Do you have a passion for writing?Join Ayra as a Writertoday and start earning.

ದುರ್ವಾಸನಾಯುಕ್ತ ಹೂಗಳ ಪ್ರಪಂಚ

ಮೂಗು ಮುಚ್ಚಿಕೊಂಡು ಹೂವಿನ ಬಳಿ ಹೋಗಿ!

ProfileImg
22 Mar '24
6 min read


image

     ಹೂವು ಎಂದೊಡನೆ ಎಲ್ಲರ ಕಣ್ಣುಗಳು ಅರಳುತ್ತವೆ. ಜೊತೆಗೆ ಮೂಗು ಕೂಡ ಅರಳುತ್ತದೆ. ಅದಕ್ಕೆ ಕಾರಣ ಹೂವುಗಳಂದ ಮತ್ತು ಸುವಾಸನೆ. ಕೋಟ್ಯಾಂತರ ವರ್ಷಗಳಿಂದ ಈ ಭೂಮಿಯ ಮೇಲೆ ಹೂವು ಬಿಡುವ ಸಸ್ಯಗಳು ಯಶಸ್ವೀ ಜೀವನ ನಡೆಸಿವೆ. ಇಂದು ಹೂಬಿಡುವ ಸಸ್ಯಗಳ ಸಂಖ್ಯೆ ಒಂದು ಅಂದಾಜಿನ ಪ್ರಕಾರ ಮೂರು ಲಕ್ಷ ದಾಟುತ್ತವೆ. ಇದು ನಾವು ಈವರೆಗೆ ಗುರುತಿಸಿ ಹೆಸರಿಸಿರುವ ಸಸ್ಯಗಳ ಸಂಖ್ಯೆ ಅಷ್ಟೆ. ನಾವು ಇನ್ನೂ ಗುರುತಿಸದ ಸಸ್ಯಪ್ರಭೇದಗಳ ಸಂಖ್ಯೆ ಇಷ್ಟೇ ಎಂದು ಹೇಳಲಾಗುವುದಿಲ್ಲ. ಇದಕ್ಕಿಂತ ಹತ್ತಾರು ಪಟ್ಟು ಪ್ರಭೇದಗಳು ಇನ್ನೂ ದಟ್ಟವಾದ ಮಳೆಕಾಡುಗಳಲ್ಲಿ ಅಜ್ಞಾತವಾಗಿ ಇರಬಹುದು. ಅದೇನೇ ಆದರೂ ಹೂವು ಎಂದೊಡನೆ ಎಲ್ಲರ ಮನಸ್ಸಿಗೂ ಬರುವುದು ಅದರ ಅಂದ ಮತ್ತು ಸುವಾಸನೆ ಈ ಎರಡೇ ಅಂಶಗಳು. ಆದರೆ ಸುವಾಸನೆಯಿಂದ ಪ್ರಸಿದ್ಧವಾಗಿರುವ ಹೂವುಗಳಂತೆಯೇ ಹತ್ತಿರ ಹೋದರೆ ದುರ್ವಾಸನೆ ತಡೆಯಲಾರದೆ ಮೂಗು ಮುಚ್ಚಿಕೊಳ್ಳಬೇಕಾದಂಥ ಹೂವುಗಳು ಸಹ ಜಗತ್ತಿನಲ್ಲಿ ಸಾಕಷ್ಟಿವೆ ಎಂದರೆ ನಂಬುತ್ತೀರಾ?

      

