ಪ್ರಯಾಸವಾದರೂ ಮುದಕೊಟ್ಟ ಪ್ರಯಾಣ_೫

ಚಾರ್ಲ್ಸ್ ಡಿಗಾಲೆ ನಿಲ್ದಾಣದಲ್ಲಿ ( ೨)

ProfileImg
04 May '24
3 min read


image

ಹಿಂದಿನ ಕಂತಿನಿಂದ 

ಟ್ರಾಮಿನಿಂದ ಇಳಿದು ಸೆಕ್ಯುರಿಟಿ ಚೆಕ್ ಗೆ ಸರತಿಯ ಸಾಲಿನಲ್ಲಿ ನಿಂತೆವು. ನಮಗೆ ಮಾರ್ಗದರ್ಶನ ಮಾಡಿದ ಮಹಿಳೆ ಆ ಸಾಲಿನಲ್ಲಿದ್ದಳು.ನಮ್ಮನ್ನು ನೋಡಿದಾಗಲೆಲ್ಲಾ  ಮುಗುಳ್ನಗುತ್ತಿದ್ದಳು. 
ಈ ಸಲ ಸೆಕ್ಯುರಿಟಿ ಚೆಕ್ ಗೆ ಶೂ ,ಬಳೆ ,ಮಾಂಗಲ್ಯ ಸರ ,ಸ್ವೆಟರ್  ತೆಗೆಯಬೇಕಾಗಿತ್ತು.ಬೆಂಗಳೂರಿನಲ್ಲಿ ಸುಮ್ಮನೆ ಸರ ತೋರಿಸಿ ಅಂತ ಮಾತ್ರ ಹೇಳಿದ್ದು. ಮಾಂಗಲ್ಯ ಸರ ತೆಗೆದಿರಲಿಲ್ಲ. ಅದೇಕೋ ತಲೆಯಲ್ಲಿದ್ದ  ಕ್ಲಿಪ್ ತೆಗೆಯಲು ಹೇಳಲಿಲ್ಲ ಆದರೆ .ಈ ಸಲ ಯಾವುದೇ ತೊಂದರೆಯಾಗಲಿಲ್ಲ. ಕೆಲವು ಸಲ ಸೆಕ್ಯುರಿಟಿ ಚೆಕ್ಕಿಂಗಿಗೆ  ತುಂಬಾ ಜನರಿದ್ದರೆ  ತಡವಾಗುವುದೂ ಉಂಟು. ಸೀನಿಯರ್ ಸಿಟಿಜನ್ ಗೆ ಬೇರೆ ಸಾಲು . ಹಾಗಾಗಿ ಬೇಗನೇ ಚೆಕ್ ಆಗಿಬಿಡುತ್ತದೆ.  ಯಾವುದೇ ತೊಂದರೆಯಾಗದೆ ನಮ್ಮ ಗೇಟಿನ ಕಡೆಗೆ ನಡೆದೆವು. ಅಲ್ಲಿ ಲಾಬಿಯ ಯಲ್ಲಿ ಕುಳಿತುಕೊಂಡೆವು.
ನಮ್ಮ ಜೊತೆ ಇದ್ದ ನಾಯಕರಿಗೆ ನಾವು ಹಾದು ಬಂದ  ಒಂದು ಹಾಲ್ ನಲ್ಲಿ ಫೋಟೋ ತೆಗೆದುಕೊಳ್ಳಬೇಕೆಂದು ಆಸೆ. ಈಗ ವಿಮಾನ ಹತ್ತುವ ಜಾಗ ತಿಳಿಯಿತಲ್ಲೊ ಸ್ವಲ್ಪ ಸುತ್ತಾಡ ಬಹುದು ಅಂತ ಅವರ ಆಲೋಚನೆಯೋ ಏನೋ.ಹಾಗಾಗಿ ಪುನಃ ಹಿಂದೆ ಹೋಗಿ ಫೋಟೋ ತೆಗೆದುಕೊಳ್ಳುವಾ ಅಂತ ನನ್ನ ಯಜಮಾನರಿಗೆ ಕೇಳಿದಾಗ ಅವರು ನೀವು ಹೋಗಿಬನ್ನಿ ನಾನು ಬರುವುದಿಲ್ಲ ಅಂತ ಹೇಳಿದರು. ನಾನು ನಾಯಕ್ ದಂಪತಿಗಳೊಂದಿಗೆ ಸ್ವಲ್ಪ ದೂರದಲ್ಲಿದ್ದ  ವಾಶ್ ರೂಮಿಗೆ ಹೋಗಿ ಬಂದೆವು. ಹೊರಗಡೆ ಲಾಬಿಯಲ್ಲಿ ಜನರು  ಅವರ ವಿಮಾನಕ್ಕಾಗಿ ಕಾಯುತ್ತಿದ್ದರು. ಅಲ್ಲೊಂದು ಫೋಟೋ ಕ್ಲಿಕ್ಕಿಸಿದ್ದರು ನಾಯಕ್. ಅವರು ಮತ್ತೂ ಹಿಂದಕ್ಕೆ ಹೋಗಿ ಫೋಟೋ ತೆಗೆಯುವವರಿದ್ದರು.
