ವೈರಾಗ್ಯ ಪರ್ವ

ProfileImg
10 May '24
17 min read


image

ಬಾಗಿಲನ್ನು "ಧಡ್" ಎಂದು ಜೋರಾಗೆ  ಎಳೆದು ಅವಳು ಕೋಣೆಯಿಂದ ಹೊರ ನಡೆದಳು, ಬಾಗಿಲು ಜೋರಾಗಿ ಬಿದ್ದ ಸದ್ದಿಗೆ ಮೂಲೆಯಲ್ಲಿ  ಮಲಗಿದ್ದ ಕಪ್ಪು ಬೆಕ್ಕು ಒಮ್ಮೆ ಕಣ್ಣು ಬಿಟ್ಟು ನೋಡಿ ಈ ಮನುಷ್ಯರ ಮಧ್ಯೆ ತನಗೂ ಇದಕ್ಕೂ ಸಂಬಂಧ ಇಲ್ಲ ಎಂಬಂತೆ ಮತ್ತೆ ಮುದುರಿ ಮಲಗಿತು. ಅಡುಗೆ ಮನೆಯಲ್ಲಿ ಪಾತ್ರೆಗಳ ಶಬ್ದ. ಆ ಸದ್ದು ಅವಳ ಜೊತೆ ಧ್ವನಿ ಎತ್ತರಿಸಿಯೇ ಸಂವಹನಕ್ಕೆ ನಿಂತತೆ ಕಾಣುತ್ತಿತ್ತು. ಪಾತ್ರೆ ಜೋರಾಗೆ ಎತ್ತಿ ಕುಕ್ಕಿದಂತೆ ಅನ್ನಿಸಿತು.ಅದು ಅವಳ ಸಿಟ್ಟಿನ ಪ್ರತಿಬಿಂಬ,ನನ್ನ ಮನಸ್ಸಲ್ಲೂ ನೆಮ್ಮದಿ ಎಲ್ಲಿಂದ?ನಾನು ಮಲಗಿದ್ದ  ಚಾಪೆಯಿಂದ ಹಾಗೆ ಮಗ್ಗಲು ಬದಲಾಯಿಸಿದೆ ಕೋಣೆಯ ಗೋಡೆ ನನ್ನ ಎದುರಿಗಿತ್ತು ಸಾರಿಸದ ಮಣ್ಣಿನ ಗೋಡೆಯಲ್ಲಿ ಅಲ್ಲಲ್ಲಿ ಮೇಲ್ಮೈ ಎದ್ದು ಅಸಹ್ಯವಾಗಿ ಕಾಣುತ್ತಿತ್ತು.ಮೃದು ಮಣ್ಣಿನ ವಾಸನೆ ನಿಧಾನವಾಗಿ ಮೂಗಿಗೆ ಹತ್ತಿತು. ವಾಸನೆಯೊಂದಿಗೆ ನೆನಪುಗಳ ಮೆರವಣಿಗೆ.

  "ಮಾಟಗಾರ್ತಿ"ಎಂದಳಂತೆ ನನ್ನ ಅಮ್ಮ ಇವಳನ್ನ ನನ್ನ  ಅಮ್ಮ ಹಾಗೆ  ತುಸು ಒರಟು ಇವಳಿಗೆ ತಿಳಿಯುವುದಿಲ್ಲವೇ? ಅಲ್ಲ ಅಷ್ಟುಕ್ಕೂ ಇವಳಾದರೂ ಯಾಕೆ ದಿಬ್ಬ ಕಡೆ ಇರುವ ಬೈಲಿಗೆ ಕಟ್ಟಿಗೆಗೆ ಹೋಗಬೇಕು ಇವಳದ್ದು ದುರಾಸೆ ಇಲ್ಲೇ ಶ್ಯಾಮ ಭಟ್ಟರ ಮನೆಯ ಹಿಂದಿನ ಹಾಡಿಗೆ ಕಟ್ಟಿಗೆಗೆ ಹೋಗು ಎಂದು ಎಷ್ಟು ಸಲ ಹೇಳಿಲ್ಲ ಇವಳಿಗೆ  ನಾನು. ಇವಳಿಗೆ ಅವಳ ಹಠವೇ ಹೆಚ್ಚು. ಅದೇ ಹಠದಿಂದ ಅಲ್ಲವೇ ನಾನು ತಂದೆ  ತಾಯಿಯನ್ನು ಬಿಟ್ಟು ಈ ಮನೆಗೆ ಬಂದು ಸೇರಿದ್ದು. ಮತ್ತೆ ಪಾತ್ರೆ ಎತ್ತಿ ಕುಕ್ಕಿದ ಸದ್ದಾಯಿತು ಆದರೆ ಗಮನ ಅತ್ತ ಹರಿಯಲಿಲ್ಲ. ನನ್ನ ಅಮ್ಮನೇ ಹುಡುಕಿ ನನಗೆ ತಂದ ಕನ್ಯೆ ಇವಳು. ಹೆಚ್ಚಲ್ಲದಿದ್ದರೂ ತುಸು ಜಮೀನು, ತೋಟ, ಹಾಡಿ ಇದ್ದವರು ನನ್ನಪ್ಪ. ತೋಟದ, ಗದ್ದೆಯ ಕೆಲಸ ಗೊತ್ತಿರುವ ಹುಡುಗಿಯೇ ಬೇಕು ಎಂದು ಹುಡುಕಾಡಿ ನನ್ನ  ಅಮ್ಮನೇ ಇವಳನ್ನು ಮೆಚ್ಚಿ ನನಗೆ ತಂದು ಕೊಂಡಿದ್ದರು. ಕುಳ್ಳಗಿನ ಕೃಶ ದೇಹ ಎಣ್ಣೆಗೆಂಪು ಬಣ್ಣ ಗದ್ದೆಯಲ್ಲಿ ದುಡಿದು ಮೂಡಿದ್ದ ದೇಹದ ಕಸುವು ಇವಳದ್ದು ಮದುವೆಯ ಸಂದರ್ಭದಲ್ಲಿ ಆರಂಭದಲ್ಲಿ ಎಲ್ಲ ಚೆನ್ನಾಗಿದ್ದರೂ ಮತ್ತೆ ಮತ್ತೆ ಅತ್ತೆ ಸೊಸೆಯ ಮಧ್ಯ ಎಲ್ಲ ಹುಳಿಯಾಗಲು ಆರಂಭಿಸಿತು. ನನ್ನ ಅತ್ತಿಗೆಯರೊಂದಿಗೂ ಇವಳ ಕಿತ್ತಾಟ ಊರವರ ಬಾಯಿಗೆ ಆಹಾರವಾಗತೊಡಗಿತು ಎಲ್ಲವೂ ಇವಳದ್ದೇ ತಪ್ಪು ಎಂದು ಅನ್ನಲಾರೆ ಆದರೆ ಯಾರೊಬ್ಬರೂ ಸರಿದೂಗಿಸುವ ಪ್ರಯತ್ನಕ್ಕೆ ಕೈ ಹಾಕಲಿಲ್ಲ ಇವರ  ಮಧ್ಯೆ ನನ್ನ ಗೋಳು ಕೇಳುವವರಿಲ್ಲದಂತೆ ಆಯಿತು. ಮನೆ ಹೊಕ್ಕರೆ ನೆಮ್ಮದಿಯ ಲವ ಲೇಶವು ಇಲ್ಲದಂತೆ ಖಂಡಿತು. ಮದುವೆಯಾಗಿ ಎರಡು ವರ್ಷ ಹತ್ತಿರ ಹತ್ತಿರ  ನಮಗೆ ಇನ್ನು ಮಕ್ಕಳ ಮುಖ ನೋಡುವ ಭಾಗ್ಯ ಬಂದಿರಲಿಲ್ಲ ಮಕ್ಕಳ ಮುಖ ನೋಡಿ ನೋವು ಮರೆಯುವ ಎಂಬ ಅವಕಾಶವು ನಮ್ಮಲ್ಲಿ ಇರಲಿಲ್ಲ. ಹೀಗೆ ಮುಂದುವರೆದು  ಮನೆಯ ಹೆಂಗಸರು ಯಾವಾಗ ಜುಟ್ಟು ಜುಟ್ಟು ಹಿಡಿಕೊಳ್ಳುವ ಪ್ರಸಂಗ ಬಂದಿತೋ ಅಂದೇ ಇವಳನ್ನು ಕರೆದುಕೊಂಡು ನಾನು ಈ ಮನೆಗೆ  ಬಂದು  ಬಿಟ್ಟೆ. ನನ್ನ ಮನೆಯಿಂದ  ತುಸು ದೂರದಲ್ಲೇ ಖಾಲಿಯಾಗಿದ್ದ ಶೆಟ್ಟರ ಈ ಮನೆಯನ್ನು  ಹಿಡಿದೆ. ತುಂಬಾ ಹಳೆಯ ಮನೆ ರಿಪೇರಿ ಮಾಡುವ ಹಾಗಿಲ್ಲ  ಅಷ್ಟೊಂದು ಶಿಥಿಲ ಅವಸ್ಥೆಗೆ ಬಂದಂತಿತ್ತು.  ಆದರೆ ಆ ತುರ್ತು ಪರಿಸ್ಥಿತಿಗೆ ಎಲ್ಲಾ ಸರಿಹೊಂದುವ ಮನೆ ಹುಡುಕುವುದಾದರೂ ಎಲ್ಲಿ? ಒಳ್ಳೆ ಮನೆ ಸಿಕ್ಕಿದ್ದರೂ ಅದಕ್ಕೆ ಬಾಡಿಗೆ? ನಾನು ತಂದೆಯ ಜೊತೆ ಸೇರಿ ಕೃಷಿ ಮಾಡುತ್ತಿದ್ದವ ನನ್ನದೇನಿದ್ದರೂ ದುಡಿಮೆ ದುಡ್ಡು ಕಾಸಿನ ವ್ಯವಹಾರವೆಲ್ಲ ತಂದೆಯವರದ್ದು. ನನ್ನ ಖರ್ಚಿಗೆ ಬೇಕಿದ್ದಾಗ ಎಲ್ಲ ಅವರ ಮುಂದೆಯೇ ಕೈ ಚಾಚುತ್ತಿದ್ದೆ. ಆವೇಶಕ್ಕೆ  ಒಳಗಾಗಿ  ಮನೆ ಬಿಟ್ಟು ಹೊಸ ಮನೆಗೆ ಬಂದಾಯಿತು, ಮುಂದೆ? ಎಂಬ  ಪ್ರಶ್ನೆಯೇ ತೀವ್ರವಾಗಿ ಕಾಡುತ್ತಿರಲು ದೇವರೇ ದಾರಿ  ತೋರಿದ ಎಂಬ  ರೀತಿ  ತೆಂಗಿನ ಮರ ಹತ್ತಿ ಕಾಯಿ ಕೀಳಲು ಜನ  ಹುಡುಕುತ್ತಿದ್ದ ಬೈಗಿನ ಮನೆ ಸೋಮ ಸಿಕ್ಕಿದ ಅವನ ಮನೆಗೆ ಹೋಗಿ ಕಾಯಿ ಇಳಿಸುವಷ್ಟ್ರಲ್ಲಿ ಹತ್ತಿರದಲ್ಲೇ ಇದ್ದ ಇನ್ನೆರಡು ಮನೆಯವರು ಕಾಯಿ ಇಳಿಸುವಂತೆ ಕೇಳಿ ಕೊಂಡರು ಅಂದಿನಿಂದ ಅವರಿವರ ಮನೆಯಲ್ಲಿ ಕಾಯಿ ಇಳಿಸುವುದು, ಗದ್ದೆಗೆ ಬದು ಮಾಡುವುದು, ಕಟ್ಟಿಗೆ ಸೇರಿಸುವುದು, ತೋಟಕ್ಕೆ ಮದ್ದು ಬಿಡುವುದು ಇದೇ ಕಾಯಕವಾಯಿತು. ನಮ್ಮದೇ ತೋಟ ಇದ್ದು ಇನ್ನೊಬ್ಬರ ತೋಟದಲ್ಲಿ ಕೂಲಿಯಾಗುವುದು ಸಂಕೋಚವೆನಿಸಿದರು ಮಾಡಬಹುದು ಆಗಿದ್ದದು ಏನಿದೆ?. ತಂದೆಯ ಮುಂದೆ ನಿಂತು ಪಾಲು ಕೇಳಲೇ? ಅಷ್ಟೊಂದು ಧೈರ್ಯ ನನ್ನಲ್ಲಿ ಇರಲಿಲ್ಲ. ಅಣ್ಣಂದಿರು ಏನು ಅಂದಾರು? ಇಷ್ಟು ದಿನ  ತಂದೆ  ತಂದು ಹಾಕುತ್ತಿದ್ದ ಕೂಳು ತಿನ್ನುತ್ತಿದ್ದ ನನಗೆ  ಈಗ ಹೊಸ ಮನೆಯ ಜವಾಬ್ದಾರಿ ಪೀಕಲಾಟಕ್ಕೆ ಸಿಕ್ಕಿಕೊಂಡಿತ್ತು ಉಟ್ಟ ಬಟ್ಟೆಯಲ್ಲಿ ಹೊರಟು ಬಂದಿದ್ದೇನು ನಿಜ  ಆದರೆ ಅಷ್ಟ್ರಲ್ಲೆ ಜೀವನ ಸಾಗುವುದಿಲ್ಲ ಅಲ್ಲವೇ? ಹೊಸ ಮನೆಗೆ ಪಾತ್ರೆ, ಪರಟಿ, ಅಡುಗೆ ಸರಂಜಾಮು ಬೇಡವೇ? ಇದಕ್ಕೆಲ್ಲ ದುಡ್ಡು ಎಲ್ಲಿಂದ ಹೊಂದಿಸುವುದು? ನನ್ನ ಈ ಸಣ್ಣ ದುಡಿಮೆಯಲ್ಲಿ ಇದೆಲ್ಲಾ ಸಾಧ್ಯವೇ? ಇವಳೂ ಅವರಿವರು ಮೆಚ್ಚಿಸ ಬೇಕೆಂದು ಬದುಕುವ ರೀತಿಯಲ್ಲಿ ಅಥವಾ ನನ್ನ ಮನೆಯವರನ್ನು ಉರಿಸಬೇಕು ಎಂದೋ ಹೆಚ್ಚಿಗೆ ಖರ್ಚು ಮಾಡಲು ಶುರುಹಚ್ಚಿದಳು ದುಡ್ಡಿದದ್ದು ಕೈಯಲ್ಲಿ ನಿಲ್ಲುವಂತಿರಲಿಲ್ಲ. ಹೊಸ ಮನೆಗೆ  ಬಂದು ಆರು ತಿಂಗಳಾಗಿತ್ತು ಆದರೆ ಇದೆಂದು ನನ್ನ ಮನೆಯ ರೀತಿ  ನನಗೆ ಅನ್ನಿಸಿಯೇ ಇಲ್ಲ ಅಮ್ಮನ  ನೆನಪು ಆಗಾಗ ಒತ್ತಿ ಬರುತ್ತಿತ್ತು ಒಂದೇ ಊರಲ್ಲಿ ಇದ್ದರು ಆಕೆಯ ಜೊತೆ ನಾನು ವೈಮನಸ್ಸು ಮಾಡಿಕೊಂಡಿಲ್ಲದಿದ್ದರೂ ನಮ್ಮ ಒಳಗೆ ನಾವು ದೂರವಾಗಿದ್ದೆವು. ನನ್ನ  ಮನೆಯೊಳಗೆ ಯಾವತ್ತೂ ಗಿಜಿಗುಡುತ್ತಿದ್ದ ಅಣ್ಣನ ಮಕ್ಕಳ ಸದ್ದು ಅವರನ್ನು ನೋಡುವ ಹಂಬಲವಾಗುತ್ತಿತ್ತು. ಈ ಮನೆ ಖಾಲಿ ಖಾಲಿ ಎಂದು ಅನುಭವವಾಗತೊಡಗಿತು. ನಾನು ಎಂದು ತಂದೆಯೊಂದಿಗೆ ಸ್ನೇಹದಿಂದ ಇದ್ದವನಲ್ಲ ಆದರೆ ಈಗೀಗ ಅವರ ನೆನಪೂ ಕಾಡಲು ಪ್ರಾರಂಭಿಸಿತು. ಅಮ್ಮನ  ಕೈರುಚಿ ಯ ನೆನಪು, ನಮ್ಮದೇ  ಗದ್ದೆ ತೋಟಗಳ ನೆನಪು  ಮತ್ತೆ ಬೆನ್ನು ಬಿದ್ದು ಕಾಡ ತೊಡಗಿತ್ತು. ಇದೇ ಸಂದರ್ಭದಲ್ಲಿ ಇವಳಿಗೆ ತಿಂಗಳ ನೀರು ನಿಂತಿತು ಮಂಕು ಕವಿದಿದ್ದ ನನ್ನ  ಮನಸ್ಸು ಪ್ರಸನ್ನವಾಯಿತು ಇವಳ ಆರೈಕೆಗೆ  ನಿಂತೆ ಆದರೆ ನಮ್ಮ ದುರದೃಷ್ಟವೊ ಏನೋ ಗರ್ಭ ನಿಲ್ಲಲಿಲ್ಲ ಒಂದು ನಡು  ರಾತ್ರಿಯ ಹೊತ್ತಿಗೆ ಶುರುವಾದ ಹೊಟ್ಟೆ ನೋವು ನಿಲ್ಲಲೇ ಇಲ್ಲ ಒಂಟಿ ಗಂಡಸಿಗೆ  ನನಗೇನು ತಿಳಿಯಬೇಕು?  ಪಕ್ಕದ ಮನೆಯ  ಪದ್ಮಿನಿ ಅಮ್ಮನ ಎಬ್ಬಿಸಿ ಆಸ್ಪತ್ರೆಗೆ ಸಾಗಿಸಿಯಾಯಿತು. ಅವಳ  ಮನೆಯವರೇನು ಸುಶ್ರುಶೆಗೆ ಆಸ್ಪತ್ರೆಗೆ ಬಂದರೂ ಆಸ್ಪತ್ರೆಯ ಬಿಲ್ಲು ನನ್ನ  ಹೆಗಲೇರಿತ್ತು. ಇವಳ   ಅಮ್ಮ ಇವಳ  ಆರೈಕೆಗೆ  ಎಂದು ನಮ್ಮ  ಮನೆ  ಸೇರಿಬಿಟ್ಟರು ಇವಳು  ಅಮ್ಮನ  ಸೆರಗಿನ ಒಳಗೆ  ಸೇರಿಕೊಂಡು ನನ್ನ ಕಡೆಗಣಿಸಿದಳು ನಾನು ಇನ್ನಷ್ಟು ಒಂಟಿಯಾದೆ  ಮೊದಲೇ ಖರ್ಚು ಹೆಚ್ಚಾಗಿದ್ದ ಸಂಸಾರದಲ್ಲಿ ಇನ್ನೊಂದು ಹೊರೆ ಹೆಚ್ಚಾಯಿತು. ಇವಳು ತಾಯಿಯ ಆರೈಕೆಯಲ್ಲಿ ದಿನ  ದಿನ  ಅರಳತೊಡಗಿದಳು ನಾನು ದಿನ ದಿನ ಒಂಟಿತನದಿಂದ ಕೃಶವಾಗತೊಡಗಿದೆ. ಒಂಟಿತನದಿಂದ ಕೂಡಿದ ಈ ಜೀವಕ್ಕೆ ಮತ್ತೆ ಹೊಸ ತರಲೆ ಶುರುವಾಯಿತು ಇವಳ  ತಾಯಿ  ಮನೆಯಲ್ಲಿ  ಸುಮ್ಮನಿರದೆ  ಊರಲ್ಲಿ ಎಲ್ಲಾ ಕಡೆ  ತನ್ನ ಮಗಳ  ಸಂಸಾರ ಹಾಳಾಗಲು ಹೊಟ್ಟೆಯಲ್ಲಿದ್ದ ಮಗು  ಸಾಯಲು  ತನ್ನ ಅಳಿಯನ  ಮನೆಯವರೇ ಕಾರಣ ಎಂದು ನಾಲಗೆ  ಉದ್ದ ಬಿಡುತ್ತಿದ್ದಳು ಇದು ನನ್ನ  ಮನೆಯರಿಗೆ  ತಿಳಿದು ಮುನಿಸು ಇನ್ನಷ್ಟು ಹೆಚ್ಚಿತು ಪರಿಸ್ಥಿತಿಯ  ಕೈ ಗೊಂಬೆಯಾದ  ನನ್ನ ಮೇಲೂ ಸಿಟ್ಟು ತೋರಿಸತೊಡಗಿದರು. ಹೇಗಾದರೂ ಮಾಡಿ  ಅವಳ ತಾಯಿಯನ್ನು ಅವರ ಮನೆಗೆ ಅಟ್ಟಿದ್ದೆ. ಆ ಸಿಟ್ಟು ಇವಳ ಒಳ ಒಳಗೆ ಕುದಿಯುತ್ತಿತ್ತು.

ಒಂದೇ ಮಗ್ಗಲಿಗೆ ಮಲಗಿ  ಕುತ್ತಿಗೆ ನೋವೆನಿಸಿತು ಬೆನ್ನಿನ ಮೇಲೆ ಮಲಗಿ ಅಟ್ಟ ನೋಡ ಹತ್ತಿದೆ ಎಷ್ಟು ಹಳೆಯ ಮನೆ  ಇದು ಜಂತುಗಳಲ್ಲಿ ಧೂಳುತುಂಬಿದೆ ಜಂತು ಮೂಲೆಗಳಲ್ಲಿ ಜೇಡರ ಬಲೆ ಇವಳಿಗೆ ಊರೆಲ್ಲ ತನ್ನ  ಅತ್ತೆಯ ಮನೆಯೆವರ ಬಗ್ಗೆ ಚಾಡಿ ಹೇಳಿಕೊಂಡು ತಿರುಗಿಕೊಂಡು ಬರಲು ಪುರುಸುತ್ತು ಇದೆ ಮನೆಯ ಕೆಲಸ ಬಗ್ಗದ್ದು ಥು! ಇವಳದ್ದು ಒಂದು ಜನ್ಮ ಇವತ್ತು ಮಾಡಿದ್ದೂ ಅದನ್ನೇ  ನನ್ನ ಮನೆಯವರು ಎಷ್ಟು ವರ್ಷದಿಂದ ದಿಬ್ಬದ  ಕಡೆ ಇರುವ ಬೈಲಿನಿಂದ  ಕಟ್ಟಿಗೆ ತರುತ್ತಿಲ್ಲ? ಇವಳೂ ಕಟ್ಟಿಗೆಗೆ ಅತ್ತ ಕಡೆಗೆ ಹೋಗೋದು,ಹೋದರೆ ನೆಮ್ಮದಿ ಉಂಟೆ? ನನ್ನ ಅಮ್ಮ, ಅತ್ತಿಗೆ ಎದುರು ಬದುರು ಸಿಕ್ಕರೆ ಒಂದಷ್ಟು ರಾಡಿ ಮಾಡಿಕೊಂಡೆ ಬರುವ ರೂಡಿ ಅದಕ್ಕೆ ನಾನು ಶಾಮ ಬಟ್ಟರ ಮನೆಯ ಹಿಂದಿರುವ ಹಾಡಿಗೆ ಹೋಗು ಎಂದು ಯಾವತ್ತೂ ಬಡಕೊಳ್ಳುತ್ತೇನೆ ಅಲ್ಲಿ ಜನರ  ಓಡಾಟ ಸ್ವಲ್ಪ ಕಡಿಮೆ ಆದರೆ ಕತ್ತಲಾಗುವುದಕ್ಕಿಂತ ಮುಂಚೆ ಮನೆ ಸೇರಿದರೆ ಏನು ಸಮಸ್ಯೆ  ಇಲ್ಲ.. ಇವಳಿಗೆ  ಕತ್ತಲು ಸಮಸ್ಯೆ ಅಲ್ಲ ನಾಲಿಗೆ ಉದ್ದ ಬಿಡಲು ಜನಗಳು  ಅಲ್ಲಿ ಸಿಗುವುದಿಲ್ಲ ಅದು ಸಮಸ್ಯೆ.  ಅದಕ್ಕೆ ಬೈಲಿಗೆ ಕಟ್ಟಿಗೆ ತರಲು  ಹೋಗಿ ಅಲ್ಲಿ ನಾಲಗೆ ಉದ್ದ ಬಿಡುತ್ತಿರುವಾಗ ನಮ್ಮ ಅಮ್ಮನು ಅಲ್ಲಿಗೆ ಬಂದು ಮಾತಿಗೆ ಮಾತು ಬೆಳೆದಿತ್ತು. ಮಾತಿನ  ಭರದಲ್ಲಿ ಏನೇನೋ ಅಂದಿರಬೇಕು "ಮಟಗಾತಿ" ಅಂದಳು ಎಂಬುದನ್ನೊಂದು ಇವಳು ನೆವ  ಹಿಡಕೊಂಡು ನನ್ನಲ್ಲಿ ಚಾಡಿ ಸಾರಿಸ ಬಂದಳು. ಇವಳು ಬರುವುದಕ್ಕಿಂತ ಮೊದಲೇ ಊಟ ಮಾಡಿ ಇನ್ನೇನು ಮಧ್ಯಾಹ್ನ ದ  ನಿದ್ದೆಗೆ ಜಾರಬೇಕು ಎನ್ನುವಾಗ ಇವಳು ರೌದ್ರವತಾರ ಹೊತ್ತುಕೊಂಡು ಕೋಣೆಯ ಒಳ ಹೊಕ್ಕಳು ನಡೆದದನ್ನೆಲ್ಲ ಒಂದೇ ಉಸಿರಿಗೆ ಹೇಳಿ ಏದುಸಿರು ಬಿಡತೊದಗಿದಳು.ಮೊದಲೇ ನನ್ನ ಕಷ್ಟ, ಒಂಟಿತನ ದಿಂದ ದುಡಿಮೆಯಿಂದ ಬಳಲಿದ್ದ ನನಗೆ ಏನೆಂದು ಉತ್ತರಿಸಬೇಕು ತಿಳಿಯದೆ  ಚಾಪೆಯನ್ನು ಇನ್ನಷ್ಟು ಉದ್ದಕ್ಕೆ ಹಾಸಿ ಮಲಗಿಕೊಂಡೆ ನನ್ನ ಉದಾಸೀನತೆ ನೋಡಿ ಇವಳು ಇನ್ನಷ್ಟು ಸಿಟ್ಟಿಂದ ಬಾಗಿಲು ಎಳೆದುಕೊಂಡು ಹೋಗಿ ನನ್ನಲ್ಲಿ ಸಾಧ್ಯವಾಗದೆ ಇದ್ದ ಜಗಳವನ್ನು ಪಾತ್ರೆ ಪರಟಿಗಳ ಜೊತೆ ಮಾಡುತ್ತಿರುವುದು. ಅಟ್ಟದ ತೊಲೆಗಳ ನೋಡುತ್ತಾ ಇನ್ನೇನು ಕಣ್ಣು ಮುಚ್ಚಬೇಕು ಎನ್ನುವಷ್ಟರಲ್ಲಿ. ಎಲ್ಲಿ ಕರಿ  ನೋಡೋನಾ ನನ್ನ ಮಗನ್ನ.. ನನ್ನ  ಮಗನ  ತಲೆಯಲ್ಲಿ ವಿಷ ತುಂಬಿದವಳು ನೀನೆ ಕಣೇ ಎಂಬ ಬೊಬ್ಬೆ ಕೇಳಿ ನಾನು ಮಲಗಿದಲ್ಲಿಂದ ಹಾರಿ ಕುಳಿತೆ, ಅಂಗಳಕ್ಕೆ ಓಡಿದೆ. ಅಮ್ಮ ಕೈಯಲ್ಲಿ ಬೊಗುಣಿ ಹಿಡಿದು ಮನೆಯ  ಅಂಗಳದ ಎದುರು ಬದಿಯ ರಸ್ತೆಯಲ್ಲಿ ನಿಂತಿದ್ದಳು,ಇವಳು  ಅಂಗಳದಲ್ಲಿ ನಿಂತಿದ್ದಳು.ಯುದ್ಧಕ್ಕೆ ಸನ್ನದ್ಧಳಾದಂತೆ ಸೀರೆ ಎತ್ತಿ ಕಟ್ಟಿ, ವಾಸ್ತವತೆಗೆ ಬರಲು ನನಗೆ ಒಂದಷ್ಟು ಸಮಯ ಬೇಕಾಯಿತು ಅಮ್ಮ ಬೊಗುಣಿ ಹಿಡಿದು ಬೆಣ್ಣೆಗೆ ಬಂದಿದ್ದಾಳೆ ಪದ್ಮಿನಿ ಅಮ್ಮನ  ಮನೆಗೆ ಇವಳು ಅವರೊಂದಿಗೆ ಜಗಳಕ್ಕೆ ನಿಂತಿದ್ದಾಳೆ ಅಯ್ಯೋ ದೇವರೇ  ಎಂದು ನಾನು ಇವಳ ಬಳಿ ಬರುವುದರೊಳಗೆ ಇವಳು ಹೌದು ಕಣೇ ನಾನೇ ತುಂಬಿರೋದು ವಿಷ ನನ್ನ  ಗಂಡನ ತಲೆಯೊಳಗೆ ಆದರೆ ನೀನು  ತಿನ್ನುವ ಅನ್ನದಲ್ಲಿ ವಿಷ ಹಾಕುವವಳು ಅಲ್ಲವೇ ಎಂದು ಅಂಗಳ ದಾಟಿ ರಸ್ತೆಗೆ ಕಾಲಿಟ್ಟಳು. ನನ್ನಂತೆ ಇವರ ಎತ್ತರದ ಧನಿ ಕೇಳಿ ವಠಾರದವರೆಲ್ಲ ಆಗಲೇ ಸುತ್ತ ಸೇರಿಯಾಗಿತ್ತು ಜಾತ್ರೆಯಲ್ಲಿ ಮಂಗನ ಕುಣಿತ ನಡೆಯುವುದ ನೋಡುವ ರೀತಿ ಇವರು  ಇಬ್ಬರನ್ನೇ ನೋಡ ಹತ್ತಿದರು.ಇವರ  ಜಗಳ  ಬೆಳೆದು ಇನ್ನೇನು ಒಬ್ಬರ ಜುಟ್ಟು ಒಬ್ಬರು ಹಿಡಿದುಕೊಳ್ಳುತ್ತಾರೆ ಎಂದು ಅನಿಸಿತೋ  ಗರಬಡಿದವರಂತೆ ನಿಂತಿದ್ದ ನಾನು ಇವಳನ್ನು ಎಳೆದುಕೊಳ್ಳಲು ಮುನ್ನುಗಿದ್ದೆ. ಆದರೆ ಅದ್ಯಾವ ಶಕ್ತಿ ಅವಳ ಮೈ ಮೇಲೆ ಇತ್ತೋ ಕಾಣೆ ಅವಳ ಕೈ ಹಿಡಿದ ನನ್ನ ಎಲ್ಲರ ಎದುರೇ ನನ್ನ ತಳ್ಳಿಬಿಟ್ಟಳು. ಅವಳು ತಳ್ಳಿದ ರಭಸಕ್ಕೆ ನಾನು ಮನೆಯ ಎದುರೇ ಇದ್ದ ಮೋರಿಗೆ ಬಿದ್ದು ಬಿಟ್ಟೆ.ಮೋರಿಯ ತಲದಲ್ಲಿ ಇದ್ದ ಕಪ್ಪು ನೀರು ಹೊರ ಬದಿಗೆ ಚೆಲ್ಲಿತ್ತು ನಾನು ಮೋರಿಯ ಒಳಗಿದ್ದೆ.ಈಗ ಎಲ್ಲರ ಆಕರ್ಷಣೆಯ ಬಿಂದು ನಾನಾದೆ ಪ್ರೇಕ್ಷಕರಲ್ಲಿ ಕೆಲವರು ಗೊಳ್ಳೇಂದು ನಕ್ಕದ್ದು ಕೇಳಿಸಿತು. ನನ್ನ ಪಂಚೆ  ಆಗಲೇ ಪಕ್ಕದಲ್ಲಿ ಇದ್ದ ಕುರುಚಲಿಗೆ ಸಿಕ್ಕಿಕೊಂಡು ಬಿಚ್ಚಿ ಹೋಗಿತ್ತು ಮನೆಯಲ್ಲಿ ಇದ್ದ ಕಾರಣ ಒಳ ಬನಿಯನ್ ಹೊರತು ಏನು ಇರಲಿಲ್ಲ ಆದರೆ ಮೋರಿಯಲ್ಲಿ ಇರಬೇಕದ್ದದು ಬೇಕಾದಷ್ಟಿದ್ದು ಅದೆಲ್ಲ ನನ್ನ ಮೇಲೆ ಮೆತ್ತಿ ಕೊಂಡು ಬಿಟ್ಟಿತು. ಅಯ್ಯೋ ಎತ್ತಿಕೊಳ್ರೋ ಎಂದಷ್ಟೇ ನನಗೆ ಕೇಳಿಸಿತು ನನಗೆ ಆದ ಅವಮಾನಕ್ಕೆ ಸುತ್ತ ಏನು ನಡೆಯುತ್ತಿದೆ ಎಂದೆ ತಿಳಿಯದಾಗಿ ಹೋದೆ ನನ್ನ ಎತ್ತಿ ನಿಲ್ಲಿಸಿದ್ದರು."ಇವಳನ್ನು ಕಟ್ಟಿ ಕೊಂಡ ಕರ್ಮಕ್ಕೆ ನನ್ನ ಮಗನಿಗೆ ಈ ಪರಿಸ್ಥಿತಿಯೇ "ಎಂದು ಅಮ್ಮ ನನ್ನ  ಬಳಿ ಸಾರಿದಳು. ನನ್ನ ಸುತ್ತ ನೆರೆದಿದ್ದ ಜನಗಳ ಮಧ್ಯೆ ನಾನು ಇವಳನ್ನೇ  ನೋಡುತ್ತಾ ಇದ್ದೆ ಅವಳು ಸೆರಗು ಕೈಯಲ್ಲಿ ಹಿಡಿದು ತಲೆ ತಗ್ಗಿಸಿ ನಿಂತಿದ್ದಳು ಅವಳಿಂದ ಎಂತಾ ಪ್ರಮಾದವಾಗಿದೆ ಎಂಬ ಅರಿವು ಅವಳಿಗೆ ಆಗಿತ್ತೇ? ನಾನು ನನ್ನ ಬಳಿ ಸರಿದ ತಾಯಿಯ ಕೈಯನ್ನು ಕೊಸರಿ ಪಂಚೆ ಎಳೆದುಕೊಂಡು ಸೀದಾ ಬಚ್ಚಲು ಮನೆಗೆ ಹೊರಟೆ ನಾನು ಅಂಗಳ ಹೊಕ್ಕಾಗ ಕೆಲವರ ದೈನ್ಯ ದೃಷ್ಟಿಯು ಇನ್ನು ಹಲವರ ವ್ಯಂಗ್ಯ ದೃಷ್ಟಿಯು ನನ್ನನು ತಿನ್ನುತ್ತಿದದ್ದು ನನಗೆ ಗೊತ್ತಿತ್ತು ಆದರೆ ಮೊದಲು ಬಚ್ಚಲು ಮನೆಗೆ ಓಟಕ್ಕೆ ನಿಂತೆ ಮೋರಿಯ ಹೊಲಸಿಗೆ ಅಂಜಿ ಅಲ್ಲ ನನಗಾದ ಅವಮಾನಕ್ಕೆ ಅಂಜಿ. ಮೈ ಮೇಲೆ ನೀರು ಸುರಿಯುತ್ತಿದವನಿಗೆ ಅದನ್ನು ನಿಲ್ಲಿಸಲು ಮನಸ್ಸಿಲ್ಲ ಯಾಕೆಂದರೆ  ತಲೆಯೊಳಗೆ ನಿಲ್ಲದ ಯೋಚನೆಗಳ ಓಟ ಓಡುತ್ತಿತ್ತು? ಎಷ್ಟು ಜನರಿದ್ದರು? ಎಷ್ಟೊಂದು ಜನಗಳ ಮುಂದೆ ನನ್ನನು ತಳ್ಳಿ ಬಿಟ್ಟಳು ಅಲ್ಲವೇ? ಅಯ್ಯೋ ಈ ಕ್ಷಣಕ್ಕೆ  ಭೂಮಿ ಬಾಯಿ ತೆರೆದು ನನ್ನ ನುಂಗಿ ಬಿಡಬಾರದೆ? ಈಗ ಹೊರಗೆ ಮುಖವನ್ನು ಹೇಗೆ ತೋರಿಸಲಿ ಹೆಂಡತಿಯಿಂದ ಮೋರಿಗೆ ಬಿದ್ದ ಗಂಡ ಎಂದು ಊರಲ್ಲಿ ಎಲ್ಲ ನಗಲಿಕ್ಕಿಲ್ಲವೇ?  