ಎರಡು ವರುಷಗಳ ಸವಿನೆನಪು

ProfileImg
07 Apr '24
4 min read


image

            ಹತ್ತನೇ  ತರಗತಿ ಪಾಸ್ ಆದ ಪ್ರತಿಯೊಬ್ಬ ವಿದ್ಯಾರ್ಥಿಯ ಹೃದಯ ಮಿಡಿವ ಕ್ಷಣವದು.

           ತೆರೆಮರೆಯಲ್ಲಿದ್ದ  ಪ್ರೌಢತೆ  ಅರಿವಿಗೆ ಬರೋ  ಸುಂದರ ಕ್ಷಣವದು.

        "ಯಾವ ಕಾಲೇಜು?" ಎಂದೆಲ್ಲಾ   ಕೇಳುವಾಗ ಒಂದಿಂಚು ಉದ್ದವಾದ  ಅನುಭವ.

        "ಹೋಗೋದಾದ್ರೆ ಶ್ರೀರಾಮ ಕಾಲೇಜಿಗೆ ಹೋಗಬೇಕು, ಇಲ್ಲಾಂದ್ರೆ ತೆಪ್ಪಗೆ ಮನೇಲಿ ಕೂತು  ಪಾತ್ರೆ ತೊಳಿ." ಕಾಲೇಜಿನ ಬಗ್ಗೆ ಚರ್ಚೆ ಶುರುವಾಗುವ ಮೊದಲೇ  ಮನೆಯಲ್ಲಿ ಎಚ್ಚರಿಕೆಯ  ಕರೆಗಂಟೆ.

       "ಅಯ್ಯೋ ಆ ಕಾಲೇಜಿಗೆ ಹೋಗ್ಬೇಕಾ! ಅಲ್ಲಿ ತುಂಬಾ ಸ್ಟ್ರಿಕ್ಟ್" ಎಂಬ ನನ್ನ ಮಾತನ್ನ ಕಿವಿಗೆ ಹಾಕಿಕೊಳ್ಳಲು ನಮ್ಮ ಮನೆಯ ಬೆಕ್ಕು ಕೂಡ  ಇಲ್ಲ.

        "ನಿನಗೆ  ಇರೋದು ಎರಡೇ ಒಪ್ಶನ್, ಒಂದು ಶ್ರೀರಾಮ ಕಾಲೇಜಿಗೆ ಹೋಗೋದು, ಇನ್ನೊಂದು ಮನೇಲೆ  ಕೂರೋದು, ಇದರಲ್ಲಿ   ನೀನು  ಯಾವುದಾದ್ರೂ ಒಂದು ದಾರಿನ  ಕಂಡುಕೊಳ್ಳಬೇಕು" ಬಾರಿ ಕಷ್ಟದ ಉತ್ತರ ಮನೆಯವರದ್ದು  ನಾನು ಬೇರೆ ಕಾಲೇಜಿಗೆ ಹೋಗುವೆ ಎಂದು ರಾಗ ತೆಗೆದ ಸಂಧರ್ಭದಲ್ಲಿ.

      "ಆದದ್ದು ಆಯ್ತು. ಅಲ್ಲಿಗೇ ಹೋಗೋದು ಬೇರೆ ದಾರಿ ಇಲ್ಲ"  ಬಹಳ ವೇದನೆಯಿಂದ  ಅಸ್ತು ಹೇಳಿ ಕೂಡ  ಆಯಿತು ಮನೆಯಲ್ಲಿ.

       ನಾನು ಅಸ್ತು ಅಂದರು ಅಲ್ಲದಿದ್ದರೂ ನನ್ನನ್ನ ಕೊಂಡೋಗಿ ಹಾಕೋದು ಅಲ್ಲಿಗೆ ಎಂದು ಅದಾಗಲೇ ನನಗೆ ತಿಳಿದುಹೋಗಿತ್ತು.

        "ಶ್ರೀರಾಮ ಕಾಲೇಜು ಹೇಗೆ?" ಎಂದು ಯಾರ ಬಳಿಯೇ  ನಾನು ಕೇಳಿದರು ಕೂಡ  ಹತ್ತು ಬಾಯಿ ಹೇಳುವ ಮಾತೊಂದೇ "ಬಾರಿ ಶಿಸ್ತಿನ ಕಾಲೇಜು" ಎಂದು.

