Do you have a passion for writing?Join Ayra as a Writertoday and start earning.

ವ್ಯಾಲಂಟೈನ್- ಅನುದಿನದ ಅನುರಾಗ

ಎದೆಯೊಂದು ವೈನ್ ನದಿಯಾಗುವಾಗ..

ProfileImg
14 Feb '24
5 min read


image

 

ಪ್ರೇಮ ಪತ್ರ

ಬಿಳಿ ಹೂವೇ, 

ಸಂಜೆಗತ್ತಲ ಮಬ್ಬುಬೆಳಕ ಬಣ್ಣಗಳು ಪ್ರತಿಫಲಿಸಿ, ಕಡಲಿನ ಅಲೆಗಳ ಎಡೆಯಿಂದ ಒಲವಿನೊರತೆಯಾಗಿ ಸಿಡಿದು, ಎನ್ನೊಡಲ ಮರಳುಗಾಡಿನಿಂಚಿಂಚ ಬಿರಿಸಿ ಮರುಳ ಹಂಚಿ ಕಡಲಾಗಿಸಿದವಳೇ… ನೀ ಯಾರೋ..? ಹೇಗೆ ಒಳಹೊಕ್ಕೆಯೋ..? ಗೊತ್ತಿಲ್ಲ. ಅವ್ಯಕ್ತ ಭಾವದಲೆಗಳು ಮೆದುಳ ಗಂಟಿಗೆ ಕಟ್ಟುಬಿದ್ದು ಒದ್ದಾಡುತಿದ್ದಾಗ ಮನದ ಮಂಜಿಗೊಂದು ಕಿಡಿಸೋಕಿದ ಗಳಿಗೆ, ಎದೆಯಲ್ಲಿ ಕಿರು ಝರಿಯು ಮೊರೆಯ ಹತ್ತಿತು. ಕಲ್ಪಿತ ಕನಸುಗಳ ಒಂದಿಷ್ಟು ಒನಪುಗಳು ಸನ್ನಿವೇಶಗಳಾಗಿ ಎದುರಿಗೆ ನಡೆದಾಡಿ, ಅಲುಗಾಡದೆ ತುಕ್ಕಹಿಡಿದಂತಿದ್ದ ಬದುಕ ತಕ್ಕಡಿಯ ಒಗರುಗಳ ಕರಗಿಸಿ ಉಯ್ಯಾಲೆಯಾಗಿಸಿದ ಕ್ಷಣಗಳು ಜನಿಸಿದ್ದವು. ಪ್ರೇಮವೆಂಬ ನಶೆಯನ್ನೇ ಬದುಕಾಗಿಸಿಕೊಂಡ ಎದೆಯೀಗ ಹಗಲು ರಾತ್ರಿಗಳ ಪರಿವೆಯಿಲ್ಲದೆ ತೇಲುತ್ತಲೇ ಇದೆ . ಯಾಂತ್ರಿಕವಾಗಿ ನಡೆಯುತ್ತಿರುವ ಮಾಮೂಲಿ ದಿನಚರಿಗಳೆಡೆಯಲ್ಲೂ ಎಲ್ಲೆಲ್ಲೂ ನೀ ಜೊತೆಯಿರುವಂತೆ ಭಾಸವೀಗ. ಸೋಕಿದ ಹನಿಗಳೆಲ್ಲಾ ಹೃದಯದಿ ಶೇಖರಣೆಯಾಗಿ, ದಿನಕಳೆದಂತೆಲ್ಲ ನಶೆ ಅತಿಯಾಗಿ ಎದೆಯೊಂದು ವೈನ್ ನದಿಯಾಗಿದೆ.

ಇಂತೀ

ಕಪ್ಪು ಮಣ್ಣು

ಪ್ರೇಮಿಗಳ ದಿನದಂದು. ಪ್ರೇಮ ಪತ್ರ ಬರೆಯುವ ಹುಕಿಗೆ ಬಿದ್ದು ಕಲ್ಪನೆಯನ್ನೇ ಪತ್ರವಾಗಿಸುವ ಮೂಲಕ ವ್ಯಾಲೆಂಟೈನ್ ಡೇ ಯ ನೆಪದಲ್ಲಿ ಈ ಬರಹವನ್ನು ಶುರು ಮಾಡಿದ್ದೇನೆ. 

