ನಮ್ಮ ಸೌರವ್ಯೂಹದಲ್ಲಿ ಒಟ್ಟು ಎಂಟು ಗ್ರಹಗಳಿರುವುದು ಎಲ್ಲರಿಗೂ ಗೊತ್ತಿದೆ. ಬುಧನಿಂದ ಶುಕ್ರ, ಭೂಮಿ ಹಾಗೂ ಮಂಗಳನವರೆಗೆ ನಾಲ್ಕು ಗಟ್ಟಿನೆಲದ ಗ್ರಹಗಳೂ ನಂತರ ಗುರು, ಶನಿ ಎಂಬೆರಡು ಅನಿಲದೈತ್ಯ ಗ್ರಹಗಳೂ ಆಮೇಲೆ ಯುರೇನಸ್, ನೆಪ್ಚೂನ್ ಎಂಬ ಹಿಮದೈತ್ಯ ಗ್ರಹಗಳೂ ಸೂರ್ಯನನ್ನು ಸುತ್ತುತ್ತಿವೆ. ಕೊನೆಯದಾಗಿ ೧೯೩೦ರಲ್ಲಿ ಪತ್ತೆಯಾಗಿ ೨೦೦೬ರವರೆಗೂ ಗ್ರಹವೆಂಬ ಪಟ್ಟ ಹೊತ್ತು ಸೂರ್ಯನನ್ನು ಸುತ್ತುತ್ತಿದ್ದ ಪ್ಲೂಟೋವನ್ನು ಗ್ರಹಗಳ ಪಟ್ಟಿಯಿಂದ ಪದಚ್ಯುತಗೊಳಿಸಲಾಯಿತು. ಇರುವ ಗ್ರಹಗಳನ್ನು ಪತ್ತೆಹಚ್ಚುವುದು ನಿಜಕ್ಕೂ ರೋಚಕವೇ ಸರಿ. ಆದರೆ ಇಲ್ಲದ ಗ್ರಹಕ್ಕಾಗಿ ಹುಡುಕಾಟ ನಡೆಸುವುದಿದೆಯಲ್ಲ? ಅದು ಇನ್ನೂ ರೋಚಕ.
ನೆಪ್ಚೂನ್ ಮತ್ತು ಪ್ಲೂಟೋಗಳ ಪತ್ತೆಯಾದದ್ದು ನ್ಯೂಟನ್ನನ ಗುರುತ್ವಬಲದ ನಿಯಮಗಳ ದಿಗ್ವಿಜಯ ಎಂದು ಬಣ್ಣಿಸಲಾಗುತ್ತಿದೆ. ಯುರೇನಸ್ ಗ್ರಹದ ಚಲನೆಯಲ್ಲಿ ಏನೋ ವ್ಯತ್ಯಾಸ ಇರುವುದನ್ನು ಗಮನಿಸಿದ ಅರ್ಬಾನ್ ಡಿ ಲೆವೆರಿಯರ್ ಅದಕ್ಕೆ ಹೊರಗಿನಿಂದ ನಮ್ಮ ಕಣ್ಣಿಗೆ ಅಗೋಚರವಾದ ಬೇರಾವುದೋ ಕಾಯವೊಂದರ ಸೆಳೆತವೇ ಕಾರಣ ಎಂದು ಊಹಿಸಿದ. ಇದಕ್ಕೆ ನ್ಯೂಟನ್ನನ ಗುರುತ್ವ ನಿಯಮದ ಆಧಾರದಿಂದ ಲೆಕ್ಕಹಾಕಿ ಅದಕ್ಕಿಂತ ಆಚೆ ಇರಬಹುದಾದ ಗ್ರಹದ ಲಕ್ಷಣಗಳನ್ನು ಊಹಿಸಿದ. ಕೊನೆಗೆ ೧೮೪೬ರಲ್ಲಿ ಅದನ್ನು ಪತ್ತೆಹಚ್ಚಿದಾಗ ಅದು ಖಗೋಳವಿಜ್ಞಾನ ಜಗತ್ತಿನ ಮಹತ್ವದ ಸಾಧನೆಯಾಯಿತು. ಇದೇ ಲೆವೆರಿಯರ್ ಸೂರ್ಯನಿಗೆ ಅತಿ ಸಮೀಪದ ಗ್ರಹವಾದ ಬುಧನ ಚಲನೆಯಲ್ಲಿ ವ್ಯತ್ಯಾಸಗಳನ್ನು ಗುರುತಿಸಿ ಅದಕ್ಕೂ ಬುಧನಿಗಿಂತ ಸಮೀಪದಲ್ಲಿ ಸೂರ್ಯನನ್ನು ಸುತ್ತುತ್ತಿರುವ ಬೇರಾವುದೋ ಒಂದು ಗ್ರಹವೇ ಕಾರಣ ಎಂದು ಭಾವಿಸಿದ. ಅದಕ್ಕಾಗಿ ಹುಡುಕಾಟ ಆರಂಭವಾಯಿತು.
