ಕರಾವಳಿಯ ಸಾವಿರದೊಂದು ದೈವಗಳು -ನಾಗ ಭೂತ

ನಾಗಾರಾಧನೆ ಮತ್ತು ದೈವಾರಾಧನೆಗಳ ಸಮನ್ವಯ

ProfileImg
26 Apr '24
5 min read


image


ಕರಾವಳಿಯ ಸಾವಿರದೊಂದು ದೈವಗಳ/ಭೂತಗಳ ಅದ್ಭುತ ಜಗತ್ತಿನಲ್ಲಿ ಸುತ್ತಾಡಿದ ನಾನು ಅನೇಕ ರೋಮಾಂಚನಕಾರಿ ಅನುಭವಗಳನ್ನು ಪಡೆದಿದ್ದೇನೆ 

ಚೌಕಾರಿನಲ್ಲಿ ಮೂರು ಹೆಡೆಯ ನಾಗ ಭೂತದ ಫೋಟೋ ತೆಗೆದದ್ದು ಕೂಡ  ಅಂಥಹ ಒಂದು ಮೈ ನವಿರೇಳಿಸುವ ಕ್ಷಣ


ಇಲ್ಲಿ ನಾಗ ಭೂತದ ಫೋಟೋ ತೆಗೆಯಬಾರದು ,ನಾಗ ಭೂತದ ಮೇಲೆ ಕ್ಯಾಮರ ದ ಬೆಳಕು ಬಿದ್ದರೆ ಫೋಟೋ ಹಿಡಿದವರ ಕಣ್ಣು ಹೋಗುತ್ತದೆ ಎಂಬ ನಂಬಿಕೆ ಇತ್ತು .ಆಗ ನಾನು ಕ್ಯಾಮರ ದ ಫ್ಲಾಶ್ ಹಾಕದೆ ತೆಗೆಯಬಹುದೇ ಎಂದು ಭೂತದಲ್ಲಿ ಅರಿಕೆ ಮಾಡಿದೆ ,ನಾಗ ಭೂತ ಮಾತನಾಡುವುದಿಲ್ಲ ಅಲ್ಲಿದ್ದ ಅರಸಿನ ಬೂಳ್ಯವನ್ನು ನೀಡುವ ಮೂಲಕ ಸಾಂಕೇತಿಕವಾಗಿ ಅನುಮತಿ ಕೊಟ್ಟಿತು ,ಹಾಗಾಗಿ ನಾನು ಈ ಫೋಟೋ ಹಿಡಿದಿದ್ದೆ ,ದೈವದ ದಯದಿಂದ ಫ್ಲಾಶ್ ಹಾಕದೆ ಇದ್ದಾಗಲೂ ಫೋಟೋ  ಚೆನ್ನಾಗಿಯೇ ಬಂದಿದೆ .ಚೌಕಾರಿನಲ್ಲಿ ಮೂರು ದಿವಸ ಹಗಲು ರಾತ್ರಿ ಕೋಲ ಇತ್ತು ಅದಾಗಿ ಮರುದಿನವೇನಾನು ನಡಿ ಬೈಲಿಗೆ ಬಂದು ಕಂಬಳ ಕೋರಿ ನೇಮ ಎರಡು ದಿನ ಹಗಲು ರಾತ್ರಿ ರೆಕಾರ್ಡ್ ಮಾಡಿದೆ .ಅದಾದ ಮರುದಿನ ಕೈರಂಗಳ ಹತ್ತಿರ ಒಂದು ದಿವಸ ರೆಕಾರ್ಡ್ ಮಾಡಿದೆ ,ಹೀಗೆ ಸತತವಾಗಿ ಏಳು ಎಂಟು ದಿನ ಹಗಲು ರಾತ್ರಿ ಭೂತ ಕೋಲ ರೆಕಾರ್ಡ್ ಮಾಡಿದ್ದಕ್ಕೋ ಅಥವಾ ಆತಂಕಕ್ಕೋ ಗೊತ್ತಿಲ್ಲ ,ಇಲ್ಲೆಲ್ಲಾ ರೆಕಾರ್ಡ್ ಮಾಡಿ ಬರುವಷ್ಟು ಹೊತ್ತಿಗೆ ಕಣ್ಣು ಊದಿಕೊಂಡಿತ್ತು,ಜೊತೆಗೆ ನೋಟ ಅಸ್ಪಷ್ಟವಾಗಿತ್ತು ,
ಒಂದು ಕ್ಷಣ ಭಯವಾಯಿತು ,ಚೌಕಾರಿನಲ್ಲಿ ನಾಗ ಭೂತದ ಫೋಟೋ ತೆಗೆದದ್ದಕ್ಕೆ ಹೀಗೆ ಆಯಿತೇನೋ ಎಂದು !
ಮನೆಯಲ್ಲಿ ಯಾರಲ್ಲಿ ಹೇಳಲೂ ಭಯ !ಆಗದು ಎಂದಿರುವಲ್ಲಿ ಫೋಟೋ ಹಿಡಿದದ್ದು ಏಕೆ ಎಂದು ನನ್ನನ್ನೇ ಬೈದರೆ ಎಂದು !
ಆದರೆ ದೈವದ ಅನುಮತಿ ಪಡೆದೇ ಫೋಟೋ ತೆಗೆದದ್ದು ತಾನೇ ,ಹಾಗಾಗಿ ಮನದಲ್ಲೇ ನಾಗನಿಗೆ "ನನ್ನ ದೃಷ್ಟಿಯನ್ನು ಮಾತ್ರ ಕಿತ್ತುಕೊಳ್ಳ ಬೇಡ ದೇವರೇ,ನಾನೆಂದೂ ಭೂತಗಳ ಫೋಟೋಗಳನ್ನು ದುಡ್ಡು ಗಳಿಸಲು ಅಥವಾ ಇನ್ಯಾವುದೋ ಅಗ್ಗದ ಕಾರ್ಯಗಳಿಗೆ ಬಳಸುವುದಿಲ್ಲ " ಎಂದು ಬೇಡಿ ಕೊಂಡೆ !ನಂತರ ನಾಗ ಭೂತ ಕೊಟ್ಟ ಅರಸಿನ ಪ್ರಸಾದ ನನ್ನಲ್ಲಿತ್ತು ಅದನ್ನು ಹಣೆಗೆ ಹಚ್ಚಿಕೊಂಡು ಕಣ್ಣಿಗೆ ಒಂದು ತೊಟ್ಟು ತಂಬಾಲು ಬಿಟ್ಟು ನಿದ್ರೆ ಮಾಡಿದೆ ,ಮರುದಿನ ಏಳುವಾಗ ಕಣ್ಣು ಸರಿಯಾಗಿತ್ತು !

