ಕಿಟಕಿಯಾಚೆ ನೋಡುತ್ತಿದ್ದವಳ ಮನದೊಳಗೆ ಚಿಟ್ಟೆ ಓಡತೊಡಗಿತ್ತು. ಹಲವು ಸಮಯದ ಅನಂತರ ನಾಲ್ಕುಗೋಡೆಯಿಂದ, ತನ್ನ ಪ್ರಪಂಚದಿಂದ ಹೊರಗಡಿಯಿಟ್ಟುದಕ್ಕೋ ಏನೋ ತುಸು ಭಯವೂ ಸೇರಿ ಬಾಯಾರಿತು.
ನೀರು ಕುಡಿಯಲೆಂದು ತನ್ನ ಜಗ್ ನೋಡಿದಾಗ ಅದು ಖಾಲಿಯಾಗಿದ್ದುದು ಗಮನಿಸಿ ಅಡುಗೆ ಕೊಣೆಯತ್ತ ನಡೆದವಳು ನೀರು ಕುಡಿದು ಸುತ್ತಲೂ ಕಣ್ಣಾಡಿಸಿದಾಗ ಮತ್ತೆ ಕಿರಿಕಿರಿ ಭಾವ ಜಾಗೃತವಾಯಿತು ಅವಳಲ್ಲಿ. ಎಷ್ಟೇ ಪ್ರಯತ್ನ ಪಟ್ಟರೂ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲಾಗದೆ ಅಂದುಕೊಂಡಂತೆ ಮಾಡಲು ಶುರುವಿಟ್ಟುಕೊಂಡಳು.
ಒಂದ್ಹತ್ತು ನಿಮಿಷ ಕಳೆದಿತ್ತು ಅವಳು ಅಡುಗೆ ಮನೆಯೊಳಗೆ ಬಂದು.
"ಅಯ್ಯೋ ಅಮ್ಮೋರೆ ಇಲ್ಲೇನು ಮಾಡ್ತಿದ್ದೀರ...?" ಎನ್ನುವ ಸ್ವರಕ್ಕೆ ಬೆಚ್ಚಿ ಕೈಯಲ್ಲಿದ್ದ ಗಾಜಿನ ಲೋಟ ಕೆಳಗೆ ಬಿತ್ತು.
"ಅ.. ಅದೂ... ನೀ... ನೀರು" ಎಂದು ಏನೋ ಹೇಳಲು ಬಾಯಿ ತೆರೆಯುವಾಗಲೆ,
"ಜಾನಕಮ್ಮ, ನಿಮಗೆಷ್ಟು ಸಲ ಹೇಳೋದು... ಅವಳನ್ನು ಒಬ್ಳನ್ನೆ ಎಲ್ಲಿಗೂ ಹೋಗೋಕೆ ಬಿಡಬೇಡಿ ಅಂತ, ಕೋಣೆಯಲ್ಲಿ ಕಾಣಿಸ್ತಿಲ್ಲ" ಎನ್ನುತ್ತಾ ಅಡುಗೆ ಕೋಣೆಯ ಕಡೆಗೆ ಬಂದ ಪುಷ್ಕರ್.
ಅವನಲ್ಲಿಗೆ ಬರುವುದನ್ನು ಕಂಡ ಜಾನಕಮ್ಮ "ಅಮ್ಮೊರೆ ಬನ್ನಿ ಈ ಕಡೆ , ಹುಷಾರು ಗ್ಲಾಸ್ ಮೇಲೆ ಕಾಲಿಡ್ಬೇಡಿ" ಎನ್ನುತ್ತಾ ಅವಳ ಕೈ ಹಿಡಿದು ಹೊರಗೆ ಕರೆತರುವಷ್ಟರಲ್ಲಿ ಅಲ್ಲಿಗೆ ಸಮೀಪಿಸಿದ ಪುಷ್ಕರ್ ಗಾಬರಿಯಿಂದ ನಿಂತವಳನ್ನು ನೋಡಿ
"ಏನಾಯ್ತು.. ? ಯಾಕೀ ಭಯ ಐಕ್ಯ..?" ಎಂದು ಅಡುಗೆ ಕೋಣೆಯ ಒಳಗೆ ನೋಡಿದವನ ಮನ ಒಳಗೆ ಏನು ನಡೆದಿರಬಹುದು ಅನ್ನೋದನ್ನು ಗ್ರಹಿಸಿತ್ತು.
' ಅಬ್ಭಾ ಅಂತೂ ಇಷ್ಟು ದಿನದ ಮೇಲಾದ್ರು ನಾಲ್ಕು ಗೋಡೆಗಳ ಮಧ್ಯದಿಂದ ಹೊರಗೆ ಬಂದ್ಯಲ್ಲ ಐಕ್ಯ ಬಾ ಅಂದ್ರು ಧೈರ್ಯ ತೋರದವಳು, ಇದೇ ಸರಿಯಾದ ಸಮಯ ನಿನ್ನ ಮತ್ತೆ ಅಲ್ಲಿಗೇ ಕರ್ಕೊಂಡು ಹೋಗ್ಬೇಕು' ಎಂದು ತೀರ್ಮಾನಿಸಿದವನು,
"ಹ್ಮ್ಮ್... ಬಾ ನನ್ಜೊತೆ.. " ಎಂದವಳ ಕೈ ಹಿಡ್ಕೊಂಡು,
"ಜಾನಕಮ್ಮ ಅದನ್ನೆಲ್ಲ ಕ್ಲೀನ್ ಮಾಡಿ ಅವಳ ಕೋಣೆಲಿ ಕುಡಿಯೋಕೆ ನೀರಿಟ್ಬಿಡಿ" ಎಂದು ಅವಳನ್ನಲ್ಲಿಂದ ಕರ್ಕೊಂಡು ಹೋದ ಕೋಣೆಯೊಳಗೆ.
ಅವನ ಹಿಂದೆಯೇ ಹೊರಟವಳಿಗೆ ಮತ್ತೆ ಕೀಳರಿಮೆ ಕಾಡ ತೊಡಗಿತು. "ಅದೂ ... ಪುಷ್ಕರ್ ನೀರು ಕುಡಿಯೋಕೆ ಅಂತ ಹೋದೆ, ಹಾಗೇ ಅಲ್ಲೆಲ್ಲ ಹರಡಿಕೊಂಡಿದ್ದ ಪಾತ್ರೆಗಳನ್ನು ನೋಡಿ ಮನಸು ತಡೀಲಿಲ್ಲ" ಎಂದು ನಡೆದುದನ್ನು ವಿವರಿಸಲು ಹೊರಟವಳನ್ನು ತಡೆದು "ಶ್..! ಬಾ ಇಲ್ಲಿ ಕೂತ್ಕೋ " ಅವಳನ್ನು ಕೂರಿಸಿ ಅವಳ ಮುಂದೆ ಮಂಡಿಯೂರಿ ಕೆಳಗೆ ಕುಳಿತು " ಐಕ್ಯ... ಡಾಕ್ಟರ್ ನಾನು... ನೀ ಹೇಳದೇನೆ ಎಲ್ಲಾ ಗೊತ್ತಾಗುತ್ತೆ. ಅದಿರ್ಲಿ.. ಹೇಗನ್ನಿಸ್ತಿದೆ ಇವತ್ತು.. ?" ಕೇಳಿದ ಅವಳ ಮುಖಭಾವವನ್ನು ಓದಲು ಪ್ರಯತ್ನಿಸುತ್ತಾ.
ಅವನ ಪ್ರಶ್ನೆ ತನಗಲ್ಲ ಎಂಬಂತೆ ಉಗುರು ಕಚ್ಚಲು ಆರಂಭಿಸಿದಳು.