ಹತ್ತು ಅಡಿ ಎತ್ತರದ ದೈತ್ಯ ಟೈಟಾನ್ ಏರಂ

      ಜಗತ್ತಿನ ಅತಿ ಘೋರ ದುರ್ವಾಸನೆಯ ಹೂವು ಎಂಬ ಅಭಿದಾನ ಪಡೆದಿರುವ ಹೂವು ಜಗತ್ತಿನ ಅತಿದೊಡ್ಡ ಹೂವು ಕೂಡ ಆಗಿರುವುದು ಒಂದು ವಿಶೇಷ. ದುರ್ವಾಸನೆಯ ಕಾರಣದಿಂದಲೇ ಇದಕ್ಕೆ ಶವದ ಹೂವು ಎಂಬ ಹೆಸರೇ ಇದೆ. ಕೊಳೆತ ಮಾಂಸದ ವಾಸನೆಯೇ ಈ ಹೂವಿನ ವಿಶೇಷತೆ. ಸುಮಾರು ಹತ್ತು ಅಡಿ ಎತ್ತರಕ್ಕೆ ಬೆಳೆಯುವ ಈ ಬೃಹತ್ ಹೂವು ಯಾಕೆ ಹೀಗೆ ದುರ್ವಾಸನೆ ಬೀರುತ್ತದೆ? ಇದಕ್ಕೆ ಉತ್ತರ ಇದರ ಪರಾಗಸ್ಪರ್ಶ ಕ್ರಿಯೆಯಲ್ಲೇ ಇದೆ. ಯಾವುದೇ ಹೂವು ಸುವಾಸನೆ ಬೀರುವುದಕ್ಕೂ ಸಹ ಅದರ ಪರಾಗಸ್ಪರ್ಶ ಕ್ರಿಯೆಯೇ ಕಾರಣ. ಪರಾಗಸ್ಪರ್ಶಕ್ಕಾಗಿ ಹೂವು ಯಾವ ಜೀವಿಯನ್ನು ಅವಲಂಬಿಸಿರುತ್ತದೋ ಆ ಜೀವಿಯನ್ನು ಆಕರ್ಷಿಸುವಂಥ ವಾಸನೆಯನ್ನು ಎಲ್ಲಾ ಹೂವುಗಳೂ ಬೀರುತ್ತವೆ. ನಮ್ಮ ಮೂಗಿಗೆ ಆಪ್ಯಾಯಮಾನವಾದ ಸುಗಂಧವನ್ನು ಬೀರುವ ಎಲ್ಲ ಹೂವುಗಳೂ ಅಂಥ ಸುವಾಸನೆಯನ್ನು ಬೀರುವುದು ಪರಾಗಸ್ಪರ್ಶಕ್ಕೆ ನೆರವಾಗುವ ಕೀಟಗಳನ್ನು ಆಕರ್ಷಿಸುವುದಕ್ಕಾಗಿ. ಹಕ್ಕಿ ಮತ್ತು ಸಸ್ತನಿಗಳಿಂದ ಪರಾಗಸ್ಪರ್ಶವಾಗುವ ಹೂವುಗಳೂ ಇವೆ. ಅಂಥ ಹೂವುಗಳು ಉಜ್ವಲ ಬಣ್ಣಗಳನ್ನು ಧರಿಸಿರುತ್ತವೆ. ಆದರೆ ಅವಕ್ಕೆ ವಾಸನೆ ಅಷ್ಟೊಂದು ಗಾಢವಾಗಿರುವುದಿಲ್ಲ. ಏಕೆಂದರೆ ಹಕ್ಕಿಗಳಿಗೆ ಬಣ್ಣಗಳನ್ನು ಗುರುತಿಸುವ ಶಕ್ತಿ ಅತ್ಯುತ್ತಮವಾಗಿದೆ, ಆದರೆ ವಾಸನೆಯನ್ನು ಹಿಡಿಯುವ ಶಕ್ತಿ ಅಷ್ಟಾಗಿ ಇಲ್ಲ. 

      ಈಗ ನಾವು ಶವದ ಹೂವಿನ ವಿಷಯಕ್ಕೆ ಬರೋಣ. ಈ ಹೂವುಗಳು ತಮ್ಮ ಪರಾಗಗಳನ್ನು ಸಾಗಿಸಲು ಅವಲಂಬಿಸಿರುವುದು ನೊಣಗಳನ್ನು. ಸತ್ತು ಕೊಳೆಯುತ್ತಿರುವ ಪ್ರಾಣಿಗಳ ದೇಹದ ಮೇಲೆ ಮೊಟ್ಟೆಯಿಡುವ ನೊಣಗಳು ಅಂಥ ದುರ್ವಾಸನೆಗೆ ಮಾತ್ರ ಆಕರ್ಷಿತವಾಗುತ್ತವೆ. ಹಾಗಾಗಿಯೇ ಈ ಹೂವುಗಳು ಸಾಮಾನ್ಯವಾಗಿ ಹೂವುಗಳಿಗೆ ಅಪವಾದವೇ ಎನ್ನಬಹುದಾದಂಥ ದುರ್ವಾಸನೆಯನ್ನು ತಳೆದಿವೆ. ಸಂಜೆಯಾಗುತ್ತಿದ್ದಂತೆ ಅರಳಲಾರಂಭಿಸುವ ಈ ಹೂವು ಮಧ್ಯರಾತ್ರಿಯಾಗುತ್ತಿದ್ದಂತೆ ದುರ್ಗಂಧವನ್ನು ಎಲ್ಲೆಡೆ ಪಸರಿಸಲಾರಂಭಿಸುತ್ತದೆ. ಏಕೆಂದರೆ ಈ ಸಮಯದಲ್ಲಿ ಶವದ ಮೇಲೆ ಮೊಟ್ಟೆಯಿಡುವ ನೊಣಗಳ ಕಾರ್ಯಚಟುವಟಿಕೆ ಹೆಚ್ಚಾಗಿರುತ್ತದೆ. ಇದರಿಂದ ಬಿಡುಗಡೆಯಾಗುವ ಡೈಮೀಥೈಲ್ ಟ್ರೈಸಲ್ಫೈಡ್, ಡೈಮೀಥೈಲ್ ಡೈಸಲ್ಫೈಡ್, ಟ್ರೈಮೀಥೈಲ್ ಅಮೈನ್, ಇಂಡೋಲ್, ಐಸೋವ್ಯಾಲೆರಿಕ್ ಆಸಿಡ್, ಬೆಂಝೈಲ್ ಆಲ್ಕೋಹಾಲ್ ಮುಂತಾದ ರಾಸಾಯನಿಕಗಳ ಕಾರಣ ಇಂಥ ದುರ್ವಾಸನೆ ಇದರಿಂದ ಬರುತ್ತದೆ. ಬೆಳಗಾಗುತ್ತಿದ್ದಂತೆ ಈ ವಾಸನೆಯ ತೀವ್ರತೆ ಕಡಿಮೆಯಾಗುತ್ತದೆ. 

