ಮಗ ಆಶ್ರಿತ್ ಆಡಿದ ಮಾತು ಕೇಳಿ ದಂಗಾಗಿಬಿಟ್ಟಿದ್ದ ರಘುರಾಮ….!!. ಆ ದಿನ ಮುಂಜಾನೆ ಮಗ ಆಶ್ರಿತ್ ತನ್ನ ಅಜ್ಜಿರೇಣುಕಮ್ಮನ ಬಟ್ಟೆಯನ್ನು ಕೈಯಿಂದ ಮುಟ್ಟಿದ್ದ ಎನ್ನುವ ಕಾರಣಕ್ಕೆ ಸಿಟ್ಟಾಗಿದ್ದಳು ಪತ್ನಿ ಗಾಯತ್ರಿ. ಥೂ..ದರಿದ್ರದವನೆ ಎಷ್ಟು ಅಸಹ್ಯ ಕೆಲಸ ಮಾಡ್ತಿದ್ದೀಯಾ…ಆ ಹಾಳು ಮುದುಕಿ ಉಚ್ಚೆ ಹೊಯ್ದು ಗಲೀಜಾಗಿರುವ ಬಟ್ಟೆಯನ್ನು ಯಾರಾದ್ರೂ ಕೈಯಿಂದ ಮುಟ್ತಾರೇನೋ ದರಿದ್ರ.ಅದ್ಯಾವ ದೆವ್ವ ಮೆಟ್ಟಿಕೊಂಡಿದೆಯೋ ಈ ಹಾಳು ಮುದುಕಿಗೆ. ಬೆಳಿಗ್ಗೆಯಿಂದ ಸಂಜೆಯವೆರೆಗೆ ಹೊಟ್ಟೆ ಬಿರಿಯುವ ಹಾಗೆ ಹಾಳು ಮೂಳು ತಿನ್ನೋದು ರಾತ್ರಿ ಪೂರಾ ಬಟ್ಟೆಬರಿ ರಾಡಿ ಮಾಡಿಕೊಳ್ಳೋದು.ಇವಳು ಮಾಡೋ ಹೊಲಸನ್ನೆಲ್ಲ ನಾನು ಕ್ಲೀನ್ ಮಾಡೋವಾಗ್ಲೆ ವಾಂತಿ ಬರೋ ಹಾಗೆ ಆಗುತ್ತೆ ಅಯ್ಯಪ್ಪಾ ನನಗೇ ಆ ಹೊಲಸು ವಾಸನೆ ಸಹಿಸಿಕೊಳ್ಳೋಕಾಗಲ್ಲ.ಇವನಿಗೇನು ಬಂದಿದಿಯೋ, ಒಂಚೂರು ಅಸಹ್ಯ ಅನ್ನೋದೆ ಇಲ್ವಾಇವನಿಗೆ. ಹೊಲಸನ್ನೆಲ್ಲ ಕೈಯಲ್ಲೇ ಮುಟ್ಬಿಡ್ತಾನೆ. ಏನಾದ್ರು ಹೆಚ್ಚು ಕಡಿಮೆಯಾಗಿ ಇವನಿಗೆ ಆರೋಗ್ಯ ಕೆಟ್ಟರೆ ಯಾರು ನೋಡೋರು..ಈ ಮುದುಕಿ ನೋಡ್ತಾಳಾ ಹ್ಞಾ…? ಈ ಕೊಳಕು ಮುದುಕಿಯಿಂದ ಅದು ಯಾವಾಗ ಮುಕ್ತಿ ಸಿಗುತ್ತೋ ದೇವ್ರೆ. ಎನ್ನುತ್ತಾ ಸಿಟ್ಟಿನಿಂದ ಮಗನ ಕೈ ಹಿಡಿದು ಜೋರಾಗಿ ಜಗ್ಗಿ ಗಂಡನ ಕಡೆಗೆ ದೂಡಿದ್ದಳು. ಈ ಘಟನೆಯನ್ನೆಲ್ಲ ಕಿರುಗಣ್ಣಲ್ಲೇ ನೋಡುತ್ತಾ, ಕಂಡೂ ಕಾಣದಂತೆ ಟಿ ವಿ ಮುಂದೆ ಕುಳಿತಿದ್ದ ರಘುರಾಮನ ಕಾಲಿನ ಮೇಲೆ ಧೊಪ್ಪನೆ ಬಿದ್ದ ಆಶ್ರಿತ್. ಮುಖ ನೋಡಿದ ಆಶ್ರಿತನಿಗೆ "ಯಾಕಪ್ಪಾ ನಿಮ್ಮಮ್ಮನ ಮನಸು ನೋಯಿಸ್ತೀಯಾ?? ಅವಳನ್ನು ನೋಯಿಸಿದ್ರೆ ಶಾಪ ತಗಲುತ್ತೆ ಕಣೋ... ಎನ್ನುತ್ತಿದ್ದಂತೆ ಆಶ್ರಿತ್, "ನಿಮ್ಮಮ್ಮನ ಮನಸು ನೋಯಿಸ್ತೀಯಲ್ಲ ನಿನಗೆ ನಿಮ್ಮಮ್ಮನ ಶಾಪ ತಗಲಲ್ವಪಾ...!?!? ಎನ್ನುತ್ತಿದ್ದಂತೆ ಯಾರೋ ಮುಖಕ್ಕೆ ಸರಿಯಾಗಿ ಬಾರಿಸಿದಂತಾಗಿ ತಲೆ ತಗ್ಗಿಸಿದ ರಘುರಾಮ.