ನಾವು ಎಲ್ಲಾದರೂ ಚಾರಣ ಮಾಡಲು ಹೋಗೋಣ ಎಂದು ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಶಿವಂಗೆ, ಸಿದ್ದರಬೆಟ್ಟದ ಜೊತೆ ನಮ್ಮನ್ನು ಆಕರ್ಷಿಸಿದ್ದು ಮಧುಗಿರಿ. ಹೆಸರೇ ಕುತೂಹಲಕಾರಿ ಆಗಿದೆ ಎಂದು ಫೋಟೋ ತೆಗೆದು ನೋಡಿದೆವು. ಚಾರಣಕ್ಕೆ ಒಂದು ಸವಾಲು. ಕಷ್ಟಕರವಾದ ಚಾರಣ ಎಂದೆಲ್ಲಾ ಬರೆದದ್ದನ್ನು ನೋಡಿ ಮಕ್ಕಳು ಉತ್ಸಾಹದಿಂದ ಇಲ್ಲಿಗೆ ಹೋಗೋಣ ಎಂದರು. ಬೆಂಗಳೂರಿನಿಂದ ಕೇವಲ 100 ಕಿಮಿ ದೂರದಲ್ಲಿ ತುಮುಕೂರು ಜಿಲ್ಲೆಯಲ್ಲಿದೆ ಎಂದು . ಸರಿ ಒಂದು ದಿನದ ಪ್ರವಾಸ ಹೋಗೋಣ ಎಂದು ನಿರ್ಧರಿಸಿದೆವು.
ಬೆಳ್ಳಗ್ಗೆ ಬೇಗ ಬಿಟ್ಟು ಹೊರಟರೂ ಮಧುಗಿರಿ ತಲುಪಿದಾಗ 8.30 ಗಂಟೆ. ಮರದ ನೆರಳಿನಲ್ಲಿ ಕಾರು ನಿಲ್ಲಿಸಿ ನೋಡಿದಾಗ ಹೆಚ್ಚೇನು ಜನರಿರಲಿಲ್ಲ. ಅಲ್ಲಿದ್ದ ಸೆಕ್ಯೂರಿಟಿ "ಮೇಲೆ ಏನೂ ಸಿಗುವುದಿಲ್ಲ. ನೀರು ಇಲ್ಲಿಂದಲೇ ತೆಗೆದುಕೊಂಡು ಹೋಗಿ " ಎಂದು ಹೇಳಿದ.
ಇದು ಏಷ್ಯಾದ ಎರಡನೇ ದೊಡ್ಡ ಏಕಶಿಲಾ ಬೆಟ್ಟ ಎಂದು ಪ್ರಸಿದ್ಧಿ ಪಡೆದಿದೆ. ಬೆಟ್ಟದ ಸುತ್ತಲೂ ಸುತ್ತುತ್ತಾ ಏರಿದ್ದ ಕೋಟೆ ಗೋಡೆಯನ್ನು, ಆ ಬಂಡೆ ಕಲ್ಲುಗಳನ್ನು ನೋಡಿದಾಗ ಇದು ದಕ್ಷಿಣ ಭಾರತದಲ್ಲಿ ಅಭೇಧ್ಯ ವಾದ ಕೋಟೆ ಎನ್ನುವುದನ್ನು ಸಾಬೀತು ಮಾಡುವಂತೆ ಇತ್ತು.
ನಾವು ಹತ್ತುತ್ತಾ ಹೋದಂತೆ ಕೆಲವು ಕಡೆ ಹಳೇ ಕಾಲದ ಎತ್ತರೆತ್ತರದ ಮೆಟ್ಟಿಲ್ಲಿದ್ದರೆ ಕೆಲವು ಕಡೆ ಅದನ್ನೇ ನವೀಕರಿಸಿ ಮಾಡಿದ ಚಿಕ್ಕ ಮೆಟ್ಟಿಲುಗಳಿದ್ದವು. ರಸ್ತೆ ಕಲ್ಲುಬಂಡೆಗಳ ಮಧ್ಯೆ ಮರೆಯಾಗುತ್ತಾ, ಸುತ್ತಾ ಸುತ್ತುತ್ತಾ ಮುಂದುವರೆದಿತ್ತು. ಮೇಲಿನ ಕೋಟೆ ತಲುಪಲು , ಅಂತರಾಳದ ಬಾಗಿಲು, ದಿಡ್ಡಿ ಬಾಗಿಲು, ಮೈಸೂರು ಬಾಗಿಲುಗಳನ್ನು ದಾಟಿ ಮುಂದುವರಿಯ ಬೇಕು.