"ಐಕ್ಯ, ನಿನ್ನೆ ಕೇಳಿದ್ದು.. ಇವತ್ತು ಹೇಗನಿಸ್ತಿದೆ ನಿಂಗೆ ಅಂತ..? ನೀನು ನೋಡಿದ್ರೆ ಪಾಪ ಬಡಪಾಯಿ ಉಗುರಿಗೆ ಹಿಂಸೆ ಕೊಡ್ತಿದ್ದಿಯಲ್ಲ..?" ಅವನೆಂದಾಗ ಪಕ್ಕನೆ ಬಾಯಿಂದ ಕೈ ತೆಗೆದವಳು
"ಆ... ಹೂಂ... ಚೆನ್ನಾಗಿತ್ತು " ಎಂದಳು ತೆರೆದ ಬಾಲ್ಕನಿಯ ಕಿಟಕಿಯ ಕಡೆ ನೋಡಿ.
ಅವಳನ್ನೊಮ್ಮೆ ನೋಡಿ ' ಪರ್ವಾಗಿಲ್ಲ, ಕಳೆದ ಒಂದು ತಿಂಗಳ ಸತತ ಪ್ರಯತ್ನ ಇವತ್ತು ಸ್ವಲ್ಪ ಫಲ ಕೊಟ್ಟಿದೆ, ಗುಡ್ ಸೈನ್ ಐಕ್ಯ ' ಮನದಲ್ಲೇ ಅಂದುಕೊಂಡವ "ಐಕ್ಯ , ಬೇಗ ಬಟ್ಟೆ ಬದಲಿಸಿ ತಯಾರಾಗು ಒಂದು ಕಡೆ ಕರ್ಕೊಂಡು ಹೋಗ್ತೀನಿ" ಎಂದು ಅಲ್ಲಿಂದ ಹೊರನಡೆದ ಬಾಗಿಲು ಎಳೆದುಕೊಂಡು ಹೊರನಡೆದ.
ಅವನು ಹೋದತ್ತಲೆ ನೋಡಿದವಳ ಮನದಲ್ಲಿ ಮತ್ತೆ ಚಿಟ್ಟೆ ಓಡಾಡಿದಂತಾಗಿತ್ತು. ಏನೋ ಅರಿಯದ ಭಾವವೊಂದು ಚಿಗುರಿ ಜೊತೆಗೊಂದು ಭಯವೂ ಆವರಿಸಿತು.
ಹೊರಬಂದ ಪುಷ್ಕರ್ ' ಜಾನಕಮ್ಮ ಬನ್ನಿ ಇಲ್ಲಿ " ಎಂದಾಗ ಅವನ ಮುಂದೆ ಬಂದವರ ಬಳಿ ಬಳಿ ಇವತ್ತೇನಾದ್ರೂ ಅಳೋದು ಗಿಳೋದು ಮಾಡಿದ್ಲಾ..? " ಎಂದು ಕೇಳಿದ.
"ಇಲ್ಲ ಅಪ್ಪೋರೆ, ಬೆಳಿಗ್ಗೆ ನೀವು ಆಸ್ಪತ್ರೆಗೆ ಹೋದ ಸ್ವಲ್ಪ ಹೊತ್ತಿಗೆ ಒಳಗಿನ ಕೋಣೆಯಿಂದ ಹೊರಬಂದು ನೀವು ತೆರೆದಿಟ್ಟು ಹೋದ ಕಿಟಕಿಯ ಬಳಿಯೇ ನಿಂತಿದ್ರು. ಅಲ್ಲೇ ಇದ್ದಾರಲ್ಲ ನಾನು ಬೇಗ ಒಣಗಿರೋ ಬಟ್ಟೆ ತರೋಣ ಅಂತ ಮೇಲ್ ಹೋಗಿ ಬರುವಷ್ಟರಲ್ಲಿ ಇಷ್ಟೆಲ್ಲಾ ಆಗೋಯ್ತು" ಎಂದರು ಅಡುಗೆ ಕೋಣೆಯ ರಾದ್ಧಾಂತ ನೆನೆದು.
"ಪರ್ವಾಗಿಲ್ಲ ಜಾನಕಮ್ಮ, ಅವಳಿಷ್ಟರ ಮಟ್ಟಿಗೆ ಆಗಿರೋದು ಹೆಚ್ಚು ಅದೂ ಒಂದೇ ತಿಂಗಳಲ್ಲಿ. ಇನ್ನೂ ತುಂಬಾ ಸಮಯ ಬೇಕು ಅವಳು ಸಾಮಾನ್ಯರಂತೆ ಆಗಲು" ಎಂದವ " ಅವಳು ರೆಡಿಯಾಗಿದ್ರೆ ಕರ್ಕೊಂಡು ಬನ್ನಿ " ಎನ್ನುತ್ತಿರುವಾಗಲೆ ತಿಳಿ ಗುಲಾಬಿ ಬಣ್ಣದ ಸಲ್ವಾರ್ ಕಮೀಜ್ ತೊಟ್ಟು ಅದಕ್ಕೊಪ್ಪುವ ರಬ್ಬರ್ ಬ್ಯಾಂಡ್ ಮತ್ತು ಬಿಂದಿ ಧರಿಸಿ ಬಂದವಳತ್ತಲೇ ನೋಡಿ 'ವಾಹ್.. ಗಾರ್ಜಿಯಸ್..! ಲೋಕದ ಕಣ್ಣಿಗೆ ಮಿಸ್ ಪರ್ಫೆಕ್ಟ್! ಆದ್ರೆ ಮೆಡಿಕಲ್ ಟರ್ಮ್ಸಲ್ಲಿ..? ಆ ಕರಾಳ ಸತ್ಯವನ್ನು ಅವಳ ಮನೆಯವರೇ ಅರ್ಥ ಮಾಡಿಕೊಂಡಿಲ್ಲ ಇನ್ನುಸಮಾಜ!?' ಎಂದುಕೊಂಡು ಅವಳನ್ನೇ ರೆಪ್ಪೆ ಮಿಟುಕಿಸದೆ ನೋಡುತ್ತಿದ್ದವನನ್ನು ಎಚ್ಚರಿಸಿದ್ದು " ಅಪ್ಪೋರೆ.. ಬಂದ್ರು ನೋಡಿ" ಎಂದ ಜಾನಕಮ್ಮನ ಧ್ವನಿ.
"ಹಾಂ.. ಹ್ಮ್ಮ್,.. ಜಾನಕಮ್ಮ ಬರ್ತಾ ಊಟ ಮುಗಿಸಿಕೊಂಡು ಬರ್ತೀವಿ ಕಾಯ್ಬೇಡಿ " ಎಂದವ ಶಾಲನ್ನು ಬೆರಳಿಗೆ ಸುತ್ತಿ ತಿರುವುತ್ತಿದ್ದ ಐಕ್ಯಾ ಕಡೆ ತಿರುಗಿ " ಬಾ ಹೊರಡೋಣ" ಎಂದಾಗ ಅವನನ್ನು ಮೌನವಾಗಿ ಹಿಂಬಾಲಿಸಿದಳು.