      ಈ ಹೂವು ಇಂಡೋನೇಷ್ಯಾದ ಮಳೆಕಾಡುಗಳಲ್ಲಿ ಕಂಡುಬರುತ್ತದೆ. ಅಲ್ಲಿನ ಭಾಷೆಯಲ್ಲಿ ಇದನ್ನು ಬುಂಗ ಬ್ಯಾಂಕೈ ಎನ್ನುತ್ತಾರೆ. ಹಾಗೆಂದರೆ ಶವದ ಹೂವು ಎಂದರ್ಥ. ದಟ್ಟವಾದ ಮಳೆಕಾಡುಗಳಲ್ಲಿ ಇರುವುದರಿಂದ ಈ ಹೂವು ಇಷ್ಟೊಂದು ಎತ್ತರಕ್ಕೆ ಬೆಳೆಯುತ್ತದೆ. ಏಕೆಂದರೆ ಮಳೆಕಾಡಿನ ದಟ್ಟವಾದ ಸಸ್ಯರಾಶಿಯ ನಡುವೆ ತನ್ನ ದುರ್ವಾಸನೆಯನ್ನು ಪಸರಿಸಲು ಎತ್ತರಕ್ಕೆ ಬೆಳೆಯುವುದು ಈ ಹೂವಿಗೆ ಅನಿವಾರ್ಯವಾಗಿದೆ. ಗಂಡು ಮತ್ತು ಹೆಣ್ಣುಭಾಗಗಳೆರಡೂ ಒಂದೇ ಹೂವಿನಲ್ಲಿ ಬೆಳೆಯುತ್ತವೆ. ಹೆಣ್ಣುಭಾಗ ಮೊದಲು ಅರಳಿ, ಒಂದೆರಡು ದಿನಗಳ ನಂತರ ಗಂಡುಭಾಗಗಳು ಅರಳುತ್ತವೆ. ವಾಸ್ತವವಾಗಿ ಹೇಳಬೇಕೆಂದರೆ ಇದು ಒಂದೇ ಹೂವಲ್ಲ. ಒಂದು ದೊಡ್ಡ ಟೈಟಾನ್ ಆರಂ ಅನೇಕ ಹೂಗಳ ಒಂದು ಸಮೂಹ. ಇದನ್ನು ಇನ್‌ಫ್ಲೋರಸೆನ್ಸ್ ಎಂದು ಸಸ್ಯಶಾಸ್ತ್ರೀಯವಾಗಿ ಕರೆಯುತ್ತಾರೆ. ನಾವು ಇದನ್ನು ಸಾಮಾನ್ಯವಾಗಿ ಒಂದು ಹೂವು ಎಂದು ಕರೆಯುತ್ತೇವೆಯೇ ಹೊರತು ವೈಜ್ಞಾನಿಕವಾಗಿ ನೋಡಿದರೆ ಇದು ಒಂದು ಹೂವಲ್ಲ. ಅನೇಕ ಹೂಗಳ ಒಂದು ಗೊಂಚಲು ಎನ್ನಬಹುದು.

      ಈ ಸಸ್ಯಗಳ ಇನ್ನೊಂದು ವಿಶೇಷತೆಯೆಂದರೆ ಬೃಹದ್ಗಾತ್ರದ ಗೆಡ್ಡೆ. ನಮ್ಮ ಸುವರ್ಣಗೆಡ್ಡೆಯನ್ನೇ ಹೋಲುವ ಭಾರೀ ಗೆಡ್ಡೆಗಳು ನೆಲದೊಳಗೆ ಬೆಳೆಯುತ್ತವೆ. ಇದುವರೆಗೆ ದಾಖಲೆಯಾಗಿರುವ ಅತಿದೊಡ್ಡ ಗೆಡ್ಡೆ ಎಡಿನ್‌ಬರ್ಗ್‌ನ ಸಸ್ಯೋದ್ಯಾನದಲ್ಲಿ ಸಿಕ್ಕಿದ ೧೫೩.೯ ಕಿಲೋಗ್ರಾಂ ತೂಕದ ಒಂದು ಬೃಹತ್ ಗೆಡ್ಡೆ. ಈ ಗೆಡ್ಡೆಗಳು ಐವತ್ತು ಕಿಲೋಗ್ರಾಂ ಮೀರಿ ಬೆಳೆಯುವುದು ಸರ್ವೇಸಾಮಾನ್ಯ. ಆಶ್ಚರ್ಯವೆಂದರೆ ಹೂವುಗಳ ದುರ್ವಾಸನೆಯ ಲವಲೇಶವೂ ಈ ಗೆಡ್ಡೆಗಳಲ್ಲಿ ಕಂಡುಬರುವುದಿಲ್ಲ. ಸುವರ್ಣಗೆಡ್ಡೆಯಂತೆಯೇ ಇದನ್ನೂ ಸಹ ರುಚಿಕರ ಆಹಾರವನ್ನಾಗಿ ಉಪಯೋಗಿಸುತ್ತಾರೆ.

