ಚಂದಿರನ ಮೇಲೆ ಭಾರತದ ವಿಕ್ರಮ!

ಭಾರತಕ್ಕೇನು ಲಾಭ? ಇಲ್ಲಿದೆ ಸಂಪೂರ್ಣ ಮಾಹಿತಿ..

ProfileImg
27 Aug '23
7 min read


image

ಹಲವು ತೊಡಕುಗಳನ್ನು ಮೀರಿ ಚಂದ್ರಯಾನ- ಯೋಜನೆಯ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿದ್ದು, ದಕ್ಷಿಣ ಪಥೇಶ್ವರನಾಗಿ ಭಾರತ ಇತಿಹಾಸ ಸೃಷ್ಟಿಸಿದೆ.ಈ ಮೂಲಕ ದಕ್ಷಿಣ ಧ್ರುವದಲ್ಲಿ ಅಡಿ ಇಟ್ಟ ವಿಶ್ವದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ.

ಜುಲೈ 14, 2023ರಂದು ಚಂದ್ರಯಾನ- 3 ಉಡಾವಣೆ ಮಾಡಲಾಗಿತ್ತು.ಇದು  ಕೋಟ್ಯಂತರ ಭಾರತೀಯರು ಕಂಡ ಕನಸು, ಇಸ್ರೋ ವಿಜ್ಞಾನಿಗಳು ಪಟ್ಟ ಪರಿಶ್ರಮ ಎಲ್ಲವೂ ಕಾರ್ಯರೂಪಕ್ಕೆ ಬಂದ ಒಂದು ಸುದಿನವಾಗಿದೆ. 

ಚಂದ್ರಯಾನ 3 ಉಡಾವಣೆಯ ಹಂತಗಳು ಹೀಗಿವೆ..

ಪೂರ್ವ ನಿಯೋಜಿತ ಯೋಜನೆಯಂತೆ ಆಂಧ್ರಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಜಿ.ಎಸ್.ಎಲ್.ವಿ ಮಾರ್ಕ್ 3 (ಎಲ್‍ವಿಎಂ 3) ಹೆವಿ ಲಿಫ್ಟ್ ಉಡಾವಣಾ ವಾಹನದಿಂದ ಯಶಸ್ವಿಯಾಗಿ ಬಹುನಿರೀಕ್ಷಿತ ಚಂದ್ರಯಾನ-3 ಮಿಷನ್ ಕೋಟ್ಯಂತರ ಭಾರತೀಯರ ಕನಸು ಹೊತ್ತು ಆಗಸಕ್ಕೆ ಚಿಮ್ಮಿತು. ಜುಲೈ 14, ಮಧ್ಯಾಹ್ನ 2.35ಕ್ಕೆ ಉಡಾವಣೆಗೊಂಡ ಬಳಿಕ ಸರಿಯಾಗಿ 17 ನಿಮಿಷಗಳ ನಂತರ ಉಪಗ್ರಹವು ನಿಖರವಾಗಿ ಭೂಮಿಯ ಕಕ್ಷೆಗೆ ಸೇರಿತ್ತು. ಎಲ್ಲವೂ ಕ್ರಮಬದ್ಧವಾಗಿ ನಡೆದ ನಂತರ ಆಗಸ್ಟ್ 23ರಂದು ಸಂಜೆ 5:47ಕ್ಕೆ ಚಂದ್ರಯಾನ ನೌಕೆಯಲ್ಲಿರುವ ಲ್ಯಾಂಡರ್ ಚಂದ್ರನ ಮೇಲೆ ಇಳಿದಿದೆ. 

ಚಂದ್ರನಿಗೆ 5 ಬಾರಿ ಪ್ರದಕ್ಷಿಣೆ ಹಾಕಿದ ಬಳಿಕ ಇಳಿಯಬೇಕಾದ ಲ್ಯಾಂಡರ್ ಮಾಡ್ಯೂಲ್, ಪ್ರೊಪಲ್ಷನ್ ಮಾಡ್ಯೂಲ್ ನಿಂದ ಬೇರ್ಪಡುತ್ತದೆ.ನಂತರ ಪ್ರೊಪಲ್ಷನ್ ಮಾಡ್ಯೂಲ್ ಅದೇ ಕಕ್ಷೆಯಲ್ಲೇ ಸುತ್ತುವುದನ್ನು ಮುಂದುವರಿಸುತ್ತದೆ.ಲ್ಯಾಂಡರ್ ನಿಧಾನಕ್ಕೆ ಚಂದ್ರನ ಮೇಲ್ಮೈಯಲ್ಲಿ ಇಳಿಯಲು ಪ್ರಾರಂಭಿಸುತ್ತದೆ.