 ಚೌಕಾರು ಗುತ್ತುಗಳಲ್ಲಿ ಕಂಬಳಕೋರಿಯಂದು ಪೂಕರೆ ಹಾಕುವಾಗ ನಾಗಭೂತಕ್ಕೆ ಕೋಲವಿದೆ. ನಾಗಭೂತದ ಮುಖವರ್ಣಿಕೆ ಸರಳವಾಗಿದ್ದು, ಕಪ್ಪುಬಣ್ಣದ ಮೇಲೆ ಹಳದಿ ನಾಗಚಿಹ್ನೆಗಳನ್ನು ಬರೆಯುತ್ತಾರೆ. ತಲೆಗೆ ನಾಗನ ಹೆಡೆಯ ಆಕಾರದ ಮುಡಿಯನ್ನು ಹಿಡಿಯುತ್ತಾರೆ. ಚೌಕಾರುಗುತ್ತು ಹಾಗೂ ಅರಿಬೈಲಿನಲ್ಲಿ ನಾಗಭೂತದ ಮುಡಿಯಲ್ಲಿ ಮೂರು ಹೆಡೆಗಳಿವೆ. . ಇಚ್ಲಂಗೋಡಿನ ಕೃಷ್ಣಸರ್ಪಕೋಲದಲ್ಲಿ ಮೂರು ಹೆಡೆಯ ಮುಖವಾಡ ಧರಿಸುತ್ತಾರೆ. ಅನೇಕ ದೈವಗಳು ನಾಗ ನೊಂದಿಗೆ ಸಮೀಕರಣಗೊಂಡು ಆರಾಧಿಸಲ್ಪಡುತ್ತಿದ್ದಾರೆ ನಾಗ ಚಾಮುಂಡಿ ,ನಾಗ ರಕ್ತೇಶ್ವರಿ ನಾಗ ಪಂಜುರ್ಲಿ ಇತ್ಯಾದಿ .ಮೂವ ದೈವ ಕೂಡ ಮರಿ ನಾಗ ಎಂಬ ಅಭಿಪ್ರಾಯವಿದೆ ಆತನ ಅಭಿನಯ ಕೂಡ ನಾಗನಂತೆ ಇದೆ.ನಾಗನನ್ನು ಬೆರ್ಮೆರ್ ಜೊತೆ ಸಮೀಕರಿಸಿರುವುದು ಎಲ್ಲೆಡೆ ಕಂಡು ಬರುತ್ತಿದೆ .

