ಏ...ಬಳೆ ಇಟ್ಕೊಳ್ರೆ ಬಳೆಗಾರ ಬಂದಿದಾನೆ ಎಂದು ಅತ್ತೆ ಕರೆದಾಗ ಕೈ ಸೆರಗಿಗೊರಸಿ ಜಗಲಿಗೆ ಓಡಿಹೋಗಿದ್ದೆ. ಅದೇನೊ ಗೊತ್ತಿಲ್ಲ ಬಣ್ಣದ ಬಳೆಗಳನ್ನು ನೋಡಿದಾಗ ಆಕಾ಼ಶದಲ್ಲಿ ಕಾಮನಬಿಲ್ಲು ಕಂಡ಼಼ಷ್ಟೇ ಸಂತಸ. ಯಾವ ಬಣ್ಣದ ಬಳೆ ಆರಿಸಲೀ ಎನ್ನುವುದೇ ಗೊಂದಲ. ಎಲ್ಲಾ ಬಣ್ಣವೂ ಚಂದವಲ್ಲವೇ? ಒಂದಕ್ಕಿಂತಲೂ ಒಂದು ಬಣ್ಣ ಎದ್ದು ಕಾಣುತ್ತದೆ, ಒಂದು ಆಕಾಶದ ನೀಲಿಯಾಗಿದ್ದರೆ ಇನ್ನೊಂದು ಮಳೆಗಾಲದ ಹಸಿರು ಬಣ್ಣ.. ಮತ್ತೊಂದು ಮದರಂಗಿಯ ಕೆಂಪು ಬಣ್ಣ.. ಗೊಂದಲವಾಗುವುದೇ ಆಯ್ಕೆ ಹಲವಾದಾಗ. ಎಲ್ಲಾ ಬಳೆಗಳನ್ನು ತಿರುಗಿಸಿ ಮುರುಗಿಸಿ ನೋಡಿ ಆಕಾಶದ ನೀಲಿ ಬಣ್ಣದ ಬಳೆಯನ್ನಾರಿಸಿದ್ದೆ. ಅಕ್ಕ ಪಕ್ಕದ ಮನೆಯವರೂ ಬಂದು ಜಗುಲಿಯ ಮೇಲೆ ಜಮಾಯಿಸಿದ್ದರು. ಮನೆಯಲ್ಲಾ ಬಳೆಗಳ ಶಬ್ಧದಿಂದ ತುಂಬಿಹೋಗಿತ್ತು. ಹಿಂದಿನ ದಿನಗಳಲ್ಲಿ ಬಳೆಗಳು ಸವೆದು ಒಡೆದ ಮೇಲೆಯೇ ಬೇರೆ ಬಳೆ ತೊಡುತ್ತಿದ್ದರು. ಈಗಿನಂತೆ ಬೆಳಿಗ್ಗೆ ಒಂದು ಸಂಜೆ ಒಂದು ಬಳೆ ಧರಿಸುವ ಅಭ್ಯಾಸ ಇರಲಿಲ್ಲ. ಗಾಜಿನ ಬಳೆಗಳ ದನಿಯಿದ್ದಾಗಲೇ ಮುತ್ತೈದೆಯರಿಗಂದು ಗೌರವ. ಬಳೆಗಾರನಿಗೆ ಕೈ ಮುಂದೆ ಮಾಡಿ ಬಳೆ ತೊಡಿಸಿಕೊಂಡಿದ್ದೆ. ಬಳೆ ತೊಟ್ಟಿದ್ದಾಯ್ತಲ್ಲ ಹಿತ್ತಲಿನ ಸೊಪ್ಪು ತಂದು ಪಲ್ಯ ಮಾಡು ಎಂದು ಅತ್ತೆ ಕೂಗಿದರು.