      ಈ ಹೂವಿಗೆ ಟೈಟಾನ್ ಆರಂ ಎಂಬ ಹೆಸರನ್ನು ನೀಡಿದ್ದು ಬಿಬಿಸಿಯ ಪ್ರಖ್ಯಾತ ವನ್ಯಜೀವಿತಜ್ಞ ಸರ್ ಡೇವಿಡ್ ಅಟೆನ್‌ಬರೋ. ಈ ಹೂವಿನ ವೈಜ್ಞಾನಿಕ ಹೆಸರು ಅಮೋರ್ಫೋಫ್ಯಾಲಸ್ ಟೈಟಾನಮ್. ಇಷ್ಟುದ್ದದ ಹೆಸರನ್ನು ಪದೇಪದೇ ಹೇಳುವ ಬದಲು ಟೈಟಾನ್ ಆರಂ ಎಂಬ ಸಂಕ್ಷಿಪ್ತ ಹೆಸರನ್ನು ಅವರು ಬಳಸಿದರು. ಈಗ ಈ ಹೂವು ಇದೇ ಹೆಸರಿನಿಂದ ಪ್ರಸಿದ್ಧವಾಗಿದೆ. ನಮ್ಮ ದೇಶದಲ್ಲಿರುವ ಈ ಹೂವಿನ ಸುಪ್ರಸಿದ್ಧ ಸಂಬಂಧಿಯೆಂದರೆ ಸುವರ್ಣಗೆಡ್ಡೆ. ರುಚಿಕರ ಆಹಾರವಾಗಿ ಬಳಸಲ್ಪಡುವ ಸುವರ್ಣಗೆಡ್ಡೆ ಹೂವು ಕೂಡ ಬಹುದೂರಕ್ಕೆ ದುರ್ವಾಸನೆಯನ್ನು ಬೀರುವ ಹೂವಾಗಿದೆ. ಇದು ಸಹ ನೊಣಗಳನ್ನು ಆಕರ್ಷಿಸಲೆಂದೇ ಇರುವ ವ್ಯವಸ್ಥೆ.

 

ರ‍್ಯಾಫ್ಲೀಸಿಯಾ ಅರ್ನಾಲ್ಡಿ: ಬೆಳಕಿಗೆ ಬಾರದ ದುರದೃಷ್ಟವಂತ ಫ್ರೆಂಚ್ ವಿಜ್ಞಾನಿಯ ಕಥೆ

      ಟೈಟಾನ್ ಆರಂ ಅನೇಕ ಹೂವುಗಳ ಒಂದು ಗೊಂಚಲಿನ ವ್ಯವಸ್ಥೆಯಾದರೆ ಅತಿದೊಡ್ಡ ಏಕೈಕ ಹೂವೆಂದು ಪ್ರಸಿದ್ಧವಾದ ಹೂವು ರ‍್ಯಾಫ್ಲೀಸಿಯಾ ಅರ್ನಾಲ್ಡಿ. ಸುಮಾತ್ರಾ ಮತ್ತು ಬೋರ್ನಿಯೋದ ಮಳೆಕಾಡುಗಳ ಈ ಹೂವು ಮೂರರಿಂದ ಮೂರೂವರೆ ಅಡಿ ವ್ಯಾಸದ ವೃತ್ತಾಕಾರದ ಹೂವಾಗಿದ್ದು ಹನ್ನೊಂದು ಕಿಲೋಗ್ರಾಂ ತೂಗುತ್ತದೆ. ಇದರ ವಾಸನೆ ಕೂಡ ಅತ್ಯಂತ ತೀಕ್ಷ್ಣವಾದ ಕೊಳೆತ ಶವದ ದುರ್ವಾಸನೆಯನ್ನೇ ಹೋಲುತ್ತದೆ. 