         ಅಲ್ಲಿಯೇ ನನಗೆ ಹೊಟ್ಟೆಯಲ್ಲೆಲ್ಲ ಚಿಟ್ಟೆ ಬಿಟ್ಟಂತಹ ಅನುಭವ,  ಹೋಗ್ಲಿ ಬಿಡು ಏನು ಮಾಡೋದು ಮನೆಯಲ್ಲಿ ಯಾರು ನನ್ನ ಮಾತಿಗೆ ಕಿವಿಕೊಡಲ್ಲ ಅಲ್ಲಿಗೆ ಹೋಗೋದು ಎಂದು ಮನಸ್ಸನ್ನು  ತಹಬದಿಗೆ  ತರುವ ಪ್ರಯತ್ನ  ನನ್ನದು. ಭಾರಿ ಗಂಭೀರ ಚಿಂತನೆ ತಲೆಯೊಳಗೆ .

          ಹಾಗೂ ಹೀಗೂ  ನನ್ನ ಗಂಭೀರ ಚಿಂತನೆ  ಮುಗಿಯೋ ದಿನ  ಕಾಲೇಜಿನ ಮೊದಲ ದಿನ. ಅದೇನೋ ಅರಿಯದ ತಳಮಳ, ಮುಗಿಯದ ಟೆನ್ಶನ್ ಗಳು.

          ಹದಿನಾರರ  ಹರೆಯ ಮನದಲ್ಲೆಲ್ಲ ನೂರಾರು ಆಸೆ ಕನಸುಗಳನ್ನ ಇಟ್ಟುಕೊಂಡು ಅಂತೂ ಇಂತೂ ಕಾಲೇಜಿನ ಮೆಟ್ಟಿಲು ಹತ್ತಿಯಾಯಿತು.

            ಕಾಲೇಜಿಗೆ ಹೋದ  ಪ್ರತಿಯೊಬ್ಬ ವಿದ್ಯಾರ್ಥಿಗು ಕೂಡ  ಹಣೆಗೆ ತಿಲಕ ಇಡುವ  ಮೂಲಕ  ಸ್ವಾಗತ ಕೋರಿದ್ದರು. ನನಗೆ ಒಮ್ಮೆ ದೇವಸ್ಥಾನಕ್ಕೆ ಹೋದ  ಅನುಭವ. ನಾನೆಲ್ಲೂ ಕೇಳಲು ಇರಲಿಲ್ಲ, ನೋಡಿಯೂ ಕೂಡ ಇರಲಿಲ್ಲ  ಇಂತಹ ಸ್ವಾಗತ ಕೋರುವ ರೀತಿಯನ್ನು.

           ಮೊದಲ ಮಹಡಿಯಲ್ಲಿದ್ದ ಎರಡನೇ ಕೋಣೆಯೇ  ನನ್ನ ತರಗತಿ. ಕ್ಲಾಸ್ ರೂಮ್ ಗೆ ಹೊಕ್ಕಿ ಬೆಪ್ಪಿಯಂತೇ ಕೂತದ್ದು ಕೂಡ  ಆಯ್ತು.

           ನಂತರ  ಒಬ್ಬೊಬ್ಬರ ಪರಿಚಯ, ಮಿತವಾದ ಮೃದುತ್ವ ತುಂಬಿದ  ಬಾರಿ ನಯ ನಾಜೂಕಿನ  ಮಾತು ಪ್ರತಿಯೊಬ್ಬರದ್ದು ಕೂಡ. ಎಲ್ಲರ ನಿಜವಾದ ಮುಖದರ್ಶನ  ಹೊರಬರಲು ಒಂದು ತಿಂಗಳು ಕಳೆದಿತ್ತು.

           ಒಂದು ವಾರ ನಾನಂತು ಪ್ರತೀ ದಿನ  ಸಂಜೆ ಮನೆಯಲ್ಲಿ ಕಣ್ಣೀರು ಸುರಿಸೋದು, ನನಗೆ ಕಾಲೇಜು ಅಡ್ಜಸ್ಟ್ ಆಗ್ತಾ ಇಲ್ಲ, ಯಾರು ಫ್ರೆಂಡ್ಸ್ ಆಗ್ತಾ ಇಲ್ಲ ಅಂತ, ಮಿಕ್ಕವರ ಪರಿಸ್ಥಿತಿ ಕೂಡ  ಇದೇ. ನನ್ನ ಕಣ್ಣೀರಿಗೇನು ಬರವಿರಲಿಲ್ಲ ಆ ದಿನಗಳಲ್ಲಿ.