ನನಗೆ ಬಚ್ಚಲು ಮನೆಯಿಂದ ಹೊರ ಬರುವುದೇ ಬೇಡ ಎನಿಸಿತ್ತು. ಅದೆಷ್ಟು ಹೊತ್ತು ಹಾಗೆ ನೀರು ಸುರಿದುಕೊಂಡು ನಿಂತಿದ್ದೆನೋ? ಇನ್ನು ಜಾಸ್ತಿ ನಿಲ್ಲಲು ಸಾಧ್ಯವಿಲ್ಲ ಎಂದು ಕೊಂಡಾಗ ಹೊರಬಂದು ಬಿಟ್ಟೆ ಸೀದಾ ಮಲಗುವ ಕೋಣೆಗೆ ಹೋಗಿ ಬಾಗಿಲು ಎಳೆದುಕೊಂಡೆ. ರಸ್ತೆಯಲ್ಲಿ ಇನ್ನು ಜನರಿದ್ದರು ಇವರಿಗೆಲ್ಲ ಬೇರೆ ಕೆಲಸವಿಲ್ಲವೇ? ಇಷ್ಟು ಹೊತ್ತಿನ ತನಕ ಇನ್ನು ನಿಂತೆ ಇದ್ದಾರೆ. ಇನ್ನು ಈ ಮನೆಯೊಳಗೆ ಇರುವುದು ಸಾಧ್ಯವಿಲ್ಲ ಎನಿಸಿ ತೋಟದತ್ತ ಹೊರಡಲು ಎಣಿಸಿಬೇಗ ಬೇಗ ಒಗೆದಿಟ್ಟಿದ್ದ ಲುಂಗಿ ಸುತ್ತಿಕೊಂಡೆ ಒಂದು ಶರಟು ಹಾಕಿಕೊಂಡೆ ಸೀದಾ ಕೋಣೆಯಿಂದ ಹೊರಗೆ ಹೊರಟಾಗ ಇವಳು ಮನೆಯ ಮುಖ್ಯದ್ವಾರ ದ ಹೊರಗೆ  ಸ್ವಾಗತಕಾರಿನಿಯಂತೆ ನಿಂತಿದ್ದಳು ತಲೆ ಇನ್ನು ತಗ್ಗಿಯೇ ಇತ್ತು ನಾನು ಅವಳನ್ನು ದಾಟಿ ಅಂಗಳ  ಇಳಿದು ಹೊರ  ಬಂದು ಚಪ್ಪಲಿ ಮೆಟ್ಟುವಾಗ ನನಗೆ ಅಡ್ಡನಾಗಿಯೇ ಕ್ಷಮೆಗೆ ಎಂಬಂತೆ ನಿಂತು ಬಿಟ್ಟಳು. ನಿಂತು ನಿಂತು ಸಾಕಾಗಿ ಎಲ್ಲೆಲೋ ಮೂಲೆಗೆ ಚದುರಿಹೋಗಿದ್ದ ಗುಂಪು ಮತ್ತೆ ಹೊಸ ಪ್ರಸಂಗಕ್ಕೆ ಸಿದ್ದನಾಗಿ ನಿಂತು ಕೊಂಡಿತು. ಎಲ್ಲರ ಕಣ್ಣು ನನ್ನ ಮೇಲೆ ಇತ್ತು 'ನನ್ನ ಕ್ಷಮಿಸಿ ಬಿಡ್ರಿ' ಎಂದು ಕಾಲಿಗೆ ಬಿದ್ದು ಬಿಟ್ಟಳು. ಸೇರಿದ ಗುಂಪಲ್ಲಿ ಗುಸು ಗುಸು ನನಗೂ ಆ ಕ್ಷಣಕ್ಕೆ ಏನು ಮಾಡಬೇಕು ಎಂದು ತಿಳಿಯದೆ  ಅವಳನ್ನು ಎಲ್ಲರ ಎದುರು ಒದ್ದು ಅಂಗಳ ದಾಟಿದೆ ಹಿಂದೆ ಅವಳ ಅಳು ಕೇಳಿಸುತಿತ್ತು. ಎಲ್ಲರೂ ಬಿಟ್ಟ ಕಣ್ಣು ಬಿಟ್ಟಂತೆ ನನ್ನನೇ ನೋಡುತ್ತಿದ್ದರು. ದಾರಿ ಸಾಗುತಿತ್ತು. ತಲೆಯ ಪೂರ್ತಿ ಯೋಚನೆಗಳು ಮದುವೆಯ ದಿನದಿಂದ ಇಲ್ಲಿಯವರೆಗಿನದು ಬಿಸಿಲಿನ ಜಳ ನೆತ್ತಿ ಸುಟ್ಟಾಗ ಗೊತ್ತಾಯಿತು ನಾನು ತುಂಬಾ ದೂರ ನಡೆದು ಬಂದಿದ್ದೇನೆ ಹೊರಟದ್ದು ತೋಟದ ಕಡೆಗೆಂದು ಈಗ ತೋಟದ ವಿರುದ್ಧ ದಿಕ್ಕಿಗೆ ತುಂಬಾ ನಡೆದ್ದಿದ್ದೇನೆ ನೆತ್ತಿ ಸುಡುತ್ತಿತ್ತು ನಮ್ಮ  ಊರಿನ ಬಸ್ ಸ್ಟಾಂಡ್ ಪಕ್ಕಕ್ಕೆ ಬಂದಿದ್ದೆ.ಬಾಯರುತ್ತಿತ್ತು ಒಂದು ಎಳನೀರಾದರು ಕುಡಿದರೆ ಚೆನ್ನಾಗಿತ್ತು, ಕೈ ಜೇಬು ತಡಕಾಡಿತು ಒಂದಷ್ಟು ನೋಟು ಚಿಲ್ಲರೆಗಳು ತಮ್ಮ ಇರವನ್ನು ತೋರಿಸಿದವು ಅಂಗಡಿಯ ಕಡೆಗೆ ಹೆಜ್ಜೆ ಇಡಬೇಕು ಅನ್ನುವಷ್ಟರಲ್ಲಿ ಯಾರಾದರೂ ಅಂಗಡಿಗೆ ಬಂದ ಗಿರಾಕಿಗಳು ಮನೆಯಲ್ಲಿ ನಡೆದ ಪ್ರಸಂಗದ ಬಗ್ಗೆ ಮಾತನಾಡಿದರೆ? ಎಂಬ ಯೋಚನೆ ಬಂತು ತಾನು ಬಹಳಷ್ಟು ದೂರ ಬಂದಿದ್ದೇನೆಂದು ಇಲ್ಲಿಯವರೆಗೆ ವಿಷಯ ಇಷ್ಟರಲ್ಲಿ ತಲುಪಿರಲಿಕಿಲ್ಲ ಎಂದು ಬುದ್ದಿ ಹೇಳಿದರು ಮುಂದಡಿ ಇಡಲು ನಾಚಿಕೆ ಎಂದೇನಿಸಿ ಅಲ್ಲೇ ನಿಂತು ಬಿಟ್ಟೆ,ಅಷ್ಟರಲ್ಲೇ ರಸ್ತೆಯಲ್ಲಿ ಧೂಳು ಎಬ್ಬಿಸಿಕೊಂಡು ಬೈಕ್ ಬರುತ್ತಿತ್ತು ಯಾಕೋ ಏನೋ ಆತನಿಗೆ ಕೈ ಅಡ್ಡ ಹಿಡಿದೆ. "ಸರ್ ಎಲ್ಲಿಗೆ? "ಎಂದು ವಿನಯದಿಂದಲೇ ಕೇಳಿದೆ "ರೈಲ್ವೆ ಸ್ಟೇಷನ್ ಹತ್ರ ರಿ "ಅಂದ "ಸರ್ ನನ್ನು ಅಲ್ಲೇ ಬಿಡಿ" ಎಂದು ಮೋಟರು ಹತ್ತಿ ಕುಳಿತೆ  ಯಾವ ಯೋಜನೆ, ಯೋಚನೆ ಇಲ್ಲದೆಯೇ ಹತ್ತಿ ಬಿಟ್ಟಿದ್ದೆ. ಆತ ಎಲ್ಲಿಗೆ ಹೇಳಿದ್ದರು ಅಲ್ಲೇ ನಾನು ಸಹ ಅಲ್ಲಿಗೆ ಹೋಗುತ್ತಿದ್ದೆ. ಗಾಡಿ  ಮುಂದೆ ಸಾಗಿದಂತೆ  ರಸ್ತೆಯ ಸಣ್ಣ ಹೊಂಡಕ್ಕೆ ಟೈಯರ್ ಸಿಲುಕಿ ಸಾಗಿತ್ತು ಆಗ ಸೊಂಟದಲ್ಲಿ ನೋವು ಕಾಣಿಸಿತು ಹೌದು  ಮಧ್ಯಾಹ್ನ ಮೋರಿಗೆ ಬಿದ್ದ ರಭಸಕ್ಕೆ ಸೊಂಟಕ್ಕೆ ಪೆಟ್ಟಾಗಿದೆ ಆಗ ಅವಮಾನದ ನೋವಲ್ಲಿ ಈ ನೋವು ತಿಳಿಯಲಿಲ್ಲ ಈಗ  ತಿಳಿಯುತ್ತಿದೆ ಅಂಗೈ ಕೂಡ ತರಚಿದೆ, ಬೆನ್ನಿಗೆ ಕೂಡ ಈ ಬಿಸಿಲಿನ ಜಳಕ್ಕೆ ಮೈ ಬೆವತು ಗೊತ್ತಾಗುತ್ತಿದೆ. ಅಯ್ಯೋ ಗಂಡಸು  ಎನ್ನಿಸಿಕೊಂಡವನು ಹೆಣ್ಣಿನ ಕೈಯಲ್ಲಿ ಒದೆ ತಿನ್ನುವ ಪರಿಸ್ಥಿತಿ ಬಂತೆ!! ಊರಲ್ಲಿ ನನ್ನ ಬಗ್ಗೆ ಏನು ಮಾತನಾಡಿ ಕೊಳ್ಳುತ್ತಿರಬಹುದು? ನನ್ನ  ಬಗ್ಗೆ ಗೇಲಿ ಮಾಡುತ್ತಿರಬಹುದೇ? ಅಲ್ಲ ಅವಳನ್ನು ನಾನು ಹಾಗೆ ಬಿಟ್ಟು ಬಂದದ್ದು ತಪ್ಪಾಯಿತು  ಎಲ್ಲರ ಎದುರೇ ಜುಟ್ಟು ಹಿಡಿದು ಕಪಾಳಕ್ಕೆ ಭಾರಿಸಿಬೇಕಿತ್ತು? ಅದು ನನ್ನಿಂದ ಸಾಧ್ಯವೇ? ಬೀದಿಯಲ್ಲಿ ನಿಂತು ಜಗಳವಾಡುವಾಷ್ಟು ಕೆಟ್ಟು ಹೋದೆನೆ ನಾನು? ಥೂ ಹೀಗೆ ಯೋಚನೆಗಳ ಸರಮಾಲೆಯಲ್ಲಿ  ಇರುವಾಗಲೇ  ಸ್ಟೇಷನ್ ತಲುಪಿದ್ದೆ. ತಲುಪಿದ್ದೆ ಸತ್ಯ, ತಲುಪಿ  ಏನು ಮಾಡಲಿ ಅಲ್ಲಿಂದ ಒಮ್ಮೆ ತಪ್ಪಿಸಿಕೊಳ್ಳಲು ಅಲ್ಲಿಂದ ಹೊರಟು ಬಂದದ್ದು ಸರಿ ಆದರೆ ಸ್ಟೇಷನ್ ಅಲ್ಲಿ ಕುಳಿತು ಮಾಡುವುದಾದರೂ ಏನು? ಮತ್ತೆ ದಾಹ ಕಾಡಿತು ಜೊತೆಗೆ ಹಸಿವು ಕೂಡ ಫ್ಲಾಟ್ ಫಾರಂ ಟಿಕೆಟ್ ತೆಗೆದುಕೊಂಡು ಸ್ಟೇಷನ್ ಅಲ್ಲೇ ಇದ್ದ ಅಂಗಡಿಯಿಂದ  ಒಂದು ಚಾ ಬಿಸ್ಕೆಟ್ಟು ತೆಗೆದುಕೊಂಡು ಕುಳಿತೆ ಹೊಟ್ಟೆಗೆ ಸ್ವಲ್ಪ ಸಮಾಧಾನವಾದ ನಂತರ ಯೋಚಿಸತೊಡಗಿದೆ ಊರಿಗೆ ವಾಪಸು ಹೋಗಲೇ? ಅಲ್ಲಿ ಇರಬಾರದು ಎಂದೇನು ನಾನು ಬಂದದ್ದು ಅಲ್ಲ ಆದರೆ ಮರಳಿ ಹೋಗುವುದು ಆದರೂ ಹೇಗೆ? ಇಡೀ ಕೇರಿಯೆ ನಾನು ಇವಳ ಕೈ ಯಿಂದ ಮೋರಿಗೆ ಬಿದ್ದಿರುವುದು ನೋಡಿಯಾಗಿದೆ ಜನಗಳು ಹೆಂಡತಿ ಕೈಯಿಂದ ಪೆಟ್ಟು ತಿಂದು ಮೋರಿಗೆ ಬಿದ್ದ ಗಂಡ ಎಂದು ಹೀಯಾಳಿಸದೆ ಇರುವರೇ? ಯಾವ ಮುಖ ಇಟ್ಟುಕೊಂಡು ಕೆಲಸಕ್ಕೆ ಹೋಗಲಿ?ಎಂದು ಯೋಚಿಸ ತೊಡಗಿದೆ. ಸೂರ್ಯ ಅಸ್ತವಾಗುವ ಹೊರಸೂಸುವ ಚುರುಕು ಕೆಂಬಣ್ಣದ ಬಿಸಿಲು ಕಣ್ಣು ಚುಚ್ಚಲು ಪ್ರಾರಂಭಿಸಿತು ಮತ್ತೆ ಮದುವೆಯ ನಂತರದಿಂದ ನಡೆದ ಎಲ್ಲ ಘಟನೆಗಳ ನೆನಪು ಮೆರವಣಿಗೆ ಹೊರಡಲು ಶುರುವಾಯಿತು ಕಣ್ಣಲ್ಲಿ ಗೊತ್ತಿಲ್ಲದೆ ನೀರು ಸುರಿಯುತ್ತಿತ್ತು ವಾಪಸು ಹೊರಟು ಬಿಡಲೇ? ಎಲ್ಲಿಗೆ ಇವಳಲ್ಲಿಗೆ? ಸಾಧ್ಯವಿಲ್ಲ ಇನ್ನು ಅಮ್ಮನಲ್ಲಿಗೆ? ಅವರು ಒಪ್ಪಿಕೊಂಡರೂ ಇವಳೊಂದಿನ ಸಂಬಂಧ ಹರಿಯುವ ತನಕ ಅಲ್ಲಿಯೂ ನೆಮ್ಮದಿ ಇಲ್ಲ ಕಣ್ಣೀರಿಗೆ ಕಣ್ಣು ಮಂಜಾಗಿತ್ತು.ನೆನಪಿನ ಮೆರವಣಿಗೆಯಿಂದ ಯೋಚನೆಯೂ ಸಹ. ಅಷ್ಟರಲ್ಲಿ ಪಾನ್ವೆಲ್ ಗೆ ಹೊರಡುವ ಟ್ರೈನ್ ಇನ್ನೇನು ಬರುವುದು ಎಂದು ಧ್ವನಿವರ್ಧಕದಲ್ಲಿ ಮೊಳಗತೊಡಗಿತು ಏನು ಎನ್ನಿಸಿತೋ ಗೊತ್ತಿಲ್ಲ ಸೀದಾ ಟಿಕೆಟ್ ಕೊಂಡುಕೊಂಡೆ ಟ್ರೈನ್ ಹತ್ತಿ ಬಿಟ್ಟೆ ತೆಗೆದ ಜನರಲ್ ಟಿಕೆಟ್ ಆದರೂ ನನ್ನ ಅದೃಷ್ಟಕ್ಕೋ ಏನೋ ಬೋಗಿ ಖಾಲಿ ಇತ್ತು ಅಲ್ಲೇ ತಲೆಕೊಟ್ಟು ಮಲಗಿದೆ ಯಾವಾಗ ನಿದ್ದೆ ಆವರಿಸಿತೋ?