ನಮ್ಮಲ್ಲಿ ಪ್ರಣಯ ಕಥೆಗಳಿಗೆ ಕೊರತೆಯಿಲ್ಲ. ಲವ್ ಸ್ಟೋರಿಗಳಿಲ್ಲದೆ ಸಿನಿಮಾಗಳಿಲ್ಲ. ಬದುಕಿನ ಸಂದು-ಗೊಂದುಗಳಲ್ಲಿ ಹಾಸುಹೊಕ್ಕಾಗಿರುವ ನಲುಮೆ ಕಥೆ-ಚಿತ್ರಕಥೆಗಳಲ್ಲಿ ನಿರಂತರವಾಗಿ ಬರುತ್ತಿರುವುದು ಸಹಜವೆ. ಹಾಗಂತಲೇ ಪ್ರೇಮ ಪತ್ರದ ನಂತರ, ಒಂದು ಪ್ರೇಮಕಥೆ ಬರೆಯಲು ಹೊರಡುತ್ತೇನೆ.

ಪ್ರೇಮ ಕಥೆ

ಪರಿಚಿತ ಅಥವಾ ಅಪರಿಚಿತ ಹುಡುಗ ಹುಡುಗಿ ಭೇಟಿಯಾಗುತ್ತಾರೆ. ಪ್ರೇಮ ಸ್ಫುರಿಸುತ್ತದೆ. ಮೊದ ಮೊದಲು ಆಕರ್ಷಣೆ, ಭಾವತೀವ್ರತೆ, ಸಮಾನ ಅಭಿರುಚಿಗಳ ಬಗೆಗಿನ ಸಿಹಿಮಾತುಗಳು ತುಂಬಿ ತುಳುಕುತ್ತಿರುತ್ತದೆ. ಮುಂದೆ ಇಬ್ಬರಲೊಬ್ಬರು ಭವಿಷ್ಯದ ಬದುಕಿನ ಬಗ್ಗೆ ಯೋಜನೆ ಹೊಸೆಯಲು ಶುರು ಮಾಡುತ್ತಾರೆ. ಎಷ್ಟು ಪ್ರಯತ್ನಿಸಿದರೂ ಇಲ್ಲಿಂದ ಕಥೆ ಮುಂದಕ್ಕೆ ಹೋಗೋದೆ ಇಲ್ಲ. ಇಬ್ಬರೂ ಪ್ರೀತಿಯಲ್ಲಿ ಮೈ ಮರೆಯುತ್ತಾರೆ ಅಂಥ ಬರೆಯಲು ಆಗ್ತಾನೆ ಇಲ್ಲ.

ಪ್ರೇಮವನ್ನೇ ಧ್ಯಾನಿಸುವವರು, ಪ್ರೇಮದಲ್ಲೇ ಕಳೆದು ಹೋಗುವವರು, ಪ್ರೇಮವೇ ಆಗಿ ಹೋಗುವವರು ಯಾರು..? ಅವಳೋ..? ಅವನೋ..? ಉಹುಂ, ಕಥೆಯಲ್ಲೂ ಹೇಳಲಾಗುತ್ತಿಲ್ಲ. ಅಸಲಿಗೆ ಪ್ರೇಮವೆಂದರೆ ಕಳೆದು ಹೋಗುವ ಪ್ರಕ್ರಿಯೆಯೇ?

ಹುಡುಗ ಪ್ರೀತಿಯಲ್ಲಿ ಮುಳುಗಿಹೋಗಿರುತ್ತಾನೆ ಅಂದಕೊಂಡು ಬರೆಯತೊಡಗಿದರೆ, ಬದುಕು-ಬವಣೆ, ಗುರಿ-ಗುಮಾನಿ  ಬಗ್ಗೆ ಚಿಂತಿಸುತ್ತಾ ಕ್ರಮೇಣ ಪ್ರೀತಿ ಒಪ್ಪಂದವಾಗಿ ದುಡ್ಡುಗಳಿಕೆಯೆ ಅತಿಮುಖ್ಯವೆನ್ನುವ ಹುಡುಗರಷ್ಟೆ ಕಣ್ಮುಂದೆ ಸುಳಿಯುತ್ತಾರೆ. ಇನ್ನು, ಭಾವನೆಗಳ ಸುಳಿಯಲ್ಲಿ, ಪ್ರೇಮಸ್ವಪ್ನದಲ್ಲಿ ತೇಲುವ ಹುಡುಗಿಯರ ಬಗ್ಗೆ ಒಂದೆರಡು ಸಾಲು ಬರೆಯುವಷ್ಟರಲ್ಲಿ..  ನಿರ್ವಹಣೆ-ಹೊಣೆ, comfort zone ಗಳ ರಕ್ಷಾಕವಚವನ್ನು ಆಗಲೇ ಹೆಣೆಯತೊಡಗುವ ಹುಡುಗಿಯರೇ ಕಾಣಿಸುತ್ತಾರೆ. ಇದರ ಉಲ್ಟಾ ಯೋಚಿಸಿದರೂ ಹುಡುಗನ ಆಲೋಚನೆಗಳನ್ನು ಹುಡುಗಿಗೂ, ಹುಡುಗಿಯ ಆಲೋಚನೆಗಳನ್ನು ಹುಡುಗನಿಗೂ ವರ್ಗಾಯಿಸಬಹುದಷ್ಟೆ.