           ದಿನ ಕಳೆದಂತೆ ಅಪರಿಚಿತರೆಲ್ಲ ಪರಿಚಿತರಾಗುತ್ತಾ ಹೋದರು ಶ್ರೀರಾಮನ ನೆಲೆಯಲ್ಲಿ.

         "ಆರು ಸೈಜ್ ನ ಸ್ಟಿಕರ್ ಇಡಬೇಕು ಹಣೆಗೆ, ಉಗುರು ಬಿಡುವಂತಿಲ್ಲ, ಕೈಯಲ್ಲಿ ಬಳೆ ಬೇಕು, ಜಡೆಯನ್ನು ಹೆಣೆದಿರಬೇಕು(ಹುಡುಗಿಯರಿಗಿಂತ ಹುಡುಗರೇ  ಜಡೆ  ಬಿಟ್ಟಿದ್ದು ಹೆಚ್ಚು )"  ಆಗೆಲ್ಲ ನಮಗೆ ಅನಿಸುದ್ದು ಉಂಟು ಮರಳಿ ಶಾಲೆಗೆ ಬಂದೆವಾ ಹೇಗೆ ಎಂದು.ಸಿಟಿಯಲ್ಲೇ ಬೆಳೆದ ನಮಗೆ ಇದೆಲ್ಲ ಒಮ್ಮೆ ಉಸಿರು ಕಟ್ಟಿಸಿದ್ದಂತು ನಿಜ. ಆದರೆ ನಮಗಾರಿಗೂ  ಆಗ ಅರಿವಿಗೆ ಬಂದಿರಲಿಲ್ಲ, ಇವರಿಗೆ ಬೈಯುತ್ತ ಬೈಯುತ್ತ ನಮ್ಮ ಸಂಸ್ಕಾರವನ್ನು ನಾವು ಕಲಿಯುತಲಿದ್ದೇವೆ  ಎಂದು.

         ಇನ್ನು ಹುಡುಗರಿಗೋ ಎರಡು ಕಿವಿ ಕೂಡ ಚುಚ್ಚಿರಬೇಕು ಒಂದೇ ಕಿವಿ ಚುಚ್ಚಿರಬಾರದು, ಹಾಗೇನಾದ್ರೂ ಒಂದೇ ಕಿವಿ ಚುಚ್ಚಿದ್ದರೆ ಅವರ ಕಿವಿಯೊಮ್ಮೆ ಚಪಾತಿ ಹಿಟ್ಟಿನ ಹದಕ್ಕೆ ದೈಹಿಕ ಶಿಕ್ಷಣದ ಉಪನ್ಯಾಸಕರ ಕೈಯಲ್ಲಿ ಕಿವಿ ಹದವಾಗುವುದಂತೂ  ನಿಜ . ಇನ್ನು ಬಾಕ್ಸ್ ಕಟ್ ಮಾಡುವಂತಿಲ್ಲ, ಆ ಕಟ್ ಇಲ್ಲ ಈ ಕಟ್ ಇಲ್ಲ, ಮೀಸೆ ಬೆಳೆಯುವ ಪ್ರಾಯದಲ್ಲಿ ಒಂದಷ್ಟು ಫ್ಯಾಷನ್ ಹುಚ್ಚು ನಮಗೆಲ್ಲ. ನಮ್ಮ ಯಾವ  ಫ್ಯಾಷನ್ ಗಳಿಗೂ ಕೂಡ ಅಲ್ಲಿ ಅಸ್ತು ಅನ್ನೋ ಒಂದೇ ಒಂದು ಜೀವ ಇರಲಿಲ್ಲ.

     ನಮಗಾರಿಗೂ  ಕೂಡ ಆಗ ತಿಳಿದಿರಲಿಲ್ಲ ನಾವೆಲ್ಲ ಹಿಂದೂವಾದಿಗಳಾಗಿ ಬದಲಾಗುತ್ತಿದ್ದೇವೆ, ನಮ್ಮ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುತ್ತಿದೇವೆಂದು. ಈಗ ಅದನ್ನೆಲ್ಲ ಯೋಚಿಸಿದರೆ ಹೆಮ್ಮೆಯೆನಿಸುತ್ತದೆ.

