ಸಮಯ ಮತ್ತು ಸಂಬಂಧಗಳು

ಇಂದಿನ ಅತಿ ಮುಖ್ಯ ಅವಶ್ಯಕತೆ

ProfileImg
31 Mar '24
3 min read


image

ಸಮಯ ಹಾಗೂ ಸಂಬಂಧಗಳು

ಕಳೆದ ತಿಂಗಳು ಕಾರ್ಯ ನಿಮಿತ್ತ ನಮ್ಮ ಗ್ರಾಹಕರೊಬ್ಬರ ಮನೆಗೆ ಹೋಗಿದ್ದೆ.   ಕುಳಿತು ಮಾತನಾಡುವಾಗ ನಮಗೆ ಬೇಕಿದ್ದ ಕೆಲವು ದಾಖಲಾತಿಗಳನ್ನು ತಂದುಕೊಡಲು ಅವರು ಒಳಹೋದಾಗ ಅಲ್ಲಿಂದ ಅವರ ಹದಿನೈದು ಹದಿನಾರು ವರ್ಷದ ಮಗಳು ಹೊರಬಂದು ನಮ್ಮ ಎದುರೆ ನಿಂತಳು. ನಾನು ಸಹಜವಾಗಿ, ಏನು ಪುಟ್ಟಿ ನಿನ್ನ ಹೆಸರು ಎಂದೆ. ಆದರೆ ನಾನು ಕೇಳಿದ್ದು ಅವಳಿಗೆ ತಲುಪಲೇ ಇಲ್ಲ. ಅವಳು ತನ್ನದೇ ಭ್ರಮಾಲೋಕದಲ್ಲಿ ಇದ್ದಳು. ಅವಳಿಗೆ ಮನೆಗೆ ಹೊರಗಿನವರು ಯಾರೋ ಬಂದಿದ್ದಾರೆ ಎನ್ನುವ ಗಮನವೂ ಇರಲಿಲ್ಲ.  ತಂದೆ ಇದ್ದ ಜಾಗದತ್ತ ನೋಡುತ್ತಾ ತನ್ನ ಪಾಡಿಗೆ ತಾನು ಏನೋ ವಟಗುಟ್ಟುತ್ತಿದ್ದಳು.  ಆ ಹುಡುಗಿಯ ಹಾವಭಾವ, ನಡೆ ತುಂಬಾ ವಿಚಿತ್ರ ಅನ್ನಿಸಿ ನಾನು ನನ್ನ ಸಹೋದ್ಯೋಗಿ ನೋಡುತ್ತಿರುವಾಗಲೇ, ನಮಗೆ ನೀಡಬೇಕಾದ ದಾಖಲೆಗಳೊಂದಿಗೆ ಹೊರಬಂದ ಆ ಹುಡುಗಿಯ ತಂದೆ, ನಮ್ಮನ್ನು ಗಮನಿಸಿ ಎಲ್ಲಾ ಟಿವಿ ಧಾರಾವಾಹಿಗಳ ಪ್ರಭಾವ ಸರ್, ಅದರಲ್ಲಿ ಒಬ್ಬೊಬ್ಬರೇ ಮಾತನಾಡಿಕೊಳ್ಳುತ್ತಾರಲ್ಲ, ಅದನ್ನು ನೋಡಿ ಇವಳು ಹಾಗೆ ಮಾಡುವುದು ಕಲಿತ್ತಿದ್ದಾಳೆ ಎಂದರು. ತಕ್ಷಣಕ್ಕೆ ಏನು ಉತ್ತರ ಕೊಡಬೇಕು ತಿಳಿಯದೆ, ಹೇಳಲೋ ಬೇಡವೋ ಎನ್ನುವ ಭಾವದಲ್ಲಿ, ಒಮ್ಮೆ ಡಾಕ್ಟರ್ ಹತ್ತಿರ ತೋರಿಸಬೇಕಿತ್ತು ಎಂದೆ. ಹೌದು ಸರ್, ನಾನು ಹಾಗೆ ಅಂದುಕೊಂಡಿರುವೆ ಎಂದರು.

