Do you have a passion for writing?Join Ayra as a Writertoday and start earning.

ಇಂದಿನ ಕನ್ನಡ

ಇಂದು ಕರ್ನಾಟಕದಲ್ಲಿ ಕನ್ನಡ

ProfileImg
30 Mar '24
7 min read


image

ಇಂದು ಕರ್ನಾಟಕದ ನಗರಗಳಲ್ಲಿ, ಹಳ್ಳಿಗಳಲ್ಲಿ ಕನ್ನಡದ ಬಗ್ಗೆ ಜನರಲ್ಲಿ ಇರುವ ಉದಾಸೀನದ ಬಗ್ಗೆ ಒಂದು ಕಥೆ

ಕಥೆ

               “ಇಂದಿನ ಕನ್ನಡ”

     ಅಜಿತ ತೋಟದಿಂದ ಬಂದಾಗ ಅವನ ಅಮ್ಮ "ನಿನ್ನ ಫೋನ್ ಎರಡು ಮೂರು ಸಲ ರಿಂಗಾಯಿತು ಕಣೋ…. ಮಹಡಿಯ ಮೇಲೆ ಇಟ್ಟಿದ್ದೀಯಾ.. ನನಗೆ ಮೆಟ್ಟಿಲು ಹತ್ತಲು ಆಗಲಿಲ್ಲ "ಎಂದರು.

"ನೋಡುತ್ತೇನೆ ಬಿಡು ಕೆಳಗಡೆ ನೆಟ್ ವರ್ಕ್ ಸಿಗುವುದಿಲ್ಲ ಎಂದು ಅಲ್ಲಿ ಚಾರ್ಜ್ ಗೆ ಹಾಕಿ ಇಟ್ಟಿದ್ದೆ."

 ಕೈ ಕಾಲು ತೊಳೆದು ಮೇಲೆ ಹೋಗಿ ನೋಡಿದ ಓ…. ಕಸ್ತೂರಿಯದಾಗಿತ್ತು  ಪೋನ್, ಅಜಿತನಿಗೆ ಖುಷಿಯಾಯಿತು. ಸುಮಾರು ತಿಂಗಳಿನಿಂದ ಮಹರಾಯನದು ಪೋನೇ  ಇರಲಿಲ್ಲ. ಬಡ ಸ್ನೇಹಿತನ ಮರೆತು ಬಿಟ್ಟ ಅಂದುಕೊಂಡಿದ್ದೆ ಕಸ್ತೂರಿಯ ನೆನಪಿನಿಂದ ಮನ ಹೂವಾಯಿತು.

ಅಜಿತನ ಬಾಲ್ಯ ಸ್ನೇಹಿತ ಕಸ್ತೂರಿ, ಇದೇ ಹಳ್ಳಿಯಲ್ಲಿ ಹುಟ್ಟಿ ಬೆಳೆದವನು.

ಜೀವನದಲ್ಲಿ ಎಷ್ಟು ಎತ್ತರಕ್ಕೆ ಏರಿದರು ಅಜಿತನ ಜೊತೆಗೆ ಅದೇ ಹಳೆಯ ಗೆಳೆಯನಾಗಿದ್ದ.

ನಮ್ಮ ಕಸ್ತೂರಿ ಅಮೇರಿಕಾದಲ್ಲಿ ಇದ್ದರೂ ಕನ್ನಡದ ಬಗ್ಗೆ ತುಂಬಾ ಅಭಿಮಾನ, ಪ್ರೀತಿ, ಮತ್ತೆ ಯಾಕೆ ಅಮೇರಿಕಾಗೆ ಹೋಗಿದ್ದು ಇಲ್ಲೇ ಕೆಲಸಕ್ಕೆ ಸೇರಬೇಕಿತ್ತು ಅನ್ನುತ್ತಿರೇನೋ…ಅಲ್ಲವಾ…??.

ಅನಿವಾರ್ಯ ಕಾರಣದಿಂದ ಅವನು ಅಲ್ಲಿ ಕೆಲಸಕ್ಕೆ ಸೇರಿದ. 

ಅವನು ಅಮೇರಿಕಾದಲ್ಲಿ ಇದ್ದರೂ ಕನ್ನಡ ಅವನ ಉಸಿರಾಗಿತ್ತು. ಕನ್ನಡದಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದ. ಕನ್ನಡದಲ್ಲಿ ಎರಡು ಕವನ ಸಂಕಲನ ಹಾಗೂ ಕಥಾ ಸಂಕಲನಗಳನ್ನು ಪ್ರಕಟಿಸಿದ್ದ.ಅಲ್ಲಿಯೂ ಕನ್ನಡದವರನ್ನು ಸೇರಿಸಿ ಕಾರ್ಯಕ್ರಮ ನಡೆಸುತ್ತಿದ್ದ. 

ಅಮೇರಿಕಾ ವಾಸಿ ಕನ್ನಡದ ಮಕ್ಕಳಿಗೆ ಕನ್ನಡದ ಕಾಮಿಕ್ಸ್, ಕಥೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುತ್ತಿದ್ದ.

ಮದುವೆಯಾದ ಮೇಲೆ ಹೆಂಡತಿಯು ಅವನಿಗೆ ಎಲ್ಲದರಲ್ಲೂ ಪ್ರೋತ್ಸಾಹ ನೀಡುತ್ತಿದ್ದಳು.

ಕಸ್ತೂರಿ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಒಂದು ಹಳ್ಳಿಯಲ್ಲಿ,

ಇಪ್ಪತ್ತು ಮನೆಗಳಿರುವ ಶುದ್ಧ ಕನ್ನಡ ಮಾತನಾಡುವ ಹಳ್ಳಿ.

ಎಲ್ಲಾ ಮನೆಯವರಿಗೂ ತಲೆ ತಲಾಂತರದಿಂದ ಬಂದ ತೋಟ, ಗದ್ದೆಗಳು ಇದ್ದವು. ಕಸ್ತೂರಿಯ ಅಪ್ಪನಿಗೆ ಮಾತ್ರ ಒಂದು ಮನೆ ಸುತ್ತಲೂ ಸ್ವಲ್ಪ ಜಾಗ ಬಿಟ್ಟು ಇನ್ನೇನು ಇರಲಿಲ್ಲ,  ತಾತನ ಕಾಲದಿಂದ ಅವರದು ಪುರೋಹಿತ ಮನೆತನ, ಪುರೋಹಿತ್ಯದಿಂದಲೇ ಜೀವನ ಸಾಗಬೇಕಿತ್ತು. 

ಆ ಹಳ್ಳಿಯಲ್ಲಿ ಪುರೋಹಿತ್ಯದಲ್ಲಿ ಅಂಥ ವರಮಾನವಿರಲಿಲ್ಲ. 

ಕಸ್ತೂರಿಯ ದೊಡ್ಡಪ್ಪ ಹಾಗೂ ಚಿಕ್ಕಪ್ಪಂದಿರು ಪುರೋಹಿತ್ಯ ನಂಬಿಕೊಂಡೆ ಜೀವನ ನಡೆಸುವ ಕಾರಣ ಮೂವರಿಗೂ ಹಂಚಿ ಹೋಗುತ್ತಿತ್ತು.

ಅದಕ್ಕೇ ಚಿಕ್ಕ ವಯಸ್ಸಿನಿಂದಲೂ  ಕಸ್ತೂರಿಗೆ  ಚೆನ್ನಾಗಿ ಓದಿ ದೊಡ್ಡ ಕೆಲಸಕ್ಕೆ ಸೇರಬೇಕು, ಅಪ್ಪ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅನ್ನುವ ಆಸೆ ಮೂಡಿತ್ತು.

 ದೊಡ್ಡ ಮಗನಾದ ಕಸ್ತೂರಿ ತುಂಬಾ ಚೆನ್ನಾಗಿ ಓದುತ್ತಿದ್ದ. ಮೆರಿಟ್ ನಲ್ಲಿ ಓದಿ ಕಷ್ಟಪಟ್ಟು ಎಂಜಿನಿಯರಿಂಗ್ ಮುಗಿಸಿದ. ಎರಡು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿದ ಆದರೆ ಅಮೇರಿಕಾಗೆ ಹೋದರೆ ತುಂಬಾ ದುಡ್ಡು ಸಂಪಾದಿಸಬಹುದು, ಅಲ್ಲಿಗೆ ಬಂದು ಬಿಡು ಅಂತ ಅಮೇರಿಕಾಗೆ ಹೋಗಿರುವ ಗೆಳೆಯರೆಲ್ಲ ಬಲವಂತ ಮಾಡಿದ ಕಾರಣ ತಾನು ಅಲ್ಲಿಯ ಕೆಲಸಕ್ಕೆ ಅಪ್ಲೈ ಮಾಡಿದ. ಮೆರಿಟ್ ಇರುವ ಅವನಿಗೆ ಅಲ್ಲಿ ಸುಲಭವಾಗಿ ಕೆಲಸ ಸಿಕ್ಕಿತ್ತು. 

ಕೆಲಸಕ್ಕೆ ಸೇರಿದ ನಂತರ ಮೊದಲು ಬೆಂಗಳೂರಿನಲ್ಲಿ ಮನೆ ಮಾಡಿ ತನ್ನ ಕುಟುಂಬವನ್ನು  ಬೆಂಗಳೂರಿಗೆ ಶಿಫ್ಟ್ ಮಾಡಿಸಿದ. ತಂಗಿಯರ ಮದುವೆ ಮಾಡಿ, ತಮ್ಮನಿಗೆ ಓದಲು ಸಹಾಯ ಮಾಡಿದ. ಬೆಂಗಳೂರಿನಲ್ಲಿ ಅವರ ತಂದೆಗೂ ಪುರೋಹಿತ್ಯ ದಲ್ಲಿ ಚೆನ್ನಾಗಿ ಸಿಗುತ್ತಿತ್ತು.

ಕಸ್ತೂರಿ ಇಂಡಿಯಾಗೆ ಬಂದಾಗಲೆಲ್ಲಾ ಅಪ್ಪ ಅಮ್ಮ ಬೆಂಗಳೂರಿನಲ್ಲಿ ಇರುವ ಕಾರಣ ಜಾಸ್ತಿ ಸಮಯ ಬೆಂಗಳೂರಿನಲ್ಲೇ ಕಳೆಯುತ್ತಿತ್ತು. ಆದರೂ ಹುಟ್ಟಿದ ಊರು, ಆ ನೆಲದಲ್ಲಿ ಓಡಾಡುವ ಆಸೆಯಿಂದ  ದೊಡ್ಡಪ್ಪ  ಹಾಗೂ ಚಿಕ್ಕಪ್ಪಂದಿರ ಮನೆಗೆ ಹೋಗಿ ಬರುತ್ತಿದ್ದ. ಈಗ ನಾಲ್ಕು ವರ್ಷಗಳಿಂದ ಅವರು ಮಕ್ಕಳ ಜೊತೆಗೆ ಬೆಂಗಳೂರಿನಲ್ಲಿ ಬಂದು ನೆಲೆಸಿದರು.

ಅದಕ್ಕೆ ಕಸ್ತೂರಿ ಬಂದಾಗ ತನ್ನ ಆತ್ಮೀಯ ಗೆಳೆಯನನ್ನು ಇಲ್ಲಿಗೆ ಕರೆಸಿಕೊಂಡು ನಾಲ್ಕು ದಿನ ಅವನ ಜೊತೆ ಸುತ್ತಾಡಿ ಹರಟೆ ಹೊಡೆದು ಕಳುಹಿಸುತ್ತಿದ್ದ. ಊರು ಕಡೆ ಹೋಗೇ ಇರಲಿಲ್ಲ.