ಅವರಿಬ್ಬರೂ ಹೋದ ಕಡೆ ನೋಡಿ ' ಈ ಹುಡುಗಿಗೆ ಮಾನಸಿಕ ಸಮಸ್ಯೆ ಅಂದ್ರೆ ಯಾರಾದ್ರೂ ನಂಬೋ ಮಾತ..? ದೇವ್ರೆ ಇವರಿಬ್ರು ಹೇಳಿ ಮಾಡಿಸಿದ ಜೋಡಿ, ಅದೆಲ್ಲೊ ಇದ್ದ ಹುಡುಗಿನ ಇವರ ಕಣ್ಣಿಗೆ ಬೀಳೋ ಹಾಗ್ಮಾಡಿದ್ದೀಯ, ಅಪ್ಪೋರ್ಗು ಅವರ ಮೇಲೆ ಮನಸಿದ್ದಂಗಿದೆ, ಆದಷ್ಟು ಬೇಗ ಆ ಹುಡುಗಿ ಸರಿ ಹೋಗಿ ಮದುವೆ ಎಂಬ ಮೂರ್ಗಂಟು ಹಾಕಿಸಿ ಬಿಡು ತಂದೆ ' ಎಂದು ನಿಂತಲ್ಲೇ ಕೈಮುಗಿದರು ಜಾನಕಮ್ಮ.
*****
" ರೀ ಮಗಳ ಬಗ್ಗೆ ಇಷ್ಟೊಂದು ಕಟುವಾಗಿ ಯಾಕೆ ವರ್ತಿಸ್ತಿದ್ದೀರಿ..? ಒಮ್ಮೆಯೂ ಅವಳೆಲ್ಲಿದ್ದಾಳೆ? ಹೇಗಿದ್ದಾಳೆ? ಏನನ್ನೂ ತಿಳ್ಕೊಳ್ಳುವ ಪ್ರಯತ್ನವನ್ನೇ ಮಾಡಿಲ್ಲ ನೀವು?" ಎಂದರು ಸರಳ ತಮ್ಮ ಪತಿ ಶಿವರಾಮ್ ಬಳಿ.
" ಅವಳಿಂದ ನಾವಿಬ್ರು ಇವತ್ತು ಇಬ್ಬಿಬ್ರು ಹೆಣ್ಮಕ್ಳಿದ್ದು ಯಾರೂ ಇಲ್ದೆ ಬದುಕ್ತಾ ಇದ್ದೇವಲ್ಲ ಅದರ ನೋವು ಮರೆಯೋದು ಸುಲಭ ಅಲ್ಲ. ಅವಳಿಂದ ತಾನೇ ಅವತ್ತು ಅವಂತಿಕಾ ಮತ್ತೆ ಅಳಿಯಂದ್ರು ಮನೆ ಬಿಟ್ಟು ಹೋಗಿದ್ದು " ಎಂದರು ಕಟುವಾಗಿಯೇ ಒಂದು ತಿಂಗಳ ಹಿಂದಿನ ಘಟನೆಯನ್ನು ನೆನೆದು, ಅವಳ ಮನಸ್ಥಿತಿಯ ಅರಿವಿಲ್ಲದೆ.
ಮುಂದೇನೂ ಮಾತಾಡಲಾಗದೆ ಮೌನಕ್ಕೆ ಶರಣಾದ ಸರಳಾರ ಮನ ಮಗಳನ್ನು ನೆನೆಯಿತು.
ಬುದ್ಧಿ ಬಂದಾಗಿನಿಂದಲೂ ಐಕ್ಯ ವಯಸ್ಸಿಗೆ ಮೀರಿದ ಪ್ರಬುದ್ಧತೆ ತೋರಿ ಎಲ್ಲವೂ ಅಚ್ಚುಕಟ್ಟಾಗಿ ಇರಲೇ ಬೇಕೆಂದು ಹಠ ಹಿಡಿಯುವ ಸ್ವಭಾವದವಳಾಗಿದ್ದಳು. ಕೆಲವೊಮ್ಮೆ ಎಷ್ಟರ ಮಟ್ಟಿಗೆ ಎಂದರೆ ಅಪ್ಪಿ ತಪ್ಪಿ ಸರಳ ಕೆಲವೊಂದು ವಸ್ತುಗಳನ್ನು ಅದರ ಜಾಗದಲ್ಲಿ ಇಡಲು ಮರೆತಿದ್ದರೆ ಮನೆ ಅದೇ ವಿಷಯಕ್ಕೆ ರಣರಂಗ ಆಗುವಷ್ಟು ಕಿರಿಕಿರಿ ಮಾಡುತ್ತಿದ್ದಳು. ಅವಳು ಬೆಳೆದಂತೆ ಅವಳ ಆ ಅತೀ ಶಿಸ್ತಿನ ಬುದ್ಧಿಯೂ ವಯಸ್ಸಿಗೆ ಮೀರಿ ಬೆಳೆಯಿತು. ಶಾಲೆ ಕಾಲೇಜುಗಳಲ್ಲಿರುವಷ್ಟು ದಿನ ಮನೆಯವರ ಮತ್ತು ತನ್ನ ಆಪ್ತ ಸ್ನೇಹಿತೆಯರ ವಯಲದಲ್ಲಷ್ಟೆ ಸೀಮಿತವಾಗಿದ್ದ ಇದು ಬಗೆಹರಿಸಲಾಗದ ಸಮಸ್ಯೆಯಾಗಿ ಬದಲಾಗಿದ್ದು ಕಲಿಕೆ ಮುಗಿದು ಕೆಲಸಕ್ಕೆ ಪ್ರಯತ್ನಿಸುವ ಸಮಯದಲ್ಲಿ. ಇವಳ ವಿಪರೀತ ಪರ್ಫೆಕ್ಟ್ ಎನ್ನುವಂತ ನಡವಳಿಕೆ, ಎದುರಿನವರ ನಡವಳಿಕೆಯಲ್ಲಿ ಕಾಣುವ ಸಣ್ಣ ಸಣ್ಣ ತಪ್ಪುಗಳನ್ನು ಎತ್ತಿ ಹಿಡಿದು ಮುಖಕ್ಕೆ ಹೊಡೆದಂತೆ ಹೇಳುವ ಬುದ್ಧಿಯಿಂದ ಮೊದಲ ಇಂಟರ್ವ್ಯೂನಲ್ಲೆ ತಿರಸ್ಕೃತಗೊಳ್ಳುತ್ತಿದ್ದುದು ಅವಳ ಮನಸ್ಸಿನ ಸ್ಥಿತಿಯ ಮೇಲೆ ಮತ್ತಷ್ಟು ಪರಿಣಾಮವನ್ನು ಬೀರಿತು. ಏನಾದರೂ ಮಾತಾಡಿದರೆ ಎಲ್ಲಿ ಸಿಡಿದು ಬೀಳುತ್ತಾಳೆ ಎಂಬ ಭಯಕ್ಕೆ ಅವಳಿಂದ ಮನೆಯವರು ಸ್ನೇಹಿತರು ಎಲ್ಲರೂ ಅಂತರ ಕಾಯ್ದುಕೊಳ್ಳಲು ಆರಂಭಿಸಿದರು.
ಈ ರೀತಿ ಇರುವಾಗ ಒಂದು ದಿನ ಅವಳ ಅಕ್ಕ ಅವಂತಿಕಾಳಿಗೆ ಹೆರಿಗೆಯಾಗಿ ಮನೆಗೆ ಬಂದು ಒಂದು ತಿಂಗಳಾಗುತ್ತ ಬಂದಿತ್ತು ಮನೆಯವರೆಲ್ಲ ದೂರ ಇಟ್ಟಿದ್ದರ ಪರಿಣಾಮ ಐಕ್ಯ ಮತ್ತಷ್ಟು ಕುಗ್ಗಿದ್ದಳು ಮತ್ತದು ಅವಳೊಳಗೆ ಕಿರಿಕಿರಿಯಾಗಿ ಮಾರ್ಪಟ್ಟಿತ್ತು.