ಅಲ್ಲಿನ ಕೆಲಸ ಮುಗಿಸಿಕೊಂಡು ಹೊರಬಂದರೂ ಪದೇಪದೇ ಆ ಹುಡುಗಿ ನೆನಪಾಗತೊಡಗಿದಳು.   ನಗುನಗುತ್ತಾ, ಕುಣಿದು ಕುಪ್ಪಳಿಸುತ್ತಾ ಸಂತೋಷದಿಂದ ಇರಬೇಕಾದ ವಯಸ್ಸಿನಲ್ಲಿ ಈ ಹುಡುಗಿ ಏಕೆ ಹೀಗೆ ಎಂದು ಯೋಚಸುವಂತಾಯಿತು.  ಕೆಲಸದ ಒತ್ತಡದ ನಡುವೆ ಈ ವಿಷಯ ಎರಡು ದಿನಕ್ಕೆ ಮರೆತು ಹೋಯಿತು.  ಮೊನ್ನೆ  ಗೆಳೆಯರೊಬ್ಬರ ಜೊತೆ ಮನಃಶಾಸ್ತ್ರಜ್ಞರನ್ನು ಭೇಟಿಯಾಗುವ ಅವಕಾಶ ಮೂಡಿಬಂತು. ಅಂದು ಅವರು ಆರಾಮವಾಗಿದ್ದರು ಹಾಗಾಗಿ ಗೆಳೆಯನ ಕೆಲಸವಾದ ಮೇಲೆ ಲೋಕಾಭಿರಾಮವಾಗಿ ಮಾತನಾಡುವಾಗ ಅಂದು ನೋಡಿದ ಹುಡುಗಿಯ ನೆನಪಾಗಿ ಕೇಳಿದಾಗ, ಅವರಿಗೆ ಅದೇನು ಹೊಸ ವಿಷಯ ಅನಿಸಲೇ ಇಲ್ಲ.  ನೋಡಿ ಮಿಸ್ಟರ್......  ಆ ಹುಡುಗಿಯನ್ನು ನೋಡಿ ನಿಮಗೆ ಆಶ್ಚರ್ಯ ಆಗಿರಬಹುದು ಆದರೆ ನನಗೆ ಆಗಲ್ಲ. ಏಕೆಂದರೆ ನಾನೊಬ್ಬ ಮನಃಶಾಸ್ತ್ರಜ್ಞ ಅಲ್ಲದೆ ಈಗಂತೂ ಈ ರೀತಿಯ ಸಾಕಷ್ಟು ಕೇಸುಗಳು ನನ್ನ ಬಳಿ ಚಿಕಿತ್ಸೆಗೆ ಬರುತ್ತಿವೆ. ಇದರಲ್ಲಿ ಎಲ್ಲಾ ವಯಸ್ಸಿನವರು ಬರುತ್ತಿದ್ದಾರೆ ಆದರೆ ನೀವು ಹೇಳಿದ ವಯಸ್ಸಿನವರ ಸಂಖ್ಯೆ ಸ್ವಲ್ಪ ಹೆಚ್ಚಿದೆ ಅಷ್ಟೇ.

ಸರ್, ಇದಕ್ಕೆ ಕಾರಣ......?