ಬಳೆಯ ಶಬ್ಧ ಮಾಡುತ್ತಾ ಹಿತ್ತಲಿಗೋಡಿದೆ. ಮಾಗಿಯ ದಿನಗಳಲ್ಲಿ ನೆಲ ಹದ ಮಾಡಿ, ಬೀಜ ಭಿತ್ತಿ, ಮೇಲಿಂದ ಮಣ್ಣು ಮುಚ್ಚಿ, ಅದರ ಮೇಲೆ ಒಂದಷ್ಟು ಒಣಹುಲ್ಲ ಹೊದಿಕೆ ಹೊದಿಸಿ ವಸಂತನ ಬರುವಿಕೆಗೆ ಕಾಯುವ ಕೋಗಿಲೆಯಂತೆ ದಿನಾ ಕಾಯುತ್ತಿದ್ದೆ. ಆರೈಕೆ ಕಂಡ ಗಿಡ ಸೊಂಪಾಗಿ ಬೆಳೆದಿತ್ತು. ನಾವು ಬೆಳೆದ ಬೆಳೆಯನ್ನು ಕಿತ್ತು ತಂದು ಅಡುಗೆ ಮಾಡುವ ಖುಷಿಯೇ ಬೇರೆ. ಪಕ್ಕದ ಮನೆಯ ಅಜ್ಜಿ ಇವತ್ತು ಸೊಪ್ಪಿನ ಅಡುಗೆಯಾ? ಎಂದು ಬೇಲಿಯ ಬದಿಯಿಂದ ಕೂಗಿದ್ದರು. ಅವರಿಗೂ ಸೊಪ್ಪನ್ನು ಕೊಟ್ಟು ನೀವೂ ಇದರ ಅಡುಗೆ ಮಾಡಿ ಎಂದಿದ್ದೆ. ಮನೆಯಲ್ಲಿರುವ ಯಾವುದೇ ಬೆಳೆಯನ್ನು ಹಂಚಿ ತಿನ್ನುವುದು ಹಳ್ಳಿಗಳಲ್ಲಿ ಸಾಮಾನ್ಯವಾದ ವಾಡಿಕೆ. ಅಂತೂ ಸೊಪ್ಪಿನ ಅಡುಗೆ ಮಾಡಿ ತಿಂದದ್ದೂ ಆಯಿತು.
ಮಕ್ಕಳು ಸಂಜೆ ಶಾಲೆಯಿಂದ ಬಂದಾಗ ತುಪ್ಪ ಹಾಕಿ ದೊಸೆ ಮಾಡಿ ಮೇಲಿಂದ ಜೋನೀ ಬೆಲ್ಲ ಹಾಕಿಕೊಟ್ಟೆ. ಹೌದು! ಅದು ಆಲೆಮನೆಯ ಸಮಯ. ಬಿಸಿಬೆಲ್ಲ ತಿನ್ನುವುದೆಂದರೆ ಎಲ್ಲರಿಗೂ ಇಷ್ಟ. ಅದರ ರುಚಿ ತಿಂದವರಿಗಷ್ಟೇ ಗೊತ್ತು. ಮಲೆನಾಡಿನಲ್ಲಿ ಆಲೆಮನೆಯೆಂದರೆ ಹಬ್ಬದ ವಾತಾವರಣ. ಅವರಿವರು ಅನ್ನುವ ಪ್ರಶ್ನೆಯೇ ಇಲ್ಲ. ಯಾರು ಬಂದರೂ ತಿನ್ನುವಷ್ಟು ಬೆಲ್ಲ, ಕಬ್ಬಿನಹಾಲು. ಎರಡು ಕಬ್ಬು ಗ್ಯಾರಂಟಿ. ಅದರಲ್ಲೂ ಹತ್ತಿರದವರಿಗೆ ಖಾರ ಹಚ್ಚಿದ ಮಂಡಕ್ಕಿಯ ಸೇವೆ.ಅದೊಂದು ಸಾರ್ವತ್ರಿಕ ಸಂಭ್ರಮ.
