ಎಪ್ಪತ್ತು ದಾಟುವ ಜೀವವೇ ನನ್ನದಲ್ಲ
ಇದು ಇಪ್ಪತ್ತರ ಹರೆಯ ||
ನಕ್ಕಾಗ ಜಗ, ಬಿಕ್ಕಿ ಅಳುತ್ತಿದ್ದೆ
ಹೋ..ಅದು ಉದಿಸಿದ ಗಳಿಗೆ
ಆಗ ತಾನೇ ಮೈ ತಡವಿದ್ದೆ
ಆದರೆ,
ಇದು ಇಪ್ಪತ್ತರ ಹರೆಯ |
ಬಾರದೆಂದಾ ಸಿಹಿಯು ಬಾಲ್ಯದೊಳಗಾಡಿದ್ದು
ಜೊತೆಗಿದ್ದ ಜೀವಗಳ್ ಇಂದಿಲ್ಲವೆಂದಾಗ
ಕುರುಹುಗಳೇ ಬೂದಿಯೊಳ್
ಹೇ…ಮಣ್ಣಾಗೋ ಹೆದರಿಕೆಯೆ
ಇದು ಇಪ್ಪತ್ತರ ಹರೆಯ ||
ಅದೇನಕ್ಕೂ ಅಡಿಪಾಯ ಹಾಸಿಲ್ಲ
ಬರೆದಿಲ್ಲ-ಬಿಡುವಿಲ್ಲ-ಬೆರೆತದ್ದೂ ಇಲ್ಲ
ಬಾಳು ಒಂದೆಂದ ಮೇಲೂ
ಚಿತ್ತಾರ ತುಸುವಿಲ್ಲ ;
ಇದು ಇಪ್ಪತ್ತರ ಹರೆಯ |
ಹಸಿದಾಗ ಉಂಡದ್ದು-ಬೇಕೆಂದ ಪಡೆದದ್ದು
ಸದ್ದು ಗದ್ದಲದೊಳಗೂಡಿ ಬೆಳೆದದ್ದು
ಗೆಜ್ಜೆ ಕೇಳಿಸಲೇ ಇಲ್ಲ
ಸನಿಹವಾಗುತಿದೆ ಸರದಿ
ಇದು ಇಪ್ಪತ್ತರ ಹರೆಯ ||
ನಿಲ್ಲುವುದು ಈ ಮನವು
ನಿಲ್ದಾಣದಲ್ಲೊಮ್ಮೆ ತಿರುಗಿ
ನೆನಪೇಗೆ ನಿಮಗಾಗುವುದೋ ಅರಿಯೆ
ನೆನಪಿಸುವೆ ‘ನಾ’
ಇದು ಇಪ್ಪತ್ತರ ಹರೆಯ |
ಹತ್ತಾರು ಮನದೊಳಗೆ ಹುತ್ತ ಕಟ್ಟಲೇಬೇಕು
ಎತ್ತ ಮಿಟುಕಿದರೇನು
ಕುಸಿದ ಹುತ್ತವೂ ಹುಲುಸೇ..
ಹಸುರು ಚಿಗುರಲದಕೆ
ಇದು ಇಪ್ಪತ್ತರ ಹರೆಯ ||