ಲಡತೆ ಲಡತೆ ಲಡಾಖ್ ತನಕ

ProfileImg
09 Oct '23
5 min read


image

ಎಲ್ಲರಿಗೂ ಅವರದ್ದೇ ಆದ ಕನಸಿನ ತಾಣ ಅಂತ ಇದ್ದೇ ಇರುತ್ತೆ. ಯಾವತ್ತಾದ್ರೂ ನಾವಲ್ಲಿ ಹೊಗೇ ಹೊಗ್ತಿ ಅಂತ ಶಪತಃ ಸಹ ಮಾಡಿರುತ್ತಾರೆ. ನಾನು ಸಹ ನನ್ನ ಕಾಲೇಜಿನ ದಿನಗಳಲ್ಲಿ ಕಂಡ ಕನಸದು. ಜೀವನದಲ್ಲಿ ಒಮ್ಮೆಯಾದ್ರು ಅಲ್ಲಿ ಹೋಗ್ಲೇ ಬೇಕು, ಆ ಪ್ರಕೃತಿ ಸೌಂದರ್ಯವನ್ನು ಈ ಜನುಮಕ್ಕೆ ಆಗುವಷ್ಟು ಕಣ್ತುಂಬಿಕೊಳ್ಳಬೇಕು ಎನ್ನುವ ಬಯಕೆ. ದಿನಗಳು ಉರುಳಿ ವರ್ಷವಾದರೂ ಆಸೆ ಮಾತ್ರ ಕಡಿಮೆಯಾಗಲಿಲ್ಲ. ಕೊನೆಗೆ ಮದುವೆನೂ ಆಯ್ತು. ಯಾವಾಗಪ್ಪ ನಾನು ಹೋಗೊದು ಅನ್ಕೊನಂತಿದ್ದೆ. 

ನಾನೊಂದಿನ ನಮ್ಮ ಅಮ್ಮನ ಮನೆಯಲ್ಲಿ ಇದ್ದಾಗ, ಆಚೆನಾಡಿದ್ದು ‘ಲಡಾಖ್’ ಹೊಗೋದಿದೆ, ನೀನು ಇವತ್ತೆ ಶಾಂಪಿ0ಗ್ ಮಾಡಿಕೊಂಡು ಬಾ ಅಂತ ನನ್ನ ಪತಿದೇವ್ರು ಹೇಳಿದ್ರು. ನನಗೋ ಅದು ಕನಸೋ, ನನಸೋ ಒಂದು ತಿಳಿಯಲಿಲ್ಲ. ಹೇಗ್ ಹೋಗೋದು? ಎಲ್ಲಿ ಇರೋದು? ಯಾವದು ಪ್ಲಾನ್ ಆಗಿಲ್ಲ ನಾನ್ ಬರಲ್ಲ ನೀವೇ ಹೋಗಿ ಅಂತ ಜಗಳಾನೇ ಶುರು ಮಾಡಿದೆ. ಸಮಾಧಾನ ನನಗೂ ಗೊತ್ತಿಲ್ಲ ಆದರೆ ನಾವು ಹೋಗುತ್ತಿರುವುದು ಪಕ್ಕಾ. ಫ್ಲೈಟ್  ಟ್ರೈ ಮಾಡಿದೆ ಆದರೆ ಸಿಗಲಿಲ್ಲ. ತತ್ಕಾಲ್‌ನಲ್ಲಿ  ಟ್ರೈನ್ ಟಿಕೆಟ್ ಬುಕ್‌ಮಾಡ್ತಿನಿ. ನೀನು ತಯಾರಾಗಿರು ಅಂದ್ರು. ಎದ್ನೋ ಬಿದ್ನೋ ಅಂತ ಅಮ್ಮನ ಜೊತೆ ಮಾರ್ಕೆಟ್‌ಗೆ ಹೋಗಿ ಶಾಪಿಂಗ್ ಮುಗಸಿಕೊಂಡೆ. ನಮ್ಮೂರು ಬಿಜಾಪುರ ಅಲ್ಲಿಂದಲೇ ಈ ಲೇಹ್-ಲಡಾಖ್ ಜರ್ನಿ ಶುರುವಾಗಿತ್ತು.