ಕಣ್ಣು ಬಿಟ್ಟಾಗ ಎಳೆ ಬಿಸಿಲು ಮುಖ ಚುಚ್ಚುತ್ತಿತು ರೈಲು ಹೊರಟಾಗ ಹೇಗಿತ್ತೋ ಹಾಗೆ ಆದರೆ ಇದು ಸೂರ್ಯ ಅಸ್ತವಲ್ಲ,ಸೂರ್ಯೋದಯ ತಿಳಿಯಲು ಸ್ವಲ್ಪ ಸಮಯವೇ ಹಿಡಿಯಿತು ನಾನೆಲ್ಲಿದ್ದೇನೆ? ರೈಲು ತನ್ನ ಸದ್ದು ಮಾಡುತ್ತಾ ಪಟ್ಟಿ ಮೇಲೆ ಸಾಗುತ್ತಿತ್ತು ಯಾವ ಊರು ಇದು ಸುತ್ತ ಬಯಲು ದೂರ ಕಣ್ಣು ಹಾಯುವಷ್ಟು ದೂರ ಬಯಲುಗಳ ಸೀಳಿಕೊಂಡು ಟ್ರೈನ್ ಮುಂದೆ ಓಡುತ್ತಿದೆ. ದಡ ದಡ ಸದ್ದು ಜೋರಾಗಿ ಮಾಡುತ್ತಾ ವೇಗ ನಿಧಾನ ಮಾಡುತ್ತಾ ನಿಂತಿತು ತಲೆ ಹೊರಗೆ ಹಾಕಿ ಊರಿನ ಹೆಸರು ಓದಿದೆ ಹಿಂದಿಯಲ್ಲಿ ಬರೆದಿದೆ "ರತ್ನಗಿರಿ" ಶಾಲೆಯಲ್ಲಿ ಕಲಿತು ನೆನಪಲ್ಲಿ ಉಳಿದಿದ್ದ ಹಿಂದಿಯನ್ನು ನೆನಪಿಸಿ ನೆನಪಿಸಿ ಜೋಡಿಸಿ ಓದಿದೆ ನಾನು.ಹೊಟ್ಟೆ ಚುರುಗುಟ್ಟುತಿತ್ತು ತಲೆ ನೋವು ಕಾಣಿಸಿತು. ನಿಧಾನಕ್ಕೆ ಮೈ ಮುರಿದೆ ಮೈ ಕೈಯಲ್ಲಿ ನೋವು ಕಾಣಿಸಿತು ನೋವಿನ ಜೊತೆಗೆ ಈ ನೋವಿಗೆ ಕಾರಣವಾದ ಘಟನೆಯು ನೆನಪಿಗೆ ಬಂದು ಮುಖ ಸಣ್ಣಗಾಯಿತು. ಮಾರಾಟ ಮಾಡಿಕೊಂಡು ಬಂದ ಟೀ ಬಿಸ್ಕತ್ ತಿಂದು ಕುಳಿತೆ. ಏನೂ ಯೋಚನೆ ಬೇಡ ಇತ್ತು ಮತ್ತೆ ಮಲಗಿದೆ ಆದರೆ ಕಣ್ಣಿಗೆ ನಿದ್ದೆ ಹತ್ತಲಿಲ್ಲ. ರೈಲು ಹತ್ತಿ ಬಂದದ್ದು ಆಯ್ತು ಮುಂದೆ? ಇದೇ ಪ್ರಶ್ನೆ ಮತ್ತೆ ಮತ್ತೆ ಕಾಡಲು ಪ್ರಾರಂಭಿಸಿತು. ಮುಂದಿನ ನಿಲ್ದಾಣದಲ್ಲಿ ಇಳಿದು ವಾಪಸು ಹೋಗಲೇ?ಯಾವುದೇ ಕಾರಣಕ್ಕೂ ವಾಪಸು ಹೋಗಬಾರದು ಎಂದು ಮನಸು ಹೇಳಿತು ಹಾಗಾದರೆ ಮುಂದೆ? ಈ ಪ್ರಶ್ನೆಗೆ ಮಾತ್ರ ಉತ್ತರ ತಿಳಿಯಲಿಲ್ಲ ಅದೆಷ್ಟು ಹೊತ್ತು ಹಾಗೆ ಕುಳಿತಿದ್ದೆನೋ ಗೊತ್ತಿಲ್ಲ ಟ್ರೈನ್ ಮುಂದೆ ಸಾಗುತಿತ್ತು ನನ್ನ ಯೋಚನೆಗಳು ಹಿಂದಿನ ನೆನಪುಗಳಲ್ಲೇ ಹೆಣಗುತ್ತಿತ್ತು ಕುಳಿತಲ್ಲೇ ಜೊಂಪು ಹತ್ತಿತು. ರೈಲಿನ ಕಿರ್ ಎಂಬ ದೊಡ್ಡ ಸದ್ದಿಗೆ ಎಚ್ಚತ್ತು ಹೊರಗೆ  ಇಣುಕಿದೆ ಪನ್ವೆಲ್ ಎಂದು ದೊಡ್ಡದಾಗಿ ಕಾಣಿಸಿತು ಇದೆ ಅಲ್ಲವೇ ಸ್ಟೇಷನ್ ಎಂದುಕೊಂಡು ಇಳಿದೆ ಅದಾಗಲೇ ಸೂರ್ಯ ನೆತ್ತಿಯ ಮೇಲೆ ಇದ್ದ.