 ನಾಗಬ್ರಹ್ಮ ಸಮನ್ವಯ

ನಾಗಬ್ರಹ್ಮನ ಆರಾಧನೆ ತುಳುನಾಡಿನಲ್ಲಿ ಪರಂಪರಾಗತವಾಗಿ ಬಂದ ಜಾನಪದ ನಂಬಿಕೆ. ಇಲ್ಲಿ ಸತ್ತ ನಾಗನನ್ನು ಯಾರಾದರೂ ನೋಡಿದರೆ, ಆತನು ಅದನ್ನು ಸಂಸ್ಕಾರ ಮಾಡಬೇಕೆಂಬ ನಂಬಿಕೆ ಇದೆ. ಶಾಸ್ತ್ರೋಕ್ತವಾಗಿ ಅಂತ್ಯೇಷ್ಟಿ ಸಂಸ್ಕಾರದ ಹಕ್ಕು ಸತ್ತ ವ್ಯಕ್ತಿಯ ಕುಟುಂಬ ಗೋತ್ರ ಹಾಗೂ ವಂಶದವರಿಗೆ ಇರುತ್ತದೆ. ಆದ್ದರಿಂದ ತುಳುನಾಡಿನ ಜನರು ನಾಗವಂಶದವರಿರಬೇಕು. “ಇಲ್ಲಿ ದಕ್ಷಿಣ, ಉತ್ತರ ಕನ್ನಡ, ಕರಾವಳಿ ಪ್ರದೇಶಕ್ಕೆ ನಾಗರಖಂಡವೆಂದು ಹೆಸರಿತ್ತು. ಇಲ್ಲಿ ನಾಗರೆಂಬ ಆದಿವಾಸಿಗಳು ವಾಸಿಸುತ್ತಿದ್ದರು. ಸರ್ಪಕುಲಲಾಂಛನವಾಗಿದ್ದ ಈ ಜನರಲ್ಲಿ ಸರ್ಪಾರಾಧನೆ ಒಂದು ಸ್ಥಳೀಯ ಮತಾಚಾರಣೆಯಾಗುತ್ತಿದ್ದಿರಬೇಕು” ಎಂದು ಗೋವಿಂದ ಪೈ ಹೇಳಿದ್ದಾರೆ.

ತುಳುನಾಡಿನಲ್ಲಿ ನಾಗಮಂಡಲದಲ್ಲಿ ಬಿಡಿಸಲಾಗುವ ಕೈಕಾಲುಗಳಿಲ್ಲದ ತಲೆಯ ಚಿತ್ರವನ್ನು ‘ಬ್ರಹ್ಮಯಕ್ಷ’ ಎನ್ನಲಾಗುವುದು. ಈ ಬ್ರಹ್ಮಯಕ್ಷ, ವೈದಿಕರ ಚತುರ್ಮುಖಬ್ರಹ್ಮನಲ್ಲ. ತುಳುವರು ಹೇಳುವ ಬೆರ್ಮರ್ ಇದೆಂದೂ, ಇದನ್ನು ಸಂತಾನದ ಅಧಿದೇವತೆ ಎಂದು ಹೇಳಲಾಗುತ್ತದೆ” ಎಂದು ಪ್ರೊ. ಎ.ವಿ. ನಾವಡ ಹೇಳಿದ್ದಾರೆ.

“ತುಳುನಾಡಿನ ಜನತೆ ತನ್ನ ಪೂರ್ವಜರನ್ನು ಸ್ಮರಿಸುವುದಕ್ಕೂ ನಾಗಬ್ರಹ್ಮನ ಕಲ್ಪನೆಗೂ ಸಂಬಂಧವಿದ್ದಂತಿದೆ” ಎಂದು ಬನ್ನಂಜೆ ಬಾಬು ಅಮೀನ್ ಅಭಿಪ್ರಾಯಪಟ್ಟಿದ್ದಾರೆ.34

