ಸಾಟಿಯಿರದ ಬಾಂಧವ್ಯ

ಅಪ್ಪ ಮಗಳದು!

ProfileImg
22 May '24
1 min read


image

ವಿವಾಹದ ದಿನದಂದು ತಂದೆಯು ಮದುಮಗಳನ್ನು ಮಡಿಲಲ್ಲಿ ಕೂರಿಸುಕೊಳ್ಳುವ ಸಂದರ್ಭವೊಂದು ಬರುತ್ತದೆ. ಆಗ ನನ್ನ ಅಪ್ಪ ಅಳಬೇಕು ಎಂದು ನಾನು ಬಯಸಿದ್ದೆ! 
ಎಂತಹ ಕಷ್ಟ ಬಂದರೂ ಅಪ್ಪ ಎದೆಗುಂದಿದ್ದು ಕಂಡಿಲ್ಲ. ಅಪ್ಪನ ಕಣ್ಣಲ್ಲಿ ಎಳ್ಳಷ್ಟು ನೀರನ್ನು ಕಂಡವರಲ್ಲ ನಾವು. ಆದರೆ ನನ್ನ ವಿವಾಹದ ಸಂದರ್ಭ ಅದನ್ನು ನೋಡಬಯಸಿದ್ದೆ. ಯಾಕೆ? ನಮ್ಮ ಬಾಂಧವ್ಯದ ಪ್ರತೀಕವಾಗಿ.. ಎತ್ತಿ ಮುದ್ದಾಡಿ ಬೆಳೆಸಿದ ಪ್ರೀತಿಯ ಮಗಳನ್ನು ಮದುವೆ ಮಾಡಿ ಕೊಡುವಾಗ ಮಗಳು ಇನ್ನು ಮನೆಯಲ್ಲಿರುವುದಿಲ್ಲವಲ್ಲ ಎಂದು ನೆನೆಸಿ ಅಪ್ಪನ ಕಣ್ಣಲ್ಲಿ ಹನಿ ಕಾಣಿಸಿಕೊಳ್ಳಲಿ ಎಂಬ ಸಾತ್ವಿಕ ಸ್ವಾರ್ಥ ಈ ಮಗಳದ್ದು ಎನ್ನಬಹುದೇ!? ಗೊತ್ತಿಲ್ಲ.

ಅಪ್ಪನದ್ದೂ ನನ್ನದೂ ಪ್ರೀತಿಯ ರೀತಿಯೇ ಬೇರೆ! 
ಅಪ್ಪ ಯಾವುದಕ್ಕೂ ಯಾವತ್ತೂ ಇಲ್ಲ ಎನ್ನಲಿಲ್ಲ. ಸೈಕಲ್ನಿಂದ ಹಿಡಿದು ಬ್ಯಾಂಕ್ ವ್ಯವಹಾರದವರೆಗೆ ಎಲ್ಲವನ್ನೂ ಕಲಿಸಿಕೊಟ್ಟವರು ಅಪ್ಪ. [ಆವಾಗ ಬೇಕಾದಷ್ಟು ಬೈಗಳೂ free ಗೆ ಸಿಕ್ಕಿದೆ, ಇಲ್ಲ ಎನ್ನುವಂತಿಲ್ಲ!]  ಕೇಳಿದ್ದನ್ನೆಲ್ಲ ತಂದುಕೊಟ್ಟವರು ಅಪ್ಪ. ಸಣ್ಣವಳಿದ್ದಾಗಿನಿಂದಲೇ ಬರವಣಿಗೆಯನ್ನು ಪ್ರೋತ್ಸಾಹಿಸಿ ತಿದ್ದಿ ತೀಡಿ ಚೆಂದಗಾಣಿಸಿದವರೂ ಅಪ್ಪನೇ!

ಸಣ್ಣವರಿದ್ದಾಗ ನನಗೂ ತಮ್ಮನಿಗೂ ಹಾಸ್ಯಪೂರ್ಣ ಕತೆಗಳನ್ನು ತಾವೇ ಸೃಷ್ಟಿಸಿ ಹೇಳುತ್ತಿದ್ದರು. ಯಾರಾದರೂ ಮಕ್ಕಳು ಯಾವ ತರಗತಿಯಲ್ಲಿದ್ದಾರೆ ಎಂದು ಕೇಳಿದರೆ ಒಂದು ಕ್ಲಾಸ್ ಮೇಲೆಯೋ ಕೆಳಗೋ ಹೇಳಿದ್ದೂ ಇದೆ! ಈಗಲೂ ಅಷ್ಟೇ, ಅಪ್ಪ free ಇದ್ದರೆ ನಮ್ಮದು ನಗೆಯೋ ನಗೆ, ಬೊಬ್ಬೆಯೋ ಬೊಬ್ಬೆ!   ಸಹೋದರ-ಸಹೋದರಿಗಿಂತ ಕಮ್ಮಿಯಿಲ್ಲದಂತೆ ಕಿತ್ತಾಡುತ್ತೇವೆ, ಆಗ ಅಮ್ಮ ಏನಾದರೂ ಹೇಳಿದರೆ ನಾವು ಮತ್ತೆ ಒಂದೇ ಪಾರ್ಟಿ! ಹೀಗೆ ಅಪ್ಪ ಬಿಡುವಾಗಿದ್ದರೆ ನಮಗೆ ಮಜವೋ ಮಜ.

ಜೀವನದಲ್ಲಿ ಎಷ್ಟು ಕಷ್ಟ ಬಂದರೂ ಧೃತಿಗೆಡದ ಅಪ್ಪ ಓದಿದ್ದೇ ಬೇರೆ ಕ್ಷೇತ್ರ, ಕಾರ್ಯ ನಿರ್ವಹಿಸಿದ್ದೇ ಬೇರೆ ಕ್ಷೇತ್ರದಲ್ಲಿ! ಆದರೂ ಶಕ್ತಿಮೀರಿ ದುಡಿದು, ಎಲ್ಲವನ್ನೂ‌ ಕಲಿತು ನಿಭಾಯಿಸಿ ಅನುಭವ ಪಡೆದದವರು. ಮಗಳಿಗೆ ಕಷ್ಟ ಬಂದಾಗ ಒಟ್ಟಿಗೇ ಇದ್ದು ಪೂರ್ತಿ ಧೈರ್ಯ ನೀಡಿ ಶಕ್ತಿ ತುಂಬಿದವರು.
ವಿವಾಹದ ಆಮಂತ್ರಣ ಕೊಡಲು ಹೊರಟಾಗ ಹೆಚ್ಚಿನವರೂ ಕೇಳುತ್ತಿದ್ದುದು "ಅಪ್ಪಂಗೆ ಮಗಳ ಬಿಟ್ಟು ಉದಾಸನ ಆಗದಾ" ಎಂದು..
ಹೀಗೆ ಅಮ್ಮ ಮಕ್ಕಳ ಸಂಬಂಧ ಒಂದು ವಿಶೇಷ ಬಾಂಧವ್ಯವಾದರೆ ಅಪ್ಪ~ಮಕ್ಕಳ ಸಂಬಂಧ ಇನ್ನೊಂದು ರೀತಿಯಲ್ಲಿಯೇ ವಿಶೇಷ! 
ಮಗಳೆಂದರೆ ಅಪ್ಪನ ಕಣ್ಮಣಿಯಾದರೆ, ಮಗಳಿಗೆ ಅಪ್ಪ ಎಂದರೆ Evergreen hero... 

Category:Parenting and Family



ProfileImg

Written by Ankitha N

0 Followers

0 Following