ಆದರೆ ಪ್ರತಿ ವರ್ಷ ತನ್ನ ಆತ್ಮೀಯ ಗೆಳೆಯ ಅಜಿತನಿಗೆ ಹಣ ಕಳುಹಿಸಿ ಊರಿನ  ಶಾಲೆಯಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ಉಚಿತವಾಗಿ ನೀಡಲು ಹೇಳುತ್ತಿದ್ದ. ಎಲ್ಲಾ ಕ್ಲಾಸ್ ರೂಮುಗಳಲ್ಲೂ ಫ್ಯಾನ್ ಹಾಕಿಸಿದ್ದ. ತಾನು ಹುಟ್ಟಿದ ಊರಿನ ಹತ್ತಿರದ ಶಾಲೆಗಳ ಕುಂದು ಕೊರತೆಗಳ ನಿವಾರಿಸಲು ಗೆಳೆಯನ ಮೂಲಕ ಪ್ರಯತ್ನಿಸುತ್ತಿದ್ದ. 

ಈ ವರ್ಷ ಸುಮಾರು ಐದುನೂರು ಪುಸ್ತಕಗಳನ್ನು ಬೆಂಗಳೂರಿನ ಸ್ವಪ್ನಾ ಬುಕ್ ಹೌಸ್ ನಿಂದ  ತರಿಸಿಕೊಂಡು ಅಮೇರಿಕಾದ ಕನ್ನಡ ಮಕ್ಕಳಿಗೆ  ಕನ್ನಡ ಭಾಷೆಯ ಕಾಮಿಕ್ಸ್ ಹಾಗೂ ಕಥೆ ಪುಸ್ತಕಗಳನ್ನು ಕೊಟ್ಟಿದ್ದ. 

ಹಾಗೇ ಈ ವರ್ಷ ನವೆಂಬರ್ ಡಿಸೆಂಬರ್ ನಲ್ಲಿ ರಜೆ ಸಿಕ್ಕಿದ ಕಾರಣ ಇಂಡಿಯಾಗೆ ಬರುತ್ತಿದ್ದ. ನವೆಂಬರ್ ನಲ್ಲಿ ಕರ್ನಾಟಕಕ್ಕೆ ಹೋಗುತ್ತೇನೆ ಅಲ್ಲಿ ಏನಾದರೂ ಮಾಡಬೇಕು ಎಂದು ಯೋಚಿಸಿ ಅಜಿತನಿಗೆ ಕರೆ ಮಾಡಿದ್ದ.

ಕಸ್ತೂರಿ ಮತ್ತೆ ಅಜಿತನಿಗೆ ಸಂಜೆ ಕರೆ ಮಾಡಿದ.. “ಅಜಿತ ನಾನು ಮುಂದಿನ ತಿಂಗಳು ನವೆಂಬರ್ ನಲ್ಲಿ ಇಂಡಿಯಾಗೆ ಬರುತ್ತೇನೆ. ಈ ಸಲ ನಮ್ಮ ಊರು ಹಾಗೂ  ಸುತ್ತಮುತ್ತಲಿನ ಊರುಗಳಲ್ಲಿ  ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸೋಣ, ನೀನು ಹಾಗೂ ನಿನ್ನ ಟೀಮ್ ಅದಕ್ಕೆ ಎಲ್ಲಾ ಆರೆಂಜ್ ಮಾಡುತ್ತೀರಾ… ???. ”

"ಆಯಿತು ಬಾ ಮಾರಾಯಾ…. ನೀನು ಬರುವ ದಿನ ತಿಳಿಸು ಎಷ್ಟು ದಿನ ಊರಿನಲ್ಲಿ ಇರುತ್ತೀಯಾ… ಹೇಳು. ಅದೇ ಸಮಯಕ್ಕೆ ಕನ್ನಡ ರಾಜ್ಯೋತ್ಸವದ ಆಚರಣೆ ಮಾಡಲು ನಾವು ಆರೆಂಜ್ ಮಾಡುತ್ತೇವೆ" ಎಂದ.  

"ಅದಕ್ಕೆ ಹಣ ಬೇಕಾಗುತ್ತದೆ ಅಲ್ಲವಾ…??. ನಾನು ಟ್ರಾನ್ಸ್ಫರ್ ಮಾಡುತ್ತೇನೆ". 

"ಹಣ ಟ್ರಾನ್ಸ್ಫರ್ ಮಾಡಬೇಡ ಕಸ್ತೂರಿ, ನಾವು ಆಗಲೇ ರಾಜ್ಯೋತ್ಸವದ ರೂಪು ರೇಷೆ ತಯಾರಿ ಮಾಡಿದ್ದೇವೆ. ನಮ್ಮ ಊರಿನ ಸಾಧಕರನ್ನು ಕರೆಯಿಸಿ‌ ಸನ್ಮಾನ ಮಾಡುವ ಕಾರ್ಯಕ್ರಮವು ಇದೆ. ನೀನು ಬರುವುದು ತುಂಬಾ ಖುಷಿಯಾಯಿತು.. ನಿನ್ನ ಹೆಸರನ್ನು ಆ ಪಟ್ಟಿಗೆ ಸೇರಿಸುವೆ" ಎಂದ ಅಜಿತ.

ಅಯ್ಯೋ ನಾನೇನೂ ಸಾಧನೆ ಮಾಡಿಲ್ಲ… ಸನ್ಮಾನ ಎಲ್ಲಾ ಬೇಡ ಅಜಿತ…ಚಿಕ್ಕ ವಯಸ್ಸಿನಿಂದ ನನ್ನದೊಂದು ಕನಸಿದೆ.  ಈ ಸಲ ಅದನ್ನು ನನಸು ಮಾಡುವ ಆಲೋಚನೆ ಇದೆ..  ಎರಡು ತಿಂಗಳು ನಿನಗೆ ತೊಂದರೆ ಕೊಡುತ್ತೇನೆ… ಎಂದ ಕಸ್ತೂರಿ.

ನೀನು ಬರುವುದೇ ಖುಷಿಯ ಸಂಗತಿ ನನಗೆ ಎಂದ ಅಜಿತ.

*** **"*** 

ಕಸ್ತೂರಿ ತನ್ನ ಹೆಂಡತಿ ಉಷಾಳಿಗೂ ಹೇಳಿದ "ನೋಡು ಇಂಡಿಯಾಗೆ ಹೋದ ಮೇಲೆ ನವೆಂಬರ್ ತಿಂಗಳು ಪೂರ್ತಿ ನಾನು ನಮ್ಮ ಹಳ್ಳಿಯಲ್ಲಿ ಇರುತ್ತೇನೆ.. ನೀನು ಹಾಗೂ ಮಗು ಎಲ್ಲಿ ಬೇಕಾದರೂ ಓಡಾಡಿ ನನಗೆ ಅಭ್ಯಂತರವಿಲ್ಲ "ಎಂದ. 

"ಸರಿ ಬಿಡಿ ನಾನು ಆ ಸಮಯದಲ್ಲಿ ಸ್ವಲ್ಪ ದಿನ ನನ್ನ ತಾಯಿ ಮನೆಗೆ ಹೋಗಿ ಅಲ್ಲಿಯ ಬಂಧು ಬಳಗ ಎಲ್ಲಾ ಮಾತನಾಡಿಸಿಕೊಂಡು ಬರುತ್ತೇನೆ, ನಿಮ್ಮ ಕೆಲಸ ಎಲ್ಲಾ ನೀವು ನಿರಾಳವಾಗಿ ಮುಗಿಸಿಕೊಂಡು ಬನ್ನಿ" ಎಂದಳು.

ಮರು ದಿನವೇ ಸ್ವಪ್ನ ಬುಕ್ ಹೌಸ್ ಗೆ ಫೋನ್ ಮಾಡಿ ಕನ್ನಡ ಕಾಮಿಕ್ಸ್ ಹಾಗೂ ಕನ್ನಡದ ಮಕ್ಕಳ ಕಥೆಗಳು ಇರುವ ಎಲ್ಲಾ ಪುಸ್ತಕಗಳನ್ನು ಆರ್ಡರ್ ಮಾಡಿದ. ಸುಮಾರು ಐದು ಸಾವಿರ ಪುಸ್ತಕಗಳು ಬೇಕು ನಾನು ನವೆಂಬರ್ ಮೊದಲ ವಾರದಲ್ಲಿ ಬೆಂಗಳೂರಿಗೆ ಬರುತ್ತೇನೆ ಆಗ ಕಳುಹಿಸುವ ವಿಳಾಸ ತಿಳಿಸುತ್ತೇನೆ ಎಂದು ಹೇಳಿದ.

ಅಂದುಕೊಂಡಂತೆ ನವಂಬರ್ ಮೊದಲ ದಿನವೇ ಇಂಡಿಯಾಗೆ ಬಂದ ಕಸ್ತೂರಿ ಏಂಟು ದಿನ ಬೆಂಗಳೂರಿನಲ್ಲಿ ಅಪ್ಪ-ಅಮ್ಮನ ಜೊತೆ ಇದ್ದ. ಮತ್ತೆ ಊರಿಗೆ ಹೋಗಲು ಅಜಿತನಿಗೆ ಫೋನ್ ಮಾಡಿದ.

ಮೊದಲೇ ತಿಳಿಸಿದಂತೆ ಅಜಿತ  ಎರಡು ಮೂರು ಕಡೆ ರಾಜ್ಯೋತ್ಸವದ ಕಾರ್ಯಕ್ರಮ ಮಾಡಲು ವ್ಯವಸ್ಥೆ ಮಾಡಿದ್ದ. ಹಾಗೆ ಕಸ್ತೂರಿಗೂ ಇರಲು ಹೋಟೇಲ್ ರೂಮನ್ನು ಬುಕ್ ಮಾಡಿದ್ದ.

ಬೆಂಗಳೂರಿಗೆ ಬಂದ ತಕ್ಷಣ ಅಜಿತ್ ಗೆ ಫೋನ್ ಮಾಡಿ ನಾನು ಬೆಂಗಳೂರಿಗೆ ಬಂದಿದ್ದೇನೆ. ಸ್ವಪ್ನ ಬುಕ್ ಹೌಸ್ ಅಲ್ಲಿ ಐದು ಸಾವಿರ ಪುಸ್ತಕಗಳನ್ನು ಆರ್ಡರ್ ಮಾಡಿದ್ದೇನೆ. ಅದನ್ನು ನಾನು ತೆಗೆದುಕೊಂಡು ಬರಲು ರಿಸ್ಕ್ ಆಗುತ್ತದೆ. ಅವರೇ ಎಲ್ಲಿಗೆ ಹೇಳಿದರೆ ಅಲ್ಲಿಗೆ ಸಪ್ಲೈ ಮಾಡುತ್ತಾರೆ.ಹಳ್ಳಿಯ ಶಾಲೆಗಳಲ್ಲಿ ವಾಚನಾಲಯಕ್ಕೆ ಹಾಗೂ ಎಲ್ಲಾ ಮಕ್ಕಳಿಗೂ  ಹಂಚುವ ತೀರ್ಮಾನ ನನ್ನದು ಅದಕ್ಕೆ ಅದನ್ನು ಎಲ್ಲಿ ಕಳುಹಿಸಲು ಹೇಳಲಿ ನಿಮ್ಮ ಮನೆಯ ವಿಳಾಸ ಕೊಡಲಾ…. ಎಂದು ಕೇಳಿದ.