      ಈ ಹೂವಿಗೆ ಈ ಹೆಸರು ಬರಲು ಇಬ್ಬರು ಸಸ್ಯವಿಜ್ಞಾನಿಗಳು ಕಾರಣ. ಜೋಸೆಫ್ ಅರ್ನಾಲ್ಡ್ ಮತ್ತು ಸ್ಟ್ಯಾನ್‌ಫರ್ಡ್ ರ‍್ಯಾಫಲ್ಸ್ ಎಂಬ ಇಬ್ಬರು ಇದರ ಅನ್ವೇಷಣೆಯಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಫ್ರೆಂಚ್ ವಿಜ್ಞಾನಿ ಲೂಯಿಸ್ ಆಗಸ್ಟ್ ಡೆಶಾಂಪ್ಸ್ ಎಂಬಾತ ಮೊದಲಬಾರಿಗೆ ಇದನ್ನು ಕಂಡಿದ್ದ ವಿಜ್ಞಾನಿ. ಆದರೆ ಅವನ ದುರದೃಷ್ಟ ಎಷ್ಟಿತ್ತೆಂದರೆ ಅವನು ೧೭೯೭ರಲ್ಲಿ ನೌಕಾಯಾನ ಮಾಡುತ್ತಿದ್ದಾಗ ಅವನ ಹಡಗನ್ನು ಬ್ರಿಟಿಷರು ಹಿಡಿದರು. ಅವನು ಮಾಡಿದ ಸಂಶೋಧನಾಪತ್ರಗಳನ್ನೆಲ್ಲ ಬ್ರಿಟಿಷರು ವಶಪಡಿಸಿಕೊಂಡರು. ಮುಂದೆ ೧೯೫೪ರವರೆಗೆ ಈ ಪತ್ರಗಳು ಬ್ರಿಟಿಷರ ವಶದಲ್ಲೇ ಇದ್ದವು. ಆ ವರ್ಷ ಅವು ಲಂಡನ್ನಿನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ಪತ್ತೆಯಾದವು. ಅರ್ನಾಲ್ಡ್ ಮತ್ತು ರ‍್ಯಾಫಲ್ಸ್ ೧೮೧೮ರಲ್ಲಿ ಇದರ ಹೂವೊಂದನ್ನು ಪತ್ತೆಮಾಡಿದರು. ಆಮೇಲೆ ದುರದೃಷ್ಟವಶಾತ್ ಕೆಲವೇ ದಿನಗಳಲ್ಲಿ ಅರ್ನಾಲ್ಡ್ ತೀರಿಕೊಂಡ. ಆದರೆ ರ‍್ಯಾಫಲ್ಸ್ನ ಪತ್ನಿ ಈ ಹೂವನ್ನು ಕಂಡುಹಿಡಿಯುವ ಸಂದರ್ಭದಲ್ಲಿ ಅಲ್ಲೇ ಇದ್ದಳು. ಅವಳು ಈ ಹೂವಿನ ವರ್ಣಚಿತ್ರವೊಂದನ್ನು ಬರೆದು ಸಂರಕ್ಷಿಸಲಾದ ಒಂದು ಹೂವಿನ ಜೊತೆ ಅದನ್ನು ಜೋಸೆಫ್ ಬ್ಯಾಂಕ್ಸ್ಗೆ ಕಳುಹಿಸಿದಳು. ಆತ ಅದನ್ನು ರಾಬರ್ಟ್ ಬ್ರೌನ್ ಎಂಬ ಸಸ್ಯವಿಜ್ಞಾನಿಗೆ ಕಳುಹಿಸಿದ. ಹೀಗೆ ಈ ಹೂವು ಜಗತ್ತಿನಲ್ಲಿ ಬೆಳಕಿಗೆ ಬಂತು. ಆಮೇಲೆ ಈ ಹೂವಿಗೆ ರ‍್ಯಾಫಲ್ಸ್ ಮತ್ತು ಅರ್ನಾಲ್ಡ್ ಅವರ ನೆನಪಿಗಾಗಿ ರ‍್ಯಾಫ್ಲೀಸಿಯಾ ಅರ್ನಾಲ್ಡಿ ಎಂದೇ ಹೆಸರಿಸಿದರು. ಇದನ್ನು ನೋಡಿದರೆ ಡೆಶಾಂಪ್ಸ್ ಎಂತ ನತದೃಷ್ಟ ಎಂಬುದು ಅರಿವಾಗುತ್ತದೆ. ಅವನು ಬದುಕಿದ್ದಾಗ ಅವನ ಹೆಸರು ಎಲ್ಲೂ ಕೇಳಿಬರಲೇ ಇಲ್ಲ. ವಿಲಿಯಂ ಜ್ಯಾಕ್ ಎಂಬಾತನಿಗೆ ಡೆಶಾಂಪ್ಸ್ ಈ ಹೂವನ್ನು ಮೊದಲಬಾರಿಗೆ ನೋಡಿದ ವ್ಯಕ್ತಿ ಎಂದು ಗೊತ್ತಿತ್ತು. ಆತ ಈ ಖ್ಯಾತಿ ಫ್ರೆಂಚನಾದ ಡೆಶಾಂಪ್ಸ್ಗೆ ಬರದೆ ಬ್ರಿಟಿಷರಿಗೇ ಬರುವಂತೆ ನೋಡಿಕೊಂಡ. ನತದೃಷ್ಟ ಡೆಶಾಂಪ್ಸ್ ೧೮೪೨ರಲ್ಲಿ ತೀರಿಕೊಂಡ. ಮುಂದೆ ೧೯೫೪ರವರೆಗೂ ಡೆಶಾಂಪ್ಸ್ನ ಪಾತ್ರ ಅಜ್ಞಾತವಾಗಿಯೇ ಉಳಿದಿತ್ತು. 

      

ಸತ್ತ ಕುದುರೆಯಲ್ಲ ಇದು ಡೆಡ್ ಹಾರ್ಸ್ ಲಿಲ್ಲಿ!

