*ಅನಿರೀಕ್ಷಿತ*

ProfileImg
30 Apr '24
3 min read


image


            ಸುಧೀರ ಮತ್ತು ಸರಳಾರದು ಆದರ್ಶ ದಾಂಪತ್ಯ. ಸರಳಾ ಹೆಸರಿಗೆ ತಕ್ಕಂತೆ ಸರಳತನದ ಮೂರ್ತಿಯೇ ಆಗಿದ್ದಳು.ಸುಧೀರ ಯಾವುದೋ ಸಣ್ಣ ಕೆಲಸದಲ್ಲಿದ್ದ. ಸರ್ಕಾರಿ ಕೆಲಸವಾದರೂ ಸಂಬಳ ಜಾಸ್ತಿ ಇರಲಿಲ್ಲ. ಲಂಚಕ್ಕೆ ಕೈಯೊಡ್ಡುವವನಲ್ಲ.
ಇದ್ದೊಬ್ಬ ಮಗಳ ಮದುವೆ ಸರಳವಾಗಿಯೇ ನಡೆಸಿ ಒಂದು ವರ್ಷವೇ ಆಗಿತ್ತು. 
ಮಗಳ ಮದುವೆಯ ಸಮಯದಲ್ಲಿ ಸರಳಾ ಮದುವೆಗೆ ಬಂದ ಹೆಂಗಸರ ಕೈಯಲ್ಲಿ ಚಿನ್ನದ ಬಳೆಗಳನ್ನು ನೋಡುವಾಗ ತನಗೂ ಚಿನ್ನದ ಬಳೆಗಳಿದ್ದರೆ ಎಂದು ಆಸೆ ಹುಟ್ಟಿತು. 
ಇಷ್ಟರ ವರೆಗೆ ತನ್ನ ಕೈಯಲ್ಲಿದ್ದ ಗಾಜಿನ  ಬಳೆಗಳ ಮೇಲೆ ಗಮನ ಕೊಟ್ಟಿರಲಿಲ್ಲ.