"ಹಾಗೆ ಮಾಡು ನಮ್ಮ ಮನೆಗೆ ಕಳುಹಿಸಲು ಹೇಳು ಆಮೇಲೆ ನಾವು ಯಾರ್ಯಾರಿಗೆ ಕೊಡಬೇಕು ತೆಗೆದುಕೊಂಡು ಹೋಗೋಣ…ಮತ್ತೆ ಯಾವಾಗ ಬರುತ್ತೀಯಾ… ನಾನೇ ಕರೆದುಕೊಂಡು ಹೋಗಲು ಕಾರು ತೆಗೆದುಕೊಂಡು ಬರಲಾ…" ಎಂದ. 

ಬೇಡ ಬೇಡ ನಾನು ನನ್ನ ತಮ್ಮ ರವಿ ಜೊತೆ ಬರುತ್ತೇನೆ ಎಂದ.

ಹೇಳಿದಂತೆ ಒಂದು ವಾರ ಅಪ್ಪ ಅಮ್ಮನ ಜೊತೆ ಇದ್ದು ನಂತರ ಶನಿವಾರ ಬೆಳಿಗ್ಗೆ ರವಿ ಹಾಗೂ ಅಪ್ಪ ಅಮ್ಮನ ಜೊತೆ ಕಾರಿನಲ್ಲಿ ತಮ್ಮ ಊರಿಗೆ ಹೊರಟ. ಉಷಾ ಹಾಗೂ ಮಗುವನ್ನು ಅವರ ತಾಯಿ ಮನೆಗೆ ಕಳುಹಿಸಿದ್ದ. 

ಅಜಿತನ  ಮನೆಯಲ್ಲಿ ಇವರಿಗಾಗಿ ಎಲ್ಲರೂ ಕಾಯುತ್ತಿದ್ದರು ಕಸ್ತೂರಿಯ ಅಪ್ಪ ಅಮ್ಮನಿಗೂ ಊರಿಗೆ ಬಂದಿದ್ದು ಏನೋ ಖುಷಿ…ಇಲ್ಲಿ ಮಾತುಕತೆ ಊಟ ಮುಗಿದ ನಂತರ 

ಅಜಿತ ಹೇಳಿದ" ಕಸ್ತೂರಿ ರಾತ್ರಿ ನಿನಗೆ ಉಳಿಯಲು ಪೇಟೆಯ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದೇನೆ. ನೀನು ಎಷ್ಟು ದಿನ ಇರುತ್ತೀಯಾ ಅಂತ ಕನ್ಫರ್ಮ್ ಮಾಡಿಬಿಡು”.

ಏಯ್…ನಿಮ್ಮ ಮನೆಯಲ್ಲಿ ನಾನೊಬ್ಬ ಜಾಸ್ತಿ ಆಗುತ್ತೀನಾ… ಎಂಟು ದಿನವೋ…ಹದಿನೈದು ದಿನವೋ… ಇರುತ್ತೇನೆ. ಅಮ್ಮ ಅಷ್ಟು ದಿನ ನನಗೆ ಊಟ ಹಾಕುವುದಿಲ್ಲವಾ ನೀವು ಎಂದು ಅವನ ಅಮ್ಮನನ್ನು ಕೇಳಿದ ಕಸ್ತೂರಿ. 

ಅಯ್ಯೋ ನಿನಗೆ ಖುಷಿಯಾದರೆ ಎಷ್ಟು ದಿನ ಬೇಕಾದರೂ ನಮ್ಮ ಮನೆಯಲ್ಲಿ ಇರು. ನೀನು ಅಮೇರಿಕಾದಲ್ಲಿ ಇದ್ದವನು. ನಿನಗೆ ಇಲ್ಲಿ ಸರಿಯಾಗುವುದಿಲ್ಲವೇನೋ.. ಅಂದುಕೊಂಡು ರೂಮ್ ಬುಕ್ ಮಾಡಿದ್ದೇನೆ ಎಂದ ಅಜಿತ ಖುಶಿಯಿಂದ.

ಕಸ್ತೂರಿಯನ್ನು ಅಲ್ಲಿ ಬಿಟ್ಟು ಉಳಿದವರು, ಹತ್ತಿರದ ಊರಿನಲ್ಲಿ ಇರುವ ಇನ್ನೊಬ್ಬರು ನೆಂಟರ ಮನೆಗೆ ಹೋಗಿ ನಾಳೆ ಬೆಂಗಳೂರಿಗೆ ವಾಪಸ್ ಆಗುತ್ತೇವೆ ಎಂದು ಹೊರಟರು.

ಇಲ್ಲಿ ಓಡಾಡಿದರೂ ಅಜಿತನ ಕಾರು ಇತ್ತು.

ರಾತ್ರಿ ಊಟ ಮುಗಿದ ಮೇಲೆ ಸ್ವಪ್ನದಿಂದ ಬುಕ್ಸ್ ಎಲ್ಲಾ ಬಂದಿದೆ, ಒಂದ್ಸಲ ಚೆಕ್ ಮಾಡಿ ಬಿಡು ನಾನು ಬಾಕ್ಸ್ ಓಪನ್ ಮಾಡಿಲ್ಲ ಎಂದ ಅಜಿತ.  