ಅಯ್ಯೋ ಎಷ್ಟು ದೊಡ್ಡ ರೈಲ್ವೆ ನಿಲ್ದಾಣ ನಾನು ಜೀವನದಲ್ಲಿ ನೋಡಿಲ್ಲ ಭಯ ಆಯಿತು. ಎಷ್ಟೊಂದು ಎತ್ತರ ವಿಶಾಲ ಸ್ಟೇಷನ್ ನಮ್ಮ ಊರಿನಂತಲ್ಲ ಜನಗಳು ಅಷ್ಟೇ ಜಾತ್ರೆಯಲ್ಲಿ ನೆರೆದಷ್ಟು ಜನರು ಎಲ್ಲರಿಗೂ ಆತುರ ನನ್ನ ಕಾಲುಗಳು ನಡುಗಲು ಆರಂಭಿಸಿತು. ಅಲ್ಲಿಂದ ಓಡಿ ಹೋಗಬೇಕು ಎಂದೆನಿಸಿತು. ಆದರೆ ಎಲ್ಲಿಗೆ? ರೈಲ್ವೆ ನಿಲ್ದಾಣದದಲ್ಲಿ ಹಾಕಿದ್ದ ಪಟ್ಟಿ ನೋಡಬೇಕಾದರೆ ವಾರಣಾಸಿ ಎಂಬ  ಹೆಸರು ಕಣ್ಣಿಗೆ ಬಿತ್ತು ಮನಸ್ಸಲ್ಲಿ ಯಾವುದೊ ನಿರ್ಧಾರ ಪ್ರಕಟವಾಯಿತು ಸೀದಾ ಹೋಗಿ ವಾರಣಾಸಿ ಗೆ ಹೋಗುವ ಟಿಕೆಟ್ ಪಡೆದು ರೈಲಲ್ಲಿ ಕುಳಿತೆ ಮತ್ತೆ ಹೊಟ್ಟೆ ತಾಳ ಹಾಕಲು ಶುರುಮಾಡಿತು ಜೇಬು ತಡಕಿನೋಡಿದೆ ದುಡ್ಡೇನೋ ಇತ್ತು ಆದರೆ ಬಹಳ ದಿನಗಳಿಗೆ ಉಳಿಯುವಷ್ಟು ಇರಲಿಲ್ಲ ರೈಲಿನಲ್ಲೇ ಮಾರಿಕೊಂಡು ಬಂದ ತಿಂಡಿ ತಿಂದು ಕುಳಿತೆ.ಹಸಿವು ಕಳೆದು ನಿರ್ಧಾರ ಸ್ಪಷ್ಟವಾಗ ತೊಡಗಿತು ವಾರಾಣಸಿ ಎಂದರೆ ಸಾಧುಗಳು ಇರುವಂತ ಜಾಗ ನಾನು ನೋಡಿಲ್ಲ ಆದರೆ ಕೇಳದೆ ಏನು? ಶ್ಯಾಮ ಭಟ್ಟರು ನಮ್ಮ ಊರಲ್ಲೇ ಹೆಚ್ಚು ತಿಳಿದವರು ಬ್ರಾಹ್ಮಣರು. ಪೂಜೆಪುನಸ್ಕಾರ ಏನೇ ನಡೆಯಲಿ ಅಲ್ಲಿ ಅವರು ಮುಂದೆ, ಅಂತಹ ವ್ಯಕ್ತಿಯೇ ತೀರ್ಥಯಾತ್ರೆಗೆಂದು ವಾರಾಣಸಿಗೆ ಬಂದವರು ಅಲ್ಲವೇ ಅವರೇ ಹೇಳಿದ್ದರು ಅಲ್ಲಿ ಶಿವನ ದೇವಸ್ಥಾನವಿದೆಯಂತೆ ಎಲ್ಲ ಕಡೆಯಿಂದಲೂ ದೇವರ ನೋಡುಲು ಬರುವರಂತೆ ಹಾಗೆ ಜೀವನದಲ್ಲಿ ವೈರಾಗ್ಯ ಬಂದವರು  ಮೋಕ್ಷ ಪಡೆಯಲು ಅಲ್ಲೇ ಬರುವುದುದಂತೆ  ಈಗ  ನನಗೂ ಬಂದಿರುವುದು ವೈರಾಗ್ಯ ಅಲ್ಲವೇ? ಇನ್ನು ಈ ಮನೆ ಮಠ ಸಂಸಾರ ಯಾವುದು ಬೇಡ ವಾರಾಣಸಿಯಲ್ಲೇ ಎಲ್ಲದರು ಒಂದು ಆಶ್ರಮ ಸೇರಿ ಬಿಡುತ್ತೇನೆ ಆ ದೇವರ ಸೇವೆ ಮಾಡಿ ಇರುತ್ತೇನೆ ಎಂಬ ಯೋಚನೆಯಲ್ಲಿ ಹೊಸ ಹುರುಪು ಬಂದಿತು. ಇದೇ ಯೋಚನೆಯಲ್ಲಿ ಕನಸುಗಳ ಹೆಣೆಯ ತೊಡಗಿದೆ ನಾನು ಖಾವಿ ತೊಟ್ಟಂತೆ, ಗಡ್ಡ ಬಿಟ್ಟಂತೆ, ದೇವರ ಸನ್ನಿದಿಯಲ್ಲಿ ಧ್ಯಾನ ಮಾಡಿದಂತೆ ಹೀಗೆ  ಯೋಚನೆ, ಯೋಜನೆ ಮಧ್ಯೆ, ಮಧ್ಯೆ ನಿದ್ದೆ ತೆಗೆಯುತ್ತ ವಾರಣಾಸಿ ತಲುಪಿದೆ. ವಾರಾಣಸಿ ತಲುಪಿದಾಗ  ರೈಲಿನಲ್ಲಿ ಇದ್ದ ಯೋಜನೆಗಳು ನಿಜವಾಗುವುದೇ ಖಾಲಿಯಾಗುವುದೇ ಎಂಬ ಭಯ ಉಂಟಾಯಿತು ಜೇಬಲ್ಲಿ ದುಡ್ಡು ಖಾಲಿಯಾಗಿದ್ದದು ಮಾತ್ರ ನಿಜ.