          ಅಂತೂ ಇಂತೂ ಶಿಸ್ತಿನ  ಗಣಿ ಎಂದು ಹೇಳುತ್ತಿದ್ದ ವಿದ್ಯಾಮಂದಿರಕ್ಕೆ ಬಂದ ಮೇಲು ಕೂಡ ಕೆಲವರ ಹವಾ ಏನು ಕಮ್ಮಿಯಾಗಿರಲಿಲ್ಲ. ಅಡ್ಜೆಸ್ಟ್ಮೆಂಟ್ ನಲ್ಲಿ ತಲೆಗೆ ಹಚ್ಚಿಕೊಳ್ಳುತ್ತಿದ್ದ ಜೆಲ್ ಗಳು, ಐಡಿ ಕಾರ್ಡ್ ನ ಹಿಂಬದಿ ಅಥವಾ ವಾಚ್ ನ ಹಿಂಬದಿ ಪುಟ್ಟದೊಂದು ಬಿಂದಿ ಮನೆಗೆ ಹಿಂತಿರುಗಿ ಹೋಗೋವಾಗ ಹಣೆಯ ಮಧ್ಯೆ ಇಟ್ಟುಕೊಳ್ಳಲು, ಅದೂ ನೆನಪಾದ್ರೆ ಮಾತ್ರ ಆ ಪುಟ್ಟ ಬಿಂದಿಗೆ ನಮ್ಮ ಐಡಿ ಕಾರ್ಡ್ ನ ಹಿಂದೆ ಜಾಗ. ಇಲ್ಲ ಅಂದ್ರೆ ಮನೆಯಲ್ಲಿ ಯಾವುದಾದರೂ ಒಂದು ಡಬ್ಬದ ಮೂಲೆಯಲ್ಲಿ ಬಿದ್ದಿರುತ್ತಿತ್ತು.

        ಎಲ್ಲರಿಗು ಕೂಡ ಖುಷಿ ನೀಡೋ ಸಮಯವೆಂದರೆ ಪ್ರೇಯರ್ ನ ಸಮಯ. ಐದು ನಿಮಿಷ ಅಂತ ಅಲ್ಲಿ ಸಾಲಾಗಿ ಕೂರೋಕೆ ಬೇಕು ಬೇಕಂತಲೇ ಅರ್ಧ ಗಂಟೆ ಮಾಡಿ ಬಿಡುತ್ತಿದ್ದೆವು ನಾವೆಲ್ಲ, ಫಸ್ಟ್ ಪಿರಿಯಡ್ ಮಿಸ್ ಆಗ್ಬೇಕಲ್ಲ ಹಾಗಾಗಿ.ಆ ಸಮಯದಲ್ಲಿ ಪಡೆದುಕೊಂಡ ಬೈಗುಳವೆಷ್ಟೋ ಆ ದೇವರೇ ಬಲ್ಲ. ಅಲ್ಲಾದರೂ ನಮ್ಮ ಪಾಡಿಗೆ ಕೂರುವಂತೆ ಇದೆಯಾ ಉಹು ಇಲ್ಲವೇ ಇಲ್ಲ. ಶಿಕ್ಷಣ ದರ್ಶಿನಿ (ಪುಸ್ತಕ ) ಮತ್ತು ಭಗವದ್ಗೀತೆ  ತಂದಿದ್ದೇವ  ಎಂದು ಒಂದು ಸುತ್ತಿನ ಪರಿಶೀಲನೆ . ಅವನ್ನೆಲ್ಲ ತಂದಿದ್ದರೂ  ಕೂಡ  ಒಂದು ಭಯ ನಮಗೆಲ್ಲ.

       ಇನ್ನು ಉಪನ್ಯಾಸಕರ ವಿಷಯಕ್ಕೆ  ಬರೋಣ. ಮೇಡಂ, ಸರ್ ಎಂದು ಅವರನ್ನ ಕರಿಯುವಂತಿಲ್ಲ  ನಮ್ಮ ವಿದ್ಯಾಕೇಂದ್ರದಲ್ಲಿ. ಮಾತಾಜಿ ಮತ್ತು ಶ್ರೀಮಾನ್  ಎಂದು ಕರಿಯಬೇಕು. ಮೊದಮೊದಲು ಸರ್ ಮೇಡಂ ಎಂದು ಬಾಯಿ ತಪ್ಪಿ ಬರೋವಾಗ   ದೊಡ್ಡ ತಪ್ಪು ಮಾಡಿದಂತೆ  ತಲೆ ಕೆಳಗೆ ಮಾಡಿ ನಿಂತದ್ದು ಕೂಡ ಉಂಟು. ನಂತರ ಅವೆಲ್ಲ ಅಭ್ಯಾಸವಾಗಿ  ಹೋಗಿತ್ತು.