ಆ ದಿನ ಮಗು ಜೋರಾಗಿ ಅಳುವ ಸದ್ದು ಕೇಳಲಾಗದೆ ಅದರ ಕೋಣೆಗೆ ಹೋಗಿ ತನ್ನ ಕೈಯಿಂದ ಅದರ ಬಾಯಿ ಮುಚ್ಚಿ ಹಿಡಿದು ಮತ್ತೊಂದು ಕೈಯಲ್ಲಿ ತನ್ನ ಒಂದು ಕಿವಿಯನ್ನು ಮುಚ್ಚಿ ಹಿಡಿದಿದ್ದಳು. ಬಚ್ಚಲು ಮನೆಯಲ್ಲಿದ್ದ ಅವಂತಿಕಾ ಹೊರಗೆ ಬರುವಾಗ ಕಂಡ ಈ ದೃಶ್ಯದಿಂದ ಭಯಗೊಂಡವಳು ಗಂಡನನ್ನು ಬರ ಹೇಳಿ "ಇವಳು ನನ್ನ ಮಗೂನ ಕೊಂದೇ ಬಿಡ್ತಾಳೆ ನಾನಿಲ್ಲಿರಲ್ಲ, ಯಾವತ್ತೂ ಇಲ್ಲಿಗೆ ಬರೋದು ಇಲ್ಲ" ಎಂದವಳು ಶಿವರಾಮ್ ಹಾಗೂ ಸರಳ ಎಷ್ಟೇ ಕೇಳಿಕೊಂಡರೂ ನಿಲ್ಲದೆ ಗಂಡನ ಮನೆಗೆ ಹೋದವಳು ಹೇಳಿದಂತೆಯೇ ಮಾಡಿದ್ದಳು.
ಅವತ್ತು ಶಿವರಾಮ್ ತನ್ನ ಕೋಪದ ಕೈಗೆ ಬುದ್ಧಿ ಕೊಟ್ಟು , ಮನಸ್ಥಿತಿ ಸರಿಯಿಲ್ಲದ ಮಗಳು ಐಕ್ಯಾಳನ್ನು ಕೂಡಾ ಮನೆಯಿಂದ ಹೊರ ಹಾಕಿದ್ದರು. ಅವಳ ಹದಗೆಟ್ಟ ಮಾನಸಿಕ ಸ್ಥಿತಿ ಬಗ್ಗೆ ಯಾರಿಗೂ ಒಂದು ಸುಳಿವು ಇರಲಿಲ್ಲ. ಮನೆಯಿಂದ ಹೊರಬಂದ ಐಕ್ಯ, ಏನಾಯ್ತು, ಯಾಕಾಯ್ತು ಎಂಬ ಗೊಂದಲಕ್ಕೆ ಬಿದ್ದು ಎಲ್ಲಿಗೆ ಹೋಗಬೇಕೆಂಬುದು ತಿಳಿಯದೆ ಸಂಜೆಯ ವೇಳೆಗೆ ಅಲ್ಲೇ ಒಂದು ಪಾರ್ಕಿನ ಒಳಗೆ ಬಂದಿದ್ದಳು. ಮನೆಗೆ ಹೋಗೋಣ ಎಂದುಕೊಂಡರೂ ಅಪ್ಪನ ಕೋಪ ನೆನಪಾಗಿ ಅಲ್ಲೇ ಮುದುರಿ ಕುಳಿತು ಅಳುತ್ತಿದ್ದವಳು ಅಂದು ಸಂಜೆ ಜಾಗಿಂಗ್ ಬಂದಿದ್ದ ಪುಷ್ಕರ್ ಕಣ್ಣಿಗೆ ಕಂಡಳು.
*****
" ಬಾ ಐಕ್ಯ ಇಲ್ಲಿ ಕೂತ್ಕೋ..." ಎಂದವನು ಅಲ್ಲೆ ಪಾರ್ಕೀನ ಕಲ್ಲು ಬೆಂಚಿನ ಮೇಲೆ ತಾನು ಕುಳಿತುಕೊಳ್ಳುತ್ತಾ ಅವಳಿಗೂ ಕೂರುವಂತೆ ಹೇಳಿದ.
ಅವನ ಮಾತಿಗೆ ಒಮ್ಮೆ ಸುತ್ತಲೂ ನೋಡಿ ಅವನ ಪಕ್ಕ ಕುಳಿತು ಉಗುರು ಕಚ್ಚುವ ಕೆಲಸ ಶುರುಮಾಡಿದಳು. ಕಣ್ಣುಗಳಲ್ಲಿ ಸ್ಪಷ್ಟ ಭಯವೊಂದು ಆವರಿಸಿದ್ದನ್ನು ಗಮನಿಸದೆ ಇರಲಿಲ್ಲ ಪುಷ್ಕರ್.
ಅವಳಿಗೋ ತಿಂಗಳ ನಂತರ ಹೊರಗಿನ ಪ್ರಪಂಚಕ್ಕೆ ಕಾಲಿಟ್ಟಿದ್ದುದರ ಜೊತೆಗೆ ಮತ್ತದೇ ಪಾರ್ಕಿಗೆ ಬಂದಿದ್ದು ಒಂದು ರೀತಿಯ ಉದ್ವಿಗ್ನತೆ ಸೃಷ್ಟಿಸಿತ್ತು.
ಅದೇ ಭಯದಲ್ಲೇ "ಪುಷ್ಕರ್... ಮತ್ತೆ ನನ್ನಿಂದೆನಾದ್ರೂ ತಪ್ಪಾಯ್ತ? ನೀವೂ ನನ್ನ ಇಲ್ಲೇ ಬಿಟ್ಟು ಹೋಗ್ತೀರಾ?" ಕೇಳಿದಳು ಅವನನ್ನೇ ನೋಡುತ್ತಾ.
ಅವಳ ಮಾತಿಗೆ ಜೋರಾಗಿ ನಕ್ಕವನು "ಹೌದು.. ಐಕ್ಯ ಇವತ್ತು ಅಷ್ಟೊಂದು ಗ್ಲಾಸುಗಳನ್ನು ಒಡೆದು ಹಾಕಿದ್ದಕ್ಕೆ ಶಿಕ್ಷೆ ಆಗ್ಬೇಕಲ್ವ ನಿಂಗೆ?" ಗಂಭೀರತೆಯ ಸೋಗು ಹಾಕಿ ಅವಳನ್ನೇ ನೋಡುತ್ತಾ ಹೇಳಿದಾಗ, ಅಲ್ಲಿಂದೆದ್ದು ಹೊರಡಲನುವಾದವಳನ್ನು ತಡೆದು,
'ಗುಡ್ ಐಕ್ಯ ನಿನ್ನ ಸುತ್ತಲೂ ಏನಾಗ್ತಿದೆ ಅನ್ನೋದು ನಿನ್ನರಿವಿಗೆ ಬರ್ತಿದೆ ಅಂದ್ರೆ , ಯು ಆರ್ ಟರ್ನಿಂಗ್ ಟುವರ್ಡ್ಸ್ ನಾರ್ಮಲ್ ' ಎಂದು ಮನದಲ್ಲೇ ಎಂದುಕೊಂಡವ "ಐಕ್ಯ, ಈ ಒಂದು ತಿಂಗಳಲ್ಲಿ ನಿಂಗೆ ನಿನ್ ಮನೆಯವ್ರು ಯಾರೂ ನೆನಪಿಗೆ ಬರ್ಲೆ ಇಲ್ವಾ? " ಕೇಳಿದ ತಾನು ತನ್ನದೇ ರೀತಿಯಲ್ಲಿ ನಡೆದುದನ್ನು ಪತ್ತೆ ಹಚ್ಚಿದ್ದರೂ ಅವಳಿಗೆಷ್ಟು ನೆನಪಿದೆ ಎನ್ನುವುದನ್ನು ತಿಳಿಯುವ ಸಲುವಾಗಿ.