ಸೂರ್ಯನಿಗೆ ಅಷ್ಟೊಂದು ಸಮೀಪದಲ್ಲಿದೆ ಎಂದು ಭಾವಿಸಲಾಗಿದ್ದ ಆ ಗ್ರಹವನ್ನು ಪತ್ತೆಹಚ್ಚುವುದೇನೂ ಸುಲಭವಿರಲಿಲ್ಲ. ಬುಧಗ್ರಹವನ್ನೇ ನೋಡುವುದು ಸುಲಭವಲ್ಲ. ಮುಂಜಾನೆ ಮತ್ತು ಸಂಜೆಯ ವೇಳೆಗಳಲ್ಲಷ್ಟೇ ಬುಧನ ದರ್ಶನ, ಅದರಲ್ಲೂ ಸೂರ್ಯನಿಂದ ಕೇವಲ ೨೭ ಡಿಗ್ರಿ ಅಂತರದಲ್ಲಷ್ಟೇ ಲಭ್ಯ. ಸೂರ್ಯನ ಪಕ್ಕದಲ್ಲೇ ಇರುವುದರಿಂದ ಅದರ ಅಗಾಧವಾದ ಕಾಂತಿಯ ನಡುವೆ ಬುಧನನ್ನು ಕಾಣುವುದೇ ಕಷ್ಟ. ಆದ್ದರಿಂದಲೇ ಸೂರ್ಯೋದಯಕ್ಕೆ ಕೆಲವೇ ನಿಮಿಷಗಳ ಮೊದಲಷ್ಟೇ ಅದನ್ನು ಕಾಣಬಹುದು. ಜೊತೆಗೆ ಸೂರ್ಯಾಸ್ತವಾದಮೇಲೆ ಕೂಡ ಸ್ವಲ್ಪ ಸಮಯದವರೆಗೆ ಅದರ ದರ್ಶನ ಲಭ್ಯವಿದೆ. ಹಾಗಿರುವಾಗ ಬುಧನಿಗಿಂತ ಹತ್ತಿರವಿರುವ ಮತ್ತು ಬಹುಶಃ ಅದಕ್ಕಿಂತ ಚಿಕ್ಕದಾಗಿಯೂ ಇರುವ ಗ್ರಹವನ್ನು ಕಾಣುವುದಾದರೂ ಹೇಗೆ? ಯಾವುದೇ ಪ್ರಬಲ ದೂರದರ್ಶಕಗಳ ದೃಷ್ಟಿಗೂ ಅದು ಎಟುಕುವಂತಿರಲಿಲ್ಲ.
೧೮೪೦ರಲ್ಲಿ ಪ್ಯಾರಿಸ್‌ನ ಖಗೋಳ ವೀಕ್ಷಣಾಲಯದ ನಿರ್ದೇಶಕನಾಗಿದ್ದ ಫ್ರಾಂಕೋಯಿಸ್ ಅರಾಗೋ ಎಂಬಾತ ಬುಧನ ಚಲನೆಯನ್ನು ಅಭ್ಯಾಸ ಮಾಡುವಂತೆ ಲೆವೆರಿಯರ್‌ಗೆ ಸಲಹೆ ನೀಡಿದ. ಲೆವೆರಿಯರ್ ನ್ಯೂಟನ್ನನ ಗುರುತ್ವ ಮತ್ತು ಚಲನೆಯ ನಿಯಮಗಳ ಆಧಾರದ ಮೇಲೆ ಬುಧನ ಚಲನೆಯನ್ನು ಅಭ್ಯಾಸಮಾಡಿ ೧೮೪೩ರಲ್ಲಿ ಅವನ ಸಿದ್ಧಾಂತವನ್ನು ಪ್ರತಿಪಾದಿಸಿದ. ಆ ವರ್ಷ ಬುಧ ಸಂಕ್ರಮಣ (ಸೂರ್ಯನಿಗೆ ಅಡ್ಡಲಾಗಿ ಬುಧ ಹಾದುಹೋದಾಗ ಸೂರ್ಯನ ಪ್ರಕಾಶಮಾನವಾದ ಬಿಂಬದ ಮೇಲೆ ಬುಧ ಕಪ್ಪುಚುಕ್ಕೆಯಂತೆ ಕಾಣುತ್ತದೆ. ಇದನ್ನೇ ಬುಧ ಸಂಕ್ರಮಣ ಎನ್ನುತ್ತಾರೆ) ನಡೆದಾಗ ಅದರ ನೆರವಿನಿಂದ ತನ್ನ ಸಿದ್ಧಾಂತವನ್ನು ಪರೀಕ್ಷಿಸುವುದು ಲೆವೆರಿಯರ್‌ನ ಉದ್ದೇಶವಾಗಿತ್ತು. ಆದರೆ ಇದು ತೋರಿಸಿದ ಫಲಿತಾಂಶಗಳು ಅವನ ಲೆಕ್ಕಾಚಾರಕ್ಕೆ ತಾಳೆಯಾಗುವಂತಿರಲಿಲ್ಲ. ಇದರ ಅರ್ಥ ಎರಡೇ ಎರಡು- ಒಂದೋ ನ್ಯೂಟನ್ನನ ನಿಯಮವೇ ತಪ್ಪು, ಅಥವಾ ಲೆವೆರಿಯರ್‌ನ ಲೆಕ್ಕಾಚಾರ ತಪ್ಪು! ಇವೆರಡರಲ್ಲಿ ಯಾವುದು ತಪ್ಪು, ಯಾವುದು ಸರಿ ಎಂದು ಹೇಗೆ ಕಂಡುಹಿಡಿಯುವುದು? ಹತ್ತಿರ ಹತ್ತಿರ ಎರಡು ಶತಮಾನಗಳ ಹಿಂದೆ ಪ್ರತಿಪಾದಿಸಲ್ಪಟ್ಟ ಮತ್ತು ಅದುವರೆಗಿನ ಎಲ್ಲ ಪರೀಕ್ಷೆಗಳಲ್ಲೂ ಉತ್ತೀರ್ಣವಾಗಿದ್ದ ನ್ಯೂಟನ್ನನ ನಿಯಮಗಳನ್ನು ಸಂದೇಹಿಸಲು ಕಾರಣವೇ ಇರಲಿಲ್ಲ. ಹಾಗಾದರೆ ಲೆವೆರಿಯರ್‌ನ ಲೆಕ್ಕಾಚಾರವೇ ತಪ್ಪಾ?
ಲೆವೆರಿಯರ್‌ನ ಲೆಕ್ಕಾಚಾರಗಳ ಆಧಾರದ ಮೇಲೆ ಹುಡುಕಿದಾಗ ೧೮೪೬ರಲ್ಲಿ ನೆಪ್ಚೂನ್ ಗ್ರಹ ಪತ್ತೆಯಾಯಿತು. ಹಾಗಾಗಿ ಅವನ ಲೆಕ್ಕಾಚಾರಗಳನ್ನು ಸಹ ಸಂಶಯಿಸಲು ಆಸ್ಪದವಿರಲಿಲ್ಲ. ಮತ್ತೆ ಲೆವೆರಿಯರ್ ೧೮೫೯ರಲ್ಲಿ ಹಿಂದಿನ ಹದಿನಾಲ್ಕು ಬುಧ ಸಂಕ್ರಮಣಗಳನ್ನೂ ಅದರ ಅಂದಿನ ಚಲನೆಯ ಪಥವನ್ನೂ ಲೆಕ್ಕಹಾಕಿ ಅದರ ಚಲನೆಯಲ್ಲಿದ್ದ ನ್ಯೂನತೆಗಳನ್ನು ಪತ್ತೆಹಚ್ಚಿದ. ಪ್ರತಿಸಲವೂ ಅದರ ಪಥದಲ್ಲಿ ಸೂರ್ಯನ ಸಮೀಪದ ಬಿಂದುವಿನಲ್ಲಿದ್ದಾಗ ಅದರ ಸ್ಥಾನದಲ್ಲಿ ಒಂದು ಶತಮಾನಕ್ಕೆ ೪೩ ಆರ್ಕ್ಸೆಕೆಂಡುಗಳಷ್ಟು ವ್ಯತ್ಯಾಸ ಉಂಟಾಗುತ್ತಿದ್ದುದನ್ನು ಪತ್ತೆಹಚ್ಚಿದ. ಒಂದು ಆರ್ಕ್ಸೆಕೆಂಡ್ ಎಂದರೆ ಒಂದು ಆರ್ಕ್ಮಿನಿಟ್‌ನ ಅರವತ್ತರಲ್ಲೊಂದು ಭಾಗ. ಹಾಗೇ ಒಂದು ಆರ್ಕ್ಮಿನಿಟ್ ಎಂದರೆ ಒಂದು ಡಿಗ್ರಿಯ ಅರವತ್ತರಲ್ಲೊಂದು ಭಾಗ. ಈ ವ್ಯತ್ಯಾಸಕ್ಕೆ ಬುಧನಿಗಿಂತ ಒಳಗಿನ ಪಥದಲ್ಲಿ ಸೂರ್ಯನನ್ನು ಸುತ್ತುತ್ತಿರುವ ಗ್ರಹವೊಂದರ ಪ್ರಭಾವವೇ ಕಾರಣ ಎಂದು ಲೆವೆರಿಯರ್ ತರ್ಕಿಸಿದ. ಅದಕ್ಕೆ ವಲ್ಕನ್ ಎಂಬ ಹೆಸರನ್ನೂ ಇಟ್ಟ. ಈ ಹೆಸರು (ಅಂಥದ್ದೊOದು ಗ್ರಹ ನಿಜಕ್ಕೂ ಇದ್ದಿದ್ದರೆ) ಅದಕ್ಕೆ ಅನ್ವರ್ಥನಾಮವೇ ಆಗಿತ್ತು. ಏಕೆಂದರೆ ವಲ್ಕನ್ ಎಂದರೆ ಅಗ್ನಿದೇವತೆಯ ಹೆಸರು. ಸೂರ್ಯನಿಗೆ ಅಷ್ಟೊಂದು ಹತ್ತಿರದಲ್ಲಿದ್ದ ಗ್ರಹಕ್ಕೆ ಬೆಂಕಿಯ ಹೆಸರು ಸಮಂಜಸವೇ ಆಗುತ್ತದೆ ಅಲ್ಲವೇ?
೧೮೫೯ರ ಮಾರ್ಚ್ ೨೬ರಂದು ಪ್ಯಾರಿಸ್‌ನಲ್ಲಿ ತನ್ನದೇ ಆದ ವೀಕ್ಷಣಾಲಯವೊಂದನ್ನು ಸ್ಥಾಪಿಸಿಕೊಂಡಿದ್ದ ಲೆಸ್ಕರ್‌ಬಾಲ್ಟ್ ಎಂಬಾತ ಸೂರ್ಯನ ಮೇಲೆ ಕಪ್ಪು ಚುಕ್ಕೆಯೊಂದನ್ನು ಕಂಡ. ಮೊದಲಿಗೆ ಆತ ಅದನ್ನು ಒಂದು ಸೌರಕಲೆ ಎಂದು ಭಾವಿಸಿ ಉಪೇಕ್ಷೆ ಮಾಡಿದ. ಆದರೆ ಸ್ವಲ್ಪ ಹೊತ್ತಿನ ಬಳಿಕ ಆ ಕಲೆ ಚಲಿಸುತ್ತಿದ್ದುದನ್ನು ಗಮನಿಸಿದ. ತನಗೆ ಅಂದು ಲಭ್ಯವಿದ್ದ ಉಪಕರಣಗಳನ್ನೇ ಬಳಸಿ ಆತ ಸೂರ್ಯಬಿಂಬದ ಮೇಲೆ ಕಂಡುಬOದ ಆ ಚುಕ್ಕೆಯ ಸಂಕ್ರಮಣದ ಕಾಲಾವಧಿಯನ್ನು ಅಳೆದ. ತನ್ನ ಹಳೆಯ ಲೋಲಕದ ಗಡಿಯಾರದ ನೆರವಿನಿಂದ ಅದರ ಕಾಲಾವಧಿಯನ್ನು ಒಂದು ಗಂಟೆ ಹದಿನೇಳು ನಿಮಿಷ ಒಂಬತ್ತು ಸೆಕೆಂಡ್‌ಗಳೆOದು ಅಳೆದ. ಈ ಹಿಂದೆ ೧೮೪೫ರಲ್ಲಿ ಬುಧ ಸಂಕ್ರಮಣವನ್ನು ವೀಕ್ಷಿಸಿದ್ದ ಆತ ಇದನ್ನು ತನಗೆ ಗೊತ್ತಿಲ್ಲದ ಯಾವುದೋ ಒಂದು ಹೊಸ ಗ್ರಹದ ಸಂಕ್ರಮಣವೆOದು ಭಾವಿಸಿದ. ಲೆವೆರಿಯರ್ ಅವನ ವಿವರಣೆಯಿಂದ ತೃಪ್ತನಾಗಿ ಲೆಸ್ಕರ್‌ಬಾಲ್ಟ್ ಹೊಸ ಗ್ರಹವನ್ನು ನೋಡಿದ್ದಾನೆಂದು ಭಾವಿಸಿದ. ೧೮೬೦ರ ಜನವರಿ ಎರಡರಂದು ಆತ ಹೊಸ ಗ್ರಹ ವಲ್ಕನ್ ಪತ್ತೆಯಾಗಿದೆಯೆಂದು ಅಧಿಕೃತವಾಗಿ ಘೋಷಿಸಿದ. ಅಲ್ಲದೆ ಲೆಸ್ಕರ್‌ಬಾಲ್ಟ್ನ ವೀಕ್ಷಣೆಗಳ ಆಧಾರದಲ್ಲಿ ಲೆವೆರಿಯರ್ ಈ ಗ್ರಹದ ಪಥವನ್ನು ಲೆಕ್ಕಹಾಕಿದ. ಅವನ ಪ್ರಕಾರ ವಲ್ಕನ್ ಸೂರ್ಯನನ್ನು ೨.೧ ಕೋಟಿ ಕಿಲೋಮೀಟರ್ ದೂರದಲ್ಲಿ ಪರಿಭ್ರಮಿಸುತ್ತದೆ ಹಾಗೂ ಅದು ೧೯ ದಿನ, ೧೭ ತಾಸುಗಳಲ್ಲಿ ಸೂರ್ಯನ ಸುತ್ತ ಒಂದು ಪ್ರದಕ್ಷಿಣೆಯನ್ನು ಮುಗಿಸುತ್ತದೆ ಎಂದು ಹೇಳಿದ. ಅದಾದ ಮೇಲೆ ಬೇರೆಬೇರೆ ಕಡೆಗಳಿಂದ ಹವ್ಯಾಸಿ ಖಗೋಳ ವೀಕ್ಷಕರು ತಾವು ಸಂಕ್ರಮಣಗಳನ್ನು ನೋಡಿದ್ದಾಗಿ ಲೆವೆರಿಯರ್‌ಗೆ ಪತ್ರ ಬರೆಯತೊಡಗಿದರು. ಅದರಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂದು ಖಚಿತಪಡಿಸಿಕೊಳ್ಳುವುದೇ ಕಷ್ಟವಾಯಿತು.
ಇನ್ನೊಬ್ಬ ಫ್ರೆಂಚ್ ಖಗೋಳಶಾಸ್ತçಜ್ಞ ಎಮ್ಯಾನ್ಯುಯೆಲ್ ಲಿಯಾಸ್ ಎಂಬಾತ ಲೆಸ್ಕರ್‌ಬಾಲ್ಟ್ ಸಂಕ್ರಮಣವನ್ನು ನೋಡಿದನೆನ್ನಲಾದ ಅವಧಿಯಲ್ಲೇ ಅವನಿಗಿಂತ ಪ್ರಬಲವಾದ ದೂರದರ್ಶಕದಿಂದ ತಾನೂ ಸೂರ್ಯನನ್ನು ನೋಡಿದ್ದಾಗಿಯೂ ಆ ಸಂದರ್ಭದಲ್ಲಿ ತನಗೆ ಏನೂ ಕಾಣಲಿಲ್ಲವೆಂದೂ ಪ್ರತಿಪಾದಿಸಿದ. ಹಾಗಾಗಿ ಲೆಸ್ಕರ್‌ಬಾಲ್ಟ್ ನೋಡಿದ್ದು ಏನು ಎಂಬ ಪ್ರಶ್ನೆ ಎದ್ದುನಿಂತಿತು. ನಿಜಕ್ಕೂ ವಲ್ಕನ್ ಇದೆಯೇ ಇಲ್ಲವೇ ಎಂಬ ಪ್ರಶ್ನೆ ಭೂತಾಕಾರವಾಗಿ ಎದ್ದುನಿಂತಿತು. ಬೇರೆಬೇರೆ ದೇಶಗಳಿಂದ ವಿಜ್ಞಾನಿಗಳು ಅದಕ್ಕಾಗಿ ಹುಡುಕಾಟ ಆರಂಭಿಸಿದರು.