ನನಗೆ ನಮ್ಮ ಮನೆಯವರಿಗೆ ಕೋಪ ಬರುವುದು ಎಂಬ ಆತಂಕ ಮತ್ತು  ಸಮಯವೂ ಆಗುತ್ತಿದೆ ಎಂಬ ಕಾತರ.  ಲಗ್ಗೇಜ್ಗಳು ಅವರ ಸುಪರ್ದಿಯಲ್ಲಿತ್ತಲ್ಲಾ.
ಮಹಿಳೆಯರಂತೆ ಅವರಿಗೆ ಲಗ್ಗೇಜ್ ಕಾಯುತ್ತಾ ಕುಳಿತುಕೊಳ್ಳಲಾಗದು. ಯಾವಾಗಲೂ ನಾನು ಲಗ್ಗೇಜನ್ನು ಕಾಯುತ್ತಿದ್ದರೆ ಅವರು ತಿರುಗಾಡಿ ಬರುತ್ತಿದ್ದರು. ಕೆಲವು ಸಲ ಅವರು ಬರುವುದು ತುಂಬಾ ಹೊತ್ತಾಗಿ  ನಮಗೆ ಆತಂಕ ಹುಟ್ಟಿಸಿದ್ದೂ ಇದೆ. ಇಲ್ಲಿ ಮಾತ್ರವಲ್ಲ ರೈಲು , ಬಸ್ ಪ್ರಯಾಣದಲ್ಲೂ. 😊. ಈಗ ಅಲ್ಲಿ ಅವರಿಗೆ ಕುಳಿತುಕೊಳ್ಳುವುದು ಕಷ್ಟ ಅಂತ ನನಗೆ ಗೊತ್ತಿತ್ತು. ಹಾಗಾಗಿ ನಾನು ಹಿಂದಿರುಗುವ ಇಚ್ಛೆ ವ್ಯಕ್ತಪಡಿಸಿದೆ.ಆದರೆ  ನಾಯಕರಿಗೆ ಹಿಂದೆ ಹೋಗಿ ಅವರು ಹೇಳಿದ ಜಾಗದಲ್ಲಿ ಫೋಟೋ ತೆಗೆಯುವ ಆಸೆ. ಅವರ ಹೆಂಡತಿ '' ಇವರಿಗೊಂದು  ಫೋಟೋದ ಹುಚ್ಚು" ಅಂತ ಹೇಳಿದರು. ನಾನು ಹೋಗುತ್ತೇನೆ ಅಂತ ಹೇಳಿ ಹಿಂದಿರುಗಿದೆ. 
ಈಗ ನನಗೂ ಆತಂಕ .ಯಾಕೆಂದರೆ ಗೇಟು ಓಪನ್ ಆದರೆ ನಮಗೆ ಅವರ ಲಗೇಜನ್ನು ಬಿಟ್ಟು ಹೋಗಲಾಗುವುದಿಲ್ಲ. ಅಲ್ಲದೆ ಯಾರಿಗಾದರೂ ಕಾಯುವುದಕ್ಕೂ ಅಧಿಕಾರಿಗಳು ಸಮಯ ಕೊಡುವುದಿಲ್ಲ. 'ಅವರು ಬರ್ತಾರೆ, ನೀವು ಹೋಗಿ' ಅಂತಾನೇ ಹೇಳುತ್ತಾರೆ.
ಆ ದಂಪತಿಗಳು ಮೀನ ಮೇಷ ಮಾಡುತ್ತಾ ಅಲ್ಲೇ ಉಳಿದರು. ನಾನು ಹಿಂದಿರುಗಿದಾಗ ಯಜಮಾನರು ಗರಂ  ಆಗಿದ್ದರು. ನಮ್ಮೆಲ್ಲರ ಲಗ್ಗೇಜು ಕಾಯ್ದುಕೊಂಡು ಕೂತಿದ್ದರಲ್ಲಾ. 'ಎಷ್ಟು ಹೊತ್ತು ನಿಮಗೆ ..