ಅವನ ಮಾತಿಗೆ ಅವಳಿಂದ ಸಿಕ್ಕ ಉತ್ತರ ಅವಳ ಜೋರು ಅಳುವೊಂದೆ. ಅತ್ತು ಮನಸ್ಸು ಹಗುರ ಮಾಡಿಕೊಳ್ಳಲಿ ಎಂದು ಅವಳಷ್ಟಕ್ಕೆ ಬಿಟ್ಟವನು ತನ್ನ ಮೊಬೈಲ್ನಿಂದ ಯಾರಿಗೋ ಸಂದೇಶವೊಂದನ್ನು ಕಳುಹಿಸಿ ಅಳು ನಿಲ್ಲುವವರೆಗೂ ಕಾದ.
ಸುಮಾರು ಒಂದು ಗಂಟೆಯಷ್ಟು ಹೊತ್ತು ಅತ್ತವಳು , ಅಳು ನಿಲ್ಲಿಸಿ
"ಪುಷ್ಕರ್ ನನ್ಗೆ ನನ್ ಮನೆಗೆ ಹೋಗಬೇಕು ಕರ್ಕೊಂಡು ಹೋಗ್ತೀರಾ ಪ್ಲೀಸ್?" ಎಂದಳು.
"ಎಲ್ಲಿದೆ ಐಕ್ಯ ನಿಮ್ಮನೆ, ನೀ ದಾರಿ ತೋರ್ಸಿದ್ರೆ ಹೋಗೋಣ ಬಾ ಈಗ್ಲೇ?" ಎಂದ ತನಗೆ ಗೊತ್ತಿದ್ದರೂ ಕೇಳಿದ.
"ಬನ್ನಿ ಹೋಗೋಣ, ಈಗ್ಲೇ ತೋರಿಸ್ತೀನಿ" ಅವಳೆಂದಾಗ ಕಂಡೂ ಕಾಣದಂತ ಬದಲಾವಣೆಯನ್ನು ಗುರುತಿಸಿದ.
"ಸರಿ ಸರಿ.. ಹೋಗೋಣ.. ಯಾಕಷ್ಟು ಅವಸರ? ಕರ್ಕೊಂಡು ಹೋಗ್ತೀನಿ " ಎಂದವನು ಕುಳಿತಲ್ಲಿಂದ ಏಳದಿದ್ದಾಗ ಮತ್ತೆ ಅವನ ಕೈ ಹಿಡಿದು"ಬನ್ನಿ ಪುಷ್ಕರ್ ಹೋಗೋಣ " ಎಂದಾಗ ಅವಳನ್ನು ಹಿಂಬಾಲಿಸಿ ತನ್ನ ಕಾರಿನ ಬಳಿ ಬಂದ.
ಇಷ್ಟೊತ್ತು ಒಬ್ಬ ಮನೋ ವೈದ್ಯನಾಗಿ ಯೋಚಿಸ್ತಿದ್ದ ಅವನ ಮನ ಸಪ್ಪಾಗಾಯಿತು ಒಮ್ಮೆಲೆ. ಅವತ್ತೇನೋ ಮಾನವೀಯತೆ ದೃಷ್ಟಿಯಿಂದ ಮತ್ತೊಬ್ಬ ವೈದ್ಯನಾಗಿ ಅವಳ ಮಾನಸಿಕ ಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಪಾರ್ಕಲ್ಲಿ ಅಳುತ್ತಿದ್ದವಳನ್ನು ತನ್ನ ಮನೆಗೆ ಕರ್ಕೊಂಡು ಹೋಗಿ ಜೋಪಾನ ಮಾಡಿದ್ದರೂ, ಈ ಒಂದು ತಿಂಗಳಲ್ಲಿ ಅವನ ಚಿಕಿತ್ಸೆಗೆ ಅವಳೂ ಸ್ಪಂದಿಸಿ ಅವನೊಂದಿಗೆ ಹೊಂದಿಕೊಂಡ ರೀತಿಯನ್ನು ನೆನೆದವ ' ಅವಳು ಮನೆಗೆ ಹೋಗ್ತೀನಿ ಎಂದಾಗ ಯಾಕೀ ರೀತಿ ಆಗ್ತಿದೆ ನನ್ಗೆ..? ಇನ್ಮುಂದೆ ಅವಳಿರಲ್ಲ ನನ್ಜೊತೆ ಅನ್ನೋದನ್ನು ನೆನೆದು ಯಾಕಿಷ್ಟು ಒದ್ದಾಡ್ತಿದೆ ಮನಸ್ಸು ' ಡು ಐ ಲವ್ ಹರ್..?' ಎಂದು ತನ್ನಷ್ಟಕ್ಕೆ ಯೋಚಿಸುತ್ತಾ ಅವಳನ್ನು ಕಾರಲ್ಲಿ ಕೂರಿಸಿ ತಾನೂ ಕುಳಿತ.
ಮತ್ತೊಂದು ಕಡೆ ಅವಳ ಯೋಚನೆಗಳು ಯಾವುದೇ ಎಗ್ಗಿಲ್ಲದೆ ಸಾಗುತ್ತಿತ್ತು. ಅರ್ಧ ದಾರಿ ಕ್ರಮಿಸಿದ ಬಳಿಕ "ಪುಷ್ಕರ್... ಕಾರ್ ನಿಲ್ಲಿಸಿ" ಎಂದಳು.
"ಏನಾಯ್ತು ಐಕ್ಯ..? ಇಷ್ಟೊತ್ತು ಖುಷಿಯಲ್ಲಿದ್ದೆ" ಎಂದ ಅಲ್ಲೆ ರಸ್ತೆ ಪಕ್ಕ ಕಾರ್ ನಿಲ್ಲಿಸುತ್ತ.
"ಮನೆಗೆ ಹೋಗೋದು ಬೇಡ ಪುಷ್ಕರ್, ನನ್ಗೆ ಭಯ ಆಗುತ್ತೆ" ಎಂದಳು ಶಾಲನ್ನು ಕೈಯಲ್ಲಿ ಹೊಸಕುತ್ತ.
"ಭಯ ಯಾಕೆ ನಾನಿರ್ತೀನಲ್ಲ ಜೊತೆಗೆ" ಎಂದ.
"ನಿಮ್ಮನೆಗೆ ಹೋಗೋಣ ಪ್ಲೀಸ್, ಅಲ್ಲಿದ್ರೆ ಒಂಥರಾ ಮನಸ್ಸಿಗೆ ಧೈರ್ಯ ಇರುತ್ತೆ, ಜಾನಕಮ್ಮನ್ನ ನೋಡ್ಬೇಕು ಮನೆಗೆ ಹೋಗೋಣ" ಎಂದಳು ಖಡಾಖಂಡಿತವಾಗಿ.
ಅವಳ ಮಾತು ಇವನಿಗೂ ಅರಿಯದ ಸಂತಸವೊಂದು ಮನದಲ್ಲಿ ಇಣುಕಿತು.
ಮತ್ತೆ ಕಾರನ್ನು ತನ್ನ ಮನೆಯ ಹಾದಿಗೆ ತಿರುಗಿಸಿದವನು ' ಏನಾಗ್ತಿದೆ ಐಕ್ಯ ನಿನ್ನೊಳಗೆ? ಇದು ನಿಜ್ವಾಗ್ಲೂ ಭಯವೋ? ಅಥವಾ ನಿಂಗೂ ನನ್ನ ಹಾಗೇ ಬಿಟ್ಟು ಹೋಗೋ ಮನಸಿಲ್ವೋ?' ಎಂದು ಯೋಚಿಸಿ ನಿಟ್ಟುಸಿರು ಚೆಲ್ಲಿದ.