೧೮೭೭ರಲ್ಲಿ ಲೆವೆರಿಯರ್ ನಿಧನನಾದಾಗ ತಾನು ವಲ್ಕನ್ ಎಂಬ ಹೊಸ ಗ್ರಹವನ್ನು ಕಂಡುಹಿಡಿದಿದ್ದೇನೆOದೇ ನಂಬಿದ್ದ. ಆದರೆ ವಾಸ್ತವವೆಂದರೆ ಅದುವರೆಗೆ ಯಾರೂ ಅದರ ಅಸ್ತಿತ್ವವನ್ನು ಖಚಿತಪಡಿಸಿರಲಿಲ್ಲ. ಬಾಹ್ಯಾಕಾಶ ನೌಕೆಗಳಾಗಲೀ ರಾಕೆಟ್‌ಗಳಾಗಲೀ ಅಥವಾ ಕೃತಕ ಉಪಗ್ರಹಗಳಾಗಲೀ ಇರದಿದ್ದ ಆ ಕಾಲದಲ್ಲಿ ಸೂರ್ಯನಿಗೆ ಅಷ್ಟೊಂದು ಸಮೀಪದಲ್ಲಿದ್ದ ಕಾಯವೊಂದನ್ನು ಕಂಡುಹಿಡಿಯುವುದು ಭಾರೀ ಸವಾಲೇ ಆಗಿತ್ತು. ಅವನ ನಿಧನಾನಂತರ ಅದನ್ನು ಕಂಡುಹಿಡಿಯುವ ಪ್ರಯತ್ನಗಳೂ ಚುರುಕುತನ ಕಳೆದುಕೊಂಡವು. ಅಂಥದ್ದೊOದು ಗ್ರಹ ಇರುವುದೇ ಸುಳ್ಳೆಂಬ ಸಂಶಯ ಎಲ್ಲರಲ್ಲೂ ಮೂಡತೊಡಗಿತ್ತು. ಹಾಗಾಗಿ ಅದಕ್ಕಾಗಿ ಹುಡುಕುವುದು ವೃಥಾ ಕಾಲಹರಣವಷ್ಟೇ ಎಂಬ ಅನಿಸಿಕೆ ಅನೇಕರಲ್ಲಿ ಉಂಟಾಗಿತ್ತು.
ಹಾಗಾದರೆ ಬುಧನ ಕಕ್ಷೆಯಲ್ಲಿ ಕಂಡುಬರುತ್ತಿದ್ದ ವ್ಯತ್ಯಾಸಕ್ಕೆ ಕಾರಣವೇನು? ಈ ಪ್ರಶ್ನೆಗೆ ನಿಖರವಾದ ಉತ್ತರ ಲಭಿಸಲು ೧೯೧೫ರವರೆಗೆ ಕಾಯಬೇಕಾಯಿತು. ಆ ವರ್ಷ ಜಗತ್ಪçಸಿದ್ಧ ಭೌತವಿಜ್ಞಾನಿ ಸರ್ ಆಲ್ಬರ್ಟ್ ಐನ್‌ಸ್ಟೀನ್ ತನ್ನ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತವನ್ನು ಪ್ರತಿಪಾದಿಸಿದ. ಆ ಸಿದ್ಧಾಂತದಲ್ಲಿ ಗುರುತ್ವದ ಬಗ್ಗೆ ಆತ ಹೊಸ ವ್ಯಾಖ್ಯಾನವನ್ನೇ ನೀಡಿದ. ಅದರಿಂದ ನ್ಯೂಟನ್ನನ ಗುರುತ್ವ ನಿಯಮ ಹಾಗೂ ಚಲನೆಯ ನಿಯಮಗಳು ಸಂಪೂರ್ಣ ತಪ್ಪಲ್ಲದಿದ್ದರೂ ಬೆಳಕಿನ ವೇಗಕ್ಕೆ ಸಮೀಪವಾದ ಭಾರೀ ವೇಗಗಳಲ್ಲಿ ಅವನ ನಿಯಮ ತಪ್ಪಾಗುತ್ತದೆ ಎಂಬುದು ಕಂಡುಬOದಿತು. ಅದರಿಂದ ಬುಧನ ಕಕ್ಷೆಯಲ್ಲಿದ್ದ ವ್ಯತ್ಯಾಸವನ್ನು ಸಮರ್ಪಕವಾಗಿ ವಿವರಿಸುವುದು ಸಾಧ್ಯವಾಯಿತು. ಹಾಗಾಗಿ ವಲ್ಕನ್ ಎಂಬ ಕಾಲ್ಪನಿಕ ಗ್ರಹದ ಅಸ್ತಿತ್ವದ ಕುರಿತು ಇದ್ದ ಚರ್ಚೆಗಳಿಗೆ ಅಂತಿಮ ತೆರೆ ಎಳೆದಂತಾಯಿತು.
