ಕರುನಾಡಿನ ಜ್ಞಾನ ಜ್ಯೋತಿ ಬಸವಣ್ಣ

ಕರ್ನಾಟಕದ ಸಾಂಸ್ಕೃತಿಕ ನಾಯಕ

ProfileImg
10 May '24
3 min read


image

ಕರ್ನಾಟಕದ ರಾಜ್ಯದ ಸಾಂಸ್ಕೃತಿಕ ನಾಯಕ, ವಿಶ್ವಗುರು ಜ್ಞಾನಜ್ಯೋತಿ, ಕಾಯಕ ಯೋಗಿ ಬಿರುದಾಂಕಿತ ಬಸವಣ್ಣನವರ ಜಯಂತಿಯನ್ನು ಇಂದು ಕರುನಾಡಿನೆಲ್ಲೆಡೆ ಆಚರಿಸುತ್ತಿದ್ದೇವೆ.! 
"ಕಾಯಕವೇ ಕೈಲಾಸ" ವೆಂಬ ಅತ್ಯಮೂಲ್ಯ ತತ್ವವನ್ನು ಜಗತ್ತಿಗೆ ಸಾರಿ  ಆ ತತ್ವವನ್ನು ತಮ್ಮ ಬದುಕಿನಲ್ಲೂ ಸಹ ಅಳವಡಿಸಿಕೊಂಡು ನಡೆನುಡಿಗಳ ಸಮನ್ವವದ ಸಂಗಮಕ್ಕೆ ಸಾಕ್ಷಿಯಾಗಿ ಬಾಳಿದ ದೈವಿಪುರುಷರು ನಮ್ಮ ಬಸವಣ್ಣನವರು. ಕರ್ನಾಟಕ ನೆಲ ಜಲ ನಾಡು ಕಂಡ ಹೆಮ್ಮೆಯ ನಾಯಕ ಬಸವಣ್ಣನವರು. 12ನೇ ಶತಮಾನದಲ್ಲೇ ಸಾಮಾಜಿಕ, ಆರ್ಥಿಕ, ಧಾರ್ಮಿಕ ರಾಜಕೀಯ ಕ್ರಾಂತಿಯ ಮೂಲಕ ಸಮಾಜದಲ್ಲಿ ಉತ್ತಮ ಬದಲಾವಣೆಯ ಪರ್ವಕ್ಕೆ ಮುನ್ನುಡಿ ಬರೆದು ಕ್ರಾಂತಿಯೋಗಿ ಎಂಬ ಪ್ರಖ್ಯಾತಿಯೊಂದಿಗೆ ತಮ್ಮ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಕಲ್ಪನೆಯನ್ನು ಹನ್ನೆರಡನೇ ಶತಮಾನದಲ್ಲೇ ಕೊಟ್ಟ ಮಹಾಜ್ಞಾನಿಗಳು. ಅಲ್ಲದೆ ಆಡುಭಾಷೆಯ ಸರಳ ನುಡಿಗಟ್ಟುಗಳ ಮೂಲಕ ವಚನಗಳನ್ನು ರಚಿಸಿ  ಕನ್ನಡ ಸಾಹಿತ್ಯ ಲೋಕಕ್ಕೆ ಆತ್ಯಮೂಲ್ಯವಾದ ಕೊಡುಗೆಯನ್ನು ನೀಡಿ,ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿ  ಬದುಕಿನ ಮೌಲ್ಯವನ್ನು ವಚನಗಳಲ್ಲೇ ಹೇಳುತ್ತಾ, ಅಜಾರಾಮರರಾಗಿ  ಕರ್ನಾಟಕದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಬೆಳಗಿ "ವಿಶ್ವ ಗುರು " ಎಂಬ ಹೆಗ್ಗಳಿಕೆಗೆ ಪಾತ್ರರಾದ ಏಕೈಕ ವ್ಯಕ್ತಿ ನಮ್ಮ ಬಸವಣ್ಣನವರು.ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣರಾದರು.ಮೂಢನಂಬಿಕೆ ,ಜಾತಿಪದ್ಧತಿ,ಸ್ತ್ರೀ ಶೋಷಣೆಯ ವಿರುದ್ಧ ದನಿಯೆತ್ತಿ ನಿಂತ ಮೊದಲ  ಧೀಮಂತ ನಾಯಕ. ಲಿಂಗಭೇದದ ತಾರತಮ್ಯ ಸ್ತ್ರೀ ಅಸಮಾನತೆ,ಶ್ರೀಮಂತ- ಬಡವ ಎಂಬ ಅಂತರದ ಸಂಘರ್ಷದಿಂದ ರೋಸಿ ಹೋಗಿ ಸಾಮಾಜಿಕ ವ್ಯವಸ್ಥೆ ಹದಗೆಟ್ಟ ಪರ್ವ ಕಾಲದಲ್ಲಿ ಸಮಾಜವನ್ನು ತಿದ್ದುವುದು ಅಷ್ಟು ಸುಲಭವಾಗಿ ರಲಿಲ್ಲ ಅಂಥಹ ಕ್ಲಿಷ್ಟಕರ ಸಂಧರ್ಭದಲ್ಲಿ ಇವುಗಳ ವಿರುದ್ಧ ತಮ್ಮದೇ ವಿಶಿಷ್ಟವಾದ ಮಾನವೀಯ ಮೌಲ್ಯಗಳ ಆಧಾರದೊಂದಿಗೆ ನೈತಿಕ ಸೂತ್ರಗಳ ಹಿನ್ನೆಲೆಯಲ್ಲಿ ಸಮಾಜಮುಖಿ ಚಿಂತನೆಗಳ ಮೂಲಕ ಹೋರಾಟ ನಡೆಸಿದ ಸಾಮಾಜಿಕ ಹೋರಾಟದ ಹರಿಕಾರರು.ಬಸವಣ್ಣನವರು ತಾವು ಕಂಡ ಜಾತ್ಯತೀತವಾದ ಸುಂದರ ಸಮಾನತೆಯ ವಿಶ್ವಭ್ರಾತೃತ್ವದ ಸಮಾಜವನ್ನು ನಿರ್ಮಿಸಲು ಜಾತಿ ಜಾತಿಗಳ ಧರ್ಮ-ಧರ್ಮಗಳ ಹೆಸರಿನಲ್ಲಿ ನಡೆಯುತ್ತಿದ್ದ ಮಾನವ ಸಂಘರ್ಷದ ವಿರುದ್ಧ ಸಿಡಿದೆದ್ದವರು ಎಲ್ಲರೂ ನಮ್ಮವರೆ ಎಂಬ ಸಂದೇಶ ಸಾರುತ್ತಾ
ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ
ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ || ಎಂಬ ವಚನ ಇಡೀ ವಿಶ್ವಕ್ಕೆ ನೀಡಿದ ಒಂದು ದಿವ್ಯ ಸಂದೇಶವಾಗಿದೆ. ಅಲ್ಲದೆ ಜಾತಿಎಂಬ ಹೊಲಸು ರಾಡಿಯಲ್ಲಿ ಹೊರಲಾಡುತ್ತಿದ್ದ ಸಮಾಜವನ್ನು ಜಾತಿ ಮುಕ್ತ ವಾಗಿಸಲು  ಬ್ರಾಹ್ಮಣ ಮತ್ತು ದಲಿತ ಜಾತಿಯವರ ನಡುವೆ ವಿವಾಹ ಮಾಡಿಸಿದ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು,
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ
ಇದಾವ ಪರಿಯಲ್ಲಿ ಕಾಡಿಸಿತು ಮಾಯೆ