' ಬೇಡ ಪುಷ್ಕರ್, ನನ್ನ ಎಲ್ಲಿಗೂ ಕಳಿಸ್ಬೇಡಿ ನಿಮ್ ಜೊತೆಗೇ ಇರ್ತೀನಿ ನಾನು.. ಅಷ್ಟೂ ವರ್ಷಗಳಲ್ಲಿ ನನ್ನ ಪರಿಸ್ಥಿತಿಯ ಬಗ್ಗೆ ಒಮ್ಮೆಯೂ ಯೋಚಿಸದವರ ಬಳಿ ನಾ ಹೋಗಲಾರೆ' ಹೀಗೆ ಯೋಚಿಸುತ್ತಾ ತನ್ನೊಳಗೆ ಗಟ್ಟಿ ನಿರ್ಧಾರವೊಂದು ಮೂಡಿತು.
ಮನೆಗೆ ತಲುಪಿದ ಕೂಡಲೇ ತನ್ನ ಕೋಣೆ ಸೇರಿಕೊಂಡಳು ಬಾಗಿಲು ಹಾಕಿದಳು.
ಅವಳು ಹೋದತ್ತಲೇ ನೋಡಿದವನ ಮನ ಇನ್ನೇನನ್ನೋ ಶಂಕಿಸಿತು.
"ಜಾನಕಮ್ಮ ಸ್ವಲ್ಪ ಹೊತ್ತು ಐಕ್ಯ ಜೊತೆಗೇ ಇರಿ. ಈಗ ಬರ್ತೀನಿ" ಎಂದವನು ಅವರುತ್ತರಕ್ಕೆ ಕಾಯದೇ ಹೊರಟ ಯಾರಿಗೋ ಕರೆ ಮಾಡುತ್ತಾ.
ಹೋಗಿ ಒಂದೆರಡು ಘಂಟೆಗಳ ಬಳಿಕ ಬಂದು, ಜಾನಕಮ್ಮನನ್ನು ಹೊರಗೆ ಕರೆದು "ನಾನು ಇಲ್ಲಿಂದ ಹೋದಮೇಲೆ ಏನಾದ್ರೂ ಗಲಾಟೆ ಮಾಡಿದ್ಲ? ನಿಮ್ಮ ಬಳಿ ಹೇಗೆ ನಡ್ಕೊಂಡ್ಲು?" ಎಂದು ಕೇಳಿದಾಗ,
"ಆಗಲೇ ಒಮ್ಮೆ ಅವರನ್ನು ನೋಡಿದಾಗ ಒಂದು ತಿಂಗಳ ಹಿಂದೆ ಇಲ್ಲಿಗೆ ಬರುವಾಗ ಇದ್ದಾಗಿನ ಐಕ್ಯಮ್ಮೋರು ನೆನಪಾದ್ರು, ನನ್ನ ಹತ್ರವೂ ತುಂಬಾ ಹೊತ್ತು ಮಾತಾಡಲೇ ಇಲ್ಲ, ಆಮೇಲೆ ನಾನೇ ಏನಾಯ್ತು ಅಮ್ಮೋರೆ ಅಂತ ಕೇಳಿದಾಗ, ' ನನ್ನ ಎಲ್ಲೂ ಕಳಿಸ್ಬೇಡಿ ಜಾನಕಮ್ಮ , ನಾನೆಲ್ಲೂ ಹೋಗಲ್ಲ ಅಂದ್ರು' " ಎಂದು ಹೇಳಿ ಮುಗಿಸಿದಾಗ 'ತಾನು ಅಂದುಕೊಂಡಂತೆ ಅವಳಿಗೂ ನನ್ನ ಮೇಲೆ ಪ್ರೀತಿ ಆಗಿರಬಹುದು ಯಾವುದಕ್ಕೂ ಕಾಯೋಣ ನಾಳೆ ತನಕ' ಎಂದು ನಿರ್ಧರಿಸಿ
" ಸರಿ ಜಾನಕಮ್ಮ , ನೀವು ನಿಮ್ಮ ಕೆಲ್ಸ ಮುಗಿಸ್ಕೊಳ್ಳಿ ನಾನು ಅವಳತ್ರ ಮಾತಾಡ್ತೀನಿ" ಎಂದವನು ಅವಳ ಕೋಣೆಗೆ ಬಂದ.
ಬೆಳಗ್ಗೆ ತೆರೆದಿದ್ದ ಕಿಟಕಿ ಮತ್ತೆ ಮುಚ್ಚಿತ್ತು "ಐಕ್ಯ" ಎಂದ ಕಿಟಕಿಯನ್ನು ತೆರೆಯುತ್ತಾ. ಅವನ ಕರೆಗೆ ಎದ್ದು ಕುಳಿತುಕೊಂಡಳು.
" ನಿದ್ದೆ ಮಾಡಿದ್ಯಾ..? ಈಗ್ಲೇ ಮಲಗ್ಬೇಡ ಊಟ ಮಾಡಿ ಮಲ್ಕೊ" ಎಂದಾಗ, ಅಳು ಉಕ್ಕಿ ಬಂದಿತು ಅವಳಿಗೆ.
"ಯಾಕೀ ಅಳು.. ನೀನೇ ಹೋಗ್ತೀನಿ ಅನ್ನೋವರ್ಗೂ ನಿನ್ನ ಎಲ್ಲೂ ಕಳ್ಸಲ್ಲ. ಈಗ ಕಣ್ಣೋರೆಸ್ಕೊ" ಎಂದು ಅವಳ ಮುಂದಲೆಯನ್ನೊಮ್ಮೆ ಸವರಿ ತನ್ನ ಕೋಣೆಗೆ ಬಂದವನು ಯೋಚನೆಗೆ ಬಿದ್ದ.
ಮರುದಿನ ಬೆಳಗ್ಗೆ, "ಗುಡ್ ಮಾರ್ನಿಂಗ್ ಐಕ್ಯ, ಓಹ್ ಆಗ್ಲೇ ಎದ್ದು ಫ್ರೆಶ್ ಅಪ್ ಆಗಿಯೂ ಆಯ್ತಾ... ಗುಡ್.. ಬಾ ಕಾಫಿ ಕುಡಿಯೋಣ" ಎಂದವನು ತನ್ನ ಕೈಯಲ್ಲಿದ್ದ ಎರಡು ಕಪ್ಗಳಲ್ಲಿ ಒಂದನ್ನು ಅವಳಿಗೆ ಕೊಟ್ಟು "ಬಾ ಹೊರಗೆ ಕೂರೋಣ" ಎಂದು ಹೊರಟಾಗ ತಾನೂ ಹೊರಟಳು ಅವನ ಹಿಂದೆ.
ಅಷ್ಟ್ರಲ್ಲಿ ಮನೆಯೊಳಗೆ ಬಂದ ವ್ಯಕ್ತಿಯನ್ನು ನೋಡಿ ಪುಷ್ಕರ್ ನಗುವರಳಿಸಿ " ಅರೇ.. ವಿನಯ್ ಇಷ್ಟು ಬೇಗ ಬಂದ್ಬಿಟ್ಟಿದ್ದಿ..!" ಎಂದು ಒಂದು ಕೈಯಲ್ಲಿ ಆಲಂಗಿಸಿದರೆ, ಅವನ ಹಿಂದೆ ನಿಂತ ಐಕ್ಯಳ ಮುಖ ವಿವರ್ಣವಾಯಿತು. ತಕ್ಷಣ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಾಗ , "ಅವಳಿಗೆ ನೀವು ಬರೋದು ಹೇಳಿರ್ಲಿಲ್ಲ ವಿನಯ್, ಅದಕ್ಕೆ ಶಾಕ್ ಆದ್ಲು, ಎಲ್ಲಿ ಅಂಕಲ್, ಆಂಟಿ, ಮತ್ತೆ ಅವಂತಿಕಾ " ಎಂದು ಕೇಳುತ್ತಿದ್ದಾಗ ಮೂವರೂ ಒಳಗೆ ಬಂದು,
"ಸರ್ ಎಲ್ಲಿ ನಮ್ಮ ಮಗಳು? " ಎಂದು ಬಂದ ಕೂಡ್ಲೇ ಸರಳ ಕೇಳಿದರು.
