ಸಮಾನ ಆಶಯವಿರುವ ಕನ್ನಡ ಖಂಡ ಕಾವ್ಯ ಉತ್ತರಾದೇವಿ ಮತ್ತು ಹೊನ್ನಮ್ಮ ಜೇವು ತುಳು ಪಾಡ್ದನ
ಉತ್ತರಾದೇವಿ ಬಹಳ ಜನಜನಿತವಾದ ಕಥಾನಕ. ಇದು ಅನೇಕ ಪಾಠಾಂತರಗಳನ್ನು ಹೊಂದಿದೆ. ಒಂದು ಪಾಠದ ಪ್ರಕಾರ ಉತ್ತರದೇವಿ ನೀರು ತರಲು ಕಟ್ಟೆ ನೀರಿಗೆ ಹೋಗುತ್ತಾಳೆ. ಅಲ್ಲಿ ಮುತ್ತೂರಿಂದ ಎಪ್ಪತ್ತು ಗಿಳಿ ಬಂದು ಕಾಲಾಡಿಸಿ ನೀರು ಕಲಕಿ ಹೋಗುತ್ತದೆ. ಅದು ತಿಳಿಯಾಗುವ ತನಕ ಕಾದಿದ್ದು, ನೀರು ಎತ್ತಿಕೊಂಡು ಬರುವಾಗ ತೆಂಗಿನ ತೋಪಿನ ದಾರಿಯಲ್ಲಿ ತೆಂಗಿನ ಕಾಯಿ ಬಿದ್ದು ಕೊಡ ಒಡೆದು ಹೋಗುತ್ತದೆ. ನಂತರ ತಲೆ ಬಾಚಿಕೊಂಡು ಮಡಿವಾಳನ ಮನೆಗೆ ಹೋಗಿ ಹೊಸ ಮಡಿಕೆ ತಂದು ಬರುವಾಗ ಬಸವ ಅಡ್ಡ ಬಂದು ರಕ್ಷಣೆಗಾಗಿ ಬಸಲೆ ಮುಳ್ಳೊಳಗೆ ಅಡಗಿಕೊಳ್ಳುತ್ತಾಳೆ. ಇದರಿಂದಾಗಿ ಮನೆಗೆ ಬರುವಾಗ ತಡವಾಗುತ್ತದೆ. ತಡವಾಗಿ ಬಂದದ್ದಕ್ಕೆ ಅತ್ತೆ ಶೀಲವನ್ನು ಶಂಕಿಸಿ ಕೊಂಕು ನುಡಿಯುತ್ತಾಳೆ. ಅದೇ ವಾಗ್ಯುದ್ಧವಾಗಿ ಉತ್ತರೆ ಮನೆ ಬಿಟ್ಟು ತವರಿಗೆ ಹೋಗುತ್ತಾಳೆ. ಅಲ್ಲಿ ತಂದೆ ಮಲತಾಯಿಯೊಂದಿಗೆ ಇರುತ್ತಾನೆ. ಹೆಂಡತಿಯನ್ನು ಓಡಿಸಿದಾತ ಮಗಳಿಗೆ ಬಾಗಿಲು ತೆರೆಯುವುದಿಲ್ಲ. ದೊಡ್ಡಪ್ಪ-ದೊಡ್ಡಮ್ಮನೂ ಅವಳಿಗೆ ಆಶ್ರಯ ಕೊಡುವುದಿಲ್ಲ. ಕೊನೆಗೆ ಅವಳ ತಾಯಿಯ ತವರಿಗೆ ಹೋಗುತ್ತಾಳೆ. ಅಲ್ಲಿ ಹಂಗಿನ ಅನ್ನ ಉಣ್ಣುವ ಅವಳ ತಾಯಿ ನೀನು ಉತ್ತರೆಯ ಮಳೆಯಾಗಿ ಹೋಗವ್ವ ಎಂದು ಹೇಳುತ್ತಾಳೆ. ಇಲ್ಲಿ ಉತ್ತರೆ ನದಿಗೆ ಬಿದ್ದು ದುರಂತವನ್ನಪ್ಪುವ ಸೂಚನೆ ಇದೆ.