ಎಲ್ಲೆಲ್ಲೂ ಜನಗಳು ಕೇಸರಿ ಶಾಲುಹೊದ್ದುಕೊಂಡು.ಅಯ್ಯೋ ವಿದೇಶಿಯರಿಗೂ ಕಡಿಮೆ ಇಲ್ಲ ಸಾಧುಗಳು ಸಂತರು ಎಷ್ಟು ಜನ ಬೈರಾಗಿಗಳು ಕಾಣುತ್ತಿದ್ದಾರೆ. ಆದರೆ ನಾನೆಲ್ಲಿ ಹೋಗಲಿ ಎಂಬುದೇ ತಿಳಿಯಲಿಲ್ಲ ಹೊಟ್ಟೆ ಹಸಿಯುತ್ತಿತ್ತು, ಬಿಸಿಲು ಜೋರಿತ್ತು.  ಜೇಬು ಮಾತ್ರ ಖಾಲಿ. ಅಲ್ಲೇ ಎಲ್ಲೋ ಮೂಲೆಯಲ್ಲಿ ಕುಳಿತುಕೊಂಡೆ ಎಷ್ಟು ಹೊತ್ತು ತಿಳಿಯಲಿಲ್ಲ. ಏನು ಮಾಡುವುದು ತಿಳಿಯಲಿಲ್ಲ ಅವರ ಭಾಷೆಯೂ ತಿಳಿಯುತ್ತಿಲ್ಲ ನಾನು ಕುಳಿತ್ತಿದ್ದಲ್ಲಿ ಪಕ್ಕದಲ್ಲೇ ತಾಯಿ ಮಗುವಿಗೆ ರೊಟ್ಟಿ ತಿನ್ನಿಸುತ್ತಿದಳು ಅದನ್ನು ನೋಡಬಾರದದು ಅನ್ನಿಸಿದರೂ ಹಸಿವೆಗೆ ನನ್ನ ಕಣ್ಣು ಪದೇ ಪದೇ ರೊಟ್ಟಿಯ ಕಡೆಗೆ ತಿರುಗುತ್ತಿತ್ತು ಅದು ಆಕೆಗೆ ತಿಳಿಯಿತೋ ಏನೋ ಎರಡು ರೊಟ್ಟಿ ನನ್ನ ಕಡೆಗೆ ಹಿಡಿದಳು ಬೇಡ ಎಂದೂ ಹೇಳಲಾಗದೆ ರೊಟ್ಟಿ ತೆಗೆದುಕೊಂಡೆ ಕಣ್ಣಿನ ಅಂಚಲ್ಲಿ ಮುಜುಗರ ಅಲ್ಲೇ ರೊಟ್ಟಿ ತಿಂದು ನೀರುಕುಡಿದು ಎದ್ದೆ ಮುಂದೆ ಹೆಜ್ಜೆ ಹಾಕಿದೆ. ಮನೆ ಬಿಟ್ಟು ಬಂದು ದಿನ ಎಷ್ಟಾಯಿತು? ಊರಲ್ಲಿ ಎಲ್ಲ ನನ್ನ ನೆನಪು ಮಾಡಿಕೊಳ್ಳುತ್ತಿರುವರೆ? ನನ್ನ ಹುಡುಕುತ್ತಿರಬಹುದೇ? ನನ್ನ ತಾಯಿ ನನ್ನ ನೆನಪಿಸಿ ಕಣ್ಣೀರು ಹಾಕುತ್ತಿರಬಹುದೇ? ಇನ್ನು ಇವಳು? ಇದೇ ಯೋಚನೆಗಳ ಲಹರಿಯಲ್ಲಿ ಹೆಜ್ಜೆ ಹಾಕಲು ಕಾಲಿಗೆ ಕಲ್ಲೊಂದು ತಾಗಿ ಚಪ್ಪಲಿ ಕಿತ್ತು ಬಂದಿತ್ತು. ಚಪ್ಪಲಿ ಎಸೆದು ಮುಂದೆ ಸಾಗುವಾಗ ಗಾಜಿನ ಕಟ್ಟಡವೊಂದರಲ್ಲಿ ನನ್ನನ್ನು ನಾನು ನೋಡಿದೆ ಮನೆಯಿಂದ ಹೊರಟು ಬಂದಾಗ ತೊಟ್ಟಿದ್ದ ಅದೇ ಶರಟು, ಪಂಚೆ ಊರಿನಿಂದ ಇಲ್ಲಿಯವರೆಗಿನ ತನ್ನ ಪಯಣದ ಕುರುಹು ತೋರಿಸುತ್ತಿತ್ತು,ಎಣ್ಣೆ ಕಾಣದ ತಲೆ ಕೂದಲು, ಸರಿಯಾಗಿ ಮರ್ಜನವಿಲ್ಲದ ಮುಖ,ಬಿಸಿಲಿಗೆ ಅರೆ ಬರೆ ನಿದ್ದೆಗೆ ಸೋತ ಕಣ್ಣು,ಬೆಳೆಯುತ್ತಿರುವ ಕುರುಚಲು ಗಡ್ಡ ,ಈಗ ಚಪ್ಪಲಿಯೂ ಇಲ್ಲದ ಕಾಲು. ನಾನು ಯಾವ ಭಿಕಾರಿಗೂ ಕಮ್ಮಿ ಎಣಿಸಲಿಲ್ಲ ಅಲ್ಲೇ ಪಕ್ಕದಲ್ಲಿ ಇದ್ದ ನಲ್ಲಿಯಲ್ಲಿ ಮುಖ ತೊಳೆದುಕೊಂಡೆ ಅಷ್ಟೇ ಇನ್ನೇನು ಸಾಧ್ಯ? ಉಡಲು ಬೇರೆ ಬಟ್ಟೆಯೇ?ವಿಧಿಯಿಲ್ಲ ಎನ್ನುವಾಗ ಸನ್ಯಾಸಿ ಆಗ ಹೊರಟವಣಿಗೆ ಬಟ್ಟೆಯ ಹಂಗೇಕೆ? ಎಂದು ಮುಂದೆ ಸಾಗಿದೆ ಎಷ್ಟು ದೂರ ಸಾಗಿದೆನೋ? ಎಷ್ಟು ಹೊತ್ತು ಸಾಗಿದೇನೋ? ಆದರೆಸೂರ್ಯ  ಮಾತ್ರ ಪಶ್ಚಿಮದೆಡೆಗೆ ಸಾಗುತ್ತಿದ್ದ. ಸಾಗುತ್ತಿದಂತೆ  ಜನಗಳು ನಿಬಿಡವಾಗುತ್ತಿದಾರೆ ಅನ್ನಿಸಿತು ಎಲ್ಲರೂ ಇಲ್ಲೇ ಒಂದು ಕಡೆ ಸೇರುತ್ತಿದ್ದಾರೆ ಅನ್ನಿಸಿತು ನಾನು ತೆರಳಿದೆ ಅತ್ತ "ಅಸ್ಸಿ ಘಾಟ್" ಎಂಬ ಹೆಸರು ಕಾಣಿಸಿತು ಜನವೋ ಜನ ಇಲ್ಲಿ. ನಡೆದು, ಹಸಿವು, ದಾಹದಿಂದ ನನಗೆ ಕುಸಿದು ಬಿದ್ದ ಅನುಭವ ಅಲ್ಲೇ ಒಂದು ಕಂಬಕ್ಕೆ ಒರಗಿ ಕುಳಿತೆ ನನ್ನ ಸುತ್ತ ಬಣ್ಣ ಬಣ್ಣ ದ ವೇಷದ ಜನಗಳಿಗೆ ಕಮ್ಮಿ ಇರಲಿಲ್ಲ ಜೊತೆಗೆ ಕಾವಿ ತೊಟ್ಟು ಜಟೆ ಸುತ್ತಿದವರಿಗೂ.  ಕಂಬಕ್ಕೆ ಒರಗಿ ಕುಳಿತ ನನನ್ನು ಗಮನಿಸುವವರು ಯಾರು? ಅಷ್ಟು ಜನಜಂಗುಳಿಯ ಮಧ್ಯೆ ಕಣ್ಣು ಕತ್ತಲೆ ಬರುತ್ತಾ ಇನ್ನೇನು ಕಣ್ಣು ಮುಚ್ಚಬೇಕು ಅನ್ನುವಷ್ಟರಲ್ಲಿ ನಾಯಿ ಬೊಗಳಿಕೆಗೆ ಎಚ್ಚರವಾಯಿತು ಕಂದು ಬಣ್ಣದ ಕೃಶ ನಾಯಿಯೊಂದು ನನ್ನನೇ ನೋಡುತ್ತಾ ಜೋರಾಗಿ ಬೊಗಳುತ್ತಿತ್ತು ಮೊದಲು ಅದರ ಉದ್ದೇಶ ಅರಿವಾಗಲಿಲ್ಲ ನಂತರ ತಿಳಿಯಿತು ಅದರ ಜಾಗ ನಾನು ಆಕ್ರಮಿಸಿದ್ದೇನೆ ಶ್ವಾನ ಮಹಾರಾಜನಿಗೆ ಅವನ ಜಾಗ ವಾಪಸು ಏನೋ ಕೊಟ್ಟೆ ಮುಂದೆ? ನನ್ನಂತೆ ಕಂಬ ಕಂಬಕ್ಕೂ, ಮೂಲೆ, ಮೂಲೆಗೂ ವಿವಿಧ ವೇಷಗಳಲ್ಲಿ ಜನರಿದ್ದರು ಎಲ್ಲೋ ಘಾಟ್ ಇಳಿಯುವ ಮೆಟ್ಟಲು ಮೂಲೆ ಹಿಡಿದುಕೊಂಡೆ ಆದರೆ ಇಲ್ಲೂ ತುಂಬಾ ಹೊತ್ತು ಉಳಿಯುವುದು ಕಷ್ಟಎನ್ನಿಸಿಬಿಟ್ಟಿತು.ಇನ್ನೇನು ಸಂಪೂರ್ಣವಾಗಿ ಕಣ್ಣು ಕತ್ತಲೆ ಬಂದು ನೆಲ ಮುಟ್ಟಿಬಿಡಬೇಕು ಎನ್ನುವಾಗ ಯಾರೋ ಹತ್ತಿರ ನೀರು, ಪ್ರಸಾದ ತಂದಿಟ್ಟು ಹೋದರು. ಬಕಸಾರುನಿಗೆ ಅರೆಕಾಸಿನ ಮಜ್ಜಿಗೆ ಅನ್ನಿಸಿದರೂ ಬೇರೆ ಉಪಾಯ ಉಂಟೆ?. ಹೊಟ್ಟೆಗೆ ಸ್ವಲ್ಪ ಸಮಾಧಾನ ಅನ್ನಿಸಿದ ತಕ್ಷಣ ಕಣ್ಣು ಎಳೆಯ ತೊಡಗಿತು ಯಾವ ಗಳಿಗೆಯಲ್ಲಿ ನಿದ್ರಾ ದೇವಿ ಆವರಿಸಿದಲೋ ಗೊತ್ತಿಲ್ಲ.

