ನಾವು ಭಾರತೀಯರು ಪ್ರಕೃತಿಯನ್ನು ಆದರಿಸುವವರು, ಆರಾಧಿಸುವವರು, ಪ್ರೀತಿಸುವವರು ಮತ್ತು ಪ್ರಕೃತಿಯನ್ನು ಅರಿತು ಪ್ರಕೃತಿಯೊಂದಿಗೆ ಬೆರೆತವರು. ಇದಕ್ಕೆ ಕಾರಣ ನಾವು ಸುಂದರ ಪ್ರಕೃತಿಯ ಕೃತಿಗಳು. ಹಾಗಾಗಿ ನಾವು ಪ್ರಕೃತಿಯ ನವ ವಸಂತ ಋತುವಿನ ಶುಭಾರಂಭವನ್ನು ಹಬ್ಬವಾಗಿ ಆಚರಿಸುವುದರ ಮೂಲಕ ಪ್ರತಿ ಹಬ್ಬ ಹುಣ್ಣಿಮೆಗಳನ್ನು 'ಪ್ರಕೃತಿ' ಯನ್ನು ಮೂಲವಾಗಿ ಇಟ್ಟುಕೊಂಡು ಆಚರಿಸುವುದು ವಾಡಿಕೆ.!
ಪ್ರಪಂಚಕ್ಕೆಲ್ಲ ಜನವರಿ ಒಂದನೇ ತಾರೀಖಿನಿಂದ ಹೊಸ ವರ್ಷ ಪ್ರಾರಂಭವಾದರೆ ಭಾರತಕ್ಕೆ ಮಾತ್ರ ಚೈತ್ರ ಮಾಸದ ಮೊದಲ ದಿನನವಾದ ಇಂದು ಹೊಸ ವರ್ಷದ ಪ್ರಾರಂಭ. ನಮ್ಮ ಈ ಹೊಸತನಕ್ಕೆ ಇಡೀ ಪ್ರಕೃತಿಯೇ ಸಾಕ್ಷಿಯಾಗಿ ಹೊಸಚಿಗುರಿನ ಹಸಿರುಡಿಗೆ ತೊಟ್ಟು ಮಾವು-ಬೇವು ಸುಮಗಳೊಂದಿಗೆ ವಯ್ಯಾರದಿ ಬಳುಕುತ ನಲಿಯುತ ಹೊಸ ವರ್ಷವನ್ನು ಸ್ವಾಗತಿಸುವಳು.
ಚೈತ್ರಮಾಸದ ಮೊದಲ ದಿನವಾದ ಈ ದಿನವನ್ನು ಭಾರತದಲ್ಲಿ ಹೊಸ ವರ್ಷದ ಮೊದಲ ದಿನವಾಗಿ ಹೊಸ ವರ್ಷದ ಆರಂಭದ ದಿನವಾಗಿ ಯುಗದ ಆದಿಯ(ಆರಂಭ) ಪ್ರತೀಕವಾಗಿ "ಯುಗಾದಿ" ಎಂಬ ಹೆಸರಿನಿಂದ ಹಿಂದೂ ಸಂಪ್ರದಾಯದ ಪ್ರಕಾರ ಭಾರತದಾದ್ಯಂತ ಆಚರಣೆ ಮಾಡಲಾಗುವುದು. ಹಾಗಾಗಿ ವರ್ಷದ ಮೊದಲ ಹಬ್ಬವಾದ ಯುಗಾದಿ "ಹಬ್ಬಗಳ ರಾಜ" ಎಂಬ ಪ್ರಾಮುಖ್ಯತೆಯೊಂದಿಗೆ ಪ್ರಖ್ಯಾತಿ ಪಡೆದಿದೆ. ಹಿಂದೂ ಧರ್ಮಗ್ರಂಥಗಳು ಮತ್ತು ಪಂಚಾಂಗ ಹಾಗೂ ಪುರಾಣಗಳು ಹೇಳುವ ಪ್ರಕಾರ ಯುಗಾದಿ ದಿನದಂದು ಬ್ರಹ್ಮದೇವ ಬ್ರಹ್ಮಾಂಡವನ್ನು (ವಿಶ್ವವನ್ನು) ಸೃಷ್ಟಿಸಲು ಪ್ರಾರಂಭಿಸಿದನು ಎಂದು , ಬಳಿಕ ಸಮಯ ತಿಳಿಯಲು ವರ್ಷಗಳು, ತಿಂಗಳುಗಳು, ವಾರಗಳು ಹಾಗೂ ದಿನಗಳನ್ನು ಸೃಷ್ಟಿಸಿದನೆಂದು, ಅಲ್ಲದೆ ಕಾಲಮಾನ ತಿಳಿಯಲು ಬ್ರಹ್ಮನು ನಮಗೆ ಪಂಚಾಂಗ ಮಾಡಿಕೊಟ್ಟ ದಿನವೆಂದು ಹೇಳಲಾಗಿದೆ. ಆದ್ದರಿಂದ ಯುಗಾದಿಯ ಈ ದಿನವನ್ನು ಬ್ರಹ್ಮಾಂಡ ಸೃಷ್ಟಿಯ ಮೊದಲ ದಿನವೆಂದೂ ಕೂಡ ನಂಬಲಾಗಿದೆ.!
ಅಲ್ಲದೆ ಸೀತಾ ಮಾತೇ ತನ್ನ ಕಷ್ಟದ ದಿನಗಳನ್ನೆಲ್ಲ ಕಳೆದು ರಾಮ ಲಕ್ಷ್ಮಣರೊಂದಿಗೆ ಖುಷಿಯಿಂದ ಅಯೋಧ್ಯೆಗೆ ಬಂದ ದಿನವೆಂದು, ಮತ್ತು ಸೋಮಕಾಸುರ ಎಂಬ ರಾಕ್ಷಸನು ವೇದಗಳನ್ನು ಚಾಪೆಯಂತೆ ಸುತ್ತಿ ಕದ್ದೊಯ್ದು ಸಾಗರದ ಆಳದಲ್ಲಿ ಮುಚ್ಚಿಟ್ಟಿದ್ದರಿಂದ, ಮಹಾ ವಿಷ್ಣು ತನ್ನ ಮೊದಲ ಅವತಾರವಾದ ಮತ್ಸಾವತಾರದಲ್ಲಿ ಹೋಗಿ ಆವೇದಗಳನ್ನು ತಂದು ಬ್ರಹ್ಮನಿಗೆ ಕೊಟ್ಟ ದಿನವೆಂದು, ಆನಂತರ ಬ್ರಹ್ಮನು ಸೃಷ್ಟಿ ಕಾರ್ಯ ಆರಂಭ ಮಾಡಿದನೆಂದು, ಇಂಥ ಹಲವು ಶುಭಾರಂಭಗಳಿಂದ ಯುಗಾದಿ ಆಚರಣೆ ಬಂದಿದೆ ಎಂದು ಪುರಾಣಗಳು ತಿಳಿಸುತ್ತವೆ.!
“ಬೇವು ಬೆಲ್ಲ”
ಯುಗಾದಿ ಎಂದರೆ ತಟ್ಟನೆ ನೆನಪಾಗುವುದೇ ಬೇವು ಬೆಲ್ಲ !
ನಮ್ಮ ಜೀವನ ನೋವು- ನಲಿವು ಕಷ್ಟ - ಸುಖಗಳ ಮಿಶ್ರಣ. ಹಾಗಾಗಿ ಬೇವು ಬೆಲ್ಲದ ಮಿಶ್ರಣವೂ ಕೂಡ ದಿನನಿತ್ಯದ ನಮ್ಮ ಬದುಕಿನಲ್ಲಿ ಬರುವ ಕಷ್ಟ ಸುಖಗಳ ಪ್ರತಿನಿಧಿಯಾಗಿ ಕಷ್ಟ -ಸುಖ ನೋವು -ನಲಿವುಗಳನ್ನು ಹೇಗೆ ಸಮಪ್ರಮಾಣ ದಲ್ಲಿ ಸ್ವೀಕರಿಸಿ ನಿರ್ವಹಿಸಬೇಕೆಂಬುದರ ಸೂಚಕವಾಗಿದೆ.