ಅದೇಕೋ ಈಗ  ಚಿನ್ನದ ಬಳೆಗಳ ಮೇಲೆ ಆಸೆ .ಆದರೆ ಹಣ ಬೇಕಲ್ಲ. ಮತ್ತೊಂದು ವರ್ಷಕ್ಕೆ ಸುಧೀರನಿಗೆ ನಿವೃತ್ತಿಯಾಗುವುದಿತ್ತು.
ಮದುವೆಯ ಗದ್ದಲ ಮುಗಿದ ನಂತರ ಒಂದು ದಿನ ಸುಧೀರ ಸಾಯಂಕಾಲ ಕಾಫಿ ಹೀರುತ್ತಿದ್ದಾಗ ಸರಳಾ ಅವನ ಬಳಿ ಬಂದು ಹೇಳಿದಳು .
'ರೀ, ಇನ್ನೊಂದು ವರ್ಷಕ್ಕೆ ನಿಮಗೆ ನಿವೃತ್ತಿಯಾಗುವುದು ತಾನೇ.'
'ಹೌದು,ಯಾಕೆ?'
' ನಿವೃತ್ತಿಯಾಗುವಾಗ ಗ್ರಾಚ್ಯುಟಿ  ಅಂತೆಲ್ಲಾ ದುಡ್ಡು ಬರುತ್ತಲ್ಲಾ'
'ಹೌದು,'ನಿರ್ಲಿಪ್ತತೆಯಿಂದ ಉತ್ತರಿಸಿದ ಸುಧೀರ'
ಸಂಕೋಚದಿಂದಲೇ ಸರಳಾ ಕೇಳಿದಳು
' ನನಗೆ ಆ ದುಡ್ಡಲ್ಲಿ ಎರಡು ಬಳೆ ತಂದು ಕೊಡುತ್ತೀರಾ'
' ಓ , ಅದಾ ಪ್ಲಾನು? ದುಡ್ಡು ಬರುವ ಮುಂಚೆಯೇ ಖರ್ಚಿಗೆ ದಾರಿ ಹುಡುಕುತ್ತೀರಪ್ಪಾ!'
ಸರಳಾಳಿಗೆ ಅವಮಾನವಾಯ್ತು. ಇಂತಹ ಉತ್ತರ ಆಕೆ ನಿರೀಕ್ಷಿಸಿರಲಿಲ್ಲ.
ಮೌನವಾದಳು.
'ತನ್ನ ಮದುವೆಯ ಸಮಯದಲ್ಲಿ ಸರಿಯಾಗಿ ಕೆಲಸವಿಲ್ಲದೆ ಕಷ್ಟ ಪಡುವಾಗ ತಾನೆಷ್ಟು ಬಡತನಕ್ಕೆ ಹೊಂದಿಕೊಂಡಿದ್ದೆ.ಯಾವತ್ತಾದರೂ ತನಗೆ ಚಿನ್ನ ಕೊಡಿ ಸೀರೆ ಕೊಡಿ ಅಂತ ತಲೆ ತಿಂದಿದ್ದೀನಾ. 
ತಾನು ಕೇಳದ ಮಾತ್ರಕ್ಕೆ ನನಗೆ ಆಸೆ ಆಕಾಂಕ್ಷೆಗಳಿಲ್ಲವಾ. ತಾನೇನು ಕೇಳಿದ್ದು.ಚಿನ್ನದ ಬಳೆಗಳು! ಮಗಳ ಮದುವೆ ಸಮಯದಲ್ಲೂ ದುಡ್ಡು ಸಾಕಾಗದು ಎಂದು ನಾನೇನು ಬೇಡಿಕೆ ಇಟ್ಟಿಲ್ಲವಲ್ಲಾ. 
ನಾನೂ ಹೊರಗಡೆ ದುಡಿದಿದ್ದರೆ ಇಂತಹ ಅವಮಾನ ಆಗುತ್ತಿರಲಿಲ್ಲ. ಮನೆಯಲ್ಲಿ ಎಷ್ಟು ದುಡಿದರೂ ಅದಕ್ಕೆ ಬೆಲೆ ಇಲ್ಲ. ಸಂಬಳವಿಲ್ಲದ ದುಡಿತ.
ನಾನು ಮಾಡುವ ಕೆಲಸಗಳನ್ನು ಕೆಲಸದವಳಿಂದ ಮಾಡಿಸಲಿ ನೋಡೋಣ.ಆಗ ಅರಿವಾಗುತ್ತದೆ ನನ್ನ ಕೆಲಸದ ಮಹತ್ವ.' ಸರಳಾ ತನ್ನ ಕಣ್ಣಲ್ಲಿ ಹರಿದ ನೀರನ್ನು ತೊಳೆಯಲು ಬಚ್ಚಲು ಮನೆಗೆ ಹೋದಳು.
ಮುಂದೆಂದೂ ಅವಳು ಬಳೆಯ ಬಗ್ಗೆ ಚಕಾರವೆತ್ತಲಿಲ್ಲ.
ಈ ಘಟನೆ ನಡೆದು ಒಂದು ವರ್ಷ ಸಂದಿದೆ.
ಸುಧೀರನಿಗೆ ಸಿಗಬೇಕಾದ ಹಣ ಕೈಸೇರಿದೆ.
ಸರಳಾಳ ಮನದ ಮೂಲೆಯಲ್ಲಿ ಬಳೆಗಳ ಆಸೆಯಿತ್ತು. ಆ ದಿನ ಬೆಳಿಗ್ಗೆಯೇ ಚಪ್ಪಲಿ ಮೆಟ್ಟುತ್ತಾ ಸುಧೀರ ಸರಳಳನ್ನು ಕೂಗಿ ಹೇಳಿದ.
ಸರಳಾ ಪೇಟೆಗೆ ಹೋಗಿ ಬರುತ್ತೇನೆ. ಇನ್ನೇನು ನಿವೃತ್ತಿ ಆಯ್ತಲ್ಲಾ.
ಭಗವದ್ಗೀತೆ ಓದಲು ಸುರು ಮಾಡಬೇಕು. ಭಾವಾರ್ಥ ಇರುವ ಗೀತೆ ಪುಸ್ತಕ ತರ್ತೀನಿ. ಇವತ್ತಿನಿಂದ ಸುರು ಮಾಡೋಣ'.
ಸರಳಾಳಿಗೆ ನಿರಾಶೆಯಾಯಿತು. ಅಬ್ಬಾ ನನ್ನ ಕೋರಿಕೆ ಇದ್ದದ್ದೇ ಒಂದು.ಅದೂ ನೆನಪಿಲ್ವಾ. ಇವರಿಗೆ ಹೆಂಡತಿ ಮೇಲೆ ಪ್ರೀತಿ ಇಲ್ವಾ. ಈ ಮೂವತ್ತು ವರ್ಷಗಳ ದಾಂಪತ್ಯದಲ್ಲಿ ಒಂದು ದಿನವಾದರೂ ಅವರ ಮನ ನೋಯಿಸಿದ್ದೆನಾ'