ತುಳುನಾಡಿನ ನಾಗಬನಗಳಲ್ಲಿನ ನಾಗಶಿಲ್ಪಗಳಲ್ಲಿ ಕೆಲವು ನಾಗಬ್ರಹ್ಮನ ಪರಿಕಲ್ಪನೆಯನ್ನು ಅಭಿವ್ಯಕ್ತಿಸುತ್ತವೆ. ಎಣ್ಮೂರಿನ ಆದಿ ಗರಡಿಯ ಸಮೀಪದಲ್ಲಿರುವ ನಾಗಶಿಲ್ಪದಲ್ಲಿ ತಂಬೂರಿ ಹಿಡಿದ ನಾಗಬ್ರಹ್ಮನಿದ್ದಾನೆ. ಉಜಿರೆಯ ಕೇಲಂಗಿಮನೆಯ ಪ್ರಾಚೀನ ನಾಗಬನದಲ್ಲಿ ಸೊಂಟದ ಮೇಲ್ಭಾಗದ ಮನುಷ್ಯಾಕೃತಿಯ ತಲೆಯ ಸುತ್ತ ನಾಗಹೆಡೆಗಳಿರುವ ಸೊಂಟದ ಕೆಳಭಾಗದಲ್ಲಿ ಸರ್ಪಾಕೃತಿ ಇರುವನಾಗಶಿಲ್ಪವಿದೆ  ನಿಡಿಗಲ್ಲು ಆಲಡೆಯಲ್ಲಿ ಮೇಲ್ಭಾಗ ಮನುಷ್ಯ, ಕೆಳಭಾಗದಲ್ಲಿ ನಾಗಾಕಾರ ಶಿಲ್ಪದ ಒಂದು ಬದಿಯಲ್ಲಿದ್ದರೆ, ಹಿಂಬದಿಯಲ್ಲಿ ನಾಗಮಂಡಲದ ಪವಿತ್ರ ಬಂಧದ ರಚನೆಯಿದೆ. ಅನಂತಾಡಿ ನಾಗಬನದಲ್ಲಿ ನಾಗನಿಗೆ ಸಾಮಾನ್ಯ ಒಂದು ಕಲ್ಲು ಇದೆ. ಆದರೆ ಬ್ರಹ್ಮರೆಂದು ಹಳೆಯ ಮಣ್ಣಿನ ಮಡಿಕೆಗಳಿವೆ. ಚೌಕಾರುಗುತ್ತಿನಲ್ಲಿ ಬೆರ್ಮೆರ್ ಎಂದು ಒಂದು ಮುರಕಲ್ಲನ್ನು ಆರಾಧಿಸುತ್ತಾರೆ ಕವತ್ತಾರು ಆಲಡೆಯಲ್ಲಿ ನಾಗನಿಗೆ ಸಣ್ಣಮಂಟಪ ಇದೆ. ಇದರ ಒಳಗೆ ಹೆಡೆ ತೆರೆದ ನಾಗಶಿಲ್ಪವಿದೆ. ಅಲ್ಲಿಯೇ ಪಕ್ಕದಲ್ಲಿ ಬೆರ್ಮರ ಮಾಡ ಇದೆ. ಇದರ ಒಳಗೆ ಒಂದು ಚೌಕಾಕಾರದ ಮುರಕಲ್ಲು ಇದೆ. ಇದನ್ನೇ ‘ಬ್ರಹ್ಮ’ ಎಂದು ಹೇಳುತ್ತಾರೆ.