ಜುಲೈ 15ರಂದು ನೌಕೆ ಭೂಮಿಯ ಮೊದಲ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿತ್ತು.ಜುಲೈ 17ರಂದು ಎರಡನೇ ಕಕ್ಷೆ ಮತ್ತು ಜುಲೈ 18ರಂದು ಭೂಮಿಯ ಮೂರನೇ ಕಕ್ಷೆಯನ್ನು ಯಶಸ್ವಿಯಾಗಿ ಸೇರಿದ್ದು, ಆಗಸ್ಟ್ 10ಕ್ಕೆ ನಾಲ್ಕನೇ ಕಕ್ಷೆ ಬದಲಾವಣೆ ಪ್ರಕ್ರಿಯೆ ಯಶಸ್ವಿಯಾಗಿದೆ.ಗಗನನೌಕೆಯು ಆಗಸ್ಟ್ 16ರಂದು ಬೆಳಗ್ಗೆ 8.30ಕ್ಕೆ ಭೂಮಿಯ ಐದನೇ ಹಾಗೂ ಅಂತಿಮ ಕಕ್ಷೆಯನ್ನು ಸೇರಿದೆ.ಚಂದ್ರನ ದಕ್ಷಿಣ ಧ್ರುವದಿಂದ 163 ಕಿಮೀ ದೂರದಲ್ಲಿ ನೌಕೆ ಸಾಗುತ್ತಿದೆ.ಇನ್ನು ಆಗಸ್ಟ್ 17ರ ಗುರುವಾರದಂದು ಪ್ರೊಪಲ್ಷನ್ & ಲ್ಯಾಂಡರ್ ಯಶಸ್ವಿಯಾಗಿ ಪ್ರತ್ಯೇಕವಾಗಿವೆ.ಆಗಸ್ಟ್ 18 ರಂದು ಸಂಜೆ ವೇಳೆಗೆ ಡೀ-ಬೂಸ್ಟಿಂಗ್ ನಡೆದಿದ್ದು, ಲ್ಯಾಂಡರ್ ನ್ನು ಹಂತ ಹಂತವಾಗಿ ಚಂದ್ರನ ಮೇಲ್ಮೈ ಗೆ ಇಳಿಸುವ ಪ್ರಕ್ರಿಯೆ ಯಶಸ್ವಿಯಾಗಿದೆ.  ಆಗಸ್ಟ್ 23  ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ್ದೂ, ಇಡೀ ದೇಶವೇ ಹೆಮ್ಮೆ ಪಡುವಂತದಿನವಾಗಿ ಹೊರಹೊಮ್ಮಿದೆ. 

ಚಂದ್ರಯಾನ-3 ಇದು ಚಂದ್ರನ ಮೇಲ್ಮೈಯಲ್ಲಿ ಸುರಕ್ಷಿತವಾಗಿ ಇಳಿಯುವ ಮತ್ತು ಪರಿಭ್ರಮಿಸುವ ಸಂಪೂರ್ಣ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಚಂದ್ರಯಾನ- 2ರ ಮುಂದಿನ ಹಂತದ ಕಾರ್ಯಾಚರಣೆಯಾಗಿದೆ. 47 ವರ್ಷಗಳ ನಂತರ ಚಂದ್ರನ ಕಡೆಗೆ ತನ್ನ ಮೊದಲ ಬಾಹ್ಯಾಕಾಶ ನೌಕೆ ಲ್ಯಾಂಡರ್ ಲೂನಾ -25 ಅನ್ನು ಉಡಾವಣೆ ಮಾಡಿದ ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೊ ಮಾಸ್ನೊ ಈಗ ಇಸ್ರೋ ಜತೆ ಪೈಪೋಟಿ ನಡೆಸುತ್ತಿದೆ. ಚಂದ್ರಯಾನ -3 ಯಶಸ್ವಿಯಾಗಿ ಲ್ಯಾಂಡ್ ಆಗಿದ್ದು, ರಷ್ಯಾದ ಲೂನಾ-25 ಪತನಗೊಂಡಿವೆ ಎಂದು ವರದಿಯಿಂದ ತಿಳಿದು ಬಂದಿದೆ.

ವಿಕ್ರಮ್  ಲ್ಯಾಂಡರ್ ನ ಕೆಲಸ ಏನು?

ಚಂದ್ರನ ಮೇಲೆ ಗಗನ ನೌಕೆ ಸುರಕ್ಷಿತವಾಗಿ ಇಳಿಯೋದೇ ದೊಡ್ಡ ಸಾಹಸ.ಅದರಲ್ಲೂ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸೋದು ಸವಾಲು.ಚಂದ್ರನ ಮೇಲೆ ಇಳಿಯುವ ಲ್ಯಾಂಡರ್ ನ ಹೆಸರು ವಿಕ್ರಮ್. ಈತನ ಒಡಲಲ್ಲಿ ಪ್ರಗ್ಯಾನ್ ಎಂಬ ರೋವರ್ ಕೂಡಾ ಇರುತ್ತೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.ಕಳೆದ ಬಾರಿ ಸರಿಯಾಗಿ ಲ್ಯಾಂಡ್ ಆಗದ ಪರಿಣಾಮ, ಇಡೀ ಯೋಜನೆಯೇ ವಿಫಲವಾಗಿತ್ತು.ಈ ಬಾರಿ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ ಆತನ ಒಳಗಿರುವ ಪ್ರಗ್ಯಾನ್ ರೋವರ್ ಚಂದ್ರನ ಲೋಕಕ್ಕೆ ಪ್ರವೇಶಿಸಿದೆ.

ಬಳಿಕ ವಿಕ್ರಂ ಲ್ಯಾಂಡರ್ ತನ್ನ ಇನ್ನಿತರ ಕೆಲಸ ಕಾರ್ಯಗಳನ್ನ ಆರಂಭ ಮಾಡಿ, ಲ್ಯಾಂಡರ್ ನಲ್ಲಿ ಅಳವಡಿಸಿರುವ ಲ್ಯಾಂಗ್ ಮುಯಿರ್ ಪ್ರೋಬ್ ಚಂದ್ರನ ಮೇಲಿನ ಪ್ಲಾಸ್ಮಾ ಸಾಂದ್ರತೆ ಮತ್ತು ಅದರಲ್ಲಿನ ವ್ಯತ್ಯಾಸವನ್ನು ಪತ್ತೆ ಮಾಡಲಿದೆ. ಜತೆಗೆ ಇದರಲ್ಲಿ ಅಳವಡಿಸಲಾಗಿರುವ ಚಂದ್ರನ ಮೇಲ್ಮೈ ಥರ್ಮೋಫಿಸಿಕಲ್ ಮಾದರಿಯು ಚಂದ್ರನ ಮೇಲ್ಮೈನ ತಾಪಮಾನವನ್ನು ಅಧ್ಯಯನ ಮಾಡಲಿದೆ. ಅದೇ ರೀತಿ ಇನ್ಸ್ ಸ್ಟ್ರೆಮೆಂಟ್ ಫಾರ್ ಲೂನಾರ್ ಸೀಸ್ಮಿಕ್ ಆ್ಯಕ್ಟಿವಿಟಿ ಚಂದ್ರನ ಮೇಲ್ಮೈನ ಭೂಕಂಪಗಳ ಬಗ್ಗೆ ಅಧ್ಯಯನ ನಡೆಸಲಿದೆ.

ಪ್ರಗ್ಯಾನ್ ರೋವರ್ ನ ಕೆಲಸ ಏನು?

ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದಾಗ ಪ್ರಗ್ಯಾನ್ ರೋವರ್ ಹೊರಗೆ ಬಂದಿದೆ.ಇದರ ಜೀವಿತಾವಧಿ 14 ದಿನ ಮಾತ್ರ. ಈ ರೋವರ್ ಒಳಗೆ ಲೇಸರ್ ಸ್ಪೆಕ್ಟ್ರೋ ಮೀಟರ್ ಅಳವಡಿಸಲಾಗಿರುತ್ತದೆ.ಈ ಉಪಕರಣವು ಚಂದ್ರನ ಮೇಲೆ ಇರುವ ಖನಿಜಗಳು ಮತ್ತು ರಾಸಾಯನಿಕ ವಸ್ತುಗಳ ಸಂಯೋಜನೆಗಳನ್ನು ಅಧ್ಯಯನ ಮಾಡಲಿದ್ದು, ಈ ಮೂಲಕ ಚಂದ್ರನ ಮೇಲ್ಮೈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅನುಕೂಲ ಆಗಲಿದೆ.ಇನ್ನು ಈ ರೋವರ್‍ನಲ್ಲಿ ಎಕ್ಸ್ ರೇ ಸ್ಪೆಕ್ಟ್ರೋ ಮೀಟರ್ ಕೂಡಾ ಇದೆ. ಈ ಉಪಕರಣವು ಚಂದ್ರನಲ್ಲಿ ಇರುವ ಕಲ್ಲು ಮತ್ತು ಮಣ್ಣಿನಲ್ಲಿ ಇರುವ ಮೆಗ್ನೀಶಿಯಂ, ಅಲ್ಯುಮಿನಿಯಂ, ಸಿಲಿಕಾನ್, ಕಬ್ಬಿಣ ಸೇರಿದಂತೆ ಹಲವು ಖನಿಜಗಳ ಕುರಿತಾಗಿ, ಲೋಹಗಳ ಕುರಿತಾಗಿ ಮಾಹಿತಿ ಸಂಗ್ರಹ ಮಾಡಲಿದೆ.

ಜುಲೈ 14 ರಂದೇ ಉಪಗ್ರಹ ಉಡಾವಣೆ ಏಕೆ ಮಾಡಲಾಗುತ್ತದೆ?

ಪ್ರತಿ ವರ್ಷ ಈ ತಿಂಗಳಲ್ಲಿ ಭೂಮಿ ಮತ್ತು ಚಂದ್ರ ಇತರ ಸಮಯಕ್ಕಿಂತ ಅತ್ಯಂತ ಹತ್ತಿರದಲ್ಲಿ ಇರುತ್ತವೆ.ಇದೇ ಕಾರಣಕ್ಕಾಗಿ 22 ಜುಲೈ 2019ರಂದು ಚಂದ್ರಯಾನ-2 ಅನ್ನು ಸಹ ಉಡಾವಣೆ ಮಾಡಲಾಗಿತ್ತು.ಈಗ ಚಂದ್ರಯಾನ-3 ಉಪಗ್ರಹವನ್ನು ಜುಲೈ 14ರಂದು ಉಡಾವಣೆ ಮಾಡಲಾಗಿದೆ.

ಹತ್ತು ವರ್ಷದಲ್ಲಿ ಲಕ್ಷ ಕೋಟಿ ಡಾಲರ್ ಮೌಲ್ಯ!

ಇನ್ನು ಚಂದ್ರಯಾನ ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ಹುರುಪನ್ನು ತಂದಿದೆ.ಇದೀಗ ಚಂದ್ರಯಾನ- 3 ಯಶಸ್ವಿಯಾಗಿದ್ದು, ಭಾರತದ ಬಾಹ್ಯಾಕಾಶ ಅಭಿವೃದ್ಧಿಯೂ ರಾಕೆಟ್ ರೀತಿ ಮೇಲಕ್ಕೇರಲಿದೆ ಎನ್ನುತ್ತಾರೆ ತಜ್ಞರು. ಪ್ರಸ್ತುತ ಬೆಳವಣಿಗೆಯ ಪಥವನ್ನು ಆಧರಿಸಿ, ಮುಂದಿನ ದಶಕದಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರವು 1 ಟ್ರಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ವಲಯವಾಗಲಿದೆ ಎಂದು ಭಾರತದ ಜಿ20 ಶೆರ್ಪಾ, ಅಮಿತಾಬ್ ಕಾಂತ್ ಹಲವಾರು ಅಧ್ಯಯನಗಳನ್ನು ಉಲ್ಲೇಖಿಸಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಚಂದ್ರನ ದಕ್ಷಿಣ ಧ್ರುವದ ಮೇಲೆ ಇಸ್ರೋ ಕಣ್ಣೇಕೆ?