ಹಾಗೆಯೇ ಸುಗ್ಗಿ ಕೂಡಾ.. ಅವರಿವರ ಮನೆಗೆ ಹೋಗಿ ಅದೂ ಇದೂ ಕಥೆ ಹೇಳುತ್ತಾ ೪-೫ ಡಬ್ಬ ಅಡಿಕೆ ಸುಲಿದು ಹಣ ತಂದರೆ ಬಂದ ಹಣ ಊರ ದೇವರ ಜಾತ್ರೆಗೆ ಮಕ್ಕಳ ಜೇಬು ಸೇರುತ್ತದೆ.ಮನೆಯ ಸುಗ್ಗಿಯಾದರಂತೂ ಮುಗಿದೇ ಹೋಯಿತು. ಕೊನೆ ಕೊಯ್ಯುವವನಿಗೆ ,ಕೊನೆ ಹೊರುವವನಿಗೆ ಟೀ,ಕಾಫಿ,ಕಷಾಯ ಕೊಟ್ಟು ಮುಗಿಯುವುದೇ ಇಲ್ಲ. ಮಾತನಾಡುತ್ತಾ ಅಡಿಕೆ ಸುಲಿಯುತ್ತಿದ್ದರೆ ಮಲೆನಾಡ ಚಳಿ ಕೂಡಾ ಗಮನಕ್ಕೆ ಬರುದಷ್ಟು ಹಾಡು-ಹರಟೆ ತುಂಬಿಕೊಂಡಿರುತ್ತದೆ.
ಹಾಲು ಕರೆದುಕೊಂಡು ಬಾ ಎಲ್ಲರಿಗೂ ಕಾಫೀ ಕೊಡುವ ಹೊತ್ತಾಯಿತು ಎಂದಾಗ ಮೈದುನ ಬಿಂದಿಗೆ ತುಂಬಾ ನೊರೆಹಾಲು ಕರೆದು ತಂದಿದ್ದ. ಕೊಟ್ಟಿಗೆಯಲ್ಲಿ ಹಸುಕರುಗಳು ತುಂಬಿರುವುದ ನೋಡುವುದೇ ಒಂದು ಆನಂದ.ದೀಪಾವಳಿಯ ಹಬ್ಬದಲ್ಲಿ ಮಲೆನಾಡಿಗರ ಸಂಭ್ರಮ ನೋಡಬೇಕು. ಅದು ಜಾನುವಾರುಗಳ ಹಬ್ಬ. ಮುಂಜಾವಿನಲಿ ಕೊಟ್ಟಿಗೆಯನ್ನು ಶುಚಿಗೊಳಿಸಿ, ದನಕರುಗಳ ಮೈ ತೊಳೆದು, ಅವುಗಳಿಗೆ ಬಣ್ಣ ಬಡಿದು, ಕೊರಳಿಗೆ ಘಂಟೆ, ಅಡಿಕೆ,ಹಿಂಗಾರ,ಪಚ್ಚೆ ತೆನೆ ಸೇರಿಸಿ ಮಾಡಿದ ಹಾರವನ್ನು ಕಟ್ಟಲಾಗುವುದು. ಅಂಗಳವನ್ನು ರಂಗೋಲಿಯಿಂದ ಸಿಂಗರಿಸಿದರೆ ಹಬ್ಬವನ್ನು ಸ್ವಾಗತಿಸಿದಂತೆ. ಅತ್ತ ಅಡುಗೆ ಮನೆಯಲ್ಲಿ ಹೊಂಬಣ್ಣದ ಹೋಳಿಗೆ, ಬೆಲ್ಲದ ಪಾಯಸ, ಕೋಸುಂಬರಿ ಹೀಗೆ ಒಂದೊಂದೇ ರೆಡಿಯಾಗುತ್ತಿರುತ್ತದೆ. ಬಚ್ಚಲಿನ ಹಂಡೆಯನ್ನು ಜೇಡಿ-ಕೆಮ್ಮಣ್ಣು, ಹೂವಿನ ಹಾರ ಮತ್ತು ಕಾಡುಬಳ್ಳಿಯಿಂದ ಸಿಂಗರಿಸಿ ನಂತರ ಎಣ್ಣೆ ಸ್ನಾನ ಮಾಡುತ್ತಾರೆ. ಹೊಸಬಟ್ಟೆ ಧರಿಸಿ ಮನೆದೇವರಿಗೆ ಪೂಜಿಸಿ ಜಾನುವಾರುಗಳನ್ನು ಮೆರವಣಿಗೆಯ ಮೂಲಕ ಬೂತಪ್ಪನ ಗುಡಿಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಪೂಜೆಯಾದ ನಂತರ ದನ-ಕರುಗಳನ್ನು ಕಾಡಿಗೆ ಅಟ್ಟುತ್ತಾರೆ. ನಂತರ ಮನೆಗೆ ಬಂದು ಕೃಷಿ ಉಪಕರಣಗಳು, ತೆಂಗಿನಮರ, ತುಳಸಿಗಿಡ ಮುಂತಾದವುಗಳಿಗೆ ಮಂಗಳಾರತಿ ಮಾಡಿ ನಂತರ ಬಲೀಂದ್ರನಿಗೆ ಪೂಜೆ ಸಲ್ಲಿಸಿ ಹಬ್ಬದೂಟ ಮಾಡುತ್ತಾರೆ. ಸಂಜೆ ದನಕರುಗಳು ಬಂದ ನಂತರ ಅವುಗಳಿಗೆ ದೃಷ್ಠಿ ತೆಗೆದು ಆರತಿ ಮಾಡುತ್ತಾರೆ. ನಂತರ ಪಂಜು ಹೊತ್ತಿಸಿ ಮನೆಯ ಸುತ್ತ- ಮುತ್ತ
ಹಣತೆ ಹಚ್ಚಿ ಬಲೀಂದ್ರನನ್ನು ಮತ್ತೆ ಅವನ ಲೋಕಕ್ಕೆ ಕಳಿಸುವ ಪದ್ಧತಿಯುಂಟು. ತವರು ಮನೆಯವರು ಬಂದು ಹಬ್ಬಕ್ಕೆ ಕರೆದುಹೋಗಿದ್ದರು. ತವರಿಗೆ ಹೋಗದೇ ತುಂಬಾ ದಿನಗಳಾಗಿತ್ತು. ಎರಡು ದಿನದ ಮಟ್ಟಿಗಾದರೂ ಹೋಗಿ ಬರಬೇಕು ಎಂದುಕೊಂಡಿದ್ದೆ. ಗಂಡನ ಮನೆಯಲ್ಲಿ ಎಷ್ಟೇ ವೈಭವವಿದ್ದರೂ ತವರು ಮನೆಯ ಊಟ ಮಾಡಿದಂತಾಗುವುದಿಲ್ಲ.
ಪಾತ್ರೆ ಬಿದ್ದ ಶಬ್ಧವಾಯಿತು. ಇವಳೇ..ಪಕ್ಕದ ಮನೆ ಬೆಕ್ಕು ಬಂದಿರಬೇಕು ಎಂದು ಮನೆಯವರು ಕೂಗಿದಾಗ ಬೆಚ್ಚಿಬಿದ್ದು ಎದ್ದು ಕುಳಿತೆ. ಇಷ್ಟು ಹೊತ್ತು ಹಳೆಯ ದಿನಗಳಿಗೆ ಮರಳಿಬಿಟ್ಟಿದ್ದೆನೇ ಎಂದುಕೊಳ್ಳುತ್ತಾ ನೆಲದ ಮೇಲಿದ್ದ ಕನ್ನಡಕ ಕಣ್ಣಿಗೇರಿಸಿ ಬಾಗಿಲಿಗೆ ಒರಗಿಸಿದ್ದ ಊರುಗೋಲು ಹಿಡಿದು ಅಡುಗೆ ಮನೆಯೆಡೆಗೆ ನಡೆದೆ. ದೊಡ್ಡ ಮನೆ. ಖಾಲಿ-ಖಾಲಿ, ಅತ್ತೆ- ಮಾವ ಈಗಿಲ್ಲ. ನಾದಿನಿಯರು ಗಂಡನ ಮನೆ ಸೇರಿದರೆ, ಆಡಿಸಿ ಬೆಳೆಸಿದ ಮಕ್ಕಳು ವಿದೇಶದಲ್ಲಿ. ಯಾರಿಗೂ ಮಾತನಾಡಲು ಸಮಯವಿಲ್ಲ.ಮನೆಗೆ ಬರುವುದಂತೂ ದೂರದ ಮಾತು.ಅವರ ಧ್ವನಿಯಾದರೂ ಕೇಳೋಣವೆಂದರೆ ಮಲೆನಾಡಿನಲ್ಲಿ ನೆಟವರ್ಕ್ ಸಿಗುವುದೇ ಕಷ್ಟ. ಇಲ್ಲಿ ಬಿಟ್ಟು ಸಿಟಿಗೆ ಹೋಗೋಣವೆಂದರೆ ಉತ್ತಿ-ಭಿತ್ತಿದ ಮಲೆನಾಡ ಮಣ್ಣು ನಮ್ಮನ್ನು ಬಿಡುತ್ತಿಲ್ಲ. ಇಲ್ಲಿ ಯಾರ ಹಂಗಿಲ್ಲ.ನಮ್ಮದೇ ಕೈ ನಮ್ಮದೇ ಬಾಯಿ. ಜೇಡ ಬಲೆ ಹೆಣೆಯುತಿತ್ತು. ಎಲ್ಲೆಡೆ ಅದರದ್ದೆ ಕಾರು-ಬಾರು.ಒಂದು ಕಾಲದಲ್ಲಿ ಒಪ್ಪ-ಓರಣವಾಗಿದ್ದ ಮನೆ ಹೆಗ್ಗಣದ ಗೂಡಾಗಿದೆ. ಗೋಡೆಯಲ್ಲಿರುವ ಬಿರುಕಿನಂತೆ ಇಂದಿನ ಸಂಬಂಧಗಳೂ ಕೂಡಾ ಅಷ್ಟಕ್ಕಷ್ಟೆ.
ಹಿತ್ತಲಲ್ಲಿ ತುಳಸೀಗಿಡ ಒಣಗಿದೆಯಲ್ಲೇ..ತುಳಸಿ ಒಣಗಬಾರದು ಎಂದು ಗೂರಲು ಧ್ವನಿಯಲ್ಲಿ ನನ್ನವರು ಕೂಗಿದ್ದರು. ಹಿಂದಿನ ದಿನಗಳಲ್ಲಿ ತುಳಸೀ ಕಟ್ಟೆಯ ಅಕ್ಕಪಕ್ಕದ ಜಾಗವನ್ನು ಸಗಣಿ ಹಾಕಿ ಸಾರಿಸಿ , ರಂಗೋಲಿ ಇಟ್ಟು ,ಅರಿಶಿಣ-ಕುಂಕುಮ ಗೆಜ್ಜೆವಸ್ತ್ರದಿಂದ ಪೂಜಿಸುತ್ತಿದ್ದೆ. ಇಂದು ಅದೇ ಕೈಗಳು ನೆರಿಗೆಗಟ್ಟಿವೆ, ನಡುಗುತ್ತಿವೆ . ತುತ್ತು ಅನ್ನ ಬೇಯಿಸುವುದೂ ಕಷ್ಟವಾಗಿದೆ. ಮನೆಯ ಹೊಸ್ತಿಲಿಗೆ ರಂಗೋಲಿ ಹಾಕಿ ಅದೆಷ್ಟು ದಿನವಾಯಿತೋ..