ಹೀಗೆ ಕೆಲವೆಡೆ ನಾಗನ ಕಲ್ಲುಗಳು, ಕೆಲವೆಡೆ ನಾಗಶಿಲ್ಪಗಳು, ಇನ್ನು ಕೆಲವೆಡೆ ನಾಗಬ್ರಹ್ಮ ಶಿಲ್ಪಗಳು ಆರಾಧನೆಗೊಳ್ಳುತ್ತವೆ. ಕೆಲವೆಡೆ ಬ್ರಹ್ಮರಿಗೆ ತೆಂಗಿನಕಾಯಿ ಮೂಲಕ ಸಂಕಲ್ಪವಿದ್ದರೆ, ಕೆಲವೆಡೆ ‘ಬ್ರಹ್ಮ’ರಿಗೆ ಕಲ್ಲುಗಳು ಇವೆ. ಗರಡಿಗಳಲ್ಲಿ ಬ್ರಹ್ಮರ ಮೂರ್ತಿಗಳಿವೆ. ಇಲ್ಲಿ ನಾಗಬೆರ್ಮೆರ್ ಎಂದು ಹೇಳುವುದಿಲ್ಲ. ಆಲಡೆಗಳಲ್ಲಿ ಬ್ರಹ್ಮಲಿಂಗೇಶ್ವರ ಎನ್ನುತ್ತಾರೆ. ಆದರೂ ಆಲಡೆಗಳಲ್ಲಿ ಆದಿ ಆಲಡೆ, ಆದಿಬ್ರಹ್ಮಸ್ಥಾನಗಳಲ್ಲಿ ಹುತ್ತದ ಬೆರ್ಮರ ಆರಾಧನೆ ಇದೆ. ಕೆಲವು ಬ್ರಹ್ಮಸ್ಥಾನಗಳಲ್ಲಿ ಹಾಗೂ ಗರಡಿಗಳಲ್ಲಿ ಕೇವಲ ಬ್ರಹ್ಮಗುಂಡ ಮಾತ್ರ ಇರುತ್ತದೆ. “ಕಲ್‍ಡ್‍ನಾಗೆ ಪುಂಚೊಡು ಸರ್ಪ ಗುಂಡೊಡು ಬೆರ್ಮೆರ್. ಕಲ್ಲಿನಲ್ಲಿ ನಾಗ, ಹುತ್ತದಲ್ಲಿ ಸರ್ಪ, ಗುಂಡದಲ್ಲಿ ಬೆರ್ಮೆರ್ ನೆಲೆಯಾಗುತ್ತಾರೆ ಎಂದು ಹೇಳಿದೆ. “ಆ ನಾಗೆರ್ಲೆನ್ ಬೆರ್ಮೆರೆನ್ ನಿರ್ಮಿಯೆರ್ ದೇವೆರ್ ಎಡದಿಕ್ಕುಡು ಬೆರ್ಮೆರ್ ಬಲದಿಕ್ಕುಡು ...” (ಆ ನಾಗಗಳನ್ನು ಬೆರ್ಮೆರನ್ನು ನಿರ್ಮಿಸಿದರು, ದೇವರ ಎಡದಿಕ್ಕಿನಲ್ಲಿ ಬೆರ್ಮರ್ ಬಲದಿಕ್ಕಿನಲ್ಲಿ ... ) ಎಂಬ ಪಾಡ್ದನದ ಹೇಳಿಕೆಯಲ್ಲಿ ನಾಗ ಮತ್ತು ಬೆರ್ಮರ್ ಬೇರೆ ಬೇರೆ ಎರಡು ಶಕ್ತಿಗಳು ಎಂದು ಹೇಳಲಾಗಿದೆ.

ಕಾಪು ಬ್ರಹ್ಮಲಿಂಗೇಶ್ವರದೇವರ ಗರ್ಭಗುಡಿಯ ಎಡಭಾಗದ ಮೂಲ ಬ್ರಹ್ಮಸ್ಥಾನವೆಂದು ಕರೆಯಲ್ಪಡುವ ಬನದಲ್ಲಿ ಬ್ರಹ್ಮನ ಉದ್ಭವ ಶಿಲೆ ಇದೆ. ಇಲ್ಲಿ ನಾಗಶಿಲೆ ಇಲ್ಲ.

ಪಡುಪೆರಾರದ ಬ್ರಹ್ಮಬಲವಾಂಡಿ ದೇವಸ್ಥಾನದ ಮೂಲಬ್ರಹ್ಮಸ್ಥಾನವೆಂದು ಹೇಳುವ ಬನದಲ್ಲಿ ಬ್ರಹ್ಮನ ಉದ್ಭವವಾದ ಕಲ್ಲು ಇದೆ. ಇಲ್ಲಿ ನಾಗನಿಗೆ ಅಸ್ತಿತ್ವವಿಲ್ಲ. ಅಲ್ಲಿ ಸ್ವಲ್ಪ ದೂರದಲ್ಲಿರುವ ನಾಗಬನ ಇತ್ತೀಚೆಗೆ ನಿರ್ಮಿಸಲ್ಪಟ್ಟುದು ಎಂದು ಅಲ್ಲಿಯವರು ಹೇಳುತ್ತಾರೆ. ಅಲ್ಲಿನ ತಂತ್ರಿಗಳ ಪ್ರಕಾರ ಅಲ್ಲಿಯ ‘ಬ್ರಹ್ಮ’ ಭೂತಬ್ರಹ್ಮ, ನಾಗಬ್ರಹ್ಮನಲ್ಲ.