ಬಿಜಾಪುರಿಂದ ಸುಮಾರು 34 ತಾಸಿನ  ಟ್ರೈನ್ ಜರ್ನಿಯ ಮೂಲಕ ದೆಹಲಿ ತಲುಪಿದೆವು. ದೆಹಲಿಯ ಹೊಟೇಲ್ ಒಂದರಲ್ಲಿ ರೂಮ್ ಪಡೆದು ತಯಾರಾಗಿ ಅಲ್ಲಿಂದ ಮಥುರಾದತ್ತ ಪ್ರಯಾಣ ಬೆಳಸಿದೆವು. ಮಥುರಾ ಹಾಗೂ ಬೃಂಧಾವನ ನೋಡುತ್ತಾ ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ರಾತ್ರಿ ೧೦ ಗಂಟೆಗೆ ಮಥುರಾದಿಂದ ದೆಹಲಿಗೆ ಕೊನೆಯ ಟ್ರೈನ್. ಬೆಳಗ್ಗೆ9.40 ಗಂಟೆಗೆ ದೆಹಲಿಯಿಂದ ಲೇಗೆ ನಮ್ಮ ಫ್ಲೈಟ್ ಇತ್ತು, ಹಾಗಾಗಿ ಯಾವುದೆ ಕಾರಣಕ್ಕೂ ಆ ಟ್ರೈನ್ ನಾವು ಮಿಸ್ ಮಾಡಿಕೊಳ್ಳಲೇಬಾರದಾಗಿತ್ತು. ಓಡಿ ಬಂದು ಸ್ಟೇಷನ್ನಿನಲ್ಲಿ ಟಿಕೆಟ್ ಏನೋ ತೆಗೆದುಕೊಂಡೆವು ಆದ್ರೆ ನಿಂತಿರುವ 3 ಟ್ರೈನ್ಗಳಲ್ಲಿ ದೆಹಲಿಗೆ ಯಾವುದು ಹೋಗುವುದು ಅಂತ ತಿಳಿದುಕೊಳ್ಳುವುದಕ್ಕೆ ನಮ್ಮ ಬಳಿ ಇದ್ದ ಸಮಯ  4 ನಿಮಿಷ ಮಾತ್ರ. 

ಯಾವಕಡೆ ಹೋಗೊದು ಏನು ಮಾಡೋದು ಅಂತ ಒಂದು ಗೋತ್ತಾಗಲೇ ಇಲ್ಲ. ಆಗಿದ್ದಾಗಲಿ ಗೋಧಿರಾಶಿ ಅಂತ ಆ ಕೃಷ್ಣನ ಹಸರು ತಗೊಂಡು ಮೂರನೆ ಟ್ರೈನ್ ಹತ್ತೋಣ ಅಂತ ಇಬ್ರೂ ಓಡಿದ್ವಿ. ಅಷ್ಟರಲ್ಲಿ ಟ್ರೈನ್ ನಿಧಾನವಾಗಿ ಚಲಿಸುತ್ತಿತ್ತು ಇನ್ನೇನು ಹತ್ತಬೇಕು ಅನ್ನುವಷ್ಟರಲ್ಲಿ ಜೋರಾಯ್ತು. ಹೇಗೋ ಮಾಡಿ ಎಸಿ ಬೋಗಿ ಸೆರಿದ್ವಿ ಅಲ್ಲಿಂದ ಹಾಗೆ ಜನರಲ್ ಬೋಗಿಗೆ ಬರುವಾಗ ಸಿಗುವವರಿಗೆಲ್ಲಾ ಕೇಳೋದೆ ಇದು ದೆಹಲಿಗೆನೇ ಹೋಗುತ್ತಲ್ಲ ಅಂತ. ಜೀವನದಲ್ಲಿ ಎರಡೇ ಬಾರಿ ಟ್ರೈನ್ನಲ್ಲಿ ಹೋದವಳು ನಾನು. ಆ ರಾತ್ರಿ ನಿಜವಾಗ್ಲೂ ಹೆದ್ರಕೊಂಡಿದ್ದೆ. ಒಂತರಾ ಹೀರೋಯಿನ್ ಭಾವನೆ ಯಾವ್ದೋ ಆಕ್ಷನ್  ಸಿನೆಮಾದಲ್ಲಿ ನಟನೆ ಮಾಡ್ತಿದ್ದೀನೇನೋ  ಅನ್ನೋ ಹಾಗೆ. ಆ ರಾತ್ರಿ ಮಾತ್ರ ಯಾವತ್ತೂ ಮರೆಯಲ್ಲ. ಹಾ... ಅಂದಹಾಗೆ ಮಥುರಾ-ಬೃಂಧಾವನ ಭೇಟಿ ಸಹ ಫ್ಲಾನ್ ಆಗಿರಲಿಲ್ಲ. ಅದು ಸಹ ದಿಡೀರನೆ ಹೋಗಿದ್ದು. 