      ಟೈಟಾನ್ ಆರಂ ಹೂವಿನ ಕುಟುಂಬದ ಸದಸ್ಯರದ್ದೆಲ್ಲ ಹೆಚ್ಚುಕಡಿಮೆ ಒಂದೇ ರೀತಿಯ ದುರ್ನಾತ. ಇದೇ ಕುಟುಂಬದಲ್ಲಿ ಡೆಡ್ ಹಾರ್ಸ್ ಲಿಲ್ಲಿ ಎಂಬ ಇನ್ನೊಂದು ಹೂವಿದೆ. ಅರಳಿ ನಿಂತಾಗ ಸುಂದರವಾದ ಲಿಲ್ಲಿ ಹೂವಿನಂತೆ ಕಾಣುವುದರಿಂದ ಇದಕ್ಕೆ ಈ ಹೆಸರು. ಆದರೆ ಇದರ ವಾಸನೆ ಮಾತ್ರ ಸಹಿಸಲಸಾಧ್ಯ. ನೋಡಿದೊಡನೆಯೇ ಇದು ಟೈಟಾನ್ ಆರಂ ಕುಟುಂಬದ ಸದಸ್ಯ ಇರಬಹುದು ಎಂದು ಅಂದಾಜಾಗುತ್ತದೆ. ದೂರದಿಂದ ನೋಡಿದರೆ ಇದು ಸತ್ತ ಕುದುರೆಯನ್ನು ಕಂಡಂತಾಗುತ್ತದೆ ಎಂಬುದು ಅನುಭವಿಗಳ ಅಭಿಪ್ರಾಯ. ಆದ್ದರಿಂದಲೇ ಇದಕ್ಕೆ ಡೆಡ್ ಹಾರ್ಸ್ ಲಿಲ್ಲಿ ಎಂಬ ಹೆಸರು ಬಂದಿದೆ. ಯಥಾಪ್ರಕಾರ ಇದರ ಪರಾಗಸ್ಪರ್ಶ ಮಾಡುವುದೂ ಶವದಲ್ಲಿ ಮೊಟ್ಟೆಯಿಡುವ ಒಂದು ಬಗೆಯ ನೊಣಗಳೇ.

      

ನಕ್ಷತ್ರಪುಷ್ಪಕ್ಕೆ ದುರ್ವಾಸನೆಯೇ ಅಲಂಕಾರ! 

      ಸ್ಟೆಪಾಲಿಯಾ ಜೈಜ್ಯಾಂಟಿಯಾ ಎಂಬ ಇನ್ನೊಂದು ಬಗೆಯ ಸಸ್ಯವು ದೊಡ್ಡ ನಕ್ಷತ್ರದಂಥ ಹೂಗಳನ್ನು ಅರಳಿಸುತ್ತದೆ. ಈ ಹೂವುಗಳು ಮರುಭೂಮಿಯಲ್ಲಿ ಬೆಳೆಯುವ ಒಂದು ಬಗೆಯ ಕ್ಯಾಕ್ಟಸ್ ಸಸ್ಯದಲ್ಲಿ ಅರಳುವ ಹೂವು. ನೆಲದ ಮೇಲೆ ಗೊಂಚಲಾಗಿ ಬೆಳೆಯುವ ಈ ಸಸ್ಯ ದೂರದಿಂದ ನೋಡಲು ಪಾಪಾಸುಕಳ್ಳಿಯನ್ನು ಹೋಲುತ್ತದೆ. ಇದರ ಕಾಂಡಗಳು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಇವು ಮರುಭೂಮಿಯ ಆವಾಸಸ್ಥಾನಗಳಲ್ಲೇ ಬೆಳೆಯುವುದರಿಂದ ಇಂಥ ಸಾಮರ್ಥ್ಯ ಇವಕ್ಕೆ ಅತ್ಯಗತ್ಯ. ಹೂವು ಅತ್ಯಾಕರ್ಷಕ ಹಳದಿ ಬಣ್ಣ ಹೊಂದಿದ್ದು ಅದರ ಮೇಲೆಲ್ಲ ಕೂದಲುಗಳಿರುತ್ತವೆ. ಆದರೆ ಇದು ದೂರದಿಂದ ನೋಡಲು ಮಾತ್ರ ಆಕರ್ಷಕ. ಹತ್ತಿರ ಸುಳಿದರೆ ಸಾಕು ದುರ್ವಾಸನೆಗೆ ಹೊಟ್ಟೆ ತೊಳಸಿದಂತಾಗುತ್ತದೆ. ಇದರ ಬೃಹದ್ಗಾತ್ರಕ್ಕೆ ಕಾರಣವೇನೆಂದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಮರುಭೂಮಿಯ ಅಧಿಕ ಉಷ್ಣತೆಯಿಂದ ಪಾರಾಗಲು ಇದು ಸಹಾಯ ಮಾಡಬಹುದೆಂಬ ಊಹೆಯಿದೆ. ಈ ಲಿಲ್ಲಿ ಹೂವು ತನ್ನ ದುರ್ವಾಸನೆಯ ಹೊರತಾಗಿಯೂ ದಢೂತಿಗಳಲ್ಲಿ ಹಸಿವನ್ನು ಕಡಿಮೆ ಮಾಡುವ ಮೂಲಕ ಅವರ ದೇಹತೂಕವನ್ನು ಇಳಿಸಲು ನೆರವಾಗುತ್ತದೆ.