ಕೋಟಿಚೆನ್ನಯರ ಪಾಡ್ದನದ ಆದಿಯಲ್ಲಿ ಬರುವ ಬೆರ್ಮರ ವರ್ಣನೆ ಅಲೌಕಿಕವಾದುದು ಆಗಿದೆ. ಆದರೆ ಆ ಬೆರ್ಮರಿಗೆ ನಾಗನ ಹೆಡೆ ಇರುವ ಬಗ್ಗೆಯಾಗಲಿ ನಾಗಬ್ರಹ್ಮ ಶಿಲ್ಪಗಳಲ್ಲಿರುವಂತೆ, ಸೊಂಟದಿಂದ ಕೆಳಭಾಗ ಸರ್ಪಾಕಾರ ಇರುವ ಬಗ್ಗೆಯಾಗಲೀ ವರ್ಣನೆ ಇಲ್ಲ. ಒಂದೆರಡು ಪಾಡ್ದನಗಳಲ್ಲಿ ಕೋಟಿಚೆನ್ನಯರಿಗೆ ಕೆಮ್ಮಲೆಯಲ್ಲಿ ಕಾಣಿಸಿದ ಬೆರ್ಮರ್ ಕುದುರೆಏರಿದ ವೀರನಾಗಿ ಚಿತ್ರಿತನಾಗಿದ್ದಾನೆ. ಹೆಚ್ಚಿನ ಪಾಡ್ದನಗಳಲ್ಲಿ ವೀಳ್ಯದೆಲೆಯಷ್ಟು ತೆಳುವಾಗಿ, ತೆಂಗಿನಮರದಷ್ಟು ಎತ್ತರವಾಗಿ, ಆಲದಷ್ಟು ಅಗಲವಾಗಿ, ಅಡಿಕೆಯಷ್ಟು ಉರುಟಾಗಿ ಕಾಣಿಸಿದ ಬ್ರಹ್ಮನ ವರ್ಣನೆ ಇದೆ. ಇಲ್ಲಿ ಬ್ರಹ್ಮನಿಗೆ ಮನುಷ್ಯನ ಆಕಾರವನ್ನು ಸೂಚಿಸಿಲ್ಲ. ಆದರೆ ಮೊದಲು ಬೆರ್ಮರ ಉದೀಪನದ ಸಂದರ್ಭದಲ್ಲಿ ವರ್ಣಿಸಲ್ಪಟ್ಟ ಬ್ರಹ್ಮನಿಗೆ ಏಳುತಲೆಯ ಸತ್ತಿಗೆ, ಹಾಗೂ ಜನಿವಾರಗಳನ್ನು ಹೇಳಿದ್ದು ಇದು ರಾಜಪುರುಷನನ್ನು ಸೂಚಿಸುತ್ತದೆ. ಎಡದಲ್ಲಿ ಕರಿಯ ಸಂಕಮಾಲ, ಬಲಬದಿಯಲ್ಲಿ ಬಿಳಿಯ ಸಂಕಮಾಲ ಇರುವ ಬಗ್ಗೆ ಹೇಳಿದೆ. ಕರಿಯ ಸಂಕಮಾಲ ಮತ್ತು ಬಿಳಿಯ ಸಂಕಮಾಲರನ್ನು ಸರ್ಪಗಳೆಂದೂ, ನಾಗರಾಜರೆಂದೂ ಪರಿಗಣಿಸಲಾಗಿದೆ. ಈ ವರ್ಣನೆಯನ್ನು ಕಪ್ಪು ಶಂಖಗಳ ಹಾಗೂ ಬಿಳಿ ಶಂಖಗಳ ಮಾಲೆ ಎಂದೂ ಕೆಲವರು ಅರ್ಥೈಸಿದ್ದಾರೆ. 

ಕಂಡೇವು ಬೀಡಿನ ಬನದಲ್ಲಿ ಕರಿಯ ಸಂಕಪಾಲ ಹಾಗೂ ಬಿಳಿಯ ಸಂಕಪಾಲರ ನಾಗಬನಗಳಿವೆ. ತುಳುನಾಡಿನ ಕೆಲವೆಡೆ ಸಂಕಪಾಲ ಸುಬ್ರಹ್ಮಣ್ಯ ದೇವಾಲಯಗಳಿವೆ. ಏನೆಕಲ್ಲು ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯಲ್ಲಿ ಒಂದು ಹುತ್ತ ಅದರ ಎದುರು ಒಂದು ನಾಗಪ್ರತಿಮೆ ಇಟ್ಟು ಶಂಖಪಾಲ ಸುಬ್ರಹ್ಮಣ್ಯನೆಂದು ಪೂಜಿಸುತ್ತಾರೆ. ಇಲ್ಲಿ ನಾಗಪ್ರತಿಮೆ ‘ಶಂಖಪಾಲ’ನನ್ನು ಪ್ರತಿನಿಧಿಸುತ್ತದೆ. (ಚಿತ್ರ 31)