ವಲ್ಕನ್‌ನ ನಾಸ್ತಿತ್ವ ಸಾಬೀತಾದಮೇಲೆ ಬುಧನೇ ಸೂರ್ಯನಿಗೆ ಅತ್ಯಂತ ಸಮೀಪದ ಗ್ರಹ ಎಂಬುದು ಖಚಿತವಾಯಿತು. ಹಾಗಾದರೆ ಬುಧನಿಗಿಂತ ಹತ್ತಿರದ ಕಕ್ಷೆಯಲ್ಲಿ ಬೇರಾವುದೇ ಕಾಯವೂ ಇಲ್ಲವೇ? ನಮಗೆ ಮಂಗಳ ಮತ್ತು ಗುರುಗ್ರಹಗಳ ನಡುವಿನ ಕಕ್ಷೆಯಲ್ಲಿ ಕ್ಷÄದ್ರಗ್ರಹಪಟ್ಟಿ ಎಂಬ ಪಟ್ಟಿ ಇರುವುದೂ ಅದರಲ್ಲಿ ಕೋಟ್ಯಾಂತರ ಕ್ಷÄದ್ರಗ್ರಹಗಳಿರುವುದೂ ಗೊತ್ತಿದೆ. ಆದರೆ ಅದರರ್ಥ ಅಲ್ಲಿ ಬಿಟ್ಟು ಬೇರೆಲ್ಲೂ ಕ್ಷÄದ್ರಗ್ರಹಗಳು ಇಲ್ಲವೇ ಇಲ್ಲವೆಂದಲ್ಲ. ಆ ಪಟ್ಟಿಯಲ್ಲಿ ಅವು ಅಸಂಖ್ಯವಾಗಿವೆ ಅಷ್ಟೇ. ಅಲ್ಲೊಂದು ಇಲ್ಲೊಂದು ಕ್ಷÄದ್ರಗ್ರಹ ಆ ಪಟ್ಟಿಯ ಹೊರತಾಗಿಯೂ ಬೇರೆ ಕಡೆ ಸೂರ್ಯನನ್ನು ಸುತ್ತುತ್ತಿವೆ. ಹೀಗೆ ಬುಧನ ಒಳಗಿನ ಕಕ್ಷೆಯಲ್ಲೂ ಅಂಥ ಕಾಯಗಳು ಇರಬಹುದಲ್ಲವೇ? ಇದ್ದರೂ ನಾವು ಇಂದು ನಮಗೆ ಲಭ್ಯವಿರುವ ಅತ್ಯಾಧುನಿಕ ಸಲಕರಣೆಗಳ ನೆರವಿನಿಂದಲೂ ಪತ್ತೆಹಚ್ಚುವುದು ಕಷ್ಟವಿದೆ. ಏಕೆಂದರೆ ಕಣ್ಣು ಕೋರೈಸುವ ಪ್ರಕಾಶಮಾನವಾದ ಸೂರ್ಯನ ಪಕ್ಕದಲ್ಲಿರುವ ಕೆಲವೇ ನೂರು ಮೀಟರ್ ಅಥವಾ ಹೆಚ್ಚೆಂದರೆ ಹತ್ತಾರು ಕಿಲೋಮೀಟರ್ ವ್ಯಾಸದ ಕುಬ್ಜ ಬಂಡೆಗಳನ್ನು ಪತ್ತೆಹಚ್ಚುವುದೆಂದರೆ ಹುಲ್ಲುಬಣವೆಯ ನಡುವೆ ಬಿದ್ದ ಸೂಜಿಯನ್ನು ಹುಡುಕುವುದಕ್ಕಿಂತ ಕಷ್ಟದ ಕೆಲಸ. ಹೀಗೆ ಇರಬಹುದೆಂದು ಭಾವಿಸಲಾದ ಕಾಯಗಳನ್ನು ವಲ್ಕನಾಯ್ಡ್ಗಳೆಂದು ಹೆಸರಿಸಿದ್ದಾರೆ.