      ಇನ್ನು ಅನುಪಮ ಸೌಂದರ್ಯ ಮತ್ತು ಅಪ್ರತಿಮ ಸುವಾಸನೆಗೆ ಹೆಸರುವಾಸಿಯಾದ ಆರ್ಕಿಡ್‌ಗಳ ಕುಟುಂಬದಲ್ಲಿ ಸಹ ಇಂಥ ದುರ್ವಾಸನೆ ಬೀರುವ ಹೂಗಳಿವೆ ಎಂದರೆ ನಂಬುತ್ತೀರಾ? ಸಸ್ಯಸಾಮ್ರಾಜ್ಯದಲ್ಲಿ ಹೂಬಿಡುವ ಸಸ್ಯಗಳ ಎರಡನೇ ಅತಿದೊಡ್ಡ ಕುಟುಂಬವಾದ ಆರ್ಕಿಡ್‌ಗಳ ಕುಟುಂಬದ ಹೂಗಳು ತನ್ನ ವೈವಿಧ್ಯಮಯ ಆಕಾರಕ್ಕೆ ಹೆಸರುವಾಸಿ. ಬೆಳ್ಳಕ್ಕಿಯಂತೆ, ಗಿಳಿಯಂತೆ, ಬ್ಯಾಲೆ ನೃತ್ಯಗಾತಿಯಂತೆ, ಹೃದಯದ ಚಿಹ್ನೆಯಂತೆ, ದುಂಬಿಗಳಂತೆ ಹೀಗೆ ಬೇರೆಬೇರೆ ಆಕಾರದ ಹೂಗಳಿಗೆ ಹೆಸರುವಾಸಿ. ಇಂಥ ಕುಟುಂಬದಲ್ಲೇ ದುರ್ವಾಸನಾಯುಕ್ತ ಹೂಗಳಿವೆ ಎಂದರೆ ನಂಬಲಸಾಧ್ಯ. ಬಲ್ಬೋಫೈಲಮ್ ಫ್ಯಾಲನೋಪ್ಸಿಸ್ ಎಂಬ ವೈಜ್ಞಾನಿಕ ಹೆಸರಿನ ಈ ಆರ್ಕಿಡ್ ಕುಸುಮದ ವಾಸನೆ ಕೊಳೆತ ಮಾಂಸದ ವಾಸನೆಯನ್ನೇ ಹೋಲುತ್ತದೆ. ಇದಕ್ಕೂ ಕಾರಣ ಒಂದೇ- ನೊಣಗಳನ್ನು ಆಕರ್ಷಿಸುವುದು. 

      ಟೈಟಾನ್ ಆರಂ ಕುಟುಂಬಕ್ಕೇ ಸೇರಿದ ಇನ್ನೊಂದು ಸಸ್ಯವೆಂದರೆ ಡ್ರ್ಯಾಗನ್ ಆರಂ ಎಂಬ ಇನ್ನೊಂದು ಹೂವು ನೋಡಲು ಚೀನಾದ ಡ್ರ್ಯಾಗನ್ ಎಂಬ ಪೌರಾಣಿಕ ಸರ್ಪಕ್ಕೂ ಇದಕ್ಕೂ ಅಂಥ ಸಂಬಂಧವೇನೂ ಇಲ್ಲ! ದೂರದಿಂದ ನೋಡಿದರೆ ಕೆಲಮಟ್ಟಿಗೆ ಡ್ರ್ಯಾಗನ್‌ ಅನ್ನು ಹೋಲುವುದರಿಂದ ಈ ಹೆಸರು ಬಂದಿರಬಹುದು ಅಷ್ಟೆ. ಇದರ ಮಧ್ಯಭಾಗದಲ್ಲಿ ಉದ್ದನೆಯ ಬಾಲದಂಥ ರಚನೆಯಿದೆ. ಇದರ ವೈಜ್ಞಾನಿಕ ಹೆಸರೇ ಡ್ರಾಕಂಕುಲಸ್ ವಲ್ಗಾರಿಸ್. ವಲ್ಗರ್ ಎಂದರೆ ಅಸಹ್ಯ ಎಂದರ್ಥ. ಇದರ ದುರ್ವಾಸನೆಯೇ ಈ ಹೆಸರಿಗೆ ಕಾರಣ.