ರಾತ್ರಿ 1 ಗಂಟೆಗೆ ಬಂದು ದೆಹಲಿ ತಲುಪಿದೆವು. ನಾವಿದ್ದ ಹೋಟೆಲ್ ನಮ್ಮ ಪತಿದೇವ್ರಿಗೆ ಇಷ್ಟ ಆಗಲಿಲ್ಲ. ಹೇಗಿದ್ರು ಬೇಳಗ್ಗೆ ಬೇಗ ಏಳಬೇಕಾಗುತ್ತದೆ ಏರ್‌ಪೋರ್ಟ್ ಸಮೀಪ ಹೋಟೆಲ್ ಮಾಡೋಣ ಅಂತಾ ಅಲ್ಲಿಂದ ಬೇರೆ ಹೋಟೆಲ್ ಗೆ ಹೋದ್ವಿ. ಅಲ್ಲಿ ತಲುಪುವಷ್ಟರಲ್ಲಿ ರಾತ್ರಿ 2.45 ಗಂಟೆ. ಬೆಳಗ್ಗೆ 7ರವರೆಗೂ ಮಲಗಿದ್ದು ರೆಡಿಯಾಗಿ ಏರ್‌‌‌ಪೋರ್ಟ್‌ಗೆ  ಹೋದ್ವಿ. ಚೆಕ್‌ಇನ್ ಎಲ್ಲಾ ಮುಗಸಿ ಕಾಫಿ ಕುಡಿದು ಫ್ಲೈಟ್ ಹತ್ತಿದೆವು. ಲೇಹ್  ಎಷ್ಟು ಸಮೀಪವಾಗುತ್ತಿತ್ತೋ ಅಷ್ಟು ಜೋರಾಗಿ ನನ್ನ ಹೃದಯ ಬಡಿದುಕೊಳ್ಳುತ್ತಿತ್ತು. ದುರಾದೃಷ್ಟವಶಾತಃ ಮೋಡ ಕವಿದ ವಾತಾವರಣದಿಂದಾಗಿ ವಿಮಾನದಿಂದ ಕಾಣುವ ದೃಶ್ಯಕ್ಕೆ ಕತ್ತರಿ ಬಿದ್ದದ್ದೇನೋ ನಿಜ. ಫ್ಲೈಟ್ ಲ್ಯಾಂಡ್ ಆಯ್ತು, ಮೊದಲ ಬಾರಿ ಕನಸಿನ ತಾಣಕ್ಕೆ ಮೊದಲ ಹೆಜ್ಜೆ ಇಡುವ ಸಂಭ್ರಮ, ಅದನ್ನು ಪದಗಳಲ್ಲಿ ಹೇಳಲು ಸಾಧ್ಯವೇ ಇಲ್ಲ. ಕೇವಲ ಅನುಭವಿಸಬೇಕು ಅಷ್ಟೇ ಇವತ್ತಿಗೂ ಆ ಆನುಭವ ನನ್ನಲ್ಲಿ ಹಚ್ಚಹಸಿರಾಗಿದೆ.