ಸೂರ್ಯನ ಸಮೀಪಕ್ಕೆ ಯಾವುದೇ ನೌಕೆಯನ್ನು ಕಳುಹಿಸಬೇಕಾದರೆ ಅದರ ಅಗಾಧವಾದ ತಾಪಮಾನವೇ ದೊಡ್ಡ ಸವಾಲು. ಸಾವಿರ ಡಿಗ್ರಿ ಸೆಲ್ಷಿಯಸ್ ಮೀರುವ ಉಷ್ಣತೆಯಲ್ಲೂ ಕೆಡದೆ ಕಾರ್ಯನಿರ್ವಹಿಸುವಂಥ ಉಪಕರಣಗಳು ಬೇಕಾಗುತ್ತವೆ. ಅದು ಸುಲಭದ ಕೆಲಸವಲ್ಲ. ಆದರೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾ ಅಂಥದ್ದೊOದು ಸಾಹಸಕ್ಕೆ ಕೈಹಾಕಿದೆ. ವಿಶೇಷವಾಗಿ ತಯಾರಿಸಲಾದ ಇಂಗಾಲದ ಗುರಾಣಿಗಳು ಸೂರ್ಯನ ಅಧಿಕ ತಾಪದಿಂದ ನೌಕೆಗೆ ರಕ್ಷಣೆ ನೀಡುತ್ತವೆ. ಮೊದಲಿಗೆ ಸೋಲಾರ್ ಪ್ರೋಬ್ ಪ್ಲಸ್ ಎಂದು ಹೆಸರಿಸಲಾಗಿದ್ದ ಈ ನೌಕೆಯನ್ನು ಈಗ ಖ್ಯಾತ ಖಗೋಳಶಾಸ್ತçಜ್ಞ ಯೂಜೀನ್ ಪಾರ್ಕರ್ ಅವರ ನೆನಪಿಗಾಗಿ ಪಾರ್ಕರ್ ಸೋಲಾರ್ ಪ್ರೋಬ್ ಎಂದು ಹೆಸರಿಸಲಾಗಿದೆ. ಬದುಕಿರುವ ವ್ಯಕ್ತಿಯೊಬ್ಬನ ಹೆಸರಿನಲ್ಲಿ ವ್ಯೋಮನೌಕೆಯೊಂದನ್ನು ಹೆಸರಿಸಿರುವುದು ಇದೇ ಮೊದಲು. ಈ ನೌಕೆಯ ಮುಖ್ಯ ಉದ್ದೇಶ ಸೂರ್ಯನ ಕರೋನಾವನ್ನು ಅಭ್ಯಾಸಮಾಡುವುದು ಹಾಗೂ ಸೌರಬಿರುಗಾಳಿ ಮತ್ತು ಸೂರ್ಯನ ಕಾಂತಕ್ಷೇತ್ರಗಳನ್ನು ಅಭ್ಯಾಸಮಾಡುವುದು. ೨೦೧೮ರಲ್ಲಿ ಹಾರಿಬಿಡಲು ಉದ್ದೇಶಿಸಲಾಗಿರುವ ಈ ನೌಕೆ ೨೦೨೪ರಲ್ಲಿ ಸೂರ್ಯನನ್ನು ಕೇವಲ ಆರು ದಶಲಕ್ಷ ಕಿಲೋಮೀಟರ್‌ಗಳಷ್ಟು ಸಮೀಪದಲ್ಲಿ ಸಂದರ್ಶಿಸಲಿದೆ. ವಲ್ಕನ್‌ಗಳನ್ನು ಕಂಡುಹಿಡಿಯುವುದು ಇದರ ಉದ್ದೇಶವೇನೂ ಆಗಿಲ್ಲವಾದರೂ ತನ್ನ ದಾರಿಯಲ್ಲಿ ಯಾವುದಾದರೂ ವಲ್ಕನಾಯ್ಡ್ಗಳನ್ನು (ನಿಜಕ್ಕೂ ಅಂಥ ಕಾಯಗಳು ಇದ್ದರೆ) ಪತ್ತೆಹಚ್ಚುವ ಸಾಧ್ಯತೆಗಳೂ ಇಲ್ಲದಿಲ್ಲ. ಆ ದಿನಕ್ಕಾಗಿ ಕಾಯೋಣವೇ?
0 Followers
0 Following