ಯಾರೋ ಎಳೆದು ಹಾಕಿದಂತಾಯಿತು ಅಯ್ಯೋ ನನ್ನ ನನ್ನ ಪಂಚೆ ಯಾರೋ ಎಳೆಯುತ್ತಿದ್ದಾರೆ ಕಷ್ಟಪಟ್ಟು ವಾಸ್ತವಕ್ಕೆ ಬರಲು ಪ್ರಯತ್ನಿಸಿದೆ ಹೌದು ಯಾರೋ ನನ್ನ ಅಂಗಿ ಜೇಬು ತಡಕಾಡುತ್ತಿದ್ದಾರೆ ಪಂಚೆ ಎಳೆದು ಒಳಉಡುಪು ಜೇಬಲ್ಲಿ ತಡಕಾಡುತ್ತಿದ್ದಾರೆ. "ಕಳ್ಳ ಕಳ್ಳ "ಎಂದು ಕಿರುಚಾಡಿಕೊಂಡು ಎದ್ದು ಕುಳಿತೆ ಹತ್ತಿರದಲ್ಲಿ ಇದ್ದ ನಾಯಿಗಳೆಲ್ಲ ಬೊಗಳುತ್ತ ಬಂದವು. ಕಳ್ಳ ಜೋರಾಗಿ ಹೊಟ್ಟೆಗೆ ಒದ್ದು ಓಡಿದ. ಜೇಬಲ್ಲಿ ಏನು ಸಿಗಲಿಲ್ಲ ಎಂಬ ಸಿಟ್ಟಿಗೆ ಒದ್ದನೇ? ಅಥವಾ ನಾನು ಎದ್ದು ಕಿರುಚಾಡಿದನೆಂದು ಒದ್ದನೇ?ನಾನು ಸಂಪೂರ್ಣ ವಾಸ್ತವಕ್ಕೆ ಬಂದಿದ್ದೆ. ಕತ್ತಲಾಗಿತ್ತು ಜನಗಳ ಓಡಾಟ ಇರಲಿಲ್ಲ. ಅಲ್ಲಲ್ಲಿ ಯಾರ್ಯಾರೋ ಮಲಗಿದ್ದರು. ಎದ್ದು ಬಂದಿದ್ದ ನಾಯಿಗಳು ಅದಾಗಲೇ ತಮ್ಮ ಸ್ವ ಸ್ಥಾನಕ್ಕೆ ಹಿಂತಿರುಗಿದ್ದವು ನಾನು ನನ್ನ ಬಟ್ಟೆ ಸರಿ ಪಡಿಸಿಕೊಂಡು ಅಲ್ಲಿಂದ ಹೊರಬಿದ್ದೆ. ಖಾಲಿ ರಸ್ತೆಯಲ್ಲಿ ಹೆಜ್ಜೆ ಇಟ್ಟೆ. ನಾಲ್ಕು ಹೆಜ್ಜೆ  ಇಟ್ಟಿದ್ದೆನೋ ಇಲ್ಲವೋ ಈ ಕತ್ತಲ ಹಾದಿಯಲ್ಲಿ ಬಂದ ಆಗಂತುಕನ ನೋಡಿ  ಬೀದಿಗಳು ರೊಚ್ಚಿಗೆದ್ದು ಬಿಟ್ಟವು ಅವುಗಳಿಂದ ತಪ್ಪಿಸಿಕೊಂಡು ಯಾವ ಗಲ್ಲಿಯೋ ಯಾರ ಮನೆಯ ಅಂಗಳವೋ ಓಡಿದೆ ನಾನು ಓಡಿದಷ್ಟು ಅವುಗಳ ಸಂಖ್ಯೆಯೂ, ಅಬ್ಬರವು ಹೆಚ್ಚಾಯಿತು. ಕೊನೆಗೆ ಏನು ತಿಳಿಯದೆ ಆ ಕತ್ತಲ್ಲಲ್ಲೂ ಒಂದು ಮನೆ ಬಾಗಿಲು ತಟ್ಟಿದೆ. ಯಾರೋ ಬನಿಯನ್ ಹಾಕಿದ ವ್ಯಕ್ತಿ ಬಾಗಿಲು ತೆರೆದ. ಓಡಿ ಓಡಿ ಬೆವತು ಹೋಗಿದ್ದ ನನ್ನನು, ಹಿಂದೆ ಕೇಳಿ ಬರುತ್ತಿದ್ದ ಬೊಗಳುವಿಕೆ ಕೇಳಿ ಆತನಿಗೆ ಅದಾಗಲೇ ಅವನಿಗೆ ಬೇಕಿದ್ದ ಉತ್ತರ ಸಿಕ್ಕಿತ್ತು. ಒಂದು ಕೋಲು ಹಿಡಿದು ಬಂದಿದ್ದ ನಾಯಿಗಳ ಗುಂಪನ್ನು ಓಡಿಸಿಬಿಟ್ಟ. "ಕೌನ್ ಒ ಆಪ್ "  "ಆ " ಆತ ಏನು ಅಂದ? ಇದ್ಯಾವ ಭಾಷೆ? ನಾನು ಬೆಬ್ಬೆ ಅನ್ನುದು ಬಿಟ್ಟರೆ ನನಗೆ ಆತನ ಭಾಷೆ ಬರುವುದೇ? ಅಳು ಬಂತು ಕನ್ನಡ ಕನ್ನಡ ಎಂದು ತಡ ಬಡಿಸಿದೆ ಆತನಿಗೆ ಅದೇನು ಅನಿಸಿತೋ ತಿಳಿಯೇ ಒಳ ಹೋಗಿ  ಶರಟು ತೊಟ್ಟು ಹೊರಬಂದ ಕೈಯಲ್ಲಿ ಒಂದು ಕೋಲು, ಟಾರ್ಚು ಮುಂದೆ ಸಾಗಿದ ನಾನು ಆತನ ಹಿಂದೆ ಅದೆಷ್ಟು ಗಲ್ಲಿ ಗಲ್ಲಿ ಒಳಗೆ ತಿರುಗಿಸಿದನೋ? ತಿಳಿಯೇ  ಒಂದು ದೊಡ್ಡ ಮರದ ಗೇಟಿನ ಮುಂದೆ ಬಂದು  ನಿಲ್ಲಿಸಿದ. ಗೇಟು ತೆರೆದು ಮೂರು ಅಂತಸ್ತಿನ ಕಟ್ಟಡದ ಮುಂದೆ ನಿಂತ ಮಂದ ಬೆಳಕಿನಲ್ಲಿ ಅದು ಮೂರು ಅಂತಸ್ತು ಎಂದಷ್ಟೇ ಹೇಳಬಲ್ಲೆ. ಆತ ಆ ಕಟ್ಟಡದ ಬಾಗಿಲು ಬಡಿಯಲು ಯಾರೋ ಬಿಳಿ ಶರ್ಟು ಮತ್ತು ಬಿಳಿ ಪಂಚೆ ಧರಿಸಿದ್ದ  ಯುವಕ ಹೊರ ಬಂದ ಈತ ಆತನೊಡನೆ ಇವನು ಏನು ಹೇಳಿದನೋ ತಿಳಿಯಲಿಲ್ಲ ಆದರೆ ನನ್ನ ಪುಣ್ಯಕ್ಕೆ ಆ ಬಿಳಿ ವಸ್ತ್ರದಾರಿ  ಕನ್ನಡದಲ್ಲಿ ನನ್ನ "ಒಳ ಬನ್ನಿ" ಎಂದ. ನನ್ನ ಕರೆದಕೊಂಡು ಬಂದವನು  ಹೊರಟು ಹೋದ ದೊಡ್ಡ ಹಜಾರಕ್ಕೆ ನಾನು ಕಾಲಿಟ್ಟಿದ್ದೆ. ಆ ಬಿಳಿ ವಸ್ತ್ರದಾರಿ  ಒಂದು ಚಾಪೆತಂದು  ಕೊಟ್ಟು ಒಂದು ಮೂಲೆ ತೋರಿಸಿ ಮಲಗಿಕೊಳ್ಳಿ ಎಂದು ಹೇಳಿ "ನಾಳೆ ಬೆಳಗ್ಗೆ ಮಾತಾಡುವ" ಎಂದಷ್ಟೇ ಹೇಳಿ ಬಾಗಿಲು ಭದ್ರ ಪಡಿಸಿ ಹೊರಟು ಹೋದ  ಆತ ಹೊರಟು ಹೋದ ತುಂಬಾ ಹೊತ್ತು ನನಗೆ ನಿದ್ದೆ ಬರಲಿಲ್ಲ. ಓಡಿ, ನಡೆದು  ಬಾಯಾರಿಕೆ ಆಗಿತ್ತು ಒಂದರ ಮೇಲೊಂದು ಇನ್ನೊಂದು ಅಘಾತವಾಗಿತ್ತು ಬೆವರಿನಲ್ಲಿ ಮುಳುಗಿ ಹೋಗಿದ್ದೆ. ಈ ಹಜಾರದಲ್ಲಿ ನನ್ನನ್ನು ಬಿಟ್ಟರೆ ಇನ್ಯಾರು ಕಾಣಲು ಸಹ ಇರಲಿಲ್ಲ ಕತ್ತಲಲ್ಲಿ ಇನ್ಯಾವುದು ಕಾಣುವುದು ಸಾಧ್ಯವಿರಲಿಲ್ಲ ಆದರೆ ನನ್ನ ಪುಣ್ಯಕ್ಕೆ ನಾನು ಕುಳಿತ ಮೂಲೆಯಲ್ಲೇ ಒಂದು ಮಡಕೆ ಇರುವುದು ಕಂಡಿತು ಹೋಗಿ ಅದರಿಂದ ನೀರು ಕುಡಿದೆ ನೆಮ್ಮದಿ ಅನ್ನಿಸಿತು. ನೆಮ್ಮದಿಯ  ಜೊತೆಗೆ ಈ ದಿನದ ಸಂಪೂರ್ಣ ನೆನಪು ಮರುಕಳಿಸಿತು, ಜೊತೆಗೆ ಪ್ರಯಾಣದ ನೆನಪು, ಆ ಪ್ರಯಾಣಕ್ಕೆ ಕಾರಣವಾದ ಘಟನೆಯ ನೆನಪು ಹೀಗೆ ನೆನಪುಗಳಲ್ಲೇ ನಿದ್ದೆಯೂ.. ಬೆಳಗ್ಗೆ ಭಜನೆಯ ಸದ್ದು ಕೇಳಿ ಎಚ್ಚರವಾಗಿ ಕುಳಿತೆ ಕಚ್ಚೆ ಕಟ್ಟಿ ಬಿಳಿ ಶರಟು ಹಾಕಿದ ಹುಡುಗನೊಬ್ಬ ಬಳಿ ಬಂದ ಅನಂತ ಅಯ್ಯ ಬಾವಿ ಕಟ್ಟೆ ಹತ್ತಿರ ಇದ್ದಾರೆ ಅದೋ ಅಲ್ಲಿ ಎಂದು ಹೊರ ಅಂಗಳಕ್ಕೆ ಬೊಟ್ಟು ಮಾಡಿ ತೋರಿಸಿದ ನಾನು ಚಾಪೆ ಮಡಿಚಿ ಬಾವಿ ಕಟ್ಟೆ ಹತ್ತಿರ ಹೋದೆ. ಅನಂತ ಕೈಗೆ ಒಂದು ಬಿಳಿ ಪಂಚೆ ಬಿಳಿ ಶರಟು ಕೊಟ್ಟು ಸ್ನಾನ ಮುಗಿಸಿ ಮತ್ತೆ ಗುರುಗಳ ಕಾಣಬಹುದು ಎಂದ. ಬಾವಿಯಿಂದ ನೀರು ಸೇದಿ ಪಕ್ಕದಲ್ಲೇ ಇದ್ದ ಬಚ್ಚಲು ಮನೆಯಲ್ಲಿ ಸ್ನಾನ ಮುಗಿಸಿಕೊಂಡೆ, ಅದೆಷ್ಟು ದಿನವಾಗಿತ್ತೋ ಈ ದೇಹ ನೀರು ನೋಡದೆ ಸ್ನಾನ ಕರ್ಮಾದಿಗಳನ್ನು ಮುಗಿಸಿ ಮತ್ತೆ ಹಜಾರಾಕ್ಕೆ ಬಂದೆ ಅಷ್ಟರಲ್ಲಿ ಒಂದಷ್ಟು ಹುಡುಗರು ಹಜಾರದಲ್ಲಿ ಸಾಲಾಗಿ ಕುಳಿತ್ತಿದ್ದರು ಎಲ್ಲಾರೂ ಬಿಳಿ ಕಚ್ಚೆ ಬಿಳಿ ಶರಟು ಧರಿಸಿದ್ದರು ಅನಂತ ಅವರ ಸಾಲಿನಲ್ಲಿ ನನ್ನನ್ನು ಕುಳಿತುಕೊಳ್ಳುವಂತೆ ಸನ್ನೆ ಮಾಡಿದ ಎಲ್ಲರಿಗೂ ಉಪ್ಪಿಟ್ಟು ಪಾನಕ  ನೀಡಲಾಯಿತು. ಉಪಹಾರ ಮುಗಿಸಿದ ಮೇಲೆ ಅನಂತ ನನ್ನನು ಮೇಲಿನ ಮಹಡಿಗೆ ಕರೆದುಕೊಂಡು ಹೋದ ಅಲ್ಲಿ ಕಾವಿ ತೊಟ್ಟು ಯಾವುದೊ ಪುಸ್ತಕ ಓದುವುದರಲ್ಲಿ ಮಗ್ನರಾಗಿದ್ದ ಹಿರಿಯರು ಕಾಣಸಿಕ್ಕರು ನನ್ನನು ಕಂಡವರೇ ಅವರ ಬಳಿ ಕರೆದು ಮಾತನಾಡಿಸಿದರು. ತಿಂಡಿ ತಿಂದು ಶಕ್ತಿ ಬಂದಿತ್ತು ನಾನು ನನ್ನ ವೃತ್ತಾಂತವನ್ನೆಲ್ಲ ಅವರ ಬಳಿ ಹೇಳಿದೆ ತಾನು ಎಲ್ಲ ತೊರೆದು ಬಂದುದಾಗಿಯೂ ಸಂಸಾರದಲ್ಲಿ ವೈರಾಗ್ಯ ಬಂದಿರುವುದಾಗಿಯೂ ತನಗೆ ಸನ್ಯಾಸ ಸ್ವೀಕರಿಸಲು ಮಾರ್ಗದರ್ಶನ ಮಾಡಬೇಕಾಗಿಯೂ ಅಳಲು ಶುರುಮಾಡಿದೆ. ಅದಕ್ಕೆ ಮುಗುಳು ನಕ್ಕ ಅವರು  ಅನಂತ ಹೇಳಿದಂತೆ ಇರು ಎಂದಷ್ಟೇ ಹೇಳಿ ಕಳುಹಿಸಿ ಕೊಟ್ಟರು.  