ಕೋವಿಡ್ ಫಾರಂ ತುಂಬಬೇಕು 'ಅಂತ ತಂದಿಟ್ಟ ಫಾರ್ಮ್ ತೋರಿಸಿದರು. ಅದರಲ್ಲಿ ಸಹಿಮಾಡಿ ನಾಯಕ್ ದಂಪತಿಗಳಿಗಾಗಿ ಕಾದೆವು. ಅವರು ಬರಲಿಲ್ಲ. ವಿಮಾನಕ್ಕೆ ಹೋಗಲು ಗೇಟು ಓಪನ್ ಆಗಿತ್ತು. ಗೇಟಿನ ಕಡೆಗೆ ತೆರಳುವಲ್ಲಿ  ಪ್ರಯಾಣಿಕರ ಗುಂಪು ಕೋವಿಡ್ ಅಧಿಕಾರಿಗಳ ಸುತ್ತ ಇತ್ತು. ಅಷ್ಟರಲ್ಲಿ ನಾಯಕ್ ದಂಪತಿಗಳು ಬಂದರು. ಅವರಿಗೂ ಫಾರ್ಮ್ ಕೊಟ್ಟು ನಾವು ಕೋವಿಡ್ ಸರ್ಟಿಫಿಕೇಟ್ ಪರಿಶೀಲನೆ ಮಾಡುತ್ತಿದ್ದ ಅಧಿಕಾರಿಯತ್ತ ಸಾಗಿದೆವು. ಬೇಗ ಬನ್ನಿ ಅಂತ ನಾಯಕ್ ದಂಪತಿಗಳಿಗೆ ಹೇಳಿದಾಗ ಅವರು ಇನ್ನೂ ಟೈಮಿದೆಯಲ್ಲಾ ಅಂತ ಹೇಳಿ , 'ಇಲ್ಲಿ  ಕುಳಿತುಕೊ' ಅಂತ ತಮ್ಮ ಪತ್ನಿ ಯಲ್ಲಿ ಹೇಳಿದರು. ಅವರಿಗೆ  ಆತಂಕ  ಆದಂತೆ ಕಾಣಲಿಲ್ಲ. ಯಾಕೆಂದರೆ ಗೇಟು ತೆರೆದುದು ಅವರಿಗೆ ಗೊತ್ತಾಗಲಿಲ್ಲ.
ಗೇಟು ತೆರೆದಿದೆ ಪ್ರಯಾಣಿಕರೆಲ್ಲಾ ವಿಮಾನ ಹತ್ತುತ್ತಿದ್ದಾರೆ ಅಂದಾಗ 'ಓಹ್ ಅದು ನಮ್ಮದಾ' ಅಂತ ಎದ್ದರು.
ಆ ವಿಮಾನ ನಿಲ್ದಾಣದಲ್ಲಿ ವ್ಯವಸ್ಥೆ ಸರಿ ಇಲ್ಲ. ಅಲ್ಲಿ ಹೊಸದಾಗಿ ಬರುವವರಿಗೆ ಕೋವಿಡ್ ಸರ್ಟಿಫಿಕೇಟ್ ಕೇಳಿದರೆ ಸಾಕಲ್ವಾ .ಪ್ರಯಾಣ ಮುಂದುವರಿಸಿ ಬಂದ ನಮ್ಮಂತವರಿಗೆ ಅದರ ಅಗತ್ಯ ಇಲ್ಲ. ಕೋವಿಡ್ ಇಲ್ಲ ಅಂತ ಸರ್ಟಿಫಿಕೇಟ್ ಮಾಡಿಸಿಯೇ ಬಂದುದಲ್ಲವೇ. ಹಾಗೆ ಚೆಕ್ ಮಾಡಬೇಕಿದ್ದರೂ ಬೇರೆ ಕೌಂಟರ್ ಮಾಡಬಹುದಿತ್ತು.ನಾವು ಎಲ್ಲಾ ದಾಖಲೆಗಳ ಪ್ರಿಂಟೌಟ್ ತೆಗೆದುಕೊಂಡುದು ಒಳ್ಳೆಯದಾಯಿತು. ನಮ್ಮ ಯಜಮಾನರು ಎಲ್ಲಾ ಮೊಬೈಲಿನಲ್ಲಿದೆಯಲ್ಲಾ ಯಾಕೆ ಪ್ರಿಂಟೌಟ್ ಎಂದು ಹೇಳುತ್ತಿದ್ದರು.. ಆದರೆ ಮೊಬೈಲು ತೆರೆದು ತೋರಿಸುವುದಕ್ಕಿಂತ ಹಾರ್ಡ್ ಕಾಪಿ ಇಟ್ಟುಕೊಳ್ಳುವುದೇ ಒಳ್ಳೆಯದು. ಚೆಕ್ ಮಾಡಲು ಸುಲಭ. ಒಬ್ಬ  ಪ್ರಯಾಣಿಕ ಮೊಬೈಲಿನಲ್ಲಿ  ದಾಖಲೆ ತೋರಿಸುತ್ತಿದ್ದ. ಅದೇನಾಯಿತೋ ಅಸಮಾಧಾನದಿಂದ ಅಧಿಕಾರಿಯೊಂದಿಗೆ ವಾದಿಸುತ್ತಿದ್ದ. ಮೊಬೈಲಿನಲ್ಲಿ ಎಲ್ಲಾ ಇದ್ದರೂ ಕಾಗದದಲ್ಲಿ ನೋಡಲು ಸುಲಭವಾಗುತ್ತದೆ. ಕೆಲಸ ಬೇಗ ಆಗುತ್ತದೆ.