ಕಳೆದ ವರುಷ ಕಟ್ಟಿದ ತೋರಣ ಬಾಗಿಲಲ್ಲಿ ಇನ್ನೂ ಒಣಗುತ್ತಿದೆ.ಕೈ ಬಳೆಗಳು ಬಣ್ಣ ಕಳೆದುಕೊಂಡಿವೆ. ಬಳೆಗಾರ ಬಾರದೇ ಅದೆಷ್ಟು ವರುಷಗಳುರುಳಿಹೋದವೋ.. ಟಿವಿ ಯ ಹಾವಳಿಯಿಂದ ಊರಲ್ಲಿ ಸ್ಮಶಾನ ಮೌನ. ಮಾತನಾಡೋಣವೆಂದರೆ ಒಬ್ಬರೂ ಕಾಣುವುದಿಲ್ಲ. ಹಕ್ಕಿ- ಗುಬ್ಬಿಗಳ ಸದ್ದೂ ಅಡಗುತ್ತಿದೆ. ಬೇಲಿ ಬದಿಯ ಮಲ್ಲಿಗೆ ಅರಳಿ ಅಲ್ಲೇ ಒಣಗುತ್ತಿದೆ. ತಲೆ ಬಾಚುವ ಶಕ್ತಿಯೇ ಇಲ್ಲದೆ ಕೂದಲು ಗಂಟು ಕಟ್ಟಿಕೊಂಡಿದೆ. ಮಲ್ಲಿಗೆ ಮುಡಿಯುವ ಆಸೆ ದೂರವಾಗಿದೆ. ಕೊಟ್ಟಿಗೆಯಲ್ಲಿ ಗೋವುಗಳ ಜಾಗದಲ್ಲಿ ಗುಜರೀ ವಸ್ತುಗಳ ಸುರಿಯಲಾಗಿದೆ. ಹಿಂದಿದ್ದ ನೆಮ್ಮದಿ ಮಾಯವಾಗಿದೆ. ದುಡ್ಡು ಕೊಟ್ಟರೆ ಎಲ್ಲಾ ಸಿಗುತ್ತದೆ ಎಂಬುದು ಈಗಿನವರ ಭಾವನೆ. ಯಾವುದರಲ್ಲೂ ಗುಣಮಟ್ಟವಿಲ್ಲವಷ್ಟೆ ! ದುಡ್ಡಿಗೆ ಬೆಲೆಯಿರುವ ಭಾವನೆಯಿಲ್ಲದ ಬರಡು ದಿನಗಳಿವು.
ಹಿಂದೆ ಹಿಟ್ಟು ಮಾಡುತ್ತಿದ್ದೆವು,ರೊಟ್ಟಿ ತಟ್ಟುತ್ತಿದ್ದೆವು.ರಾಗಿ ಬೀಸುತ್ತಿದ್ದೆವು. ಬೆಳೆ ಬೆಳೆದು ಆರೋಗ್ಯವಾಗಿದ್ದೆವು. ಇಂದು ಎಲ್ಲದಕ್ಕೂ ಯಂತ್ರಗಳು. ಮನುಷ್ಯನೂ ಕೂಡಾ ! ಯಂತ್ರದಂತಾಗಿದ್ದಾನೆ. ಯಾಕೋ ಗಂಟಲು ಒಣಗುತ್ತಿದೆ.ನೀರು ಕುಡಿಯೋಣವೆಂದು ಕೊಡಕ್ಕೆ ಕೈ ಹಾಕಿದರೆ ಕೊಡವೂ ಖಾಲಿ-ಖಾಲಿ. ಬೋರ್ವೆಲ್ಗಳ ಹಾವಳಿಯಿಂದ ಸದಾ ತುಂಬಿ ತುಳುಕುತ್ತಿದ್ದ ಬಾವಿ ಕೂಡಾ ಬರಿದಾಗಿದೆ. ನಲ್ಲಿ ನೀರು ಕುಡಿದೇ ದಾಹ ತೀರಿಸಿಕೊಂಡೆ. ಎಷ್ಟೋ ಜನರಿಗೆ ಅಡುಗೆ ಮಾಡಿ ಬಡಿಸಿದ ಕೈ ಈಗ ತುತ್ತು ತಿನ್ನದಷ್ಟು ನಿತ್ರಾಣಗೊಂಡಿದೆ. ಕಣ್ಣಂಚಿನ ಹನಿಯು ಜಾರದಂತೆ ಸೆರಗ ಅಡ್ಡ ಹಿಡಿದಿದ್ದೆ. ಒಣಗಿದ ಅಡಿಕೆ ಮರದ ನಡುವಿನ ಚಂದ್ರ ಸುಟ್ಟ ರೊಟ್ಟಿಯಂತೆ ಕಾಣುತ್ತಿದ್ದ.
ಅವನಿಗೂ ಭೂಮಿಯ ಬದುಕು ಅಸಹ್ಯವೆನಿಸಿರಬೇಕು.
- ಸೌಮ್ಯ ಜಂಬೆ
0 Followers
0 Following