ದಾರಿಯಲ್ಲಿ ಸಣ್ಣ ಮಂಟಪಗಳು, ದೇವಸ್ಥಾನ ಗಳನ್ನು ನೋಡಿದೆವು. ಎತ್ತರದ ಬುರುಜುಗಳು, ಕಾವಲು ಗೊಪುರಗಳೂ ಇವೆ. ಒಂದನ್ನು ಹತ್ತೋಣ ಎಂದು ಹೋದರೆ ವಾನರ ಸೈನ್ಯ ಮೆಟ್ಟಿಲುಗಳ ಮೇಲೆ ಸೈನಿಕರಂತೆ ಕಾವಲು ಕಾಯುತ್ತಿದ್ದವು. ನಾವು ಹೆದರಿ ಪಾಲಾಯನ ಮಾಡಿದೆವು.
ಒಂದೊಂದು ಹಂತ ಏರಿದಾಗಲೂ ಬೆಟ್ಟದ ಕೆಳಗಿನ ಮಧುಗಿರಿ ಊರು, ಮತ್ತು ಸುಂದರವಾದ ದೃಶ್ಯಗಳು ನಮ್ಮನ್ನು ಎದುರುಗೋಳ್ಳುತ್ತಿತ್ತು. ಸುಧಾರಿಸಿ ಕೊಳ್ಳುವ ನೆಪದಲ್ಲಿ ಅಲ್ಲೇ ಕುಳಿತು, ನಿಂತು ಅದನ್ನು ಆಸ್ವಾದಿಸಿ ಮುಂದುವರೆಯುತ್ತಿದ್ದೆವು.
ಮುಂದಿನ ತಿರುವಿನಲ್ಲಿ ಕಡಿದಾದ ಬಂಡೆ ಅಡ್ಡ ಬಂದಿತು. ಅದು 45° ಕೋನದಲ್ಲಿತ್ತು. ಅದನ್ನು ಹತ್ತಲು ಅನುಕೂಲವಾಗಲು ಬಂಡೆಯಲ್ಲೆ ಕಾಲಿಡಲು ಸಣ್ಣ ಕೊರಕಲುಗಳನ್ನು ಹಿಂದಿನ ಕಾಲದಲ್ಲೇ ಮಾಡಿದ್ದರು. ನಮ್ಮ ಪ್ರವಾಸ ನಿಗಮ ಅದಕ್ಕೆ ಕಬ್ಬಿಣದ ಕೈಪಿಡಿ ಹಾಕಿ ಇನ್ನೂ ಸ್ವಲ್ಪ ಸುಲಭ ಮಾಡಿದ್ದಾರೆ. ಆದರೂ ಕಡಿದಾದ ಬಂಡೆ ಏರುವಷ್ಟರಲ್ಲಿ ಏದುರಸಿರು ಬಂದಿತ್ತು. ಮೇಲಿನಿಂದ ಸುಂದರ ಪ್ರಕೃತಿ ಮತ್ತು ತಂಪಾದ ಗಾಳಿಗೆ ಮೈಯೊಡ್ಡಿ ಕುಳಿತಾಗ ಸೈನಿಕರು, ಕುದುರೆಗಳು ಇದನ್ನು ಹೇಗೆ ಹತ್ತಿ ಇಳಿದು ಮಾಡುತ್ತಿದ್ದರು ? ಎಂದು ಆಶ್ಚರ್ಯವಾಯಿತು. ಅಲ್ಲಿಂದ ಸುಮಾರು ನೀರಿನ ಕೊಳಗಳು ಕಾಣಿಸಿದವು. ಕೋಟೆಯಲ್ಲಿ ಮಳೇ ನೀರು ಕೂಡಿಡಲು ಆ ಕಾಲದಲ್ಲೇ ಈ ವ್ಯವಸ್ಥೆ ಮಾಡಲಾಗಿತ್ತು. ಅಂದಹಾಗೆ ಮಧುಗಿರಿ ಕೋಟೆ ಮೊದಲು ಮಣ್ಣಿನಲ್ಲಿ ೧೫ ಶತಮಾನದಲ್ಲಿ ಕಟ್ಟಿಸಿದವರು ಹೀರೇ ಗೌಡ ಎನ್ನುವ ವಿಜಯನಗರದ ಕೆಳಗಿನ ಒಬ್ಬ ಪಾಳೇಗಾರ. ನಂತರ ಮೈಸೂರಿನ ದಳವಾಯಿಯಾದ ದೇವರಾಜ ಇದನ್ನು ವಶಪಡಿಸಿಕೊಂಡನು. ಇದಾದ ಮೇಲೆ ಹೈದರ್ ಅಲಿ ಕಾಲದಲ್ಲಿ ಕಮಾನುಗಳನ್ನು, ಕಾವಲು ಗೊಪುರಗಳನ್ನೂ , ಉಪ್ಪರಿಗೆಯ ಗಳನ್ನು ಕಟ್ಟಿಸಿ ನವೀಕರಿಸಿದ್ದನಂತೆ. ಇತಿಹಾಸದಲ್ಲಿ ಹೇಳಿರುವಂತೆ ಹೈದರ್, ಬೀದನೂರನ್ನು ಸೋಲಿಸಿ ಅಲ್ಲಿನ ರಾಣಿಯನ್ನು ಇಲ್ಲಿ ಸೆರೆ ಇಟ್ಟಿದ್ದನಂತೆ.
