ಪ್ರಯಾಸವಾದರೂ ಮುದ ಕೊಟ್ಟ ಪ್ರಯಾಣ _೧

ಬನ್ನಿ ಪ್ರಯಾಣ ಮಾಡೋಣ

ProfileImg
03 May '24
3 min read


image



ಇದು ಕೋವಿಡ್ ನಂತರದ ನಮ್ಮ ಪ್ರಯಾಣ . ಕೋವಿಡ್ ಕಾರಣದಿಂದ ಮೂರು ವರ್ಷ ಎಲ್ಲೂ ಹೋಗಿರಲಿಲ್ಲ.ಕಳೆದ ವರ್ಷ ನಾವು  ಅಮೆರಿಕಕ್ಕೆ  ಮಗಳ ಮನೆಗೆ ಹೋದ ಪ್ರವಾಸ ಕಥನ  "ಮೊಮ್ಸ್ಪ್ರೆಸೊ "ಆಪ್ ಮತ್ತು "ಸುದ್ದಿ ಸೌಧ " ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ. ಈಗ  ಸೌಹಾರ್ದದ ಸಹೃದಯರಿಗಾಗಿ...

ಪ್ರಯಾಣ._೧ 
ನಾವು  ಕಳೆದ ಮೂರು ವರ್ಷಗಳಿಂದ ಕೋವಿಡ್ನಿಂದಾಗಿ ಎಲ್ಲಿಗೂ ಹೋಗಿರಲಿಲ್ಲ.ಈಗ ಕೋವಿಡ್ ಹಾವಳಿ ಕಡಿಮೆಯಾದುದರಿಂದ ಊರಿಗೆ ,ಮದುವೆ ,ಮುಂಜಿಗಳಿಗೆ  ಭಯವಿಲ್ಲದೆ ಹೋಗುತ್ತಿದ್ದೇವೆ. ಅಮೆರಿಕದಿಂದ ಮಗಳು ಯಾವಾಗ ಬರುತ್ತೀರಿ .. ಟಿಕೆಟ್ ಬುಕ್ ಮಾಡುತ್ತೇನೆ ಅಂತ ಕೇಳುತ್ತಲೇ ಇದ್ದಳು.ಟಿಕೆಟ್ ಬುಕ್ ಮಾಡಲು ಪಾಸ್ಪೋರ್ಟ್ ನಂಬರ್ ಕೇಳಿದಳು.ಹಾಗಾಗಿ  ಪಾಸ್ ಪೋರ್ಟ್ ತೆಗೆದು ನೋಡಿದರೆ ನನ್ನ ಯಜಮಾನರ  ಪಾಸ್ಪೋರ್ಟ್ನ ಅವಧಿ ಅಕ್ಟೋಬರ್ ೨೦೨೧ಕ್ಕೇ ಮುಗಿದಿತ್ತು.ಮತ್ತೆ ತಕ್ಷಣ ಅದನ್ನು ನವೀಕರಣ ಮಾಡಬೇಕಿತ್ತು. ಪಾಸ್ಪೋರ್ಟ್ನ  ವೆಬ್ಸೈಟ್  ನೋಡಿದರೆ ನವೀಕರಣಕ್ಕೆ ಒಂದು ತಿಂಗಳು ಆಗುವುದೆಂದು ಗೊತ್ತಾಯಿತು. ಆದರೆ ಈಗ ಅಷ್ಟು ಸಮಯ ಹಿಡಿಯುವುದಿಲ್ಲ ಅಂತ ತಿಳಿದಿತ್ತು. ಮತ್ತೆ  ಇಂಟರ್ವ್ಯೂ ದಿನ‌ ಆರಿಸಿಕೊಂಡು  ಆಫೀಸಿಗೆ ಹೋದರು. ಪೋಲಿಸ್ ವೆರಿಫಿಕೇಶನ್ ಎಲ್ಲಾ ಆಗಿ ಒಂದೇ ವಾರದಲ್ಲಿ ಪಾಸ್ಪೋರ್ಟ್ ಕೈ ಸೇರಿತು.
