್ಡ ಸವಾಲಾಗಿದೆ.ಈ ಎಲ್ಲ ಸವಾಲುಗಳ ನಡುವೆ ತನ್ನ ಗುರಿಯನ್ನು ತಲುಪಲು ಶ್ರಮಿಸುವ ಪ್ರತಿಯೊಬ್ಬ ವ್ಯಕ್ತಿಯೂ  ಆ ಪ್ರಯತ್ನದಲ್ಲಿ ಸೋತರೂ ಗೆದ್ದರೂ ಬದುಕಿನ ಯಾತ್ರೆಯಲ್ಲಿ ಮಾತ್ರ ವಿಜಯಶಾಲಿಯಾಗುತ್ತಾನೆ.ಯಾಕೆಂದರೆ ಅವನು ಆ ಪಯಣದಲ್ಲಿ ಕಲಿತ ಪಾಠಗಳು ಅನುಭವಗಳಾಗಿ ಅವನ ಬದುಕಿಗೆ ಜೊತೆಯಾಗಿರುತ್ತದೆ.

ಹಾಗೆಯೇ ಒಬ್ಬ ವ್ಯಕ್ತಿಯು ಋಣಾತ್ಮಕವಾಗಿ ಯೋಚಿಸಲು ಶುರು ಮಾಡಿದಾಗ ಮೊದಲಿಗೆ ಅವನನ್ನು ಆರಿಸಿಕೊಳ್ಳುವುದು ಸೋಮಾರಿತನ.ನಂತರ ಮತ್ಸರ.ಸೋಮಾರಿಗಳಿಗೆ ಯಾವಾಗಲೂ ಪರಿಶ್ರಮಿಗಳ ಮೇಲೆ ಮತ್ಸರ ಮೂಡುವುದು ಸಹಜ.ಏನು ಕೆಲಸ ಮಾಡಲು ಇಚ್ಛಿಸದ ಈತ ಬದುಕಿನ ಕಾಲಹರಣಕ್ಕಾಗಿ ಇತರರ ಕೆಲಸಗಳನ್ನು ಗಮನಿಸಿ ಅದರಲ್ಲಿರುವ ಒಡಕು ಹುಡಕಿ ಅವರನ್ನು ಟೀಕಿಸುವ ಕಾಯಕವನ್ನು ಶುರು ಮಾಡುತ್ತಾನೆ. ಈ ಟೀಕೆಗಳು ಎಷ್ಟರ ಮಟ್ಟಿಗೆ ಬಲಿಷ್ಠವಾಗಿರುತ್ತದೆ ಕೆಲವೊಮ್ಮೆ ಸಾಧನೆಯ ಹಾದಿಯಲ್ಲಿರುವ ಕೆಲವೊಬ್ಬರ ಬದುಕಿನ ದಾರಿಯನ್ನೆ ಬದಲಿಸುವಷ್ಟು ಸಾಮರ್ಥ್ಯ ಹೊಂದಿರುವಂತವಗಳಾಗಿರುತ್ತದೆ.ಯಾಕೆಂದರೆ ಟೀಕಿಸುವವರು ಕೂಡ ತಮ್ಮ ಕಸುಬಿನಲ್ಲಿ ಬಹಳ ನಿಪುಣಾರಾಗಿರುತ್ತಾರೆ.ಇವರಿಗೆ ಕೂತರೂ ನಿಂತರೂ ಈ ಜಗತ್ತಿನ ಪ್ರತಿಯೊಂದು ವಿಚಾರಗಳಲ್ಲೂ ತಪ್ಪುಗಳೇ ಕಾಣಿಸುತಿರುತ್ತದೆ.ಆದರಿಂದ ಇವರು ಯಾರಾದರೂ ತಮ್ಮ ಬದುಕಿನ ಸಾಧನೆಯ ಒಂದು ಹೆಜ್ಜೆಯನ್ನು ಮುಂದಿಟ್ಟರೆ ಸಾಕು ಅವನ ಬದುಕಿನ ಮುಂದಿನ ದಾರಿಗೆ ಮುಳ್ಳುಗಳ ಸುರಿಯಲು ಕಾಯುತಿರುತ್ತಾರೆ.ಇನ್ನೂ ಕೆಲವರೂ ತಮ್ಮ ಸುತ್ತ ಮುತ್ತಲಿನ ಪ್ರತಿಯೊಬ್ಬರನ್ನೂ ಸ್ಪರ್ಧೆಗಳಾಗೇ ನೋಡುತಿರುತ್ತಾರೆ.ಯಾರಾದರೂ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋದರೆ ಸಾಕು ಮತ್ಸರದಿಂದ ಉರಿದು ಅವರ ದಾರಿಗೆ ಬೆಂಕಿ ಸುರಿಯುವ ಕೆಲಸ ಮಾಡುತ್ತಾರೆ.ಇವುಗಳಿಗೆಲ್ಲ ಅವರ ಮನದಲ್ಲಿರುವ ಋಣಾತ್ಮಕ ಯೋಚನೆಗಳು ಕಾರಣವಾಗುತ್ತದೆ.