      ಸ್ಕಂಕ್ ಕ್ಯಾಬೇಜ್ ಎಂಬ ಇನ್ನೊಂದು ಬಗೆಯ ಸಸ್ಯವಿದೆ. ಇದೂ ಸಹ ಟೈಟಾನ್ ಆರಂ ಕುಟುಂಬಕ್ಕೇ ಸೇರಿದೆ. ಈ ಸಸ್ಯಕ್ಕೆ ಈ ಹೆಸರು ಬರಲು ಬಹುಮುಖ್ಯ ಕಾರಣ ಇದರ ಹೂಗಳು ನೋಡಲು ಕ್ಯಾಬೇಜ್‌ನಂತೆಯೇ ಇರುವುದು. ಸುರುಳಿ ಸುತ್ತಿದ ಇದರ ಎಲೆಗಳನ್ನು ಹರಿದರೂ ಒಂದು ರೀತಿಯ ಘಾಟುವಾಸನೆ ಹೊಮ್ಮುತ್ತದೆ. ಇದೇನೂ ಅಪಾಯಕಾರಿಯಾದ ವಾಸನೆಯಲ್ಲವಾದರೂ ಸಹಿಸಲು ಅಸಹನೀಯವೆನಿಸುತ್ತದೆ. ಜೊತೆಗೆ ಹೂವುಗಳಿಗಂತೂ ಇದರ ಕುಟುಂಬದ ಇತರ ಸದಸ್ಯರಂತೆಯೇ ಕೊಳೆತ ಮಾಂಸದ್ದೇ ವಾಸನೆ. ತನ್ನನ್ನು ಹಿಡಿಯಲು ಬರುವ ಶತ್ರುಗಳನ್ನು ಹಿಮ್ಮೆಟ್ಟಿಸಲು ದುರ್ವಾಸನೆಯ ದ್ರವವನ್ನು ಎರಚುವ ಸ್ಕಂಕ್ ಎಂಬ ಪ್ರಾಣಿಯ ಹೆಸರನ್ನೇ ಈ ಸಸ್ಯಕ್ಕೂ ನೀಡಿದ್ದಾರೆ. 

      

ದುರ್ವಾಸನಾಯುಕ್ತ ಸ್ವಾದಿಷ್ಟ ಹಣ್ಣು: ಡ್ಯುರಿಯನ್

      ಹೂಬಿಡುವ ಸಸ್ಯಗಳಲ್ಲೇ ಒಂದು ಜಾತಿಯಾದ ಡ್ಯುರಿಯನ್ ಎಂಬ ಸಸ್ಯದ್ದು ಇನ್ನೊಂದು ವಿಭಿನ್ನ ಕಥೆ. ಇದರ ಹೂವಿಗೆ ಅಂಥ ವಿಶೇಷವೇನೂ ಇಲ್ಲವಾದರೂ ಇದರ ಹಣ್ಣು ಮಾತ್ರ ದುರ್ವಾಸನೆಗೆ ಹೆಸರುವಾಸಿಯಾದ ಹಣ್ಣು. ಈ ಸಸ್ಯದಲ್ಲಿ ಹಲಸಿನ ಹಣ್ಣನ್ನು ಹೋಲುವಂಥ ಹಣ್ಣುಗಳು ಬೆಳೆಯುತ್ತವೆ. ಇಂಡೋನೇಷ್ಯಾ ಮತ್ತು ಮಲೇಷ್ಯಾಗಳ ಈ ಪ್ರಸಿದ್ಧ ಹಣ್ಣು ಅತ್ಯಂತ ಸ್ವಾದಿಷ್ಟವಾದದ್ದಾದರೂ ಇದರ ವಾಸನೆಯನ್ನು ಮಾತ್ರ ಯಾರೂ ಇಷ್ಟಪಡುವುದಿಲ್ಲ. ಇದರ ವಾಸನೆಯನ್ನು ಸ್ಕಂಕ್‌ನ ವಾಸನೆ, ಚರಂಡಿಯ ವಾಸನೆ, ಇತ್ಯಾದಿ ಬೇರೆಬೇರೆ ದುರ್ವಾಸನೆಗಳಿಗೆ ಹೋಲಿಸಿದ್ದಾರೆ. ಒಂದಕ್ಕೊಂದು ಸಂಬಂಧವೇ ಇಲ್ಲದ ಇದರ ವಾಸನೆ ಮತ್ತು ರುಚಿಯನ್ನು ಸಮೀಕರಿಸಿ ಶೌಚಾಲಯದಲ್ಲಿ ಕುಳಿತು ಐಸ್‌ಕ್ರೀಮ್ ಸವಿದಂತೆ ಎಂದು ಕೆಲವರು ವರ್ಣಿಸಿದ್ದಾರೆ! ಇಷ್ಟೆಲ್ಲ ಆದರೂ ಈ ಹಣ್ಣನ್ನು ಇಷ್ಟಪಟ್ಟು ತಿನ್ನುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ನೂರಾರು ಸಂಖ್ಯೆಯಲ್ಲಿ ಇವುಗಳನ್ನು ಮಾರುವ ಅಂಗಡಿಗಳೇ ಇವೆ. ಆದರೆ ಈ ಅಂಗಡಿಗಳ ಮಾಲೀಕರು ಹೇಗೆ ಇವುಗಳ ವಾಸನೆಯನ್ನು ಸಹಿಸಿಕೊಂಡಿರುತ್ತಾರೆ ಎಂಬುದು ನಿಜಕ್ಕೂ ಅಚ್ಚರಿ!

Category : Nature


ProfileImg

Written by Srinivasa Murthy