ಮರಾಠರ ನಾಯಕ ಮಾಧವ ರಾವ್ ಸಹ ಈ ಕೊಟೆಯನ್ನು ಆಳಿದನಂತೆ.
ನಾವು ಕಲ್ಲಿನ ಮೇಲಿಂದ ಎದ್ದು ಮುಂದಿನ ತಿರುವಿನಲ್ಲಿ ನೋಡಿದರೆ.. ಇನ್ನೊಂದು ಆ ರೀತಿಯೇ ಇರುವ ಬಂಡೆ. ಅಷ್ಟು ಕಡಿದಾಗಿರಲಿಲ್ಲ. ಅದಕ್ಕೂ ಕಾಲಿಡಲು ಜಾಗ ಮಾಡಿದ್ದರೂ ಹಿಡಿ ಮಧ್ಯದಲ್ಲಿ ಮುರಿದು ಹೋಗಿತ್ತು. ಅಲ್ಲಿ ಬಂಡೆ ಮೇಲೆ ಅಡ್ಡಡ್ಡ ಹೋಗಬೇಕು !! ನೋಡಿಯೇ ಹೆದರಿಕೆಯಾಯಿತು. ನಾವು ದೊಡ್ಡವರು ಅಲ್ಲೇ ನಿಂತರೆ ಮಕ್ಕಳು ಧೈರ್ಯವಾಗಿ ಮುಂದೆ ಹೋಗಿ ಅದನ್ನೂ ದಾಟಿದರು. ಇನ್ನೆನು ಅಲ್ಲಿದ್ದ ಮಂಟಪ ದಾಟಿದರೆ ತುದಿ ಮುಟ್ಟಿದಂತೆ ಎಂದು ನಾವು ಅಲ್ಲೇ ಕಾಯುತ್ತಾ ಕುಳಿತೆವು.
ಸುಮಾರು ಸಮಯದ ನಂತರ ಮಕ್ಕಳು ಹಿಂದೆ ಬರುವುದು ಕಾಣಿಸಿತು. ಆ ಮುರಿದ ಜಾಗ ದಾಟುವ ತನಕ ನಮ್ಮ ಎದೆ ಹೊಡೆದುಕೊಳ್ಳುತ್ತಿತ್ತು. ಕೆಳಗೆ ಬಂದು ಉಸಿರು ಬಿಟ್ಟು, ಈ ಕೋಟೆ ೪ ಭಾಗಗಳಲ್ಲಿದೆ. ನಾವು ಹತ್ತಿರುವುದು ೨ ಭಾಗ. ೩ ಭಾಗ ಇನ್ನೂ ದೊಡ್ಡ ಬಂಡೆ ಇದೆ . ಅದನ್ನು ಹತ್ತಲು ಹೆದರಿ ಹಿಂದೆ ಬಂದೆವು. ಅದಾದ ಮೇಲೆ ನಡೆದು ಹೋಗಿ ತುದಿಯನ್ನು ತಲುಪಬೇಕು. ಎಂದು ತಿಳಿಯಿತು. ಅಬ್ಬಾ ಇದೆಂಥಾ ಮುಗಿಯದ ಕೋಟೆ ಹತ್ತಿದಷ್ಟೂ ಮೇಲೆ ಇದೆ !!
ಬಿಸಿಲೇರಿದ್ದರಿಂದ ಸಾಕಾಗಿ ಕೆಳಗೆ ಇಳಿದೆವು. ನಮ್ಮ ಕರ್ನಾಟಕದ ಈ ಅಮೋಘ ಕೋಟೆಯ ಬಗ್ಗೆ ಮಾತನಾಡುತ್ತಾ ಮನೆ ಸೇರಿದೆವು.
0 Followers
0 Following