2019ರಲ್ಲಿ ಚಂದ್ರಯಾನ- 2 ಯೋಜನೆ ಸಂದರ್ಭದಲ್ಲೂ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲೇ ಇಳಿಸಲು ತೀರ್ಮಾನಿಸಲಾಗಿತ್ತು.ಇದೀಗ ಚಂದ್ರಯಾನ 3 ಯೋಜನೆಯಲ್ಲೂ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲೇ ಇಳಿಸಲಾಗಿದೆ.ಇದಕ್ಕಾಗಿ ಚಂದ್ರನ ಮೇಲೆ ವಿಶಾಲವಾದ ಸ್ಥಳವನ್ನೂ ಗುರುತಿಸಲಾಗಿತ್ತು.ಚಂದ್ರನ ದಕ್ಷಿಣ ಧ್ರುವ ವಿಜ್ಞಾನಿಗಳಿಗೆ ಬಹಳ ಸಮಯದಿಂದ ಕುತೂಹಲ ಕೆರಳಿಸಿದೆ.ಏಕೆಂದರೆ, ಈ ಭಾಗದಲ್ಲಿ ಉಷ್ಣಾಂಶ ಮೈನಸ್ 230 ಡಿಗ್ರಿಗಿಂತಲೂ ಕಡಿಮೆ ಇದೆ.ಬೆಳಕನ್ನೇ ಕಾಣದ ಎಷ್ಟೊಂದು ಪ್ರದೇಶಗಳು ಇಲ್ಲಿವೆ.ಇದು ಈ ಭಾಗದಲ್ಲಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪಳೆಯುಳಿಕೆ ಇರಬಹುದು ಎಂಬ ಅಂದಾಜಿದೆ.ಹಾಗೆ ನೋಡಿದ್ರೆ ಚಂದ್ರಯಾನ 1 ಯೋಜನೆಯು ಚಂದ್ರನ ಮೇಲೆ ನೀರಿದೆ ಎಂದು ಮೊದಲ ಬಾರಿಗೆ ಕಂಡು ಹಿಡಿದಿತ್ತು.ಈ ಹಿನ್ನೆಲೆಯಲ್ಲಿ ಈ ಭಾಗದಲ್ಲೇ ಮತ್ತೆ ಅಧ್ಯಯನ ನಡೆಸೋದಕ್ಕೆ ಇಸ್ರೋ ಮುಂದಾಗಿದೆ.

ಚಂದ್ರಯಾನ 3 ಯೋಜನೆ ಯಶಸ್ವಿಯ ಲಾಭವೇನು?

ಚಂದ್ರಯಾನ 3 ಯೋಜನೆ ಯಶಸ್ವಿಯಾಗಿದ್ದು, ಚಂದ್ರನ ಮೇಲೆ ನೌಕೆ ಇಳಿಸಿದ 4ನೇ ದೇಶ ಅನ್ನೋ ಹೆಗ್ಗಳಿಕೆ ಭಾರತಕ್ಕೆ ಸಿಕ್ಕಿದೆ.ಇವರೆಗೆ ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳು ಮಾತ್ರ ಚಂದ್ರನ ಮೇಲೆ ನೌಕೆ ಇಳಿಸಿವೆ.ಹಲವು ಬಿಗ್ ಬಜೆಟ್ ಸಿನೆಮಾಗಳಿಗಿಂತಾ ಕಡಿಮೆ ವೆಚ್ಚದಲ್ಲಿ ಚಂದ್ರಯಾನ 3 ಯೋಜನೆಯನ್ನು ಕೈಗೊಳ್ಳಲಾಗಿದ. ಕೇವಲ 615 ಕೋಟಿ ರೂ.ವೆಚ್ಚದಲ್ಲಿ ಚಂದ್ರಯಾನ 3 ಯೋಜನೆ ಸಿದ್ದವಾಗಿದೆ. ಇನ್ನು ಈ ಯೋಜನೆಯಿಂದ ಭಾರತದ ಆಂತರಿಕ್ಷ ವಿಜ್ಞಾನ ವಲಯಕ್ಕೆ ಬೂಸ್ಟ್ ಸಿಗುತ್ತದೆ. ಉಪಗ್ರಹ ಉಡಾವಣೆ ಸೇರಿದಂತೆ ಹಲವು ವಿಚಾರಗಳಿಗೆ ವಿಶ್ವದ ಹಲವು ರಾಷ್ಟ್ರಗಳು ಭಾರತವನ್ನೇ ಅವಲಂಬಿಸಲಿವೆ.ಹೀಗಾಗಿ ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೂಡಿಕೆ ಇನ್ನಷ್ಟು ಹೆಚ್ಚಾಗಲಿದೆ.