       ಕೆಲವು ಲೆಕ್ಚರರ್ಗಳು ನಮ್ಮ ಕಣ್ಣಿಗೆ ಹಾರ್ಟ್ ಫೇವರಿಟ್ ಆದರೆ  ಇನ್ನು ಕೆಲವೊಬ್ಬರು ಸಿನಿಮಾದಲ್ಲಿ ಬರುವಂತಹ  ವಿಲ್ಲನ್ ಗಳಂತೆ.

       ಒಂದೊಂದು ಲೆಕ್ಚರರ್ಗಳ  ಒಂದೊಂದು ಡೈಲಾಗ್ಗಳು. ಯಾವುದನ್ನೂ ಕೂಡ  ಮರೆಯಲು  ಸಾಧ್ಯವೇ ಇಲ್ಲ.ನಮ್ಮ ಅದ್ಭುತ  ಫೇಷಿಯಲ್  ಎಕ್ಸ್ಪ್ರೆಶನ್ ಕಂಡು  ಇಂಗ್ಲಿಷ್ ಮರೆತ ಲೆಕ್ಚರರ್ ಗಳು  ಅದೆಷ್ಟೋ ಪಾಪ.

        ಪ್ರತಿಯೊಬ್ಬ ವಿದ್ಯಾರ್ಥಿ ಕೂಡ  ಖುಷಿ ಪಟ್ಟು ಮಾಡುತ್ತಿದ್ದ ಕೆಲಸ  ಒಂದೇ ಮಧ್ಯಾಹ್ನದ  ಭೋಜನ. ಶುಕ್ರವಾರ  ಬಂದರೆ  ಸಾಕು  ಎಲ್ಲರಿಗೂ ಕೂಡ  ಅದೇನೋ ಖುಷಿ  ಕಾರಣ ಇಷ್ಟೇ ಶುಕ್ರವಾರ ಬಂದರೆ  ಪಾಯಸ  ಸಿಗುತ್ತಲ್ಲ ಹಾಗಾಗಿ. ಮಿಕ್ಕ ದಿನಗಳಲ್ಲೆಲ್ಲ ಇರುವೆಗೂ ಕೂಡ  ಪೈಪೋಟಿ  ಕೊಡೊ ರೇಂಜ್ ಅಲ್ಲಿ ಊಟ ಮಾಡೋ ದಿ  ಗ್ರೇಟ್ ಪ್ರತಿಭಾವಂತರೆಲ್ಲ ಶುಕ್ರವಾರ ಎಲ್ಲರಿಗಿಂತಲು ಮೊದಲು ಬಟ್ಟಲಲ್ಲಿದ್ದ ಅನ್ನವನ್ನು ಕಾಲಿ ಮಾಡಿ ತೆಪ್ಪಗೆ ಪಾಯಸದ  ನಿರೀಕ್ಷೆಯಲ್ಲಿರುತ್ತಿದ್ದರು.

          ಇನ್ನು ಆಗಾಗ  ಬಂದು  ಹೋಗೋ ಕಲ್ಚರಲ್  ಪ್ರೋಗ್ರಾಮ್ಗಳು , ಕಾಂಪಿಟಿಷನ್ ಗಳು, ಮುಖ್ಯವಾಗಿ  ಕ್ರೀಡೋತ್ಸವ ಅದನ್ನ ಅಂತೂ ಜೀವನದಲ್ಲೇ ಮರೆಯಲು  ಅಸಾಧ್ಯ.ಕ್ಲಾಸ್ ನಡೀತಾ  ಇರ್ಲಿಲ್ಲ ಅಲ್ವಾ ಹಾಗಾಗಿ.