ಬುಕ್ಸ್ ಎಲ್ಲಾ ಓಪನ್ ಮಾಡಿ ನೋಡಿದಾಗ ಚಂದ ಚಂದದ ಕನ್ನಡದ ಮಕ್ಕಳ ಕಥೆ ಪುಸ್ತಕಗಳು ಇದ್ದವು ಅದನ್ನು ನೋಡಿ ಅಜಿತ್ ನ ಮುಖ ಅರಳಿತು.. ಕಸ್ತೂರಿ ಈ ಪುಸ್ತಕಗಳನ್ನು ನೋಡಿದರೆ ನನಗೆ ಓದಬೇಕೆಂಬ ಆಸೆ ಉಂಟಾಗುತ್ತಿದೆ, ಬಾಲ್ಯದಲ್ಲಿ ನಾವು ಮಕ್ಕಳ ಪುಸ್ತಕಕ್ಕಾಗಿ ಎಷ್ಟು ಹುಡುಕಾಡುತ್ತಿದ್ದೆವು, ಅಲ್ಲವಾ…??. ಒಬ್ಬರಿಂದ ಒಬ್ಬರು ಕಿತ್ತುಕೊಂಡು ಓದುತ್ತಿದ್ದೆವು..ಎಂದ‌

ಹೂ ಕಣೋ ಅದಕ್ಕೆ ಮಕ್ಕಳಿಗೆ ಕನ್ನಡದ ಮೇಲೆ ಪ್ರೀತಿ ಬರಲಿ ಓದುವ ಹವ್ಯಾಸ ಬೆಳೆಯಲಿ ಎಂದು ನಾನು ಮಕ್ಕಳಿಗೆ ಕನ್ನಡ ಪುಸ್ತಕಗಳನ್ನು ಕೊಡಲು ತೀರ್ಮಾನ ಮಾಡಿಕೊಂಡೆ ಎಂದ ಕಸ್ತೂರಿ.

 ಆದರೆ ನಿನಗೊಂದು ನಿಜ ವಿಷಯ ತಿಳಿಸುತ್ತೇನೆ ಬೇಸರ ಮಾಡಿಕೊಳ್ಳಬೇಡ ನೀನು ತಿಳಿದಂತೆ ಈಗ ಈ ಹಳ್ಳಿಯಲ್ಲೂ ಕನ್ನಡ ಭಾಷೆ ಪ್ರಾಮುಖ್ಯತೆ ಉಳಿಸಿಕೊಂಡಿಲ್ಲ. ಇಲ್ಲಿಯೂ ಎಲ್ಲರೂ ಇಂಗ್ಲೀಷ್ ಎಂದು ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗೆ ಹಾಕಿದ್ದಾರೆ.

ನೋಡು ನಮ್ಮ ಮನೆಯಲ್ಲಿಯೇ  ನನ್ನ ಹೆಂಡತಿ ಇಬ್ಬರೂ ಮಕ್ಕಳನ್ನು ಪೇಟೆಯಲ್ಲಿ ಕಾನ್ವೆಂಟಿನಲ್ಲಿ ಓದಿಸುತ್ತಿದ್ದಾಳೆ, ಅಲ್ಲೇ ಒಂದು ಸಣ್ಣ ಮನೆ ಮಾಡಿಕೊಂಡು ಮಕ್ಕಳ ಜೊತೆ ಅವಳು ಇರುತ್ತಾಳೆ. ನಾನು ಅಮ್ಮ ಅಪ್ಪ ಹಳ್ಳಿಯಲ್ಲಿ ಇದ್ದೇವೆ.

ಈ ಸುತ್ತ ಮುತ್ತಲ ಹಳ್ಳಿಗಳಲ್ಲಿ ಹೆಚ್ಚು ಕಡಿಮೆ ಹೀಗೆ ಆಗಿದೆ. ಎಲ್ಲರೂ ಇಂಗ್ಲೀಷ್ ವ್ಯಾಮೋಹಕ್ಕೆ ಬಲಿಯಾಗಿದ್ದಾರೆ. ಕನ್ನಡ ಪುಸ್ತಕಗಳನ್ನು ಮಕ್ಕಳು ಓದುವುದಿಲ್ಲ. ಮುಟ್ಟುವುದು ಇಲ್ಲ ಮೊಬೈಲ್ ಟಿವಿ ಜೊತೆಗೆ ಇಂಗ್ಲಿಷ್ ಕಾಮಿಕ್ಸ್ ಗಳನ್ನು ಓದುತ್ತಾರೆ. ನೀನು ಇಂಗ್ಲಿಷ್ ಪುಸ್ತಕ ತಂದಿದ್ದರೆ ಎಲ್ಲರೂ ಖುಷಿಪಡುತ್ತಿದ್ದರು ಎಂದ ಅಜಿತ.

ನೋಡೋಣ ನಾಳೆ ರಾಜ್ಯೋತ್ಸವದ ಕಾರ್ಯಕ್ರಮ ಇದೆ ಅಲ್ಲಿ ಸುಮಾರು ಮಕ್ಕಳು ಸೇರುತ್ತಾರೆ ಎಂದ ಅಜಿತ.

ಕಸ್ತೂರಿ ಹಾಗೂ ಅಜಿತ್ ಮರುದಿನ ರಾಜ್ಯೋತ್ಸವದ ಕಾರ್ಯಕ್ರಮಕ್ಕೆ ಅವರು ಕಲಿತ ಶಾಲೆಗೆ ಹೋದರು. ಅಲ್ಲಿ ಊರವರೆಲ್ಲಾ ಸೇರಿ ತುಂಬಾ ಗ್ರಾಂಡ್ ಆಗಿ ಆರೆಂಜ್ ಮಾಡಿದ್ದರು. ಆದರೆ ಅಲ್ಲಿಯವರ ಮಾತು ನಡೆ ನುಡಿ ನೋಡಿ ಕಸ್ತೂರಿಗೆ ಒಂದು ತರಹವಾಯಿತು.