ಹಾಗಂತ  ಇಬ್ಬರಿಗೂ ಭವಿಷ್ಯದ ಯೋಜನೆಗಳೇ ಮುಖ್ಯ ಅಂಥ ಬರೆಯಲಾಗುತ್ತಿಲ್ಲ. ಯೋಜಿಸಿದಂತೆಯೇ ಬದುಕು ಅಥವಾ ಯೋಚನೆಗಳೊಳಗೆಯೇ ಬದುಕು ಅಂಥ ಬರೆಯಹೊರಟರೆ ಪ್ರೇಮಕಥೆ ಅನ್ನೋದಕ್ಕೆ ಅರ್ಥವೇ ಇರುವುದಿಲ್ಲ. ಅವರಲ್ಲೊಬ್ಬರಿಗೆ ಪ್ರೀತಿಯೇ ಸರ್ವಸ್ವ. ಆ ಒಬ್ಬರು ಪ್ರೇಮವಿಲ್ಲದೆ ಏನನ್ನೂ ಮಾಡಲಾರರು. ಆ ಒಬ್ಬರು ಯಾರು ಎಂಬದೇ ಗೊಂದಲ. ಹುಡುಗ, ಬಿಡುಗಡೆಯೇ ಪ್ರೇಮ ಎಂಬದನ್ನು ಒಪ್ಪಿಕೊಳ್ಳಬಲ್ಲನಾ..?.. ಹುಡುಗಿ comfort zone ನಿಂದಾಚೆಗೂ ಸ್ವಾತಂತ್ರ್ಯವನ್ನು ಪರಿಭಾವಿಸಬಲ್ಲಳಾ..? 

ಪ್ರೇಮವೆಂದರೇನೆಂದೇ ಗೊತ್ತಿಲ್ಲದ ನನಗೆ ; ಗಂಡು- ಹೆಣ್ಣಿನ ನಡುವೆಯಷ್ಟೇ ಪ್ರೇಮ ಸಂಭವಿಸುತ್ತದೆ ಎಂಬ ಭ್ರಮೆಯಲ್ಲಿರುವ, ಲಿಂಗಭೇದವನ್ನು, ದ್ವಿಲಿಂಗ ನಿಂದನೆಯನ್ನು ಸ್ವಸ್ಥ  ಸಮಾಜವೆಂಬಂತೆ ಬಿಂಬಿಸಿಕೊಂಡಿರುವ  ಸಮಾಜದ ಭಾಗವಾದ ನನಗೆ ಕಥೆ ಮುಂದುವರಿಸಲಾಗುತ್ತಿಲ್ಲ.

