ಮನದೊಳಗಣ ಗೋಡೆ

ProfileImg
29 Apr '24
2 min read


image

ಗೋಡೆಗಳು ಎಷ್ಟು!.ಮನೆಯ ಒಳಗೂ ,ಹೊರಗೂ  ಗೋಡೆಗಳು, ಕಾಂಪೌಂಡ್ ಗೋಡೆಗಳು ... .ಇವುಗಳೆಲ್ಲಾ ಕಣ್ಣಿಗೆ ಕಾಣುವಂತಹವು. ಕಣ್ಣಿಗೆ ಕಾಣದಂತಹ ಗೋಡೆ ಎಂದರೆ ಅದು ಮನದೊಳಗಣ ಗೋಡೆ.
ಎಲ್ಲರ ಮನದೊಳಗಡೆ ಗೋಡೆಯೊಂದಿದೆ. ಆದರೆ ಆ ಗೋಡೆಯನ್ನು ಕಟ್ಟಿದವರಾರು.‌ಆ ಗೋಡೆಗೆ ಇಟ್ಟಿಗೆ ಯಾವುದು?.
ಮನುಷ್ಯ ಇತರ ಪ್ರಾಣಿಗಳಿಗಿಂತ ವಿಭಿನ್ನ. ಪ್ರಾಣಿಗಳಿಗಾದರೋ ನೀತಿ ನಿಯಮಗಳಿಲ್ಲ.ಅವುಗಳಿಗೆ ಯಾವುದು ಖುಶಿಯಾಗುತ್ತದೋ ಅದನ್ನು ಮಾಡುತ್ತವೆ. ಹಾಗೆಂದು ಮನುಷ್ಯ ಪ್ರಾಣಿಯೂ ಮಾಡಲಿಕ್ಕಾಗುತ್ತದೆಯೇ?ಮನ ಬಂದಂತೆ ನಡಕೊಳ್ಳಲು ಆಗುತ್ತದೆಯೇ. ಆಗಲ್ಲ ಯಾಕೆಂದರೆ ಅವರ ನಡವಳಿಕೆಗಳು ,ವರ್ತನೆಗಳು ತಾವು ಭಾಗವಾಗಿರುವ ಸಮಾಜದ ನಿಯಮಗಳಿಗೆ ಒಗ್ಗುವಂತಿರಬೇಕು.
ಬಾಲ್ಯದಲ್ಲಿಯೇ ಮನೆಮಂದಿಯಿಂದ ಸರಿ ತಪ್ಪುಗಳನ್ನು ನಾವು ಕಲಿಯುತ್ತೇವೆ. ಆಮೇಲೆ ಶಾಲೆಯಿಂದ ನಮ್ಮ ವರ್ತನೆಗಳನ್ನು ತಿದ್ದಿಕೊಳ್ಳುತ್ತೇವೆ. ನಮ್ಮ ಮನಸು ಬಯಸಿದರೂ ನಮ್ಮ ಅಂತರಾತ್ಮ ತಪ್ಪು ಮಾಡದಂತೆ ಎಚ್ಚರಿಸುತ್ತಾ ಬರುತ್ತದೆ. ವಯಸ್ಸು ಏರಿದಂತೆಲ್ಲಾ ಮನಸು ಬದಲಾವಣೆಗಳಿಗೆ ಹೊಂದಿಕೊಳ್ಳುವುದಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ 'ಸಮಾಜ ಏನೆನ್ನುತ್ತದೆ'ಎಂದು ಯೋಚಿಸಲು ಸುರುಮಾಡುತ್ತದೆ.ಹಾಗಾಗಿ ಹೆಚ್ಚಿನವರು ತಮ್ಮ ಆಸೆ ಆಕಾಂಕ್ಷೆಗಳನ್ನು ಅದುಮಿಟ್ಟುಕೊಂಡಿರುತ್ತಾರೆ.ಇವುಗಳು ಸಾಧನೆಗಳಿಗೆ ಅಡ್ಡಿಮಾಡುತ್ತವೆ.
ಮನಸಿನಲ್ಲಿರುವ ಅಂಜಿಕೆ ,ಅಳುಕು ,ಕೀಳರಿಮೆಗಳೆಂಬ ಇಟ್ಟಿಗೆಗಳಿಂದ ಮನಸಿನಲ್ಲಿ ಗೋಡೆ ಎದ್ದೇಳುತ್ತದೆ. ಯಾರು ತಮ್ಮ ಅಂಜಿಕೆ,ಅಳುಕು, ಕೀಳರಿಮೆಗಳನ್ನು ಬದಿಗಿಡುತ್ತಾರೋ ಅವರು ಸಾಧಿಸುತ್ತಾರೆ. 
ರವೀಂದ್ರ ನಾಥ ಟಾಗೋರ್ ಹೇಳಿದಂತೆ ಎಲ್ಲಿ ಮನಕಳುಕಿರದೋ .‌ಅಲ್ಲಿ ಸಾಧನೆ ಸಾಧ್ಯ.
ಸುಧಾ ಚಂದ್ರನ್ ಕಾಲಿಲ್ಲದೆಯೂ ನೃತ್ಯಗಾತಿಯಾಗಿಲ್ಲವೇ.ಅರುಣಿಮಾ ಸಾಹಾ ಕಾಲು ತುಂಡಾದರೂ ಎವರೆಸ್ಟ್ ಶಿಖರವನ್ನೇರಲಿಲ್ಲವೇ?
ಮನುಷ್ಯನ ಮನಸಿಗೆ ಅಗಾಧ  ಶಕ್ತಿಯಿದೆ.‌ನಾವು ಕೇವಲ ನಮ್ಮ ಮೆದುಳಿನ  ಶೇಕಡಾ ಎಂಟರಷ್ಟು ಶಕ್ತಿಯನ್ನು ಮಾತ್ರ