ಚಂದ್ರನ ಕತ್ತಲೆಯ ಭಾಗ ಅನ್ವೇಷಣೆ:

ಇನ್ನೊಂದೆಡೆ, ಚಂದ್ರನಲ್ಲಿರುವ ಖನಿಜಗಳು, ಮಣ್ಣು ಮತ್ತು ಅವುಗಳ ರಾಸಾಯನಿಕ ಮಿಶ್ರಣವನ್ನು ಅಧ್ಯಯನ ನಡೆಸಲು ರೋವರ್ ನಲ್ಲಿ ಲೇಸರ್ ಇಂಡ್ನೂಸ್ಟ್ ಬ್ರೇಕ್ ಡೌನ್ ಸ್ಪೆಕ್ಟ್ರೋಸ್ಕೋಪ್ ಮತ್ತು ಆಲ್ಫಾ ಪಾರ್ಟಿಕಲ್ ಎಕ್ಸ್ ರೇ ಸ್ಪೆಕ್ಟ್ರೋ ಮೀಟರ್ ಅಳವಡಿಕೆಯಾಗಿದೆ. ಅದೇ ರೀತಿ ಉಪಗ್ರಹವು ಚಂದ್ರನಲ್ಲಿರುವ ನೀರಿನ ಅಂಶದ ಕುರಿತು ಅಧ್ಯಯನ ನಡೆಸಲಿದೆ.ಪ್ರಮುಖವಾಗಿ ಚಂದ್ರನ ದಕ್ಷಿಣ ಧ್ರುವದ ಕತ್ತಲಿನ ಭಾಗದ ಅನ್ವೇಷಣೆ ನಡೆಸಲಿದ್ದು, ಅದರ ಮೇಲ್ಮೈಯನ್ನು ಅಧ್ಯಯನ ನಡೆಸಲಿದೆ.ಹೊಸ ಮಾಹಿತಿಯು ಬಾಹ್ಯಾಕಾಶದ ರಹಸ್ಯಗಳನ್ನು ಪರಿಹರಿಸುತ್ತದೆ.

ಪರಸ್ಪರ ಸಂವಹನ

ಪ್ರೊಪಲನ್ ಪೇಲೋಡ್ ಚಂದ್ರನಿಂದ ಇಸ್ರೋದ ಇಂಡಿಯನ್ ಡೀಪ್ ಸ್ಪೇಸ್ ನೆಟ್‍ವರ್ಕ್(ಐಡಿಎಸ್‍ಎನ್) ನೊಂದಿಗೆ ಸಂವಹನ ನಡೆಸಲಿದೆ. ಅದೇ ರೀತಿ ಲ್ಯಾಂಡರ್ ಮಾಡ್ಯೂಲ್ ಐಡಿಎಸ್‍ಎನ್ ಮತ್ತು ರೋವರ್‍ನೊಂದಿಗೆ ಸಂವಹನ ನಡೆಸಲಿದೆ.ಆದರೆ, ರೋವರ್, ಲ್ಯಾಂಡರ್‍ನೊಂದಿಗೆ ಮಾತ್ರ ಸಂವಹನ ನಡೆಸುತ್ತದೆ. ಈ ಯೋಜನೆಯ ಮೂಲಕ ಚಂದ್ರನಲ್ಲಿ ನೀರು ಇರುವ ಸ್ಥಳವನ್ನು ಪತ್ತೆ ಮಾಡಲು, ನೀರಿನ ಪ್ರಮಾಣ ತಿಳಿಯಲು, ಚಂದ್ರನ ಕತ್ತಲಿನ ಭಾಗದ ಅನ್ವೇಷಣೆ, ಖನಿಜಗಳ ಅಧ್ಯಯನ ಸೇರಿದಂತೆ ಚಂದ್ರನ ವೈಜ್ಞಾನಿಕ ಅಧ್ಯಯನ ನಡೆಸಲು ಭಾರತೀಯ ವಿಜ್ಞಾನಿಗಳಿಗೆ ಸಾಧ್ಯವಾಗಲಿದೆ.   

ಜನ ಸಾಮಾನ್ಯರಿಗೆ ಏನು ಲಾಭ?

ಚಂದ್ರಯಾನ-3ರ ಯಶಸ್ಸು ಭವಿಷ್ಯದಲ್ಲಿ ಭಾರತೀಯರಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.ಹವಾಮಾನ ಸಂಬಂಧಿತ ಮಾಹಿತಿ ಲಭ್ಯವಾಗಲಿದ್ದು, ಸಂವಹನವನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶ ಬಲಿಷ್ಠವಾಗಿದ್ದರೆ, ವಿಶ್ವದಲ್ಲಿ ಭಾರತೀಯರ ಸ್ಥಾನಮಾನ ಮತ್ತಷ್ಟು ಹೆಚ್ಚಲಿದೆ. ಚಂದ್ರನ ಮೇಲೆ ಹೋಗಲು ಸಾಧ್ಯವೇ, ಚಂದ್ರನಲ್ಲಿ ಜೀವವಿದೆಯೇ ಅಥವಾ ಇಲ್ಲವೇ, ಚಂದ್ರನಲ್ಲಿ ಕೃಷಿ ಮಾಡಬಹುದೇ ಅಥವಾ ಇಲ್ಲವೇ ಅಥವಾ ಚಂದ್ರನ ಮೇಲೆ ಎಷ್ಟು ಅಮೂಲ್ಯವಾದ ವಸ್ತುಗಳಿವೆ, ಇಂತಹ ಎಲ್ಲಾ ಪ್ರಶ್ನೆಗಳಿಗೆ ಜನಸಾಮಾನ್ಯರಿಗೆ ಉತ್ತರ ಸಿಗುತ್ತದೆ.