ಉತ್ತರ ಕನ್ನಡದಲ್ಲಿ ಪ್ರಚಲಿತವಿರುವ ಪಾಠಾಂತರದ ಪ್ರಕಾರ ಹೂವಿನ ಗಾಳಿ ಬೀಸಿ ಸೊಸೆಯ ಕೊಡ ಒಡೆಯುತ್ತದೆ. ಅತ್ತೆ ಆ ವಿಷಯವೆತ್ತಿದ ತಕ್ಷಣ ಕೋಪಗೊಂಡು ಅವಳು ಮನೆಯೊಳಗೆ ಸರಿಯುತ್ತಾಳೆ. ಅವಳ ಗಂಡ ದಂಡಿನಲ್ಲಿ ಹೋಗಿರುತ್ತಾನೆ. ಉತ್ತರದೇವಿ ಅತ್ತೆಯೊಡನೆ ಮುನಿಸಿಕೊಂಡು ದುಂಡುಮಲ್ಲಿಗೆ ಮುಡಿದು ತವರಿಗೆ ಹೋಗಲು ಸಿದ್ಧಳಾಗಿ ಸುತ್ತುಮುತ್ತಲಿನ ಮಂದಿಗೆ ತಿಳಿಸಿದ್ದಾಳೆ. ದಂಡಿಗೆ ಹೋದ ಗಂಡ ಹಿಂತಿರುಗಿದ ನಂತರ ಹೋದರಾಯಿತೆಂದು ನೆರೆಹೊರೆಯುವರು ಬುದ್ಧಿ ಹೇಳುತ್ತಾರೆ. ಅವಳು ಯಾವ ಬುದ್ಧಿ ಮಾತಿಗೂ ಮನ್ನಣೆ ನೀಡದೆ ತವರಿನ ದಾರಿ ಹಿಡಿಯುತ್ತಾಳೆ. ಬೇರೊಬ್ಬನ ತೋಳ್ತೆಕ್ಕೆಯಲ್ಲಿ ಮಲಗುತ್ತಾಳೆ. ದಂಡಿನಿಂದ ಹಿಂದಿರುಗಿದ ಗಂಡ ತನ್ನ ಮಡದಿಯ ಬಗ್ಗೆ ವಿಚಾರಿಸಿದಾಗ ಮಡಿವಾಳನ ಮನೆಗೆ ಹೋದವಳು ಬರಲಿಲ್ಲ ಎಂದು ಕಟಕಿಯಾಡುತ್ತಾಳೆ ತಾಯಿ. ಮಡಿವಾಳನ ಮನೆಗೆ ಹೋದರೆ ಅಲ್ಲೂ ಉತ್ತರೆ ಇರುವುದಿಲ್ಲ. ಕೊನೆಗೆ ಮಾವನ ಮನೆಗೆ ಹೋಗುತ್ತಾನೆ. ಮತ್ತೊಬ್ಬನ ತೋಳ ಮೇಲೊರಗಿದ್ದ ಉತ್ತರೆದೇವಿಯನ್ನು ನೋಡಿ ತಬ್ಬಿಬ್ಬಾಗುತ್ತಾನೆ. ಅವಳಿಗೆ ಚಿನ್ನದ ಆಸೆ ತೋರಿಸುತ್ತಾನೆ. ಅವಳು ಚಿನ್ನವ ತಂದಾರೇ, ಶೂಲೆಗೆ ಕಟ್ಟಿ ಬಾರೋ ನಾನಲ್ಲೋ ನಿನ್ನ ಮಡದಿ ಎನ್ನುತ್ತಾಳೆ. ಕೈ ಹಾಕಿ ರೆಟ್ಟೆ ಹಿಡಿದು ಕರೆದೊಯ್ಯಲೂ ಆಗುವುದಿಲ್ಲ. ಆಗ ಅತ್ತೆ ಮಾವ ಮೂರ್ಹಾದಿ ಕೂಡವಲ್ಲೇ ಶಿಗುದ್ಹೋಗ ಎಂದು ಹೇಳಿಕೊಟ್ಟಂತೆ ಅವನು ಉತ್ತರದೇವಿಯನ್ನು ಮೂರು ಹಾದಿ ಕೂಡುವಲ್ಲಿ ಅವಳನ್ನು ಸಿಗಿದು, ಕರುಳು ಬಗೆದು ಬಚ್ಚಲ ಕಲ್ಲಡಿಗೆ ಹಾಕಿ ಹುಗಿಯುತ್ತಾನೆ.