ಬೆಳಗ್ಗೆ 11 ಗಂಟೆಗೆ ಲೇಹ್ ತಲುಪಿ, ಅದೇ ದಿನ ಲೇಹ್ ಸಿಟಿ ಸುತ್ತಾಡೋಣ ಎಂದು, ತಿಂಡಿ ತಿಂದು ಒಂದು ಕಡಖ್ ಚಾಯ್ ಕುಡಿದು, ಬಾಡಿಗೆ ಬೈಕ್ ಪಡೆದು, ಹಾಲ್‌ಆಫ್‌ಫ್ರೇಮ್, ಗುರುದ್ವಾರ, ಹೆಮಿಸ್ ಮೊನಾಸ್ಟರಿ, ಶಾಂತಿ ಸ್ತೂಪ, ಮ್ಯಾಗ್ನೇಟಿಕ್ ಹೀಲ್, ಅರಮನೆ, ಸಂಗಮ ತಾಣಗಳನ್ನು ಬೈಕಿನಲ್ಲೇ ಸುತ್ತಿದೇವು. ಹವಾಮಾನದ ಬದಲಾವಣೆಯಿಂದ ಹೋದಲ್ಲೇಲ್ಲ ಮಳೆರಾಯನ ಸಿಂಚನ. ಆ ರಸ್ತೆಗಳನ್ನು ನೋಡುವುದೇ ಒಂದು ಚಂದ, ಸರೋವರಗಳು-ಕಣಿವೆಗಳು, ಚಿಕ್ಕದಾಗಿ ಹರಿಯುವ ಝರಿಗಳು, ಹೇಗೆ ವರ್ಣಿಸಲಿ ಆ ಪ್ರಕೃತಿಯ ಸೌಂದರ್ಯ.

 ಎರಡು ನದಿಗಳು ಸೇರಿ ಸಂಗಮದಲ್ಲಿ ಒಟ್ಟಾಗಿ ಹರಿಯುತ್ತದೆ. ಮ್ಯಾಗ್ನೇಟಿಕ್ ಹೀಲ್‌ನಲ್ಲಿ ನ್ಯುಟ್ರಲ್ ಗೇರ್‌ನಲ್ಲಿರುವ ವಾಹನಗಳು ತಾವಾಗೇ ಮುಂದೆಹೋಗುತ್ತವೆ ಇದಕ್ಕೆ ಕಾರಣ ಅಲ್ಲಿನ ಆಯಸ್ಕಾಂತಿಯ ಶಕ್ತಿ. ಸಂಜೆ 7.30ರ ಸಮಯವಾದರೂ ಇನ್ನೂ ಕಡಖ್ ಬಿಸಿಲು ಹಾಗೇ ಇತ್ತು. ಇದೆಲ್ಲ ನೋಡಿ ಮರಳಿ ನಾವಿದ್ದ ಹೋಮ್‌ಸ್ಟೇಗೆ ಬಂದೆವು. ಹೋದ ತಕ್ಷಣವೇ ಊಟಕ್ಕೆ ಕುಳೆತೆವು. ಅವರು ಅಚ್ಚುಕಟ್ಟಾಗಿ ಕೋಣೆಯನ್ನು ಸಿಂಗರಿಸಿದ್ದರಷ್ಟೇ ಅಲ್ಲದೇ ಊಟದ ಚಿಕ್ಕ – ಚಿಕ್ಕ ಟೇಬಲ್‌ಗಳನ್ನು ಸುಂದರವಾಗಿ ಜೋಡಿಸಿದ್ದರು. ಊಟ ತುಂಬಾ ಚೆನ್ನಾಗಿ ಇತ್ತು.