ವಿಜ್ಞಾನಿಗಳಿಗೆ ಲಾಭವೇನು?

ಹೊಸ ಮಾಹಿತಿಯು ಬಾಹ್ಯಾಕಾಶದ ರಹಸ್ಯಗಳನ್ನು ಪರಿಹರಿಸುತ್ತದೆ.ಚಂದ್ರನ ಮೇಲೆ ನೀರು ಮತ್ತು ಮಂಜುಗಡ್ಡೆಯೊಂದಿಗೆ ಯುರೇನಿಯಂ, ಪ್ಲಾಟಿನಂ ಮತ್ತು ಚಿನ್ನ ಸೇರಿದಂತೆ ಹಲವು ರೀತಿಯ ಅದಿರುಗಳಿವೆ ಎಂದು ವಿಶ್ವದ ಅನೇಕ ವಿಜ್ಞಾನಿಗಳು ನಂಬುತ್ತಾರೆ.ಈಗ ಭಾರತೀಯ ಮಿಷನ್ ಚಂದ್ರಯಾನ-3 ರ ರೋವರ್ ಮುಂದಿನ 14 ದಿನಗಳವರೆಗೆ ಅಂತಹ ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತದೆ.ಅಲ್ಲಿನ ಚಿತ್ರಗಳನ್ನು ಕಳುಹಿಸುತ್ತದೆ.ಚಂದ್ರನು ಭೂಮಿಗೆ ಹತ್ತಿರದಲ್ಲಿದೆ, ಆದ್ದರಿಂದಲೇ ಇಲ್ಲಿಂದ ಸಂಗ್ರಹಿಸಿದ ಮಾಹಿತಿಯ ಮೇಲೆ ಜಗತ್ತಿನಾದ್ಯಂತ ವಿಜ್ಞಾನಿಗಳು ಕಣ್ಣಿಟ್ಟಿರುತ್ತಾರೆ.ಮಿಷನ್ ಪೂರ್ಣಗೊಂಡ ನಂತರ ಪಡೆದ ಫಲಿತಾಂಶಗಳು ಬಾಹ್ಯಾಕಾಶ ಪ್ರಪಂಚದ ಅನೇಕ ರಹಸ್ಯಗಳನ್ನು ಬಹಿರಂಗಪಡಿಸುತ್ತವೆ.

ಆರ್ಥಿಕತೆಗೆ ಲಾಭವೇನು?

ಖಾಸಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಾಬಲ್ಯ ಹೆಚ್ಚಾಗುತ್ತದೆ. ಭಾರತದಲ್ಲಿ ಪ್ರಸ್ತುತ ತಂತ್ರಜ್ಞಾನದ ಮೂಲಕ ವಿಷಯಗಳನ್ನು ಸುಲಭಗೊಳಿಸುತ್ತಿರುವ  140 ನೋಂದಾಯಿತ ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್‌ಅಪ್‌ಗಳಿದ್ದು, ಇವುಗಳಲ್ಲಿ Skyroot, Satsure, Dhruv  Space ಸೇರಿವೆ. ಇವು ಉಪಗ್ರಹ ಸಂಕೇತದಿಂದ ಬ್ರಾಡ್‌ಬ್ಯಾಂಡ್ ಮತ್ತು ಸೌರ ಫಾರ್ಮ್‌ಗಳಿಗೆ ಕೆಲಸ ಮಾಡುತ್ತಿವೆ.ವಿಶ್ವದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸ್ಥೆಗಳು ಮತ್ತು ಕಂಪನಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ.ಉದ್ಯೋಗಾವಕಾಶಗಳೂ ಹೆಚ್ಚುತ್ತವೆ. ಇದರಿಂದ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತದಲ್ಲಿ ಮೊದಲ ಖಾಸಗಿ ರಾಕೆಟ್ ಅಭಿವೃದ್ಧಿಪಡಿಸಿದ ಕಂಪನಿಯಾದ ಸ್ಕೈರೂಟ್ ಏರೋಸ್ಪೇಸ್‌ನ ಸಹ-ಸಂಸ್ಥಾಪಕ ಪವನ್ ಕುಮಾರ್ ಚಂದನಾ ಅವರು ಹೇಳಿದ್ದಾರೆ. 

ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, 2047 ರ ವೇಳೆಗೆ, ಆದಾಯದ ವಿಷಯದಲ್ಲಿ ಭಾರತವು 25 ಪ್ರತಿಶತ ಪಾಲುದಾರಿಕೆಯನ್ನು ಹೊಂದಲಿದೆ.ಈಗ ಶೇಕಡ ಮೂರರಷ್ಟು ಮಾತ್ರ ಭಾಗವಹಿಸುತ್ತಿದೆ.

ಉದ್ಯಮಿಗಳಿಗೆ ಲಾಭವೇನು?

ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳ ಷೇರುಗಳಲ್ಲಿ ದಾಖಲೆಯ ಏರಿಕೆಯಾಗಲಿದೆ.ದೇಶದ ಹೆಸರಾಂತ ಕಂಪನಿಗಳಾದ ಗೋದ್ರೇಜ್ ಏರೋಸ್ಪೇಸ್, ​​ಲಾರ್ಸನ್ ಮತ್ತು ಟೂಬ್ರೊ (ಎಲ್ & ಟಿ), ಹಿಮ್ಸನ್ ಇಂಡಸ್ಟ್ರಿಯಲ್ ಸೆರಾಮಿಕ್ಸ್ ಚಂದ್ರಯಾನ-3 ಮಿಷನ್‌ನೊಂದಿಗೆ ಸಂಬಂಧ ಹೊಂದಿವೆ.ಈ ಕಂಪನಿಗಳು ತಯಾರಿಸಿದ ಉಪಕರಣಗಳನ್ನು ಚಂದ್ರಯಾನ-3ರಲ್ಲಿ ಬಳಸಲಾಗಿದೆ.ಇದರ ಪರಿಣಾಮ ಕಂಪನಿಗಳ ಷೇರುಗಳ ಮೇಲೆ ಗೋಚರಿಸಿತು.