"ಬನ್ನಿಮಾ... ಸರ್ ಬನ್ನಿ ಮೊದಲು ಕೂತ್ಕೊಳ್ಳಿ, ಎಲ್ಲಾ ವಿವರವಾಗಿ ಹೇಳ್ತೀನಿ" ಎಂದವನು ಬಳಿಕ "ಐಕ್ಯಗೆ ಓ ಸಿ ಡಿ ಸಮಸ್ಯೆ ಇತ್ತು, ಆದರ ಗುಣ, ಎಲ್ಲದಕ್ಕೂ ಅತಿಯಾಗಿ ಪ್ರತಿಕ್ರಿಯಿಸುವುದು, ತನ್ನ ಮನದಲ್ಲಿ ಒಂದು ವಸ್ತು ಅಥವ ವ್ಯಕ್ತಿ ಹೇಗಿರಬೇಕು ಅಂತ ಅಂದ್ಕೊಳ್ತಾರೋ ಹಾಗೆಯೇ ಇರ್ಬೇಕು, ವಾಸ್ತವವನ್ನು ಒಪ್ಪಿಕೊಳ್ಳುವ ಮನಸ್ಥಿತಿ ತೀರಾ ಕಡಿಮೆ ಇರುತ್ತೆ" ಎಂದು ಅವಳು ತನಗೆ ಸಿಕ್ಕಾಗಿಂದ ಇಲ್ಲಿತನಕ ನಡೆದ ಎಲ್ಲವನ್ನೂ ಹೇಳಿದಾಗ ಶಿವರಾಮ್ ಮತ್ತು ಅವಂತಿಕಾ ಕಣ್ಣಲ್ಲಿ ನೀರಿಳಿಯಿತು.
"ಅವಳು ಸಿಕ್ಕಾಗಿಂದ ನಿಮ್ಮನ್ನೆಲ್ಲ ಸಂಪರ್ಕಿಸಿ ವಿಷಯ ಹೇಳೋಣ ಅಂತ ಪ್ರಯತ್ನ ಪಡ್ತಿರುವಾಗ್ಲೆ ವಿನಯ್ ಸಿಕ್ಕಿದ್ದು. ಅವರಿಗೆ ಎಲ್ಲಾ ವಿಷಯ ಅರ್ಥ ಮಾಡಿಸಿ ಐಕ್ಯ ಗುಣಮುಖವಾಗೋವರ್ಗು ಇಲ್ಲೇ ಇರ್ಲಿ ಅಂತ ಕೇಳ್ಕೊಂಡಿದ್ದೆ. ಈಗ ಪೂರ್ತಿ ಅಲ್ಲದಿದ್ರೂ 90% ನಿಮ್ಮ ಮಗಳು ಸರಿಯಾಗಿದ್ದಾಳೆ" ಎನ್ನುತ್ತಿದ್ದಂತೆ ಅವಳನ್ನು ಹುಡುಕಿ ಒಳಗೆ ಹೋದರು ಸರಳ, ಅವರನ್ನು ಅವಳ ಕೋಣೆಯ ಬಳಿ ಕರ್ಕೊಂಡು ಬಂದವನು ಕಣ್ಸನ್ನೆಯಲ್ಲಿ ಕರೆಯುವಂತೆ ಸೂಚಿಸುತ್ತಾನೆ.
"ಐಕ್ಯ ಪುಟ್ಟ.. ಬಾಗಿಲು ತೆಗಿ , ನೋಡು ನಿಮ್ಮಮ್ಮ ಬಂದಿದೀನಿ, ನಮ್ಮನ್ನೆಲ್ಲ ಕ್ಷಮಿಸು ಕಂದ, ದೊಡ್ಡ ತಪ್ಪಾಗಿದೆ ನಮ್ಮಿಂದ ಪ್ಲೀಸ್ ಬಾಗಿಲು ತೆಗ್ಯಮ್ಮಾ..." ಎಂದು ಸುಮಾರು ಸಲ ಬಾಗಿಲು ಬಡಿದಾಗಲೂ ತೆರೆಯದಾಗ, " ಐಕ್ಯ ಪ್ಲೀಸ್ ಬಾಗಿಲು ತೆಗಿ, ನೀನು ಒಪ್ಪದೇ ನಿನ್ನ ಎಲ್ಲೂ ಕಳ್ಸಲ್ಲ ಪ್ರಾಮಿಸ್" ಎಂದಾಗ ಬಾಗಿಲು ತೆರೆದವಳು ಬಂದು ಪುಷ್ಕರ್ನ ತೆಕ್ಕೆಗೆ ಬಿದ್ದು ಜೋರಾಗಿ ಅಳಲು ಶುರು ಮಾಡಿದಾಗ ಎಲ್ಲರ ಮುಂದೆ ಒಂದು ರೀತಿಯ ಮುಜುಗರವಾದರೂ " ನೋಡು ನಿನ್ ಮನೆಯವರೆಲ್ಲ ಬಂದಿದ್ದಾರೆ " ಎಂದಾಗ ಅವಂತಿಕಾ ಮುಂದೆ ಬಂದವಳು
"ಐಕ್ಯ.. ಸಾರಿ ಕಣೇ.. ನಿನ್ ಮನಸು ಅರ್ಥ ಮಾಡಿಕೊಳ್ಳದೆ ಹಾಗೆಲ್ಲ ವರ್ತಿಸ್ಬಿಟ್ಟೆ ಕ್ಷಮಿಸಮ್ಮ " ಎಂದಳು ಶಿವರಾಂ ಕ್ಷಮೆ ಕೇಳಿದಾಗಲೂ ಮಾತಾಡದೆ ಇದ್ದವಳು ಸ್ವಲ್ಪ ಸಮಯದ ಬಳಿಕ
"ಪುಷ್ಕರ್ ನನ್ನ ದೂರ ಮಾಡ್ಬೇಡಿ , ನೀವಿಲ್ದೆ ನನ್ ಬದುಕಲ್ಲಿ ಏನೂ ಇಲ್ಲ" ಎಂದಾಗ ಅವನ ಕಣ್ಣಲ್ಲೂ ನೀರಾಡಿತು.
"ಅವರೆಲ್ಲರಿಗೂ ಚಹಾ ತಂದ ಜಾನಕಮ್ಮನ ಬಳಿ "ಅದನ್ನಲ್ಲಿಟ್ಟು ಇವಳನ್ನು ಒಳಗೆ ಕರ್ಕೊಂಡು ಹೋಗಿ ಜೋತೆಲಿರಿ" ಎಂದವನು " ಅವಳಿಗೆ ಸ್ವಲ್ಪ ಸಮಯ ಕೊಡೋಣ, ಬನ್ನಿ ಟೀ ಕುಡಿಯಿರಿ" ಅವರನ್ನು ಕೂರಿಸಿ ಟೀ ಕೊಟ್ಟು " ನಿಮ್ಗೆ ಅಭ್ಯಂತರ ಇಲ್ದೆ ಇದ್ರೆ ನಂದೊಂದು ಮಾತು ನಡೆಸ್ಕೊಡ್ತೀರ" ಎಂದ ಪುಷ್ಕರ್.