ಇಂಥಹದ್ದೇ ಅಮಾನುಷ ಕಥಾನಕವಿರುವ ಪಾಡ್ದನ ಹೊನ್ನಮ್ಮಜೇವು. ಹೊನ್ನಮ್ಮಜೇವಿನ ಗಂಡ ಮಾಲಿಂಗ ಸೆಟ್ಟಿ ಮದುವೆಯಾದ ಮರುದಿನವೇ ದಂಡಿಗೆ ಹೋಗಬೇಕಾಗಿ ಬರುತ್ತದೆ. ಆಗ ಅವನು ತನ್ನ ಮಡದಿಯನ್ನು ಕಲ್ಲಿನ ಕೋಣೆಯೊಳಗೆ ಬಂಧಿಸಿ ಬೀಗ ಹಾಕಿ ಹೋಗುತ್ತಾನೆ. ಮಾಲಿಂಗಸೆಟ್ಟಿ ದಂಡಿಗೆ ಹೋದ ವಿಚಾರ ತಿಳಿದ ಪುತ್ತೂರಿನ ಜಾಗಣಂತೋಡೆಯ ಹೊನ್ನಮ್ಮಜೇವನ್ನು ಪಡೆಯಲು ಉಪಾಯ ಹೂಡುತ್ತಾನೆ. ಮಡಿವಾಳ್ತಿ ಅಬ್ಬಕ್ಕನಿಗೆ ಹೊನ್ನಮ್ಮಜೇವನ್ನು ಕರೆತಂದರೆ ಕಳಸ ತುಂಬ ದುಡ್ಡನ್ನು ಕೊಡುತ್ತೇನೆ ಎಂದು ಆಮಿಷ ಒಡ್ಡುತ್ತಾನೆ. ಅಂತೆಯೇ ಆಮಿಷಕ್ಕೊಳಗಾದ ಮಡಿವಾಳ್ತಿ ಅಬ್ಬಕ್ಕ ಮಾಲಿಂಗಸೆಟ್ಟಿಯ ತಾಯಿಯ ಮನವೊಲಿಸಿ ಹೊನ್ನಮ್ಮಜೇವು ಇರುವ ಕೋಣೆಯ ಬೀಗ ತೆಗೆಸಿ ಅವಳೊಡನೆ ಮಾತನಾಡುತ್ತಾಳೆ. ಜಾಗಣಂತೋಡೆಯನ ಅಂಗಳದಲ್ಲಿ ನಡೆಯುವ ಗುಬ್ಬಿಯಾಟ, ದೊಂಬರಾಟಗಳ ಬಗ್ಗೆ ಹೇಳುತ್ತಾಳೆ. ಅವನು ಕಟ್ಟಿಸಿದ ಕೋಟೆಯನ್ನು ನೋಡಿ ಬರೋಣ ಎನ್ನುತ್ತಾಳೆ. ಕೋಣೆಯಲ್ಲಿನ ಏಕಾಂತವಾಸಕ್ಕೆ ನೊಂದೋ ಅಥವಾ ಸ್ವಭಾವತಃ ಚಂಚಲಸ್ವಭಾವದವಳಾದ ಹೊನ್ನಮ್ಮಜೇವು ಇದೇ ರಾತ್ರಿ ಹೋಗಿ ಇದೇ ರಾತ್ರಿಯೇ ಬರುತ್ತೇವೆ ಎಂದು ಅತ್ತೆಯಲ್ಲಿ ಹೇಳಿ ಮಡಿವಾಳ್ತಿ ಅಬ್ಬಕ್ಕನೊಡನೆ ಹೋಗುತ್ತಾಳೆ. ಅಬ್ಬಕ್ಕನಿಂದ ವಂಚನೆಗೊಳಗಾಗಿ ಜಾಗಣಂತೋಡೆಯನ ಉಪ್ಪರಿಗೆಗೆ ಸೇರುತ್ತಾಳೆ. ಅಲ್ಲಿಂದ ನಂತರ ಅವಳಿಗೆ ಹೊರಬರಲು ಆಗಲಿಲ್ಲವೋ ಅಥವಾ ಅವಳು ಕ್ರೂರವಾಗಿ ನಡೆಸಿಕೊಂಡು ಕಲ್ಲಿನ ಕೋಣೆಯಲ್ಲಿ ಬಂಧಿಸಿದ ಗಂಡ ಮಾಲಿಂಗಸೆಟ್ಟಿಗಿಂತ ಬೇಕುಬೇಕಾದ್ದನ್ನು ಕೊಡಿಸುವ ಜಾಗಣಂತೋಡೆಯನೇ ವಾಸಿ ಎನ್ನಿಸಿತೋ ಏನೋ? ಪಾಡ್ದನದಲ್ಲಿ ಅವಳ ಭಾವನೆಗಳ ಬಗ್ಗೆ ತಿಳಿಯುವುದಿಲ್ಲ. ಆದರೆ ಗಂಡನನ್ನು ಮರೆತು ಅಲ್ಲಿ ಸುಖವನ್ನು ಕಂಡುಕೊಂಡಿದ್ದಳು ಎಂಬುದು ಅವಳು ಬಳೆ ಹಾಕಲು ಆಸೆ ಪಟ್ಟುದುದರಲ್ಲಿ ತಿಳಿಯುತ್ತದೆ. ಜಾಗಣಂತೋಡೆಯನ ಉಪ್ಪರಿಗೆಯಲ್ಲಿ ಬಲಾತ್ಕಾರವಾಗಿ ಇರಿಸಲ್ಪಟ್ಟಿದ್ದರೆ, ಅಲ್ಲಿರುವುದು ಅವಳಿಗೆ ಒಲ್ಲದ ವಿಚಾರವಾಗಿರುತ್ತಿದ್ದರೆ ಅವಳು ಬಳೆ ತೊಡಲು ಖಂಡಿತಾ ಆಶಿಸುತ್ತಿರಲಿಲ್ಲ. ಆದರೆ ದಂಡಿನಿಂದ ಬಂದ ಮಾಲಿಂಗಸೆಟ್ಟಿ ವಿಷಯ ತಿಳಿದು ಬಳೆಗಾರನ ವೇಷದಲ್ಲಿ ಜಾಗಣಂತೋಡೆಯನ ಬೀಡಿಗೆ ಹೋಗಿ ಬಳೆ ತೊಡಲು ಆಶಿಸಿದ ಹೊನ್ನಮ್ಮಜೇವಿನ ಕೈಹಿಡಿಕೊಂಡು ಬಂದ ಜಾಗಣಂತೋಡೆಯನನ್ನು ಕೊಂದು ಹೊನ್ನಮ್ಮಜೇವನ್ನು ಎಳೆತಂದು ಮೂರು ದಾರಿ ಕೂಡುವಲ್ಲಿ ಸಿಗಿದು ಮೂರು ತುಂಡು ಮಾಡುತ್ತಾನೆ.
ಈ ಎರಡೂ ಕಥಾನಕಗಳು ಮೂಲ ಆಶಯ ಒಂದೇ ಆಗಿದೆ. ದಾರಿ ತಪ್ಪಿದ ಹೆಂಡತಿಯನ್ನು ತುಂಡು ಮಾಡಿ ಸಾಯಿಸುವ ಗಂಡಿನ ಕ್ರೌರ್ಯ ಇಲ್ಲಿ ಕಾಣಿಸುತ್ತದೆ. ಎರಡೂ ಕಥೆಗಳಲ್ಲಿ ಹೆಣ್ಣನ್ನು ದಾರಿತಪ್ಪಿಸುವಲ್ಲಿ ಮಡಿವಾಳ/ಮಡಿವಾಳ್ತಿಯ ಪಾತ್ರ ಮುಖ್ಯವಾಗುತ್ತದೆ.
ಉತ್ತರಾ ದೇವಿಯ ಜನಪದ ಹಾಡಿನ ಒಂದು ಪಾಠ ಇಲ್ಲಿದೆ
ಡಾ.ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕರು ಸರ್ಕಾರಿ ಪದವಿ ಪೂರ್ವ ಕಾಲೇಜು ಬೆಂಗಳೂರು