ಚಂದ್ರಯಾನ 3 ರ ಸಾಫ್ಟ್ ಲ್ಯಾಂಡಿಂಗ್ ನಂತರ, ಬಾಹ್ಯಾಕಾಶ ಕಂಪನಿಗಳ ಷೇರುಗಳಲ್ಲಿ ಉತ್ಕರ್ಷವಾಗಿದೆ.ಗೋದ್ರೇಜ್ ಇಂಡಸ್ಟ್ರೀಸ್, ಎಲ್ & ಟಿ, ಟಾಟಾ ಸ್ಟೀಲ್ ಮತ್ತು ಹಿಂದೂಸ್ತಾನ್ ಏರೋನಾಟಿಕ್ಸ್ ಷೇರುಗಳು ದಾಖಲೆಯ ಗಳಿಕೆ ಕಂಡವು.ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಷೇರುಗಳು 52 ವಾರಗಳ ಗರಿಷ್ಠ 4,138.80 ರೂ.ಇದಲ್ಲದೇ ಭಾರತ್ ಹೆವಿ ಇಲೆಕ್ಟ್ರಿಕಲ್ಸ್, ಪ್ಯಾರಾಸ್ ಡಿಫೆನ್ಸ್ ಮತ್ತು ಸ್ಪೇಸ್ ಟೆಕ್ನಾಲಜೀಸ್ ಮತ್ತು ಸೆಂಟಮ್ ಎಲೆಕ್ಟ್ರಾನಿಕ್ಸ್ ಷೇರುಗಳು ಏರಿಕೆ ಕಂಡಿವೆ.

ಕೃಷಿ-ರೈತರು ಈ ರೀತಿಯ ಲಾಭವನ್ನು ಪಡೆಯುತ್ತಾರೆ..

ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ದೇಶವು ಬಾಹ್ಯಾಕಾಶದಲ್ಲಿ ಬಲಿಷ್ಠವಾಗುತ್ತಿದ್ದಂತೆ, ಕೃಷಿ ಕ್ಷೇತ್ರವು ಅದರಿಂದ ಸಾಕಷ್ಟು ಪ್ರಯೋಜನವನ್ನು ಪಡೆಯುತ್ತದೆ.ಸದ್ಯ ಮಣ್ಣು ಪರೀಕ್ಷೆಗೆ ಮಾದರಿ ತೆಗೆದುಕೊಂಡು ಪರೀಕ್ಷೆ ಇತ್ಯಾದಿ ಕೆಲಸಗಳು ನಡೆಯುತ್ತಿವೆ. AI-ML ಅನ್ನು ಈಗ ಮಣ್ಣಿನ ಪರೀಕ್ಷೆಯಲ್ಲಿಯೂ ಬಳಸಲಾಗುತ್ತಿದೆ, ಆದರೆ ಬಾಹ್ಯಾಕಾಶದಲ್ಲಿ ಶಕ್ತಿಯ ಹೆಚ್ಚಳದೊಂದಿಗೆ, ಈ ಕೆಲಸವು ತುಂಬಾ ಸುಲಭ, ವೇಗ ಮತ್ತು ಅಭಿವೃದ್ಧಿಗೆ ಬಹಳ ಮುಖ್ಯವೆಂದು ಸಾಬೀತುಪಡಿಸುತ್ತದೆ ಎಂದು ಇಸ್ರೋದ ಏಕೈಕ ಪ್ರಾದೇಶಿಕ ಶೈಕ್ಷಣಿಕ ಕೇಂದ್ರದ ಮುಖ್ಯಸ್ಥ ಮತ್ತು NIT ಸಂಶೋಧನೆ ಮತ್ತು ಅಭಿವೃದ್ಧಿಯ ಡೀನ್ ಪ್ರೊ. ಬ್ರಹ್ಮಜಿತ್ ಸಿಂಗ್ ಅವರು ಹೇಳಿದ್ದಾರೆ.

ಚಂದ್ರಯಾನ-3ರಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ಕಂಪನಿಗಳು 

>ಟಾಟಾ ಎಲೆಕ್ಸಿ: ಟಾಟಾ ಗ್ರೂಪ್ ಒಡೆತನದ ಈ ಕಂಪನಿ ಬಾಹ್ಯಾಕಾಶ ನೌಕೆ ಮತ್ತು ಏವಿಯಾನಿಕ್ಸ್ ಅಭಿವೃದ್ಧಿಯ ಜವಾಬ್ದಾರಿಯನ್ನು ಹೊಂದಿದೆ.

>ಎಂಟಿಎಆರ್ ಟೆಕ್: ಈ ಕಂಪನಿ ರಾಕೆಟ್ ಇಂಜಿನ್‍ಗಳು ಮತ್ತು ಕೋರ್ ಪಂಪ್‍ಗಳನ್ನು ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

>ಭಾರತ್ ಹೆವಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಎಚ್‍ಇಎಲ್): ಲ್ಯಾಂಡರ್ ಮಾಡ್ಯೂಲ್, ಪ್ರೊಪಲ್ಷನ್ ಮಾಡ್ಯೂಲ್ ಎರಡಕ್ಕೂ ವಿದ್ಯುತ್ ಸರಬರಾಜು ಮಾಡುವ ಉತ್ತಮ ಗುಣಮಟ್ಟದ ಬ್ಯಾಟರಿಗಳನ್ನು ನೀಡಿದೆ.

>ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್): ಲ್ಯಾಂಡರ್ ಅನ್ನು ವಿನ್ಯಾಸಗೊಳಿಸಿದೆ ಮತ್ತು ಯಾಂತ್ರಿಕ ಬೆಂಬಲವನ್ನು ಒದಗಿಸಿದೆ.

>ಸೆಂಟಮ್ ಎಲೆಕ್ಟ್ರಾನಿಕ್ಸ್: ಈ ಕಂಪನಿಯು ಎಲೆಕ್ಟ್ರಾನಿಕ್ ಸಿಸ್ಟಂಗಳನ್ನು ವಿನ್ಯಾಸಗೊಳಿಸಿದೆ.

>ಲಾರ್ಸೆನ್ & ಟೂಬ್ರೊ: ಇಂಜಿನಿಯರಿಂಗ್ ದೈತ್ಯ ಕಂಪನಿ ಎಲ್ & ಟಿ ಇಸ್ರೋದ ವಿಶ್ವಾಸಾರ್ಹ ಪಾಲುದಾರರಲ್ಲಿ ಒಂದಾಗಿದೆ. ಇದು ಚಂದ್ರಯಾನ-1, ಚಂದ್ರಯಾನ-2, ಗಗನಯಾನ ಮತ್ತು ಮಂಗಳಯಾನ ಸೇರಿದಂತೆ ಹಲವಾರು ಕಾರ್ಯಾಚರಣೆಗಳಿಗೆ ಯಂತ್ರಾಂಶಗಳನ್ನು ಒದಗಿಸಿದೆ. ಚಂದ್ರಯಾನ- 3ರಲ್ಲಿ ಭಾರತದ ಅತೀ ತೂಕದ ರಾಕೆಟ್ ಗೆ ಪೇಲೋಡ್ ಫೇರಿಂಗ್ (ನೌಕೆಯ ಪೇಲೋಡ್ಗೆ ರಕ್ಷಣೆ ನೀಡಲು ಇರುವ ಮೂಗಿನ ಆಕಾರದ ಸಾಧನ) ಜೋಡಣೆಯನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಪೂರ್ಣಗೊಳಿಸಲು ಎಲ್ & ಟಿ ಇಸ್ರೋಗೆ ನೇರವಾಯಿತು.

>ಗೋದ್ರೇಜ್ ಏರೋಸ್ಪೇಸ್: ಎಲ್110 ಮತ್ತು ಸಿಇ20 ಎಂಜಿನ್‍ಗಳು, ಆರ್ಬಿಟರ್ ಮತ್ತು ಲ್ಯಾಂಡರ್ ಥ್ರಸ್ಟರ್‍ಗಳು, ಡಿಎಸ್‍ಎನ್ ಆಂಟೆನಾ ಮತ್ತು ಜಿಎಸ್‍ಎಲ್‍ವಿ ಲಾಂಚರ್ ಅನ್ನು ಚಂದ್ರಯಾನ-2 ಗೆ ಈ ಕಂಪನಿ ಒದಗಿಸಿತ್ತು.ಅಲ್ಲದೇ ಕಳೆದ ಮೂರು ದಶಕಗಳಲ್ಲಿ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‍ಗಾಗಿ 175 ಎಂಜಿನ್‍ಗಳನ್ನು ಒದಗಿಸಿದ್ದು, ಭಾರತದ ಬಾಹ್ಯಾಕಾಶ ಸಂಶೋಧನಾ ಮಹತ್ವಾಕಾಂಕ್ಷೆಗಳಿಗೆ ಗಣನೀಯ ಕೊಡುಗೆ ನೀಡಿದೆ.

ಚಂದ್ರಯಾನ-3 ಯೋಜನೆಯು ಯಶಸ್ವಿಯಾಗಿದ್ದು, ಷೇರು ಮಾರುಕಟ್ಟೆ ಮೂಲಕ ಈ ಕಂಪನಿಗಳಿಗೆ ಅಪಾರ ಪ್ರಮಾಣದ ಬಂಡವಾಳ ಹರಿದು ಬರಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆಗಸ್ಟ್ 23- 140 ಕೋಟಿ ಭಾರತೀಯರ ಕನಸು ನನಸಾದ ದಿನ. ಇಸ್ರೋದ ಮಹತ್ವಾಕಾಂಕ್ಷೆಯ ಹಾಗೂ ಭಾರತದ ಪ್ರಗತಿಯ ಹೆಜ್ಜೆಗೆ ಬಲ ತುಂಬಬಲ್ಲ ಅತ್ಯಂತ ಮಹತ್ತರ ಯೋಜನೆ ಚಂದ್ರಯಾನ 3 ಯಶಸ್ವಿಯಾಗಿ ಉಡಾವಣೆಯಾಗಿದ್ದು, ಭಾರತ ಮತ್ತಷ್ಟು ಉನ್ನತ ಶಿಖರವನ್ನೇರಲಿ ಎಂಬುವುದೇ ಎಲ್ಲರ ಆಶಯ.

Category:Technology



ProfileImg

Written by shruti mopagar