ಈ ಸಲ ನಾವಂತೂ ಅಮೆರಿಕಕ್ಕೆ  ಹೋಗಲು ಆತುರ ತೋರಿಸಿರಲಿಲ್ಲ.ಮಗಳು ಯಾವಾಗ ಅನುಕೂಲ ನಿಮಗೆ ಎಂದು ಕೇಳಿದಾಗಲೂ ಮೇ ಜೂನ್ ಅಂತ ಹೇಳಿದ್ದೆವು ಹೊರತು  ನಿಖರವಾದ ದಿನಾಂಕ ಹೇಳಿರಲಿಲ್ಲ ಆದರೆ ಕೊನೇ ಘಳಿಗೆಯಲ್ಲಿ ಬುಕ್ ಮಾಡಿದರೆ ಟಿಕೆಟ್ ದರ ಹೆಚ್ಚು . ಹಾಗಾಗಿ  ಅವಳು ಒಂದು ದಿನ ಟಿಕೆಟ್ ಬುಕ್ ಮಾಡಿ  ಮೈಲ್ ಮಾಡಿಯೇ ಬಿಟ್ಟಳು.೨೦೨೨ ,ಮೇ ೧೧ನೇ ತಾರೀಖು ನಮ್ಮ ಪಯಣ. ಆಗ ಪ್ರಯಾಣಕ್ಕೆ ಒಂದು ತಿಂಗಳು ಬಾಕಿ ಇತ್ತು.ಆರು‌ ತಿಂಗಳು ಅಮೆರಿಕದ ವಾಸ.. ಅದಕ್ಕೆ ತಕ್ಕಂತೆ ಬಟ್ಟೆ ಬರೆ ತೆಗೆದುಕೊಳ್ಳಬೇಕಲ್ಲಾ.
ತಮಗೆ ಭಾರತದಿಂದ ಏನನ್ನು ತರಬೇಕು ಅಂತ ಒಂದು ಲಿಸ್ಟ್ ಕಳುಹಿಸಿದ್ದರು ಮಗಳು ಅಳಿಯ. ಆ ಲಿಸ್ಟ್ ನ ಬಗ್ಗೆ ಮುಂದೆ ಬರೆಯುತ್ತೇನೆ.
ನಾವು ಹೋಗುವುದನ್ನು ತಿಳಿದು  ಪರಿಚಯದವರು ಹೋಗಲು ತಯಾರಿಯಾಯಿತಾ, ಪ್ಯಾಕಿಂಗ್ ಆಯಿತಾ ಅಂತ ಕೇಳುವವರೇ. ಕೆಲವರು ಒಂದು ತಿಂಗಳ ಮುಂಚೆಯೇ ಪ್ಯಾಕಿಂಗ್ ಸುರು ಮಾಡುತ್ತಾರೆ.
ನನ್ನ ಮನೆಯವರು ಪ್ಯಾಕಿಂಗ್ ಗೆ ಏನಿದೆ.ಒಂದಷ್ಟು ಬಟ್ಟೆ ಬರೆ ತುಂಬಿದರಾಯಿತಲ್ಲಾ ಅಂತ ಹೇಳಿದರು..ಈ ಹಿಂದೆ ಮೂರು ಸಲ ಅಮೆರಿಕಕ್ಕೆ ಹೋಗಿ ಬಂದುದರಿಂದ ಆತಂಕವೇನೂ ಇರಲಿಲ್ಲ. ಫ್ಲೈಟ್ ಮಿಸ್ ಆದ ಅನುಭವವೂ ಇತ್ತು.
ಈ ಸಲ ಬಹು ಮುಖ್ಯವಾದ ವಿಷಯವೊಂದಿತ್ತು. ಅದು ಆರೋಗ್ಯ ತಪಾಸಣೆ ಮತ್ತು ಕೋವಿಡ್ ಟೆಸ್ಟ್ನ ಸರ್ಟಿಫಿಕೇಟ್. ಕೋವಿಡ್ ಟೆಸ್ಟ್  ಪ್ರಯಾಣದ ಇಪ್ಪತ್ತನಾಲ್ಕು ಗಂಟೆಯೊಳಗೆ  ಮಾಡಿಸಿ ನೆಗೆಟಿವ್ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ಟೆಸ್ಟ್ ಫಲಿತಾಂಶ ಬರಲು ಎರಡು ದಿನ ಆಗುತ್ತದೆ.ಇಪ್ಪತ್ತನಾಲ್ಕು ಗಂಟೆಯೊಳಗೆ  ರಿಸಲ್ಟ್ ಕೊಡುವ ಲಾಬ್ ಹುಡುಕಿ ಅವರು ಒಂದೇ ದಿನದಲ್ಲಿ ಕೊಡುತ್ತಾರೆ ಅಂತ ಕನ್ಫರ್ಮ್ ಮಾಡಿಕೊಂಡೆವು. ಕೋವಿಡ್ ಇಲ್ಲ ಅಂತ ಪ್ರಮಾಣ ಪತ್ರ ಬೇಕೇ ಬೇಕಾ ಅಂತ ಏರ್ ಫ್ರಾನ್ಸ್ ನ ವಿಚಾರಣಾ ವಿಭಾಗಕ್ಕೆ ಎರಡೆರಡು ಸಲ ಫೋನ್ ಮಾಡಿ ಕೇಳಿದ್ದಾಯಿತು.ಅದು ಅಗತ್ಯ ಬೇಕು ಎಂದು ತಿಳಿದುಬಂತು.