ಸಹಜ ಸಮ್ಮಿಲನ

ಒಲವೆಂಬ ಜೀವ ಸೆಲೆಯ ಹೊರತಾಗಿ ಬದುಕು ಬರಡು. ಹಾಗಿದ್ದರೂ, ನನಗೆ ಪ್ರೇಮ ಕಥೆ ಬರೆಯಲಾಗದಿರುವುದು, ಅದನ್ನು ಮದುವೆ, ಮಕ್ಕಳು, ಕುಟುಂಬವೆಂಬ ಸಂಕುಚಿತವೂ, ಯಾಂತ್ರಿಕವೂ ಆದ ವ್ಯವಸ್ಥೆಯಲ್ಲಿ ಬಂಧಿಸಿರುವುದರಿಂದ. ಒಲವಿನ ಮುಕ್ತತೆಗೆ ಸಾಕ್ಷಿಯಾಗುವ ಗಾಳಿ ಮಲಿನವಾಗಿರುವುದರಿಂದ. ಕೊಳಗಳು ಕರಗಿ, ಚಂದಿರ ಮರುಗಿ, ಒಲವೆಂಬ ನೀರ ಹಾದಿಯ ಬೆರಗು ಬತ್ತಿ ಹೋಗಿರುವುದರಿಂದ. ಇಲ್ಲಿರುವ ವಿವಿಧ ಜೆಂಡರ್ ಮತ್ತು ಸೆಕ್ಷ್ಯುಲ್ ಓರಿಯಂಟೇಷನ್'ಗಳನ್ನು ಕಡೆಗಣಿಸಿ ಗಂಡಿಗೊಂದು ಹೆಣ್ಣು ಎಂಬ ಅನರ್ಥಗಳನ್ನು ಪರಿಪಾಲಿಸುತ್ತಿರುವುದರಿಂದ. ಪ್ರೀತಿಗೆ ವಯಸ್ಸಿನ ಅಂಕೆ ತೊಡಿಸಿರುವುದರಿಂದ. ಕಥೆ ಮುಂದುವರಿಸಲಾಗದಿದ್ದರೂ ಪ್ರೀತಿಯ ಒರತೆ ಬತ್ತುವಂತದ್ದಲ್ಲ. ಅದು ಕಥೆ, ಕಾವ್ಯ, ಸಿನಿಮಾ ಮತ್ತು ಲೆಕ್ಕಾಚಾರಗಳನ್ನು ಮೀರಿದ್ದು. ಪ್ರೇಮ ಕುರುಡು ಎಂಬ ಮಾತುಗಳನ್ನು ಮೀರಿ, ಹೃದಯವನ್ನು ತೆರೆಯಿಸಿ ಆಪ್ತವಾಗಿ ಅಪ್ಪಿಕೊಳ್ಳುವ ಸಾವು ಕೂಡಾ ಸಹನೀಯ ಪ್ರೀತಿಯಲ್ಲಿ; ಪ್ರೇಮಿಗಳ ಒಂದು ಸೇರಿಸಲೋಸ್ಕರ ಪ್ರಾಣ ತೆತ್ತ ಸಂತ ವ್ಯಾಲಂಟೇನಿನಂತೆ. ಪ್ರೇಮವೆಂದರೆ ಸ್ವಾಧೀನ ಪಡಿಸಿಕೊಳ್ಳುವುದಲ್ಲ, ಶರಣಾಗತಿಯೂ ಅಲ್ಲ. ಅದು ರೊಮ್ಯಾಂಟಿಕ್ ಭಾವನೆಗಳಲ್ಲಷ್ಟೇ ಮುಳುಗಿ, ಮದುವೆಯಲ್ಲಿ ಕರುಗುವ ಅಲ್ಪತನವಲ್ಲ. ನಮ್ಮ ಅಂತರಂಗವನ್ನು ವಿಕಸನಗೊಳಿಸಬಹುದಾದ ದಿವ್ಯತೆಯದು. ಪ್ರೀತಿಸಿದವರು ಜೊತೆ ಜೊತೆಗೆ ವಿಕಸನಗೊಳ್ಳುವ ಸಹಜ ಸಮ್ಮಿಲನ.. 

ನಶೆಗೆ ನಶೆ ಸೋಕಿದ ಹಾಗೆ, ಮುದವೀಯುವ ಮೊದಲ ತೊದಲಿನ ಹಾಗೆ, ಋತುಗಳ ಮೋದದ ಹಾಗೆ, ಮೇಘದ ಎದೆಬಡಿತಕ್ಕೆ ಭುವಿ ತೋಳ್ತೆರೆದು ಕಾಯುವ ಹಾಗೆ ಪ್ರೇಮದ ಚಿಪ್ಪೊಂದು ಮುತ್ತಾಗಲು ಕಾಯುತ್ತಿರುತ್ತದೆ. ಸ್ವಲ್ಪ ದೂರ ಬೆರಳುಗಳ ಬೆಸೆದು ಸದ್ದಿಲ್ಲದೇ ನಡೆಯಲು, ಅಲ್ಪತನಗಳೆಲ್ಲವ ತೊರೆದು ಮೃದುವಾಗಿ ಹರಿಯಲು, ಬಿಡುಗಡೆಯ ಭಾವದೊಲುಮೆಯಲಿ ಹಾರಾಡಿ ನಲುಮೆಯಾ ಹರಡಲು, ದೇಹಸುಖದ ನಂತರವೂ ಮನದಲ್ಲುದುಗಿ ಮೆದುವಾಗಲು ಹದವಾದ ಚಲನೆ ಈ ಪ್ರೇಮ. ಇರುಳಿಗೆ ಬೆಳಕನೀಯೋಕೆ, ಹಗಲನು ತಿದ್ದಿತೀಡೋಕೆ, ಹೆಗಲಿಗೆ ಹೆಗಲಾಗೋಕೆ, ಮುಗಿಲಿನ ಕರೆಗೆ ಭುವಿಯ ನಲಿವಿಗೆ ಮರುಳಾಗೋಕೆ ಸಂಭ್ರಮದ ಸಂಜೆ ಈ ಪ್ರೇಮ. ಉಸಿರ ತಳಮಳಕೆ ಕಸಿವಿಸಿಗೊಳ್ಳದೆ ಹಸಿಯಾಗಿರಲು, ಎದೆ ನೆಲದಲ್ಲಿ ಮೊಳಕೆಯೊಡೆಯುವಾಗ ವಿವರಿಸಲಾಗದ ಪ್ರೇಮದ ಹೊಳೆಯಲ್ಲಿ ಮಿಂದು ಹಸಿರಾಗಬೇಕು. 