ಮರುದಿನ ಬೆಳಗ್ಗೆ 10 ಗಂಟೆಗೆ ಒಂದು ಗಾಡಿಯನ್ನು ಬಾಡಿಗೆಗೆ ಬುಕ್ ಮಾಡಿ, ಜಿಲ್ಲಾಧಿಕಾರಿ ಕಚೇರಿಯಿಂದ ಅನುಮತಿ ಪತ್ರ ಪಡೆದು ಲೇಹ್ ನಿಂದ ಡಿಸ್ಕಿಟ್ ಮಠಕ್ಕೆ ಹೊರಟೆವು. ಇದು ಲಡಾಖ್‌ನ ಅತ್ಯಂತ ಹಳೆಯ ಮತ್ತು ದೊಡ್ಡದಾಗಿರುವ ಬೌದ್ಧ ಮಠ.

 ದಾರಿಯುದ್ದಕ್ಕೂ ಮಂಜುಗಡ್ಡಯಿಂದ ಕೂಡಿದ ಕಣಿವೆಗಳು. ಕಣ್ಣಿಗೆ ಅದೊಂತರ ಹಬ್ಬವೇ ಸರಿ. ಗಾಡಿ ಚಲಾಯಿಸಲು ನಿಜಕ್ಕೂ ಎರಡು ಗುಂಡಿಗೆ ಇರಬೇಕು ರೀ. ಒಂದು ಕಡೆ ಪಾತಾಳ, ಒಂದು ಕಡೆ ದೊಡ್ಡ ಬಂಡೆಗಳು ಅದರ ಮಧ್ಯ ಪುಟ್ಟದಾಗಿರುವ ದಾರಿ. ಅದರಲ್ಲೂ ನಮ್ಮ ಡ್ರೈವರ್ ಗಾಡಿ ಹೊಡಿಯುತ್ತಿರುವ ಪರಿಕಂಡು ಅಬ್ಬಾ ಸೇಫಾಗಿ ನಮ್ಮ ಮನೆಗೆನೇ ಹೋಗುತ್ತಿವಲ್ಲ ಎಂದೆನಿಸುತ್ತಿತ್ತು. 
ಅಲ್ಲಿಂದ ಖರ್ದುಂಗ್ಲಾಗೆ ಹೋಗುತ್ತಿದ್ದಂತೆ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತದೆ. ನನ್ನ ಗಂಡ ಈ ಮೊದಲು ಹೋಗಿ ಬಂದಿದ್ದರು. ಅವರಿಗೆ ಅಲ್ಲಿನ ಹವಾಮಾನದ ಪರಿಚಯ ತುಂಬಾ ಚೆನ್ನಾಗಿಯೇ ಇತ್ತು. ಹೀಗಾಗಿ ಅದಕ್ಕೆ ಬೇಕಾದ ಮಾತ್ರೆಗಳನ್ನು ತೆಗೆದುಕೊಂಡು ಬಂದಿದ್ದರು. 