ನಮ್ಮಿಬ್ಬರ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಂಡೆವು. ಸ್ವಲ್ಪ ಕೊಲೆಸ್ಟ್ರಾಲ್, ಬಿಪಿ ಕಂಡು ಬಂತು. ಸರಿ ಅದಕ್ಕಾಗಿ ಆರು ತಿಂಗಳ ಔಷಧಿಯನ್ನು ಬರೆಸಿಕೊಂಡೆವು. ಯಾಕೆಂದರೆ ಅಮೆರಿಕದಲ್ಲಿ ಚಿಕಿತ್ಸೆ ಸುಲಭವಲ್ಲವಲ್ಲ. ಆರು ತಿಂಗಳಿಗೆ ಬೇಕಾದ ಮಾತ್ರೆಗಳನ್ನು ಕೊಂಡುಕೊಳ್ಳಬೇಕಾಯಿತು. ಏಕೆಂದರೆ ನಮ್ಮಲ್ಲಿಯ‌ ಔಷಧಿ ಅಲ್ಲಿ ಸಿಗುವುದಿಲ್ಲ. ಅಷ್ಟೇ ಅಲ್ಲ ಪ್ರಿಸ್ಕ್ರಿಪ್ಷನ್ ಬೇಕು. ಅಲ್ಲದೆ ಕೊರಿಯರ್ ನಲ್ಲಿ ಕಳುಹಿಸಿದರೂ  ಅದನ್ನು ಕೊಡುವುದಿಲ್ಲ ಅಂತ ನಮ್ಮ ಬೀಗರ ಅನುಭವದಿಂದ ತಿಳಿದಿತ್ತು.
ನಮ್ಮ ಪಯಣ ಇದ್ದುದು ಮೇ ಹನ್ನೊಂದರ‌ ರಾತ್ರಿ. ಅಂದರೆ  ಹನ್ನೆರಡರ ಬೆಳಿಗ್ಗೆ ೧.೨೦  ಕ್ಕೆ ಇತ್ತು. ಮೇ ಐದಕ್ಕೆ ಅತ್ತೆಯವರ  ಶ್ರಾದ್ಧ ಊರಲ್ಲಿ. ನನ್ನ ಯಜಮಾನರಿಗೆ ಮೇಘಾಲಯದಲ್ಲಿ "ನಾರ್ತ್ ಈಸ್ಟ್ ಫುಡ್ ಫೆಸ್ಟೀವಲ್ " ನಲ್ಲಿ  ಭಾಷಣ ಮಾಡುವುದಿತ್ತು ಶಿಲ್ಲಾಂಗ್ ನಲ್ಲಿ. ಅಲ್ಲಿಯ ಯುನಿವರ್ಸಿಟಿಯೇ ಟಿಕೆಟ್ ಆದಿಯಾಗಿ ಎಲ್ಲಾ ವ್ಯವಸ್ಥೆ ಮಾಡಿತ್ತು. ಈಗ ಹೋಗಲೋ ಬೇಡವೋ ಎಂಬ ದ್ವಂದ್ವ ಕ್ಕೆ ಬಿದ್ದರೂ ಮತ್ತೆ ಹೋಗುವುದೆಂದು ನಿರ್ಧರಿಸಿದರು.ಅಲ್ಲಿಗೆ ಹೋಗುವ ಒಂದು ಅವಕಾಶ ತಪ್ಪಿಸಲು ಇಷ್ಟವಾಗಲಿಲ್ಲ.ಮೇ ನಾಲ್ಕಕ್ಕೆ ಹೋಗಿ ಎಂಟನೇ ತಾರೀಖಿಗೆ ಹಿಂದಿರುಗಿದರು. ನಾನು ಅತ್ತೆಯವರ  ಶ್ರಾದ್ಧ ಕ್ಕೆ  ಮಗನೊಂದಿಗೆ ಕಾರಿನಲ್ಲಿ ಊರಿಗೆ ಹೋಗುವುದೆಂದು ನಿಶ್ಚಯವಾಯಿತು.
ತೊಂಬತ್ತನಾಲ್ಕು ವರ್ಷದ ತಾಯಿಯವರನ್ನೂ ಭೇಟಿಯಾಗಬೇಕಿತ್ತು. ಹಾಗಾಗಿ ಮೇ ಐದಕ್ಕೆ ಹೋಗಿ ಆರಕ್ಕೆ ಬೆಂಗಳೂರಿಗೆ ಹಿಂದಿರುಗಿದೆವು.