ಸರಳಳ ಆಲೋಚನೆ ಹೀಗೆ ಸಾಗಿತ್ತು.
ಎಷ್ಟೋ ಹೊತ್ತಾದ ನಂತರ ಸುಧೀರ್ ಬಂದ.‌ಏನು ತಂದ ಎಂಬ ಉತ್ಸಾಹವೂ ಸರಳಳಲ್ಲಿರಲಿಲ್ಲ. ಒಳಗೆ ಬಂದ ಸುಧೀರ ಒಂದು ಪುಸ್ತಕದ ಕಟ್ಟನ್ನು ಸರಳಳಿಗೆ ಕೊಟ್ಟು ಹೇಳಿದ 'ದೇವರ ಕೋಣೆಯಲ್ಲಿ ಇಡು. ಇವತ್ತು ಶುಕ್ರವಾರ ಅಲ್ವಾ .ಇವತ್ತಿನಿಂದಲೇ ಗೀತೆ ಓದಲು ಸುರು ಮಾಡೋಣ'.ಮನಸಿಲ್ಲದ ಮನಸಿನಿಂದ ಸರಳಾ ಆ ಕಟ್ಟನ್ನು ತೆಗೆದುಕೊಂಡು ದೇವರ ಕೋಣೆಯಲ್ಲಿ ಇಟ್ಟಳು. ಅವಳ ಭಾವನೆಗಳಿಗೆ ಧಕ್ಕೆಯಾಗಿತ್ತು.ಮನದಲ್ಲಿಯೇ ದುಃಖಿಸುತ್ತಿದ್ದಳು. ಸಾಯಂಕಾಲದ ಸಮಯ. ದೇವರ ದೀಪ ಹಚ್ಚಿ ಅಡಿಗೆ ಮನೆಗೆ ಹೋದಳು ಸರಳಾ.
ಸುಧೀರ ದೇವರ ಕೋಣೆಗೆ ಹೋಗಿ ಸರಳಾಳನ್ನು ಕರೆದ ,'ಸರಳಾ , ಬಾ ಇಲ್ಲಿ .ಗೀತೆ ಓದಲು ಸುರು ಮಾಡೋಣ'
ಅಸಮಾಧಾನ ಇದ್ದುದರಿಂದ ಸರಳಾ ಹೇಳಿದಳು. 'ನೀವು ಸುರು ಮಾಡಿ ನಾನು ಕೇಳುತ್ತೇನೆ. ನನಗೆ ನಾಳೆಗೆ ದೋಸೆ ಹಿಟ್ಟು ರುಬ್ಬಬೇಕು.'
ಸುಧೀರ ಹೇಳಿದ. 'ದೋಸೆಗೆ ಆ ಮೇಲೆ ರುಬ್ಬುವಿಯಂತೆ, ಈಗ ಈ ಗೀತೆ ಪುಸ್ತಕವನ್ನು ನೀನೆ ಓಪನ್ ಮಾಡಬೇಕು . ಪ್ಲೀಸ್ ಬಾ ಸರಳಾ' ಎಂದು ನಯವಾಗಿ ಕರೆದಾಗ ಅವಳು ಕೈಕಾಲು ತೊಳೆದು ಭಕ್ತಿಯಿಂದ ದೇವರ ಮುಂದೆ ಕುಳಿತು ಆ ಪುಸ್ತಕದ ಕಟ್ಟಿನ ಹೊರಕವಚವನ್ನು ಹರಿದಳು.
ಸುಧೀರ ಅವಳ ಭಾವನೆಯನ್ನು ಮುಖದಲ್ಲಿ ಅಳೆಯುತ್ತಿದ್ದ.
ಬೇಸರವಿದ್ದರೂ ಸರಳಾ ಪುಸ್ತಕಕ್ಕೆ ನಮಸ್ಕರಿಸಿ ಪುಸ್ತಕ ತೆರೆದರೆ ಅದರಲ್ಲಿತ್ತು ಫಳಫಳ ಹೊಳೆಯುವ ಸುಂದರ ಬಳೆಗಳು!!!
ಸರಳಾಳಿಗೆ ನಂಬಲಾಗಲಿಲ್ಲ. ಖುಶಿಯ ಕಣ್ಣೀರ ಧಾರೆ ಹರಿಯುತ್ತಿತ್ತು.
ಜೊತೆಗೆ ನಾಚಿಕೆಯೂ ಆಯಿತು. ಇಬ್ಬರೂ ಮಾತಾಡಲಿಲ್ಲ. ಸುಧೀರ್ ಬೆಳೆಗಳನ್ನು ತೆಗೆದುಕೊಂಡು ಅವಳ ಕೈಗೆ ಹಾಕಿದೆ.
Perfect!!!
'ಅರೇ, ನೀವು ಯಾವಾಗ ನನ್ನ ಕೈ ಅಳತೆ ತೆಗೆದುಕೊಂಡಿರಿ?'
'ಅಲ್ಲಾ ಕಣೆ, ಮೂವತ್ತು ವರ್ಷಗಳಿಂದ ನಿನ್ನ ಈ ಬಡಿಸುವ ಕೈಗಳನ್ನು ನೋಡುತ್ತಿದ್ದೇನೆ. ಇದಕ್ಕೆ ಅಳತೆ ಬೇರೆ ತೆಗೆದುಕೊಳ್ಳಬೇಕಾ' ಎಂದು ಅವಳ ಕೈಯನ್ನು ಮೃದುವಾಗಿ ಹಿಡಿದು ಒಂದು ಸಿಹಿ ಮುತ್ತನ್ನು ಇತ್ತನು. ದೀಪವೂ ಪ್ರಜ್ವಲಿಸಿತು.ಮತ್ತೆ ಗೀತೆ ಪಠಣ ಸಾಂಗವಾಗಿ ನೆರವೇರಿತು.ಇದಲ್ಲವೇ ಆದರ್ಶ ದಾಂಪತ್ಯವೆಂದರೆ?


ಪರಮೇಶ್ವರಿ ಭಟ್

Category:Stories



ProfileImg

Written by Parameshwari Bhat