 ತಾನು ಅಮೆರಿಕದಲ್ಲಿದ್ದರೂ ಶುದ್ಧ ಕನ್ನಡದಲ್ಲಿ ಮಾತನಾಡುತ್ತಿದ್ದ, ಕನ್ನಡವನ್ನು ತುಂಬಾ ಪ್ರೇಮಿಸುತ್ತಿದ್ದ‌, ಇಲ್ಲಿ ನೋಡಿದರೆ ಪ್ರತಿಯೊಬ್ಬರ ಮಾತಿನಲ್ಲೂ ಇಂಗ್ಲಿಷ್ ಪದಗಳೇ ಜಾಸ್ತಿ.. ಕನ್ನಡ ಸರಿಯಾಗಿ ಬರುವುದೇ ಇಲ್ಲವೇನೋ ಅನ್ನುವ ಹಾಗೆ ಇದ್ದರು. 

ಮಾಡುತ್ತಿರುವುದು ರಾಜ್ಯೋತ್ಸವ ಕಾರ್ಯಕ್ರಮ… ಆದರೆ ಅರ್ಧಕ್ಕರ್ಧ ಜನ ಇಂಗ್ಲೀಷೇ ಜಾಸ್ತಿ ಮಾತನಾಡುತ್ತಿದ್ದರು. 

ಕಸ್ತೂರಿ ತಂದ ಪುಸ್ತಕಗಳನ್ನು ನೋಡಿದ ಸಂಘಟಕರು ಮೊದಲೇ ಹೇಳಿದರು "ಅಯ್ಯೋ ನೀವು ಎಲ್ಲಿದ್ದೀರಾ… ಸರ್ ಇವಾಗ ಯಾರು ಕನ್ನಡ ಪುಸ್ತಕ ಓದುತ್ತಾರೆ. ಮಕ್ಕಳಿಗೆ ಕನ್ನಡ ಅಕ್ಷರಗಳ ಪರಿಚಯವೇ ಇಲ್ಲ.  ಎಲ್ಲಾ ಮಕ್ಕಳು ಕಾನ್ವೆಂಟ್ನಲ್ಲೇ ಓದುತ್ತಿದ್ದಾರೆ. ನೀವು ಹ್ಯಾರಿ ಪಾಟರ್, ಸೀರಿಸ್ ತಂದಿದ್ದರೆ ಎಲ್ಲರೂ ಓದುತ್ತಿದ್ದರು. 

ಕಾರ್ಯಕ್ರಮ ಶುರುವಾಯಿತು. ಮೊದಲಿಗೆ ಅತಿಥಿಗಳನ್ನು ಪರಿಚಯಿಸಿದರು. ನಂತರ   ಕಸ್ತೂರಿಯೂ  ಸೇರಿ  ನಾಲ್ಕೈದು ಜನರಿಗೆ ಸನ್ಮಾನ ಮಾಡಿದರು.

ನಂತರ ಸಂಘಟಕರು ಕಸ್ತೂರಿಯನ್ನು ಮತ್ತೊಮ್ಮೆ ಪರಿಚಯ ಮಾಡಿಸಿ...

 " ಕಸ್ತೂರಿ ಅವರು ನಮ್ಮ ಊರಿನ ಹುಡುಗ, ಇವರು ನಮ್ಮ ಹಳ್ಳಿಯ ಮೇಲೆ, ಕನ್ನಡದ ಮೇಲೆ, ತುಂಬಾ ಅಭಿಮಾನ ಇಟ್ಟುಕೊಂಡಿದ್ದಾರೆ. ತುಂಬಾ ವರ್ಷದಿಂದ ಅಮೇರಿಕಾದಲ್ಲಿ ನೆಲೆಸಿದ್ದರು ಕನ್ನಡದ ಬಗ್ಗೆ  ಬಹಳ ಪ್ರೀತಿ, ಅಭಿಮಾನ ಇಟ್ಟುಕೊಂಡಿದ್ದಾರೆ. ಕನ್ನಡ ಪುಸ್ತಕಗಳನ್ನು ಬರೆಯುತ್ತಾರೆ, ನಮ್ಮ ಶಾಲೆಯ ವಾಚನಾಲಯಕ್ಕೆ ಹಾಗೂ ಕನ್ನಡಗರಿಗಾಗಿ ಮಕ್ಕಳು ಓದುವುದು ರೂಡಿಸಿಕೊಳ್ಳಲಿ ಅಂತ ಎಲ್ಲರಿಗೂ ಫ್ರೀಯಾಗಿ ಪುಸ್ತಕಗಳನ್ನು ಕೊಡುತ್ತಿದ್ದಾರೆ.. ಎಂದು ಕಸ್ತೂರಿ ಕೈನಲ್ಲೇ ಎಲ್ಲರಿಗೂ ಪುಸ್ತಕಗಳನ್ನು ಕೊಡಿಸಿದರು.

ಪುಸ್ತಕ ತೆಗೆದುಕೊಂಡಾಗ ಆ ಮಕ್ಕಳ ಮುಖ ಭಾವನೆಗಳನ್ನು ನೋಡಿದ ಕಸ್ತೂರಿಗೆ ತುಂಬಾ ಬೇಸರವಾಯಿತು.

ಪುಸ್ತಕ ತೆಗೆದುಕೊಂಡ ಮಕ್ಕಳು ಅದು ಕನ್ನಡ ಪುಸ್ತಕ ಎಂದಾಗ ಮುಖವನ್ನು ಒಂದು ತರಹ ಮಾಡಿದರು. ಆದರೂ ಉಚಿತವಾಗಿ ಸಿಕ್ಕಿದ್ದು ಎಂದು ತೆಗೆದುಕೊಂಡು ಹೋದರು. 

ಅವರ ಮುಖದಲ್ಲಿ ಪುಸ್ತಕ ನೋಡಿ ಖುಷಿಯೇ ಇರಲಿಲ್ಲ ,ಅದೇ ಕಸ್ತೂರಿಗೆ ತನ್ನ ಬಾಲ್ಯದ ನೆನಪಾಯಿತು. ತಾವು ಒಂದು ಪುಸ್ತಕ ಸಿಕ್ಕಿದರೆ ಎಷ್ಟು ಮುಖ ಅರಳಿಸುತ್ತಿದ್ದರು. 