ಇದೇನು ಪುಷ್ಕರ್ ಹೀಗೆ ಕೇಳ್ತಾ ಇದ್ದೀರಿ, ಅವಳನ್ನು ಕಾಪಾಡಿ ಇಷ್ಟರ ಮಟ್ಟಿಗೆ ಸರಿ ಮಾಡಿದ ಋಣ ಇದೆ ನಮ್ಮೇಲೆ, ಅದೇನೂಂತ ಹೇಳಿ" ಎಂದು ವಿನಯ್ ಹೇಳಿದಾಗ,
"ನನ್ಗೆ ಅಪ್ಪ ಅಮ್ಮ ಇಲ್ಲ, ರಕ್ತ ಸಂಬಂಧ ಅಂತ ಇರೋದು ಅಕ್ಕ ಒಬ್ಳು, ಈಗವಳೂ ಮದುವೆ ಆಗಿ ಅಬ್ರಾಡಲ್ಲಿ ಇದ್ದಾಳೆ, ಇನ್ನು ಇಲ್ಲಿ ನನ್ನ ಪಾಲಿಗೆ ಐಕ್ಯ ಬರೋವರ್ಗು ಎಲ್ಲಾ ಆಗಿದ್ದಿದ್ದು ಜಾನಕಮ್ಮ ಒಬ್ರೆ. ಆದರೆ ಐಕ್ಯ ಸಿಕ್ಮೇಲೆ ಮೊದಲು ಬರೀ ವೈದ್ಯನ ಕರ್ತವ್ಯ ಅಷ್ಟೇ ಅಂತ ಅಂದ್ಕೊಂಡ್ರು ದಿನಗಳು ಕಳೀತ ಅವಳೂ ಈ ಮನೇಲಿ ಒಬ್ಳಾಗಿಬಿಟ್ಲು. ನೀವೆಲ್ಲ ಒಪ್ಪಿಗೆ ಕೊಟ್ರೆ ನಾನವಳನ್ನು ಮದುವೆ ಆಗ್ತೀನಿ, ಹಾ.. ಇದು ಅನುಕಂಪ ಅಲ್ಲಾ ನಂಗೂ ಅವಳಂದ್ರೆ ಇಷ್ಟ " ಎಂದಾಗ ಎಲ್ಲರ ಮುಖವೂ ಸಂತಸದಿಂದ ಅರಳಿತು.
"ಡಾಕ್ಟ್ರೇ.. ಖಂಡಿತ ನಮ್ಮೆಲ್ಲರ ಒಪ್ಪಿಗೆ ಇದೆ" ಎಂದರು ಶಿವರಾಮ್.
"ಇನ್ನೂ ಅವಳನ್ನೇ ಕೇಳಿಲ್ಲ ನಾನು, ನಿಮ್ಮ ಒಪ್ಪಿಗೆ ಪಡೆದೇ ಮುಂದುವರೆಯೋಣ ಅಂತ ಸುಮ್ನಿದ್ದೆ" ಎಂದವನು ಅವಳಿದ್ದಲ್ಲಿಗೆ ಹೋದಾಗ ಜಾನಕಮ್ಮ ಹೊರಬಂದರು.
"ಮಂಡಿಯಲ್ಲಿ ಮುಖ ಮುಚ್ಚಿ ಅಳುತ್ತಿದ್ದವಳ ಪಕ್ಕ ಕುಳಿತು "ಐಕ್ಯ..
ಪ್ಲೀಸ್ ಅಳು ನಿಲ್ಸು... ನಾನೇನೋ ಹೇಳ್ಬೇಕು ನಿಂಗೆ" ಎಂದಾಗ ತಲೆಯೆತ್ತಿ ಅವನನ್ನು ನೋಡಿದಳು. ಕೂದಲೆಲ್ಲ ಕೆದರಿತ್ತು.
ಮುಖದ ಮೇಲೆ ಬಿದ್ದು ಕಣ್ಣೀರಿಗೆ ಅಂಟಿಕೊಂಡಿದ್ದ ಮುಂಗುರುಳನ್ನು ಸರಿಸಿ "ನೀನಂದ್ರೆ ನನ್ಗೆ ತುಂಬ ಇಷ್ಟ, ಜೀವನ ಪೂರ್ತಿ ನಂಜೊತೆ ಇರ್ತೀಯ ಐಕ್ಯ?" ಎಂದಾಗ ಮರುಮಾತಾಡದೇ ಅವನ ತೋಳಿಗೊರಗಿ " ಐ ಲವ್ ಯು ಪುಷ್ಕರ್, ನಿನ್ನೆ ಮನೆಗೆ ಹೋಗ್ತೀನಿ ಅನ್ನೋ ಯೋಚನೆ ಬಂದಮೇಲೆ ಅರಿವಾಗಿದ್ದು ನಿಮ್ಮನ್ನು ತುಂಬಾ ಹಚ್ಕೊಂಡಿದ್ದೀನಿ ಅಂತ, ಹೇಳಿದ್ರೆ ಎಲ್ಲಿ ತಪ್ಪು ತಿಳ್ಕೋತೀರೋ ಅಂತ ಹೇಳ್ದೆ ಸುಮ್ನಾದೆ" ಎಂದವಳನ್ನು ಬಳಸಿ "ಲವ್ ಯು ಟೂ ಐಕ್ಯ, ಆದರೆ ನಮ್ ಮದುವೆ ಆಗೋವರೆಗೂ ನೀನು ನಿನ್ನಪ್ಪ ಅಮ್ಮನ ಜೊತೆ ಇರ್ಬೇಕು, ಸ್ವಲ್ಪ ದಿನ ಅಷ್ಟೇ ಆದಷ್ಟೂ ಬೇಗ ಮದುವೆ ಆಗಿ ಕರ್ಕೊಂಡು ಬರ್ತೀನಿ ನಿನ್ನ " ಎಂದಾಗ ಸಪ್ಪೆಯಾಯಿತು ಅವಳ ಮುಖ. "ಐಕ್ಯ.. ನೋಡು ನಾನು ದಿನಾ ಬಂದು ನಿನ್ನ ಮಾತಾಡಿಸ್ಕೊಂಡು ಬರ್ತೀನಿ.. ಒಪ್ಕೋ ಪ್ಲೀಸ್ " ಎಂದಾಗ ಒಪ್ಪಿಗೆ ಎಂಬಂತೆ ತಲೆಯಾಡಿಸಿದಳು.
ಒಂದು ತಿಂಗಳ ನಂತರ…
ಮದುವೆಯ ದಿನ ಪುಷ್ಕರ್ನ ಅಕ್ಕ ಭಾವ ಮತ್ತು ಜಾನಕಮ್ಮನದೇ ಓಡಾಟ, ಜಾನಕಮ್ಮನ ಸಂತೋಷವನ್ನು ಹೇಳಲು ಸಾಧ್ಯವಿರಲಿಲ್ಲ.
ಅವರ ಆಸೆ ಬೇಡಿಕೆ ಈಡೇರಿದ ದಿನವದು. ಅದೆಷ್ಟು ಬಾರಿ ದೇವರಿಗೆ ಧನ್ಯವಾದ ಅರ್ಪಿಸಿದ್ದರೋ ಅವರಿಗೆ ಮತ್ತು ದೇವರಿಗಷ್ಟೆ ಗೊತ್ತಿತ್ತು.
ಪುಷ್ಕರನ ಮಡದಿಯಾಗಿ ಅವನ ಒಲುಮೆಯ ಸರೋವರದಲ್ಲಿ ಒಬ್ಬಳಾಗಿ ಸೇರಿ ಹೋದಳು ಐಕ್ಯ.
ಶುಭಂ.
ಶ್ರುತಿ ಶೆಟ್ಟಿ .…
ಮನಸ್ಸಿಗೆ ತೋಚಿದ್ದನ್ನು ಗೀಚುವ ಕಲ್ಪನಾ ಲೋಕದ ಸಂಚಾರಿ