ಮನುಷ್ಯ ಬದುಕಿನಲ್ಲಿ ಪರಿಸ್ಥಿತಿಗಳನ್ನು ಎದುರಿಸಲು ಅವನಿಗೆ ನೈತಿಕ ಶಿಕ್ಷಣ ಬಹಳವಾಗಿ ಸಹಕಾರಿಯಾಗುತ್ತದೆ. ಇದಕ್ಕಾಗಿಯೇ ಕಾಲದಲ್ಲಿ ಕೂಡು ಕುಟುಂಬದಲ್ಲಿದ್ದ ಹಿರಿಯರು ಮನೆಯಲ್ಲಿ ಮಕ್ಕಳನ್ನು ಕೂರಿಸಿಕೊಂಡು ನೀತಿಕಥೆಗಳನ್ನು ಹೇಳುತಿದ್ದರು.ಇದು ಮನರಂಜನೆಯ ಜೊತೆಗೆ ಮನೋಬಲ ವೃದ್ದಿಸುವ ಒಂದು ಮಾರ್ಗವು ಹೌದು.ಪುರಾಣಗಳ ಪ್ರತಿಯೊಂದು ಪಾತ್ರಕ್ಕೂ ಅದರದೇ ಆದ ಅರ್ಥಗಳಿವೆ.ಕಥೆಯಲ್ಲಿ ಬರುವ ನಾಯಕ ಖಳನಾಯಕರಿಬ್ಬರಿಗೂ ತಮ್ಮದೇ ಆದ ನೈತಿಕ ಮೌಲ್ಯವಿದೆ.ಮುಂದೆ ಬದುಕಿನ ದಾರಿಯಲ್ಲಿ ಕಷ್ಟಗಳು ಬಂದಾಗ ಅವುಗಳು ಯಾವುದೋ ಒಂದು ರೂಪದಲ್ಲಿ ನಮ್ಮ ಯೋಚನೆಗಳಿಗೆ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ ಎಂಬ ನಂಬಿಕೆಯಿತ್ತು. ಹಾಗೆಯೇ ಸಾಮಾನ್ಯವಾಗಿ ಎಲ್ಲ ಕಥೆಗಳಲ್ಲಿ ನಾಯಕ ಸಕಾರಾತ್ಮಕ ಶಕ್ತಿಯನ್ನು ವಿಜ್ರಂಭಿಸಲಾಗುತಿತ್ತು.ಖಳನಾಯಕನ ನಕಾರಾತ್ಮಕ ಶಕ್ತಿಯನ್ನು ವಿಶ್ಲೇಷಿಸಿ ಅದಕ್ಕೊಂದು ಮೌಲ್ಯಯುತವಾದ ಉಪಸಂಹಾರವನ್ನು ಕೊಟ್ಟು ಕಥೆಗಳನ್ನು ಮುಗಿಸುತಿದ್ದರು.ಇದಕ್ಕೆ ಕಾರಣ ಅಲ್ಲಿ ಕೇವಲ ನಾಯಕ ಒಳ್ಳೆಯವನು ಖಳನಾಯಕ ಕೆಟ್ಟವನು ಎಂದು ಬಿಂಬಿಸುವುದಲ್ಲ.ಓದುಗನ ಮನದಲ್ಲಿ ಋಣಾತ್ಮಕ ವಿಷಯಗಳಿಗಿಂತ ಧನಾತ್ಮಕ ಯೋಚನೆಗಳು ಹೆಚ್ಚಾಗಲಿ ಎಂಬ ಕಾರಣ.ಆದರೆ ಇಂದು ಆಧುನಿಕತೆಯ ಮೋಡಿಯಲ್ಲಿ ಈ ಪದ್ದತಿ ಮರೆಯಾಗಿ ಇದಕ್ಕೆ ಪರ್ಯಾವೆಂಬುದೆ ಇಲ್ಲದಂತಾಗಿದೆ.