ಮಡಿಲ ಹಾಡಿಗೆ ತಲೆದೂಗುವ ಕೂದಲುಗಳಲಿ ಸರಿದಾಡಿ ಮಿಡಿಯುವ ಬೆರಳು. ತುಡಿಯುವ ಎದೆಗೊರಗಿ ಪದಮೂಡದ ಹಾಡ ಆಲಿಸುತ ಕಳೆದೋಗುವ ಪಾಡು.‌ ನಗು-ಅಳುಗಳ ಮಿಲನದಲಿ ಎಡರಿ ಮನ ಮನ ಮೇಳೈಸಿ ಕೊರಡು ಕೊನರಾಗುವ ಬಾಳ ಮೇಳ. ಒಲವೆಂಬುದು ಮರಳ ತೀರವಾಗಿಯೂ ಹೊಳೆಯ ಸಾರವಾಗಿಯೂ ಹಾರುವುದು ಗಾಳಿಯಲಿ, ತೇಲುವುದು ಹರಿವಿನಲಿ

ಪ್ರೇಮವೆಂಬ ಕಲೆ

ಸ್ವಪ್ನಗಳ ಗೋರಿಯ ಮೇಲೆ ಕೂತೇ ತನ್ನ ಕಲೆಯಲ್ಲಿ ಮುಳುಗಿದಾತ ಸುಪ್ರಸಿದ್ಧ ಚಿತ್ರಗಾರ 'ವಿನ್ಸಂಟ್ ವ್ಯಾನ್ ಗೋ'. ಪ್ರೇಮ ಮತ್ತು ಕಲೆಯಲ್ಲಿ ವ್ಯತ್ಯಾಸವನ್ನೇ ಕಾಣದೇ, ನಶೆಯ ರಾತ್ರಿಗಳನ್ನು ನಿದಿರೆಯ ಮರೆತು, ಕಣ್ಣೆವೆಯಿಕ್ಕದೆ ಕಳೆದಾತ. ಕನಸು, ಕಲ್ಪನೆ, ಬದುಕು, ಸಾವು ಮತ್ತು ಪ್ರೇಮ ಅವನ ಕುಂಚದಲ್ಲಿ ಹೊಳೆಯಾಗಿ ಹರಿಯುತ್ತದೆ. ವ್ಯಾನ್ ಗೋ ವೈವಿಧ್ಯಮಯ ವಿಷಯಗಳೆಡೆಗಿನ ಪ್ರೀತಿಯ ಅಗಾಧ ಸಾಧ್ಯತೆಗಳ ಬಗ್ಗೆ ಹೇಳುತ್ತಾನೆ. ಹೀಗೆ ಹೇಳುತ್ತಲೇ, ಜನರನ್ನು ಪ್ರೀತಿಸುವುದಕ್ಕಿಂತ ಹೆಚ್ಚಿನ ಕಲಾತ್ಮಕತೆ ಇನ್ನೊಂದಿಲ್ಲ ಅಂತನ್ನುತ್ತಾನೆ. ಹೌದು, ಪ್ರೇಮವೆಂಬುದು ನಮ್ಮೊಳಗಿನ ಕೊಳೆಯನ್ನು ತೊಳೆದು, ಕಲೆಯನ್ನು ಅರಳಿಸುವ ಮಾಧ್ಯಮವೂ ಹೌದು.