ಆ ಹಿರಿಯರ ಹೆಸರು  ರಾಘವೇಂದ್ರ ಸ್ವಾಮಿಗಳು ಕರ್ನಾಟಕದವರೇ ಕಾಶಿ ವಿಶ್ವನಾಥನ ಸೇವೆ ಮಾಡುತ್ತ ಇಲ್ಲಿ ಉಳಿದಿದ್ದಾರೆ.ತುಂಬಾ ವರ್ಷಗಳಿಂದ ಇಲ್ಲಿ ಕೆಲವು ಮಕ್ಕಳಿಗೆ ಸಂಸ್ಕೃತ, ವೇದ ಅಧ್ಯಯನ ಕೂಡ ಮಾಡಿಸುತ್ತಾರೆ ಇಲ್ಲಿ ಇರುವ ಎಲ್ಲ ಕನ್ನಡಿಗರಿಗೆ ಅವರೇ ಮಾರ್ಗದರ್ಶಕರು, ಗುರುಗಳು.  ಬಂದ ದೇಣಿಗೆಯಿಂದ ಪರೋಪಕಾರ ಮಾಡುತ್ತ ಈ ವಿಶ್ವನಾಥ ವೇದ ಶಾಲೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಇದು ದಿನ ಕಳೆದ ಹಾಗೆ ನನಗೆ ತಿಳಿದ ವಿಷಯ. ಕಲಿಯಲು ಬರುತ್ತಿದ್ದ ಮಕ್ಕಳ ಸಂಖ್ಯೆ ಏನು ಹೆಚ್ಚಿರಲಿಲ್ಲ ಅದರ ಗುರುಗಳ ಮಾರ್ಗದರ್ಶನ ಪಡೆಯಲು ಬರುವವರ ಸಂಖ್ಯೆಯೇ ಅಧಿಕ ಹಾಗೆ ಬಂದ ಕಾಣಿಕೆಯಿಂದ ಶಾಲೆ ಸಾಗುತ್ತಿತ್ತು. ಬಂದವರಿಗೆ ಉಪಚಾರ ಮಾಡುವುದು, ಗುರುಗಳ ಸೇವೆ, ಮಕ್ಕಳ  ಭೋಜನದ ವ್ಯವಸ್ಥೆ  ಇದರಲ್ಲೇ ನನ್ನ ದಿನ ಕಳೆಯುತ್ತಿತ್ತು. ಅನಂತ ಹೆಚ್ಚಿಗೆ ಮಾತನಾಡುವವನಲ್ಲ ಯಾವೊದೋ ಅಧ್ಯಯನದಲ್ಲಿ ತೊಡಗಿರುತ್ತಿದ್ದ ಇಲ್ಲವೇ ಧ್ಯಾನ. ನನಗೆ ಇವುಗಳಲ್ಲಿ ಮನಸ್ಸು ಸೇರುತ್ತಿರಲಿಲ್ಲ.ದಿನ  ಕಳೆದ ಹಾಗೆ ಇದು ನನಗೆ ಏಕತಾನತೆ ತರತೊಡಗಿತ್ತು ಇಷ್ಟು ಹೊತ್ತಿಗೆ ಆಗಲೇ ವಾರಾಣಸಿಯ ಗಲ್ಲಿಯ ಪರಿಚಯ ಮಾಡಿಕೊಂಡಿದ್ದೆ ಜನಗಳ ಒಳ, ಹೊರ  ವೇಷ, ಬಣ್ಣಗಳ ಪರಿಚಯ ಸಹ. ಮನೆ ಬಿಟ್ಟು ಸುಮಾರು ಒಂದು ತಿಂಗಳು ಹತ್ತಿರ ಆಗಿತ್ತು ಈ ಸ್ಥಳ ಸೇರಿ ನಾಲ್ಕು ವಾರಗಳಷ್ಟು  ಆಗಲೇ ಮನೆಯ ಯೋಚನೆ ಬರ ಹತ್ತಿತ್ತು, ತಾಯಿಯ, ತಂದೆಯ, ಇವಳೂ ಸಹ ನೆನಪಾಗ ತೊಡಗಿದಳು ಮೊದಲು ಇದ್ದಷ್ಟು ಸಿಟ್ಟು ಈಗ ಅವಳ ಮೇಲೆ ಬರುತ್ತಿರಲಿಲ್ಲ ಅವಳ ಸಾಮಿಪ್ಯಾದ ನೆನಪು ಸಹ,ಹೀಗೆ ಈ ಸಿಹಿ, ಕಹಿಗಳ ನೆನಪುಗಳ ಗೊಜಲು ಹಿಂಡಲು ಶುರುಮಾಡಿದಾಗ ಸೀದಾ ಸ್ವಾಮೀಜಿಯ ಬಳಿ  ಹೋದೆ ಅಂದು ಮಧ್ಯಾಹ್ನ ಜನ ಇರಲಿಲ್ಲ  ನೆರವಾಗಿ ಅವರ ಬಳಿ ಸಾರಿದೆ ಅವರ ಮುಖದಲ್ಲಿ ಮಂದಹಾಸ ಎಂದಿನಂತೆ, "ನಿಮ್ಮಂತೆ ನಾನು ಖಾವಿ ತೊಡುತ್ತೇನೆ ನನಗೆ ಸನ್ಯಾಸ ದೀಕ್ಷೆ ನೀಡಿ" ಎಂದೆ ಅವರು ಇನ್ನಷ್ಟು ಮಂದಹಾಸ ಬೀರಿದರು ಈ ಆತುರಕ್ಕೆ ಕಾರಣ ಕೇಳಿದರು ನಾನು ಮನೆಯ ನೆನಪನ್ನು ತ್ಯಜಿಸಲು ಎಂದೆ. ಖಾವಿಯ ತೊಡುವ ಉದ್ದೇಶ ಕೇಳಿದರು ತಿಳಿಯದೆ ಸುಮ್ಮನಾದೆ. ವೈರಾಗ್ಯ ವಲ್ಲವೇ? ಹೇಳಲು ನಾಲಗೆ ಹೊರಡಲಿಲ್ಲ.ಅವರು ಮುಗುಳುನಗುತ್ತಾ ಒಳ ಹೋಗಿ ಒಂದು ಖಾವಿ ವಸ್ತ್ರ ತಂದು ನನ್ನ ಮುಂದಿಟ್ಟರು. ಇದು ಕೇವಲ ಕೇಸರಿ ಬಣ್ಣದ ವಸ್ತ್ರ ಈ ವಸ್ತ್ರ ಕ್ಕೆ ಅಸ್ತಿತ್ವ ಬರುವುದು ನಿನ್ನಿಂದ ಮತ್ತು ಈ ವಸ್ತ್ರದಿಂದ ನಿನಗೆ ಅಸ್ತಿತ್ವವಲ್ಲ ಹಾಗಿದ್ದರೆ ಹೊರಗೆ ಕೇಸರಿ ಹೊದ್ದಿರುವ ಸಾವಿರಾರು ಜನರು ಮಹಾತ್ಮಾರಾಗುತ್ತಿದರು. ಇದನ್ನು ತೊಡಲು ಒಂದು ಅಸ್ತಿತ್ವ ಬೇಕು ಮತ್ತು ಈ ಖಾವಿಯನ್ನು ಉಳಿಸಲು ಗಟ್ಟಿತನ ಬೇಕು ಆ ಗಟ್ಟಿತನ ನಿನಗಿದೆ ಎಂದಾಗ  ನೀನು ಇಲ್ಲಿಗೆ ಬಾ  ಎಂದು ಮುಗುಳು ನಕ್ಕರು. ನಾನು ಹೊರ  ಬಂದೆ ಕೇವಲ ಬಂಧನದಿಂದ ದೂರ ಓಡಿ ಹೋದ ತಕ್ಷಣ ಬಂಧಮುಕ್ತನಾಗುವೆ ಅನ್ನಿಸಲಿಲ್ಲ. ಮತ್ತೆರಡು ದಿನ ಹೀಗೆ ಒದ್ದಾಟ ಮಾಡುತ್ತಿದ್ದೆ. ಒಂದು ದಿನ ಹೀಗೆ ಬಾವಿ ಕಟ್ಟೆಯಿಂದ ನೀರು ಸೇದುತಿದ್ದೆ ದೂರದಿಂದ ಹೆಣ್ಣಿನ ಆಕೃತಿಯೊಂದು ಹತ್ತಿರ ಬರುತ್ತಿತು ಆ ಆಕೃತಿನೋಡಿದಾಗ ನನ್ನಾಕೆಯ ನೆನಪು ಬಂದಿತು ಅಯ್ಯೋ ನನನ್ನು ಹುಡುಕಿ ಬಂದು ಬಿಟ್ಟಿದ್ದಾಳೆ ಎಂದು ಹೃದಯ ಬಡಿಯತೊಡಗಿತ್ತು ಆದರೆ ಹತ್ತಿರ ಬಂದಾಗ ಅದ್ಯಾರೋ ಬೇರೆ "ಗುರುಗಳು ಇದ್ದರೆಯೇ?" ಎಂದು ಕೇಳಿ ಒಳ ನಡೆದು ಬಿಟ್ಟಳು. ಅವಳು ಅಲ್ಲಿ ಇದ್ದಷ್ಟು ಹೊತ್ತು ನನ್ನ ಹೃದಯ ಬಡಿತದ ವೇಗದ ಮಿತಿ ನನಗೆ ಸಿಗದಷ್ಟಿತ್ತು. ಮುಂದಿನ ದಿನಗಳಲ್ಲಿ ಹೀಗೆ ಆಯಿತು ಬಂದವರಲ್ಲಿ ತಂದೆಯ, ತಾಯಿಯ, ಇವಳ  ಪಡಿಯಚ್ಚು. ರಾತ್ರಿ ಇಡೀ ಕನವರಿಕೆ  ನಿದ್ದೆ ಇಲ್ಲ. ಒಂದು ದಿನ ರಾತ್ರಿಯ ನಿದ್ದೆಯಲ್ಲಿ ಮನೆಯವರು ಕೂಗಿ ಕರೆದಂತಾಗಿ ಎಚ್ಚರಗೊಂಡೆ ಇನ್ನು ಸಾಧ್ಯವಿಲ್ಲ ಮನೆಯವರನ್ನು ಕಾಣಬೇಕು. ಹೇಗೆ? ರಾತ್ರಿಯ ಹನ್ನೆರಡು ಗಂಟೆ. ಇಲ್ಲಿಂದ ಓಡಿ ಹೋಗಲೇ? ಓಡಿ ಹೋಗಲು ಬಂಧಿಸಿಟ್ಟಿರುವವರು ಯಾರು? ಹೋಗುವುದ್ದದರೂ ಹೇಗೆ? ಅಲ್ಲಿ ಹೋಗಿ ಎಲ್ಲರ ಹೇಗೆ ಎದುರಿಸಲಿ? ಹೇಗಾದರೂ ಎದುರಿಸುವೆ ಮೊದಲು ನನಗೆ ನನ್ನ ಮನೆಯವರನ್ನು ನೋಡ ಬೇಕೇನಿಸಿತು. ಹೇಗೆ? ಯೋಚನೆಯಲ್ಲಿ ಮೈ  ಬೆವತಿತು  ದಾಹ ಕಾಡಿತು ನೀರು ಕುಡಿಯಲು ಬಂದಾಗ ಮೇಲಿನ ಮಹಡಿಯಲ್ಲಿ ಬೆಳಕು ಕಂಡಿತು ಮೆಟ್ಟಲು ಹತ್ತಿ ಮೇಲೆ ಹೋದೆ ಗುರುಗಳು ನಿದ್ದೆ ಮಾಡಿಲ್ಲ ಏನೋ ಓದುತ್ತಾ ಇದ್ದಾರೆ ನನ್ನ ಹೆಜ್ಜೆಯ ಸಪ್ಪಳ ಕೇಳಿ ತಲೆ ಎತ್ತಿ ಮೇಲೆ ನೋಡಿದರು ಅದೇ ಮಂದಹಾಸ ಮುಖದಲ್ಲಿ. ಹತ್ತಿರ ಬಾ ಎಂಬಂತೆ ಕಣ್ಣ ಸನ್ನೆ ಅವರ ಬಳಿ ಸರಿದೆ ಹತ್ತಿರ ಕುಳ್ಳಿರಿಸಿದರು. ನಿನಗೆ ಬೇಕಾಗಿರುವುದು ನನ್ನ ಹತ್ತಿರ ಇದೆ ಎಂದು ಮೇಜಿನ ಮೇಲಿಟ್ಟಿದ್ದ ಖಾವಿಯ ಕಡೆಗೆ ತಿರುಗಿದರು ಆ ಖಾವಿಯ ನೋಡಿದ ತಕ್ಷಣ ನನಗೆ ಇರಿಸು ಮುರಿಸಾಯಿತು ಆ ಖಾವಿಯ ಕೈಯಲ್ಲಿ ಹಿಡಿದು ಅದನ್ನು ಜೋಪಾನವಾಗಿ ಪಕ್ಕಕ್ಕೆ ಇಟ್ಟು ಖಾವಿಯ ಕೆಳಗಿದ್ದ  ಪುಸ್ತಕದ ಒಳಗಿಂದ ಒಂದಷ್ಟು ಬಿಡಿ ನೋಟು ತೆಗೆದು ನನ್ನ ಕೈಗಿಟ್ಟರು. ಭೋಜನ ಶಾಲೆಯಿಂದ ಸ್ವಲ್ಪ ಮೊಸರು ಅನ್ನ ಕಟ್ಟಿಕೊ ಊರಿನ ದಾರಿಗೆ ಶುಭವಾಗಲಿ ಎಂದರು.

ನನ್ನ  ಮಸ್ತಕದಲ್ಲಿ ಮೂಡಿಬಂದದ್ದನ್ನು ಲೇಖನಿಯಲ್ಲಿ ನಿಮ್ಮ ಮುಂದೆ ತಂದಿದ್ದೇನೆ ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

Category:Stories



ProfileImg

Written by Vandana Amin

KANNADA KANASU MANASU

0 Followers

0 Following