ಕಸ್ತೂರಿಯನ್ನು ಸಾಹಿತಿ ಕನ್ನಡದ ಪುಸ್ತಕಗಳನ್ನು ಬರೆದಿದ್ದಾರೆ ಅಂತ ಯಾರು  ಆದರಿಸಲಿಲ್ಲ. ಆದರೆ ತುಂಬಾ ವರ್ಷದಿಂದ ಅಮೇರಿಕಾದಲ್ಲಿ ಇದ್ದಾನೆ ಎನ್ನುವ ಅಭಿಮಾನದಿಂದ ಅವನನ್ನು ನೋಡಿ ಆದರಿಸುವವರೇ  ಜಾಸ್ತಿ ಆಗಿತ್ತು.

 ರಾಜ್ಯೋತ್ಸವದ ಕಾರ್ಯಕ್ರಮ ಮಾಡಿದ ಎಲ್ಲಾ ಕಡೆಯೂ ಬಹುಶಃ ಇದೆ ರೀತಿ ಇತ್ತು.

ಸುಮಾರು ಸುತ್ತಮುತ್ತಲಿನ ಹತ್ತು ಹನ್ನೆರಡು  ಶಾಲೆಗಳಲ್ಲಿ ವಾಚನಾಲಯಕ್ಕೆ ಕನ್ನಡ ಪುಸ್ತಕಗಳನ್ನು ಕೊಡಲು ಅಜಿತನ ಜೊತೆಗೆ ಹೋದ ಕಸ್ತೂರಿ.

ಪ್ರತಿಯೊಂದು ಶಾಲೆಯಲ್ಲಿಯೂ "ಅಯ್ಯೋ.. ಇಷ್ಟೊಂದು ಪುಸ್ತಕಗಳು ಸುಮ್ಮನೆ ಗೆದ್ದಲು ಹಿಡಿದು ಹೋಗುತ್ತದೆ. ಇದನ್ನು ಯಾಕೆ ತೆಗೆದುಕೊಂಡು ಬಂದಿದ್ದೀರಾ ಸರ್… ಪುಸ್ತಕ ಓದುವವರೇ ಇಲ್ಲ .. ನಮ್ಮ ಶಾಲೆಯಲ್ಲಿ ಮಕ್ಕಳು ತುಂಬಾ ಕಡಿಮೆ ಜನರು ಇರುವುದು.ಈಗ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ತುಂಬಾ ಕಡಿಮೆಯಾಗಿದ್ದಾರೆ ಎಲ್ಲರೂ ಪೇಟೆಯಲ್ಲಿ ಇಂಗ್ಲಿಷ್ ಸ್ಕೂಲಿಗೆ ಸೇರಿಸಿದ್ದಾರೆ.

ಇರುವ ಮಕ್ಕಳಿಗೆ ಓದಲಿ ಎಂದು ಕನ್ನಡ ಕಥೆ ಪುಸ್ತಕಗಳನ್ನು ಕೊಟ್ಟರೆ.. ಇಲ್ಲಿಯ ಅಪ್ಪ-ಅಮ್ಮಂದಿರು ಗಲಾಟೆ ಮಾಡುತ್ತಾರೆ.  ನಮ್ಮ ಮಕ್ಕಳಿಗೆ ಇಂಗ್ಲಿಷ್ ಕಲಿಸಿಕೊಡಿ ಕನ್ನಡ ಪುಸ್ತಕಗಳನ್ನು ಕೊಡಬೇಡಿ ಮುಂದೆ ಕೆಲಸಕ್ಕೆ ಹೋಗಲು ಇಂಗ್ಲಿಷ್ ಕಲಿತಿರಬೇಕು ಎನ್ನುತ್ತಾರೆ.. ಸರ್.. ಎಂದರು.

ಪ್ರತಿಯೊಂದು ಶಾಲೆಯಲ್ಲಿ ಇದೇ ತರಹದ ಮಾತುಗಳನ್ನು ಕೇಳಿ ಕಸ್ತೂರಿಗೆ ಬೇಸರವಾಯಿತು. ತಾವು ಅಮೇರಿಕಾದಲ್ಲಿ ಮಕ್ಕಳಿಗೆ ಕನ್ನಡ ಕಲಿಯಲಿ ಅಂತ ಎಷ್ಟೊಂದು ತರಹ ಕನ್ನಡ ಪುಸ್ತಕಗಳನ್ನು ಕೊಡುತ್ತೇವೆ. ಕನ್ನಡ ಹಾಡುಗಳನ್ನು ಹೇಳಿಕೊಡುತ್ತೇವೆ. ಆದರೆ ಇಲ್ಲಿ ಕರ್ನಾಟಕದಲ್ಲೇ ಇದ್ದ ಕನ್ನಡ ಜನರು ತಮ್ಮ ಮಕ್ಕಳಿಗೆ ಇಂಗ್ಲಿಷ್ ರುಚಿ ಅಂಟಿಸುತ್ತಿದ್ದಾರೆ…

ನಮ್ಮ ಕನ್ನಡನಾಡಿನ ಸ್ಥಿತಿ ಕಂಡು ಮಮ್ಮಲ ಮರುಗಿದ ಕಸ್ತೂರಿ..

ಮತ್ತೆ ಕನ್ನಡದ ಬಗ್ಗೆ ಪ್ರೀತಿ ಅಭಿಮಾನ ಹೆಚ್ಚಾಗಲೂ  ಏನಾದರೂ ಪರಿಹಾರ ಹುಡುಕಬೇಕು ಎಂದ ಅಜಿತನ ಬಳಿ ಕಸ್ತೂರಿ..

ಸವಿತಾ ರಮೇಶ 

 

 

 

 

 

 

 

 

.

 

 

 

 

 

 

 

 

Category : Books


ProfileImg

Written by savita hegde