ಆಹಾರ ಎಲ್ಲಕ್ಕಿಂತಲೂ ಮುಖ್ಯ. ನಮ್ಮ ದೇಹದೊಳಗಿನ ಕೋಟಿಗಟ್ಟಲೇ ಜೀವಾಣುಗಳಿಗೆ ಆಹಾರ ನಾವು. ನಿತ್ಯದ ನಮ್ಮ ಬದುಕೆನ್ನುವುದು ವರ್ಷಗಟ್ಟಲೇ ಹೂತಿಟ್ಟ ವೈನಿನಂತೆ. ಮತ್ತೆ ಮಣ್ಣಿಗೆ ರಾಸಾಯನಿಕವಾಗಿ ಮಿಲನಗೊಳ್ಳುವವರು ನಾವು. ಒಲವು ಕೂಡ ವಿಧ ವಿಧವಾದ ರಸಾಯನಗಳ ಮಿಶ್ರಣ. ಈ ಮಿಶ್ರಣಕ್ಕೆ ನಾವು ಕಟ್ಟಿಕೊಂಡ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಯಾವುದೇ ಇರಾದೆಗಳಿರುವುದಿಲ್ಲ. ಅಂತದ್ದರಲ್ಲಿ, ಲೆಕ್ಕಾಚಾರ ಹಾಕಿ ಬದುಕುವುದು ಅಭ್ಯಾಸವಾದ ನಾವು ಜನ್ಮಾಂತರಗಳ ಪೇಲವತೆಯನ್ನು ಲೇಪಿಸಿ ಪ್ರೇಮಕತೆಗಳನ್ನು ಕಟ್ಟುತ್ತಲೇ, ಕಟ್ಟುಕತೆಗಳಿಗೆ ಬಲಿಯಾಗುತ್ತೇವೆ. ನಿತ್ಯ ಅಪಘಾತಗಳಾಗುವ ದಾರಿಯಲ್ಲೇ ಪ್ರೇಮಿಗಳು ರಸ್ತೆ ದಾಟುವಾಗ, ಸಾಯುವ ಬಂಧಗಳ ಬಗೆಗಿನ ಭಯವೆಲ್ಲಿಯದು?.. ಭಯವೇ ಮೂಲವಾಗಿರುವ ಸಮಾಜವನ್ನು ಕಟ್ಟಿಕೊಂಡಿರುವವರು ನಾವು. ಸಾರ್ವಕಾಲಿಕತೆಯೆಂಬ ಒತ್ತಾಯಕ್ಕೆ ಗಂಟುಬಿದ್ದು, ಸಂಖ್ಯೆಗಳ ಲೆಕ್ಕ ಹಾಕುತ್ತಾ, ಅಲಾರಮಿನ ಸದ್ದಿಗೆ ಕಿವಿಗೊಡುವುದರಲ್ಲೇ ಆಯುಷ್ಯವೊಂದು ಕಳೆದಿರುತ್ತದೆ. ಪ್ರಾಣಿಗಳನ್ನು, ಮರಗಳನ್ನು, ಬೆಟ್ಟ-ಗುಡ್ಡಗಳನ್ನು ನುಂಗಿ ನೀರು ಕುಡಿದು ಜಲಾಶಯಗಳನ್ನೆಲ್ಲ ಇಂಗಿಸಿದವರು ನಾವು. ಗೊತ್ತಾಗದಂತೆ ಆವರಿಸುವ ಆಕರ್ಷಣೆಗೆ ಅಣೆಕಟ್ಟು ಕಟ್ಟಿ ಒಲವ ನದಿಯನ್ನು ಬತ್ತಿಸುವುದರಲ್ಲಿ ಪರಿಣಿತರು ನಾವು‌. ಪರಿಣಾಮಕಾರಿ ಯೋಜನೆಗಳನ್ನು ರೂಪಿಸಿ, ಮಿಲನಕ್ಕೊಂದು ಟೈಂ ಟೇಬಲ್ ಮಾಡಿಟ್ಟುಕೊಂಡವರು.