ಖರ್ದುಂಗ್ಲಾ 

ಖರ್ದುಂಗ್ಲಾ ಜಗತ್ತಿನ ಎತ್ತರವಾದ

ಖರ್ದುಂಗ್ಲಾ 

ಮೊಟರೇಬಲ್ ಪಾಸ್. ಜಗತ್ತಿನ ಒಂದು ತುತ್ತತುದಿಯ ಮೇಲೆನಿಂತಾಗ ಅಗುವ ಅನುಭವ ವ್ಹಾ.. ಎಷ್ಟು ದುಡ್ಡುಕೊಟ್ಟರೂ ಸಿಗದ ಆನಂದ, ಸಂತೋಷ ಅದು. ಅಲ್ಲಿನ ಆಮ್ಲಜನಕದ ಕೊರತೆಯಿಂದ ತುಂಬಾ ಹೋತ್ತು ನಿಲ್ಲುವುದು ಕಷ್ಟಕರ ಹಾಗಾಗಿ ಅಲ್ಲಿಂದ ಬೇಗ ನುಬ್ರಾ ಕಣಿವೆಯತ್ತ ಹೊರಟೆವು. ನುಬ್ರಾ ತಲುಪುವಷ್ಟರಲ್ಲಿ ಸಂಜೆ 6 ಗಂಟೆ. ಇಲ್ಲಿ ಕಣಿವೆಗಳ ಮಧ್ಯ ಹರಿಯುವ ನುಬ್ರಾ ನದಿ, ಶಯೋಕ್ ನದಿಯನ್ನು ಸಂಧಿಸಿ ಲಡಾಕ್ ಮತ್ತು ಕಾರಕೋರಂ ಶ್ರೇಣಿಗಳನ್ನು ವಿಭಾಗಿಸುವ ದೊಡ್ಡ ಕಣಿವೆಯನ್ನು ಸೃಷ್ಟಿಸಿದೆ. ಇಲ್ಲಿ ಪ್ರವಾಸಿಗರು ಒಂಟೆ ಸವಾರಿ, ವೇಶಭೂಷಣ, ಎಟಿವಿ ರೈಡ್‌ಗಳನ್ನು ಸಹ ಮಾಡಬಹುದು. ಆ ರಾತ್ರಿ ನುಬ್ರಾನಲ್ಲೇ ಉಳಿಯಲು ತಿರ್ಮಾಣಿಸಿ, ಡ್ರೈವರ್ ಅಣ್ಣನಿಗೆ ಹೇಳಿದೆವು. ಅವರ ಗೆಳೆಯನ ಹೋಮ್‌ಸ್ಟೇಗೆ ಕರೆದುಕೊಂಡು ಹೋದರು. 

ಕತ್ತಲಾಗುತ್ತಿದ್ದಂತೆ ನನಗೆ ಜ್ವರ ಶುರುವಾಯಿತು. ನನ್ನ ಪರಿಸ್ಥಿತಿಯನ್ನು ನೋಡಿ ಮುಂದಿನ ಪ್ರಯಾಣ ಹೇಗೆ ಮಾಡುವುದು ಎಂದು ನನ್ನ ಗಂಡ ಹಾಗೂ ಡ್ರೈವರ್ ಇಬ್ಬರೂ ಚಿಂತಿಸುವಷ್ಟು ಆರೋಗ್ಯ ಕೈಕೊಟ್ಟಿತ್ತು. ಬೆಳಗ್ಗೆ ಸರಿಯಾದರೆ ಮಾತ್ರ ಮುಂದೆ ಹೋಗೋಣ ಇಲ್ಲ ಊರಿಗೆ ಹೋಗಿಬಿಡೋಣ ಅಂದ್ರು. ಇಲ್ಲಿವರೆಗೂ ಬಂದು ಅರ್ಧ ನೋಡಿಕೊಂಡು ಹೋಗಲು ಮನಸ್ಸೇ ಆಗಲಿಲ್ಲ. ಹುಷಾರಿಲ್ಲ ಅಂದ್ರೂ ಆರಾಮಾಗಿದ್ದೀನಿ ಅಂತ ನಾಟಕ ಮಾಡಲು ಶುರು ಮಾಡಿದೆ. ನಮ್ಮಿಬ್ಬರ ಮಧ್ಯ ಈ ವಿಷಯಕ್ಕಾಗಿಯೇ ಪದೇ-ಪದೇ ಜಗಳವೂ ಆಗುತ್ತಿತ್ತು. ಆದರೆ ಅಲ್ಲಿದ್ದ ತುಂಬಾ ಜನ ಹೇಳಿದ್ದು, ಈ ಪರಿಸ್ಥಿತಿಯಲ್ಲಿ ಉಮ್ಮಿಂಗ್ ಲಾ ಗೆ ಹೋಗುವುದು ನಿಜವಾಗಿಯೂ ತುಂಬಾ ಕಷ್ಟ, ಉಮ್ಮಿಂಗ್ ಲಾ ಪಾಸ್ ವಿಶ್ವದ ಅತೀ ಎತ್ತರದ ಮೋಟರೆಬಲ್ ಪಾಸ್. ಅಲ್ಲಿ ಹಿಮ ಕರಗಿ ನೀರಾಗುತ್ತಿದೆ ಯೋಚಿಸಿ ಅಂದರು.