ಜೊತೆಗೆ ಒಂದು ಆತಂಕವೂ ಎದುರಾಯಿತು.ನಾನು ಊರಿಗೆ ಮತ್ತು ನಮ್ಮವರು ಶಿಲ್ಲಾಂಗ್ ಅಂತ ತಿರುಗಾಡಿದುದರಿಂದ‌ ನಮಗೆ ಕೋವಿಡ್   ಬಂದಿದ್ದರೆ ಎಂಬ ಅನುಮಾನ ಬರಲು ಸುರುವಾಯಿತು.
ನಮ್ಮಿಬ್ಬರಲ್ಲಿ ಒಬ್ಬರಿಗೆ ಕೋವಿಡ್ ಬಂದರೂ ಪ್ರಯಾಣ  ರದ್ದು ಮಾಡಬೇಕಿತ್ತು. ಬೂಸ್ಟರ್ ಡೋಸ್ ಬೇಡ ಅಂತ  ಅದನ್ನು ತೆಗೆದುಕೊಳ್ಳಲು ಉದಾಸೀನ ಮಾಡಿದ್ದೆವು . ಮಾರ್ಚ್  ೨೩ ಕ್ಕೆ ಬೂಸ್ಟರ್ ಡೋಸ್ ತೆಗೆದುಕೊಳ್ಳಲು ಮೆಸೇಜ್ ಬಂದಿತ್ತು.ಆದರೆ ತೆಗೆದುಕೊಂಡಿರಲಿಲ್ಲ. ಪ್ರಯಾಣ ನಿಶ್ಚಯವಾದ ಮೇಲೆ  ಕೋವಿಡ್ ಪ್ರಿಕಾಷನ್ ಡೋಸ್ ತೆಗೆದುಕೊಂಡೆವು.
ಈಗ ನಮಗೆ  ತಲೆನೋವು ಇದ್ದುದು ಕೋವಿಡ್ ಟೆಸ್ಟಿಂದು. ಸಮಯಕ್ಕೆ ಸರಿಯಾಗಿ ಸಿಗದಿದ್ದರೆ  ಪ್ರಯಾಣ ರದ್ದಾಗಬಹುದು ಎಂಬ ಆತಂಕ ಅದರೊಂದಿಗೆ ಕೋವಿಡ್  ಬಂದಿದ್ದರೆ ಎಂಬ ಸಣ್ಣ ಸಂಶಯ. ಅಂತರ್ಜಾಲ ಜಾಲಾಡಿದಾಗ ಒಂದೇ ದಿನದಲ್ಲಿ‌ ರಿಸಲ್ಟ್ ಕೊಡುವ ಖಾಸಗಿ  ಲಾಬ್   ಮನೆಗೆ ಹತ್ತಿರದಲ್ಲೇ ಇರುವುದು ಗೊತ್ತಾಯಿತು. ಬೆಳಿಗ್ಗೆ ಏಳು ಗಂಟೆಗೆ ಸಾಂಪಲ್ ತೆಗೆದುಕೊಂಡರೆ ಸಾಯಂಕಾಲ ಐದಕ್ಕೆ ರಿಸಲ್ಟ್ ಸಿಗುತ್ತದೆ ಅಂತ ತಿಳಿದು ಖುಷಿಯಾಯಿತು. ಅದಕ್ಕೂ ಮೊದಲು  ಸಹಕಾರ ನಗರದಲ್ಲಿರುವ   ಸರ್ಕಾರಿ ಆಸ್ಪತ್ರೆಯಲ್ಲಿಯೂ ಸ್ಯಾಂಪಲ್ ಕೊಟ್ಟು ನೋಡೋಣ ಅಂತ ಮಗ ಹೇಳಿದ. ನಮಗೂ ಅದು ಸರಿ ಎಂದು ಕಂಡಿತು. ಅಲ್ಲಿ ಮೂರು ದಿನ ಮೊದಲೇ ಸ್ಯಾಂಪಲ್ ಕೊಟ್ಟೆವು.ಕೋವಿಡ್ ನೆಗೆಟಿವ್   ಅಂತ ಹೇಳಿದರೂ RTPCR  ಟೆಸ್ಟ್ ಮಾಡಬೇಕೆಂದು  ಸ್ಯಾಂಪಲ್ ತೆಗೆದುಕೊಂಡರು. ಆದರೆ ಅದರ ಫಲಿತಾಂಶ ಕೊಡಲೇ ಇಲ್ಲ. ಮತ್ತೆ ಅಲ್ಲಿಗೆ ಹೋಗಿ ವಿಚಾರಿಸಿದರೆ ಅದೇನೋ ಸಬೂಬು ಹೇಳಿದರು. ಮತ್ತೆ ನಾವು ಹೊರಡುವ ದಿನ ಕೋವಿಡ್ ನೆಗೆಟಿವ್ ಅಂತ ಮಿಂಚಂಚೆಯಲ್ಲಿ ತಿಳಿಸಿದರು.