ಆದ್ದರಿಂದ ನಮ್ಮ ಬದುಕನ್ನು ರೂಪಿಸುವಲ್ಲಿ ನಮ್ಮ ಯೋಚನೆಗಳ ಪಾತ್ರ ಬಹಳ ಮುಖ್ಯವಾಗಿರುತ್ತದೆ.ಹಾಗೆಯೇ ನಮ್ಮ ಕಾರ್ಯವೈಖರಿ  ಕೂಡ.ಬರಿಯ ಯೋಚನೆಗಳು ಕೇವಲ ಕಾಲಹರಣವಾಗುತ್ತದೆ.ಯೋಚನೆಗಳು ಯೋಜನೆಗಳಾಗಿ ಕಾರ್ಯರೂಪಕ್ಕೆ ಬಂದಾಗಲೇ ಅದಕ್ಕೊಂದು ಮೌಲ್ಯ ಸಿಗುವುದು.ನಾವು ಮಾಡುವ ಕೆಲಸ ಶುದ್ದವಾಗಿದ್ದಾಗ ಬೇರೆಯವರ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.ಉಳಿದವರು ಕಂಡಂತೆ ಎಲ್ಲದಕ್ಕೂ ಸಾವಿರ ದೃಷ್ಟಿಕೋನವಿರಬಹುದು.ಆದರೆ ನಾವು ನಮ್ಮ ದೃಷ್ಟಿಕೋನದಿಂದ ಮಾಡಿದ ಕಾರ್ಯವನ್ನು ಜಗತ್ತಿಗೆ ವಿವರಿಸುವಲ್ಲಿ ಸಫಲವಾಗಬೇಕು.ಇದು ಕೂಡ ಇಂದು ಬಹಳ ಸಾಹಸದ ಕೆಲಸ.ನಮ್ಮ ಆಲೋಚನೆಗಳನ್ನು ಯಾವುದೋ ಒಂದು ಕಲೆಯ ರೂಪದಲ್ಲಿ ಸರಳವಾಗಿ ಜಗತ್ತಿಗೆ ವಿವರಿಸಲು ಶಕ್ತನಾದವನು ಖಂಡಿತ ಸಾಧಕನಾಗುತ್ತಾನೆ.ಆದ್ದರಿಂದ  ಯೋಚನೆಗಳು ನಮ್ಮ ಬದುಕಿನ ಬಹು ದೊಡ್ಡ ಶಕ್ತಿ.ನಿಮ್ಮ ಯೋಚನೆಗಳ ಮೌಲ್ಯ ಹೆಚ್ಚಿಸಲು ಅದನ್ನು ಸಾಕಷ್ಟು ಸಕಾರಾತ್ಮಕವನ್ನಾಗಿಸಿ ಹಾಗೂ ಕಾರ್ಯರೂಪಕ್ಕೆ ತರುವ ಪ್ರಯತ್ನ  ಮಾಡಿ.

 

 

Category:Personal Development



ProfileImg

Written by prashna rai