ಇದಕ್ಕೆ ಕಾರಣ ಟಿವಿ, ಮೊಬೈಲ್, ಕಂಪ್ಯೂಟರ್ ಮಾತ್ರ ಅಲ್ಲ. ನಾವು ಬದುಕುತ್ತಿರುವ ರೀತಿ, ನಮ್ಮ ಮನೆಯ ಹಾಗೂ ಅದರ ಸುತ್ತಮುತ್ತಲಿನ ವಾತಾವರಣ,  ನಮ್ಮ ಮನಸ್ಥಿತಿ ಇನ್ನೂ ಹಲವು ಕಾರಣಗಳಿವೆ. ಅತೀ ಮುಖ್ಯವಾಗಿ ಸಮಯ ಎನ್ನಬಹುದು. ಏಕೆಂದರೆ ಇಂದು ಯಾರಿಗೂ ಯಾವುದಕ್ಕೂ ಸಮಯವಿಲ್ಲ,  ಸಮಯದ ಜೊತೆಗೆ ಹಿಂದಿನ ಹಾಗೆ ಕಷ್ಟಸುಖಗಳನ್ನು ಹಂಚಿಕೊಳ್ಳಲು ಕೂಡು ಕುಟುಂಬಗಳೂ ಇಲ್ಲ . ಹಿಂದೆ ಮಗು ಹುಟ್ಟಿದಾಗಿನಿಂದ ಬೆಳೆದು ದೊಡ್ಡದಾಗುವವರೆಗೂ ಮನೆಯಲ್ಲಿ ತಂದೆ ತಾಯಿಯರ ಜೊತೆ ಅಜ್ಜಿ ತಾತ, ಚಿಕ್ಕಪ್ಪ ದೊಡ್ಡಪ್ಪ, ಅಣ್ಣ ತಮ್ಮ, ಅಕ್ಕ ತಂಗಿಯರ ದಂಡೇ ಇರುತ್ತಿತ್ತು. ಕಷ್ಟ ಸುಖ ಎರಡರಲ್ಲೂ ಇವರೆಲ್ಲಾ ಭಾಗಿಯಾಗಿರುತ್ತಿದ್ದರು. ಆದರೆ ಈಗ ಎಲ್ಲೆಲ್ಲೂ ವಿಭಕ್ತ ಕುಟುಂಬಗಳು,  ಗಂಡ ಹೆಂಡತಿ ಇಬ್ಬರೂ ದುಡಿಯಲು ಹೋಗುತ್ತಾರೆ. ಮನೆಯಲ್ಲಿ ಒಂದೊ ಎರಡೋ ಮಕ್ಕಳು,  ಅವುಗಳು ಹಠ ಮಾಡಬಾರದು ಎನ್ನುವ ಕಾರಣಕ್ಕೆ ಮೊಬೈಲ್, ಕಂಪ್ಯೂಟರ್ ತಂದುಕೊಡುತ್ತಾರೆ.  ಹೀಗೆ ತಂದುಕೊಡುವುದು ತಪ್ಪಲ್ಲ ಆದರೆ ಅವರು ಮನೆಯಲ್ಲಿ ಇರುವಷ್ಟು ಕಾಲ ಮಕ್ಕಳೊಂದಿಗೆ ಬೆರೆಯಬೇಕು, ಅವರ ಬೇಕು ಬೇಡಗಳನ್ನು ಪ್ರೀತಿಯಿಂದ ವಿಚಾರಿಸಬೇಕು, ಎಲ್ಲದ್ದಕ್ಕೂ ಜೊತೆಗೆ ತಾವಿದ್ದೇವೆ ಎನ್ನುವ ಭರವಸೆ ತುಂಬಬೇಕು.   ಸಾಧ್ಯವಾದಾಗ ಬಂಧುಬಳಗದವರ ಬಳಿ ಕರೆದೊಯ್ದು ಸಂಬಂಧಗಳನ್ನು ಬೆಸೆಯಬೇಕು.  ಮಕ್ಕಳಿಗೆ ಹೊರಗಡೆ ತಮ್ಮ ಸ್ನೇಹಿತರೊಂದಿಗೆ ಆಟವಾಡಲು ಬಿಡಬೇಕು. ಹೀಗೆ ಆದಾಗ ಮಕ್ಕಳು ಒಂಟಿತನ ಅನುಭವಿಸುವುದು ತಪ್ಪುತ್ತದೆ ಮತ್ತೆ ನೀವು ಹೇಳಿದಂತ ಸಮಸ್ಯೆಗಳು ಸೃಷ್ಟಿ ಆಗುವುದಿಲ್ಲ. ಇದು ಉದ್ಯೋಗಸ್ಥ ಪೋಷಕರ ಮನೆಯಲ್ಲಿ ಮಾತ್ರವಲ್ಲ, ಗಂಡ ಹೊರಗಡೆ ದುಡಿಯಲು ಹೊರಹೋದರೆ, ಮನೆಯಲ್ಲಿರುವ ಗೃಹಿಣಿ ತನ್ನ ಮಕ್ಕಳ ಬಗ್ಗೆ ನಿಗಾ ವಹಿಸಬೇಕು. ಅವಳು ಟಿವಿ ಧಾರಾವಾಹಿಗಳ ದಾಸಿಯಾದರೆ, ಕಿಟ್ಟಿ ಪಾರ್ಟಿ, ಶಾಪಿಂಗ್ ಹುಚ್ಚು ಇರುವವಳಾಗಿ ಮಕ್ಕಳ ಕಡೆ ಗಮನ ಕೊಡದಿದ್ದರೆ ಸಮಸ್ಯೆಗೆ ನಾಂದಿ ಮಾಡಿದಂತೆಯೇ. ಮನುಷ್ಯ ಸಂಘಜೀವಿ, ಸುಮಧುರ ಸಂಬಂಧಗಳು ಇದ್ದಷ್ಟು ಸಮಸ್ಯೆಗಳು ಕಡಿಮೆ.  

ನಾನು ಹೇಳುತ್ತಿರುವುದು ಅತೀ ಮುಖ್ಯ ಎನಿಸುವ ಒಂದೆರೆಡು ಕಾರಣಗಳು ಮಾತ್ರ. ಇದಲ್ಲದೆ ಇನ್ನೂ ಹಲವಾರು ಕಾರಣಗಳು ಮನುಷ್ಯನನ್ನು ಬೇರೆ ಬೇರೆ ರೀತಿಯಲ್ಲಿ ಕಾಡುತ್ತಿವೆ. ಇಂತಹ ಸಮಸ್ಯೆಗಳಿಗೆ ನಾವೇ ಕಾರಣ ಹಾಗೆಯೇ ಪರಿಹಾರಕ್ಕೂ ನಾವೇ ಔಷಧಿ ಅಲ್ಲವೇ ಎಂದರು. ಅವರು ಹೇಳಿದ್ದು ಸರಿಯಿದ್ದ ಮೇಲೆ ನಾನು ಬೇರೆ ಹೇಳಲು ಸಾಧ್ಯವೇ?  

ಜಿ. ಹರೀಶ್ ಬೇದ್ರೆ

Disclaimer: The views expressed in this article are solely those of the author and do not represent the views of Ayra or Ayra Technologies. The information provided has not been independently verified. It is not intended as medical advice. Readers should consult a healthcare professional or doctor before making any health or wellness decisions.
Category:Health and Wellness



ProfileImg

Written by Harish Bedre

0 Followers

0 Following