ಎಡಬಲಗಳಲ್ಲಿ ಸಂಕಪಾಲರಿರುವ ವರ್ಣನೆ ಎಲ್ಲ ಪಾಡ್ದನಗಳಲ್ಲಿ ಕಾಣಿಸುವುದಿಲ್ಲ. ಸಂಕಮಾಲ/ಸಂಕಪಾಲರ ಪ್ರಸ್ತಾಪವಿರುವಲ್ಲಿ ಕೂಡ ಬೆರ್ಮೆರ್ ಮತ್ತು ಸಂಕಪಾಲರು ಬೇರೆ ಬೇರೆ ಎಂಬ ಚಿತ್ರಣವಿದೆ. ಬೆರ್ಮರ್ ಎಡಬಲದಲ್ಲಿ ಕರಿಯ ಸಂಕಪಾಲ ಮತ್ತು ಬಿಳಿಯ ಸಂಕಪಾಲರಿದ್ದಾರೆ ಎಂಬ ವರ್ಣನೆ ಇದೆಯೇ ಹೊರತು ನಾಗಬೆರ್ಮರ್ ತಾದಾತ್ಯ್ಮವಿಲ್ಲ.

ಸಿರಿಯ ಪಾಡ್ದನದಲ್ಲಿ ಬೆರ್ಮರ ಸ್ವರೂಪದ ಬಗ್ಗೆ ಮಾಹಿತಿ ಸಿಗುವುದಿಲ್ಲ. ಕಾಡಿನಲ್ಲಿರುವ ಬೆರ್ಮರನ್ನು ತಂದು ಏಳದೆ ಗುಂಡ ನಿರ್ಮಿಸುವ ಬಗ್ಗೆ ಮಾತ್ರ ಹೇಳಲಾಗಿದೆ. ಇಲ್ಲಿ ಬೆರ್ಮರಿಗೆ ರಾಜಪುರುಷನ ವರ್ಣನೆ ಕೂಡ ಇಲ್ಲ. ಬೆರ್ಮರ ಪ್ರಸ್ತಾಪವಿರುವ ಪಾಡ್ದನಗಳಲ್ಲಿ ಸಿರಿಪಾಡ್ದನ ಪ್ರಾಚೀನವಾದುದು.

ಇದರಿಂದ ಸಿರಿಪಾಡ್ದನದ ಕಾಲದಲ್ಲಿ ಬೆರ್ಮೆರಿಗೆ ಪುರುಷ ರೂಪದ ಪರಿಕಲ್ಪನೆ ಇರಲಿಲ್ಲ ಎಂದು ತಿಳಿಯುತ್ತದೆ. ಬೆರ್ಮರಿಗೆ ಗುಂಡ ಕಟ್ಟುವ ಸಂಪ್ರದಾಯ ಬಹುಶಃ ಈ ಕಾಲದಲ್ಲಿ ಆರಂಭವಾಗಿರಬೇಕು. ಕಾಡಿನಲ್ಲಿರುವ ಬೆರ್ಮೆರನ್ನು ತಂದು ಏಳದೆ ಗುಂಡ ಕಟ್ಟಿರುವ ಪ್ರಸ್ತಾಪ ಈ ಪಾಡ್ದನದಲ್ಲಿದೆ. ಕಾಡಿನಲ್ಲಿ ‘ಬೆರ್ಮೆರ್’ ಯಾವ ರೂಪದಲ್ಲಿ ಇದ್ದ? ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಕಾಡಿನಲ್ಲಿ ಪಾಳು ಬಿದ್ದ ಬ್ರಹ್ಮಸ್ಥಾನದ ಸ್ಥಳದಿಂದ ಮಣ್ಣನ್ನು ತಂದು ಗುಂಡದೊಳಗೆ ಪ್ರತಿಷ್ಠಾಪಿಸಿರಬಹುದೇ? ಇಂದಿಗೂ ಕೋಳ್ಯೂರು ಬೈಲಿನಲ್ಲಿ ಪೂಕರೆಯ ದಿನ ಒಂದು ಮುಷ್ಠಿ ಮಣ್ಣನ್ನು ಹಿಂಗಾರದೊಂದಿಗೆ ಬಾಳೆಕುಡಿಯ ಮೇಲಿಟ್ಟು ಗಣಪತಿ ಎಂದು ಸಂಕಲ್ಪಿಸುತ್ತಾರೆ. ಇಲ್ಲಿಬ್ರಹ್ಮರನ್ನು ‘ಗಣಪತಿ’ ಎಂದು ಹೇಳುತ್ತಾರೆ ಎಂದು ಅಲ್ಲಿನ ಹಿರಿಯರಾದ ನಾರಾಯಣಭಟ್ಟರು ಹೇಳುತ್ತಾರೆ. ಕೋಳ್ಯೂರಿನ ಶಂಕರನಾರಾಯಣ ದೇವಸ್ಥಾನ ಬ್ರಹ್ಮ-ವಿಷ್ಣು-ಶಿವರೆಂಬ ತ್ರಿಮೂರ್ತಿಗಳ ದೇವಸ್ಥಾನವಾಗಿದೆ. ಇಲ್ಲಿ ಬ್ರಹ್ಮನ ಬದಲಿಗೆ ಗಣಪತಿಯನ್ನೇ ಆರಾಧಿಸುವ ಪದ್ಧತಿಯಿದೆ.