ಹೊರಡುವ ದಿನ ಬೆಳಿಗ್ಗೆ ಏಳು ಗಂಟೆಗೇ ನಾವು‌ ಖಾಸಗಿ ಲಾಬ್ ನ ಮುಂದೆ ಬ್ಲಡ್ ಸ್ಯಾಂಪಲ್ ಕೊಡಲು ಹಾಜರಿದ್ದೆವು. ಮೂರು ಗಂಟೆಗೆಲ್ಲಾ ರಿಸಲ್ಟ್ ಬರುತ್ತದೆ ಅಂತ ಅಲ್ಲಿ ತಿಳಿಸಿದರು. ಅವರೆಂದಂತೆ  ಮೂರು ಗಂಟೆಗೆ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಕೈ ಸೇರಿತು. ಅದನ್ನೂ ಪಾಸ್ಪೋರ್ಟ್, ಟಿಕೆಟಿನ ಜೊತೆಗೆ ಜೋಪಾನವಾಗಿಟ್ಟುಕೊಂಡೆವು. ಮೊಬೈಲಿನಲ್ಲಿ ಟಿಕೆಟ್ , ಸರ್ಟಿಫಿಕೇಟ್ ಎಲ್ಲಾ ಇದ್ದರೂ ಹಾರ್ಡ್ ಕಾಪಿ ಇದ್ದರೆ ಒಳ್ಳೆಯದು ಅಂತ  ಟಿಕೆಟ್ , ಸರ್ಟಿಫಿಕೇಟ್ ಗಳ   ಪ್ರಿಂಟೌಟ್ ಗಳನ್ನೂ ತೆಗೆದುಕೊಂಡೆವು.ಅಲ್ಲಿಗೆ  ಪ್ರಯಾಣದ ಒಂದು ಮುಖ್ಯ ಘಟ್ಟ ಮುಗಿಯಿತು... ಮುಂದೆ..ತಯಾರಿ_೨
✍️ಪರಮೇಶ್ವರಿ ಭಟ್.

Category:Travel



ProfileImg

Written by Parameshwari Bhat

0 Followers

0 Following