ಬೆಳಿಗ್ಗೆ ಆದರೂ ಸುಸ್ತು, ಜ್ವರ ಹಾಗೇ ಇತ್ತು. ಆರೋಗ್ಯಕ್ಕಿಂತ ಯಾವುದು ದೊಡ್ಡದಲ್ಲ ಅಂತ ನನ್ನ ಗಂಡನ ಸುಮಾರು 1 ಗಂಟೆಯ ಭಾಷಣದ ನಂತರ, ಪ್ಯಾಂಗಾಂಗ್  ಒಂದು ನೋಡಿ ಲೇಹ್‌ಗೆ ಹೋಗೋಣ ಎಂದು, ಬೆಳಿಗ್ಗೆ 9.20ಕ್ಕೆ ಪ್ಯಾಂಗಾಂಗ್ ನತ್ತ ಹೊರಟೆವು ಸುಮಾರು 4 ಗಂಟೆಗೆ ಪ್ಯಾಂಗಾಂಗ್ 

ಪ್ಯಾಂಗಾಂಗ್

 ನೋಡಿಕೊಂಡು, ಚಾಂಗ್ಲಾ ಪಾಸ್ ಮೂಲಕ ಲೇಹ್‌ಗೆ ಬಂದು ಆ ರಾತ್ರಿ ಅಲ್ಲೇ ಇದ್ದು ಧನಿವಾರಿಕೊಂಡೆವು. 

ಇಲ್ಲಿವರೆಗೂ ಬಂದು ಮನಾಲಿ ರಸ್ತೆಗಳು, ಪಾಸ್‌ಗಳನ್ನು ನೋಡದಿದ್ದರೇ ಹೇಗೆ? ಇಲ್ಲ ವಿಮಾನ ಮೂಲಕ ಬೇಡ, ರಸ್ತೆ ಮೂಲಕ ಹೋಗೋಣ ಎಂದು ನಿರ್ಧರಿಸಿದೇವು. ಆದರೇ ರಸ್ತೆ ಮೂಲಕ ಹೋಗಬೇಕಾದರೇ ಗಾಡಿಯನ್ನು ಮೊದಲೇ ಬುಕ್ ಮಾಡಿರಬೇಕಿತ್ತು. ನಾವು ಅದುಯಾವುದನ್ನು ಮಾಡಿರಲೇ ಇಲ್ಲ. ಸರಿ ಎಂದು ನಮಗೆ ಲಡಾಕ್ ಸುತ್ತಾಡಿಸಿದ ಡ್ರೈವರ್ ಗೆ ಕೇಳಿದೇವು. ಲೇಹ ಇಂದ ಮನಾಲಿ ವರೆಗೂ ಗಾಡಿಬಾಡಿಗೆ ಕೊಡುವ ದುಡ್ಡಲ್ಲಿ ನೇರವಾಗಿ ಫ್ಲೈಟ್ ನಿಂದ ಬೆಳಗಾವಿನೇ ತಲುಪುತ್ತೇವು. ಆದರೇ ಹೋಗಲೇ ಬೇಕು ಎಂದು ತಿರ್ಮಾನಿಸಿದಾಗ ದುಡ್ಡಿನ ಬಗ್ಗೆ ಹೆಚ್ಚಾಗಿ ಯೋಚನೆ ಮಾಡಲಿಲ್ಲ. ಮರುದಿನದ ಲೇಹ್ ನಿಂದ ಮನಾಲಿವರೆಗೂ ಒಂದು ಗಾಡಿ ಬುಕ್ ಮಾಡಿಕೊಂಡು ಮನಾಲಿ ತಲುಪಿದೆವು. ಮನಾಲಿಗೆ ಹೋಗುವ ರಸ್ತೆಯ ಮಧ್ಯ, ಪ್ಯಾಂಗಾಂಗ್, ತಂಗ್ಲಾಂಗ್ಲಾ ಪಾಸ್‌ಗಳನ್ನು ಮಿಸ್ ಮಾಡದೆ ನೋಡಿ. ಮನಾಲಿ ಇಂದ ದೆಹಲಿಗೆ ಬಸ್ ಮೂಲಕ ನಂತರ ದೆಹಲಿ ಯಿಂದ ಬೆಳಗಾವಿಗೆ ರೈಲು ಮೂಲಕ ಬಂದು ನಮ್ಮ ಗೂಡನ್ನು ಸೇರಿಕೊಂಡೆವು. ಅಂದಹಾಗೆ ಬೆಳಗಾವಿ ನನ್ನ ಗಂಡನ ಮನೆ. 

ಈ ಪ್ರವಾಸದಲ್ಲಿ ಯಾವುದು ಪ್ಲಾನ್ ಆಗಿರಲಿಲ್ಲ, ಇದೊಂದು ಯೋಜನೆ ಇಲ್ಲದ ಪ್ರವಾಸ ಆಗಿದ್ದರಿಂದ ಸ್ವಲ್ಪ ಅಡತಡೆಗಳು ಆದವು ಆದರೇ ಅಷ್ಟೇ ಈ ಜರ್ನಿ ಮಜವಾಗಿಯೂ ಇತ್ತು. ನೀವು ಲೇಹ - ಲಡಾಕ್ ಪ್ರವಾಸ ಮಾಡಬೇಕು ಎಂದು ಕೊಂಡಿದ್ದರೇ, ಮೇ ಹಾಗೂ ಜೂನ್ ಉತ್ತಮ ತಿಂಗಳು ಆದರೇ ನೀವು ಹೋಗುವ ಮೊದಲೇ ಎಲ್ಲ ಪೂರ್ವ ನಿಯೋಜಿತಗೊಳಿಸಿದರೇ ಪ್ರವಾಸದ ವೆಚ್ಚವನ್ನು ಕಡಿಮೆ ಮಾಡಬಹುದು. 


ಹಾ.. ಕೊನೆಯದಾಗಿ, ನನ್ನ ಆರೋಗ್ಯದ ಸಮಸ್ಯೆ ಇಂದಾಗಿ ಈ ಪ್ರವಾಸದಲ್ಲಿ ಕೆಲವು ಸ್ಥಳನ್ನು ನೋಡಲು ಸಾಧ್ಯವಾಗಲೇ ಇಲ್ಲ. ಮುಂದಿನ ಸಾರಿ ಅವುಗಳನ್ನೇಲ್ಲ ನೋಡಿಕೊಂಡು ಮತ್ತೊಂದು ಅಧ್ಯಾಯವನ್ನು ಬರೆಯುವೆ. ಈ ಜರ್ನಿಯಲ್ಲಿ ಮುಖ್ಯವಾಗಿ ನನ್ನ ಕನಸನ್ನು ಒಂದೇ ಬಾರಿ ಹೇಳಿದ್ದರೂ ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಪೂರೈಸಿದ ನನ್ನ ಪತಿದೇವರಿಗೂ, ಹುಷಾರಿಲ್ಲಾ ಎಂದು ತಿಳಿದು ಮನೆಯವರಂತೆ ಉಪಚರಿಸಿದ ಹೋಂ ಸ್ಟೇ ಅಂಟಿಗೂ ಮತ್ತು ಹೋಗಿಬಂದ ಅನುಭವವನ್ನು ಹಂಚಿಕೊಳ್ಳಲು ಜೀವಂತ ಉಳಿಸಿರು ಆ ಡ್ರೈವರ್ ಅಣ್ಣನಿಗೂ ತುಂಬು ಹೃದಯದ ಧನ್ಯವಾದಗಳು. 
 

Category:Travel



ProfileImg

Written by aishwarya chimmalagi

journalist