ಬ್ರಹ್ಮಸ್ಥಾನಗಳು ಕಾಡಿನಲ್ಲಿ ಇರುತ್ತವೆ. ವರ್ಷದಲ್ಲಿ ಒಂದೆರಡು ಬಾರಿ ಅಲ್ಲಿಗೆ ಹೋಗಿ ಆರಾಧಿಸುತ್ತಾರೆ. ಬೆರ್ಮೆರ ಕಲ್ಲುಗಳು ಬನದಲ್ಲಿ ಇರುತ್ತದೆ. ಕಾಲಾಂತರದಲ್ಲಿ ಕಲ್ಲುಗಳ ಮೇಲೆ ಹುತ್ತ ಬೆಳೆದಾಗ, ಹುತ್ತವನ್ನು ಕೀಳುವ ಧೈರ್ಯ ಯಾರಿಗೂ ಇರುವುದಿಲ್ಲ. ಕವತ್ತಾರು ಆಲಡೆಯಲ್ಲಿ ಬ್ರಹ್ಮಲಿಂಗೇಶ್ವರ ಗರ್ಭಗುಡಿಯ ಎದುರು ಭಾಗದಲ್ಲಿ ಬ್ರಹ್ಮದೇವರ ಸಣ್ಣಗುಡಿಯೊಂದಿದ್ದು ಅದರಲ್ಲಿ ಬ್ರಹ್ಮರ ಪ್ರತೀಕವಾಗಿ ಒಂದು ಚೌಕಾಕಾರದ ಮುರಕಲ್ಲು ಇದೆ. ಇದರ ಮೇಲೆ ಈಗ ಹುತ್ತ ಬೆಳೆಯುತ್ತಿದ್ದು, ಈ ಹುತ್ತವನ್ನು ಕೀಳಬಾರದು ಎಂದು ಅಲ್ಲಿನ ಅರ್ಚಕರು ಹೇಳುತ್ತಾರೆ. 

 

ಕಾಲಾಂತರದಲ್ಲಿ ಹೀಗೆ ಬೆಳೆದ ಹುತ್ತಗಳು ನಾಗನ ಆವಾಸಸ್ಥಳಗಳಾಗುತ್ತವೆ. ತುಳುನಾಡಿನಲ್ಲಿ ನಾಗಾರಾಧನೆ ಪ್ರಚಲಿತವಿದೆ. ಇದರ ಪ್ರಭಾವದಿಂದಾಗಿ ಬ್ರಹ್ಮಸ್ಥಾನದ ಹುತ್ತಗಳಲ್ಲಿ ಬೆರ್ಮೆರ್ ಜೊತೆಗೆ ನಾಗನ ಆರಾಧನೆ ಪ್ರಾರಂಭವಾಯಿತು. ಕಾಲಾಂತರದಲ್ಲಿ ನಾಗ ಮತ್ತು ಬೆರ್ಮೆರ್ ನಡುವಿನ ಅಂತರ ಅಳಿಸಿಹೋಗಿ ನಾಗಬ್ರಹ್ಮರಿಗೆ ಏಕಾತ್ಮತೆ ಉಂಟಾಗಿದೆ ಎನ್ನಬಹುದು.

ಆಧಾರ ಗ್ರಂಥ 

ಕರಾವಳಿಯ ಸಾವಿರದೊಂದು ದೈವಗಳು:ಡಾ.ಲಕ್ಷ್ಮೀ ಜಿ ಪ್ರಸಾದ, ಮೊಬೈಲ್ 9480516684

ತುಳು ನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ:ಲೇ ಡಾ.ಲಕ್ಷ್ಮೀ ಜಿ ಪ್ರಸಾದ 

 

Category:Spirituality



ProfileImg

Written by Dr Lakshmi G Prasad

Verified

0 Followers

0 Following