ಕೋವಿಡ್ ಸರ್ಟಿಫಿಕೇಟ್ ಚೆಕ್ಕಿಂಗ್ ಸಾಲಿನಲ್ಲಿ ಹೊಸ ಪ್ರಯಾಣಿಕರು ,ಅಂದರೆ ಪ್ಯಾರಿಸ್ ನಲ್ಲೇ ಪ್ರಯಾಣ ಪ್ರಾರಂಭಿಸಿದವರು ಮತ್ತು ಹಳೆ ಪ್ರಯಾಣಿಕರೆಲ್ಲಾ ಸೇರಿಕೊಂಡಿದ್ದರು.
ಹಾಗಾಗಿ ಒಂದು ರೀತಿಯ ದೊಂಬಿ.ಅದಕ್ಕೆ ಕಾರಣ ಸರಿಯಾಗಿ ಸೂಚನೆ ಇಲ್ಲದುದು.
ವಾಸ್ತವವಾಗಿ ಅಲ್ಲಿ ಎರಡು ಕಡೆ ಚೆಕ್ ಮಾಡುತ್ತಿದ್ದರು.ಒಂದು ಹಳೆ ಪ್ರಯಾಣಿಕರಿಗೆ ಮತ್ತೊಂದು ಹೊಸ ಪ್ರಯಾಣಿಕರಿಗೆ .ಒಂದು ಕಡೆ ಅಧಿಕಾರಿ ಸುಮ್ಮನೆ ಇದ್ದ.ಅದು ನಮ್ಮಂಥ ಹಳೆ ಪ್ರಯಾಣಿಕರಿಗೆ. ಅಂದರೆ ಬೇರೆ ಫ್ಲೈಟಿನಿಂದ ಬಂದವರಿಗೆ.
ಆದರೆ ನಮಗೆ ತಿಳಿಯಬೇಕಲ್ಲಾ. ಮಾರ್ಗದರ್ಶನ ಮಾಡುವವರೂ ಇಲ್ಲ.‌ಆಮೇಲೆ ನಮ್ಮನ್ನು  ಆ ಅಧಿಕಾರಿಯೇ ಕರೆದ. ಅವರು ಹಳೆಪ್ರಯಾಣಿಕರ ಸರ್ಟೀಫಿಕೇಟ್ ಚೆಕ್ ಮಾಡುವವರು. ಹಾಗೆ ಮೊದಲೇ ತಿಳಿಸಿ ಎರಡು ಸಾಲು ಬೇರೆ ಬೇರೆ ಮಾಡಬಹುದಿತ್ತು. ನಮಗೆ ಆ ಫಾರ್ಮ್ ತುಂಬಿಸುವ ಅಗತ್ಯವೂ ಇರಲಿಲ್ಲ. ಹೇಗೂ ಸರ್ಟಿಫಿಕೇಟ್ ಇತ್ತಲ್ಲಾ.ಆದರೂ ಅವರ ಡಾಕ್ಯುಮೆಂಟಿಗಾಗಿಯೋ ಏನೋ ಕೋವಿಡ್ ಇಲ್ಲ ಎಂಬ ಫಾರ್ಮಿಗೆ ನಮ್ಮ ಸಿಹಿ ಹಾಕಿಸಿಕೊಂಡರು.
.ನಾಯಕ್ ದಂಪತಿಗಳು  ಸರತಿಯ ಸಾಲಿನಲ್ಲಿ ನಿಂತಿದ್ದರು.ಈ ಗಡಿಬಿಡಿಯಲ್ಲಿ ನಾನು ನನ್ನ ಕ್ಯಾಬಿನ್ ಬ್ಯಾಗ್ ಮರೆತಿದ್ದೆ. ಅದನ್ನು ಒಂದು ಕಡೆ ಇಟ್ಟು ಮುಂದೆ ಹೋಗಿದ್ದೆ. ದೇವರ ದಯೆ , ಅಕಸ್ಮಾತ್ ಆಗಿ ಆ ಬ್ಯಾಗಿನ ನೆನಪಾಯಿತು. ಹಿಂದೆ ಹೋಗಿ ಹುಡುಕಿದೆ. ಜನರ ನಡುವೆ ಅನಾಥವಾಗಿ ಇತ್ತು. ಅದನ್ನು ತೆಗೆದುಕೊಂಡು  ಮುಂದೆ ಹೋಗಿ ನಾಯಕ್ ದಂಪತಿಗಳಿಗೆ ಕಾಯುತ್ತಾ ನಿಂತೆವು. ಆಗ 'ಇಲ್ಲಿ ನಿಲ್ಲಬೇಡಿ. ವಿಮಾನಕ್ಕೆ ಹತ್ತಿ' ಅಂತ ಅಧಿಕಾರಿಗಳೊಬ್ಬರು ಹೇಳಿದರು ಹಾಗಾಗಿ ಮುಂದೆ ಹೋದೆವು.. ನಾವು ನಮ್ಮಸೀಟು  ಹುಡುಕಿ ಕುಳಿತುಕೊಂಡೆವು. ಸ್ವಲ್ಪ ಹೊತ್ತಿನಲ್ಲಿ ನಾಯಕ್ ದಂಪತಿಗಳೂ ಬಂದರು.