ಈ ಮಾಯೆಯ ಕಳೆವಡೆ ಎನ್ನಳವಲ್ಲ
ನೀವೆ ಬಲ್ಲಿರಿ ಕೂಡಲಸಂಗಮದೇವಾ ||
ಈ ವಚನದ ಮೂಲಕ ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ ಹೀಗೆ ಹಲವು ಪಾತ್ರಗಳಲ್ಲಿ ಪುರುಷನ ಬದುಕನ್ನು ಪ್ರತಿ ಹಂತದಲ್ಲೂ ಸಾರ್ಥಕಗೊಳಿಸಿ ಅವರ ಏಳಿಗೆಗೆ ಶ್ರಮಿಸುವ ಸ್ತ್ರೀ ಸಮುದಾಯವನ್ನು ನಿರ್ಲಕ್ಷಿಸಿ ಅವರಿಗೆ ಸಾಮಾಜಿಕ, ಧಾರ್ಮಿಕ ಸ್ವಾತಂತ್ರ್ಯದಿಂದ ವಂಚಿತರನ್ನಾಗಿ ಮಾಡಿದ್ದ ಸಮಾಜಕ್ಕೆ ಸ್ತ್ರೀ ಸಮಾನತೆಯ ಕ್ರಾಂತಿಕಾರಕ ಸಂದೇಶ ನೀಡುತ್ತಾ ತಮ್ಮ ಅನುಭವ ಮಂಟಪದಲ್ಲಿ ಸ್ತ್ರೀಯರಿಗೆ ವಾಕ್ ಸ್ವಾತಂತ್ರ್ಯದ ಜೊತೆ  ಸಮಾನತೆನ್ನೂ
ನೀಡಿದ ಸಮಾನತೆಯ ಹರಿಕಾರ ನಮ್ಮ ಬಸವಣ್ಣನವರು ಸ್ವತಹ ಅರ್ಥಶಾಸ್ತ್ರಜ್ಞರೂ ಆಗಿದ್ದ ಬಸವಣ್ಣನವರು ಸಮಾಜದ ಸರ್ವಾಂಗೀಣ ಪ್ರಗತಿಗೆ ಹಾಗೂ ವಿಕಾಸಕ್ಕೆ ದುಡಿಮೆಯ ಮತ್ತು ಬೆವರಿನ ಮಹತ್ವವನ್ನು ತಿಳಿಸುತ್ತಾ "ಕಾಯಕವೇ ಕೈಲಾಸ" ಎಂಬ ಕಾಯಕ ತತ್ವವನ್ನು ಇಡೀ ವಿಶ್ವಕ್ಕೆ ಸಾರಿದರು. ತಮ್ಮ ಅನುಭವ ಮಂಟಪದ ಮೂಲಕ ಜಗತ್ತಿನ ಮೊಟ್ಟ ಮೊದಲ ಸಂಸತ್ ಸ್ಥಾಪಿಸಿ ವಿವಿಧ ಕ್ಷೇತ್ರಗಳ ಕಾಯಕ ಜೀವಿಗಳನ್ನು ಒಗ್ಗೂಡಿಸಿ ಸಮಾಜವನ್ನು ಪ್ರತಿನಿಧಿಸುವ 770 ಶರಣ, ಶರಣೆಯರನ್ನು ಕೂಡಿದ ಪ್ರಜಾಪ್ರಭುತ್ವ ಕಲ್ಪನೆಯ ವ್ಯವಸ್ಥೆ ಸೃಷ್ಟಿಸಿ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರತೀಕವಾದ ಚರ್ಚೆಗಳನ್ನು ಅಲ್ಲಿ ಏರ್ಪಡಿಸುವ ಮೂಲಕ ಹೊಸ ಮಾದರಿಯೊಂದಿಗೆ ಪ್ರತಿಯೊಬ್ಬರ ಅನಿಸಿಕೆಗಳನ್ನು ಪರಿಗಣಿಸುತ್ತಾ ಆಡಳಿತದ  ಜವಾಬ್ಧಾರಿಯನ್ನು ಕೊಟ್ಟು ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದರು. ಅನುಭವ ಮಂಟಪದಲ್ಲಿ "ಶೂನ್ಯಪೀಠ" ಸ್ಥಾಪಿಸಿ ಸ್ಪೀಕರ್ ಹುದ್ದೆಯ ಕಲ್ಪನೆಯನ್ನು ಸಹ ಕೊಟ್ಟರು. ಅಲ್ಲದೆ ಅನುಭವ ಮಂಟಪದ ಮೂಲಕ ಮಹಿಳೆಯರೂ ಸೇರಿದಂತೆ ಎಲ್ಲಾ ವರ್ಗದವರಿಗೂ ಅವಕಾಶ ಕೊಟ್ಟಿದ್ದು ಅವರ ದೂರದರ್ಶಿತ್ವಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.
ನಮ್ಮ ಸಂವಿಧಾನದ  ಮೂಲ ದ್ಯೇಯ 'ಸರ್ವರಿಗೂ ಸಮಾನತೆ, ಸರ್ವರಿಗೂ ಸಮಬಾಳು" ಎಂಬುದನ್ನು ಅಂದೇ 12ನೇ ಶತಮಾನದಲ್ಲೇ ಜಾರಿಗೊಳಿದ್ದರು ನಮ್ಮ ಭಾರತದ ಸಂವಿಧಾನ ಸಾರ ಮತ್ತು ವಚನಗಳ ಸಾರವನ್ನು ಓದಿದಾಗ
ಸಂವಿಧಾನ ಮತ್ತು ವಚನಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಖಂಡಿತವಾಗಿ ನಮಗೆ ಅನಿಸುತ್ತದೆ.ಜೊತೆಗೆ ಜಾತ್ಯತೀತಯ ಸಮಾಜವನ್ನು ಕಟ್ಟಿದ ಮಾನವತಾವಾದಿ ನಮ್ಮ ಬಸವಣ್ಣನವರು. ಸಮಾನ
ಭ್ರಾತೃತ್ವಭಾವ, 'ಎನಗಿಂತ ಕಿರಿಯರಿಲ್ಲ' ಎಂಬ ವಿನಮ್ರ ಭಾವದಿಂದ ಜಗತ್ತನ್ನು ಬೆಳಗಿದ ಜಗ ಜ್ಯೋತಿ, ಭಕ್ತಿ ಭಂಡಾರಿ ಶ್ರೇಷ್ಠ ಮಾನವತಾವಾದಿ, ದಾರ್ಶನಿಕ ವ್ಯಕ್ತಿ, ಬಸವಣ್ಣನವರು ಪ್ರತಿಪಾದಿಸಿದ ಆದರ್ಶಗಳು ನಮಗೆ ಸದಾಕಾಲ ವಿಶ್ವಭ್ರಾತೃತ್ವದ ಸನ್ಮಾರ್ಗದಲ್ಲಿ ನಡೆಯುಲು ಬೆಳಕನ್ನು ನೀಡುತ್ತಿವೆ ಅದಕ್ಕೇ ಕರುನಾಡಿನ ಹೆಮ್ಮೆಯ ಸಾಂಸ್ಕೃತಿಕ ನಾಯಕರಾಗಿ , ಜ್ಞಾನದ ಜ್ಯೋತಿಯಾಗಿ ಕೇವಲ ಕನ್ನಡಿಗರ ಮನದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಎಲ್ಲರ ಮನದಲ್ಲಿ ಮೌಲ್ಯಯುತ ಸ್ಥಾನ ಪಡೆದು ವಿಶ್ವಗುರುವಾಗಿದ್ದರೆ.!
ಗೀತಾಂಜಲಿ ಎನ್ ಎಮ್
 

Category:Spirituality



ProfileImg

Written by Geethanjali NM

Author ✍️

0 Followers

0 Following