ನಮಗೆ ಸಾಂತ್ವನ ನೀಡುವ ಅನೇಕ ಪರಿಕಲ್ಪನೆಗಳಂತೆ ಪ್ರೇಮ ಕೂಡಾ ತಪ್ಪಾಗಿ ವ್ಯಾಖ್ಯಾನಿಸಲ್ಪಟ್ಟಿವೆ ಎನ್ನುತ್ತಾನೆ ಸಾಮಾಜಿಕ ಮನಃಶಾಸ್ತ್ರಜ್ಞನಾದ ‘ಎರಿಕ್ ಫ್ರಾಂ’. ಆತ ತನ್ನ ‘ದಿ ಆರ್ಟ್ ಆಫ್ ಲವಿಂಗ್’ ಪುಸ್ತಕದಲ್ಲಿ “ಪ್ರೇಮ ಜೀವನದುದ್ದಕ್ಕೂ ತೊಡಗಿಸಿಕೊಳ್ಳಬೇಕಾದ ಸೃಜನಶೀಲ ಯೋಜನೆ” ಅನ್ನುತ್ತಾನೆ. ಎರಿಕ್ ಹೇಳುವ ಯೋಜನೆಗು, ನಾವು ಹಾಕಿಕೊಳ್ಳುವ ಯೋಜನೆಗು ವ್ಯತ್ಯಾಸವಿದೆ. ಪ್ರೀತಿಯೊಂದು ಕಲೆ, ಪ್ರೀತಿಸುವುದನ್ನು ಕಲಿಯಬೇಕು ಅನ್ನುತ್ತಾನೆ ಅವನು. ದ್ವೇಷ ಮತ್ತು ಸ್ವಾರ್ಥಗಳೇ ತುಂಬಿರುವ ಇಂದಿನ ದಿನಗಳಲ್ಲಿ ಆತನ ಮಾತಿನ ಆಳ ಅರಿವಾಗುತ್ತದೆ. ಪ್ರೀತಿ ವ್ಯವಹಾರವೋ, ಚಟವೋ ಅಲ್ಲ ಅದೊಂದು ಜೀವನ ಶಕ್ತಿ ಅಂತನ್ನುತ್ತಾ, ಪ್ರೇಮದಲ್ಲಿ ಬೀಳುವುದಲ್ಲ, ತೊಡಗಿಸಿಕೊಳ್ಳುವುದು ಅನ್ನುವ ಅವನ ಮಾತುಗಳಲ್ಲಿ ಪ್ರೇಮದ ಅಂತರಾಳ ಅಡಗಿದೆ.

ಪ್ರೇಮವೆಂಬುದು ಸಾರ್ವಕಾಲಿಕ ಸತ್ಯವೋ, ಸರ್ವಾಂತರ್ಯಾಮಿಯೋ ಅಲ್ಲ. ಪ್ರೇಮದ ಡಿಕ್ಷನರಿಯಲ್ಲಿ ಮೋಸವೆಂಬ ಪದವಿಲ್ಲ. ಅಂಟಿಕೊಂಡಷ್ಟೇ ಸಲೀಸಾಗಿ ಬಿಟ್ಟು ಹೋಗಲೂ ಬಹುದು. ತುಂಬಾ ತೀವ್ರವಾಗಿದ್ದೂ, ಅತ್ಯಂತ  ಸಿಲ್ಲಿಯಾಗಿ, ಹೊತ್ತುಕೊಂಡ ಗಂಟುಗಳಲ್ಲಿ ಒಂದಾಗಿ ಕಳೆದು ಹೋಗಬಹುದು ಅಥವಾ ಉಳಿದು ಬಿಡಬಹುದು.