       ಇನ್ನು ಯಾವಾಗಲು ಕೂಡ  ಲೆಕ್ಚರರ್ಗಳು  ನಮ್ಮ ಗುಣಗಾನ  ಮಾಡೋವಾಗ  ಅನಿಸ್ತಾ ಇತ್ತು ಫ್ರೀಡಂ  ಅನ್ನೋದೇ ಇಲ್ಲ ಅಂತ. ಅದೆಷ್ಟೋ ಮುಗ್ಧ ಮುಖಗಳ  ಹಿಂದಿದ್ದ ಕ್ರಿಮಿನಲ್ ಐಡಿಯಾಗಳು. ಲೆಕ್ಚರರ್ಗಳು  ಬೋರ್ಡ್ ನ ಕಡೆ  ಮುಖ  ಮಾಡಿದರಾಯಿತು  ಅದಕ್ಕೆ ಕಾದವರಂತೆ ಬಾಯಿಗೆ  ಚಾಕಲೇಟ್ ಹಾಕಿ ಹರಟೆ  ಹೊಡೆಯೋ ಬ್ಯಾಕ್ ಬೆಂಚರ್ಸ್ಗಳು. ಕಣ್ಣು ಬಿಟ್ಟೆ ನಿದ್ದೆ ಮಾಡೋ ಮಿಡ್ಲ್ ಬೆಂಚ್ ಮಲ್ಟಿ ಟಾಲೆಂಟೆಡ್ಗಳು. ಆಕ್ಟಿಂಗ್ ಅನ್ನೆ ಕರಗತ  ಮಾಡಿಕೊಂಡಿರೋ ಫಸ್ಟ್ ಬೆಂಚ್ ವಿದ್ಯಾರ್ಥಿಗಳು, ಅಬ್ಬಬ್ಬಾ ಮುಗಿಯದ  ಸವಿನೆನಪುಗಳು.

           ಇನ್ನು ಮುಖ್ಯವಾದ  ವಿಷಯ , ಪ್ರತಿಯೊಬ್ಬ ವಿದ್ಯಾರ್ಥಿಗಳ  ಬೆಂಬಿಡದೇ ಕಾಡುವ  ಕ್ರಶ್. ಬ್ರೇಕ್ ಟೈಮ್ ಅಲ್ಲದಿದ್ದರೂ ಕಾರಿಡಾರ್ ಅಲ್ಲಿ ರಿಸರ್ವ್ ಆಗಿರುತ್ತಿದ್ದ ಸೀಟ್ ಗಳು. ಒಂದೇ ಒಂದು ಅವಳ  ಅಥವಾ  ಅವನ ಕಣ್ಣೋಟದ ನಿರೀಕ್ಷೆಯಲ್ಲಿದ್ದ ಅತೃಪ್ತ ಆತ್ಮಗಳು  ಅದೆಷ್ಟೋ. ಬೆಂಚ್ ನ ಮೇಲೆ ಮೂಡಿ  ಬರುತಲಿದ್ದ ಪ್ರೇಮ್ ಕಹಾನಿಗಳು. ವಿಧ ವಿಧವಾದ ಶಿಲ್ಪ ಕಲಾಕೃತಿಗಳು. ನಮಗಾರಿಗೂ  ಗೊತ್ತೇ ಆಗಲಿಲ್ಲ  ಇದು ಬರೀ ಆಕರ್ಷಣೆ  ಎಂದು.

        ಇವೆಲ್ಲದರ  ನಡುವೆ  ಸದಾ  ನಮ್ಮ ಮುಂದೆ ಒಳ್ಳೆಯದನ್ನೇ ಬಯಸುವಂತೆ  ನಟನೆ ಮಾಡುತ್ತ ನಮ್ಮ  ಹಿಂದೆ ಹಿಡಿ ಶಾಪ ಹಾಕುತ್ತಿದ್ದ ಮುಖಗಳೆಷ್ಟೋ. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ  ಎರಡು  ವರುಷ  ನಿಮಿಷಗಳಂತೆ  ಕಳೆದೇ ಹೋಯಿತು ನಮ್ಮ ಕಣ್ಣ ಮುಂದೆ.

       ಹಲವು ನೋವು ನಲಿವಿನ ಮರೀಚಿಕೆಯೊಂದಿಗೆ ಕಳೆದೇ ಹೋಯಿತು ಪಿಯುಸಿ   ಎಂಬ  ಸುಂದರ  ದಿನಗಳು.

     ಬಯಸದೇ ಬಂದ  ಭಾಗ್ಯವಾಗಿದೆ  ಕಾಲೇಜಿನಲ್ಲಿ ಕಳೆದ  ಪ್ರತೀ ಕ್ಷಣಗಳು...... ಮರಳಿ ಪಡೆಯಲಾಗದು ಮತ್ತೆಂದೂ ಕೂಡ  ಬೇಕೆಂದರು..…

          *****************************

-ಚೈತ್ರ

ಇದು ನನ್ನನುಭವ.ಮತ್ತೆ ನಿಮ್ಮದು? ತಪ್ಪದೇ ಹಂಚಿಕೊಳ್ಳಿ, ಓದಿ ಖುಷಿ ಪಡುವ.

 

Category:Personal Experience



ProfileImg

Written by Chaithra