ನಮ್ಮ ಮುಂದಿನ ಸೀಟೇ ಅವರದ್ದು. ಈ ಸಲ ನಮ್ಮ ಸೀಟು ಮಧ್ಯದ ಸಾಲಿನಲ್ಲಿ ಇತ್ತು. ತೊಂದರೆ ಇಲ್ಲ . ಈ ಸಲ ನಮ್ಮ ಪಕ್ಕದಲ್ಲಿ ಬಿಳಿಯವನಿದ್ದ.ಮತ್ತೆ ವಿಮಾನಲ್ಲಿ ಕುಳಿತಾಯಿತಲ್ಲಾ ಅಂತ ನಿಟ್ಟುಸಿರು ಬಿಟ್ಟೆವು.
ವಿಮಾನ ಟೇಕ್ ಆಫ್ ಆದಾಗ ೧೦.೫೪.ಅಲ್ಲಿಯ ಲೋಕಲ್ ಟೈಮ್.

ಭಾರತದಲ್ಲಿ ಆಗ ಸಮಯ ೨_೨೪ ಅಪರಾಹ್ನ.
ಮುಂದಿನ  ವಿಮಾನ ಪ್ರಯಾಣವೆಲ್ಲಾ ಸಾಗರದ ಮೇಲೆಯೇ.
ಮುಂದೆ….

✍️ಪರಮೇಶ್ವರಿ ಭಟ್

Category:Travel



ProfileImg

Written by Parameshwari Bhat