ಪ್ರೇಮದ ಸನ್ನೆ, ಸಂಕುಚಿತತೆ, ನಯ, ನಾಜೂಕುಗಳನ್ನೆಲ್ಲಾ ಒಡೆದು ಪ್ರೀತಿಯನ್ನು ಸಾರ್ವತ್ರಿಕವಾಗಿಸುವ, ಪರಿಧಿಗಳಾಚೆಗೆ ಹಾರಬಿಡುವ ನನ್ನ ಹುನ್ನಾರಗಳು ನನ್ನೊಳಗಿನ ನಿತ್ಯ ನಶೆಯ ಭಾಗ. ಮನುಷ್ಯ ಕುಲದ ಗತಕಾಲದ ಇತಿಹಾಸದೊಂದಿಗೆ, ಇತ್ಯರ್ಥವಾಗದ ನನ್ನದೇ ಇತಿಹಾಸ ಮಿಳಿತವಾಗುವುದರೊಂದಿಗೆ ಹೊಸತರೆಡೆಗೆ ಸಾಗುವ ನನ್ನ ಹುಡುಕಾಟಗಳು ಕೊನೆಯಿಲ್ಲದವುಗಳಾಗುತ್ತವೆ. ಸೋಲು ಗೆಲುವಿನ ಜೂಜಾಟದ ಅಡ್ಡೆಯ ಮೇಲೆ ಸರಾಗವಾಗಿ ನಡೆದು ಹೋಗುವಾಗಲೂ ಹೃದಯ ಕಂಪಿಸುವ ತೀವ್ರತೆ ಕಡಿಮೆಯಾಗುವುದಿಲ್ಲ. ಸರಿ ದಾರಿಯೆಂಬುದಿಲ್ಲದ ಸ್ನೇಹದ ಹಾದಿಯಲ್ಲಿ ಸಿಗುವ-ಸಿಗದ ಕಾಮವೊಂದು ನಿಲ್ದಾಣವಲ್ಲ;ಒಳ ತೊಗಲಿನ ಮೋಹಕ್ಕೆ ನಿರ್ಬಂಧವಿಲ್ಲ.ಕನ್ನಡಿಯೊಳಗೆ ನಡೆಯುವಾಗ ನಾನು ನಾನಲ್ಲ. ಚೂರುಗಳೊಳಗೆ ಪ್ರತಿಫಲಿಸುವ ಅಗಣಿತ ಧಾತುಗಳು ನನ್ನೊಳಗೂ. 

ರೊಮ್ಯಾಂಟಿಸೈಸ್ಡ್ ಪರಿತಾಪ

"ಲಾಜಿಕಲ್ ಅಲೋಚನೆಗಳನ್ನೆಲ್ಲಾ ಗಂಟುಮೂಟೆ ಕಟ್ಟಿ ಹಾಸಿಗೆಯಿಂದ ಹೊರಗೆಸೆದು - ಒಬ್ಬಂಟಿಯಾಗಿ ಪ್ರೇಮದ‌ ಅನಿಶ್ಚಿತತೆಯನ್ನು ನೆನೆದು ಬೋರಿಡುವಾಗ, ಬೆನ್ನತ್ತಿ ಬರುವ ಕನ್ನಡಿಯಲ್ಲಿ, ಬದುಕು ನಿರಾಶಾವಾದದ ಪ್ರತಿಫಲನವಾಗಿಯಷ್ಟೇ ತೋರುತ್ತದೆ" ಹಾಗಂತಲೇ, ವಿರಹ ವೇದನೆಯಿಂದ ಮನೋ ವೈದ್ಯರ ಹತ್ತಿರ ಹೋದರೆ, ಡಾಕ್ಟರು ಬರೆದು ಕೊಟ್ಟ ಚೀಟಿಯಲ್ಲಿ ಡಿಪ್ರೆಶನ್ನಿನ ಕವಿತೆ ಮೂಡುವುದು ಹೀಗೆ - “ಪ್ರೇಮವೊಂದು ನೋವಿನ ಮಾತ್ರೆಯಂತೆ. ನೋವು ನಿವಾರಕವೋ ? ನುಂಗಿದರೇ ನೋವುಂಟಾಗುವುದೋ  ? ಹೇಳುವುದು ಅಸಾಧ್ಯ. ಖಾಯಿಲೆಗಳ ಗೋದಾಮು, ಔಷಧಿ ಅಂಗಡಿಯನ್ನು ಪ್ರೀತಿಸುವಾಗ, ಮದ್ದು ಅರೆದಷ್ಟೂ ಕೀವು ಹೆಚ್ಚಾಗುತ್ತಲೇ ಹೋಗುತ್ತದೆ”. 

ಮರಣ ಮೃದಂಗ ಬಾರಿಸುವ ಅನುರಾಗ ಸಂಗೀತದ ಅಮಲಿಗೆ ನೃತ್ಯ ಸಂಯೋಜನೆಯಿಲ್ಲದೆ ನಲಿದಾಡಬೇಕು ನರ ನಾಡಿಗಳು. ಮರಣವೆಂಬುದು -  ಒಂದು ಹಬ್ಬ, ಮಧುರವಾದ ವಿಜ್ಞಾನ, ‌ಮಧುವಿಲ್ಲದ ಅಂತ್ಯದಮಲು ಅಥವಾ ಹೀಗೆಯೇ ಕಲ್ಪನೆಗಳಲ್ಲೇ ಅಡಗಿ ಸುಳ್ಳಾಡುವ ಬದುಕಿನ ಕೆರೆತ..

Category : Relationships


ProfileImg

Written by Guru

Writer, Poet & Automotive Enthusiast