ಅಲ್ಲದೆ ಯುಗಾದಿ ದಿನ ಸುಖದ ಸಂಕೇತವಾಗಿ ಬೆಲ್ಲವನ್ನೂ ಹಾಗೂ ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ತಿನ್ನಲಾಗವುದು. ಇಲ್ಲಿ ಬೆಲ್ಲ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯನ್ನು ಶಮನಕಾರಿಯಾಗಿ ಮಾಡುವುದರಿಂದ, ಬೇವು - ಬೆಲ್ಲದ ಮಿಶ್ರಣ ಬದುಕಿನ ಕಷ್ಟ ಸುಖಗಳ ಪ್ರತಿಕವಾಗಿ ಬಹು ಪ್ರಾಮುಖ್ಯತೆ ಪಡೆದಿದೆ.!
ಬೇವು-ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಶ್ಲೋಕ.
ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ |
ಸರ್ವಾರಿಷ್ಟ ವಿನಾಶಾಯ
ನಿಂಬಕಂದಳ ಭಕ್ಷಣಂ||
ಆರ್ಥ: - ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ. ಎಂಬುದು ಇದರ ಅರ್ಥ.
"ಯುಗಾದಿ ಚಂದ್ರ ದರ್ಶನ"
ಈ ಯುಗಾದಿಯನ್ನು ಚಾಂದ್ರಮಾನ ಯುಗಾದಿ ಎಂದೂ ಕರೆಯುತ್ತೇವೆ. ಇಲ್ಲಿ ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬೆರಡು ಪ್ರಭೇದಗಳಿದ್ದು, ಇವು ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನ ಪದ್ಧತಿ ರೂಢಿಯಲ್ಲಿದೆ. ಹಾಗಾಗಿ ಯುಗಾದಿ ಹಬ್ಬದಂದು ಚಂದ್ರನ ದರ್ಶನಕ್ಕೆ ಬಹು ಮಹತ್ವವಿದೆ. ಈ ಯುಗಾದಿಯ ಚಂದ್ರ ತನ್ನ ಚಿತ್ತಾರದಿಂದ ವರ್ಷವಿಡೀ ಮಳೆ ಬೆಳೆಗಳು ಹೇಗಿರುತ್ತವೆ ಎಂಬುವುದನ್ನೂ ಸೂಚಿಸುತ್ತಾನೆ. ಅಲ್ಲದೆ ಭಾರತದ ಹಿಂದೂಗಳ ಎಲ್ಲಾ ಹಬ್ಬ ಆಚರಣೆಗಳು ಪ್ರಕೃತಿದತ್ತವಾಗಿ ಒಂದಕ್ಕೊಂದು ನಂಟು ಬೆಸೆದು ಕೊಂಡಿವೆಯಾದ್ದರಿಂದ ಗಣೇಶನ ಹಬ್ಬದಲ್ಲಿ ಚೌತಿಚಂದ್ರನ ದರ್ಶನವಾಗಿದ್ದಲ್ಲಿ ಅದರಿಂದಾದ ಕೆಡಕುಗಳು ಯುಗಾದಿ ಚಂದಿರನ ದರ್ಶನದಿಂದ ಪರಿಹಾರವಾಗುತ್ತದೆ ಎಂಬ ಬಲವಾದ ನಂಬಿಕೆಯೂ ಇರುವುದರಿಂದ "ಯುಗಾದಿ ಚಂದ್ರ ದರ್ಶನ" ಬಹಳ ಪ್ರಾಮುಖ್ಯತೆ ಪಡೆದಿದೆ.
Author ✍️