ಉಪಯೋಗಿಸುವುದು. ಬಾಕಿ ಉಳಿದ ಶಕ್ತಿಯನ್ನು ಉಪಯೋಗಿಸದೆ ಇರಲು ನಮ್ಮ ಮನಸಿನ ಗೋಡೆಯಲ್ಲದೆ ,ಪರಿಸರ ,ಅನಕ್ಷರತೆ, ವಿತ್ತೀಯ ಕೊರತೆ ಹಾಗೂ ಪರಿಸ್ಥಿತಿ,ಕಟ್ಟುಪಾಡುಗಳು  ಕಾರಣೀಭೂತವಾಗುತ್ತವೆ.
ಯಾರೂ ಮಾಡದ ಸಾಧನೆಯನ್ನು ಮಾಡಬೇಕೆಂಬ ಇಚ್ಛೆಯಿದ್ದರೂ ಅಳುಕು ಇರುತ್ತದೆ. ಹಾಗಾಗಿ ಎಷ್ಟೋ ಜನರು ತಮ್ಮ ಪ್ರತಿಭೆಗಳನ್ನು ತಮ್ಮಲ್ಲೇ ಹುದುಗಿಸಿಟ್ಟುಕೊಂಡಿರುತ್ತಾರೆ. ಇವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು.
ವನಿತೆಯರ ಮನಸಿನಲ್ಲಿ ಗೋಡೆಕಟ್ಟಲು ಸಂಪ್ರದಾಯದ ತಳಹದಿ ,ಕೆಲವೊಮ್ಮೆ ಮೂಢನಂಬಿಕೆಗಳೂ ಕಾರಣ. ಸಂಪ್ರದಾಯದಲ್ಲಿ ಹಲವಾರು ಕಟ್ಟುಪಾಡುಗಳಿರುತ್ತವೆ. ಅವುಗಳಲ್ಲಿ ಹಲವು ಅರ್ಥಹೀನವಾದವುಗಳು. ಆದರೂ 'ಅಪ್ಪ ನೆಟ್ಟ ಆಲದ ಮರ ಅಂತ ನೇಣು ಹಾಕುವ ' ಸಂಪ್ರದಾಯಗಳು ನಮ್ಮನ್ನಾಳುತ್ತವೆ. ಅವುಗಳಲ್ಲಿ ಸ್ತ್ರೀಯರಿಗೆ ಸಂಬಂಧಪಟ್ಟ ಕಟ್ಟುಪಾಡುಗಳು ಹೆಚ್ಚು. ಅದು ಅವರ ಮನೋಬಲದ ಮೇಲೂ ಪರಿಣಾಮ ಬೀರುತ್ತದೆ. ಆದರೆ ಈಗ ಅಂತ ಗೋಡೆಗಳನ್ನು ಕಿತ್ತು ಬಿಸಾಡುವ ದಿಟ್ಟತನ ಮಹಿಳೆಯರಿಗೆ ಬಂದಿದೆ. ಅವುಗಳಲ್ಲಿ ವಿಧವಾ ವಿವಾಹವೂ ಒಂದು. ಮತ್ತೆ ವಿಧವೆಯರು ಹೂ ಮುಡಿಯಬಾರದು, ಕುಂಕುಮ ಇಟ್ಟುಕೊಳ್ಳಬಾರದು ಎಂಬ ಕಟ್ಟುಪಾಡುಗಳು ಈಗ ಮರೆಯಾಗುತ್ತಾ ಇವೆ.
ವಿವೇಚನೆ ಇದ್ದ ವಿದ್ಯಾವಂತ ಮಹಿಳೆಯರು ಈಗ ಮನಸಿನಲ್ಲಿ ಕಟ್ಟಿರುವ  ಅನಗತ್ಯ ಗೋಡೆಗಳನ್ನು ಕಿತ್ತೆಸೆಯುವುದರಲ್ಲಿ ಸಶಕ್ತರು.
ನಮ್ಮ ಶಿಕ್ಷಣವೂ ಮಕ್ಕಳಲ್ಲಿ ತಾರ್ಕಿಕ ಚಿಂತನೆಯನ್ನು ಹುಟ್ಟು ಹಾಕಬೇಕು.
ಅವರಲ್ಲಿರುವ ಅಳುಕುಗಳನ್ನು ತೊಡೆದುಹಾಕಬೇಕು. 
ಇನ್ನೊಂದು ರೀತಿಯ ಗೋಡೆ ಇದೆ. ಅದು ಪೂರ್ವಾಗ್ರಹ ಎಂಬ ಗೋಡೆ . ಯಾರೋ ಹೇಳಿದ ಮಾತನ್ನು ನಂಬಿ ಒಬ್ಬ ವ್ಯಕ್ತಿ ಯಾ ವಿಷಯದ ಬಗ್ಗೆ ನಾವು ಒಂದು ಅಭಿಪ್ರಾಯ ಬೆಳೆಸಿಕೊಳ್ಳುತ್ತೇವೆ.ಆ ಅಭಿಪ್ರಾಯ. ನಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ. ನಾವು ತರ್ಕಬದ್ಧವಾಗಿ ವಿವೇಚನೆ ಮಾಡಿದರೆ ಪೂರ್ವಾಗ್ರಹ ಎಂಬ ಗೋಡೆಯನ್ನು ಕೆಡವಬಹುದು.ಅದರ ಅಗತ್ಯವೂ ಇದೆ.ಏನಂತೀರೀ?


✍️ ಪರಮೇಶ್ವರಿ ಭಟ್ 
   

 

 

 

 




ProfileImg

Written by Parameshwari Bhat